ಶುಕ್ರವಾರ, 27 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಿವಿಜಿ ಕೈತಪ್ಪಿದ ಜ್ಞಾನಪೀಠ: ಗೋಪಾಲ ವಾಜಪೇಯಿ

Published : 5 ಮೇ 2014, 19:30 IST
ಫಾಲೋ ಮಾಡಿ
Comments

ಬೆಂಗಳೂರು: ‘ಡಿವಿಜಿ ಅವರಿಗೆ 1966ನೇ ಸಾಲಿನಲ್ಲಿ ಬರಬೇಕಿದ್ದ ಜ್ಞಾನಪೀಠ ಪ್ರಶಸ್ತಿ ಕಾರಣಾಂತರಗಳಿಂದ ಕೈತಪ್ಪಿತು’ ಎಂದು ಸಾಹಿತಿ ಗೋಪಾಲ ವಾಜಪೇಯಿ  ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಏರ್ಪಡಿಸಿದ್ದ ರವಿ ತಿರುಮಲೈ ಅವರು ರಚಿಸಿರುವ ಡಿವಿಜಿ  ಅವರ ಮಂಕುತಿಮ್ಮನ ಕಗ್ಗಗಳ ವ್ಯಾಖ್ಯಾನ ಗ್ರಂಥ ‘ಕಗ್ಗರಸಧಾರೆ’ಯ ಬಿಡುಗಡೆ ಸಮಾ­ರಂಭದಲ್ಲಿ ಅವರು ಮಾತನಾಡಿದರು.

‘ಆಯ್ಕೆ ಸಮಿತಿಯು ಶಿಫಾರಸು ಮಾಡಿದ್ದ ಪಟ್ಟಿಯಲ್ಲಿ ಡಿವಿಜಿ ಅವರ ಹೆಸರು ಮೊದಲಿತ್ತು. ಕಾರಣಾಂತರಗಳಿಂದ ಪ್ರಶಸ್ತಿ ಬಂಗಾಳಿ ಕಾದಂಬರಿ­ಕಾರರಿಗೆ ಲಭಿಸಿತು. ಪ್ರಶಸ್ತಿ ಲಭಿಸಿದ್ದರೆ ಡಿವಿಜಿ ಅವರು ಜ್ಞಾನಪೀಠ ಪಡೆದ ಮೊದಲ ಕನ್ನಡಿಗ­ರಾಗುತ್ತಿದ್ದರು’ ಎಂದರು.

ಡಿವಿಜಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಕೈತಪ್ಪಲು ಕಾರಣವಾದ ಅಂಶಗಳನ್ನು ಬಹಿರಂಗ ಪಡಿಸುವಂತೆ ಸಭಿಕರು ಒತ್ತಾಯಿಸಿದರು. ಆದರೆ  ಗೋಪಾಲ ವಾಜಪೇಯಿ ಅವರು ಕಾರಣಗಳನ್ನು ತಿಳಿಸಲಿಲ್ಲ.

ಸಾಹಿತಿ ಎಸ್.ದಿವಾಕರ್ ಮಾತನಾಡಿ, ‘ರಾಷ್ಟ್ರೀಯ ಕಾಂಗ್ರೆಸ್‌ ಸ್ಥಾಪನೆ, ಬ್ರಿಟಿಷರಿಂದ ಮೈಸೂರು ಮಹಾರಾಜರಿಗೆ ಮೈಸೂರು ಸಂಸ್ಥಾನದ ಅಧಿಕಾರ ಹಸ್ತಾಂತರ, ದಿವಾನರ ಜನಪರ ಯೋಜನೆಗಳು, 2 ವಿಶ್ವಯುದ್ಧಗಳು ಮೊದಲಾದ ಮಹತ್ವದ ಸಂಗತಿ­ಗಳಿಗೆ ಡಿವಿಜಿ ಅವರು ಸಾಕ್ಷಿಯಾಗಿದ್ದರು. ಅವುಗಳ ಪ್ರಭಾವ ಅವರ ಬರಹದಲ್ಲಿ ಕಾಣುತ್ತದೆ’ ಎಂದರು.

‘ರಾಷ್ಟ್ರ ರಾಜಕಾರಣ, ದೇಶದ ಆರ್ಥಿಕತೆ ಮತ್ತು ಬ್ರಿಟಿಷರ ಆಡಳಿತ ಕುರಿತು ಡಿವಿಜಿ ಅವರು ಇಂಗ್ಲಿಷ್ ಪತ್ರಿಕೆಗಳಿಗೆ ಬರೆದ ಲೇಖನಗಳು 15 ಸಾವಿರ ಪುಟಗಳಾಗುವಷ್ಟಿವೆ.  ಧರ್ಮ, ಜೀವನ, ರಾಜಕೀಯ, ಭಾಷೆ ಮತ್ತು ಸಾಹಿತ್ಯಗಳು ಒಂದೇ ಎಂದು ಪ್ರತಿಪಾದಿಸುತ್ತಿದ್ದ ಅವರ ಈ ಬರಹಗಳನ್ನು ಪುಸ್ತಕದ ರೂಪದಲ್ಲಿ ದಾಖಲಿಸಿಡುವ ಕೆಲಸವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕನ್ನಡದ ವಿಚಾರ ಸಾಹಿತ್ಯ ಮತ್ತು ವಿಚಾರ ಸಾಹಿತ್ಯದ ಭಾಷೆಯನ್ನು ರೂಪಿಸಿದ ಶ್ರೇಯ ಡಿವಿಜಿ ಅವರಿಗೆ ಸಲ್ಲುತ್ತದೆ’ ಎಂದರು.
ಕಾರ್ಯಕ್ರಮದಲ್ಲಿ ಬಿಡುಗಡೆಯಾದ ಕಗ್ಗರಸಧಾರೆ ವ್ಯಾಖ್ಯಾನ ಗ್ರಂಥದ 2ನೇ ಸಂಪುಟವು ಮಂಕುತಿಮ್ಮನ ಕಗ್ಗದ 201 ರಿಂದ 450ರ ವರೆಗಿನ ಕಗ್ಗಗಳನ್ನು ಕುರಿತ ತಾತ್ಪರ್ಯಗಳನ್ನು ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT