ಸುಂದರ ಬದುಕನ್ನು ಕಟ್ಟಿಕೊಡುವುದು ತಂತ್ರಜ್ಞಾನದ ಮೂಲ ಕನಸಾದರೆ, ಆ ಕನಸಿಗೆ ರೆಕ್ಕೆ ಕಟ್ಟಿ ಅದಕ್ಕೆ ನೈಜತೆಯನ್ನು ತಂದುಕೊಡಬೇಕಾದುದು ಮತ್ತು ಅದನ್ನು ಸಾಧಿಸಲು ಸಾಧ್ಯ ಎಂದು ತೋರಿಸಬೇಕಾದುದು ತಂತ್ರಜ್ಞಾನವನ್ನು ಬೋಧನೆ ಮಾಡುವಂಥ ತಾಂತ್ರಿಕ ಸಂಸ್ಥೆಗಳ ಕರ್ತವ್ಯ. ಭಾರತದಲ್ಲಿ ಉನ್ನತ ತಾಂತ್ರಿಕ ಶಿಕ್ಷಣವನ್ನು ಒದಗಿಸುತ್ತಿರುವ ಬೇಡಿಕೆಯ ಸಂಸ್ಥೆಗಳೆಂದರೆ ಕೇಂದ್ರ ಅನುದಾನಿತ ತಾಂತ್ರಿಕ ಸಂಸ್ಥೆಗಳಾದ (Centrally Funded Technical Institutes - ಸಿ.ಎಫ್.ಟಿ.ಐ) ಭಾರತೀಯ ತಂತ್ರಜ್ಞಾನ ಸಂಸ್ಥೆ (ಐ.ಐ.ಟಿ.) ಮತ್ತು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು (ಎನ್.ಐ.ಟಿ.).

ಕರ್ನಾಟಕಕ್ಕೆ ಐ.ಐ.ಟಿ.ಯೊಂದು ಮಂಜೂರಾಗಿದೆ. ಅದನ್ನು ಎಲ್ಲಿ ಸ್ಥಾಪಿಸಬೇಕೆಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಈ ಸಂಸ್ಥೆಗಳ ಬಗ್ಗೆ ಕೆಲವು ವಿಷಯಗಳನ್ನು ಪ್ರಸ್ತಾಪಿಸುವುದು ಸೂಕ್ತವೆಂದು ಕಾಣಿಸುತ್ತದೆ.

ಸಿ.ಎಫ್.ಟಿ.ಐ.ಗಳು ವ್ಯಾಪಕವಾಗಬೇಕು, ಗ್ರಾಮೀಣ ಪ್ರತಿಭೆಗಳಿಗೂ ಅವು ದಕ್ಕುವಂತಾಗಬೇಕೆಂಬ ನಿಟ್ಟಿನಲ್ಲಿ ದೇಶದಲ್ಲಿ ರಾಜ್ಯಕ್ಕೊಂದರಂತೆ 30 ಎನ್.ಐ.ಟಿ.ಗಳನ್ನು ನೀಡಲಾಯಿತು; ಐ.ಐ.ಟಿ.ಗಳು ಮೊದಲು ಕೆಲವೇ ರಾಜ್ಯಗಳಲ್ಲಿ ಇದ್ದವು. ಈಗ ರಾಜ್ಯಕ್ಕೊಂದರಂತೆ ಅವು ಕೂಡ ವ್ಯಾಪಕವಾಗುತ್ತಿವೆ. ಇತ್ತೀಚೆಗೆ ಸ್ಥಾಪಿಸಲಾದ ಐ.ಐ.ಟಿ. ಅಥವಾ ಎನ್.ಐ.ಟಿ.ಗಳು ಎಷ್ಟು ಪರಿಣಾಮಕಾರಿಯಾಗಿವೆಯೆಂದು ನೋಡಿದರೆ, ಉತ್ತರ ಅಷ್ಟು ಸಮಾಧಾನಕರವಾಗಿಲ್ಲ. ಕಾರಣವೇನೆಂದರೆ, ಅವುಗಳ ವ್ಯಾಪಕತೆಯ ಆಶಯಕ್ಕೂ ಸಿ.ಎಫ್.ಟಿ.ಐ.ಗಳ ಮೂಲ ಸ್ವಭಾವಕ್ಕೂ ಇರುವ ವೈರುಧ್ಯ. ಹಿಂದುಳಿದ ಪ್ರದೇಶದಲ್ಲಿ ಅವು ಸ್ಥಾಪನೆಯಾಗಬೇಕು, ಗ್ರಾಮೀಣ ಪ್ರತಿಭೆಗಳಿಗೆ ತಾಂತ್ರಿಕ ಶಿಕ್ಷಣ ದಕ್ಕಬೇಕು ಎನ್ನುವ ಜನಹಿತ ಆಶಯ ಒಂದೆಡೆಯಾದರೆ, ಅವುಗಳಲ್ಲಿ ಬೋಧನೆ ಮಾಡುವವರ, ಅಧಿಕಾರ ನಡೆಸುವವರ, ವಿದ್ಯಾರ್ಥಿಗಳನ್ನು ಕಂಪೆನಿಗೆ ಸೇರಿಸಿಕೊಳ್ಳಲು ಬರುವ ಕಂಪೆನಿ ಅಧಿಕಾರಿಗಳ ಅಥವಾ ಇತರ ಹಿತಾಸಕ್ತರ (stakeholders) ಜಾಯಮಾನ ಬೇರೆಯೇ ಆಗಿರುತ್ತದೆ.

ಇವರಲ್ಲಿ ಹೆಚ್ಚಿನವರು ಪಾಶ್ಚಾತ್ಯ ದೇಶಗಳಲ್ಲಿ ವ್ಯಾಸಂಗ- ಅಧ್ಯಾಪನ ಕೆಲಸ ಮಾಡಿ ಯಾವುದೋ ಕಾರಣಗಳಿಗಾಗಿ ಭಾರತಕ್ಕೆ ಮರಳಿ ಬಂದವರಾಗಿರುತ್ತಾರೆ. ಹೀಗೆ ಬಂದವರು ಹೆಚ್ಚಾಗಿ ಕಾಸ್ಮೊಪಾಲಿಟನ್ ಹಿನ್ನೆಲೆಯವರಾಗಿದ್ದು, ತಮ್ಮ ಉದ್ಯೋಗದೊಂದಿಗೆ ತಮ್ಮ ಮಕ್ಕಳಿಗೆ ಪ್ರತಿಷ್ಠಿತ ಕಾನ್ವೆಂಟ್ ಶಿಕ್ಷಣವನ್ನೂ ಮತ್ತು ಸಂಗಾತಿಯ ಅರ್ಹತೆಗೆ ತಕ್ಕಂತೆ ಉದ್ಯೋಗವನ್ನೂ ಜೊತೆಗೆ ಅರಸುತ್ತಾರೆ.

ಸ್ವಾಭಾವಿಕವಾಗಿಯೇ, ‘ಹಿಂದುಳಿದ’ ಪ್ರದೇಶದ ಆಲೋಚನೆಯೇ ಇಂಥ ವರ್ಗವನ್ನು ಕೂಡಲೇ ಹಿಮ್ಮೆಟ್ಟಿಸುತ್ತದೆ. ಇನ್ನು ಪ್ಲೇಸ್‌ಮೆಂಟ್‌ಗೆ ಬರುವ ಅಧಿಕಾರಿಗಳೋ ಮಾತೆತ್ತುತ್ತಲೇ ‘ನಿಮ್ಮ ಸಂಸ್ಥೆಯಿಂದ ಏರ್‌ಪೋರ್ಟ್ ಎಷ್ಟು ದೂರ ಇದೆ’ ಎನ್ನುತ್ತಾರೆ. ಆದ್ದರಿಂದ ವಿದೇಶಿ ವಿಶ್ವವಿದ್ಯಾಲಯಗಳ ಉತ್ತಮ ಅತಿಥಿ ಉಪನ್ಯಾಸಕರನ್ನು ಗಿಟ್ಟಿಸಿಕೊಳ್ಳುವುದು ಅಥವಾ ವಿದ್ಯಾರ್ಥಿಗಳಿಗೆ ಉತ್ತಮ ಕಂಪೆನಿಗಳಲ್ಲಿ ಉದ್ಯೋಗ ದೊರಕಿಸಿಕೊಡುವುದು ಇತ್ಯಾದಿ ವಿಷಯಗಳು ಆ ಸಂಸ್ಥೆಯ ಸಂಪರ್ಕ ಸಾಧ್ಯತೆಯ ಮೇಲೆ ಅವಲಂಬಿತವಾಗಿರುತ್ತವೆ.

ಆದ್ದರಿಂದ ಜನಹಿತ ಆಶಯಗಳು ಹಾಗೂ ಸಿ.ಎಫ್.ಟಿ.ಐ.ಗಳ ಜಾಯಮಾನದ ಪರಸ್ಪರ ವೈರುಧ್ಯದಿಂದ ಇತ್ತೀಚೆಗೆ ಮೆಟ್ರೊಪಾಲಿಟನ್ ಅಲ್ಲದ ಜಾಗಗಳಲ್ಲಿ ಸ್ಥಾಪಿತವಾದ ಸಿ.ಎಫ್.ಟಿ.ಐ.ಗಳಿಂದ ನಿರೀಕ್ಷಿತ ಫಲ ದೊರಕುತ್ತಿಲ್ಲ ಎಂದು ಭಾವಿಸುವಂಥ ಸ್ಥಿತಿ ಒದಗಿದೆ. ಹಾಗಾದರೆ ಸಿ.ಎಫ್.ಟಿ.ಐ.ಗಳ ಸಾಫಲ್ಯವನ್ನು ಅವುಗಳ ಸಂಪರ್ಕ ಸಾಧ್ಯತೆಯ ಮೇಲೆ ಅಳೆಯಬೇಕೆ? ನನ್ನ ಪ್ರಕಾರ, ಒಂದು ಸಂಸ್ಥೆ ಸಫಲವೋ ನಿಷ್ಫಲವೋ ಎನ್ನುವುದಕ್ಕಿಂತ ಇಲ್ಲಿ ದೊಡ್ಡ ಪ್ರಶ್ನೆ ಬೇರೊಂದಿದೆ.

ಅದು ಇಡೀ ಶಿಕ್ಷಣ ವಲಯದ ನೈತಿಕತೆಯತ್ತ ಮತ್ತು ದೇಶದ ಒಟ್ಟು ತಾಂತ್ರಿಕ ಶಿಕ್ಷಣ ನೀತಿಯತ್ತ ಬೊಟ್ಟು ಮಾಡುತ್ತದೆ. ತಾಂತ್ರಿಕ ಶಿಕ್ಷಣ ವಲಯಕ್ಕೆ ಉದ್ಯೋಗಾರ್ಥಿಗಳಾಗಿ ಬರುವವರು ಯಾರು? ಅವರ ಮೇಲಧಿಕಾರಿಗಳು ಯಾರು? ಈ ಉದ್ಯೋಗಿಗಳಿಗೆ, ಅಂದರೆ ಶಿಕ್ಷಕರಿಗೆ ವೃತ್ತಿಜೀವನದಲ್ಲಿ ಯಾವ ರೀತಿಯ ಗುರಿಗಳನ್ನು ನೀಡಿ ಯಾವ ರೀತಿಯ ಸಂಭಾವನೆ ನೀಡಲಾಗುತ್ತದೆ? ವಿದ್ಯಾರ್ಥಿಗಳಿಂದ ಏನನ್ನು ಅಪೇಕ್ಷಿಸಲಾಗುತ್ತದೆ? ಯಾರಿಗಾಗಿ ಹಾಗೂ ಯಾವುದಕ್ಕಾಗಿ ವಿದ್ಯಾರ್ಥಿಗಳನ್ನು ರೂಪಿಸಲಾಗುತ್ತದೆ ಇತ್ಯಾದಿ.

ಈ ಮೊದಲೇ ಹೇಳಿದಂತೆ ಮೆಟ್ರೊಪಾಲಿಟನ್ ನಗರಗಳ ಐ.ಐ.ಟಿ. ಅಥವಾ ಎನ್.ಐ.ಟಿ.ಗಳಲ್ಲಿ ಶಿಕ್ಷಕರಾಗಿ ಬರುವವರಂತೂ ಹೊರದೇಶಗಳಲ್ಲಿ, ಹೆಚ್ಚಾಗಿ ಅಮೆರಿಕದಲ್ಲಿ ಪಿಎಚ್.ಡಿ, ಪೋಸ್ಟ್ ಡಾಕ್ಟರಲ್ ಮುಗಿಸಿ ಬರುವವರೇ ಆಗಿರುತ್ತಾರೆ. ಕೆಲವೊಮ್ಮೆ ಅಲ್ಲಿ ಕೆಲಸವನ್ನೂ ಮಾಡಿದ ಅನುಭವ ಹೊಂದಿರುತ್ತಾರೆ. ಅಮೆರಿಕದ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡಿ ಬಂದವರು ಇಲ್ಲೂ ಅದೇ ವಾತಾವರಣವನ್ನು ಬಯಸುತ್ತಾರೆ.

ನಾಮ್ ಚಾಮ್ಸ್‌ಕಿ ಹೇಳಿರುವಂತೆ, ಅಮೆರಿಕದ ವಿಶ್ವವಿದ್ಯಾಲಯಗಳ ವಾತಾವರಣ ಹೆಚ್ಚು ಕಾರ್ಪೊರೇಟ್ ಮಯವಾಗಿದ್ದು ವಿಶ್ವವಿದ್ಯಾಲಯಗಳೆಂಬ ಕಲ್ಪನೆ ತಣ್ಣಗೆ ಸಾಯುತ್ತಿದೆ. ತನ್ನ ಸಂಶೋಧನೆಯನ್ನು ಸಮಾಜಮುಖಿಯಾಗಿಸುವುದು, ವಿದ್ಯಾರ್ಥಿಗಳೊಂದಿಗೆ ಸದಾ ಸಂಪರ್ಕವಿರಿಸಿಕೊಂಡು ಅವರಿಗೆ ಪ್ರೇರಣೆಯಾಗುವುದು, ಇವೆಲ್ಲ ದೂರದ ಮಾತೇ ಸರಿ. ಇತರೆಡೆಗಳ ವಿಶ್ವವಿದ್ಯಾಲಯಗಳೂ ಇದೇ ಕಾರ್ಪೊರೇಟ್ ಗುಣವನ್ನು ಬೆಳೆಸಿಕೊಳ್ಳುತ್ತಿವೆ: ಕಂಪೆನಿಗಳಿಗೆ ತಜ್ಞ ಸಲಹೆ ನೀಡುವುದು;

ವಿವೇಕಯುತವಾದದ್ದಿರಲಿ, ಅಲ್ಲದಿರಲಿ ಹೆಚ್ಚು ಪ್ರಾಜೆಕ್ಟ್‌ಗಳನ್ನು ದಕ್ಕಿಸಿಕೊಂಡು ಸಂಸ್ಥೆಗೆ ಆದಾಯ ಬರುವಂತೆ ಮಾಡುವುದು; ಆ ಪ್ರಾಜೆಕ್ಟ್‌ಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಲು ಸಂಶೋಧನಾ ವಿದ್ಯಾರ್ಥಿಗಳನ್ನು ಹಾಗೂ ಸಹಾಯಕರನ್ನು ಸದಾ ತನ್ನ ಕಪಿಮುಷ್ಟಿಯಲ್ಲಿ ಇರಿಸಿಕೊಳ್ಳುವುದು; ಯಾಂತ್ರಿಕವಾಗಿ ವರ್ಷಕ್ಕಿಂತಿಷ್ಟು ಸಂಶೋಧನಾ ಬರಹಗಳನ್ನು ಪ್ರಕಟಿಸುವುದು- ಇವೆಲ್ಲ ಈ ಕಾರ್ಪೊರೇಟ್ ವಿಶ್ವವಿದ್ಯಾಲಯಗಳ ಲಕ್ಷಣಗಳಾಗಿವೆ. ಇದನ್ನು ಅಮೆರಿಕದಲ್ಲಿ ಮಾಡಿ ಬಂದ ಮಂದಿ ನಮ್ಮ ಸಿ.ಎಫ್.ಟಿ.ಐ.ಗಳಲ್ಲೂ ಮಾಡುವುದು ಇದನ್ನೇ. ಪ್ರಾಧ್ಯಾಪಕನೊಬ್ಬ ಇಷ್ಟೆಲ್ಲ ಮಾಡುವುದರಿಂದ, ಖ್ಯಾತ ವಿಮರ್ಶಕ ಟೆರಿ ಈಗಲ್ಟನ್ ಹೇಳುವಂತೆ, ಅವನು ತನ್ನನ್ನು ಪ್ರಾಧ್ಯಾಪಕ ನೆಂದು ತಿಳಿಯುವ ಬದಲಿಗೆ ಮ್ಯಾನೇಜರ್ ಎಂದು ಅಂದುಕೊಳ್ಳುವ ಅಥವಾ ಸಂಸ್ಥೆಯ ನಿರ್ದೇಶಕರು ತಮ್ಮನ್ನು ಸಿ.ಇ.ಒ.ಗಳೆಂದು ಅಂದುಕೊಳ್ಳುವ ಸಾಧ್ಯತೆಯೇ ಜಾಸ್ತಿ.

ಪಕ್ಷಭೇದ ಮರೆತು ಭಾರತದ ಸರ್ಕಾರಗಳೂ ಇದನ್ನೇ ಮಾದರಿ ಮಾಡಹೊರಟದ್ದು ವಿಷಾದನೀಯ. 2014ರ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಸುತ್ತೋಲೆಯೊಂದರ ಪ್ರಕಾರ, ಎರಡು ಪ್ರಾಜೆಕ್ಟ್‌ಗಳನ್ನು ಪೂರ್ತಿಗೊಳಿಸದೇ ಸಹಪ್ರಾಧ್ಯಾಪಕನಾಗಲು ಸಾಧ್ಯವಿಲ್ಲ. ಪ್ರಾಧ್ಯಾಪಕನಾಗಲು ಮತ್ತೊಂದು ಪ್ರಾಜೆಕ್ಟ್ ಅಥವಾ ಹಣಕಾಸಿನಲ್ಲಿ ಅದಕ್ಕೆ ಸರಿಹೊಂದುವ ಕನ್ಸಲ್ಟೆನ್ಸಿ ಮತ್ತಿತರ ಕಡ್ಡಾಯವಾದ ಅರ್ಹತೆಗಳಿವೆ. ಪೇಟೆಂಟ್, ಇ-ಕಲಿಕಾ ಸಾಮಗ್ರಿಗಳ ಅಭಿವೃದ್ಧಿ, ಕೈಗಾರಿಕೆಗಳೊಂದಿಗೆ ದೃಢ ಸಂಬಂಧ ಇತ್ಯಾದಿ ಅಪೇಕ್ಷಣೀಯ.

ಇಷ್ಟಾಗುವಾಗ ತರಗತಿಯ ಅಧ್ಯಾಪನಕ್ಕೇನಾಗುತ್ತದೆಂದು ಕೇಳುವವರೇ ಇಲ್ಲ. ಅಧ್ಯಾಪಕರ ಪ್ರಮೋಷನ್ ಸಂದರ್ಶನಗಳಲ್ಲಿ ಅಧ್ಯಾಪನದ ಬಗ್ಗೆ, ಅದರ ವೈಖರಿಯ ಅಥವಾ ನಾವೀನ್ಯದ ಬಗ್ಗೆ ಪ್ರಶ್ನೆಗಳೇ ಇಲ್ಲದೆ ಪ್ರಾಜೆಕ್ಟ್, ಕನ್ಸಲ್ಟೆನ್ಸಿ, ಸಂಶೋಧನಾ ಬರಹಗಳ ತಖ್ತೆಯೇ ಮುಖ್ಯ ಚರ್ಚಾ ವಸ್ತುವಾಗುತ್ತವೆ. ಹೀಗಾಗಿ ಇಡೀ ಸೆಮಿಸ್ಟರ್‌ನಲ್ಲಿ ತರಗತಿಯಲ್ಲಿ ಮಾಡುವಂಥ ಅಧ್ಯಾಪನ, ಅಧ್ಯಾಪಕನ ನೀತಿ ಬಾಧ್ಯತೆಯಾಗಿಯಲ್ಲದೇ ಕರ್ತವ್ಯ ಬಾಧ್ಯತೆಯಾಗಿ ಉಳಿಯುವುದಿಲ್ಲ. ಅಂದರೆ ತರಗತಿಗೆ ಹೋಗದೇ ಇದ್ದರೆ ಬೇರೆಯವರು ಏನೆಂದುಕೊಳ್ಳು ತ್ತಾರೋ ಎನ್ನುವ ಕಾರಣಕ್ಕೆ ತರಗತಿಗೆ ಹೋಗುವಂಥ ಅಧ್ಯಾಪಕರನ್ನು ನಾವೀಗ ಪ್ರೋತ್ಸಾಹಿಸುತ್ತಿದ್ದೇವೆ. ಹೀಗಾ ಗುವಾಗ ಅಧ್ಯಾಪಕ-ವಿದ್ಯಾರ್ಥಿ ನಡುವಣ ಸಂಬಂಧ ಕೃಶವಾಗುವುದರಲ್ಲಿ ಸಂದೇಹವಿಲ್ಲ.

‘ರಾಷ್ಟ್ರೀಯ ಮಹತ್ವದ ಸಂಸ್ಥೆ’ ಎಂಬ ಬಿರುದು ಹೊತ್ತ ಈ ಸಿ.ಎಫ್.ಟಿ.ಐ. ಸಂಸ್ಥೆಗಳ ತಂತ್ರಜ್ಞಾನ ಪ್ರೇರಿತ ಹಮ್ಮೂ ಜ್ಞಾನತೃಷೆಯ ವಾತಾವರಣವನ್ನು ಕಲುಷಿತಗೊಳಿಸುತ್ತದೆ. ಸರಾಸರಿ ವಾರ್ಷಿಕ ₨ 200– 300 ಕೋಟಿ ಅನುದಾನ ಪಡೆಯುವ ಭಾರತದ ಸಿ.ಎಫ್.ಟಿ.ಐ.ಗಳ ನಿರ್ದೇಶಕರು ಅದನ್ನು ಖರ್ಚು ಮಾಡುತ್ತಾ ತಮ್ಮನ್ನು ತಾವು ಮಹತ್ವದ ಸಿ.ಇ.ಒ.ಗಳೆಂದು ಬಿಂಬಿಸಿಕೊಳ್ಳುವುದರಲ್ಲಿ ಆನಂದ ಪಡೆಯುತ್ತಾರೆ; ಅಮೆರಿಕದ ಕಾರ್ಪೊರೇಟ್ ವಿಶ್ವವಿದ್ಯಾ ಲಯಗಳಿಗೆ ಸಂದರ್ಭ ಸಿಕ್ಕಿದಾಗೆಲ್ಲ ಭೇಟಿ ನೀಡುತ್ತಾ ಅಲ್ಲಿನ ಮೌಲ್ಯಗಳನ್ನು ಇಲ್ಲಿಗೆ ತರಲು ಹೆಣಗಾಡುತ್ತಾರೆ; ಅಲ್ಲಿಯಂತೆ ಮ್ಯಾನೇಜ್‌ಮೆಂಟ್ ಸ್ಕೂಲ್‌ಗಳನ್ನು ಸ್ಥಾಪಿ ಸುತ್ತಾರೆ; ಪ್ರಾಜೆಕ್ಟ್ ಇಲ್ಲದ, ಕನ್ಸಲ್ಟೆನ್ಸಿ ಮಾಡದ (ಆದರೆ ಅಧ್ಯಾಪನಕ್ಕೆ ಒತ್ತು ಕೊಡಬಹುದಾದಂಥ) ಅಧ್ಯಾಪಕರು ಇವರಿಗೆ ನಗಣ್ಯ. ಯಾಕೆಂದರೆ ಅಂಥವರಿಂದ ಸಂಸ್ಥೆಗೆ ಯಾವುದೇ ‘ಆರ್ಥಿಕ’ ಉಪಯೋಗವಿಲ್ಲ. ಹೀಗೆಯೇ ಯಾವುದೇ ಉಪಯೋಗ ಕಾಣದ ಅಥವಾ ಆಂತರಿಕ ಆದಾಯವನ್ನು ಹುಟ್ಟುಹಾಕಲಾರದ ಮಾನವಿಕ ಶಿಸ್ತುಗಳಾಗಲಿ, ಸಾಮಾಜಿಕ ವಿಜ್ಞಾನಗಳಾಗಲಿ ಮೂಲೆಗುಂಪಾಗುತ್ತವೆ.

ಸಿ.ಎಫ್.ಟಿ.ಐ.ಗಳ ವಿದ್ಯಾರ್ಥಿಗಳು ಕೂಡಾ ಹೆಚ್ಚಾಗಿ ಮೆಟ್ರೊಪಾಲಿಟನ್ ಹಿನ್ನೆಲೆಯಿಂದ ಬಂದವರಾಗಿದ್ದು ಕೋಚಿಂಗ್ ಮೇಲೆ ಹೇರಳ ಹಣ ಸುರಿಯುತ್ತಾರೆ. ಹೀಗಾಗಿ ಆ ಸಂಸ್ಥೆಗಳ ಶಿಕ್ಷಣ ತಮ್ಮ ಹಕ್ಕು ಎನ್ನುವ ಮನೋಭಾವ ಅವರದು. ಈ ಬಗ್ಗೆ ಸರಿಯಾದ ದೃಷ್ಟಿಕೋನ ರೂಢಿಸಬೇಕಾದ ಪಾಲಕರು ಅದಕ್ಕಿಂತ ಮುಂಚೆಯೇ ಈ ಬಗ್ಗೆ ಪೂರ್ವಗ್ರಹಕ್ಕೊಳಗಾಗಿ ಅತಿ ಸಬ್ಸಿಡಿಯಲ್ಲಿ ಶಿಕ್ಷಣ ನೀಡುತ್ತಿರುವ ಸಂಸ್ಥೆಯ ಮೀಸಲಾತಿಯಂಥ ನೀತಿಗಳನ್ನು ಜರಿದು ಅಂಥ ನೀತಿಗಳಿಲ್ಲದಿದ್ದರೆ ತಮ್ಮ ಮಕ್ಕಳಿಗೆ ಸಿಕ್ಕಬಹುದಾಗಿದ್ದಂಥ ಇನ್ನೂ ಉತ್ತಮ ಸೀಟನ್ನು ಕಳೆದುಕೊಂಡ ಗುಂಗಿನಲ್ಲಿರುತ್ತಾರೆ. ಇತ್ತ ಸಂಸ್ಥೆಗಳಲ್ಲಿನ ಅಧ್ಯಾಪಕರಿಗೆ ಶಿಕ್ಷಣದ ‘ಗಿರಾಕಿ’ಗಳಾದ ಈ ಮೆಟ್ರೊಪಾಲಿಟನ್ ವಿದ್ಯಾರ್ಥಿಗಳು ತಮಗೆ ಕೊಡಬೇಕಾದ ಗೌರವಕ್ಕೆ ಎಲ್ಲಿ ಕಡಿಮೆ ಮಾಡುತ್ತಾರೋ ಎನ್ನುವ ಭಯದಿಂದ ವಿದ್ಯಾರ್ಥಿಗಳಿಗೆ ಮೌಲಿಕ ಶಿಕ್ಷಣದ ಅಗತ್ಯಗಳನ್ನು ಒತ್ತಿ ಹೇಳುತ್ತಿರುತ್ತಾರೆ.

ಹೀಗೆ ಕಳೆದ ಕೆಲವು ವರ್ಷಗಳಿಂದ ಮಾನವೀಯ ಮೌಲ್ಯಗಳ ಬಗ್ಗೆ ಒಂದು ಕೋರ್ಸ್, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿದ್ದರೂ ಆ ಅಂಕಗಳು ಅಂತಿಮ ಹಂತದ ಅಂಕ ಲೆಕ್ಕಾಚಾರಕ್ಕೆ ಸೇರುವುದಿಲ್ಲವಾದ್ದರಿಂದ ವಿದ್ಯಾರ್ಥಿಗಳಿಗೂ, ಅಧ್ಯಾಪಕರಿಗೂ ಅದೊಂದು ಕಾಗದದ ಮೇಲಿನ ಕೋರ್ಸ್ ಮಾತ್ರ ಆಗಿ ಉಳಿದಿದೆ. ನಿಜವಾಗಿಯೂ ಎಂಜಿನಿಯರ್ ಒಬ್ಬನನ್ನು ಸಂಪೂರ್ಣ ಮಾನವನನ್ನಾಗಿ ಮಾಡಬಲ್ಲ ಸಾಮರ್ಥ್ಯವುಳ್ಳ ಮಾನವಿಕ ಶಿಸ್ತುಗಳು ಆದಾಯ ತರಲಾರವೆಂಬ ಒಂದೇ ಕಾರಣಕ್ಕೋಸ್ಕರ ನಗೆಪಾಟಲಿಗೀಡಾಗಿವೆ. ಎಂಜಿನಿಯರಿಂಗ್ ಶಿಕ್ಷಣದಲ್ಲಿ ಅರ್ಥಪೂರ್ಣ ಮಾನವಿಕ ವಿಷಯಗಳನ್ನು ಹೆಚ್ಚು ಹೆಚ್ಚಾಗಿ ಅಳವಡಿಸಬೇಕಾದ ತುರ್ತು ಇಂದಿನದಾಗಿದೆ.

ಆದ್ದರಿಂದ ಭಾರತದ ಸಿ.ಎಫ್.ಟಿ.ಐ.ಗಳ ಒಳಗಣ ದೃಶ್ಯ ಯಾವುದೇ ರಾಷ್ಟ್ರೀಯ ಕಲ್ಯಾಣದ ಧ್ಯೇಯಗಳನ್ನು ಖಂಡಿತ ಬಿಂಬಿಸುತ್ತಿಲ್ಲ. ತರಗತಿಗಳು ನಡೆಯುತ್ತಿವೆ; ದಾಖಲೆಗಳಿಗೋಸ್ಕರ ಕೆಲವು ವಿದ್ಯಾರ್ಥಿ ಕ್ಷೇಮದ ಕೆಲಸಗಳೂ ನಡೆಯುತ್ತಿರಬಹುದು. ಕೇಂದ್ರ ಸರ್ಕಾರದಿಂದ ದುಡ್ಡು ಹೆಚ್ಚಾಗಿ ಬರುತ್ತಿರುವುದರಿಂದ ಕ್ಯಾಂಪಸ್, ಹಾಸ್ಟೆಲ್‌ಗಳು ಇತರ ರಾಜ್ಯ ಸರ್ಕಾರಿ ವಿಶ್ವವಿದ್ಯಾಲಯಗಳಿಗಿಂತ ಸ್ವಲ್ಪ ಚೆನ್ನಾಗಿವೆ ಅಷ್ಟೆ. ಈ ಸಂಸ್ಥೆಗಳ ಕಾಗದಪತ್ರದ ಮೇಲಿನ ಧ್ಯೇಯೋದ್ದೇಶಗಳು ಏನೇ ಇದ್ದರೂ ಸಂಸ್ಥೆಯ ಸರಾಸರಿ ಚಲನೆ ರಾಷ್ಟ್ರೀಯ ಧ್ಯೇಯೋದ್ದೇಶಗಳೊಂದಿಗೆ ಹೊಂದಿಕೆಯಾಗುತ್ತಿಲ್ಲ. ಆದ್ದರಿಂದ ಸಿ.ಎಫ್.ಟಿ.ಐ.ಗಳ ಒಳಗಣ ನೈತಿಕ ಚಿತ್ರಣ ಬದಲಾಗದೇ ಹೋದಲ್ಲಿ ಐ.ಐ.ಟಿ.ಯನ್ನು ಎಲ್ಲೇ ಸ್ಥಾಪಿಸಿದರೂ ಅದರ ದೀರ್ಘಾವಧಿಯ ಪರಿಣಾಮದಲ್ಲಿ ಏನೂ ಹೆಚ್ಚು-ಕಡಿಮೆಯಾಗುವುದಿಲ್ಲ.

ಲೇಖಕ, ಸಹಪ್ರಾಧ್ಯಾಪಕ, ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ–ಕರ್ನಾಟಕ (NITK), ಸುರತ್ಕಲ್ editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.