ಶನಿವಾರ, 28 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎರಡನೇ ಬಹುಮಾನ

Published : 11 ಫೆಬ್ರುವರಿ 2015, 19:30 IST
ಫಾಲೋ ಮಾಡಿ
Comments

ಮತ್ತೆ ಬರಲಾರೆಯಾ ಗೆಳತಿ ನಮ್ಮೂರ ಸಂತೆಗೆ

ಪ್ರೀತಿಯ ಭಾನೂ...
ಮೊನ್ನೆ ರಂಗಾಯಣದ ಬಹುರೂಪಿ ನಾಟಕೋತ್ಸವದಲ್ಲಿ ಸ್ನೇಹಿತರೊಂದಿಗೆ ಅಂಗಡಿ ಬೀದಿಯಲ್ಲಿ ಸುತ್ತಾಡುತ್ತಿರುವಾಗ ನೀನು ಮತ್ತೆ ನೆನಪಾದೆ. ಮತ್ತೆ ನೆನಪಾದೆ ಎಂಬುದರ ಹಿಂದೆ ‘ಮರೆವು’ ಎಂಬ ಪದವನ್ನು ಹುಡುಕಾಡಬೇಡ. ನಿನ್ನ ನೆನಪು ನನ್ನೊಳಗೆ ಸದಾ ಹೊಗೆಯಾಡುತ್ತಿರುವ ಕಿಡಿಯಂತೆ. ಗಾಳಿ ಸೋಕಿದರೆ ಸಾಕು  ದಿಗ್ಗನೆ ಹೊತ್ತಿ ಮೈಮನಗಳನ್ನು ಬೆಚ್ಚಗಾಗಿಸುತ್ತದೆ. ಆಗ ತಣ್ಣಗೆ ನೆನೆಯುತ್ತೇನೆ ನಮ್ಮಿಬ್ಬರ ಏಕಾಂತವನ್ನು. ಯಾವ ಊರ ಸಂತೆ ತಾನೆ ಸಾಟಿಯಾಗಬಲ್ಲದು ಹೇಳು, ನಮ್ಮ ಮುತ್ತೂರು ಸಂತೆಗೆ, ನಾನು ನಿನಗಾಗಿ ಕದ್ದ ಮುಳ್ಳಿನ ವಾಚು, ಕೋಳಿ ಮಾರಿದ ಕಾಸಲ್ಲಿ ತಿಂದ ಬತ್ತಾಸು, ಒಂದೇ, ಎರಡೇ ನೆನೆಯುತ್ತಿದ್ದಂತೆ ಎಷ್ಟೇ ಜನಜಂಗುಳಿಯ ನಡುವಿದ್ದರೂ ನನ್ನೊಳಗೆ ನಾವಿಬ್ಬರೇ ಆಗಿಬಿಡುತ್ತೇವೆ. ಭಾನೂ! ನೀನೀಗ ನಗುತ್ತಿರಬಹುದು ಅಥವಾ ನನ್ನನ್ನು ಹುಚ್ಚ ಎಂದುಕೊಳ್ಳುತ್ತಿರಬಹುದು. ನಿನಗ್ಹೇಗೆ ಗೊತ್ತಾಗಬೇಕು ನನ್ನ ಭಾವನೆಗಳು. ಇಲ್ಲದಿದ್ದರೆ ನೀ ಹೀಗೆ ದೂರಾಗುತ್ತಿರಲಿಲ್ಲ.

ಕೋಪಗೊಳ್ಳಬೇಡ, ಅದಕ್ಕೆ ನಾನೂ ಕಾರಣವಾಗಿರಬಹುದು. ಆದರೆ ಅದರ ಹೆಚ್ಚಿನ ಪಾಲು ನನ್ನದಲ್ಲ ಎಂಬ ನಂಬಿಕೆ ನನಗಿದೆ.


ನೌಕರಿಗಾಗಿ ಊರನ್ನು ಬಿಡಲೇಬೇಕಾಯಿತು ಅಷ್ಟೆ. ಆದರೆ ನಿನ್ನನ್ನಲ್ಲ. ನಿನಗೆ ಗೊತ್ತೆ, ಈಗಲೂ ನಮ್ಮೂರ ಸಂತೆಯ ನೆನೆದಾಗೆಲ್ಲ,ನಾನು ಮತ್ತೇ ಅದೇ ದನಕಾಯುವ ಪುಟ್ಟ ಹುಡುಗನಾಗುತ್ತೇನೆ. ನೀನು ನಿನ್ನ ಅಜ್ಜನ ಜೊತೆಯಲ್ಲಿ ಅದೇ ಪಟೇಲರ ಮೊಮ್ಮಗಳ ಗತ್ತಿನಲ್ಲಿ ಬರುತ್ತೀಯ ಛತ್ರಿಯ ಕೆಳಗೆ. ಇದು ಆಗಾಗ ಋತುಮಾನದಂತೆ ತನ್ನ ಪಾಡಿಗೆ ತಾನೇ ನಡೆದುಹೋಗುವ ಕ್ರಿಯೆ.

ಆದರೆ ಈ ಕ್ರಿಯೆಯನ್ನು ಒಬ್ಬನೇ ಅನುಭವಿಸುವಾಗ ಸಂಕಟವಾಗುತ್ತದೆ. ಭಾನು, ಇಲ್ಲಿ ಸುರಿಯುವ ಮುಂಗಾರು ಮಳೆಯೂ ಏಕೋ ಹಿಂದಿನಂತೆ ಅನ್ನಿಸುತ್ತಿಲ್ಲ. ಆದರೆ ಒಮ್ಮೊಮ್ಮೆ ಈ ಬಟಾಬಯಲನ್ನು ತಿದ್ದಿ, ತೀಡಿ, ಮತ್ತೆ ಎತ್ತಿ ನಿಲ್ಲಿಸುತ್ತದೆ. ಅಂದಿನಂತೆಯೇ ಒಡಲಾಳದ ಪುಟ್‌ಗೌರಿ ಬರೆದ ನವಿಲಿನ ಚಿತ್ರದಂತೆ. ಆಗ ಲಂಗತೊಟ್ಟ ಪುಟ್ಟ ಹುಡುಗಿ ಬರುತ್ತಾಳೆ. ಹೋರಿಯೊಂದಿಗೆ ತಿಣುಕಾಡುತ್ತ  ನಾನೂ ಬರುತ್ತೇನೆ. ಪಟ್ಟಾಪಟ್ಟಿ ಚಡ್ಡಿ ತೊಟ್ಟು ಅಪ್ಪನೊಂದಿಗೆ. ಕ್ಷಣಾರ್ಧದಲ್ಲಿ ಮಿಟಾಯಿ ತಿಂದ ನಿನ್ನ ಅಂಟು ಅಂಟು ಕೈಗಳೊಂದಿಗೆ ನನ್ನ ಕೈಗಳು ಸೇರಿಕೊಳ್ಳಲು ಸಂತೆ ಬೀದಿಯಲ್ಲೆಲ್ಲ ಸುತ್ತುತ್ತೇನೆ. ನಮ್ಮ ಇಸ್ಕೂಲಿನ ಕುಂಟ್ ಮೇಷ್ಟ್ರು ಅಲ್ಲೆ ಬೂದುಗುಂಬಳಕಾಯಿ ಕೊಳ್ಳುತ್ತ ನಿಂತಿರುವುದನ್ನು ಕಂಡಾಗ ಬೆವರುತ್ತೇನೆ. ಅಪ್ಪನಿಗೆ ಹೇಳದಿರಲೆಂದು ಮನದಲ್ಲೆ ‘ಅಜ್ಜಯ್ಯ ಸ್ವಾಮಿ’ಗೆ ಹರಕೆ ಕಟ್ಟಿಕೊಳ್ಳುತ್ತೇನೆ. ಅಬ್ಬಾ! ನಿನಗೆ ಮಾತ್ರ ಅದೆಂಥಾ ಧೈರ್ಯ, ತೇರು ಬೀದಿಯ ಕಡೆಗೆ ಕೈ ಹಿಡಿದು ಎಳೆಯುತ್ತ ಓಡಿಬಿಡುತ್ತೀಯ ಊರುಕೇರಿಯಾಚೆಗೆ ಜಿಗಿಯುವ ಎಳೆಗರುವಿನಂತೆ. ಆ ನಿನ್ನ ಪುಟ್ಟ ಪಾದದ ಗೆಜ್ಜೆನಾದ ಸಂತೆಯೆಲ್ಲ ತುಂಬುತ್ತದೆ ಆಗ. ನೆನೆಯುತ್ತಾ ಹೋದರೆ ಏನೆಲ್ಲ ಚಿತ್ರಗಳು ...! ಸಂಕ್ರಾಂತಿಯ ಎಳೆಬಿಸಿಲಿಗೆ ಮೈಕಾಸಿದಂತೆ ಬೆಚ್ಚನೆಯ ಭಾವ.

ನನಗಿನ್ನೂ ನೆನಪಿದೆ ಭಾನು. ನೀನು ಮೊದಲು ತೊಟ್ಟ ರವಿಕೆಯ ಬಣ್ಣ, ನಾಚಿಕೊಂಡ ಕ್ಷಣ. ಆ ನಿನ್ನ ನವಿರಾದ ನಾಚಿಕೆಯಿಂದಲೇ ನನ್ನ ಮೀಸೆ ಚಿಗುರಿದ್ದು. ನಮ್ಮ ಮೇಲೆ ಊರಕಣ್ಣು ಬಿದ್ದದ್ದು. ಅಂದಿನಿಂದ ಕಣ್ಣಾಮುಚ್ಚಾಲೆಯಾಡಲೇಬೇಕಾಯಿತು ಈ ಜಗದೆದುರು. ಆದರೆ ಮೇಷ್ಟ್ರು ಕಣ್ಣಿಂದ ಮಾತ್ರ ತಪ್ಪಿಸಿಕೊಳ್ಳಲಾಗಲಿಲ್ಲ. ಆದರೂ ನಮ್ಮಿಬ್ಬರ ಪಾಲಿಗೆ ಅವರು ಕಾಳಿದಾಸನೇ ಆಗಿಬಿಟ್ಟರು. ಸಂತೆ ಇಲ್ಲದ ದಿನ ಅವರ ಮನೆಯ ಹಿತ್ತಲಿನ ತೋಟವೇ ನಮಗೆ ಕಣ್ವಾಶ್ರಮವಾಗುತ್ತಿತ್ತು. ಅಲ್ಲಿ, ಬೈತಲೆ ತೆಗೆದು ಹೆಣೆದ ನಿನ್ನ ನೀಳ ಜಡೆಗಳು ಅಪ್ಪ ಕಟ್ಟಿ ಹಾಕುತ್ತಿದ್ದ ಹೋರಿಯ ಹಗ್ಗದ ರೀತಿ ನನ್ನನ್ನು ಬಂಧಿಸಿಬಿಡುತ್ತಿದ್ದವು. ಆಗ ನಾನು ನಿನ್ನಾಜ್ಞೆಯಂತೆ ನಡೆಯುವ ಕೋಲೆ ಬಸವ. ಸಂಜೆ ತನಕ ಜೊತೆಯಲ್ಲಿದ್ದರೂ ನಿನ್ನ ಮುಂಗುರುಳನ್ನು ಮುಟ್ಟಲು ಹೆದರುವ ಪುಕ್ಕಲು, ಆದರೆ ನಿನ್ನ ತಿಳಿಗಣ್ಣ ಬಟ್ಟಲಲ್ಲಿ ಮಾತ್ರ ಸ್ವಚ್ಛಂದವಾಗಿ ಈಜಾಡುತ್ತಿದ್ದೆ ಹಂಸದಂತೆ. ನಿನ್ನ ಕಣ್ಣು ತುಂಬಿ ಬಂದಾಗ ಅಪರಾಧಿಯಂತೆ ಚಡಪಡಿಸುತ್ತಿದ್ದೆ. ತಕ್ಷಣ ನನ್ನ ಹೃದಯಕ್ಕೆ ಬಸಿದುಕೊಳ್ಳುತ್ತಿದ್ದೆ, ಒಂದು ಹನಿಯನ್ನೂ ಬಿಡದೆ. ಅಂದಿನ ನಿನ್ನ ಬಿಸಿಯುಸಿರಿಗಾಗಿ ಈಗಲೂ ಹಾತೊರೆಯುತ್ತೇನೆ. ನೆನಪಿದೆಯಾ ಭಾನು, ಅಂದು ಆ ಶುಕ್ರವಾರ ಸಂತೆಯ ಬಯಲೆಲ್ಲ ಬೆತ್ತಲಾಗುತ್ತ ಸಂಜೆ ಸೂರ್ಯ ಕೆಂಪಾಗುತ್ತಿದ್ದ ಸಮಯ. ಅಜ್ಜಯ್ಯನ ಗುಡಿಯ ಪಕ್ಕದ ಆಲದ ಮರದ ಕೆಳಗೆ ಬಿಸಿ ಏರಿದ ಹಸಿ ಮೈಯಿಂದ ನನ್ನ ಬಳಸುತ್ತ ನೀ ಕೊಟ್ಟ ಮೊದಲ ಮುತ್ತು. ಅಬ್ಬಾ! ಅದೇನು ಸವಿ! ಈಗಲೂ ಕನ್ನಡಿಯ ಮುಂದೆ ನಿಂತು ನೋಡಿಕೊಳ್ಳುತ್ತೇನೆ. ನನ್ನ ತುಟಿಯ ಮೇಲಿರುವ ನಿನ್ನ ಗುರುತುಗಳನ್ನು... ಬಿಡು, ಅವೆಲ್ಲಾ ಈಗ ನಮ್ಮೂರಿನ ‘ಜಯಭಾರತ ಟೆಂಟ್’ನಲ್ಲಿ ನಾವು ಆಗ ಕದ್ದು ನೋಡುತ್ತಿದ್ದ ಕಪ್ಪು ಬಿಳುಪು, ಕಲ್ಲರ್ ಚಿತ್ರಗಳಿದ್ದಂತೆ.

ಈಗೇನಾಯಿತು ನಿನಗೆ? ಕಳೆದ ಬಾರಿ ಊರಿಗೆ ಬಂದಾಗ ನಿನ್ನ ಭೇಟಿಯಾಗಲು ಆಗಲಿಲ್ಲ. ಕ್ಷಮಿಸು. ಆದರೆ ಎಷ್ಟೋ ಬಾರಿ ನಮ್ಮಪ್ಪನ ಕಣ್ತಪ್ಪಿಸಿ ನಿಮ್ಮ ಮನೆಯ ಕಡೆ ಸುಳಿದಾಡಿದ್ದೆ. ನೀನು ಕಾಣಲೇ ಇಲ್ಲ. ನಾನು ಶಾಲಾ ಮಾಸ್ತರ ನೌಕರಿ ಹಿಡಿದು ಮೈಸೂರಿಗೆ ಬಂದ ಮೇಲೆ ಎಷ್ಟು ಬಾರಿ ಪತ್ರ ಬರೆದಿಲ್ಲ ನಿನಗೆ, ನಮ್ಮ ಮದುವೆ ವಿಷಯವಾಗಿ. ಏಕೆ! ನೀನು ಒಂದಕ್ಕೂ ಉತ್ತರಿಸದೆ ಹೋದೆ. ಎಲ್ಲಿ ಹೋದವು ಭಾನು, ನಮ್ಮ ಆ ದಿನಗಳು, ನಿಮ್ಮ ಮನೆಯ ಕೊಟ್ಟಿಗೆಯ ಪುಟ್ಟ ಕರುವನ್ನು ಕಂಡಾಗಲಾದರೂ ನನ್ನ ನೆನಪಾಗದೆ ನಿನಗೆ, ನೀನಿಲ್ಲದೆ ಅಂಕಿಗಳಿಲ್ಲದ ಕ್ಯಾಲೆಂಡರ್ ರೀತಿಯಾಗಿದೆ ನನ್ನ ಬದುಕು. ದಿನದೂಡುವುದೇಗೆ, ದಿನ ಕಾಯುವುದೇಗೆ ತಿಳಿಯುತ್ತಿಲ್ಲ. ಸದ್ಯ!
ಕುಂಟ್‌ಮೇಷ್ಟ್ರು ಪತ್ರ ಬರೆದು ನಿನಗೆ ಮದುವೆ ಗೊತ್ತಾಗಿರುವ ವಿಷಯ ತಿಳಿಸಿದರು. ಸಾವಿರ ಬಾರಿಯಾದರೂ ಅಂದುಕೊಂಡೆ ಆ ಮಾತು ಸುಳ್ಳಾಗಿರಲಿ ಎಂದು.

ತಕ್ಷಣ ಊರಿಗೆ ಬಂದೆ. ಆಗ ನೀನು ಅಪರಿಚಿತಳಂತೆ ನಡೆದುಕೊಂಡುಬಿಟ್ಟೆ. ನನ್ನ ಕಣ್ಣ ಹನಿಗಳು ನನ್ನನ್ನು ನೋಡಿ ಮಮ್ಮಲ ಮರುಗಿದ್ದು ನಿನಗೇಕೆ ತಿಳಿಯಬೇಕು? ಎಷ್ಟೇ ಆಗಲೀ ನೀನು ಪಟೇಲರ ಮೊಮ್ಮಗಳಲ್ಲವೆ, ಆ ಗರ್ವ ಇದ್ದರೂ ಇರಬಹುದು. ಆದರೂ ಒಮ್ಮೆ ಸುಮ್ಮನಾದರೂ ಕೂಗಿ ಹೇಳು ಭಾನು ‘ನಾ ನಿನ್ನ ಮರೆಯಲಾರೆ’ ಎಂದು. ಇತ್ತೀಚಿಗೆ ನಿನ್ನ ಮೌನವನ್ನು ಕಂಡು ಏಕೋ ಭಯವಾಗುತ್ತಿದೆ. ಮಾತು ಮೌನಗಳ ನಡುವೆ ಸಿಕ್ಕಿ ಸೊರಗುತ್ತಿದೆ ನಮ್ಮ ಪ್ರೀತಿ. ಸರಸವಾಡಿದ ಮನಸ್ಸು ಸಂಸಾರಕ್ಕೆ ಹಿಂಜರಿಯುವುದೆ! ಇಲ್ಲ ಇಲ್ಲ ನನಗೆ ಗೊತ್ತು ನನ್ನ ಭಾಮ ಅಂತಹವಳಲ್ಲ. ಮುಂದಿನ ವಾರ ಊರಿಗೆ ಬರುತ್ತಿದ್ದೇನೆ ಮತ್ತದೇ ಸಂತೆಯನ್ನು ನೆನೆದು ಹೇಳು, ಮತ್ತೆ ಬರಲಾರೆಯ ಗೆಳತಿ! .... ಮುಂಗಾರು ಮಳೆಯಲ್ಲಿ ಮೀಯೋಣ, ನಮ್ಮದೇ ನೆನಪುಗಳನ್ನು ಹದವಾಗಿ ಕೆದಕಿ, ನೆಲ ಮುಗಿಲುಗಳ ನಡುವೆ ನರ್ತಿಸೋಣ ಬಾ, ಯಾರ ಜಪ್ತಿಗೂ ಸಿಗದ ನವಿಲುಗಳಂತೆ.
ಇಂತಿ ನಿನ್ನ ಪ್ರೀತಿಯ
–ಪ್ರಸನ್ನ, ಮೈಸೂರು.
*****************************************************************************************************************

ಸುಮಧುರ ನೆನಪಿನಲಿ

ನಲ್ಮೆಯ ಪ್ರಸಾದ್,
ಈ ಪತ್ರ ನೋಡಿ ಆಶ್ಚರ್ಯ, ಸಂತೋಷ ಎರಡೂ ಆಗುತ್ತಿದೆಯಾ? ಹೌದು. ಸತತ 12 ವರ್ಷಗಳ ನಂತರದ ಈ ನಿನ್ನ ನಲ್ಲೆಯ ಒಲವಿನ ಓಲೆ ಅಲ್ಲವಾ? ಅಂದು ನೀನು ‘ಕಾಂಗೋ’ ನಾಡಿನಲ್ಲಿದ್ದಾಗ ಬರೆದಿದ್ದು ಮತ್ತೆ ಅವಕಾಶವೇ ಸಿಕ್ಕಿರಲಿಲ್ಲ. ಇತಿಹಾಸದ ಪುನರಾ ವರ್ತನೆ ಎಂಬಂತೆ ನೀನು ಮತ್ತೆ ವೃತ್ತಿಯ ಕಾರಣದಿ ‘ಅಂಗೋಲ’ ನಾಡಿನಲ್ಲಿದ್ದೀಯ. ಅಂದಿಗೂ ಇಂದಿಗೂ ಬಹಳ ವ್ಯತ್ಯಾಸವಿದೆ. ಅಂದು ಬರೀ ಸ್ಥರ ದೂರ ಸಂಪರ್ಕ ಮಾತ್ರ ನಮ್ಮಲ್ಲಿತ್ತು. ಇಂದು ಕಂಪ್ಯೂಟರ್, ಮೊಬೈಲ್, ಇ–ಮೇಲ್, ಇಂಟರ್‌ನೆಟ್, ಸ್ಕೈಪ್, ವೈಬರ್ ಹೀಗೆ ದಿನದಲ್ಲಿ ಹಲವು ಬಾರಿ ನಿನ್ನೊಡನೆ ಮಾತನಾಡಬಹುದು, ನೋಡಬೇಕಿಸಿನಿದಾಗ ನೋಡಬಹುದು.

ಆದ್ರೂ ಕೇಳ್ತಿನಿ ಹೇಗಿರುವೇ? ನಂಗೊತ್ತು ಬಿಟ್ಟಿರಲಾಗದೇ ಬಿಟ್ಟಿರುವೆ. ನನಗಾದರೋ ನಿನ್ನ ನಗುಮೊಗದೊಡನೆ ಮುಂಜಾವು ಹುಟ್ಟುತ್ತಿತ್ತು. ಈಗ ಪಕ್ಕದಲ್ಲಿ ನೀನಿಲ್ಲ. ದೇಶ–ಕಾಲದ ಅಂತರದಿ ನನಗೆ ಬೆಳಗಾದಾಗ ನಿನಗೆ ಸಕ್ಕರೆಯ ನಿದ್ದೆಯ ಇರುಳಾಗಿರುತ್ತೆ. ನಿನ್ನ ಅಕ್ಕರೆ ಇಲ್ಲದೇ ನನಗೆಲ್ಲಿದೆ ಸಕ್ಕರೆ ನಿದ್ದೆ. ಮೊಬೈಲಲ್ಲೇ ಎಲ್ಲಾ ಅಕ್ಕರೆ ನುಡಿನುಡಿಯುವೆನಲ್ಲ ಎನ್ನುವೆಯಾ, ಇಲ್ಲ ಕಣೋ ಭಾವನೆಗಳನ್ನು ಮೀರಿ ಭಾಷೆಯ ನುಡಿಯಲಾಗದು. ಎಷ್ಟೋ ಭಾವನೆಗಳ ಮೀರಿ ಭಾಷೆ ನುಡಿಯಲಾಗದು, ಧ್ವನಿ ತರಂಗಗಳಾಗದು.

ದಿನದಲ್ಲಿ ಹಲವು ಬಾರಿ ಮಾತಾಡಿದರೂ ನೀನಿಲ್ಲದ ಕೊರತೆ ಸದಾ ಕಾಡುತ್ತಿದೆ. ಒಂದೊಂದು ಸಲ ಸಮಯಕ್ಕೆ ಸರಿಯಾಗಿ ಫೋನ್

ಬರದಿದ್ರೆ ಒದ್ದಾಡುವಂತಾಗುತ್ತದೆ. ಏನು ಕೆಲಸ ಮಾಡಲೂ ತೋಚಲ್ಲ. ನಿನ್ನ ಕರೆಗಾಗಿಯೇ ಚಾತಕ ಪಕ್ಷಿಯಂತೆ ಕಾಯುವೆ. ಮಕ್ಕಳೇ ಅಣಕಿಸುತ್ತಾರೆ. ಏನು ಫೋನ್ ಬರೋದು ತಡ ಆದ್ರೆ ಹಾಗಾಡ್ತಿಯಾ, ನೀರಿಂದ ತೆಗೆದ ಮೀನಿನಂತೆ ಅಂತಾರೆ. ಅವರಿಗೇನು ಗೊತ್ತು, ನಮ್ಮ ಪ್ರೇಮದ ಪರಿ. ನಾನು ನಿನ್ನ ಎಷ್ಟೊಂದು ಹಚ್ಚಿಕೊಂಡಿದ್ದೇನೆಂದು.

ಅಂದಹಾಗೇ, ಇದೇ ಜನವರಿ 25ಕ್ಕೆ ನಮ್ಮಿಬ್ಬರಲ್ಲಿ ಪ್ರೇಮಾಂಕುರದ ಪ್ರಕಟಣೆಯಾಗಿ 23 ವಸಂತಗಳೇ ಕಳೆದುಹೋಗುತ್ತದೆ. ವೈವಾಹಿಕ ಜೀವನಕ್ಕೆ 21 ವರ್ಷಗಳಾದ್ರೂ ಒಲವಿಗೆ, ಸ್ನೇಹಕ್ಕೆ 24ರ ಹರೆಯ ಬರುತ್ತಿದೆ. ಇಷ್ಟು ವರ್ಷಗಳಲ್ಲಿ ಅದೆಷ್ಟು ಸುಖ ದುಃಖಗಳು, ಬದುಕಿನ ಏರಿಳಿತಗಳನ್ನು ಕಂಡಿದ್ದೇವೆ ನಾವು. ಇವೆಲ್ಲದರ ಹೂರಣವಾದ ನಮ್ಮ ದಾಂಪತ್ಯ ಪರಿಪಕ್ವತೆ ಪಡೆದಿದೆ. ಅದೇ ಮೊದಲಿನ ಸ್ನೇಹ–ಪ್ರೇಮ ನಮ್ಮಿಬ್ಬರನ್ನೂ ಬೆಸೆದಿದೆ. ಈಗ ತಾನೆ ಸ್ನೇಹಿತರಾಗಿ, ಪ್ರೇಮಿಗಳಾಗಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿರುವ ಅನಿಸಿಕೆಯಾದರೂ ಮಕ್ಕಳ ಬೆಳವಣಿಗೆ ಎಷ್ಟು ಬೇಗ ವರ್ಷಗಳೇ ಕಳೆಯಿತಲ್ಲ. ಏನೇ ಹೇಳು, ನೀನು ನನ್ನ ಬಳಿ ಇರಬೇಕು, ಆಗಲೇ ಬದುಕು ಸುಂದರ. ಸ್ಕೈಪ್ ಅಲ್ಲಿ ನಿನ್ನ ನೋಡಿದಾಗ ಒಂದೆರೆಡು ಕ್ಷಣ ಮಾತೇ ಬರೋಲ್ಲ ನಂಗೆ. ನನ್ನ ಕಣ್ಣ ತುಂಬ ನಿನ್ನ ತುಂಬಿಕೊಳ್ತೇನೆ. ಈ ಫೋನ್, ಇಂಟರ್‌ನೆಟ್ ಎಲ್ಲಕ್ಕಿಂತ ನಿನ್ನ ಸಾಂಗತ್ಯದಲ್ಲಿ ಆಗುವ ಸಂತೋಷ ಬೇರೆಲ್ಲೂ ಸಿಗದು. ಹರಿ, ವಿಶೇಷವಾಗಿ ಹಬ್ಬಹರಿದಿನಗಳಲ್ಲಿ ನೀನಿಲ್ಲದ ಕೊರತೆ ಎದ್ದು ತೋರುತ್ತದೆ. ಬರಿದೇ ನಾವುಗಳೇ ಮಾಡಿಕೊಂಡು ಉಣುವಾಗ ಗೊತ್ತಿಲ್ಲದೆ ಕಣ್ಣಾಲಿಗಳು ತುಂಬುತ್ತದೆ. ನಮಗಾಗಿ ಅಲ್ಲಿ ನೀ ದುಡಿಯುತ್ತೀಯಾ, ಇಲ್ಲಿ ನಾವು ಮಾತ್ರ ನಿನ್ನ ಬಿಟ್ಟು ರುಚಿ ರುಚಿಯಾಗಿ ತಿಂದುಂಡುಕೊಂಡಿರಬೇಕಲ್ಲ ಎಂಬ ಸಂಕಟ.

ನನ್ನ ಸಂತೋಷವನ್ನೆಲ್ಲಾ ಮೊದಲು ನಿನಗೆ ಹೇಳಬೇಕು, ದುಃಖವನ್ನು ನಿನ್ನೊಡನೆಯೆ ಹಂಚಿಕೊಳ್ಳುವಾಸೆ ಇಂದು ನಿನ್ನಯದಲ್ಲ. ಅದರಲ್ಲೂ ಅಪ್ಪ–ಅಮ್ಮನ ಆಗಲಿಕೆ ನಂತರ ಎಷ್ಟೋ ಸಾರಿ ನೀನೇ ನನಗೆ ಅಪ್ಪನೂ ಆಗಿದ್ದೀಯಾ, ಅಮ್ಮನಂತೆ ಆತ್ಮೀಯನೂ ಆಗಿದ್ದೀಯ. ಮೊನ್ನೆ ಹಲ್ಲು ನೋವಿರಲು ಜ್ವರ ಬಂದಂತಾಗಿ, ನೀನು ನನ್ನ ಬಳಿ ಇಲ್ಲ ಎಂಬ ಸಂಕಟ ಬೇರೆ. ಚಿಕ್ಕ ಮಗುವಿನಂತೆ ಸಂಕಟದಿ ಅಳಲು ಮಕ್ಕಳೇ ಸಮಾಧಾನಿಸಿದರು. ಆದ್ರೂ ನನ್ನ ದುಃಖ ಹಾಗೆಯೇ ಇರಲು ನಡುರಾತ್ರಿಲಿ ‘ತಡಿ ಅಪ್ಪನ ಹತ್ತಿರ ಮಾತಾಡು’ ಎಂದು ಫೋನ್ ಕನೆಕ್ಟ್ ಮಾಡ್ತಾನೆ ಮಗ ಸುಮುಖ. ನಿನ್ನ ಧ್ವನಿ ಕೇಳಿದೊಡನೆ ನನಗೆ ಯಾಕೋ ಒಂಟಿಯಾಗಿರುವ ಸಂಕಟ ಉಮ್ಮಳಿಸಲು, ಸಮಾಧಾನಿಸಿ ಸೋತು ನೀನು ಕೊನೆಗೆ ಲಾಲಿ ಹೇಳುತ್ತಿರಲು ನಾನು ಮಲಗುವೆ. ಇದೆಲ್ಲ ನೋಡಿ ಮಗ ಏನಮ್ಮ ಐಎಸ್‌ಡಿಲಿ ಅಪ್ಪ ನಿಂಗೆ ಲಾಲಿ ಹೇಳ್ಬೇಕಾ ಅಂತ ನಗ್ತಾನೆ. ನನ್ನ ತಟ್ಟಿ ತಟ್ಟಿ ಮಲಗಿಸುತ್ತಾನೆ. ಅವನಿಗೇನು ಗೊತ್ತು ನಮ್ಮ ಪ್ರೇಮದ ಪರಿ. ನನ್ನ–ನಿನ್ನ ನಡುವಿನ ಪ್ರೀತಿ ಬರಹದಲ್ಲಿ ಬಣ್ಣಿಸಲಾಗಲಿ, ಬಾಯಲ್ಲಿ ಹೇಳಿಕೊಳ್ಳಲಾಗಲಿ ಆಗದೆಂದು.

ಕಡು ಸಂಕಷ್ಟಗಳು ಬಂದರೂ, ತಡೆಯಲಾರದಂತಹ ಸಂತೋಷ ಆದಾಗಲೂ ಎಲ್ಲದರಲ್ಲೂ ಸಮಾನವಾಗಿ, ಸ್ನೇಹಿತನಾಗಿ, ಪ್ರೇಮಿಯಾಗಿ, ಪತಿಯಾಗಿ ಈ ಬಾಳ ಪಥದಲ್ಲಿ ನನ್ನೊಡನೆ ಪಯಣಿಸುತ್ತಿರುವೆ ನೀನು. ನಾನು ದುಃಖದಲ್ಲಿದ್ದಾಗ ಮಗುವಿನಂತೆ ಸಂತೈಸಿರುವೆ. ನಂಗೊತ್ತು ನನ್ನ ಈ ಪತ್ರಾನ ಜೋಪಾನವಾಗಿ ಇಟ್ಕೊಂತಿಯ ನೀನು ಅಂತ. ಎಷ್ಟು ಬಾರಿ ಓದುತ್ತೀಯೋ ಅಲ್ಲವಾ, ಅದಕ್ಕೆ ಪ್ರೀತಿ ಅನ್ನೋದು. ನನಗೆ ನಿನ್ನಂತೆ ‘ಐ ಲವ್ ಯೂ’ ಎಂದು ಯಾಕೊ ಇದುವರೆಗೂ ಹೇಳಕ್ಕಾಗುತ್ತಿಲ್ಲ. ನನ್ನ ಪ್ರೀತಿಗೆ ಧ್ವನಿ ಇಲ್ಲವಾ? ಈಗ್ಗೆ 12 ವರ್ಷದ ಹಿಂದೆ ನಾ ಬರೆದ ಪತ್ರಾನೇ ಈಗಲೂ ಆಗಾಗ್ಗೆ ನಿನ್ನ ಪಾಕೆಟ್ ಪರ್ಸ್‌ ಇಂದ ತೆಗೆದು ಓದ್ತೀಯಲ್ಲಾ, ನನ್ನ ಹುಚ್ಚು ಹುಡುಗ!. ಒಮ್ಮೊಮ್ಮೆ ನೀ ನನ್ನ ಬಳಿ ಇಲ್ಲದ ನೋವು ಅತಿಯಾದಾಗ ನಾನು ಹುಚ್ಚಿಯಂತಾಗುವೆ. ಈ ಶ್ರೀಲಕ್ಷ್ಮಿ ಹರಿಪ್ರಸಾದ್‌ನ ಹುಚ್ಚಿಯೇ. ಇಷ್ಟು ದೊಡ್ಡವಳಾದ್ರೂ ಮಕ್ಕಳ ಥರ ‘ಅಪ್ಪ ಬೇಕು’ ಅಂತಿಯಲ್ಲಮ್ಮಾ ಅಂತಾರೆ ಮಕ್ಕಳು. ಏನ್‌ ಮಾಡ್ಲೋ ನಾನು–ನೀನಾಗಿ, ನೀನು–ನಾನಾಗಿ ಬಾಳಿದ್ದೇವೆ. ಇಲ್ಲ ಹರಿ, ನಿನ್ನೊಡನಾಟ ಬರೀ ‘ಫೋನ್‌’ಗೆ, ಮೆಸೇಜ್‌ಗೆ, ಸ್ಕೈಪ್‌ಗೆ, ಪತ್ರಕ್ಕೆ ಸೀಮಿತ ಆದ್ರೆ ಹುಚ್ಚೇ ಹಿಡಿಯುತ್ತೆ. ಆದ್ರೆ ಬದುಕಿಗೆ ದುಡಿಮೆಯೇ ವಾಸ್ತವ. ದುಡಿಮೆಯ ಅನಿವಾರ್ಯತೆಯಲ್ಲಿ ಅಲ್ಪ ಸಮಯದ ಅಗಲಿಕೆಯೂ ದೀರ್ಘವೆನಿಸುತ್ತಿದೆ.

ರಜದಲ್ಲಾದರೂ ನಿನ್ನ ಬಳಿ ಬರಬೇಕು ಅಂದ್ರೂ ಎಷ್ಟೊಂದು ನಿಯಮ. ಪಾಸ್‌ಫೋರ್ಟ್, ಯಲ್ಲೋಫಿವರ್ ಕಾರ್ಡ್, ವೀಸಾ, ಟಿಕೆಟ್... ಎಲ್ಲಾ ಆದ ನಂತರ, ಮೂರು ವಿಮಾನದಲ್ಲಿ ಹಾರಿ ನಿನ್ನ ಬಳಿ ಬರಬೇಕು. ಓ ದೇವ ಪುಟ್ಟ ಪುಟ್ಟ ಹಕ್ಕಿಗೆ ಸುಂದರ ರೆಕ್ಕೆಗಳನ್ನು ಕೊಟ್ಟು ದೂರ ದೇಶಕ್ಕೆ ಹಾರಿಸುತ್ತೀಯಲ್ಲಾ, ಈ ದೊಡ್ಡ ದೇಹಕ್ಕೆ ರೆಕ್ಕೆಗಳಿದ್ದಿದ್ರೆ ಏನಾಗು ತ್ತಿತ್ತು, ನನ್ನವನ ಬಳಿ ಹಾರಿ ಹೋಗುತ್ತಿದ್ದೇ ನಲ್ಲ. ನನ್ನ ಮೊರೆ ಕೇಳಿಸಿತಾ ನನ್ನ ‘ಹರಿ’ಯೆ.

ನಿನ್ನ ಜೊತೆಗಾಗಿ ಕಾತರಿಸುವ ನಿನ್ನ
 – ಶ್ರೀಲಕ್ಷ್ಮೀ, ಬೆಂಗಳೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT