ಕನ್ನಡ ಸಾಂಸ್ಕೃತಿಕ ಸಂದರ್ಭದಲ್ಲಿ ಬನ್ನಂಜೆ ಗೋವಿಂದಾಚಾರ್ಯರು ಬೆಳಕಿಂಡಿಯಂತೆ ಕಾರ್ಯ ನಿರ್ವಹಿಸುತ್ತ ಬಂದವರು. ಕನ್ನಡ – ಸಂಸ್ಕೃತ ಭಾಷೆಗಳಲ್ಲಿ ಅವರದು ಅಪಾರ ವಿದ್ವತ್. ಎರಡೂ ಭಾಷೆಗಳಲ್ಲಿ ಹಲವು ಕೃತಿಗಳನ್ನು ರಚಿಸಿರುವ ಬನ್ನಂಜೆಯವರು, ತಮ್ಮ ವಿಚಾರಗಳ ಮೂಲಕ ಒಂದು ಸಮೂಹವನ್ನು ಪ್ರಭಾವಿಸಿದವರು. ಈ ಹಿರಿಯ ವಿದ್ವಾಂಸರಿಗೀಗ ಎಂಬತ್ತರ ಸಂಭ್ರಮ. ಡಿಸೆಂಬರ್ 23ರಿಂದ 27ರವರೆಗೆ ಬೆಂಗಳೂರಿನಲ್ಲಿ ‘ಬನ್ನಂಜೆ 80ರ ಸಂಭ್ರಮ’ ಕಾರ್ಯಕ್ರಮ.

ಬನ್ನಂಜೆ ಗೋವಿಂದಾಚಾರ್ಯರು ಸದಾ ನಮಗೊಂದು ವಿಸ್ಮಯ. ಸಂಸ್ಕೃತ ಮತ್ತು ಕನ್ನಡ ಕ್ಷೇತ್ರದಲ್ಲಿ ಅವರು ನಡೆಸಿರುವ ಶಾಸ್ತ್ರ –ಸಾಹಿತ್ಯ ಸಾಧನೆ ನಮಗೆ ಬೆರಗನ್ನು ತರುತ್ತದೆ. ಇವರದು ಕಾರಯಿತ್ರೀಪ್ರತಿಭೆ. ಇವರ ತಂದೆ ಸಂಸ್ಕೃತದ ಮಹಾವಿದ್ವಾಂಸರಾಗಿದ್ದ ವಿದ್ವಾನ್ ಪಡಮುನ್ನೂರು ನಾರಾಯಣಾಚಾರ್ಯರು. ತಂದೆಯಿಂದ ಶಾಸ್ತ್ರ, ವೇದಾಂತಸಾಹಿತ್ಯದ ಬಳುವಳಿ. ಫಲಿಮಾರುಮಠದ ವಿದ್ಯಾಮಾನ್ಯತೀರ್ಥ ಶ್ರೀಪಾದರಿಂದ ಶಾಸ್ತ್ರಾನುಗ್ರಹ.

ಅನೇಕ ಅಲೌಕಿಕ ಶಾಸ್ತ್ರವಿಷಯಗಳಲ್ಲಿ ಸ್ವಯಮಾಚಾರ್ಯ. ವೇದ, ಉಪನಿಷತ್ತು, ದರ್ಶನ, ವ್ಯಾಕರಣ, ಪುರಾಣ, ತಂತ್ರ–ಮಂತ್ರ, ಗಣಿತ, ಸಂಗೀತ, ಛಂದಶ್ಶಾಸ್ತ್ರ, ಲಲಿತಕಲೆ, ಕಾವ್ಯ, ನಾಟಕ, ಅನುವಾದ, ಕಾವ್ಯಚಿಂತನೆ ಹೀಗೆ ಅನೇಕ ಶಾಸ್ತ್ರ–ಸಾಹಿತ್ಯ ಪ್ರಕಾರಗಳಲ್ಲಿ ಅನನ್ಯ ಸಿದ್ಧಿ–ಸಾಧನೆ ಮಾಡಿದ ವಿದ್ವತ್ತಲ್ಲಜ. ಸಂಸ್ಕೃತ ಸಂಶೋಧನೆಯ ಜಗತ್ತಿನಲ್ಲಂತೂ ಅವರು ಒಂಟಿಸಲಗ. ಕನ್ನಡದ ಮಣ್ಣಿನಲ್ಲಿ ನಿಂತು, ಸಂಸ್ಕೃತವೆಂಬ ಆಕಾಶವನ್ನು ತಮ್ಮ ಕಣ್ಣಲ್ಲಿ ತುಂಬಿಕೊಂಡ ಕವಿ–ದಾರ್ಶನಿಕ. ತಮ್ಮ ವಾಗ್ಮಿತೆಯಿಂದ, ಸಹಸ್ರಾರು ಅಭಿಮಾನಿಗಳನ್ನು ತಮ್ಮತ್ತ ಸೆಳೆದುಕೊಂಡ ವಶ್ಯವಾಣೀ ಚಕ್ರವರ್ತಿ. ಈಗ ಬನ್ನಂಜೆ ಅವರಿಗೆ ಎಂಬತ್ತರ ಸಂವತ್ಸರ. ಋಷಿಸದೃಶ ವ್ಯಕ್ತಿತ್ವ.

ಸ್ವಾಧ್ಯಾಯ ಪುರುಷ
ಬನ್ನಂಜೆ ಗೋವಿಂದಾಚಾರ್ಯರು ಸಂಸ್ಕೃತದಲ್ಲಿದ್ದ ಅಗಾಧ ಸಂಪತ್ತನ್ನು ಕನ್ನಡದ ಕನ್ನಡಿಯಲ್ಲಿ ಸೆರೆಹಿಡಿದಿದ್ದಾರೆ. ಬಾಣಭಟ್ಟನ ‘ಕಾದಂಬರಿ’ ಗದ್ಯಕಾವ್ಯವು ಬನ್ನಂಜೆಯವರಲ್ಲಿ ಕನ್ನಡೀಕರಣಗೊಂಡಿದೆ. ಅದು ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದಾಗ ಅದನ್ನು ಓದಿದ, ದ.ರಾ. ಬೇಂದ್ರೆ ಬನ್ನಂಜೆ ಅವರಿಗೆ ಪತ್ರ ಬರೆದದ್ದು ಹೀಗೆ: “ಶ್ರೀ ಬನ್ನಂಜೆಯವರ ಕನ್ನಡ–ಸಂಸ್ಕೃತ ಅಧ್ಯಯನ ಸಾರ್ಥಕವಾಗಿದೆ. ಅವರು ಕವಿಗಳು ವಿಮರ್ಶಕರು, ವಾದಿಗಳು ನಿಜವಾಗಿ ತರುಣರು. ಬನ್ನಂಜೆಯವರ ಸಾಮರ್ಥ್ಯವು ಈ ಕೃತಿಯಿಂದ ಪ್ರತೀತಿಗೆ ಬಂದಿತು. ಈ ತರುಣ ಕೃತಿಕಾರನಿಂದ ಇದೇ ತೂಕದ ಹೆಚ್ಚಿನ ಪ್ರಬಂಧಗಳು ಬರಲಿ.

ಅವರಿಗೆ ಇದ್ದ ಯೋಗ್ಯತೆಯನ್ನು ಅವರು ವಿನಯದಿಂದ, ಭಕ್ತಿಯಿಂದ, ಉಡುಪಿ ಕೃಷ್ಣನ ಪ್ರಸಾದದಿಂದ ಬೆಳೆಸಿಕೊಳ್ಳಲಿ’’. ಬೇಂದ್ರೆಯವರ ಇಂಥ ಮಾತುಗಳಿಗಿಂತ ಹೆಚ್ಚಿನ ಪ್ರಶಸ್ತಿ ಯಾರಿಗೆ ಬೇಕು?. ಬನ್ನಂಜೆಯವರು ಬಾಣನ ‘ಕಾದಂಬರಿ’ಯನ್ನು ಅನುವಾದ ಮಾಡಿದಾಗ ಅವರಿಗೆ ಇಪ್ಪತ್ತಾರರ ತಾರುಣ್ಯ. ಅವರು ತಮ್ಮ ಎಳೆವಯಸ್ಸಿನಲ್ಲಿಯೇ ಮಾಧ್ವಸಾಹಿತ್ಯ ಮತ್ತು ಸಂಸ್ಕೃತಸಾಹಿತ್ಯವನ್ನು ಆಪೋಷಣ ತೆಗೆದುಕೊಂಡರು. ಉಪನಿಷತ್ತು ಹೇಳುವಂತೆ: ‘ಸ್ವಾಧ್ಯಾಯ ಪ್ರವಚನಾಭ್ಯಾಂ’ ಎರಡನ್ನು ಸಮವಾಗಿ ಸ್ವೀಕರಿಸಿದರು. ಸ್ವಾಧ್ಯಾಯದ ಜತೆಗೆ ಕನ್ನಡಕ್ಕೆ ಆನಂದತೀರ್ಥರ ‘ತಂತ್ರಸಾರ ಸಂಗ್ರಹ’ವನ್ನು ತಂದುಕೊಟ್ಟರು. ಇದು ಮೊದಲು ಪ್ರಕಟವಾದದ್ದು 1950ರಲ್ಲಿ.

ಆಗ ಬನ್ನಂಜೆಯವರಿಗೆ ಇಪ್ಪತ್ತೊಂದರ ಪ್ರಾಯ. ಆ ಗ್ರಂಥಕ್ಕೆ ಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದರು ಅನುಗ್ರಹದ ಮಾತುಗಳನ್ನು ಬರೆಯುತ್ತ– “ಆಳವಾದ ಪಾಂಡಿತ್ಯ, ಸತ್ಸಿದ್ಧಾಂತದಲ್ಲಿ ದೃಢವಾದ ನಿಷ್ಠೆ. ಆಕರ್ಷಕವಾದ ಬರವಣಿಗೆ ಮುಂತಾದ ಗುಣಗಳ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಅನುವಾದ ‘ತಂತ್ರಸಾರ ಸಂಗ್ರಹ’ದ ಕಲ್ಪವೃಕ್ಷ ವ್ಯಕ್ತಿತ್ವವನ್ನು ಜಿಜ್ಞಾಸುಗಳಿಗೆ ಪರಿಚಯಿಸುವಲ್ಲಿ ಅತ್ಯಂತ ಯಶಸ್ವಿಯಾಗಿದೆ ಎಂಬುದರಲ್ಲಿ ನಮಗೆ ಪೂರ್ಣ ವಿಶ್ವಾಸವಿದೆ’’ ಎಂದು ಕೈವಾರಿಸಿದ್ದಾರೆ. ಈ ಗ್ರಂಥದಲ್ಲಿ ಯಾಗಾನುಷ್ಠಾನ, ದೇವಾಲಯ ನಿರ್ಮಾಣ, ಮೂರ್ತಿಪ್ರತಿಷ್ಠೆ, ಪೂಜೆ, ಜಪ ಮುಂತಾದ ಕರ್ಮಗಳ ಆಚರಣೆ ವಿಧಾನವನ್ನು ಮನಂಬುಗುವಂತೆ ಪ್ರತಿಪಾದಿಸಿದೆ.

ನಿಜವಾಗಿ ಹೇಳುವುದಾದರೆ ಸಾಮಾನ್ಯರಿಗೆ ಇದೊಂದು ಕ್ಲಿಷ್ಟಗ್ರಂಥ. ಇದನ್ನು ಸಂಪ್ರದಾಯ ಶುದ್ಧವಾಗಿ ಅರ್ಥ ಮಾಡಿಕೊಳ್ಳುವುದು ಯಾರಿಗಾದರೂ ಕಷ್ಟ. ಇಷ್ಟು ಚಿಕ್ಕವಯಸ್ಸಿನಲ್ಲೇ ಇಂಥದ್ದೊಂದು ಪ್ರಬುದ್ಧ ಗ್ರಂಥವನ್ನು ಅನುವಾದಿಸಲು ಹೊರಟದ್ದು ಬನ್ನಂಜೆಯವರ ಅಸಾಮಾನ್ಯ ವಿದ್ವತ್ತನ್ನು ತೋರಿಸಿ ಕೊಡುತ್ತದೆ. ವಿದ್ಯಾಮಾನ್ಯ ಶ್ರೀಪಾದರ ಬಗೆಗೆ ಬನ್ನಂಜೆಯವರು ಆಡಿರುವ ಈ ಮಾತುಗಳೂ ಮನನೀಯವೇ: “ಶ್ರೀವಿದ್ಯಾಮಾನ್ಯತೀರ್ಥರು ನನ್ನ ವಿದ್ಯಾಗುರುಗಳು. ನನ್ನ ಮೇಲೆ ಪ್ರೀತಿಯ ಪೂರವನ್ನೇ ಹರಿಸಿದ ಅಲೌಕಿಕ ಗುರುಗಳು. ಅವರ ಕರುಣೆ ಇಲ್ಲಿ ಮೈಪಡೆದಿದೆ. ಪ್ರತಿಯಾಗಿ ನಾನೇನು ಮಾಡಬಲ್ಲೆ? ನಾನು ಮಾಡಬಹುದಾದದ್ದು ಇಷ್ಟೆ. ಭೂಯಿಷ್ಠಾಂ ತೇ ನಮ ಉಕ್ತಿಂ ವಿಧೇಮ’’.

ಬನ್ನಂಜೆಯವರ ಬದುಕಿನಲ್ಲಿ ಅವರ ತಂದೆ ಪಡಮುನ್ನೂರು ನಾರಾಯಣಾಚಾರ್ಯರು ಹಾಗೂ ವಿದ್ಯಾಮಾನ್ಯತೀರ್ಥ ಶ್ರೀಪಾದರು ಮುಖ್ಯವಾದ ಪಾತ್ರ ವಹಿಸಿರುವುದು ಸೂರ್ಯಸ್ಪಷ್ಟವೇ ಸರಿ. ಬನ್ನಂಜೆಯವರು ಪ್ರಾಯಕ್ಕೆ ಬರುವಾಗಲೇ ಲೋಕದ ರೀತಿ ರಿವಾಜುಗಳಿಗೆ ಪ್ರತಿಕ್ರಿಯಿಸಿದವರು. ಮಹಾನ್ ವಿದ್ವಾಂಸರೂ ತಪೋನಿಷ್ಠರೂ ಆದ ಹಾನಗಲ್ ವಿರೂಪಾಕ್ಷಶಾಸ್ತ್ರಿಗಳ ಶಿಷ್ಯರಾಗಿ ಪಡಮುನ್ನೂರು ನಾರಾಯಣಾಚಾರ್ಯರು ನ್ಯಾಯಶಾಸ್ತ್ರವನ್ನು ಅಧ್ಯಯನ ಮಾಡಿದರಷ್ಟೆ! ಅವರು ಮುಂದೆ ದಕ್ಷಿಣಕನ್ನಡದಲ್ಲಿ ನ್ಯಾಯಶಾಸ್ತ್ರಾಧ್ಯಯನಕ್ಕೆ ತಳಪಾಯ ಹಾಕಿದ ಮಹನೀಯರು. ಇಂಥ ತಂದೆಗೆ ಅಷ್ಟಮಠಗಳಿಂದಲೂ ಪೂಜ್ಯತೆ. ಮಗನಾದರೊ ಮಹಾ ತುಂಟ. ಕ್ರಮಬದ್ಧವಾಗಿ ಶಾಲೆಯ ಮೆಟ್ಟಲನ್ನು ಹತ್ತಿದವರಲ್ಲ,

ತಂದೆ ಪಡಮುನ್ನೂರು ನಾರಾಯಣಾಚಾರ್ಯರು ಮಗನ ಮೇಲೆ ಯಾವುದೇ ಹೇರಿಕೆಯನ್ನು ಮಾಡಲಿಲ್ಲ. ಚಿಕ್ಕಂದಿನಿಂದಲೇ ಮಗನಲ್ಲಿದ್ದ ಅಗಾಧವಾದ ಸ್ಮೃತಿಶಕ್ತಿಯನ್ನು ತಂದೆ ಕಂಡಿದ್ದರು. ನಾನಾ ವಿಷಯಗಳಲ್ಲಿದ್ದ ಆಸಕ್ತಿ, ಹೊಸ ಸಂಗತಿಗಳನ್ನು ತಿಳಿಯುವ ಹಂಬಲ... ತಾನೂ ತಂದೆಯಂತೆ ವಿದ್ವಾಂಸನಾದರೆ, ಎಲ್ಲಾ ಮಠಾಧೀಶರ ವಿಶ್ವಾಸಕ್ಕೆ, ಗೌರವಕ್ಕೆ ಪಾತ್ರನಾಗಬಲ್ಲೆ ಎಂಬ ಒಳಹರಿವು ಅವರ ಬದುಕಿನಲ್ಲಿ ಕಾಣಿಸಿಕೊಂಡದ್ದು ಒಂದು ವಿಶೇಷವೇ. ಅದಕ್ಕೆ ತಕ್ಕಂತೆ ಇಪ್ಪತ್ತರ ಪ್ರಾಯದಲ್ಲೆ ಅನೇಕ ಬರಹಗಳಿಗೆ ಕಾರಣರಾದರು.

1961ರಲ್ಲಿ ಕುಮುದಾತನಯ, ಕು. ಸೀತಾರಾಮ ಅಡಿಗ ಇವರೊಂದಿಗೆ ತಮ್ಮ ಕವಿತೆಗಳನ್ನು ಸೇರಿಸಿ ‘ಮುಕ್ಕಣ್ಣದರ್ಶನ ಎಂಬ ಕಾವ್ಯಸಂಗ್ರಹವನ್ನು ಹೊರತಂದರು. ಇದಕ್ಕೆ ಬನ್ನಂಜೆಯವರು ಬರೆದ ‘ಕವಿತೆಯ ಕುರಿತು ಬರೆಹ’ ಆ ಕಾಲದಲ್ಲಿ ನಡೆಯುತ್ತಿದ್ದ ಕಾವ್ಯಚರ್ಚೆಗೆ ಹೊಸತಿರುವನ್ನೇ ನೀಡಿತು. ಈ ಸಂಕಲನ ಪ್ರಕಟವಾಗುವ ವೇಳೆಗೆ ಕನ್ನಡ ನೆಲದಲ್ಲಿ ನವ್ಯಕಾವ್ಯದ ಚರ್ಚೆ ವಿಪುಲವಾಗಿ ನಡೆಯುತ್ತಿತ್ತು. ಇದನ್ನು ಪುರಸ್ಕರಿಸಿದ ವಿಮರ್ಶಕರೂ ವಿದ್ವಾಂಸರೂ ಇದ್ದರು.

ಈ ಬಗೆಗೆ ಆಕ್ಷೇಪ ಎತ್ತಿದ ಸಂಪ್ರದಾಯವಾದಿಗಳೂ ಇದ್ದರು. ಇವೆರಡನ್ನೂ ಗಮನಿಸಿ ಹೊಸತನ್ನು ಸ್ವೀಕರಿಸುತ್ತ ಬನ್ನಂಜೆಯವರು ಆಡಿರುವ ಮಾತು ಇಂದಿಗೂ ಗಮನೀಯ ಎನಿಸುತ್ತದೆ: “ನವ್ಯಕವಿತೆ ಹುಟ್ಟಿದ ಬಗೆ ಹೀಗೆ. ಅದರ ಬಗೆಗೆ ಅನೇಕ ಜನ ಇದು ಕವಿತೆಯೆ? ಇದು ಕವಿತೆ ನಿಜವೆಂದಾದರೆ ಗದ್ಯಕ್ಕೂ ಪದ್ಯಕ್ಕೂ ಇರುವ ಭೇದವಾದರೂ ಏನು? ಎಂದು ಅಚ್ಚರಿಪಡುತ್ತಾರೆ. ಕಾರಣ: ಅವರಿಗೆ ಈ ಅಕ್ರಮದಲ್ಲಿ ಒಂದು ಕ್ರಮ ಕಾಣಿಸುತ್ತಿಲ್ಲ. ಅಂಥವರಿಗೆ ಇದು ಉತ್ತರ: ಇದು ಪದ್ಯ ಹೌದೋ ಅಲ್ಲವೋ ಗೊತ್ತಿಲ್ಲ.

ಆದರೆ, ಇದು ಕವಿತೆ ಹೌದು’’. ಇದು ಬನ್ನಂಜೆಯವರ ಸಮರ್ಥನೆ. ಬನ್ನಂಜೆಯವರು ಬರೆದ ಕವಿತೆಗಳ ಸಂಗ್ರಹ ‘ಹೇಳದೆ ಉಳಿದದ್ದು’ ಕಾಂತಾವರ ಕನ್ನಡ ಸಂಘದಿಂದ 1980ರಲ್ಲಿ ಪ್ರಕಟವಾಯಿತು. ಕಾವ್ಯದ ಹೊಸ ಬೆಳವಣಿಗೆಯಲ್ಲಿ ಒಂದು ತರದ ಬುದ್ಧಿಪೂರ್ವ ಕ್ಲಿಷ್ಟತೆ ಕಂಡು ಬರುತ್ತಿದೆಯೆಂದೂ ಸಹೃದಯ ಹಾಗೂ ಕವಿ ಇವರ ನಡುವೆ ಕಂದಕ ಉಂಟಾಗುತ್ತಿದೆಯೆಂದೂ ಬನ್ನಂಜೆಯವರು ಹೇಳಿದ್ದುಂಟು. ಇಂಥ ಅನೇಕ ವಿಷಯಗಳನ್ನು ಪ್ರಾಸಂಗಿಕವಾಗಿ ಅವರು ಹೇಳಿದ್ದಾರೆ.

ವಿದ್ವತ್ತಲ್ಲಜ
ಬನ್ನಂಜೆ ಅವರಿಗೆ ಭಗವದ್ಗೀತೆ, ರಾಮಾಯಣ, ಮಹಾಭಾರತ ಮತ್ತು ಭಾಗವತಗಳು ಎಂದೆಂದೂ ಉಪಾದೇಯವೇ. ಅವುಗಳ ಬಗೆಗೆ ಆಳವಾಗಿ ಚಿಂತಿಸಿದ ಭಾರತೀಯ ವಿದ್ವಾಂಸರಲ್ಲಿ ಇವರು ಅಗ್ರಗಣ್ಯರು. ಭಗವದ್ಗೀತೆಯ ಮೊದಲೆರಡು ಅಧ್ಯಾಯಗಳಿಗೆ ಶಂಕರ, ಮಧ್ವ ಮತ್ತು ರಾಮಾನುಜರ ಭಾಷ್ಯಗಳನ್ನು ಅನುವಾದಿಸಿಕೊಟ್ಟು ಅದಕ್ಕೆ ಅವರು ನೀಡಿರುವ ಟಿಪ್ಪಣಿಗಳು ನಮ್ಮ ಸಂಸ್ಕೃತಿಯ ತಾತ್ತ್ವಿಕನೆಲೆಯನ್ನು ತಿಳಿಯಲು ಅವಕಾಶ ಮಾಡಿಕೊಡುತ್ತವೆ. ಅವರು ವಾಲ್ಮೀಕಿ ರಾಮಾಯಣದ ಉಪಾಸಕರು. ವಾಲ್ಮೀಕಿಯು ಎತ್ತಿಹೇಳಿದ ಮೌಲ್ಯಪ್ರಸಂಗಗಳನ್ನು ತಮ್ಮ ಬರಹಗಳಲ್ಲಿ ಕಂಡರಿಸಿದ್ದಾರೆ.

ನಾರಾಯಣಪಂಡಿತಾಚಾರ್ಯರು ರಚಿಸಿದ ‘ಸಂಗ್ರಹರಾಮಾಯಣಮ್’ ಕಾವ್ಯವನ್ನು ಎರಡು ಬೃಹದ್ ಸಂಪುಟಗಳಲ್ಲಿ ಈಚೆಗೆ ಸಂಪಾದಿಸಿಕೊಟ್ಟಿದ್ದಾರೆ. ಇದರಲ್ಲಿ ವಿಶ್ವಪತಿತೀರ್ಥರ ‘ಭಾವಾರ್ಥದೀಪಿಕೆ’ ಮತ್ತು ಬನ್ನಂಜೆಯವರೇ ಬರೆದ ‘ಸಂಗ್ರಹಚಂದ್ರಿಕೆ’ ಒಳಗೊಂಡಿರುವುದು ಒಂದು ವೈಶಿಷ್ಟ್ಯ. ಬನ್ನಂಜೆಯವರು ತಮ್ಮ ಸಂಪ್ರದಾಯವನ್ನು ಕುರಿತು ಅನನ್ಯ ಶ್ರದ್ಧೆ ಉಳ್ಳವರೇ. ಇದರ ಪರಿಣಾಮವಾಗಿ ಸರ್ವಮೂಲಗ್ರಂಥಗಳನ್ನು ಶೋಧಿಸಿ–ಸಂಪಾದಿಸಿಕೊಟ್ಟಿದ್ದಾರೆ. ಹಿಂದಿನ ಪ್ರಕಟಣೆಗಳಲ್ಲಿ ಆಗಿದ್ದ ಪಾಠಶೋಧ ಭಾಷಾದೋಷ, ಅರ್ಥದೋಷ, ವಿಷಯ ವಿಚ್ಛಿತ್ತಿ, ಛಂದೋಭಂಗ, ಮುಂತಾದಗಳನ್ನು ನೋಡಿ ಸರಿಪಡಿಸಿದ್ದಾರೆ.

ಬನ್ನಂಜೆ ಅವರು ಯಾವ ಕೆಲಸವನ್ನು ತೆಗೆದುಕೊಂಡರೂ ಅದರಲ್ಲಿ ತಮ್ಮ ಛಾಪನ್ನು ಉಳಿಸಿಬಿಡುತ್ತಾರೆ. ಪ್ರಾಚೀನಗ್ರಂಥಗಳ ಪರಿಶೋಧನೆಯಲ್ಲಿ ಅವರು ಹೊಸಹೆಜ್ಜೆ ಇಟ್ಟಿದ್ದಾರೆಂಬುದಕ್ಕೆ ‘ಶ್ರೀಮಧ್ವವಿಜಯ’ ಗ್ರಂಥ ಸಂಪಾದನೆಯನ್ನೇ ಗಮನಿಸಬಹುದು. ಇವರು ಪರಿಶೋಧಿಸಿ ಪ್ರಕಟಿಸುವ ವೇಳೆಗೆ ಗ್ರಂಥದ ಶೀರ್ಷಿಕೆಯಲ್ಲಿ ‘ಶ್ರೀಸುಮಧ್ವವಿಜಯ’ ಎಂದು ಕಾಣಿಸಿದ್ದುಂಟು. ಆದರೆ, ಈವರೆಗೂ ದೊರಕಿರುವ ಯಾವ ಹಸ್ತಪ್ರತಿಗಳಲ್ಲೂ ‘ಸುಮಧ್ವವಿಜಯ’ ಎಂದಿಲ್ಲ. ‘ಸು’ ಎಂಬ ಪದ ಈಚಿನ ಪಂಡಿತರು ಸೇರಿಸಿದ್ದು. ಇದನ್ನು ನಿರ್ಭಿಡೆಯಿಂದ ಹೇಳಬಲ್ಲ ಸಾಮರ್ಥ್ಯ ಬನ್ನಂಜೆಯವರಿಗಿತ್ತು.

ಗ್ರಂಥಶೋಧಕ
ನನಗೆ ತಿಳಿದಂತೆ ಆಚಾರ್ಯ ಮಧ್ವರ ಕೃತಿಗಳಲ್ಲಿ ‘ಶ್ರೀಮಹಾಭಾರತತಾತ್ಪರ್ಯನಿರ್ಣಯ ಒಂದು ಅಪೂರ್ವಗ್ರಂಥ. ತೌಳವಲಿಪಿಯಲ್ಲಿ ಇದನ್ನು ಬರೆದಿಡಲಾಗಿತ್ತು. ಆಚಾರ್ಯ ಮಧ್ವರ ಸಾಕ್ಷಾತ್ ಶಿಷ್ಯರಾದ ಶ್ರೀಹೃಷಿಕೇಶತೀರ್ಥರು ಬರೆದಿಟ್ಟ ಪ್ರಾಚೀನಪಾಠವನ್ನು ಬನ್ನಂಜೆಯವರು ತೆಗೆದುಕೊಂಡು ದೇವನಾಗರಿಲಿಪಿಯಲ್ಲೂ ಕನ್ನಡಲಿಪಿಯಲ್ಲೂ ಸಂಪಾದಿಸಿ ನೀಡಿದ್ದಾರೆ. ಈ ಪಾಠವನ್ನು ಗಮನಿಸದ ಹಿಂದಿನ ವಿದ್ವಾಂಸರು ತಮಗೆ ತಿಳಿದಂತೆ ಗ್ರಂಥಸಂಪಾದನೆ ಮಾಡಿ ಪ್ರಕಟಿಸಿದ್ದುಂಟು. ಬನ್ನಂಜೆಯವರು ಎರಡು ಬೃಹತ್ ಸಂಪುಟಗಳಲ್ಲಿ ‘ಶ್ರೀಮಹಾಭಾರತತಾತ್ಪರ್ಯನಿರ್ಣಯ’ ಗ್ರಂಥವನ್ನು ಸಂಪಾದಿಸಿ ತಮ್ಮದೇ ವ್ಯಾಖ್ಯಾನಸಹಿತ ಪ್ರಕಟಿಸಿದ್ದಾರೆ. ಇದಕ್ಕೆ ಅವರು ಸಂಸ್ಕೃತದಲ್ಲಿ ಬರೆದಿರುವ ಪ್ರಸ್ತಾವನೆ ಅಪೂರ್ವವಾದ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ.

ಭಾರತೀಯ ಗ್ರಂಥ ಸಂಪಾದನಾಕ್ಷೇತ್ರಕ್ಕೆ ಇದೊಂದು ಬೆಲೆಯುಳ್ಳ ಕಾಣಿಕೆ.ಬನ್ನಂಜೆಯವರು ‘ಶ್ರೀಮಹಾಭಾರತತಾತ್ಪರ್ಯನಿರ್ಣಯ’ವನ್ನು 1999ರಲ್ಲೆ ಕನ್ನಡಲಿಪಿಯಲ್ಲಿ ಸಂಪಾದಿಸಿದ್ದುಂಟು. ಆಸಂಪುಟಕ್ಕೆ ಅವರು ಬರೆದ ‘ಅಧ್ಯಯನಕ್ಕೆ ತೊಡಗುವ ಮೊದಲು’ ಎಂಬ ಪ್ರಸ್ತಾವನೆಯಲ್ಲಿ ರಾಮಾಯಣದ ಕಥೆ, ಮಹಾಭಾರತದ ಕಥೆ, ಕೃಷ್ಣಾವತಾರದ ಕಥೆ ಮೇಲುನೋಟಕ್ಕೆ ಇದ್ದು ಆಳದಲ್ಲಿ ಸಮಸ್ತ ಇತಿಹಾಸ-ಪುರಾಣಗಳ ನಿರ್ಣಯವನ್ನು ಆಚಾರ್ಯಮಧ್ವರು ಹೇಗೆ ಆಗುಗೊಳಿಸಿದ್ದಾರೆಂಬುದನ್ನು ತಿಳಿಸಿದ್ದಾರೆ. ಗ್ರಂಥದ ಪಾಠಶುದ್ಧಿ ಮತ್ತು ಅರ್ಥಶುದ್ಧಿಗಳ ಪ್ರಸ್ತಾಪವನ್ನು ಮಾಡಿದ್ದಾರೆ. ಬನ್ನಂಜೆಯವರು ಎತ್ತಿತೋರಿಸಿರುವ ಅನೇಕ ಸಂಗತಿಗಳು ನಮಗೆ ಬೆರಗನ್ನು ಉಂಟು ಮಾಡುತ್ತವೆ.

ಆಚಾರ್ಯಮಧ್ವರು ‘ಗ್ರಂಥಸಂಪಾದನೆಯ ಬಗೆಗೆ ಬರೆದಿರುವ ಭಾಗವನ್ನು ಎತ್ತಿಹೇಳಿ ಕರ್ನಾಟಕದ ಮೊದಲ ಗ್ರಂಥಸಂಪಾದನಕಾರರು ಆನಂದತೀರ್ಥರೆಂದೇ ಬನ್ನಂಜೆಯವರು ನಿರ್ಣಯಿಸಿದ್ದಾರೆ. ಗ್ರಂಥಸಂಪಾದನೆ ಎಂಬುದು ಆಧುನಿಕ ವಿದ್ವಾಂಸರಿಂದ ಪ್ರಣೀತವೆಂದು ಎಲ್ಲರೂ ತಿಳಿದಿರುವಾಗ ಅದಕ್ಕೆ ಹೊಸ ಅಂಶ ಸೇರಿಸಿದ್ದು ಬನ್ನಂಜೆಯವರ ಹಿರಿಮೆ. 1996ರಲ್ಲಿ ಪ್ರಕಟವಾದ ‘ತಲವಕಾರೋಪನಿಷತ್ತು’ ಉಪನಿಷತ್ತುಗಳ ಕನ್ನಡ ಪ್ರಕಟಣಪ್ರಪಂಚದಲ್ಲಿಯೇ ಬಹಳ ಮಹತ್ತ್ವದ್ದು. ಇದು ದಶೋಪನಿಷತ್ತುಗಳಲ್ಲಿ ಒಂದು. ಇದನ್ನು ‘ಕೇನೋಪನಿಷತ್ತು ಎಂದೂ ಕರೆಯುತ್ತಾರೆ. ಆದರೆ, ಇದರ ಪ್ರಾಚೀನ ಹೆಸರು ‘ತಲವಕಾರ’. ಒಂದೊಂದು ಮಂತ್ರವನ್ನು ತೆಗೆದುಕೊಂಡು ಸಾಮಸಂಹಿತೆಯ ದೃಷ್ಟಿಯಿಂದ ವ್ಯಾಖ್ಯಾನಿಸಿರುವುದು ಈಗ್ರಂಥದ ವೈಶಿಷ್ಟ್ಯ!

ಬನ್ನಂಜೆಯವರು ಉಳಿದ ಉಪನಿಷತ್ತುಗಳಿಗೂ ಇದೇ ರೀತಿ ವ್ಯಾಖ್ಯಾನ ಬರೆದಿದ್ದರೆ, ಕನ್ನಡಕ್ಕೊಂದು ಆಧ್ಯಾತ್ಮಿಕ ವ್ಯಾಖ್ಯಾನದ ಸಂಪೂರ್ಣ ಗ್ರಂಥ ದೊರಕುತ್ತಿತ್ತೇನೊ. ಇದರಲ್ಲಿ ಅಧ್ಯಾತ್ಮ ಮತ್ತು ಮನಃಶಾಸ್ತ್ರದ ನೆಲೆಗಳನ್ನು ಹುಡುಕಿ ವ್ಯಾಖ್ಯಾನಿಸಿ – ವಿಶ್ಲೇಷಿಸಿರುವುದು ಒಂದು ವೈಶಿಷ್ಟ್ಯವಾಗಿದೆ. ಇದನ್ನು ಪ್ರಕಾಶಿಸಿದ ಲಕ್ಷ್ಮೀಶ ತೋಳ್ಪಾಡಿಯವರು ‘‘ಉಪನಿಷದ್ವಾಙ್ಮಯವನ್ನು ಅರ್ಥಮಾಡುವ ಪ್ರಯತ್ನವೆಂದರೆ ಅದು ಶ್ರದ್ಧೆ, ವಿದ್ವತ್ತೆ, ಹೃದಯವಂತಿಕೆ ಮತ್ತು ಸೃಜನಶೀಲತೆಗಳು ಮೇಳೈಸಿದ ಮಹಾನ್ ಅನುಸಂಧಾನವೇ ನಿಜ.

ನಮ್ಮ ನಡುವಿನ ಉನ್ನತ ಸಂಸ್ಕೃತ ವಿದ್ವಾಂಸರಾದ ಶ್ರೀ ಬನ್ನಂಜೆಗೋವಿಂದಾಚಾರ್ಯರು ಈ ನಾಲ್ಕು ಮುಖಗಳಿಂದಲೂ ಉಪನಿಷತ್ತನ್ನು ನೋಡಿ, ನುಡಿದದ್ದು ಇಲ್ಲಿದೆ’’ ಎಂದು ಹೇಳಿರುವುದು ಬನ್ನಂಜೆಯವರ ಕಾರಯಿತ್ರೀಪ್ರತಿಭೆಯನ್ನು ಎತ್ತಿ ಹೇಳಿದಂತಾಗಿದೆ! ಬನ್ನಂಜೆಗೋವಿಂದಾಚಾರ್ಯರು ಸಣ್ಣದರಲ್ಲಿ ಬದುಕಿದವರಲ್ಲ; ದೊಡ್ಡದನ್ನು ಹಿಡಿದು ದೊಡ್ಡತನವನ್ನು ಎತ್ತಿ ತೋರಿಸಿದವರೇ. ‘ದೀರ್ಘಂ ಪಶ್ಯತ ಮಾ ಹ್ರಸ್ವಂ’ ಎಂಬುದು ಪ್ರಾಚೀನರ ಮಾತು. ಅದಕ್ಕೆ ಬನ್ನಂಜೆಯವರ ಜೀವನ-ಸಾಧನೆಯೇ ಒಂದು ನಿದರ್ಶನ.

ಭಾಷ್ಯಕಾರ
ಅವರು ಕಳೆದ ಮೂರು ದಶಕಗಳಿಂದ ಸಂಸ್ಕೃತಗ್ರಂಥಗಳನ್ನು ಪರಿಶೋಧಿಸುತ್ತಲೇ ಪಾಠಶುದ್ಧಿ-ಅರ್ಥಶುದ್ಧಿಗಳನ್ನು ನಿರ್ಣಯಿಸಿ ಭಾಷ್ಯ-ವ್ಯಾಖ್ಯಾನಗಳನ್ನು ರಚಿಸುತ್ತಿದ್ದಾರೆ. ಭಾರತೀಯ ವಿದ್ವಾಂಸರಲ್ಲಿ ಈಗ ‘ಭಾಷ್ಯ ರಚನೆ’ಯೇ ನಿಂತು ಹೋಗಿದೆ. ಆದರೆ, ಬನ್ನಂಜೆ ಗೋವಿಂದಾಚಾರ್ಯರು ಅನೇಕ ವೇದಸೂಕ್ತಗಳಿಗೆ ಪ್ರಾಚೀನರೀತಿಯಲ್ಲಿ ಭಾಷ್ಯರಚನೆ ಮಾಡುತ್ತಿದ್ದಾರೆ. ಅವರು ‘ಶತರುದ್ರಿಯ’ಕ್ಕೆ ಬರೆದ ಭಾಷ್ಯವನ್ನೇ ಉದಾಹರಣೆಯಾಗಿ ಗಮನಿಸಬಹುದು. ಗೋವಿಂದಾಚಾರ್ಯರು ಆರು ವಿಧವಾದ ಪಾಠಗಳನ್ನು ಗುರುತಿಸಿ ಅದರ ಅನುಸಾರವಾಗಿ ‘ಶತರುದ್ರಿಯ’ವನ್ನು ಸಂಪಾದಿಸಿರುವುದು ವಿಶೇಷ. ಇಷ್ಟು ಮಾತ್ರವಲ್ಲ ‘ಶತರುದ್ರಿಯ’ಕ್ಕೆ ಅವರು ಬರೆದಿರುವ ಭಾಷ್ಯವು ಲಲಿತವೂ ಗಂಭೀರವೂ ಆಗಿದೆ.

ಆಚಾರ್ಯ ಮಧ್ವರ ಭಾಷ್ಯಕ್ರಮವನ್ನು ಇಲ್ಲಿ ಅನುಸರಿಸಿರುವುದು ಮತ್ತೂ ವಿಶೇಷ. ಈಚೆಗೆ ವೇದದ ಅಧ್ಯಯನದ ಬಗೆಗೆ ಆಸಕ್ತಿ ಹೆಚ್ಚಾಗುತ್ತಿದೆ. ಸಂಹಿತೆ, ಬ್ರಾಹ್ಮಣ, ಆರಣ್ಯಕ ಮತ್ತು ಉಪನಿಷತ್ತುಗಳ ಅಧ್ಯಯನ ಆಗುತ್ತಿದೆ. ಅದರಲ್ಲೂ ಉಪನಿಷತ್ತುಗಳ ಚಿಂತನೆ ಸಮಕಾಲೀನ ಬದುಕನ್ನು ಅರ್ಥ ಮಾಡಿಕೊಳ್ಳಲು ಸಹಾಯ ಆಗುತ್ತಿದೆ. ಗೋವಿಂದಾಚಾರ್ಯರು ‘ಉಪನಿಷಚ್ಚಿಂತನ’ ಎಂಬ ಶೀರ್ಷಿಕೆಯಲ್ಲಿ ಮೊದಲ ದಶೋಪನಿಷತ್ತುಗಳಿಗೆ ಭಾಷ್ಯ ಬರೆಯಲು ಉದ್ಯೋಗಿಸಿರುವುದು ವೇದಸಂಸ್ಕೃತಿ ಚರಿತ್ರೆಯಲ್ಲಿ ವಿಶೇಷವಾಗಿ ಉಲ್ಲೇಖನೀಯ ಸಂಗತಿ. ಬನ್ನಂಜೆಯವರು 2014ರಲ್ಲಿ ‘ಚತುರ್ದಶಸೂಕ್ತಾನಿ’ ಎಂಬ ಹೆಸರಿನಲ್ಲಿ ವೇದಸೂಕ್ತಗಳನ್ನು ಹೊರತಂದರು. ಇದರಲ್ಲಿ ಬಲು ಅಪೂರ್ವವಾದ ಸೂಕ್ತಗಳಿವೆ. ಈ ಎಲ್ಲಾ ಸೂಕ್ತಗಳಿಗೆ ಆಚಾರ್ಯರು ಭಾಷ್ಯ ಬರೆದಿದ್ದಾರೆ.

ಈಗ ಹೆಚ್ಚು ಪ್ರಚಲಿತದಲ್ಲಿರದ, ಆದರೆ, ಯಾರೂ ಗಮನಿಸದ ಘೃತ, ಭಾಗ್ಯ, ಕುವಿದಂಗ, ನಾಸತ್ಯ, ಅಪಾಲಾ, ಉಪಾಂತ್ಯಪವಮಾನ, ಓಷಧಿ, ಧರ್ಮ್ಮ, ದಾನ, ಪಕ್ಷಿ, ಗರ್ಭ, ಸಂವನನ, ಕುಂತಾಪ, ಅಶ್ಲೀಲಭಾಷಣ– ಈ ಹದಿನಾಲ್ಕು ಸೂಕ್ತಗಳನ್ನು ಪದಪಾಠ ಸಹಿತ ಪ್ರಕಟಿಸಿದ್ದಾರೆ. ಋಗ್ವೇದಕಾಲೀನ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಈ ಸೂಕ್ತಗಳು ನಮಗೆ ನೆರವಾಗುತ್ತವೆ. ಅವರು ಇದರ ಪ್ರಕಟಣೆಯ ಮುನ್ನವೇ ಪ್ರಾಣಾಗ್ನಿಸೂಕ್ತಮ್, ಅಸ್ಯವಾಮೀಯಸೂಕ್ತಮ್– ಇವುಗಳನ್ನು ಭಾಷ್ಯ ಸಹಿತವಾಗಿ ತಂದಿರುವುದನ್ನು ಗಮನಿಸಬೇಕು. ಆಚಾರ್ಯರು ಕನ್ನಡದ ಲಿಪಿಯಲ್ಲಿ ಪುರುಷಸೂಕ್ತ, ಶ್ರೀಸೂಕ್ತ ಸೇರಿದಂತೆ ಮನ್ಯುಸೂಕ್ತ, ಸಪತ್ನಘ್ನಸೂಕ್ತ, ಅಂಭ್ರೀಣೀಸೂಕ್ತ ಮತ್ತು ಪ್ರಾಣಾಗ್ನಿಸೂಕ್ತ–ಇವುಗಳನ್ನು ಕನ್ನಡದ ಕನ್ನಡಿಯಲ್ಲಿ ಕಂಡರಿಸಿದ್ದಾರೆ.

ಪ್ರತಿಯೊಂದು ಸೂಕ್ತಗಳಿಗೂ ಸ್ವರಸಹಿತವಾಗಿ ಸಂಹಿತಾಪಾಠವನ್ನು ನೀಡಿ, ನಂತರ ಪದಪಾಠ ಕೊಟ್ಟಿದ್ದಾರೆ. ಪ್ರತಿಯೊಂದು ಮಂತ್ರಗಳಿಗೂ ಸಂಸ್ಕೃತದಲ್ಲಿ ಸಂಕ್ಷಿಪ್ತವಾದ ಟೀಕೆ, ಆಮೇಲೆ ಕನ್ನಡದಲ್ಲಿ ಪ್ರತಿಪದಾರ್ಥ ನೀಡಿರುವುದು ಗಮನೀಯ. ಬನ್ನಂಜೆ ಗೋವಿಂದಾಚಾರ್ಯರ ಸಾರಸ್ವತ ರಾಶಿಯನ್ನು ನೋಡಿದರೆ ಒಮ್ಮೆಲೆ ದಿಗ್ಭ್ರಮೆಯಾಗುತ್ತದೆ. ಇವಕ್ಕೆಲ್ಲ ಕಿರೀಟವಿಟ್ಟಂತೆ ಬನ್ನಂಜೆಯವರು ‘ಪ್ರಾಣಸೂಕ್ತ’ ಎಂಬ ವಿಶಿಷ್ಟಕೃತಿಯೊಂದನ್ನು ರಚಿಸಿದ್ದಾರೆ. ಸಂಸ್ಕೃತದಲ್ಲಿ ಸೂತ್ರರಚನೆಯನ್ನು ಮಾಡಿ ಅದಕ್ಕೆ ಭಾಷ್ಯವನ್ನೂ ಬರೆದಿದ್ದಾರೆ. ನಂತರ ಸೂತ್ರ-ಭಾಷ್ಯವನ್ನು ಕನ್ನಡದಲ್ಲಿಯೂ ನೀಡಿದ್ದಾರೆ. ಯೋಗದ ಮೊದಲನೆಯ ಮೆಟ್ಟಿಲು ಪ್ರಾಣಾಯಾಮ. ಬನ್ನಂಜೆಯವರ ಮಾತಿನಲ್ಲಿ ‘ಪ್ರಾಣಾಯಾಮ ಇಲ್ಲದ ಬದುಕು ಪ್ರಾಣ ಇಲ್ಲದ ಬದುಕು’. ಆದರೆ, ಜನಬದುಕಬೇಕೆಂದು ಸೂತ್ರ–ಭಾಷ್ಯದಲ್ಲಿ ಪ್ರಾಣಾಯಾಮದ ರಹಸ್ಯವನ್ನು ತೆರೆದಿಟ್ಟಿದ್ದಾರೆ. ಅವರ ಮಾತಿನಂತೆ ‘ಇದು ತುಂಬ ಹಳತು; ಆದರೆ ತೀರ ಹೊಸತು’. ಈ ಸೂತ್ರರೂಪದ ಮಾತನ್ನು ಜನ ಆಲಿಸಬೇಕು ಅಷ್ಟೆ.

ಸೃಜನಶೀಲ
ಕೆಲಸ ಮಾಡಲು ಶ್ರದ್ಧೆ, ವಿದ್ವತ್ತು, ಸೃಜನಶೀಲತೆಗಳು ಬೇಕಷ್ಟೆ? ಇಲ್ಲಿಯೇ ಒಂದು ಮಾತನ್ನು ಹೇಳಬೇಕು. ಸಂಸ್ಕೃತದಲ್ಲಿರುವ ಅಪಾರವಾದ ವಾಙ್ಮಯ ರಾಶಿಯನ್ನು ಕನ್ನಡಕ್ಕೆ ತರಬೇಕೆಂಬ ದೀರ್ಘಪ್ರಯತ್ನವನ್ನು ಬನ್ನಂಜೆಯವರು ತಮ್ಮ ಆಯುಷ್ಯದ ಉದ್ದಕ್ಕೂ ಮಾಡಿಕೊಂಡೇ ಬಂದಿದ್ದಾರೆ. ಬನ್ನಂಜೆಯವರು ಪ್ರತಿಯೊಂದು ಅನುವಾದಗಳ ಗ್ರಂಥಕ್ಕೂ ‘ಕನ್ನಡದ ಕನ್ನಡಿ’ಯಲ್ಲಿ ಎಂದೇ ಕರೆದಿದ್ದಾರೆ. ಕನ್ನಡವು ಬನ್ನಂಜೆಯವರ ಕೈಯಲ್ಲಿ ಕನ್ನಡಿಸುತ್ತಿದೆ. ಅವರ ವಿಚಾರಶೀಲತೆ, ಪ್ರತಿಯೊಂದು ಸಂಗತಿಯನ್ನು ವಿಶ್ಲೇಷಿಸುವ ಕ್ರಮ– ಅವರದ್ದೇ ಆಗಿದೆ. ಅದು ಭೂತಕಾಲದಲ್ಲಿಯೇ ಇದ್ದು ಗೊಣಗುವುದಿಲ್ಲ; ವರ್ತಮಾನದಲ್ಲಿದ್ದು ಸಮಕಾಲೀನಗೊಳ್ಳುವುದೊಂದು ವಿಶೇಷ. ಕನ್ನಡವು ಎಲ್ಲಾ ಬಗೆಯ ಸಂಗತಿಗಳನ್ನು ಹೊಂದಬಲ್ಲುದು!

ಕನ್ನಡದ ಕನ್ನಡಿಯಲ್ಲಿಯೇ ಎಲ್ಲವನ್ನೂ ಹೇಳುವುದಕ್ಕೆ ಸಾಧ್ಯ ಎಂಬುದಕ್ಕೆ ಬಾಣನ ‘ಕಾದಂಬರಿ’, ಶೂದ್ರಕನ ‘ಮೃಚ್ಛಕಟಿಕ’ (ಆವೆಯ ಮಣ್ಣಿನ ಆಟದ ಬಂಡಿ), ಕಾಳಿದಾಸನ ‘ಅಭಿಜ್ಞಾನಶಾಕುಂತಲಾ’ (ನೆನಪಾದಳು ಶಕುಂತಲೆ), ಆಕಾಶವಾಣಿಯಲ್ಲಿ ಪ್ರಸಾರವಾದ ನಾಲ್ಕು ಆಕಾಶನಾಟಕಗಳ ಸಂಕಲನ ‘ಮುಗಿಲಮಾತು’, ‘ಆನಂದತೀರ್ಥ’ ಎಂಬ ರೂಪಕವನ್ನು ಹೆಸರಿಸಬಹುದು. ಇವಲ್ಲದೆ, ಉಪನಿಷತ್ತುಗಳ ಅನುವಾದ, ಕೆಲವು ವೇದಸೂಕ್ತಗಳ ಅನುವಾದ, ನೂರಾರು ಉಪನ್ಯಾಸಗಳು, ಪತ್ರಿಕೆಗಳಿಗೆ ಬರೆದ ಅಂಕಣಗಳು, ಬೇರೆಬೇರೆ ಕಡೆ ಮಾಡಿದ ವಿದ್ವದುಪನ್ಯಾಸಗಳು... ಇವೇನು ಒಂದೇ ಎರಡೇ? ಅವರು ನಾಡಿನಲ್ಲೂ ಹೊರನಾಡಿನಲ್ಲೂ ವಿದೇಶಗಳಲ್ಲೂ ಪ್ರವಚನ–ಉಪನ್ಯಾಸಗಳನ್ನು ನೀಡಿದ್ದಾರೆ. ಅನನ್ಯ ಶ್ರದ್ಧೆಯಿಂದ ಎಲ್ಲಾ ಸಮುದಾಯದವರು ಬಂದು ಕೇಳುತ್ತಿದ್ದಾರೆ. ಇದು ಬನ್ನಂಜೆಯವರ ಶುದ್ಧ ಜ್ಞಾನೋಪಾಸನೆಗೆ ಹಿಡಿದ ಕನ್ನಡಿಯಾಗಿದೆ.

ಕಳೆದ ಅರುವತೈದು ಸಂವತ್ಸರಗಳಿಂದ ಅರ್ಹನಿಶಿ ಅತ್ತ ಸಂಸ್ಕೃತಕ್ಕೂ ಇತ್ತ ಕನ್ನಡಕ್ಕೂ ತಮ್ಮ ‘ಪ್ರಾಣ’ವನ್ನೇ ಅರ್ಪಿಸಿಬಿಟ್ಟಿದ್ದಾರೆ. ಬನ್ನಂಜೆಯವರ ವಾಕ್ಶಕ್ತಿ, ಅವರ ಮನೋಕಲ್ಪ, ವಾಙ್ಮಯ ವಿಸ್ತಾರ, ಸೃಜನಶೀಲತೆ, ಹಲವು ಶಾಸ್ತ್ರಗಳ ಅನುಸಂಧಾನ, ಆಧುನಿಕ ಮತ್ತು ಪ್ರಾಚೀನ ಜ್ಞಾನಪರಂಪರೆಗಳ ಜತೆ ನೈರಂತರ್ಯ ಚಿಕಿತ್ಸಕ ಬುದ್ಧಿಮತ್ತೆ, ಇವುಗಳ ಜತೆಗೆ ಪತ್ರಿಕೋದ್ಯಮ, ಲಲಿತಕಲೆಗಳ ಆಸಕ್ತಿ, ರೂಪಕಗಳ ಸೃಷ್ಟಿ, ಅಪೂರ್ವಸಂಗತಿಗಳನ್ನು ಅನಾವರಣ ಮಾಡುವ ವಿಧಾನ, ಇವುಗಳನ್ನು ಕಂಡಾಗ “ನಮ್ಮ ಕಾಲದಲ್ಲಿ ಇಂಥವರು ಇದ್ದಾರಲ್ಲಾ’’ ಎಂದು ನಮಗೆ ಬೆರಗುಂಟಾಗುತ್ತದೆ. ಇವರು ಕನ್ನಡದ ಆನಂದತೀರ್ಥರೇ ಸರಿಯೆಂದು ನಮಗೆ ಅನ್ನಿಸದೆ ಇರದು.

ಇವರು ತಮ್ಮ ಕೃತಿಗಳ ಮೂಲಕ ಆನಂದವನ್ನೂ ಸಂಸ್ಕೃತ-ಕನ್ನಡದ ಮೂಲಕ ಭಾಷ್ಯತೀರ್ಥವನ್ನೂ ನೀಡುತ್ತಿದ್ದಾರೆ. ಅದನ್ನು ಸೌಜನ್ಯದಿಂದ, ವಿವೇಕದಿಂದ, ಪ್ರೀತಿಯಿಂದ ಜನ ಸ್ವೀಕರಿಸುತ್ತಿದ್ದಾರೆ. ಇಂಥ ಮಹನೀಯರಿಗೆ ಹಲವು ಉಪಾಧಿಗಳೂ ಗೌರವಪುರಸ್ಕಾರಗಳೂ ಸನ್ಮಾನಗಳೂ ಸತ್ಕಾರಗಳೂ ಹುಡುಕಿಕೊಂಡು ಬಂದಿರುವುದು ಅಚ್ಚರಿಯೇನೂ ಅಲ್ಲ. ಈಚೆಗೆ ‘ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ’ ಗೌರವ ಡಾಕ್ಟರೇಟ್ ಪದವಿಯನ್ನು ಕೊಟ್ಟು ತನ್ನ ಗೌರವವನ್ನು ಹೆಚ್ಚಿಸಿಕೊಂಡಿದೆ. ಬನ್ನಂಜೆ ಅವರು ಇರುವಲ್ಲಿ ನೂರಾರು ಜ್ಞಾನೋಪಾಸಕ ಶಿಷ್ಯರು, ಅಭಿಮಾನಿಗಳೂ ನೆರೆಯುತ್ತಾರೆ. ಇದೊ ಬನ್ನಂಜೆಯವರೇ ನಿಮಗೆ ನಮ್ಮ ‘ಭೂಯಿಷ್ಠಾಂ ತೇ ನಮ ಉಕ್ತಿಂ ವಿಧೇಮ!’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.