ಮಂಗಳವಾರ, 1 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡ ದೀಪ ಬೆಳಗಿದ ಕವಿಗೆ ಗೌರವ

Published : 8 ಫೆಬ್ರುವರಿ 2015, 7:10 IST
ಫಾಲೋ ಮಾಡಿ
Comments

ಹುಬ್ಬಳ್ಳಿ:‘ಹಚ್ಚೇವು ಕನ್ನಡದ ದೀಪ...’ ಎಂಬ ಕವಿತೆ ಮೂಲಕ ನುಡಿಯ ತೇರೆಳೆದ  ಕವಿಗೆ ಮಹಾನಗರ ಪಾಲಿಕೆ ವಿಶೇಷ ಗೌರವ ನೀಡಿದೆ. ಹುಬ್ಬಳ್ಳಿಯ ಅಶೋಕ ನಗರದಲ್ಲಿರುವ ಕನ್ನಡ­ಭವನಕ್ಕೆ ಡಿ.ಎಸ್‌. ಕರ್ಕಿ ಹೆಸರಿಡುವ ಮೂಲಕ ಪಾಲಿಕೆ ತನ್ನ ಗೌರವವನ್ನೂ ಹೆಚ್ಚಿಸಿಕೊಂಡಿದೆ. ಸಜ್ಜನ ಕವಿಗೆ ಅಪರೂಪದ ಗೌರವ ಸಂದಿರುವುದಕ್ಕೆ ಕರ್ಕಿ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

‘ಭವನವೊಂದಕ್ಕೆ ಕವಿಯ ಹೆಸರಿಟ್ಟಿರುವುದು ಜಿಲ್ಲೆಯ ಮಟ್ಟಿಗೆ ಅಪರೂಪದ ಪ್ರಸಂಗ. ಬೇಂದ್ರೆ ಭವನ ಇದ್ದರೂ, ಆ ಹೆಸರಿಟ್ಟಿರುವುದು ಬೇಂದ್ರೆ ಸ್ಮಾರಕ ಟ್ರಸ್ಟ್‌. ಆದರೆ, ಕನ್ನಡ ಭವನಕ್ಕೆ ಪಾಲಿಕೆಯೇ ಡಿ.ಎಸ್. ಕರ್ಕಿ ಅವರ ಹೆಸರಿಟ್ಟಿರುವುದು ಸಂತಸದ ಸಂಗತಿ’ ಎನ್ನುತ್ತಾರೆ ಕರ್ಕಿ ಸಾಹಿತ್ಯ ವೇದಿಕೆಯ ಎಂ.ಎ. ಸುಬ್ರಮಣ್ಯ.

‘ಕನ್ನಡ ಭವನಕ್ಕೆ ಕರ್ಕಿ ಅವರ ಹೆಸರಿಡಬೇಕು ಎಂಬ ಒತ್ತಾಯ ಮೊದಲಿನಿಂದಲೂ ಇತ್ತು. ಅದು ಈಗ ಈಡೇರಿದೆ. ಆದರೆ, ಕನ್ನಡ ಭವನದಲ್ಲಿ ಕಾರ್ಯಕ್ರಮವೊಂದಕ್ಕೆ ತೆಗೆದುಕೊಳ್ಳುವ ಬಾಡಿಗೆಯನ್ನೂ ಕಡಿಮೆ ಮಾಡಿದರೆ ಅನುಕೂಲ’ ಎಂದು ಹೇಳಿದರು.

‘ಒಂದು ಕಾರ್ಯಕ್ರಮ ನೀಡಲು ಕಟ್ಟಡದ ಬಾಡಿಗೆ, ವಿದ್ಯುತ್‌ ಶುಲ್ಕ, ಜನರೇಟರ್‌ ಖರ್ಚು ಎಲ್ಲ ಸೇರಿ ₨12,000ದಿಂದ 13,000 ಆಗುತ್ತದೆ. ಇಷ್ಟಾದರೂ ಭವನದಲ್ಲಿ ಸೂಕ್ತ ಸೌಕರ್ಯಗಳಿಲ್ಲ. ಅತಿಥಿಗಳಿಗೆ ವೇದಿಕೆ ಮೇಲೆ ಕುಳಿತುಕೊಳ್ಳಲು ಉತ್ತಮ ಆಸನಗಳೂ ಇಲ್ಲ. ಕನ್ನಡ ಪರ ಕಾರ್ಯಕ್ರಮಗಳಿಗಾದರೂ ಕಡಿಮೆ ಬಾಡಿಗೆಯನ್ನು ಪಾಲಿಕೆ ನಿಗದಿ ಮಾಡಬೇಕು ’ ಎಂದು ಸುಬ್ರಮಣ್ಯ ಹೇಳಿದರು.


ರಸ್ತೆಗಿಂತ ಭವನಕ್ಕೆ ಇಡುವ ಹೆಸರು ಅರ್ಥಪೂರ್ಣ: ಹುಬ್ಬಳ್ಳಿಯ ಹೊಸೂರು ವೃತ್ತದಿಂದ ಕಾಡಸಿದ್ಧೇಶ್ವರ ಕಾಲೇಜಿನವರೆಗೆ ಇರುವ ರಸ್ತೆಗೆ ಡಾ. ಡಿ.ಎಸ್‌. ಕರ್ಕಿ ರಸ್ತೆ ಎಂದು ಹೆಸರಿಡಲಾಗಿದೆ. ಆದರೆ, ಯಾರೂ ಆ ಹೆಸರಿನಿಂದ ಆ ರಸ್ತೆಯನ್ನು ಗುರುತಿಸುತ್ತಿಲ್ಲ. ಬದಲಾಗಿ ಪಿ.ಬಿ. ರಸ್ತೆ ಎಂದೇ ಜನರ ಬಾಯಲ್ಲಿದೆ.

ಆದರೆ, ಕನ್ನಡಭವನದಂತಹ ಕಟ್ಟಡಗಳಿಗೆ ಕವಿಯ ಹೆಸರಿಟ್ಟಿರುವುದರಿಂದ ಅದು ಹೆಚ್ಚು ಪ್ರಚಲಿತಕ್ಕೆ ಬರುತ್ತದೆ. ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮ­ಗಳ ಮೂಲಕ ಸಜ್ಜನ ಕವಿಯ ಹೆಸರನ್ನು ಅಜರಾಮರವಾಗಿಸುವ ಕೆಲಸ ನಡೆಯುವುದು ಕರ್ಕಿ ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT