ಶನಿವಾರ, 28 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೋಟಿಸ್‌ ನೀಡದೇ ಕಾಮಗಾರಿ ಆರಂಭ

ಸಕಲೇಶಪುರದ ಆಸುಪಾಸಿನಲ್ಲಿ ಕೆಲಸ ಶುರು: ಎತ್ತಿನಹೊಳೆ ಯೋಜನೆ ವಿರೋಧಿಗಳ ಆಕ್ರೋಶ
Published : 7 ಆಗಸ್ಟ್ 2015, 20:35 IST
ಫಾಲೋ ಮಾಡಿ
Comments

ಮಂಗಳೂರು: ಪಶ್ಚಿಮ ಘಟ್ಟದಲ್ಲಿ ಹರಿಯುವ ಎತ್ತಿನ ಹೊಳೆ ಮತ್ತು ಇತರ ಹಳ್ಳಗಳಿಂದ ನೀರು ಸಂಗ್ರಹಿಸಿ ಘಟ್ಟದ ಮೇಲ್ಭಾಗದ ಐದು ಜಿಲ್ಲೆಗಳಿಗೆ ನೀರು ಹರಿಸುವ ರಾಜ್ಯ ಸರ್ಕಾರದ ಎತ್ತಿನ ಹೊಳೆ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆಯ ಯಾವುದೇ ಅಧಿಕೃತ ಕ್ರಮಗಳು ಆರಂಭವಾಗುವ ಮುನ್ನವೇ ಕಾಮಗಾರಿಗಳು ಸಕಲೇಶಪುರದ ಆಸುಪಾಸಿನ ಪ್ರದೇಶಗಳಲ್ಲಿ ಆರಂಭವಾಗಿವೆ.

‘2013ರ ಭೂಸ್ವಾಧೀನ ಕಾಯ್ದೆ ಪ್ರಕಾರ ಗೆಜೆಟ್‌ ಅಧಿಸೂಚನೆ, ಯೋಜನೆಯ ಸಂತ್ರಸ್ತರ ಪೈಕಿ ಶೇ 70ರಷ್ಟು ಮಂದಿಯಿಂದ ಒಪ್ಪಿಗೆ ಹಾಗೂ ಸಾಮಾಜಿಕ ಪರಿಣಾಮದ ಅಧ್ಯಯನ ನಡೆಸದೆಯೇ ಕಾಮಗಾರಿ ಶುರು ಮಾಡುವಂತಿಲ್ಲ. ಅಲ್ಲದೆ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಸಂತ್ರಸ್ತರಿಗೆ ನೀಡಲಾಗುವ ಪರಿಹಾರ ಮೊತ್ತವನ್ನೂ ಸರ್ಕಾರ ಸಾರ್ವಜನಿಕ ಅಹವಾಲು ಸ್ವೀಕಾರ ಮಾಡುವ ಮುನ್ನವೇ ಪ್ರಕಟಿಸಬೇಕು. ಆದರೆ ಭೂ ಸ್ವಾಧೀನದ ಗೊಡವೆಗೇ ಹೋಗದೆ ಯೋಜನೆಯ ಕಾಮಗಾರಿಗಳು ಸಕಲೇಶಪುರದ ಆಸುಪಾಸಿನಲ್ಲಿ ನಡೆಯುತ್ತಿವೆ. ಅಲ್ಲಲ್ಲಿ ಲಭ್ಯ ಇರುವ ಸರ್ಕಾರಿ ಭೂಮಿಯನ್ನು ಬಳಸಿಕೊಂಡು ಹಾಗೂ ಕೆಲವೆಡೆ ಗುತ್ತಿಗೆದಾರರು ಜಮೀನನ್ನು ಪಡೆದುಕೊಂಡು ಒಡ್ಡು ನಿರ್ಮಾಣ ಮತ್ತು ಪೈಪ್‌ಲೈನ್‌ ಹಾಕುವ ಕಾಮಗಾರಿಯನ್ನು ಮುಂದುವರೆಸುತ್ತಿದ್ದಾರೆ ಎಂದು ಎತ್ತಿನಹೊಳೆ ತಿರುವು ಯೋಜನೆ ವಿರೋಧಿ ಹೋರಾಟ ಸಮಿತಿಯ ಸದಸ್ಯರು ‘ಪ್ರಜಾವಾಣಿ’ ಜೊತೆ ಮಾತನಾಡುತ್ತ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕಾಡುಮನೆ ಟೀ ಎಸ್ಟೇಟ್‌ನಲ್ಲಿ ಒಂದು ಒಡ್ಡು ನಿರ್ಮಾಣ ನಡೆಯುತ್ತಿದ್ದರೆ, ಮಂಗಳೂರು –ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎತ್ತಿನಹಳ್ಳ ಎಂಬ ಪ್ರದೇಶದಲ್ಲಿಯೂ ಮತ್ತೊಂದು ಒಡ್ಡು ನಿರ್ಮಾಣ ನಡೆಯುತ್ತಿದೆ. ಎತ್ತಿನ ಹಳ್ಳದ ಬಳಿಯ ಜಮೀನನ್ನು ಸ್ವಾಧೀನ ಮಾಡಿಕೊಂಡಿಲ್ಲ.

ದೊಡ್ಡ ನಾಗರ ಎಂಬಲ್ಲಿ ಗುರುತ್ವಾಕರ್ಷಣ ಟ್ಯಾಂಕ್‌ ನಿರ್ಮಾಣ ಕಾರ್ಯಕ್ಕೆ ಪೂರಕವಾಗಿಯೂ ಕೆಲಸಗಳನ್ನು ಶುರು ಮಾಡಲಾಗಿದೆ.
ಸಕಲೇಶಪುರದ ಆಸುಪಾಸಿನ ಸತ್ತಿಗಲ್‌, ಹೆಬ್ಬನ ಹಳ್ಳಿ, ಹೆಬ್ಸಾಲೆ ಪ್ರದೇಶಗಳಲ್ಲಿ ಭಾರೀ ಗಾತ್ರದ ಪೈಪ್‌ಗಳನ್ನು ಪೇರಿಸಿಡಲಾಗಿದ್ದು, 18 ಅಡಿ ವ್ಯಾಸದ ಪೈಪ್‌ಗಳ ಮೂಲಕ ನೀರು ಹರಿಸಲು ಕಬ್ಬಿಣದ ಪೈಪ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ. ಭಾರೀ ಗಾತ್ರದ ಟ್ರಕ್‌ಗಳಲ್ಲಿ ಕಬ್ಬಿಣದ ಶೀಟ್‌ಗಳನ್ನು  ಹೊತ್ತು ತಂದು, 20 ಎಕರೆಗೂ ಹೆಚ್ಚು ವಿಸ್ತಾರದ ಮೈದಾನಗಳಲ್ಲಿ ಪೈಪ್‌ ಗಳನ್ನು ಸಾಲು ಸಾಲಾಗಿ ಪೇರಿಸಿಡಲಾಗಿದೆ.

ಅಂದರೆ ಎತ್ತಿನ ಹೊಳೆ ಯೋಜನೆಯಲ್ಲಿ ಒಟ್ಟು ಎಂಟು ಒಡ್ಡುಗಳನ್ನು ನಿರ್ಮಿಸುವ ಉದ್ದೇಶವಿದ್ದು ಆ ಪೈಕಿ ಎರಡು ಒಡ್ಡುಗಳ ಕಾಮಗಾರಿ ಪ್ರಗತಿಯಲ್ಲಿದೆ.

ಎಷ್ಟು ಜಮೀನು ಅಗತ್ಯ ?
ಯೋಜನೆಯ ಅಂದಾಜು ವಿವರಗಳೇನನ್ನೂ ಸಂತ್ರಸ್ತರಿಗೆ ನೀಡದೇ ಇದ್ದರೂ, ದೊಡ್ಡ ನಾಗರ ಎಂಬಲ್ಲಿ ಗುರುತ್ವಾಕರ್ಷಣ ಟ್ಯಾಂಕ್‌ ವರೆಗಿನ ಪೈಪ್‌ಲೈನ್‌ ಸಾಗುವ ದಾರಿಯನ್ನು ಗುತ್ತಿಗೆದಾರರು ಗುರುತಿಸಿದ್ದಾರೆ. ಕಾಡು ಮನೆಯಿಂದ ಬರುವ ಪೈಪ್‌ಲೈನ್‌ ಕೂಡ ಇದೇ ಟ್ಯಾಂಕ್‌ಗೆ ಸೇರಲಿದೆ.

ಕಾಡುಮನೆಯಿಂದ ಗುರ್ಜನಹಳ್ಳಿ, ಮಲ್ಲಗದ್ದೆ, ನಡಹಳ್ಳಿ, ದೇಕಲ, ಹಾರ್ಲೆ, ಗಾಣದ ಹೊಳೆ, ಹೆನ್ಲಿ ಮೂಲಕ ಹೆಬ್ಬಸಾಲೆವರೆಗೆ ಒಂದು ಪೈಪ್‌ನಲ್ಲಿ ನೀರು ಬರಲಿದೆ. ಇನ್ನು ನಾಲ್ಕು ಭಾರಿ ಪೈಪ್‌ಗಳು ಎತ್ತಿನ ಹೊಳೆ ಎಂಬ ಒಡ್ಡಿನಿಂದ ನೀರನ್ನು ಕೊಂಡೊಯ್ಯಲಿವೆ. ಈ ಎರಡೂ ಪೈಪ್‌ಲೈನ್‌ಗಳು ಸಾಗುವ ದಾರಿಯಲ್ಲಿ ಸಮೀಕ್ಷೆಗಳು ನಡೆದಿವೆ. ಆದರೆ ಯಾವುದೇ ಅಧಿಕೃತ ನೋಟಿಸ್‌ ನೀಡಿಲ್ಲ. ಯಾವೆಲ್ಲಾ ಹೊಲಗಳ ಮೇಲೆ ಪೈಪ್‌ ಸಾಗುತ್ತವೆ ಎಂಬ ಮಾಹಿತಿಯನ್ನಷ್ಟೇ ನೀಡಿದ್ದಾರೆ ಎನ್ನುತ್ತಾರೆ ಹೆನ್ಲಿಯ ಅಜ್ಜ ಶರಣಪ್ಪ.

ಒಂದು ಪೈಪ್ ಅಳವಡಿಸಲು 10 ಮೀಟರ್‌ ಅಗಲ ಭೂಮಿ ಅಗತ್ಯ. ಇಂತಹ ನಾಲ್ಕು ಪೈಪ್‌ಗಳು ಜೊತೆಯಾಗಿ ಸಾಗುತ್ತವೆ. ಜೊತೆಗೆ ಕಾಮಗಾರಿಗಾಗಿ ರಸ್ತೆ ಮತ್ತಿತರ ಅಗತ್ಯಗಳಿಗಾಗಿ 35 ಅಡಿ ಸೇರಿದಂತೆ ಒಟ್ಟು 247.5 ಅಡಿಯಷ್ಟು ಅಗಲದ ಜಾಗವನ್ನು ಪೈಪ್‌ಲೈನ್‌ ಉದ್ದಕ್ಕೂ ಸ್ವಾಧೀನಪಡಿಸಿಕೊಳ್ಳುವ ನಿರೀಕ್ಷೆ ಇದೆ ಎನ್ನುತ್ತಾರೆ ಹೆಬ್ಬಸಾಲೆ ನಿವಾಸಿಗಳು.

ಗೆಜೆಟ್‌  ನೋಟಿಫಿಕೇಶನ್‌ ಮಾಡದೇ, ಸಾರ್ವಜನಿಕರ ಅಹವಾಲು ಕೇಳದೆಯೇ ಖಾಸಗಿ ಗುತ್ತಿಗೆದಾರರು ಭೂಮಾಲೀಕರ ಜತೆ ಒಪ್ಪಂದ ಮಾಡಿಕೊಂಡು ಆ ಪ್ರಕಾರ ಕಾಮಗಾರಿ ನಡೆಸಲಾಗುತ್ತಿದೆ. ಪ್ರಜಾಪ್ರಭುತ್ವ ಮಾದರಿಯಲ್ಲಿ ಯೋಜನೆಯ ಕೆಲಸಗಳನ್ನು ನಡೆಸುತ್ತಿಲ್ಲ.ಆದ್ದರಿಂದ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎನ್ನುತ್ತಾರೆ ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ ಕಿಶೋರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT