ಸ್ಥಳಿಯ ಹಾಗೂ ಜನರ ಆಡು ಭಾಷೆಗಳ ಮೇಲೆ ಪ್ರಭುತ್ವದ ಭಾಷೆಗಳ ಆಕ್ರಮಣ ಅನಾದಿ ಕಾಲದಿಂದಲೂ ನಡೆದು ಬಂದಿದೆ. ಆರ್ಯರ `ಸಂಸ್ಕೃತ' ಇಲ್ಲಿನ ಪಾಲಿ, ಅರ್ಧಮಾಗಧಿ, ಪೈಶಾಚಿಕ, ಪ್ರಾಕೃತ...ಮೊದಲಾದ ಜನರ ಆಡು ಭಾಷೆಗಳನ್ನು ನಿಧಾನವಾಗಿ ಆಪೋಷನ ತೆಗೆದುಕೊಂಡಿತು. ಜಗತ್ತಿನ ನೂರಾರು ಭಾಷೆಗಳು ಇಂದು ಅಳಿವಿನಂಚಿನಲ್ಲಿವೆ.

ಈವರೆಗಿನ ಸಂಶೋಧನೆ ಪ್ರಕಾರ ಕನ್ನಡದ ಮೊದಲ ಶಿಲಾ ಶಾಸನ ಕ್ರಿ.ಶ. 450ರಲ್ಲಿ ರಚನೆಯಾಗಿದೆ. ಕನ್ನಡದ ಮೊದಲ ಸಾಹಿತ್ಯ ಕೃತಿಯೂ ಕ್ರಿ.ಶ. 850ರಲ್ಲಿ ರಚನೆ ಆಯಿತು ಎಂಬುದೂ ಸಂಶೋಧನೆಗಳಿಂದ ತಿಳಿದುಬಂದಿದೆ. ಹೀಗೆ ಕನ್ನಡ ಎಂಬ ನಮ್ಮ ಮಧುರ ಭಾಷೆ ಅತ್ಯಂತ ಪ್ರಾಚೀನವಾದುದು ಎಂಬುದು ಸ್ಪಷ್ಟ. ನಂತರವೂ ಸಂಸ್ಕತದ ಪದಗಳೊಂದಿಗೆ ಕನ್ನಡದ ನಿರಂತರ ಹೋರಾಟ ನಡೆದೇ ಇತ್ತು. ಎಲ್ಲೋ ಬೆರಳೆಣಿಕೆಯಷ್ಟು ಕವಿಗಳು ಮಾತ್ರ ಸಂಸ್ಕೃತದ ಪದಗಳನ್ನು ಬಳಸದೇ, ಅಚ್ಚ ಕನ್ನಡದಲ್ಲಿಯೇ ಕೃತಿ ರಚನೆ ಮಾಡಿದರು.

`ಕಬ್ಬಿಗರ ಕಾವ' ಕೃತಿ ಬರೆದ ಆಂಡಯ್ಯ, `ತಕ್ಕುದೆ ಬೆರೆಸಲ್ಕೆ ಘೃತಮುಮಂ ತೈಲಮುಮಂ' (ಸಂಸ್ಕೃತ, ಕನ್ನಡವನ್ನು ಬೆರೆಸುವುದು ತುಪ್ಪ ಮತ್ತು ಎಣ್ಣೆಯನ್ನು ಬೆರೆಸಿದಂತೆ) ಎನ್ನುವ ನಯಸೇನರಂತಹ ಎಲ್ಲೋ ಒಬ್ಬಿಬ್ಬರು ಕವಿಗಳು ಮಾತ್ರ ಸಿಗುತ್ತಾರಷ್ಟೆ.

ಸದ್ಯ ಜಾಗತೀಕರಣದಂತಹ ಇಂದಿನ ಯುಗದಲ್ಲಿ ಜಾಗತಿಕ ಭಾಷೆ ಇಂಗ್ಲಿಷ್, ಸಂಸ್ಕೃತದ ಜಾಗದಲ್ಲಿ ಇಂದಿಗೂ ನಮ್ಮನ್ನು ಆಳುತ್ತಿರುವುದು ಸುಳ್ಳಲ್ಲ. ಅದರಲ್ಲೂ ತಂತ್ರಜ್ಞಾನ, ವೈದ್ಯಕೀಯ, ಔಷಧೀಯ, ಭೌತಶಾಸ್ತ್ರ, ರಾಸಾಯನಶಾಸ್ತ್ರ, ಜೀವಶಾಸ್ತ್ರ, ಗಣಕ ಶಾಸ್ತ್ರ... ಒಂದೇ ಎರಡೇ ಬಹುತೇಕ ಜ್ಞಾನದ ಶಾಖೆಗಳು ಕನ್ನಡದಲ್ಲಿಲ್ಲ. ಇದ್ದರೂ ಅದರ ಪ್ರಮಾಣ ಕಡಿಮೆ ಎಂದೇ ಹೇಳಬೇಕು.

ಅದಕ್ಕೆಂದೇ ದೇಶದ ಮಾಹಿತಿ ತಂತ್ರಜ್ಞಾನದ ಅನಭಿಶಕ್ತ ದೊರೆ ಎನಿಸಿದ `ಟಾಟಾ ಕನ್ಸಲ್ಟೆನ್ಸಿ ಸರ್ವಿಸ್'(ಟಿಸಿಎಸ್) ನ ವಿಶ್ರಾಂತ ಮುಖ್ಯಸ್ಥ ಡಾ. ಫಕೀರ್ ಚಂದ್ ಕೊಹ್ಲಿ ಅವರು ಕಂಪ್ಯೂಟರ್ ತಂತ್ರಾಂಶಗಳು ಭಾರತದ ಸ್ಥಳೀಯ ಭಾಷೆಗಳಲ್ಲಿಯೂ ಮೂಡಿ ಬರಬೇಕು ಎಂದು ಹೇಳಿದ್ದಾರೆ.

ಕಳೆದ ವಾರವಷ್ಟೆ ಪಂಜಾಬ್ ವಿಶ್ವವಿದ್ಯಾನಿಲಯದ ಸುವರ್ಣ ಭವನದಲ್ಲಿ ನಡೆದ `ತಾಂತ್ರಿಕ ಶಿಕ್ಷಣದ ಗುಣಮಟ್ಟದ ಹೆಚ್ಚಳದ ವಿಧಾನಗಳು' ಎಂಬ ಸಮಾವೇಶದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತದಲ್ಲಿ ಲಭ್ಯವಿರುವ ಗಣಕ ತಂತ್ರಾಂಶಗಳೆಲ್ಲಾ ಆಂಗ್ಲ ಭಾಷೆಯಲ್ಲೇ ಇವೆ. ಆದರೆ ಭಾರತದಲ್ಲಿ ಇನ್ನೂ 90 ಕೋಟಿ ಮಂದಿಗೆ ಇಂಗ್ಲಿಷ್ ಎಂಬುದು ಕಬ್ಬಿಣದ ಕಡಲೆಯೇ ಆಗಿದೆ. ಹಾಗಾಗಿ ತಂತ್ರಾಂಶಗಳು ಸ್ಥಳೀಯ ಭಾಷೆಯಲ್ಲಿ ಯೂ ರೂಪುಗೊಳ್ಳಬೇಕಾದ್ದು ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಸಾಫ್ಟ್ವೇರ್ ಉದ್ಯಮದ ಪಿತಾಮಹ ಎಂದೇ ಬಣ್ಣಿಸಲಾಗುತ್ತಿರುವ ಫಕೀರ್ ಚಂದ್ ಕೊಹ್ಲಿ ಅವರು ಪ್ರಸಕ್ತ ಸನ್ನಿವೇಶದಲ್ಲಿ ತಂತ್ರಾಂಶಗಳು ಸ್ಥಳಿಯ ಭಾಷೆಯಲ್ಲೇ ಇರಬೇಕೆಂದು ಹೇಳಿರುವುದು ಸ್ವಾಗತಾರ್ಹ. ತಡವಾಗಿಯಾದರೂ ನಮ್ಮ ದೇಶದ ಸಾಫ್ಟ್ವೇರ್ ದೈತ್ಯ ಕಂಪೆನಿಗಳು ಎಚ್ಚೆತ್ತುಕೊಂಡಿವೆ ಎಂದೆನಿಸುತ್ತದೆ.

ಏಕೆಂದರೆ ಈಗಾಗಲೇ ಚೀನಾ, ಫ್ರಾನ್ಸ್ ಹಾಗೂ ಸೌದಿ ಅರೆಬೀಯಾ ಸೇರಿದಂತೆ ಮೊದಲಾದ ದೇಶಗಳಲ್ಲಿ ಗಣಕ ತಂತ್ರಾಂಶಗಳ ಪ್ರತಿಯೊಂದು ಶಬ್ದಗಳು ಅಲ್ಲಿನ ಸ್ಥಳೀಯ ಭಾಷೆಗಳಲ್ಲೇ ಇವೆ. ಆದರೆ ಭಾರತೀಯ ಶಿಕ್ಷಣ ಮತ್ತು ಜ್ಞಾನ ವಿಸ್ತರಣೆಯ ಲೋಕ ಮಾತ್ರ ಇನ್ನೂ ಆಂಗ್ಲ ಭಾಷೆಯ ಹಂಗಿನಿಂದ ಹೊರಬಂದಿಲ್ಲ.

ಕನ್ನಡದ ಮಟ್ಟಿಗೆ, ಅಂತಹ ಮಹತ್ತರವಾದ ಸಾಧನೆಯಂತೂ ಈ ಕ್ಷೇತ್ರದಲ್ಲಿ ಆಗಿಲ್ಲ ಎಂದೇ ಹೇಳಬೇಕು. ಕನ್ನಡ ಭಾಷೆ ಬೆರಳಚ್ಚು ಮಾಡಲು ಯೂನಿಕೋಡ್ ಶಿಷ್ಟತೆ ಇದೆಯಲ್ಲಾ, ಮತ್ತೇನು ಬೇಕು? ಎಂದು ಯಾರಾದರೂ ಪ್ರಶ್ನೆ ಮಾಡಬಹುದು. ಆದರೆ ಫಾಕೀರ್ ಚಂದ್ ಕೊಹ್ಲಿ ಅವರು ಹೇಳಿದ್ದು, ಬರೇ ಬೆರಳಚ್ಚು ಮಾಡುವುದಕ್ಕಲ್ಲ. ಬದಲಿಗೆ ಸದ್ಯ ಬಳಕೆಯಲ್ಲಿರುವ ಎಲ್ಲಾ ತಂತ್ರಾಂಶಗಳು, ಅನ್ವಯಿಕ ತಂತ್ರಾಂಶಗಳು, ಕಾರ್ಯನಿರ್ವಹಣಾ ತಂತ್ರಾಂಶಗಳೆಲ್ಲವೂ ಸ್ಥಳೀಯ ಭಾಷೆಗಳಲ್ಲಿಯೇ ಮೂಡಿ ಬರಬೇಕು ಎಂದು.

ಉದಾಹರಣೆಗೆ ಹೇಳುವುದಾದರೆ ಪುಟ ಸಂಸ್ಕರಣೆಗಾಗಿ ಬಳಸುವ ಪೇಜ್ ಮೇಕರ್, ಚಿತ್ರ ಸಂಸ್ಕರಣೆಗಾಗಿಯೇ ಇರುವ ಫೋಟೋಷಾಪ್, ಕೋರಲ್ ಡ್ರಾ ಹಾಗೂ ಕಂಪೆನಿಗಳ ಹಣಕಾಸು ಲೆಕ್ಕಾಚಾರಕ್ಕೆಂದೇ ಇರುವ `ಟ್ಯಾಲಿ' ಮೊದಲಾದ ತಂತ್ರಾಂಶಗಳ ಮೆನುಗಳೆಲ್ಲಾ ಅಂಗ್ಲಮಯ. ಇಂಗ್ಲಿಷ್ ಗೊತ್ತಿರದ ಜನರಿಗೆ ಟ್ಯಾಲಿಯಲ್ಲಿನ ಮಾರ್ಗದರ್ಶನದ ಆಯ್ಕೆಗಳನ್ನು ಸ್ಪಷ್ಟವಾಗಿ ಗುರುತಿಸಲು ಆಗುತ್ತಿಲ್ಲ. ಅದರಂತೆ ಕಾರ್ಯನಿರ್ವಹಣಾ ತಂತ್ರಾಂಶಗಳೂ ಸ್ಥಳೀಯ ಭಾಷೆಗಳಲ್ಲಿದ್ದರೆ ಬೂಟಿಂಗ್ ಪ್ರೊಸೆಸ್ನಿಂದ ಹಿಡಿದು, ಐಕಾನ್ಗಳು, `ಸ್ಟಾರ್ಟ್ ಮೆನು, ಸಬ್ ಮೆನು, ಟಾಸ್ಕ್ ಬಾರ್'ನಲ್ಲಿನ ಸಲಕರಣೆ(ಟೂಲ್)ಗಳೆಲ್ಲವೂ ಕೂಡ ಸ್ಥಳೀಯ ಭಾಷೆಗಳಲ್ಲಿ ಇರಬೇಕು ಎಂಬುದು ಅವರ ಹೇಳಿಕೆಯ ತಾತ್ಪರ್ಯ.

ಈಗಾಗಲೇ ಚೀನಾ, ಜಪಾನ್, ಸೌದಿ ಅರೇಬಿಯಾ, ಫ್ರಾನ್ಸ್ ಮೊದಲಾದ ದೇಶಗಳಲ್ಲಿ `ಸ್ಥಳೀಯ ಭಾಷೆಯಲ್ಲೇ ತಂತ್ರಾಂಶ ಅಭಿವೃದ್ಧಿ ಮತ್ತು ಬಳಕೆ' ಇದೆ. ಅಲ್ಲೆಲ್ಲಾ ಹೊಸ ಹೊಸ ಡಿಜಿಟಲ್ ತಂತ್ರಜ್ಞಾನಗಳು ಅಭಿವೃದ್ಧಿಯಾದಂತೆಲ್ಲಾ ಎಲ್ಲವೂ ಪ್ರಾದೇಶಿಕ ಭಾಷೆಗಳಿಗೆ ತುರ್ಜುಮೆಯಾಗಿಯೇ ಬರುತ್ತವೆ. ಆದರೆ ಭಾರತದಲ್ಲಿ ಮಾತ್ರ ಈ ನಿಟ್ಟಿನಲ್ಲಿ ಮಾಡಬೇಕಾಗಿರುವ ಕೆಲಸಗಳು ಬೆಟ್ಟದಷ್ಟಿವೆ. ಕನ್ನಡದಲ್ಲಿ ಎಲ್ಲೋ ಒಂದಿಷ್ಟು ಕ್ವಚಿತ್ ಕೆಲಸಗಳಾಗಿವೆ ಅಷ್ಟೆ!

ಭಾರತೀಯ ಭಾಷೆಗಳ ತಾಂತ್ರಿಕಾಭಿವೃದ್ಧಿ ಕಾರ್ಯಕ್ರಮ
ಇದು ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಒಂದು ಮಹತ್ವದ ಕಾರ್ಯಕ್ರಮ. ಮಾನವ ಮತ್ತು ಯಂತ್ರದ ಮಧ್ಯೆ ಯಾವುದೇ ಅಡೆತಡೆಯಿಲ್ಲದೆ ಮುಖ್ಯವಾಗಿ ಭಾಷಾ ತೊಡಕಿಲ್ಲದೆ ಸಂವಹನ ಸಾಧ್ಯವಾಗುವಂತೆ ಮಾಡುವುದೇ ಈ ಕಾರ್ಯಕ್ರಮದ ಗುರಿ. ಇದು ದೇಶದ 13 ಕಡೆ ಸಂಪನ್ಮೂಲ ಶಾಖೆಗಳನ್ನು ಹೊಂದಿದೆ. ಆ ಮೂಲಕ ಸಂವಿಧಾನ ಅಂಗೀಕರಿಸಿದ ಭಾಷೆಗಳನ್ನು ಕಂಪ್ಯೂಟರ್ ಮೊದಲಾದ ಯಂತ್ರಗಳಿಗೆ ಒಗ್ಗಿಸುವಂತೆ ಮಾಡುವ ಯತ್ನದಲ್ಲಿದೆ.

ಇದು ಈಗಾಗಲೇ ಫಾಂಟ್, ಮೆಸೆಂಜರ್, ಶಬ್ದಕೋಶ, ಓಪನ್ ಆಫೀಸ್... ಹೀಗೆ ಗಣಕಯಂತ್ರದಲ್ಲಿ ಕಾಣಬರುವ ಹಲವು ವಿಷಯಗಳನ್ನು ಭಾರತೀಯ ಭಾಷೆಗಳಲ್ಲಿಯೇ ಜಾರಿಗೆ ತರುವ ಯತ್ನದಲ್ಲಿದೆ. ಈಗಾಗಲೇ ಯೂನಿಕೋಡ್ ಮೂಲಕ ಫಾಂಟ್ ವಿಷಯದಲ್ಲಿ ಒಂದು ಏಕಮುಖತೆಯನ್ನು ಸಾಧಿಸಿದೆ. ಓಪನ್ ಆಫೀಸ್ಗೆ ಸಂಬಂಧಿಸಿದಂತೆ ಭಾರತೀಯ ಓಪನ್ ಆಫೀಸ್ ಸೇವಾ ಸಾಧನವನ್ನು ಸ್ಥಳಿಯ ಭಾಷೆಗಳಲ್ಲಿ ಹೊರತಂದಿದೆ.

ಇದೇ ರೀತಿಯ ಕಾರ್ಯ ಮಾಡುತ್ತಿರುವ ಮತ್ತೊಂದು ಸಂಸ್ಥೆ `ಸಿ-ಡಾಕ್'. ಅಂದರೆ, `ಸೆಂಟರ್ ಫಾರ್ ಅಡ್ವಾನ್ಡ್ಸ್ ಕಂಪ್ಯೂಟಿಕ್' ಸಂಸ್ಥೆ.
ಈ ಸಂಸ್ಥೆಯೂ ಸ್ಥಳೀಯ ಭಾಷೆಗಳಲ್ಲಿಯೇ ತಂತ್ರಾಂಶಗಳು ಬಳಕೆದಾರರಿಗೆ ಲಭಿಸುವಂತೆ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.

ಡಿಜಿಟಲ್ ಸಾಕ್ಷರತೆ
ಭಾರತದಲ್ಲಿ 6.50 ಲಕ್ಷ ಹಳ್ಳಿಗಳಿದ್ದು, ಅವು 2,50 ಲಕ್ಷ ಗ್ರಾಮ ಪಂಚಾಯಿತಿ ಆಡಳಿತ ವ್ಯಾಪ್ತಿಗೆ ಒಳಪಟ್ಟಿವೆ.

ಈ ಗ್ರಾಮ ಪಂಚಾಯಿತಿಗಳಲ್ಲಿ 30ಲಕ್ಷ ಸದಸ್ಯರಿದ್ದಾರೆ. ಇವರಲ್ಲಿ ಶಿಕ್ಷಣ ಪಡೆದವರ ಸಂಖ್ಯೆ ಶೇ 25-30ರಷ್ಟು ಮಾತ್ರ. ಅದರಲ್ಲೂ ಡಿಜಿಟಲ್ ಸಾಕ್ಷರತೆ ಎಂಬುದು ಶೇ 10ಕ್ಕಿಂತ ಕಡಿಮೆ ಮಂದಿಗೆ ತಿಳಿದಿದೆ.

ಅಚ್ಚರಿಯ ಸಂಗತಿ ಏನೆಂದರೆ ಡಿಜಿಟಲ್ ಸಾಕ್ಷರತಾ ಪ್ರಮಾಣ ಇಷ್ಟೊಂದು ಕಡಿಮೆ ಇದ್ದಾಗ್ಯೂ ವೇಗವಾಗಿ ಬೆಳೆಯುತ್ತಿರುವ ಮೊಬೈಲ್ ಮಾರುಕಟ್ಟೆಯಲ್ಲಿ ವಿಶ್ವದಲ್ಲೇ ಭಾರತಕ್ಕೆ 2ನೇ ಸ್ಥಾನವಿದೆ!

ಡಿಜಿಟಲ್ ಸಾಕ್ಷರತೆ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಆರಂಭಿಸಿರುವ `ರಾಷ್ಟ್ರೀಯ ಡಿಜಿಟಲ್ ಸಾಕ್ಷರತಾ ಮಿಷನ್' ಹಲವು ಕಾರ್ಯಕ್ರಮಗಳು, ತರಬೇತಿಗಳ ಮುಖೇನ ಗ್ರಾಮೀಣ ಭಾಗದಲ್ಲಿ ಡಿಜಿಟಲ್ ತಿಳಿವಳಿಕೆಯನ್ನು ಹೆಚ್ಚಿಸುವ ಕಾರ್ಯದಲ್ಲಿ ನಿರತವಾಗಿದೆ.

ಸಾಮಾನ್ಯವಾಗಿ ಈ ಕಲಿಸುವ ಕಾರ್ಯಕ್ರಮದಲ್ಲಿ ಆಂಗ್ಲ ಭಾಷೆಯೇ ಪ್ರಧಾನವಾಗಿದೆ. ಆ ಭಾಷೆ ಮೂಲಕವೇ ತಿಳಿವಳಿಕೆಯನ್ನು ಮೂಡಿಸುವ ಯತ್ನ ನಡೆದಿದೆ. ಆದರೆ ಬಹುತೇಕ ಮಂದಿಗೆ ಇಂಗ್ಲಿಷ್ ಎಂಬುದು ಕಷ್ಟವಾಗಿಯೇ ಇರುವುದರಿಂದ ಬೇರೆ ಸ್ಥಳೀಯ ಭಾಷೆಗಳನ್ನು ಡಿಜಿಟಲ್ ಕಲಿಕಾ ಕಾರ್ಯಕ್ರಮ ವ್ಯಾಪ್ತಿಗೆ ತರಲು ಯತ್ನಿಸಲಾಗುತ್ತಿದೆ. ಇದರ ಅಂಗವಾಗಿ `ಇಂಟೆಲ್' ಕಂಪೆನಿ ಸ್ಥಳೀಯ ಭಾಷೆಯಲ್ಲಿ ಧ್ವನಿಯುಕ್ತ ತಂತ್ರಾಂಶಗಳನ್ನು ರೂಪಿಸುತ್ತಿದೆ ಎಂದು ಕಂಪೆನಿ ನಿರ್ದೇಶಕ ರಾಮ್ ಪ್ರಸಾದ್ ಹೇಳಿದ್ದಾರೆ.

ಇದರಿಂದಾಗಿ ಇಂಗ್ಲಿಷ್ ಎಂದಾಕ್ಷಣ ಆಕಳಿಸುವ ಜನರೂ ಕೂಡ ತಮ್ಮದೇ ಮಾತೃಭಾಷೆಯಲ್ಲಿ ಡಿಜಿಟಲ್ ಪಠ್ಯವನ್ನು ಕೇಳಿಸಿಕೊಳ್ಳುವಂತಾದರೆ ಅವರೂ ಆಸಕ್ತಿಯಿಂದ ಕಲಿಯಬಹುದು. ಇದರಿಂದ ಡಿಜಿಟಲ್ ಸಾಕ್ಷರತೆ ಪ್ರಮಾಣವೂ ಹೆಚ್ಚಬಹುದು ಎಂಬುದು ರಾಮ್ ಪ್ರಸಾದ್ ಅವರ ನಿರೀಕ್ಷೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.