ಸೋಮವಾರ, 23 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಷತ್ತು ನಮ್ಮದು, ಆದರೆ...

Published : 3 ಮೇ 2014, 19:30 IST
ಫಾಲೋ ಮಾಡಿ
Comments

ಕನ್ನಡ ಸಾಹಿತ್ಯ ಪರಿಷತ್ತು ನಮ್ಮದು, ನಮ್ಮ ನಾಡಿನದು, ನನ್ನ ಕನ್ನಡ ಭಾಷೆಯದು ಎಂಬ ಹೆಮ್ಮೆ ನನ್ನಂತಹ ಅನೇಕ ಲೇಖಕರಿಗೆ ಇದೆ. ಆದರೆ ಇದೇ ಭಾವನೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೆಯೇ?

ನನ್ನಂತಹ ಎಷ್ಟೋ ಲೇಖಕರು ಅದರ ಪರಿಧಿಯ ಹೊರಗೇ ಇದ್ದೇವಲ್ಲ! ನಾವು ಗೌರವಿಸಿ ಒಪ್ಪಿಕೊಂಡಿರುವ ಸಂಸ್ಥೆಗೂ, ನಮಗೂ ಕರುಳ ಬಳ್ಳಿಯ ಸಂಬಂಧವೇ ಇಲ್ಲವಲ್ಲ! ಈ ಸಂಸ್ಥೆಯು ನಿಜವಾಗಿಯೂ ಅಖಂಡ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೇ? ನಮ್ಮಂತಹ ಅನೇಕ ಲೇಖಕರನ್ನು ಪರಿಷತ್ತು ಹತ್ತಿರಕ್ಕೆ, ಒಳಕ್ಕೆ ಕರೆದುಕೊಂಡಿದೆಯೇ?

ನನ್ನ ಈ ಇಪ್ಪತ್ತೈದು ವರ್ಷಗಳ ಸಾಹಿತ್ಯದ ಪಯಣದಲ್ಲಿ ಒಮ್ಮೆಯೂ ಈ ಸಂಸ್ಥೆಯ ಬಾಗಿಲ ಬಳಿ ಹೋಗಬೇಕು ಎಂದು ಅನಿಸದೇ ಹೋಯಿತಲ್ಲ, ಯಾಕೆ? ಕನ್ನಡ ಸಾಹಿತ್ಯ, ಸಂಸ್ಕೃತಿ, ಸಮಾಜ, ಭಾಷೆಗಳಿಗೆ ಪರಿಷತ್ತಿನಿಂದ ಏನಾಗಿದೆ? ಆರು ಕೋಟಿಗೂ ಮೇಲೇರುತ್ತಿರುವ ಕನ್ನಡಿಗರ ಪೈಕಿ ಕೇವಲ ಒಂದೂವರೆ ಲಕ್ಷ ಜನರು ಮಾತ್ರ ಪರಿಷತ್ತಿಗೆ ‘ಸದಸ್ಯ’ರಾಗಿದ್ದಾರೆ. ಇವರ ನಡುವೆ ಒಳ್ಳೆಯ ಲೇಖಕರು ಎನಿಸಿಕೊಂಡ ಸದಸ್ಯರ ಸಂಖ್ಯೆಯು ನೂರನ್ನೂ ದಾಟುವುದಿಲ್ಲ. ಇದು ಏನನ್ನು ಧ್ವನಿಸುತ್ತದೆ? ಈ ಸ್ಥಿತಿಗೆ ಯಾರು ಹೊಣೆ?

ಈ ಪ್ರಶ್ನೆಗಳಿಗೆ ಪರಿಷತ್ತು ತಕ್ಕ ಉತ್ತರ ಕೊಡಲಾರದು. ಬೃಹತ್ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವುದರಿಂದ ಕನ್ನಡ ಸಾಹಿತ್ಯವನ್ನು ಬೆಳೆಸುತ್ತಿದ್ದೇವೆ ಎಂದೆನ್ನಲಾಗದು. ಪರಿಷತ್ತಿನ ಅಂತಹ ಅದ್ದೂರಿ ‘ಸಾಹಿತ್ಯ’ ಸಮ್ಮೇಳನಗಳು ವಿಫಲವಾಗಿರುವುದೇ ಹೆಚ್ಚು. ಕನ್ನಡಿಗರು ಸಮಾವೇಶಗೊಳ್ಳುವುದು ಒಳ್ಳೆಯದೇ, ಆ ಹೆಸರಲ್ಲಿ ಕನ್ನಡಿಗರ ಹಿತಕ್ಕಾಗಿ ದನಿಗೂಡಿಸುವುದು ಇನ್ನೂ ಒಳ್ಳೆಯದು. ಆದರೆ ಪರಿಷತ್ತು ಈ ನೂರು ವರ್ಷಗಳ ಕಾಲಮಾನದಲ್ಲಿ ಅಂತಹ ಮಹತ್ವದ್ದನ್ನು ಏನು ತಾನೆ ಮಾಡಿದೆ ಎನ್ನುವ ಪ್ರಶ್ನೆಯನ್ನೂ ಶತಮಾನೋತ್ಸವ ಸಂದರ್ಭದಲ್ಲಿ ತಾನು ಕೇಳಿಕೊಳ್ಳಬೇಕಾಗಿದೆ.

ಸಾಂಪ್ರದಾಯಿಕ ಜಾಡಿನ ಸಾಹಿತ್ಯ ಪರಿಷತ್ತಿಗೆ ವರ್ತಮಾನದ ಹೊಸ ಅಲೆಯ ಸಂವೇದನೆ ಇಲ್ಲ. ಇದಕ್ಕೆ ಜಾಗತೀಕರಣದ ಕನ್ನಡ ತಲೆಮಾರುಗಳ ಬಗ್ಗೆ ತಕ್ಕ ತಿಳಿವಳಿಕೆಯೂ ಇಲ್ಲ. ಸಾಹಿತ್ಯದ ಹಳೆಯ ಮೌಲ್ಯಗಳೇ ಪರಿಷತ್ತಿಗೆ ಪರಮಪ್ರಿಯ ವಿಚಾರಗಳು. ಅದರ ಪುರೋಗಾಮಿ ಮನೋಧರ್ಮ ಸಾಹಿತ್ಯ ಮತ್ತು ಸಂಸ್ಕೃತಿಯ ಅನೇಕ ತಾರತಮ್ಯ ಮತ್ತು ಪೂರ್ವಗ್ರಹಗಳನ್ನು ಹಿಂಬಾಲಿಸಿತೇ ವಿನಾ ಭಗ್ನಪಡಿಸಲು ಮುಂದಾಗಲಿಲ್ಲ.

ದಲಿತ, ಬಲಿತ ಅಥವಾ ಬಂಡಾಯ ಎಂಬುದೆಲ್ಲ ಸಾಹಿತ್ಯದಲ್ಲಿ ಇಲ್ಲ ಅಥವಾ ಅದರ ಅವಶ್ಯಕತೆ ಇಲ್ಲ ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದರ ಕಪ್ಪುಚುಕ್ಕೆಯನ್ನು ಸಾಹಿತ್ಯ ಪರಿಷತ್ತು ಎಷ್ಟು ಮಾಡಿದರೂ ಈಗಲೂ ಅದನ್ನು ಅಳಿಸಿಕೊಳ್ಳಲು ಆಗುತ್ತಿಲ್ಲ. ಒಂದು ಕಾಲಕ್ಕೆ ದಲಿತ–ಬಂಡಾಯ ಸಾಹಿತ್ಯ ಪಂಥಗಳು ಪರಿಷತ್ತನ್ನು ಬಹಿಷ್ಕರಿಸಿದ್ದವು. ಸಾಹಿತ್ಯ ಸಂವೇದನೆಯನ್ನು ವಿಸ್ತರಿಸಿದ ಅನೇಕ ನವ್ಯ ಲೇಖಕರು ಪರಿಷತ್ತಿನಿಂದ ದೂರವೇ ಉಳಿದಿದ್ದರು. ಸಾಹಿತ್ಯವನ್ನು, ಸಂಸ್ಕೃತಿಯನ್ನು, ಭಾಷೆಯನ್ನು ಪರಿಷತ್ತು ಅಲಂಕಾರಿಕವಾಗಿ ಕಂಡಿದ್ದೇ ಹೆಚ್ಚು. ಯಾವುದೇ ಸಾಹಿತ್ಯದ ಪಲ್ಲಟಗಳು ಆ ಭಾಷೆಯ ಸಮಾಜಗಳ ಚಳವಳಿ, ಹೋರಾಟ, ದಂಗೆ ಇದ್ದಂತೆ. ಸಾಹಿತ್ಯ ಪರಿಷತ್ತು ದಂಗೆಯ ಯಾವ ಹಾದಿಯಲ್ಲೂ ಹೆಜ್ಜೆ ಹಾಕಿದ್ದೇ ಇಲ್ಲ.

ಕನ್ನಡನಾಡಿನ ಅಲಂಕಾರಿಕ, ಸಾಂಪ್ರದಾಯಿಕ ಯಜಮಾನನಂತೆ ಸಾಹಿತ್ಯ ಪರಿಷತ್ತು ಈಗಲೂ ಇದೆ. ಅದರ ಯಜಮಾನಿಕೆಯಿಂದ ಯಾವ ದೊಡ್ಡ ಸಾಹಿತಿಯೂ ಹುಟ್ಟಲಿಲ್ಲ. ಅಂತಹ ಯಾವ ಸಾಹಿತ್ಯ ಪಂಥವೂ ನಿರ್ಮಾಣವಾಗಲಿಲ್ಲ. ನಾಡಿನ ಜನ ಚಳವಳಿಗಳತ್ತ ವಿಶೇಷ ಗಮನವನ್ನೂ ಕೊಡಲಿಲ್ಲ. ಬೂಸಾ ಚಳವಳಿಯನ್ನು ಪರಿಷತ್ತು ಒಳಗೊಳಗೇ ನಿಂದಿಸಿತು. ರೈತ ಹಾಗೂ ದಲಿತ ಚಳವಳಿಗಳತ್ತ ಉಪೇಕ್ಷೆ ತೋರಿತು. ಇನ್ನು ಮಹಿಳೆಯರು, ಆದಿವಾಸಿಗಳ ಬಗ್ಗೆ ಹೇಗೆ ನಡೆದುಕೊಂಡಿದೆ ಎಂದು ಬಿಡಿಸಿ ಹೇಳಬೇಕಾಗಿಲ್ಲ.

ಸಾಹಿತ್ಯ ಪರಿಷತ್ತು ಆಧುನಿಕ ಮನೋಧರ್ಮದ, ವಿಮರ್ಶಾತ್ಮಕ ನಿಲುವಿನ, ವೈಚಾರಿಕ ಜಾಗೃತಿಯ ಹಾಗೂ ಸಾಮಾಜಿಕ ನ್ಯಾಯದ ನೆಲೆಯ ಲೇಖಕರನ್ನು ಹೊರಗಿಟ್ಟಿದ್ದೇ ಅಥವಾ ಅವರನ್ನು ಒಳಗೊಳ್ಳಲು ಪ್ರಯತ್ನ ನಡೆಸದಿರುವುದೇ ಅದರ ದೊಡ್ಡ ಲೋಪವಾಗಿದೆ. ಸಾಹಿತ್ಯ ಪರಿಷತ್ತು ಶುದ್ಧಾಂಗವಾಗಿ ಸಾಹಿತ್ಯ ಸಂಗತಿಗೇ ಮೀಸಲಿರಬೇಕೆಂದು ಯಾರೂ ಬಯಸುವುದಿಲ್ಲ.

ಆದರೆ ‘ಸಾಹಿತ್ಯ’ ಸಂಸ್ಥೆಯ ಈ ಪರಿಷತ್ತಿನಲ್ಲಿ ಎಷ್ಟು ಜನ ನಿಜವಾದ ‘ಸಾಹಿತಿ’ಗಳಿದ್ದಾರೆ. ಸಾಹಿತಿ, ಲೇಖಕ, ಬರಹಗಾರ ಎಂಬ ಹೆಸರಿನ ಎಷ್ಟೊಂದು ನಕಲಿ ಲೇಖಕರು ಪರಿಷತ್ತಿನಲ್ಲಿ ತುಂಬಿ ಹೋಗಿದ್ದಾರಲ್ಲ, ಅಂತಹವರೇ ಸಾಹಿತ್ಯ ಸಮ್ಮೇಳನವನ್ನು ರೂಪಿಸಿದರೆ ಏನಾಗಬಹುದು. ಗಿಲೀಟಿನ ಸಾಹಿತಿಗಳು ಸಾಹಿತ್ಯ ಸಂವೇದನೆಯ ವಿದೂಷಕರಂತೆ ಠಳಾಯಿಸುವಾಗ ಅಲ್ಲಿ ಶ್ರದ್ಧೆಯ ಸೃಷ್ಟಿಶೀಲ ಲೇಖಕರು ಹೆದರಿ ಓಡಿ ಹೋಗುವುದಿಲ್ಲವೆ?

ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಸದಸ್ಯರ ಜಾತಿಯ ಬಲಾಬಲದ ಆಧಾರದ ಮೇಲೆ ತಾನೆ ಅಧ್ಯಕ್ಷರು ಗದ್ದುಗೆ ಹಿಡಿಯುತ್ತಾರೆ. ತಾಲ್ಲೂಕು ಹಾಗೂ ಜಿಲ್ಲಾ ಸಾಹಿತ್ಯ ಪರಿಷತ್ತಿನ ಘಟಕಗಳ ಪದಾಧಿಕಾರಿಗಳ ಆಯ್ಕೆಯು ಯಾವ ರಾಜಕೀಯ ಪಕ್ಷಗಳ ಚುನಾವಣೆಗೂ ಕಡಿಮೆಯಿಲ್ಲ. ಕೆಲವು ಅಧ್ಯಕ್ಷರು ತಮ್ಮ ಜಾತಿಯ ಪ್ರಾಬಲ್ಯ ಮುಂದಿರಲಿ ಎಂಬ ಕಾರಣದಿಂದಾಗಿಯೇ ಸಾವಿರಾರು ಮಂದಿ ಸ್ವಜಾತಿಯವರನ್ನು ಪರಿಷತ್ತಿಗೆ ಸದಸ್ಯರನ್ನಾಗಿಸುತ್ತಾರೆ. ಇದರಿಂದ ಕನ್ನಡ ಸಾಹಿತ್ಯ, ಸಂಸ್ಕೃತಿ, ಭಾಷೆಗಳಿಗೆ ಯಾವ ಲಾಭವಿದೆ?

ಪ್ರಸ್ತುತ ವಿಶ್ವ ಸಾಹಿತ್ಯ ಒಂದು ಹಂತಕ್ಕೆ ಈಗ ಬಂದು ಸೊರಗುತ್ತಿದೆ. ಜಗತ್ತಿನ ಅಂಚಿನ ಕನ್ನಡದಂತಹ ಭಾಷೆಗಳಿಂದ ವೈವಿಧ್ಯವಾದ ಸಾಹಿತ್ಯ ಹುಟ್ಟುತ್ತಿದೆ. ಕನ್ನಡ ಸಾಹಿತ್ಯದ ಅಂತಹ ಸಾಮರ್ಥ್ಯವನ್ನು ಜಗತ್ತಿಗೆ ಮುಟ್ಟಿಸುವ ಕೆಲಸವನ್ನು ಪರಿಷತ್ತು ಮಾಡಬಹುದಿತ್ತು. ಅದರತ್ತ ಅದಕ್ಕೆ ಗಮನವೇ ಇಲ್ಲ. ಸಾಹಿತ್ಯದ ದೊಂಬಿ ಜಾತ್ರೆಯೇ ಅದಕ್ಕೆ ಸಾಕಾಗಿದೆ.

ಅಂತಹ ದೊಂಬಿಯಿಂದ ಹೊಸ ತಲೆಮಾರಿಗೆ ಏನೂ ಸಿಗುವುದಿಲ್ಲ. ಜಗತ್ತಿನ ಬೇರೆ ಬೇರೆ ಸಾಹಿತ್ಯ–ಸಂಸ್ಕೃತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಸೇತುವೆ ನಿರ್ಮಿಸಬೇಕಿತ್ತು. ಭಾರತೀಯ ಭಾಷೆಗಳ ಜೊತೆಗೆ ಕನ್ನಡ ಸಾಹಿತ್ಯದ ನೆಂಟಸ್ತಿಕೆಯನ್ನು ವ್ಯಾಪಕವಾಗಿ ಮಾಡಬಹುದಾಗಿತ್ತು. ಸಮಾಜದ ಬೇರೆ ಬೇರೆ ನೆಲೆಯ ಬದುಕಿನ ಪ್ರತಿಧ್ವನಿಯಾಗಿಸಲು ಸಾಹಿತ್ಯಿಕ ಚಟುವಟಿಕೆಗಳನ್ನು ಮಾಡಬಹುದಿತ್ತು. ಜಾತ್ಯತೀತವಾದ ಸಾಹಿತ್ಯ ಸಂವೇದನೆಯನ್ನಾದರೂ ಬಿತ್ತಬಹುದಾಗಿತ್ತು. ಅದಕ್ಕೆ ವಿರುದ್ಧವಾದ ಚಟುವಟಿಕೆಗಳೇ ಪರಿಷತ್ತಿನಲ್ಲಿ ಹೆಚ್ಚಾಗಿ ನಡೆದಂತಿದೆ.

ಒಂದು ಶತಮಾನದ ಅವಧಿಯ ಈ ಸಂಸ್ಥೆ ಇನ್ನೂ ಎಷ್ಟೋ ಸಮುದಾಯಗಳನ್ನು ಮುಟ್ಟಿಸಿಕೊಂಡೇ ಇಲ್ಲ. ಸಾಹಿತ್ಯದ ಮೂಢನಂಬಿಕೆಗಳಿಂದ ಸ್ವತಃ ಪರಿಷತ್ತು ಕೂಡ ಬಿಡಿಸಿಕೊಂಡಿಲ್ಲ. ಸರ್ಕಾರ ವರ್ಷಕ್ಕೊಮ್ಮೆ ಕೋಟಿಗೂ ಮಿಗಿಲಾಗಿ ಅನುದಾನ ನೀಡಿ ತನ್ನ ಕರ್ತವ್ಯ ಮುಗಿಯಿತು ಎಂದು ಕೈ ತೊಳೆದುಕೊಳ್ಳುವುದು ಕೂಡ ತಪ್ಪು. ಸಾಹಿತ್ಯ ಪರಿಷತ್ತು ಕನ್ನಡ ಭಾಷೆ ಮತ್ತು ಕನ್ನಡಿಗರ ಹೆಸರಿನಲ್ಲಿ ರಾಜಕೀಯ ಮಾಡಿ ಕೆಲವೊಮ್ಮೆ ಸರ್ಕಾರಗಳನ್ನೇ ಹೆದರಿಸುವಷ್ಟು ‘ಬಲ’ ತೋರಿದೆ.

ಸಾಹಿತ್ಯ ಪರಂಪರೆಯು ಬೆಳೆಯುವುದು ಈ ಬಗೆಯಲ್ಲಿ ಅಲ್ಲ. ಕನ್ನಡ ಭಾಷೆ ಕೂಡ ಜಾಗತಿಕ ಮಟ್ಟದಲ್ಲಿ ನೆಲೆಯೂರಲು ಏನು ಮಾಡಬೇಕು ಎಂಬುದನ್ನು ಇನ್ನಾದರೂ ಪರಿಷತ್ತು ಯೋಚಿಸಿ ಕಾರ್ಯ ರೂಪಿಸಬೇಕು. ಸಾಹಿತ್ಯದ ಜಾತ್ರೆಗಳ ಗುಣಮಟ್ಟವನ್ನು ಸುಧಾರಿಸಬೇಕು. ಮಕ್ಕಳಿಗೆ ಸಾಹಿತ್ಯ, ಭಾಷೆ, ಸಂಸ್ಕೃತಿಗಳ ಬಗ್ಗೆ ಅರಿವು ಮೂಡಿಸುವಂತಹ ಸಾಹಿತ್ಯ ಕೃತಿಗಳನ್ನು ಅವರ ಈ ಕಾಲದ ‘ಓದಿನ’ ರೀತಿಗೆ ತಕ್ಕಂತೆ ರೂಪಿಸಿ ಕನ್ನಡ ತಂತ್ರಾಂಶದ ಕಡೆಗೂ ಗಮನ ಕೊಡಬೇಕು.

ಭಾಷೆಯ ಲೆಕ್ಕದಲ್ಲಿ ನೋಡಿದರೂ ಕನ್ನಡದ ಒಳಗೇ ಕನ್ನಡದ ಹಲವು ದಾರಿಗಳಿವೆ. ಆ ಎಲ್ಲ ಬಗೆಯ ಕನ್ನಡಗಳನ್ನು ಪರಿಷತ್ತು ಪರಿಗಣಿಸಲೇ ಇಲ್ಲ. ಕನ್ನಡದ ಜೊತೆ ಅವಿನಾಭಾವ ಸಂಬಂಧವನ್ನು ರೂಪಿಸಿಕೊಂಡಿರುವ ತುಳು, ಕೊಂಕಣಿ, ಕೊಡವ ಹಾಗೂ ಅನೇಕ ಬುಡಕಟ್ಟು ಭಾಷೆಗಳತ್ತ ಪರಿಷತ್ತು ತೋರಿರುವ ಅಸಡ್ಡೆ ಅಷ್ಟಿಷ್ಟಲ್ಲ. ನೂರರ ಹಿರಿತನದ ಸಂದರ್ಭದಲ್ಲಾದರೂ ಅಂಚಿನ ಸಮಾಜಗಳ ಭಾಷೆ, ಸಾಹಿತ್ಯ, ಸಂಸ್ಕೃತಿಗಳನ್ನು ಪರಿಷತ್ತು ಗಮನಿಸಬೇಕು. ಅದೇ ವೇಳೆಗೆ ಇಪ್ಪತ್ತೊಂದನೆಯ ಶತಮಾನದ ವೇಗದ ಚಲನೆಗೆ ಬೇಕಾದ ‘ಜ್ಞಾನ’ ಸಾಮರ್ಥ್ಯವನ್ನು ರೂಪಿಸುವ ಹೊಣೆಯನ್ನೂ ಹೊತ್ತುಕೊಳ್ಳಬೇಕಾಗಿದೆ

 ಮಹಿಳಾ ಸಾಹಿತ್ಯ, ಸಂಸ್ಕೃತಿಗಾಗಿ ಹೊಸ ಬಗೆಯ ಅವಕಾಶಗಳನ್ನು ಸೃಷ್ಟಿಸಿ ಅವರನ್ನು ವಿಶೇಷವಾಗಿ ಒಳಗು ಮಾಡಿಕೊಳ್ಳಬೇಕು. ಕನ್ನಡ ಸಂವರ್ಧನೆಯ ಅಖಂಡ ಚಿಂತನೆಗಳನ್ನು ಬಿ.ಎಂ.ಶ್ರೀ ಅವರಿಂದ ಹಿಡಿದು ಇವತ್ತಿನ ಅನೇಕರ ತನಕ ಒಳ್ಳೊಳ್ಳೆಯ ಚಿಂತನೆಗಳು ಹರಿದು ಬಂದಿವೆ. ವಿಷಾದ ಎಂದರೆ ಅವನ್ನು ಪಾಲಿಸುವ ರೂಪಿಸುವ ಜಾರಿಗೊಳಿಸುವ ದಾರಿಯಲ್ಲೇ ಲೋಪಗಳಾಗಿರುವುದು. ಸಾಹಿತ್ಯ ಪರಿಷತ್ತು ಕೇವಲ ಗದ್ದುಗೆ ಅಲ್ಲ; ಅಲ್ಲಿ ಕನ್ನಡ ಸಮಾಜದ ಭವಿಷ್ಯವನ್ನು ರೂಪಿಸಬೇಕಾದ ಅಂತಃಕರಣವೂ, ಸಾಮರ್ಥ್ಯವೂ ಮತ್ತು ಮುನ್ನೋಟವೂ ಮುಖ್ಯ.

ಸಾಹಿತ್ಯ ಪರಿಷತ್ತಿನ ಸಂವಿಧಾನವೇ ಬದಲಾಗಬೇಕಾಗಿದೆ. ಅದಕ್ಕಾಗಿ ಹೊಸದೊಂದು ನೀತಿ ಸಂಹಿತೆಯನ್ನು ರೂಪಿಸಬೇಕಾಗಿದೆ. ಅದರ ಚುನಾವಣೆ ಹಾಗೂ ಸದಸ್ಯತ್ವದ ಸ್ವರೂಪವನ್ನು ಪರಿಶೀಲಿಸಬೇಕಾಗಿದೆ. ಪರಿಷತ್ತಿನ ಪರಮಾಧಿಕಾರವನ್ನು ನ್ಯಾಯವಂತ ಸಾಮಾನ್ಯನೊಬ್ಬ ಕೂಡ ಪ್ರಶ್ನಿಸುವ, ಸರಿಪಡಿಸುವ ಅವಕಾಶಗಳು ಸಾಧ್ಯವಾಗಬೇಕು. ನೂರನೇ ವರ್ಷಕ್ಕೆ ಕಾಲಿರಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ನನ್ನದೂ ಕೂಡ. ಅದು ಇನ್ನಾದರೂ ವಿಶಾಲವಾಗಿ ಕನ್ನಡ ಸಾಹಿತ್ಯ, ಸಂಸ್ಕೃತಿ, ಭಾಷೆಗಳ ತವರು ಮನೆಯಾಗಲಿ ಎಂದು ಆಶಿಸುವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT