ಸೋಫಿಯಾ, ಬಲ್ಗೇರಿಯಾ- ಕಳೆದ ವಾರ ರಷ್ಯಾದ ಯುದ್ಧ ವಿಮಾನಗಳು ಸಿರಿಯಾದ ಹೋಮ್ಸ್ ಪಟ್ಟಣದ ಸಮೀಪ ಸರ್ಕಾರ ವಿರೋಧಿ ಪಡೆಗಳ ಮೇಲೆ ಬಾಂಬ್ ದಾಳಿ ನಡೆಸಿದ ನಂತರ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ನನ್ನಲ್ಲಿ ಹೀಗೆ ತಮ್ಮ ಅತೃಪ್ತಿ ವ್ಯಕ್ತಪಡಿಸಿದರು: ‘ಸಿರಿಯಾದಲ್ಲಿ ರಷ್ಯಾ ಮಾಡುತ್ತಿರುವುದು ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ಹೋರಾಡುವ ಪ್ರಯತ್ನ ಅಲ್ಲ; ಇದು ಹಳೆಯ ಕಾಲದ ಪ್ರಾಯೋಗಿಕ ರಾಜಕಾರಣವೂ ಅಲ್ಲ. ನಾವು ಉಕ್ರೇನ್ ವಿಷಯ ಮರೆಯುವಂತೆ ಮಾಡುವ ಸಿನಿಕ ಪ್ರಯತ್ನವೂ ಅಲ್ಲ. ನಮಗೆ ನೋವು ಮಾಡಬೇಕು ಎಂಬುದಷ್ಟೇ ಪುಟಿನ್ ಉದ್ದೇಶ’.

ರಷ್ಯಾ ಒಂದು ‘ಹಾಳುಗೆಡವುವ ಶಕ್ತಿ’ ಎಂಬುದು ಅಮೆರಿಕದ ಹೆಚ್ಚಿನ ಜನರಲ್ಲಿ ಇರುವ ಭಾವನೆಯಾಗಿದೆ. ಹಾಗಾದರೆ ಈ ಹಾಳುಗೆಡವುವ ಶಕ್ತಿಗೆ ನಿಜಕ್ಕೂ ಬೇಕಾಗಿರುವುದು ಏನು? ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವಮಾನಿತನಾಗುವುದನ್ನು ನೋಡುವುದಕ್ಕಾಗಿ ಮಾತ್ರ ಸಿರಿಯಾದಲ್ಲಿ ರಷ್ಯಾ ಆಟವಾಡುತ್ತಿದೆಯೇ? ಅಮೆರಿಕದ ಅಧಿಕಾರದ ಮೌಲ್ಯಕ್ಕೆ ಹಾನಿ ಉಂಟು ಮಾಡುವುದಷ್ಟೇ ರಷ್ಯಾದ ‘ಹಾಳುಗೆಡವುವಿಕೆಯ’ ಏಕೈಕ ಉದ್ದೇಶವೇ?

ಈ ಕಾರಣಕ್ಕಾಗಿ ಸಿರಿಯಾದಲ್ಲಿ ರಷ್ಯಾ ಕಾರ್ಯಾಚರಣೆ ನಡೆಸುತ್ತಿದೆ ಎಂಬುದು ಹೆಚ್ಚು ನಿಖರವಾದ ಸತ್ಯ: ಅಮೆರಿಕಕ್ಕೆ ಪಾಠವೊಂದನ್ನು ಕಲಿಸಲು ರಷ್ಯಾ ಬಯಸುತ್ತಿದೆ. ಅದು ಸಾಕಷ್ಟು ಬೆಲೆಯುಳ್ಳದ್ದಾಗಿರಬೇಕು ಎಂದೂ ರಷ್ಯಾ ಬಯಸುತ್ತಿದೆ. ತನ್ನ ಮಾತಿನ ಆಡಂಬರದಿಂದ ಉತ್ತೇಜನಗೊಂಡು ಸಂಘರ್ಷಭರಿತ ಕ್ರಾಂತಿಯ ನಂತರ ಉಂಟಾಗುವ ಆಂತರಿಕ ಯುದ್ಧದಲ್ಲಿ ಮಧ್ಯ ಪ್ರವೇಶಿಸಲು ಸಿದ್ಧವಾಗಿರಬೇಕು ಅಥವಾ ಕ್ರಾಂತಿಗೆ ಪ್ರಚೋದನೆ ನೀಡುವ ಪ್ರಯತ್ನವನ್ನು ಕೈಬಿಡಬೇಕು ಎಂಬುದನ್ನು ಅಮೆರಿಕಕ್ಕೆ ತೋರಿಸಿಕೊಡುವುದು ರಷ್ಯಾದ ಉದ್ದೇಶ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಅತ್ಯಂತ ಸ್ಮರಣೀಯ ವಾಕ್ಯ ಹೀಗಿದೆ: ‘ನೀವು ಏನು ಮಾಡಿದ್ದೀರಿ ಎಂಬುದು ನಿಮಗೆ ಮನವರಿಕೆ ಅಗಿದೆಯೇ?’

ಸಿರಿಯಾದ ಪರಿಸ್ಥಿತಿಯಲ್ಲಿ ವಾಸ್ತವಿಕ ರಾಜಕಾರಣದ ಎಳೆಯನ್ನು ಕಾಣಬಹುದಾದರೂ ಅಲ್ಲಿ ಎರಡು ಭಿನ್ನ ಚಿಂತನಕ್ರಮಗಳ ಅಸ್ತಿತ್ವವನ್ನೂ ಕಾಣಬಹುದು. ಈಗಿನ ಜಾಗತಿಕ ಅಸ್ಥಿರತೆಯ ಮೂಲ ಯಾವುದು ಎಂಬ ಬಗ್ಗೆ ತದ್ವಿರುದ್ಧ ಸಿದ್ಧಾಂತಗಳನ್ನು ಹೊಂದಿರುವುದೇ ಪುಟಿನ್ ಮತ್ತು ಒಬಾಮ ನಡುವಣ ಭಿನ್ನಾಭಿಪ್ರಾಯಗಳಿಗೆ ಕಾರಣ ಎಂದು ಅರ್ಥ ಮಾಡಿಕೊಳ್ಳಬಹುದು. ಅನಿಷ್ಟ ಯಥಾಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗಲು ನಿರಂಕುಶಾಧಿಕಾರಿಗಳು ನಡೆಸುವ ಪ್ರಯತ್ನದ ಫಲವೇ ಜಾಗತಿಕ ಅಸ್ಥಿರತೆಯ ಕಾರಣ ಎಂದು ಅಮೆರಿಕ ಭಾವಿಸಿದೆ. ಆದರೆ, ಪ್ರಜಾಸತ್ತೆಯ ಬಗ್ಗೆ ಅಮೆರಿಕ ಹೊಂದಿರುವ ಅತಿಯಾದ ಗೀಳೇ ಎಲ್ಲದಕ್ಕೂ ಕಾರಣ ಎಂದು ರಷ್ಯಾ ವಾದಿಸುತ್ತಿದೆ.

ಜಗತ್ತಿನ ಕಾರ್ಮಿಕರೆಲ್ಲರೂ ಒಂದಾಗಿ ಎಂದು ಹಿಂದಿನ ಸೋವಿಯತ್ ಒಕ್ಕೂಟ ಕರೆ ಕೊಟ್ಟರೆ, ಈಗಿನ ರಷ್ಯಾ ಜಗತ್ತಿನ ಎಲ್ಲ ಸರ್ಕಾರಗಳಿಗೆ ಮತ್ತು ಎಲ್ಲ ರೀತಿಯ ಸರ್ಕಾರಗಳಿಗೆ ಒಗ್ಗಟ್ಟಾಗುವಂತೆ ಕರೆ ನೀಡುತ್ತಿದೆ. ಚರಿತ್ರೆ ನಿಜವಾಗಿಯೂ ‘ಚಲಿಸುತ್ತಿರುವ ವ್ಯಂಗ್ಯ’. ಕ್ರಾಂತಿಕಾರಿ ಸೋವಿಯತ್ ಒಕ್ಕೂಟದ ಉತ್ತರಾಧಿಕಾರಿಯಾಗಿರುವ ರಷ್ಯಾ, ಜನಶಕ್ತಿಯ ಮೇಲೆ ತನಗಿದ್ದ ನಂಬಿಕೆಯನ್ನು ಕೈಬಿಟ್ಟಿದೆ.

ಇಂದು ಮಾಸ್ಕೊದ ಪುಸ್ತಕದ ಅಂಗಡಿಗಳಲ್ಲಿ ದೊರೆಯುವ 1917ರ ಬಾಲ್ಶೆವಿಕ್ ಕ್ರಾಂತಿಯ ಬಗೆಗಿನ ಹೆಚ್ಚಿನ ಜನಪ್ರಿಯ ಇತಿಹಾಸ ಪುಸ್ತಕಗಳು ಲೆನಿನ್ ಮತ್ತು ಅವರ ಸಂಗಾತಿಗಳ ಕತೆಯನ್ನು ಜನ ಬೆಂಬಲದ ಕ್ರಾಂತಿ ಎಂದು ವಿವರಿಸದೆ ಪದಚ್ಯುತಿ ಯತ್ನ ಎಂದು ಹೇಳುತ್ತವೆ. ಇದರ ಸೂತ್ರಧಾರರು ಯಾರು ಎಂಬ ವಿಷಯದಲ್ಲಿ ನಿಮಗೆ ಆಯ್ಕೆಯೂ ಇದೆ- ಜರ್ಮನಿಯ ಸೇನಾ ಸಮಿತಿ ಅಥವಾ ಬ್ರಿಟನ್‌ನ ಗುಪ್ತಚರ ಏಜೆಂಟರು. ಯಾವುದೇ ಕಾಲದಲ್ಲಿ ಮತ್ತು ಯಾವುದೇ ಸ್ಥಳದಲ್ಲಿ ಜನರು ಅಧಿಕಾರಕ್ಕೆ ಬೇಡಿಕೆ ಇರಿಸಿದಾಗ ಪರಿಸ್ಥಿತಿ ಕೆಟ್ಟು ಹೋಗುತ್ತದೆ. ನಿಷ್ಠೆ ಮತ್ತು ಸ್ಥಿರತೆಯೇ ರಷ್ಯಾದ ಅಭದ್ರತೆ ಮತ್ತು ಭವಿಷ್ಯದ ಬಗೆಗಿನ ಭಯದ ಜಗತ್ತಿನ ಕೇಂದ್ರವಾಗಿದ್ದವು.

ರಷ್ಯಾದ ಚಿಂತೆಯ ವಿಷಯವಾಗಿರುವುದು ಸಿರಿಯಾ ಅಲ್ಲ, ಅಥವಾ ಉಕ್ರೇನ್ ಕೂಡ ಅಲ್ಲ, ಬದಲಿಗೆ ಮಧ್ಯ ಏಷ್ಯಾ. ಸೋವಿಯತೋತ್ತರ ಈ ಸಂದರ್ಭದಲ್ಲಿ ಇಲ್ಲಿನ ನಿರಂಕುಶಾಧಿಕಾರಿ ನಾಯಕರು ವೃದ್ಧರಾಗುತ್ತಿದ್ದಾರೆ, ಅರ್ಥ ವ್ಯವಸ್ಥೆಗಳು ಸ್ಥಗಿತಗೊಳ್ಳುತ್ತಿವೆ, ನಿರುದ್ಯೋಗಿಗಳಾಗಿರುವ ಲಕ್ಷಾಂತರ ಅಶಾಂತ ಯುವ ಜನರು ವಲಸೆ ಹೋಗಲು ಕಾತರರಾಗಿದ್ದಾರೆ ಮತ್ತು ಮೂಲಭೂತವಾದಿ ಇಸ್ಲಾಂ ಚಿಂತನೆ ಬಲಗೊಳ್ಳುತ್ತಿದೆ. ಈ ಪ್ರದೇಶದ ಸ್ಥಿರತೆಯ ಹೊಣೆಗಾರಿಕೆ ತನ್ನದು ಎಂದು ರಷ್ಯಾ ಭಾವಿಸುತ್ತಿದೆ. ಆದರೆ ಅಸ್ಥಿರತೆ ಇಲ್ಲಿಗೆ ಅಡಿಯಿಡುತ್ತಿದೆ ಎಂಬ ಭಯ ರಷ್ಯಾವನ್ನು ಕಾಡುತ್ತಿದೆ. ಮಧ್ಯ ಏಷ್ಯಾ ಈಗ ರಷ್ಯಾಕ್ಕೆ ದಶಕದ ಹಿಂದಿನ ಮಧ್ಯಪ್ರಾಚ್ಯದ ಸ್ಥಿತಿಯನ್ನು ನೆನಪಿಸುತ್ತಿದೆ. ಮುಂದಿನ ಬಿಕ್ಕಟ್ಟು ಎದುರಾದಾಗ ತನ್ನ ಮಾತನ್ನು ನಿಯಂತ್ರಣದಲ್ಲಿರಿಸಿಕೊಂಡು ತನ್ನದೆಷ್ಟೊ ಅಷ್ಟನ್ನು ಮಾಡಿಕೊಂಡಿರುವಂತಹ ಪಾಠವನ್ನು ಅಮೆರಿಕಕ್ಕೆ ಸಿರಿಯಾ ಕಲಿಸೀತೇ?

ಅಧ್ಯಕ್ಷ ಪುಟಿನ್ ಅವರು ಅಮೆರಿಕಕ್ಕೆ ಪಾಠವೊಂದನ್ನು ಕಲಿಸಲು ಬಯಸಿದ್ದಾರೆ. ಆದರೆ ಜೊತೆಗೆ ಅವರು ಲಕ್ಷಾಂತರ ನಿರಾಶ್ರಿತರಿಂದ ತುಂಬಿ ಹೋಗಿರುವ ಯುರೋಪ್ ಜೊತೆಗೂ ಮಾತನಾಡುತ್ತಿದ್ದಾರೆ. ಅದಲ್ಲದೆ, ಮೂಲಭೂತವಾದಿ ಇಸ್ಲಾಂನ ಭೂತ ಮತ್ತು ಅಶಾಂತ ಜನಸಮುದಾಯದ ಆತಂಕ ಕಾಡುತ್ತಿವೆ. ನಿನ್ನೆ ಐರೋಪ್ಯ ಒಕ್ಕೂಟ ತನ್ನ ನೆರೆಯವರನ್ನು ಪರಿವರ್ತಿಸುವ ಭರವಸೆ ಹೊಂದಿದ್ದರೆ, ಇಂದು ತಾನೇ ಒತ್ತೆಯಾಳಾಗಿರುವ ಸ್ಥಿತಿಯಲ್ಲಿದೆ. ಲಿಬಿಯಾದ ಕ್ರೂರ ನಿರಂಕುಶಾಧಿಕಾರಿ ಮುಅಮ್ಮರ್ ಅಲ್ ಖಡ್ಡಾಫಿಯ ಹಾಗೆ, ಹೊಸ ಪ್ರಜಾಸತ್ತೆಗಳಿಗೆ ಸಾಧ್ಯವಿಲ್ಲದಿದ್ದರೂ ತನಗೆ ಯುರೋಪ್‌ನ ಗಡಿಗಳನ್ನ ರಕ್ಷಿಸುವ ಇಚ್ಛೆ ಮತ್ತು ತಾಕತ್ತು ಇದೆ ಎಂಬ ಬಗ್ಗೆ ಯುರೋಪ್‌ನ ಮನವೊಲಿಸಲು ಪುಟಿನ್ ಬಯಸಿದ್ದಾರೆ.

ತೀವ್ರವಾಗಿ ನಲುಗಿ ಹೋಗಿರುವ ಯುರೋಪ್ ಈ ಸಂದೇಶವನ್ನು ಸ್ವೀಕರಿಸಲು ಸಿದ್ಧವಾಗಿದೆಯೇ? ಹೌದು ಮತ್ತು ಇಲ್ಲ. ಸಿರಿಯಾದಲ್ಲಿ ಅಮೆರಿಕ ಮತ್ತು ರಷ್ಯಾದ ಸಹಕಾರ ಮಾತ್ರವೇ ಸದ್ಯದ ಸಂಘರ್ಷವನ್ನು ಕೊನೆಗೊಳಿಸಬಲ್ಲುದು ಎಂದು ಯುರೋಪ್‌ನ ಹೆಚ್ಚಿನ ನಾಯಕರು ಭಾವಿಸಿದ್ದಾರೆ. ರಷ್ಯಾ ತಮ್ಮ ಪರವಾಗಿರಬೇಕು ಎಂದು ಅವರು ಬಯಸುತ್ತಿದ್ದಾರೆ. ಜಾರ್ಜ್ ಡಬ್ಲ್ಯು ಬುಷ್ ಅವರ ಅತಿ ಕ್ರಿಯಾಶೀಲತೆ ಮತ್ತು ಬರಾಕ್ ಒಬಾಮ ಅವರ ನಿಷ್ಕ್ರಿಯತೆ ಮಧ್ಯ ಪ್ರಾಚ್ಯದ ಬಿಕ್ಕಟ್ಟಿಗೆ ಕಾರಣ ಎಂದು ಹಲವರು ದೂರುತ್ತಿದ್ದಾರೆ. ಸೋವಿಯತ್ ಮತ್ತು ಅಮೆರಿಕದ ನಡುವಣ ಸಾಮರಸ್ಯದ ಆ ದಿನಗಳು ಮರಳಲಿ ಎಂದು ಅವರು ಹಾರೈಸುತ್ತಿದ್ದಾರೆ. ‘ತವರಿನ ಸವಾಲುಗಳನ್ನು ನಿಗ್ರಹಿಸುವುದಕ್ಕಾಗಿ ನಾಯಕರು ರಾಜಕೀಯ ಬದಲಾವಣೆಯ ಭರವಸೆಯನ್ನು ಕೈಬಿಡುತ್ತಾರೆ’ ಎಂದು ಇತಿಹಾಸಕಾರ ಜೆರೆಮಿ ಸುರಿ ಬರೆಯುತ್ತಾರೆ.

ತಮ್ಮ ಮೌಲ್ಯಗಳು ಮತ್ತು ಆಕಾಂಕ್ಷೆಗಳಿಂದ ಹಿಂದೆ ಸರಿಯುವ ಬೆಲೆ ತೆತ್ತಾದರೂ ಸ್ಥಿರತೆಯ ಹೊಣೆಗಾರನಾಗಿ ಹೆಚ್ಚು ಶಕ್ತಿಯುತವಾದ ರಷ್ಯಾವನ್ನು ಯುರೋಪ್ ಸ್ವೀಕರಿಸಲಿದೆ ಎಂಬುದು ಕನಿಷ್ಠ ಪಕ್ಷ ಪುಟಿನ್ ಅವರ ಕಲ್ಪನೆ. ಆದರೆ ಪುಟಿನ್ ಅವರಿಗೆ ಇದನ್ನು ನೆರವೇರಿಸುವುದು ಸಾಧ್ಯವೇ? ಸಂಪೂರ್ಣ ಸ್ಥಿರತೆಯ ಅವರ ಕರೆ ಭಾವನಾತ್ಮಕವಾಗಿ ಆಕರ್ಷಕವಾಗಿದ್ದರೂ ಪ್ರಾಯೋಗಿಕ ಅಲ್ಲ.

ಶೀತಲ ಸಮರದ ಕಾಲದಲ್ಲಾಗಿದ್ದರೆ ಅಸ್ಥಿರತೆಯನ್ನು ಹಿಮ್ಮೆಟ್ಟಿಸುವುದಕ್ಕೆ ಸೋವಿಯತ್ ಒಕ್ಕೂಟ ಮತ್ತು ಪಶ್ಚಿಮದ ದೇಶಗಳು ಒಪ್ಪಂದಕ್ಕೆ ಬರಬಹುದಾಗಿತ್ತು. ಆದರೆ ಪರಿಸ್ಥಿತಿ ಈಗ ಬದಲಾಗಿದೆ. ಜಗತ್ತು ಈಗ ಪೂರ್ವ ಮತ್ತು ಪಶ್ಚಿಮಗಳೆಂಬ ರಾಜಕೀಯ ಲೆಕ್ಕಾಚಾರವನ್ನು ಮೀರಿ ಬೆಳೆದಿದೆ: ಸಾಮಾಜಿಕ, ಸಾಮುದಾಯಿಕ, ಸಾಂಸ್ಕೃತಿಕ ಮತ್ತು ತಂತ್ರಜ್ಞಾನದ ಬದಲಾವಣೆಗಳು ಜಗತ್ತಿನ ಸ್ಥಿರತೆಯನ್ನು ಅತಿ ಹೆಚ್ಚು ಸಂಕೀರ್ಣತೆಯ ಚಕ್ರವ್ಯೂಹವಾಗಿಸಿದೆ. ನಾವು ಒಡಕಿನಿಂದ ಕೂಡಿದ ಜಗತ್ತಿನಲ್ಲಿ ಬದುಕುತ್ತಿದ್ದೇವೆ.

ಸಿರಿಯಾದಲ್ಲಿ ನಡೆಯುತ್ತಿರುವುದು ದಮನಕಾರಿ ಸರ್ಕಾರ ಮತ್ತು ಸ್ವಾತಂತ್ರ್ಯ ಪ್ರೇಮಿ ಜನರ ನಡುವಣ ಸಂಘರ್ಷ ಅಲ್ಲ ಎಂಬ ರಷ್ಯಾದ ವಾದ ಸರಿ ಇದೆ; ಹಾಗೆಯೇ ರಷ್ಯಾ ಪ್ರತಿಪಾದಿಸುತ್ತಿರುವಂತೆ ಇದು ಶಾಸನಬದ್ಧ ಸರ್ಕಾರ ಮತ್ತು ಉಗ್ರಗಾಮಿಗಳ ಗುಂಪಿನ ನಡುವಣ ಸಂಘರ್ಷವೂ ಅಲ್ಲ. ಯುರೋಪ್‌ನಲ್ಲಿ ಈಗ ಇರುವ ನಿರಾಶ್ರಿತರಲ್ಲಿ ಬಹುಸಂಖ್ಯಾತರು ಇಸ್ಲಾಮಿಕ್ ಸ್ಟೇಟ್‌ನ ಕಾರಣಕ್ಕೆ ಓಡಿ ಬಂದವರಲ್ಲ, ಬದಲಿಗೆ ಅಸ್ಸಾದ್ ಆಡಳಿತದಿಂದ ರೋಸಿ ವಲಸೆ ಹೋದವರು. ಅಸ್ಸಾದ್ ಅಧಿಕಾರದಲ್ಲಿ ಮುಂದುವರಿಯುತ್ತಾರೆ ಎಂದಾದರೆ ನಿರಾಶ್ರಿತ ವಲಸಿಗರು ಎಂದೆಂದಿಗೂ ಯುರೋಪ್‌ನಲ್ಲಿಯೇ ಉಳಿಯುತ್ತಾರೆ ಎಂಬುದನ್ನು ನಾವು ಮರೆಯಬಾರದು.

ಪುಟಿನ್ ಅವರ ಪಠ್ಯಸಿದ್ಧಾಂತ ಮನಮುಟ್ಟುವಂತಿದೆ, ಆದರೆ ಅದು ಮನವರಿಕೆ ಆಗುವಂತೆ ಇಲ್ಲ. ಕೆಟ್ಟ ಸರ್ಕಾರಗಳ ವಿರುದ್ಧ ಜನರು ದಂಗೆ ಏಳುವುದು ನಿಲ್ಲಬೇಕಿದ್ದರೆ ಅಮೆರಿಕದ ನೀತಿಯಲ್ಲಿ ಬದಲಾವಣೆ ಆದರೆ ಮಾತ್ರ ಸಾಲದು.

(ಲೇಖಕ ಬಲ್ಗೇರಿಯಾದ ಸೋಫಿಯಾದಲ್ಲಿರುವ ಸೆಂಟರ್ ಫಾರ್ ಲಿಬರಲ್ ಸ್ಟ್ರಾಟೆಜೀಸ್‌ನ ಅಧ್ಯಕ್ಷ ಮತ್ತು ವಿಯೆನ್ನಾದ ಇನ್ಸ್‌ಟಿಟ್ಯೂಟ್ ಫಾರ್ ಹ್ಯೂಮನ್ ಸೈನ್ಸಸ್‌ನ ಕಾಯಂ ಸದಸ್ಯ)
ದಿ ನ್ಯೂಯಾರ್ಕ್ ಟೈಮ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.