ಅಪರಾಧಗಳು ದಿನೇ ದಿನೇ ಹೆಚ್ಚುತ್ತಿವೆ. ಕಂಡೂ ಕೇಳರಿಯದ ದುಷ್ಕೃತ್ಯಗಳು ನಾಗರಿಕರನ್ನು ಅಭದ್ರತೆ, ಆತಂಕದ ಮಡುವಿನಲ್ಲಿ ದಿನದೂಡುವಂತೆ ಮಾಡಿವೆ. ಅಪರಾಧ ಕೃತ್ಯಗಳಿಗೆ ದುಷ್ಕರ್ಮಿಗಳು ಹೆಣೆಯುವ ತಂತ್ರಗಾರಿಕೆಗಳು ಪೊಲೀಸರಿಗೂ ಸವಾಲಾಗಿವೆ. ಪೊಲೀಸರು ಚಾಪೆ ಕೆಳಗೆ ತೂರಿದರೆ, ಚೋರರು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ.

ಮೈಸೂರಿನ ಶ್ರೀ ಜಯ ಚಾಮರಾಜೇಂದ್ರ(ಎಸ್‌ಜೆಸಿ) ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬರು ಸುಳ್ಳುಪತ್ತೆ ಯಂತ್ರ ರೂಪಿಸಿ ಪೊಲೀಸರಿಗೆ ದುಷ್ಕರ್ಮಿಗಳನ್ನು ಹಿಡಿಯಲು ಅನುಕೂಲ ಮಾಡಿಕೊಟಿದ್ದಾರೆ. ಪೊಲೀಸ್ ಠಾಣೆಗಳಲ್ಲಿ ಈ ಯಂತ್ರವಿದ್ದರೆ ಕಳ್ಳರಿಂದ ಮಾಹಿತಿ ಸಂಗ್ರಹ ಸುಲಭವಾಗಲಿದೆ.

ಎಸ್.ಜಗದೀಶ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದ 7ನೇ ಸೆಮಿಸ್ಟರ್ ವಿದ್ಯಾರ್ಥಿ. ಅಧ್ಯಯನದ ಭಾಗವಾಗಿ ಈ ಸಂಶೋಧನೆ ಕೈಗೊಂಡಿದ್ದಾರೆ. ಸುಳ್ಳು ಹೇಳುವುದನ್ನು ಕಂಡುಹಿಡಿಯಲು ಸುಳ್ಳುಪತ್ತೆ ಯಂತ್ರ (Digitized polygraph machine) ಸಹಕಾರಿ ಎಂಬುದು ಅವರ ವಾದ. ಕಡಿಮೆ ಹಣ ವೆಚ್ಚ ಮಾಡಿ ಇದನ್ನು ತಯಾರಿಸಿ, ಎಲ್ಲ ಪೊಲೀಸ್ ಠಾಣೆಗಳಲ್ಲಿ ನೀಡಬಹುದಾಗಿದೆ ಎನ್ನುವುದು ಈ `ವಿದ್ಯಾರ್ಥಿ ತಂತ್ರಜ್ಞ'ನ ಅಭಿಮತ.

ಬಂಧಿತ ಆರೋಪಿಗಳಿಂದ ನಿಜಾಂಶ ಹೊರತರಲು `ಪಾಲಿಗ್ರಾಫಿ' ವಿಧಾನ ಜನಪ್ರಿಯ. ಇದರ ಬಳಕೆ ವಿದೇಶಗಳಲ್ಲಿ ಹೆಚ್ಚಾಗಿದೆ. ಆದರೆ, ನಮ್ಮಲ್ಲಿ ಬಹಳಷ್ಟು ಪೊಲೀಸ್ ಠಾಣೆಗಳಲ್ಲಿ ಈ ಸೌಲಭ್ಯ ಇಲ್ಲ. ಸಾಮಾನ್ಯವಾದ ಸುಳ್ಳು ಪತ್ತೆ ಯಂತ್ರದ ಬೆಲೆ ರೂ. 40 ಸಾವಿರದಿಂದ 50 ಸಾವಿರದಷ್ಟಿದೆ. ಬಳಕೆ ಬಗ್ಗೆ ಪೊಲೀಸರಿಗೂ ಅಗತ್ಯ ಮಾಹಿತಿ ಇರಬೇಕು. ದುಬಾರಿ ಎಂಬ ಕಾರಣಕ್ಕೆ ನಮ್ಮಲ್ಲಿ ಈ ವಿಧಾನವನ್ನು ಎಲ್ಲಿಯೂ ಪರಿಚಯಿಸಿಲ್ಲ ಎನ್ನುತ್ತಾರೆ ಜಗದೀಶ್.
ಕಡಿಮೆ ಖರ್ಚಿನಲ್ಲಿ ಇಂತಹ ಯಂತ್ರ ತಯಾರಿ ಸಾಧ್ಯ? ಎಂಬುದೇ ಜಗದೀಶ್ ಅವರ ಸಂಶೋಧನಾ ವಿಷಯ.

ಅವರ ಪ್ರಕಾರ, ಸುಳ್ಳುಪತ್ತೆ ಯಂತ್ರ ಸಿದ್ಧಪಡಿಸಲು ಕೇವಲ ರೂ. 4 ಸಾವಿರ ಸಾಕು. ಸಂಖ್ಯೆಗಳ ಮೂಲಕ `ಸತ್ಯಾಂಶ' ಕಂಡುಹಿಡಿಯುವುದು ಸುಧಾರಿತ ಯಂತ್ರದ ಮತ್ತೊಂದು ಸಾಧ್ಯತೆ. ಮೂಲಯಂತ್ರದಲ್ಲಿ ಮಾಹಿತಿ ಸಂಗ್ರಹಿಸುವಾಗ `ಮಾನಿಟರಿಂಗ್ ಸಿಸ್ಟಂ' ಬಳಸಲಾಗುತ್ತದೆ. ಶಾರೀರಿಕ ಕ್ರಿಯೆಗಳಾದ ಉಸಿರಾಟ, ನಾಡಿ ಮಿಡಿತದ ವ್ಯತ್ಯಾಸ ಗುರುತಿಸಿ ಸುಳ್ಳುಪತ್ತೆ ಹಚ್ಚಲಾಗುತ್ತದೆ. ಮುಖಭಾವ ಗಮನಿಸಿ ನಿರ್ಣಯ ಕೈಗೊಳ್ಳಲಾಗುತ್ತದೆ. `ಮಾನಿಟರ್' ಪರದೆ ಮೇಲೆ ಮೂಡುವ ಅಲೆಗಳ ರೀತಿಯ ಸಂಕೇತ ಗೆರೆಗಳಿಂದ ಆರೋಪಿಯ ಮಾತಿನಲ್ಲಿನ `ಸತ್ಯ-ಸುಳ್ಳಿನ' ಅಂಶಗಳನ್ನು ಅಂದಾಜು ಮಾಡಲಾಗುತ್ತದೆ. ವ್ಯಕ್ತಿಯ ಹೃದಯ ಬಡಿತ ಸಾಮಾನ್ಯವಾಗಿದ್ದಾಗ ನೀಡಿದ ಹೇಳಿಕೆಗಳು ಹಾಗೂ ಉದ್ವೇಗಕ್ಕೆ ಒಳಗಾಗಿ ನೀಡಿದ ಹೇಳಿಕೆಗಳನ್ನು ತುಲನೆ ಮಾಡಲಾಗುತ್ತದೆ. ಇದು ಸುಳ್ಳುಪತ್ತೆಗೆ ಜಾರಿಯಲ್ಲಿರುವ ತಂತ್ರಗಾರಿಕೆ.

ಈ ಮಾದರಿಯನ್ನು ಜಗದೀಶ್ ಕೊಂಚ ಬದಲಿಸಿದ್ದಾರೆ. ಹೆಚ್ಚು ಹಣ ಬಯಸುವ `ಮಾನಿಟರಿಂಗ್ ಸಿಸ್ಟಂ'ಗೆ ಪರ್ಯಾಯ ವಿಧಾನ ಕಂಡುಕೊಂಡಿದ್ದಾರೆ. ನೂತನ ವಿಧಾನದಲ್ಲಿ `ಸಂಖ್ಯೆ' ಹಾಗೂ `ನಕ್ಷತ್ರ'(*)ದ ಚಿನ್ಹೆಗಳನ್ನು ಸಂಕೇತಾಕ್ಷರಗಳಾಗಿ ನೀಡಲಾಗಿದೆ.

ಆರೋಪಿಯು ಹೇಳಿಕೆ ನೀಡಿದಾಗ `ಸಂಖ್ಯೆ' ಹಾಗೂ `ಸ್ಟಾರ್' ಚಿನ್ಹೆ ಮೂಡುತ್ತವೆ. ವ್ಯಕ್ತಿಯ ಹೃದಯಬಡಿತ ನಿಮಿಷಕ್ಕೆ 74-82ರ ಲೆಕ್ಕದಲ್ಲಿದ್ದರೆ ಎರಡು ಸ್ಟಾರ್, 90 ದಾಟಿದರೆ ಮೂರು ಸ್ಟಾರ್ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಮೂಲವಿಧಾನದಲ್ಲಿ ಇದಕ್ಕಾಗಿ ಪ್ರತ್ಯೇಕ ಸಾಧನ ಅಳವಡಿಸಿದ್ದರೆ, ಇಲ್ಲಿ ಮುಖ್ಯಯಂತ್ರವೇ ಎಲ್ಲವನ್ನೂ ಒಳಗೊಂಡಿದೆ. ಹೀಗಾಗಿ ಉತ್ಪಾದನಾ ವೆಚ್ಚ ಕಡಿಮೆಯಾಗಿದೆ.

`ತಂದೆ ಪೊಲೀಸ್ ಇಲಾಖೆ ಉದ್ಯೋಗಿ. ಅವರ ಜತೆ ಠಾಣೆಗೆ ಹೋದಾಗಲೆಲ್ಲ ಆರೋಪಿಗಳ ವರ್ತನೆ, ಪೊಲೀಸರು ಅವರಿಂದ ಹೇಳಿಕೆ ಪಡೆಯುವ ವಿಧಾನ ಅವಲೋಕಿಸಿದ್ದೆ. ಈ ಕುರಿತು ವಿಸ್ತೃತ ಅಧ್ಯಯನವನ್ನೂ ನಡೆಸಿದೆ. ವಿದೇಶದಲ್ಲಿ ಸಣ್ಣ-ಪುಟ್ಟ ಪ್ರಕರಣಗಳಲ್ಲಿ ಸುಳ್ಳುಪತ್ತೆ ಯಂತ್ರ ಬಳಸುವ ವಿಚಾರವೂ ತಿಳಿಯಿತು. ಆದರೆ, ಆ ಯಂತ್ರ ದುಬಾರಿ ಎಂಬುದು ಮನವರಿಕೆಯಾಯಿತು. ಕಡಿಮೆ ವೆಚ್ಚದಲ್ಲಿ ಯಂತ್ರರೂಪಿಸುವ ಯೋಜನೆ ಸಿದ್ಧಪಡಿಸಿ ಪ್ರಾಂಶುಪಾಲರು, ವಿಭಾಗದ ಮುಖ್ಯಸ್ಥರ ಬಳಿ ಚರ್ಚಿಸಿದೆ. ರೂ. 4 ಸಾವಿರ ಖರ್ಚು ಮಾಡಿ ಈ ಸಾಧನ ತಯಾರಿಸಿದೆ. ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲೂ ಕಡ್ಡಾಯವಾಗಿ ಈ ಯಂತ್ರ ಇರಿಸಬೇಕು ಎಂಬುದು ನನ್ನ ಆಶಯ' ಎನ್ನುತ್ತಾರೆ ಜಗದೀಶ್.

ಅವರ ಈ ಕಾರ್ಯಕ್ಕೆ ಇದೇ ವಿಭಾಗದ ರಾಕೇಶ್ ಕುಮಾರ್, ವಿ.ಕೈಲಾಶ್ ನೆರವಾಗಿದ್ದಾರೆ. ಮೂವರೂ ಸೇರಿ ಬೆಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗಳಿಗೆ ಉಪಕರಣದ ಕುರಿತು ಮನವರಿಕೆ ಮಾಡಿಕೊಟ್ಟಿದ್ದಾರೆ. ಪೊಲೀಸ್ ಅಧಿಕಾರಿಗಳೂ ಠಾಣೆಗೆ ಬಂದು ಪ್ರಾತ್ಯಕ್ಷಿಕೆ ನಡೆಸುವಂತೆ ಆಹ್ವಾನಿಸಿದರು. ಕೊಲೆ ಆರೋಪಿಗೆ ಎರಡು ಪ್ರಶ್ನೆಗಳನ್ನು ಕೇಳುವ ಮೂಲಕ ಪ್ರಾತ್ಯಕ್ಷಿಕೆ ನಡೆಸಿಕೊಟ್ಟಾಗ ಉತ್ತಮ ಫಲಿತಾಂಶ ಲಭಿಸಿತು. ಇಂತಹ ಎಂಟು ಉಪಕರಣ ಸಿದ್ಧಪಡಿಸಿಕೊಡುವಂತೆ ಪೊಲೀಸ್ ಅಧಿಕಾರಿಗಳು ಕೋರಿದ್ದಾರೆ. ಅವನ್ನು ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸುವ ಚಿಂತನೆ ಅವರದಾಗಿದೆ.

`ಕಳೆದ ಮೂರು ವರ್ಷದಿಂದ ನಮ್ಮ ವಿಭಾಗದ ವಿದ್ಯಾರ್ಥಿಗಳಿಗೆ ಆವಿಷ್ಕಾರದಲ್ಲಿ ತೊಡಗಲು ಉತ್ತೇಜನ ನೀಡಲಾಗುತ್ತಿದೆ. ನಮ್ಮ ವಿಭಾಗದ ವಿದ್ಯಾರ್ಥಿ ಜಗದೀಶ್ ಶ್ರಮವಹಿಸಿ `ಪಾಲಿಗ್ರಾಫಿ' ಯಂತ್ರ ರೂಪಿಸಿದ್ದಾನೆ. ಆರೋಪಿಗಳ ವಿಚಾರಣೆ, ತನಿಖೆ ಸಂದರ್ಭದಲ್ಲಿ ಪೊಲೀಸ್ ತನಿಖಾಧಿಕಾರಿಗೆ ಇದು ನೆರವಾಗುವಂತಹ ಉತ್ತಮ ಸಾಧನ' ಎನ್ನುತ್ತಾರೆ ವಿಭಾಗದ ಮುಖ್ಯಸ್ಥ ಎಚ್.ಎಸ್.ವೇಣುಗೋಪಾಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.