ಬುಧವಾರ, 2 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕದಂಬೋತ್ಸವ: ಪುಳಕಗೊಳಿಸಿದ ವೆಂಕಟಸುಬ್ಬಯ್ಯ

Published : 7 ಫೆಬ್ರುವರಿ 2015, 19:34 IST
ಫಾಲೋ ಮಾಡಿ
Comments

ಬನವಾಸಿ (ಮಯೂರವರ್ಮ ವೇದಿಕೆ): ‘ಮನುಷ್ಯ ಮನುಷ್ಯ-­ನಾಗಿರಬೇಕಾದರೆ ಸ್ವಾರ್ಥ ಮತ್ತು ಭೋಗರಹಿತ­ನಾಗಿರಬೇಕು. ಸಂಗೀತ ಕೇಳಬೇಕು. ವಿದ್ವಾಂಸನಾಗಿರಬೇಕು. ಬನವಾಸಿ ದೇಶದಲ್ಲಿ ಹುಟ್ಟಿದರೆ ಈ ಗುಣಗಳು ಪ್ರಾಪ್ತಿಯಾಗುತ್ತವೆ. ಬನವಾಸಿಯಲ್ಲಿ ಹುಟ್ಟಲು ಪುಣ್ಯ ಮಾಡಿರಬೇಕು ಎಂಬ ಆದಿಕವಿ ಪಂಪನ ಮಾತನ್ನು ಹೇಳುತ್ತ ಪಂಪ ಪ್ರಶಸ್ತಿಗೆ ಭಾಜನರಾದ ಪ್ರೊ. ಜಿ.ವೆಂಕಟಸುಬ್ಬಯ್ಯ ಮಾತು ಆರಂಭಿಸಿದಾಗ ಸೇರಿದ್ದ ಸಭಿಕರಿಗೆ ಪುಳಕ!

ಪ್ರಶಸ್ತಿ ಸ್ವೀಕರಿಸಲು ವಯೋಮಾನದ ಕಾರಣದಿಂದ ವೈಯಕ್ತಿಕವಾಗಿ ಆಗಮಿಸಲು ಸಾಧ್ಯವಾಗದ ಅವರು, ವೇದಿಕೆಯ ಎದುರಿನ ಬೃಹತ್‌ ಪರದೆಯಲ್ಲಿ ಮಾತಿಗಾರಂಭಿಸಿದರು. ‘ಪ್ರಶಸ್ತಿ ಆಯ್ಕೆಗೆ ರಚನೆ ಮಾಡಿದ್ದ  ಸಮಿತಿ ನನ್ನನ್ನು ಆಯ್ಕೆ ಮಾಡಿದೆ. ಶ್ರೇಷ್ಠ ಕವಿ ಪಂಪನ ಸ್ಮರಣೆಯಲ್ಲಿ ನೀಡುವ ಪ್ರಶಸ್ತಿ ನನಗೆ ಸಂದದ್ದು ತುಂಬಾ ಸಂತೋಷ ತಂದಿದೆ. ಪಂಪ ಎರಡು ಮಹತ್ವದ ಕೃತಿಗಳನ್ನು ರಚಿಸಿದ್ದಾನೆ. ಆತನ ಕೃತಿಗಳ ಓದು ನನ್ನ ವ್ಯಕ್ತಿತ್ವ ಬೆಳೆಸಿದೆ’ ಎಂದರು.

‘ಬನವಾಸಿ ಸೊಗಸಾದ ತಾಣ. ಇಲ್ಲಿಗೆ ಅನೇಕ ಬಾರಿ ಭೇಟಿ ನೀಡಿದ್ದೇನೆ. ಪ್ರಶಸ್ತಿ ಸ್ವೀಕರಿಸಲು ವೈಯಕ್ತಿಕವಾಗಿ ಇರಬೇಕಾದದ್ದು ನನ್ನ ಕರ್ತವ್ಯವಾಗಿತ್ತು. ಆದರೆ ಇಳಿವಯಸ್ಸಿನಲ್ಲಿ ನನ್ನ ದೇಹ ದೂರ ಪ್ರಯಾಣಕ್ಕೆ ಒಪ್ಪುತ್ತಿಲ್ಲ. ಕುಟುಂಬ ವೈದ್ಯರು ಸಹ ದೂರದ ಪ್ರಯಾಣ ನಿಮಗೆ ಅಪಾಯಕಾರಿ ಎಂದಿದ್ದಕ್ಕೆ ಕಾರ್ಯಕ್ರಮಕ್ಕೆ ಬಂದಿಲ್ಲ. ನನ್ನನ್ನು ಕ್ಷಮಿಸುತ್ತೀರಿ ಎಂದು ಕೊಂಡಿದ್ದೇನೆ. ಸಿರಿಗನ್ನಡಂ ಗೆಲ್ಗೆ..’ ಎಂದು ತಮ್ಮ ಮಾತಿಗೆ ಪೂರ್ಣವಿರಾಮವಿಟ್ಟರು. ಸುಮಾರು ಮೂರು ನಿಮಿಷಗಳ  ಅವರ ಮುದ್ರಿತ ಧ್ವನಿಯನ್ನು ಸಭಿಕರು ಕುತೂಹಲದಿಂದ ಆಲಿಸಿ,  ಕರತಾಡನದ ಮೂಲಕ ಅವರನ್ನು ಅಭಿನಂದಿಸಿದರು.

ಬನವಾಸಿಯಲ್ಲೇ ಪಂಪ ಪ್ರಶಸ್ತಿ ನೀಡಲು ಬದ್ಧ
ಬನವಾಸಿ (ಮಯೂರವರ್ಮ ವೇದಿಕೆ):
‘ಕನ್ನಡದ ಮೊದಲ ರಾಜಧಾನಿ ಬನ­ವಾಸಿ­ಯಲ್ಲೇ ಪ್ರತಿ ವರ್ಷ ಪಂಪ ಪ್ರಶಸ್ತಿ ನೀಡಲು ಸರ್ಕಾರ ಬದ್ಧವಾಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.

ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಆಯೋಜಿಸಿರುವ ಎರಡು ದಿನಗಳ ಕದಂಬೋತ್ಸ­ವಕ್ಕೆ ಶನಿವಾರ ಸಂಜೆ ಚಾಲನೆ ನೀಡಿ ಮಾತನಾಡಿದರು.

‘ಪ್ರಾಚೀನ ಸಾಹಿತ್ಯ ಅಧ್ಯಯನ ಮಾಡಿದ ಸಾಹಿತಿಗಳಲ್ಲಿ ಪ್ರೊ. ಜಿ.­ವೆಂಕಟ­­ಸುಬ್ಬಯ್ಯ ಒಬ್ಬರು. ಇಂತಹ ಹಿರಿಯ ಸಾಹಿತಿಗೆ ಪ್ರಶಸ್ತಿ ಸಂದಿದ್ದು ನಾಡಿಗೆ ಹೆಮ್ಮೆ ತಂದಿದೆ. ಪ್ರಶಸ್ತಿಯನ್ನು ಮುಂದಿನ ವರ್ಷದಿಂದ ಬನವಾಸಿ­ಯಲ್ಲೇ ನೀಡಬೇಕು ಎಂದು ಸರ್ಕಾರ ನಿರ್ಧರಿಸಿದೆ’ ಎಂದರು.

‘ಮುಖ್ಯಮಂತ್ರಿ ಬಜೆಟ್‌ನಲ್ಲಿ ಘೋಷಿ­ಸಿರುವ ಬನವಾಸಿ ಅಭಿವೃದ್ಧಿ ಪ್ರಾಧಿಕಾರ ರಚನೆಯ ಪ್ರಕ್ರಿಯೆ ಚಾಲ್ತಿ­ಯಲ್ಲಿದೆ. ಯಾವುದೇ ಆತಂಕ ಬೇಡ. ಮುಖ್ಯ­ಮಂತ್ರಿ ಕೊಟ್ಟಿರುವ ಮಾತನ್ನು ಉಳಿಸಿ­ಕೊಳ್ಳುತ್ತಾರೆ’ ಎಂದರು.

ನಿರಾಶೆ: ಉದ್ಘಾಟನೆಗೆ ಬರಬೇಕಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರಾಗಿ­ದ್ದರು. ಅವರು ನವದೆಹಲಿಯಲ್ಲಿ ಇದೇ 8ರಂದು ನಡೆಯುವ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸ­ಬೇಕಾಗಿರು­ವುದರಿಂದ ಕದಂಬೋತ್ಸವಕ್ಕೆ ಬರುವುದು ಅನುಮಾನ ಎಂಬ ಸೂಚನೆಯನ್ನು ಸ್ಥಳೀಯ ಶಾಸಕ ಶಿವರಾಮ ಹೆಬ್ಬಾರ ಮೊದಲೇ ನೀಡಿದ್ದರೂ, ಸಿ.ಎಂ ಬರಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದ ಸಾರ್ವಜನಿಕರಿಗೆ ನಿರಾಸೆಯಾಯಿತು.

ಪ್ರೊ. ಜಿ.ವೆಂಕಟಸುಬ್ಬಯ್ಯ ಅವರು ವೈಯಕ್ತಿಕವಾಗಿ ಆಗಮಿಸದಿದ್ದರೂ ಪರದೆಯ ಮೇಲೆ ಬಂದು ಪ್ರೇಕ್ಷಕರಿಗೆ ಖುಷಿ ಮೂಡಿಸಿ, ಅವರ ಉಪಸ್ಥಿತಿಯ ಕೊರತೆಯನ್ನು ತುಂಬಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT