ಬುಧವಾರ, 25 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿಷ್ಠುರ ನಿಲುವಿನ ಅಪ್ಪಟ ದೇಸಿವಾದಿ

Published : 14 ಫೆಬ್ರುವರಿ 2015, 19:30 IST
ಫಾಲೋ ಮಾಡಿ
Comments

ಮರಾಠಿ ಲೇಖಕ ಬಾಲಚಂದ್ರ ನೇಮಾಡೆ ಅವರ ಕಾದಂಬರಿ ‘ಹಿಂದೂ’ಗೆ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಈ ಸಂದರ್ಭದಲ್ಲಿ ಅವರ ಸಾಹಿತ್ಯ ಮತ್ತು ಚಿಂತನೆಗಳ ನುಡಿನೋಟ.

ಪ್ರಖರ ಚಿಂತನೆಯ ತೀಕ್ಷ್ಣ ಬರವಣಿಗೆ, ಯಾರದೇ ಮುಲಾಜಿಲ್ಲದೇ ಟೀಕಿಸಿ ತನ್ನ ಅಂಬೋಣವನ್ನು ಅಭಿವ್ಯಕ್ತಿಸುವ ಹಾಗೂ ದೇಸಿವಾದವನ್ನು ಪ್ರತಿಪಾದಿಸಿ ಅದರಂತೆ ಬದುಕುವ ಬಾಲಚಂದ್ರ ನೇಮಾಡೆ ಅವರಿಗೆ ಅವರ ಮಹಾಕಾದಂಬರಿ ‘ಹಿಂದೂ’ಗೆ ಪ್ರತಿಷ್ಠಿತ  ಜ್ಞಾನಪೀಠ ಬಂದಿದೆ. ಮಹಾರಾಷ್ಟ್ರದ ಖಾನದೇಶ ಪ್ರಾಂತದಲ್ಲಿ ಜನಿಸಿದ ನೇಮಾಡೆ ಅವರು ಇದೇ ಮಣ್ಣಿನ ‘ಬಹಿಣಾಬಾಯಿ’ ಪರಂಪರೆಯ ದೇಸಿಯತ್ತ ಮೈಗೂಡಿಸಿಕೊಂಡವರು. ಇವರ ದೇಸಿವಾದವು ಹಿಂದುತ್ವವಾದದ ಕಡೆಗೆ ಸಾಗದೆ ಸುಧಾರಣಾ ಪರ್ವದತ್ತ ಹೆಜ್ಜೆ ಹಾಕಿದೆ. ಅವರು ಎರಡು ವ್ಯತ್ಯಾಸ ಮನಗಂಡು ತಮ್ಮದನ್ನು ಪ್ರತಿಪಾದಿಸುವರು. ಒಂದೆಡೆ ತಿಲಕರ–ಸಾವರಕರ ಭಕ್ತರು, ಹಿಂದೂ ಮಹಾಸಭಾ, ಆರ್‌ಎಸ್‌ಎಸ್‌ನವರು ಹೇಳು ದೇಶಿವಾದ; ಮತ್ತೊಂದೆಡೆ ಗಾಂಧಿ ಅಂಬೇಡಕರ, ಮಾರ್ಕ್‌್್ಸವಾದಿ ದೇಸಿವಾದ.

ಇದರಲ್ಲಿ ಎರಡನೆಯದರಲ್ಲಿ ತಮ್ಮ ಹೊಸ ಚಿಂತನೆ ಸೇರಿಸಿ ಬುದ್ಧನಿಂದ ಹಿಡಿದು ವಿಠಲ ರಾಮಜಿಶಿಂದೆ ತನಕ ಹರಿದುಬಂದ ದೇಸಿಯತೆಯನ್ನು ಒಪ್ಪಿ ಅದನ್ನು ತಮ್ಮದರಲ್ಲಿ ಅಳವಡಿಸಿ ಬದುಕಿ ಹೇಳುತ್ತಾರೆ. ‘ದೇಸಿತನ ನಮ್ಮ ಮಣ್ಣಿಂದ ಹುಟ್ಟಬೇಕು. ಆ ಕೃತಿಯ ಕಲಾತ್ಮಕತೆಯಲ್ಲಿ ಅರಳಿ ಘಮಲು ಪಡೆಯಬೇಕು’ ಎನ್ನುವ ಅವರು ಪ್ರತಿಯೊಂದರಲ್ಲಿ ಅಡಗಿದ್ದನ್ನು ಶೋಧಿಸಬೇಕು ಎನ್ನುವರು. ‘ಶ್ರೇಷ್ಠ ರಚನೆಗಳಿಲ್ಲ ದೇಸೀಯವೇ! ಆಕಾಲ, ಸ್ಥಳಗಳ ಒಟ್ಟಿಗೆ ಸಮರಸಗೊಂಡಿ ರುತ್ತವೆ’ ಎಂದು ಹೇಳುವ ಬಾಲಚಂದ್ರರು ‘ಇಲ್ಲಿಯವ ಇಂಗ್ಲೆಂಡಿನವರಿಗಾಗಿ ಬರೆಯುವುದಿಲ್ಲ. ಕಾಫ್ಕಾ, ಪ್ರಾಗನವರಿ ಗಾಗಿ ಬರೆಯುತ್ತಿದ್ದ ಎಂಬ ದೇಸಿವಾದ ತತ್ವವನ್ನು ಒಪ್ಪಬೇಕು’ ಎಂದು ಖಚಿತ ಅಭಿಪ್ರಾಯ ವ್ಯಕ್ತಪಡಿಸುವರು. ಚಂದ್ರಶೇಖರ ಕಂಬಾರರು ನಮ್ಮ ನೆಲದ ಸತ್ವ ಪಡೆದು ಕಟ್ಟಿಕೊಟ್ಟ ಕಾವ್ಯ, ಕಾದಂಬರಿ ನಾಟಕಗಳು ನೇಮಾಡೆ ಅವರ ದೇಸಿ ಚಿಂತನೆಗೆ ಪೂರಕ ಸೃಷ್ಟಿಯಾಗಿವೆ.

ಮೈಸೂರಿನ ಸಿ.ಡಿ. ನರಸಿಂಹಯ್ಯನವರನ್ನು ಕೃತಜ್ಞತೆಯಿಂದ ನೆನೆವ ನೇಮಾಡೆಯವರು ತಮ್ಮ ಬೆಳವಣಿಗೆಯಲ್ಲಿ ಅವರ ಪ್ರಭಾವವಿದೆಯೆಂದು ಸ್ಮರಿಸುತ್ತಾರೆ. ‘ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಗಳು ಹೆಚ್ಚಿಗೆ ದೊರೆಯಲು ಕಾರಣ, ಕನ್ನಡದಲ್ಲಿ ಶ್ರೇಷ್ಠ ಲೇಖಕರು ಹೇಗಿದ್ದಾರೋ ಹಾಗೆಯೇ ವಿಮರ್ಶಕರೂ ಶ್ರೇಷ್ಠ ಗುಣಮಟ್ಟದವರು. ಇವರೊಟ್ಟಿಗೆ ಪ್ರಬುದ್ಧ ಓದುಗ ಸಮುದಾಯವಿರಲು  ಇನ್ನೇನು ಬೇಕು! ಹೀಗಾಗಿ ಕನ್ನಡ ಆ ಹೆಚ್ಚಿನ ಗೌರವಕ್ಕೆ ಕಾರಣವಾಗಿದೆಯೆಂದು ಮೆಚ್ಚಿ ನುಡಿವರು. ಕನ್ನಡ ಪ್ರೀತಿಯ ಈ ಲೇಖಕ ಈಚೆಗೆ ‘ಬಸವರಾಜ ಕಟ್ಟೀಮನಿ’ ಪ್ರಶಸ್ತಿಯನ್ನೂ ಸ್ವೀಕರಿಸಿದ್ದರು.

ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನಕ್ಕೆ ಎಂದೂ ಹೋಗದ ಅವರು  ಅದರ ಕುರಿತು ತಮ್ಮ ವಾದಗ್ರಸ್ಥ ವಿಚಾರವನ್ನು ಹೀಗೆ ಖಾರವಾಗಿ ಹೇಳುತ್ತಾರೆ– ‘ಸಾಹಿತ್ಯ ಸಮ್ಮೇಳನ ಸಂವೇದನಾ ರಹಿತವಾಗಿದ್ದು ಇಂಥವು ನಷ್ಟವಾಗಬೇಕು. ಕೆಲಸಕ್ಕೆ ಬಾರದವರ ದಂಧೆಯಾಗಿರುವ ಇವು ಹೇಗಿವೆಯೆಂದರೆ ಒಂಟೆಯ ಮೇಲೆ ಕುಳಿತು ಆಡುಗಳನ್ನು ಸಾಕಿದಂತೆ. ಕಾಲ ಬಾಹ್ಯವಾದ ಇಂಥ ಸಮ್ಮೇಳನಗಳು ಪ್ರಯೋಜನಕ್ಕೆ ಬಾರದವು’. ಭಾಷೆಯೆಂಬುದು ಪ್ರಾದೇಶಿಕ ಸತ್ವವನ್ನು ಪಡೆದಿರುವಂಥದ್ದು. ಮರಾಠಿಯಲ್ಲಿ ಹಲವು ಸ್ಥಳೀಯ ಭಾಷೆಗಳು ಬಳಕೆಯಲ್ಲಿವೆ, ಅವು ಉಳಿಯಬೇಕು. ಪ್ರಾದೇಶಿಕ ವಿಭಿನ್ನತೆಯಲ್ಲಿ ಶುದ್ಧ ಅಶುದ್ಧ ಅಂತಿಲ್ಲ. ಕೇವಲ ಪುಣೆ ಪ್ರಣೀತ ಮತ್ತು ಪಶ್ಚಿಮ ಮಹಾರಾಷ್ಟ್ರದ್ದೇ ಶ್ರೇಷ್ಠತ್ವದ ದಬ್ಬಾಳಿಕೆ ಸಲ್ಲ. ಖಾನದೇಶ, ವಿದರ್ಭ, ಮರಾಠಾವಾಡಾ ಹೀಗೆ ಹಲವು ಪ್ರದೇಶಗಳ ಭಾಷೆಗಳಲ್ಲೇ ಸಾಹಿತ್ಯ ಹುಟ್ಟಬೇಕು. ಇಂಗ್ಲಿಷಿನ ಹುಚ್ಚಿಳಿಯಬೇಕು. ನಮ್ಮ ಭಾಷೆಗಳಿಗೆ ಲಕ್ಷ ಮತ್ತು ಸಾವಿರಾರು ವರ್ಷಗಳ ಗಟ್ಟಿಯಾದ ಬೇರಿದೆ. ಈ ಸೋಶಿಯಲ್‌ ಮೀಡಿಯಾ ಮತ್ತು ಜಾಗತೀಕರಣ ಫಲಶ್ರುತಿಯಿಂದ ನೆಲದ ಭಾಷೆಗೆ ಯಾವುದೇ ಕುಂದಿಲ್ಲ. ವ್ಯಾಮೋಹಗಳ ಸಗಟೇ ಹರಡಿರುವಾಗ ಇಂಗ್ಲಿಷ್‌ ಶಾಲೆಗಳನ್ನು ಬಂದ್‌ ಮಾಡಿ ನಮ್ಮ ಭಾಷೆಗಳಲ್ಲೇ ಶಿಕ್ಷಣ ನೀಡಬೇಕೆಂದು ಖಡಾಖಂಡಿತ ನಿಲುವು ವ್ಯಕ್ತಪಡಿಸುತ್ತಾರೆ.

ಕವಿ, ಕಾದಂಬರಿಕಾರ, ವಿಮರ್ಶಕ, ಸಂಶೋಧಕ ಮತ್ತು ದೇಸಿ ಚಿಂತನೆಯ ಡಾ. ಬಾಲಚಂದ್ರ ನೇಮಾಡೆ ಸಾಠೋತ್ತರಿ ಮತ್ತು ನವ್ವದೋತ್ತರಿ ಮರಾಠಿ ಸಾಹಿತ್ಯವನ್ನು ತಮ್ಮದೇ ಶೈಲಿಯಲ್ಲಿ ಗ್ರಹಿಸಿ ವಿಶ್ಲೇಷಿಸಿದ ಬಗೆ ಚೇತೋಹಾರಿ. ನೆಹರೂ ಪ್ರಣೀತ ಚಿಂತನೆ ಹಾಗೂ ತೊಂಬತ್ತರದ ಏಕಾಧಿಕಾರ ಪ್ರಜಾ ಸರ್ಕಾರಗಳ ಬಗೆಗಿನ ನಿಲುವು ಮಹತ್ವದ್ದು. ಏಕಾಧಿಕಾರ (ಹುಕುಂಶಾಹಿ) ಛಾಯೆಯ ಪ್ರಜಾಪ್ರಭುತ್ವ ನಮ್ಮಲ್ಲಿದೆ ಹೊರತು ನಿಜಾರ್ಥದಲ್ಲಿ ಪ್ರಜಾಪ್ರಭುತ್ವವಲ್ಲ. ಇದು ಜನವಿರೋಧಿಯಾಗಿದ್ದು ಫುಲೆ, ತುಕಾರಾಮರ ಚಿಂತನೆಯ ನಿರ್ಭಯವನ್ನು ಜನ ಹೊಂದಬೇಕೆಂದು ಬಯಸುವರು, ಅದರಂತೆಯೇ ಖಾನದೇಶದ ಈ ಲೇಖಕ (ಗ್ರಾಮೀಣ) ಬಹುಸಂಸ್ಕೃತಿಯ ಆಯಾಮಗಳಿಗೆ ಒತ್ತು ನೀಡಿದವರು. ಕಲೆ ಮತ್ತು ಜೀವನವಾದಲ್ಲಿಯ ಬದುಕಿಗೆ ಮಹತ್ವ ಬೇಕು. ವ್ಯಕ್ತಿಯ ಸ್ವಾಭಿಮಾನ, ಜೀವನವಾದವು ಬಹುದೊಡ್ಡ ಮೌಲ್ಯಗಳು ಇದು ನೇಮಾಡೆಯವರ ನಿಲುವು.

ಡಾ. ಬಾಲಚಂದ್ರ ನೇಮಾಡೆ

ಜನನ: 27 ಮೇ 1938

ಊರು: ಡೋಂಗರ ಸಾಂಗವಿ, ತಾ: ಯಾವಲ, ಜಿ: ಜಳಗಾವ
ಸಾಹಿತ್ಯ: ಕಾವ್ಯ ಮೆಲೋಡಿ, ದೇಖಣಿ
ಕಾದಂಬರಿ: ಕೋಸಲಾ, ಬಿಢಾರ, ಹೂಲ, ಜರೀಲಾ, ಝಾಲ, ಹಿಂದೂ: ಜಗಣ್ಯಾಚಿ ಸಮೃದ್ಧ ಅಡಗಳ
ವಿಮರ್ಶೆ: ಟೀಕಾ ಸ್ವಯಂವರ, ಸಾಹಿತ್ಯಾಚೀ ಭಾಷಾ, ತುಕಾರಾಮ, ದಿ ಇನ್‌ಪ್ಲೂಯನ್‌್ಸ ಆಫ್‌ ಇಂಗ್ಲಿಷ್‌ ಆನ್‌ ಮರಾಠಿ–ಎ ಸೋಶಿಯೋ–ಲಿಂಗ್ವಿಸ್ಟಿಕ್‌ ಅಂಡ್‌ ಸ್ಟಾಯಲಿಸ್ಟಿಕ್‌ ಸ್ಟಡಿ, ಇಂಡೋ–ಆಂಗ್ಲಿಯನ್‌ ರೈಟಿಂಗ್‌್ಸ–ಟೂ ಲೆಕ್ಚರ್ಸ್‌, ಪ್ರಸಾಂಗ ಮೈಸೂರು, ನೆಟಿವಿಜಂ,

ಪ್ರಮುಖ–ಗೌರವಗಳು:
1966–ಬಿಢಾರ–ಹ.ನಾ. ಆಪಟೆ ಪುರಸ್ಕಾರ
1984–ಝೂಲ–ಯಶವಂತರಾವ ಚವ್ಹಾಣ (ಕರಾಡ)
ಪುರಸ್ಕಾರ
1987–ಸಾಹಿತ್ಯಾಚೀ ಭಾಷಾ–ಕುರುಂದಕರ ಪುರಸ್ಕಾರ
1991–ಟೀಕಾ ಸ್ವಯಂವರ–ಕೇಂದ್ರ ಸಾಹಿತ್ಯ ಅಕಾಡೆಮಿ
ಪ್ರಶಸ್ತಿ
1991–ದೇಖಣಿ–ಕುಸುಮಾಗ್ರಜ ಪುರಸ್ಕಾರ
1992–ದೇಖಣಿ–ನಾ.ಧೋ. ಮನೋಹರ ಪುರಸ್ಕಾರ
2001–ಮಹಾರಾಷ್ಟ್ರ ಫೌಂಡೇಷನ್‌ ಪ್ರಶಸ್ತಿ
2013–ಕುಸಮಾಗ್ರಜ ಪ್ರತಿಷ್ಠಾನ ನಾಶಿಕದ ಜನಸ್ಥಾನ
ಪ್ರಶಸ್ತಿ
2014–ಕರ್ನಾಟಕ ಸರಕಾರದ ಬಸವರಾಜ ಕಟ್ಟೀಮನಿ
ರಾಷ್ಟ್ರೀಯ ಪ್ರಶಸ್ತಿ
2015–ಹಿಂದೂ: ಜಗಣ್ಯಾಚಿ ಸಮೃದ್ಧ ಅಡಗಳಕ್ಕೆ ಜ್ಞಾನಪೀಠ ಪ್ರಶಸ್ತಿ–ಪದ್ಮಶ್ರೀ

ತನ್ನ ಲೇಖನಿಯ ಅಭಿವ್ಯಕ್ತಿಗೆ ಇಂಥದ್ದೊಂದು ಅದ್ಭುತ ಶಕ್ತಿ, ಸಾಮರ್ಥ್ಯವಿದೆಯೆಂಬುದು ಅವರ ಅರಿವಿಗೆ ಬಂದದ್ದು ‘ಕೋಸಲಾ’ ಕಾದಂಬರಿಯಿಂದ. ಡೋಂಗರಸಾಂಗವಿ ಹಳ್ಳಿಯ ನೇಮಾಡೆ ಅವರ ಸೃಷ್ಟಿಸಿದ ಪಾತ್ರ ಪಾಂಡುರಂಗ ಸಾಂಗವೀಕರ ಮಹಾರಾಷ್ಟ್ರದ ಅಂದಿನ ಯುವ ಪೀಳಿಗೆಯಲ್ಲಿ ಅಚ್ಚೊತ್ತಿದ. ಕೃತಿಯು ಪ್ರತಿಷ್ಠಾಪಿತವಾಗಿದ್ದ ಸಾಹಿತ್ಯವನ್ನು ಅಲ್ಲಾಡಿಸಿಬಿಟ್ಟಿತು. ಇದನ್ನು ಬರೆದಾಗ ಅವರ ವಯಸ್ಸು ಇಪ್ಪತ್ತೈದು. ಕಾದಂಬರಿ ಬಂದು ಐವತ್ತು ವರ್ಷ ಕಳೆದಿದೆ. ಐವತ್ತನೆಯ ಜ್ಞಾನಪೀಠವು ಯೋಗಯೋಗದಿಂದ ನೇಮಾಡೆಯವರಿಗೆ ಸಂದಿದೆ. ಇವತ್ತಿಗೂ ಈ ‘ಕೋಸಲಾ’ (ಗೂಡು) ಅದೇ ಓದುಗರ ಸೆಳೆತವನ್ನು ಕಾಯ್ದುಕೊಂಡಿದೆ. ಸಾಠೋತ್ತರಿ ಮರಾಠಿ ಸಾಹಿತ್ಯದಲ್ಲಿ ಪಲ್ಲಟಗೊಂಡ ಅನೇಕ ಸಾಹಿತ್ಯ, ಸೃಷ್ಟಿ, ಚಳವಳಿಗಳಲ್ಲಿ ಕೋಸಲಾ ಮುಖ್ಯ. ಇದು ಮರಾಠಿ ಸಾಹಿತ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದಷ್ಟೇ ಅಲ್ಲ ವಿಮರ್ಶಾ ಕ್ಷೇತ್ರದಲ್ಲೂ ಹೊಸ ಚಿಂತನೆಗೆ ಅವಕಾಶ ಮಾಡಿಕೊಟ್ಟಿತು. ವಿಮರ್ಶಕರು ವಿಭಿನ್ನ ರೂಪದಲ್ಲಿ ಚಿಂತಿಸುವಂತಾಯಿತು. ನೇಮಾಡೆ ಅವರಿಗೆ ಹೀಗೆ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಉದ್ದೇಶವಿರಲಿಲ್ಲ. ಆದರೆ ಹೊಸ ಪರಿವರ್ತನೆ ತರುವ ಕೃತಿಯಾಗಿತ್ತು. ಆಶಯ ಮಂಡನೆ, ಭಾಷಾ ಶೈಲಿ, ಪ್ರಸಂಗ ಮತ್ತು ಘಟನೆಗಳ ನೇರ ಅಭಿವ್ಯಕ್ತಿಯು ತರುಣರಿಗೆ ಆಪ್ತವಾಗತೊಡಗಿತ್ತು. ಅಂದು ಕಥಾನಾಯಕ ಪಾಂಡುರಂಗ ಸಾಂಗವೀಕರ ಊರು ಕೇರಿ, ಶಹರು ಮೊಹಲ್ಲಾಗಳಲ್ಲಿ ಚರ್ಚಗೆ ಒಳಗಾದ.

ಹಳ್ಳಿಯ ಹುಡುಗ ಪುಣೆಯೆಂಬ ವಿದ್ಯಾನಗರಿಗೆ ಶಿಕ್ಷಣಕ್ಕಾಗಿ ಬಂದಾಗ ಆ ಪರಿಸರದಲ್ಲಿ ಅವನ ಗಾಂವಟಿ ಭಾಷೆ, ಹುಡುಗಿಯರ ಜತೆಗಿನ ಮಾತಿನಲ್ಲಿ ಉಂಟಾಗುವ ನಾಚಿಕೆ, ಆರ್ಥಿಕ ತೊಂದರೆ, ಉಡುಗೆ, ಅಧ್ಯಾಪಕರ ಒಟ್ಟಿಗೆ ಮಾತಿಗಿಳಿಯಲು ಆಗದ ಸ್ಥಿತಿ, ಊಟಕ್ಕೆ ಹಣದ ತೃಟಿಗೆ ಮೆಸ್‌ನಿಂದ ಆಗುವ ತೊಂದರೆ ಇಂಥ ಅನೇಕ ಊನಗಳನ್ನು ಎದುರಿಸಿ ನಗರದ ಮಧ್ಯಮವರ್ಗದ ಮೌಲ್ಯಗಳನ್ನು ಮೆಟ್ಟಿ ಎದೆಯುಬ್ಬಿಸಿ ಬೆಳೆವ ಯುವಕನ ಕತೆಯ ಚಿತ್ರಣ ‘ಕೋಸಲಾ’! ಕಾದಂಬರಿಯು ರೂಢಿಗತ ಚೌಕಟ್ಟನ್ನು ಮೀರಿದ ಒಂದು ಸ್ಟ್ರಕ್ಚರ್‌ ಈ ಕೃತಿಯಲ್ಲಿದೆ.

ಜ್ಞಾನಪೀಠ ತಂದ ‘ಹಿಂದೂ: ಜಗಣ್ಯಾಚಿ ಸಮೃದ್ಧ ಅಡಗಳ’ ಕಾದಂಬರಿಯ ಕ್ಯಾನವಾಸ್‌ ಬಹು ಆಯಾಮದ ಕೃತಿ. ಅವರು ಇದಕ್ಕೆ ತೆಗೆದುಕೊಂಡ ಕಾಲಾವಧಿ ಮೂವತ್ತು ವರ್ಷಕ್ಕಿಂತ ಹೆಚ್ಚು. ಅವರು ಹೇಳಿದ್ದು ಇನ್ನೂ ಎರಡು ಮಹಾಖಂಡಗಳಲ್ಲಿ ‘ಹಿಂದೂ...’ವಿನ ಕಾದಂಬರಿಗಳು ಬರಲಿವೆ. ಅದಾದ ಬಳಿಕ ಕಾದಂಬರಿ ಬರೆಯುವುದನ್ನೇ ಬಿಟ್ಟು ಕೇವಲ ಕವಿತೆಗಳನ್ನು ಮಾತ್ರ ಬರೆವೆ, ಎಂದಿರುವ ಅವರ ಮೊದಲ ಪ್ರೀತಿಯೇ ಕಾವ್ಯ!

‘ಹಿಂದೂ’ 2010 ರಲ್ಲಿ ಬಂದ ಕೃತಿ ವಿವಾದ ಸೃಷ್ಟಿಸಿತು. ಈ ಕೃತಿಯ ಚರ್ಚೆಯಿದ್ದಾಗ ಕೆಲವು ಸನಾತನಿ ವಿಚಾರಧಾರೆಯವರು ನೇಮಾಡೆಯವರ ವಿರುದ್ಧ ಮತ್ತು ಕೃತಿ ಕುರಿತು ರೋಷ ವ್ಯಕ್ತಪಡಿಸಿ ಘೋಷಣೆ ಕೂಗಿದ್ದರು. ಉಪಸ್ಥಿತರಿದ್ದ ನೇಮಾಡೆ ಅಷ್ಟೇ ಶಾಂತಚಿತ್ತರಾಗಿಯೇ ಇದ್ದರು. ಅವರು ಹೇಳುವಂತೆ ಹಿಂದೂ ಒಂದು ಧರ್ಮವಲ್ಲ ಆದರೆ ಭೂ–ಸಾಂಸ್ಕೃತಿಕ ವೈಶಿಷ್ಟ್ಯಗಳಿಂದ ಕೂಡಿದೆ. ಇದನ್ನು ನೆನಪಿಟ್ಟುಕೊಂಡೇ ಕಾದಂಬರಿ ರೂಪು ಪಡೆದಿದೆ. ಖಾನದೇಶ ಭಾಷಾ ಸೊಗಡು ಇದರ ವೈಶಿಷ್ಟ್ಯ. ಕೆಲವು ವಿಶಿಷ್ಟ ಪದಗಳು ಕೃಷಿ ಮೂಲದ್ದು, ಕೃಷಿ ಸಂಸ್ಕೃತಿಯ ಸಿರಿವಂತಿಕೆ ಹೆಚ್ಚಿಸಿವೆ. ಹರಪ್ಪ ಮೊಹೆಂಜೋದಾರೋದಿಂದ ಖಾನದೇಶ ಮೋರಗಾವ ತನಕ ಅದರ ವಿಸ್ತೀರ್ಣ ಹಬ್ಬಿದೆ. ಮನುಷ್ಯ ಕುಲಗಳು, ವೃತ್ತಿ ಉಪವೃತ್ತಿ, ಪಂಗಡ ಉಪಪಂಗಡಗಳ ಹಲವು ಸಂಸ್ಕೃತಗಳು, ಗ್ರಾಮ ಬದುಕಿನ ಆಯಗಾರರ ವೃತ್ತಿ, ಬದುಕು ವೈರುಧ್ಯ, ಭೋಗಗಳು ಹೀಗೆ ಏನೆಲ್ಲ ಶೋಧವು ಸಂಸ್ಕೃತಿಯಾಗಿ ಈ ಶ್ರೇಷ್ಠ ಸಂಶೋಧಕರಿಂದ ಸೃಜನಶೀಲ ಗೊಂಡಿದೆ. ಕೃತಿಗಿಳಿದ ಅವರು ಒಂದಷ್ಟು ಪುಟ ಬರೆದಿಟ್ಟು ಬಳಿಕ ಮತ್ತೆ ಓದಿ ತಿದ್ದಿ ಮತ್ತೆ ಸೃಜಿಸಿ ಒಪ್ಪ ಮಾಡುವ ಪ್ರಕ್ರಿಯೆ ಇಟ್ಟುಕೊಂಡವರು. ಬರೆಯುವುದು ತಿದ್ದುವುದು, ಬದಲಿಸುವುದು, ಒರೆಹಚ್ಚಿ ನೋಡುವುದು. ಹೀಗೆ ಮಾಡುವಾಗ ಅವರ ಸೃಜನಶೀಲತೆಗೆ ಸಿಗರೇಟಿನ ಸಾಥ್‌! ಆದರೆ ವೈದ್ಯರು ಈಗ ಸಿಗರೇಟಿಗೆ ನಿಷೇಧ ಹೇರಿದ್ದಾರೆ.

ಅವರ ‘ಟೀಕಾಸ್ವಯಂವರ’ ಬಹುಚರ್ಚಿತ ವಿಮರ್ಶಾ ಕೃತಿ. ಕೃತಿನಿಷ್ಠರಾಗಿ ಪುರಾವೆಗಳ ಸಹಿತ ತಮಗೆ ತೋಚಿದ ಸತ್ಯಗಳನ್ನು ಹೇಳುವ ಶ್ರದ್ಧಾವಂತ ವಿಮರ್ಶಕರು. ಅನೇಕ ಸಾಹಿತಿಗಳನ್ನು ನೇರ ಸ್ಪಷ್ಟ ನುಡಿಗಳಲ್ಲಿ ದಂಡಿಸಿದ್ದಾರೆ. ಇಂದಿನ ಪೀಳಿಗೆಗೆ ಮಾರ್ಗದರ್ಶನದಂತೆ ಕೆಲವು ಉತ್ತಮ ಭವಿಷ್ಯವಿರುವ ಲೇಖಕರನ್ನೂ ನೆನೆಯುತ್ತಾರೆ. ಆ ದೊಡ್ಡಗುಣ ಅವರಲ್ಲಿದೆ. ರಾಜನ ಗವಸ, ಸದಾನಂದ ದೇಶಮುಖ ಭರವಸೆಯ ಲೇಖಕರು, ನಾಟಕಕಾರರಲ್ಲಿ ಜಯಂತ ಪವಾರ, ದತ್ತಾ ಭಗತರನ್ನು ಮೆಚ್ಚುತ್ತಾರೆ. ಶರಣಕುಮಾರ ಲಿಂಬಾಳೆಯವರ ‘ಅಕ್ಕರಮಾಶಿ’ ಅವರನ್ನು ಸೆಳೆದ ಆತ್ಮಕತೆ. ಹಾಗೆ ನೋಡಿದರೆ ಆತ್ಮಕತೆಗಳ ಕುರಿತು ಅವರಿಗೆ ಸಕಾರಾತ್ಮಕ ಅಭಿಪ್ರಾಯವಿಲ್ಲ.

ಹಿರಿಯರಾದ ಸಾನೇ ಗುರೂಜಿಯವರನ್ನು, ಅವರ ಸಾಹಿತ್ಯವನ್ನು ಮೆಚ್ಚುವ ಮತ್ತು ಪ್ರೇರಣೆಯಾಗಿ ಸ್ವೀಕರಿಸುವ ಬಾಲಚಂದ್ರರು ‘ಮೆಲೋಡಿ’ ಮತ್ತು ‘ದೇಖಣಿ’ ಕವನ ಸಂಗ್ರಹದಲ್ಲಿ ತಮ್ಮ ಆಲೋಚನೆಗಳನ್ನು ರೂಪುಗೊಳಿಸಿರುವರು. ‘ಕಾವ್ಯವೇ ನನ್ನ ಮೆಚ್ಚಿನ ಕ್ಷೇತ್ರ, ಕಾವ್ಯವೇ ಎಲ್ಲ ಸಾಹಿತ್ಯದ ತಿರುಳು ಎಂದು ಭಾವಿಸಿದ್ದೇನೆ. ಯಾಕೆಂದರೆ ಕಾವ್ಯ ರಚನೆಯಲ್ಲಿ ನಿಮ್ಮ ಭಾಷೆಯೆ ನಿಮ್ಮನ್ನು ಪಣಕ್ಕಿಡುತ್ತದೆ. ಅಂತರ್ಮುಖಿಯಾಗಿಸುತ್ತದೆ. ಇಲ್ಲದಿದ್ದರೆ ಕಾವ್ಯ ಹುಟ್ಟುವುದಿಲ್ಲ’ ಎಂದು ಸ್ಪಷ್ಟೋಕ್ತಿಯಲ್ಲಿ ಹೇಳಿರುವರು. ಇನ್ನೇನು ಎರಡು ಬೃಹತ್‌ ಕಾದಂಬರಿ ‘ಹಿಂದೂ’ವಿನ ಎರಡು ಖಂಡಗಳ ರಚನೆಯ ನಂತರ ಕವಿತೆ ಬರೆವೆ ಎಂದಿದ್ದಾರಲ್ಲ! ಅವರ ಕಾವ್ಯಕನ್ನಿಕೆಯ ನಿರೀಕ್ಷೆಯಲ್ಲಿರೋಣ. ಈಗ ಅಭಿನಂದಿಸೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT