‘ಮುತ್ತಣ್ಣ ಎಸ್ಟೇಟ್’ನ ಒಳಹೊಕ್ಕು ಹೆಜ್ಜೆ ಹಾಕುತ್ತಲೇ ಪಕ್ಕದ ಪೊದೆಯಿಂದ ಹತ್ತಾರು ನವಿಲುಗಳು ಪುರ್ರೆಂದು ಹಾರಿಹೋದವು. ಗಾಬರಿಗೊಂಡಿದ್ದ ನಮ್ಮತ್ತ ನೋಡಿದ ಮುತ್ತಣ್ಣ, ‘ಅವು ನಮ್ಮ ಫ್ರೆಂಡ್ಸು’ ಎಂದು ನಗುತ್ತ ನುಡಿದರು. ಇನ್ನೇನು ಸೂರ್ಯ ಮುಳುಗುವ ಹೊತ್ತು.

ಅವುಗಳಿಗೆ ಇಂಪಾದ ಸಂಗೀತ ಕೇಳಿಸಲು ರೆಕಾರ್ಡ್ ಪ್ಲೇಯರ್ ಸಿದ್ಧಗೊಳಿಸಲು ಮುತ್ತಣ್ಣ ಅತ್ತ ಹೋದಾಗ, ‘ಎಸ್ಟೇಟ್’ನ ಇನ್ನೊಂದು ಬದಿಗೆ ಹೆಜ್ಜೆ ಹಾಕಿದೆವು. ಮೈತುಂಬ ಹಣ್ಣು ತುಂಬಿಕೊಂಡ ಸಪೋಟ ಗಿಡಗಳು, ಕಟಾವು ಆಗಿದ್ದ ಭತ್ತ, ಹೂವು ಹೊತ್ತು ನಿಂತ ಮಾವು, ಬಗೆಬಗೆಯ ಮೇವಿನ ಬೆಳೆ ಒಂದಕ್ಕಿಂತ ಒಂದು ಗಮನ ಸೆಳೆಯುವಂತಿದ್ದವು.

ಮತ್ತೊಂದು ಬದಿ ಕಬ್ಬು ಕಟಾವು ಮಾಡಿ, ಲಾರಿಗೆ ತುಂಬಲಾಗುತ್ತಿತ್ತು. ಹೊಲದ ಅಂಚಿಗೆ ಸಾವಿರಾರು ತೇಗದ ಮರಗಳು ಭದ್ರ ಕೋಟೆಯಂತೆ ಗೋಚರಿಸುತ್ತಿದ್ದವು. ‘ಕಲ್ಲು ಇರಾ ಈ ಹೊಲ್ದಾಗ ಮುತ್ತಣ್ಣ ಏನ್ ಮಾಡ್ತಾನ? ಮತ್ ಕುರಿ ಕಾಯ್ಲಿಕ್ಕೆ ಹೋಗ್ತಾನ’ ಎಂದು ಮೂದಲಿಸಿದವರು, ನಿಬ್ಬೆರಗಾಗುವಂತೆ ಮಾಡಿದ ಕೃಷಿಕ ಮುತ್ತಣ್ಣ ಪೂಜಾರ್.

ಮುತ್ತಣ್ಣನ ಮೂಲ ಕಾಯಕ– ಕುರಿ ಸಾಕಣೆ. ಬೆಳಗಾವಿ ಜಿಲ್ಲೆ ನವಲಿಹಾಳ ಗ್ರಾಮದಿಂದ ಕುರಿ ಮಂದೆಯನ್ನು ಹೊಡೆದುಕೊಂಡು, ರಾಜ್ಯದ ಬೇರೆ ಬೇರೆ ಭಾಗಕ್ಕೆ ಮೇಯಿಸಲು ಹೋಗುವುದು ವರ್ಷಂಪ್ರತಿ ನಡೆಯುವ ಕೆಲಸ. ಒಂದೆಡೆ ಸ್ಥಿರವಾಗಿ ನೆಲೆ ನಿಲ್ಲುವುದೇ ಅಪರೂಪ ಎಂಬಂತಿರುವಾಗ, ಮುತ್ತಣ್ಣನಿಗೆ ಕೃಷಿಕನಾಗುವ ಕನಸು! ಅದು ಸುಲಭ ಸಾಧ್ಯವೇ?

ಕಲಿಕೆಯ ಹಂಬಲ
ಕುರಿ ಕಾಯುತ್ತ ಒಂದೂರಿನಿಂದ ಇನ್ನೊಂದೂರಿಗೆ ಹೋಗುವಾಗ ಶಾಲೆಗೆ ಹೊರಟ ಮಕ್ಕಳನ್ನು ನೋಡಿ, ತಾನೂ ಶಾಲೆಗೆ ಸೇರುವ ಆಸೆ ಬಾಲಕ ಮುತ್ತಣ್ಣನಲ್ಲಿ ಚಿಗುರಿತ್ತು. ಅಪ್ಪನನ್ನು ಕಾಡಿ ಬೇಡಿ ಸ್ಲೇಟು– ಬಳಪ ಪಡೆದ. ಕುರಿ ಮೇಯುತ್ತಿರುವಾಗ ರಸ್ತೆ ಪಕ್ಕ ಕುಳಿತು, ಅಲ್ಲಿ ಸಾಗುತ್ತಿದ್ದ ಮಕ್ಕಳಿಂದ ಸ್ಲೇಟಿನ ಮೇಲೆ ಒಂದೊಂದೇ ಅಕ್ಷರ ಬರೆಸಿಕೊಂಡು ಕಲಿಯಲು ಶುರು ಮಾಡಿದ. ಅಕ್ಷರಗಳು ಮನಕ್ಕಿಳಿಯುತ್ತ ಹೋದಂತೆ ಮೊದಲ ಬಾರಿಗೆ ಓದಿದ ಫಲಕ– ‘ಕಾಡಿನಿಂದ ಮಳೆ, ಮಳೆಯಿಂದ ಬೆಳೆ’.

ಆಗದು ಎಂದು ಕೈಕಟ್ಟಿ ಕುಳಿತರೆ?
ನೂರಾರು ಕುರಿಗಳನ್ನು ಹೊಡೆದುಕೊಂಡು ಊರೂರು ತಿರುಗುವಾಗ, ವ್ಯವಸಾಯ ಮಾಡುವ ಆಸೆ ಮತ್ತೆ ಮತ್ತೆ ಕಾಡುತ್ತಲೇ ಇತ್ತು. ಒಮ್ಮೆ ಕಾಯಿಲೆಯಿಂದಾಗಿ ನಾನ್ನೂರು ಕುರಿಗಳು ಸಾವನ್ನಪ್ಪಿದವು. ಬದುಕಿಗೆ ಏನನ್ನಾದರೂ ಭದ್ರವಾದ ಜೀವನೋಪಾಯ ಮಾಡಿಕೊಳ್ಳಲು ಮುತ್ತಣ್ಣ ನಿಶ್ಚಯಿಸಿದರು. ಒಂದಷ್ಟು ಕುರಿ ಮಾರಿ, ಹಾವೇರಿ ಜಿಲ್ಲೆ ಹಾನಗಲ್ ಸಮೀಪದ ಮಂತಗಿಯಲ್ಲಿ 1999ರಲ್ಲಿ ಇಪ್ಪತ್ತೊಂಬತ್ತು ಎಕರೆ ಜಮೀನು ಖರೀದಿಸಿದರು. ಅದರ ಸ್ವರೂಪ ಹೇಗಿತ್ತೆಂದರೆ, ಅಲ್ಲಿ ಏನನ್ನೂ ಬೆಳೆಯಲು ಸಾಧ್ಯವಿರಲೇ ಇಲ್ಲ. ಏನಾದರಾಗಲಿ, ಇಲ್ಲೇ ಕೆಲಸ ಮಾಡಬೇಕು ಎನ್ನುವ ಛಲದಿಂದ ವ್ಯವಸಾಯ ಶುರು ಮಾಡಿದರು.

ಕಲ್ಲುಗಳಿಂದ ಕೂಡಿದ್ದ ಜಮೀನಿನ ಪೈಕಿ ಎಂಟು ಎಕರೆ ಸಮತಟ್ಟಾಗಿ ಮಾಡಿಕೊಂಡು, ಮೊದಲಿಗೆ ಮೆಕ್ಕೆಜೋಳ ಬಿತ್ತಿದರು. ಯಥೇಚ್ಛ ರಸಗೊಬ್ಬರ ಹಾಕಿದರು. ಆದರೆ ಮಳೆ ಕಡಿಮೆಯಾಗಿ ಬೆಳೆ ಎಲ್ಲ ನಾಶವಾಯಿತು. ಒಂದೇ ಬೆಳೆ ನಂಬಿಕೊಂಡರೆ ವ್ಯವಸಾಯದಲ್ಲಿ ಆದಾಯ ಅಸಾಧ್ಯ ಎಂದುಕೊಂಡು ತೋಟಗಾರಿಕೆ ಬೆಳೆಗಳತ್ತ ಗಮನ ಹರಿಸಿದರು. ಆದರೆ ಅಷ್ಟೊಂದು ಹಣ ಕೊಟ್ಟು ಸಸಿ ಖರೀದಿಸಲು ಆಗದು ಎಂದುಕೊಂಡ ಮುತ್ತಣ್ಣ, ತಾವೇ ನರ್ಸರಿ ಮಾಡಲು ಮುಂದಾದರು. ಮೊದಲ ಬಾರಿಗೆ ಎಂಟು ಸಾವಿರ ಮಾವಿನ ಸಸಿ ಉತ್ಪಾದಿಸಿದಾಗ, ತಮ್ಮ ಜಮೀನಿನಲ್ಲಿ ಒಂದಷ್ಟು ನಾಟಿ ಮಾಟಿ ಉಳಿದವುಗಳನ್ನು ಮಾರಿದಾಗ ನಾಲ್ಕು ಲಕ್ಷ ರೂಪಾಯಿ ಆದಾಯ ಸಿಕ್ಕಿತು! ಅದು ಮುತ್ತಣ್ಣನ ಭವಿಷ್ಯದ ಬಾಗಿಲು ತೆರೆದಿತ್ತು.

ಕಸಿ ಮಾಡುವ ಕೆಲಸದಲ್ಲಿ ಪರಿಣಿತಿ ಪಡೆದ ಮುತ್ತಣ್ಣ, ಬಗೆಬಗೆಯ ಸಸಿಗಳನ್ನು ಕಸಿ ಮಾಡಿ ಮಾರಾಟ ಮಾಡಲು ಶುರು ಮಾಡಿದರು. ಬಂದ ಹಣದಲ್ಲಿ ತಮ್ಮ ಜಮೀನು ಸಮತಟ್ಟು ಮಾಡಿಕೊಂಡು ವ್ಯವಸಾಯ ಆರಂಭಿಸಿದರು. ಅದರ ಜತೆಗೇ ಸಪೋಟ, ತೆಂಗು, ಬಾಳೆ, ಅಡಿಕೆ ಹಾಕಿದರು. ಮೂರು ಎಕರೆ ಪ್ರದೇಶದಲ್ಲಿ ‘ಶ್ರೀ’ ಪದ್ಧತಿಯಲ್ಲಿ ಭತ್ತ ಬೆಳೆದು, ಎಕರೆಗೆ 44 ಕ್ವಿಂಟಾಲ್ ಇಳುವರಿ ಪಡೆದು ‘ಸೈ’ ಅನಿಸಿಕೊಂಡರು!

ಮಳೆ ನೀರು ಸಂರಕ್ಷಣೆ ಉದ್ದೇಶದಿಂದ ಜಮೀನಿನಲ್ಲಿದ್ದ ಸಣ್ಣ ಕೆರೆಯನ್ನು ಆಳ ಮಾಡಿ, ಅಲ್ಲಿ ಮೀನುಗಾರಿಕೆ ಶುರು ಮಾಡಿದರು. ಉಪ ಕಸುಬು ಆಗಿ ಹೈನುಗಾರಿಕೆ ಹಾಗೂ ಕೋಳಿ ಸಾಕಣೆ ಶುರುವಾಯಿತು. ಇದೆಲ್ಲದರ ಮಧ್ಯೆ ಮಿಶ್ರ ಬೆಳೆಗಳ ಪದ್ಧತಿಯನ್ನು ಮರೆಯಲಾದೀತೆ? ಮೆಕ್ಕೆಜೋಳ ಹಾಗೂ ಹತ್ತಿ ಬಿಟ್ಟು ಬೇರೆಲ್ಲ ಮರೆತಿದ್ದ ಈ ಪ್ರದೇಶದಲ್ಲಿ ಜೋಳ, ಅಲಸಂದಿ, ಉದ್ದು, ಶೇಂಗಾ, ತರಕಾರಿ ಇತ್ಯಾದಿಗಳು ಮುತ್ತಣ್ಣನ ಹೊಲದಲ್ಲಿ ಬೆಳೆದು ನಿಂತವು. ವ್ಯವಸಾಯ ಆರಂಭಿಸಿ ಕೇವಲ ಆರೆಂಟು ವರ್ಷಗಳಲ್ಲಿ ಜಮೀನು ಹಸಿರಿನ ತಾಣವಾಗಿ ರೂಪುಗೊಂಡಿತು.

ಬಹು ಬೆಳೆ
ಅವರಿವರ ಹೊಲದಲ್ಲಿ ಕುರಿ ಮೇಯಿಸಿಕೊಂಡು ತಿರುಗುತ್ತಿದ್ದ ಸಮಯದಲ್ಲಿ ರಸಗೊಬ್ಬರ ಸುರುವಿದ ಜಮೀನು ಕಲ್ಲಿನಂತಾಗಿದ್ದನ್ನು ಮುತ್ತಣ್ಣ ಗಮನಿಸಿದ್ದರು. ಅದು ನೆನಪಲ್ಲಿತ್ತು. ಆರಂಭದಲ್ಲಿ ರಾಸಾಯನಿಕ ಕೃಷಿಯಿಂದ ಹಾನಿ ಅನುಭವಿಸಿದ ಮೇಲೆ 2004ರಲ್ಲಿ ಸಾವಯವಕ್ಕೆ ಹೊರಳಿದರು. ಅದಕ್ಕಾಗಿ ಎರೆಗೊಬ್ಬರ ಉತ್ಪಾದನೆ, ಜೀವಾಮೃತ, ಸಾವಯವ ಯೂರಿಯಾ ತಯಾರಿಗೆ ವ್ಯವಸ್ಥೆ ಮಾಡಿಕೊಂಡರು.

ಉಳಿದ ರೈತರು ಕಟಾವಿನ ಬಳಿಕ ಒಣಪೈರಿಗೆ ಬೆಂಕಿ ಹಚ್ಚುತ್ತಿದ್ದರು. ಅದನ್ನು ತಡೆದು, ಪೈರನ್ನು ತಮ್ಮ ಹೊಲಕ್ಕೆ ತಂದು ಹಾಕಿದರು. ಮಳೆ ಬಂದಾಗ ವಾರದಲ್ಲೇ ಅದು ಕಳಿತು ಗೊಬ್ಬರವಾಯಿತು. ಅದೀಗ ಪ್ರತಿ ವರ್ಷದ ಪರಿಪಾಠವಾಗಿದೆ. ಅಲ್ಪಾವಧಿ ಬೆಳೆಗೆ ಮಾತ್ರ ಎರೆಗೊಬ್ಬರ ಹಾಕುವುದನ್ನು ಬಿಟ್ಟರೆ, ತೋಟಗಾರಿಕೆ ಬೆಳೆಗೆ ಹೆಚ್ಚೇನೂ ಗಮನ ಕೊಡುವುದಿಲ್ಲ. ಹಾಗೆಂದು ಅವು ಆದಾಯ ಕೊಡುವುದನ್ನು ಮರೆತಿಲ್ಲ!

ಬಾಳೆತೋಟದ ಒಂದು ಬದಿಗೆ ಎತ್ತರದ ಕಂಬಕ್ಕೆ ಎರಡು ಧ್ವನಿವರ್ಧಕಗಳನ್ನು ಮುತ್ತಣ್ಣ ಕಟ್ಟಿದ್ದಾರೆ. ಕತ್ತಲು ಕವಿಯುತ್ತಿದ್ದಂತೆ, ಸಂಗೀತ ಅದರಲ್ಲಿ ಶುರುವಾಗುತ್ತದೆ. ಅಲ್ಲಲ್ಲಿ ಅಲೆದಾಡುವ ನವಿಲುಗಳು ಬಾಳೆ ಇತರ ಗಿಡಗಳ ಮೇಲೆ ವಾಸ್ತವ್ಯ ಹೂಡುತ್ತವೆ. ‘ನನ್ನ ತೋಟದಲ್ಲಿ ಎರೆಹುಳು ಇತರ ಕೀಟಗಳು ಜಾಸ್ತಿ. ಇದಕ್ಕೆ ಸಾವಯವ ಕೃಷಿ ಅಳವಡಿಸಿರುವುದು ಕಾರಣ. ಹೀಗಾಗಿ ಒಂದೆರಡಲ್ಲ; ನಾಲ್ಕುನೂರಕ್ಕು ಹೆಚ್ಚು ನವಿಲುಗಳು ಇಲ್ಲಿವೆ’ ಎಂಬ ಅಚ್ಚರಿಯ ಮಾಹಿತಿಯನ್ನು ಮುತ್ತಣ್ಣ ಕೊಡುತ್ತಾರೆ.

ಯಾರಿಗೂ ಬೇಡವಾಗಿದ್ದ ಜಮೀನು ತೆಗೆದುಕೊಂಡು, ಅದರಲ್ಲಿ ಹಸಿರುಕ್ಕಿಸಿದ ಮುತ್ತಣ್ಣ ಒಂದರ್ಥದಲ್ಲಿ ಬಂಗಾರದ ಮನುಷ್ಯ! ಹಾಂ... ಇದಕ್ಕೆಲ್ಲ ಸ್ಫೂರ್ತಿ ‘ಬಂಗಾರದ ಮನುಷ್ಯ’ ಸಿನಿಮಾ ಎಂದು ಮುತ್ತಣ್ಣ ಒಪ್ಪಿಕೊಳ್ಳುತ್ತಾರೆ. ಕುರಿ ಹಿಂಡಿನೊಂದಿಗೆ ಶಿಕಾರಿಪುರ ಸಮೀಪದ ಹಿತ್ತಿಲು ಗ್ರಾಮದ ಹೊರವಲಯದಲ್ಲಿ ಬೀಡುಬಿಟ್ಟಿದ್ದ ಮುತ್ತಣ್ಣ, ಅಲ್ಲಿನ ಟೆಂಟ್‌ನಲ್ಲಿ ‘ಬಂಗಾರದ ಮನುಷ್ಯ’ ಚಿತ್ರವನ್ನು ಹತ್ತಾರು ಸಲ ನೋಡಿದ್ದರಂತೆ. ಅದರಲ್ಲಿನ ರಾಜೀವನಂತೆ ತಾವೂ ಕೃಷಿ ಮಾಡುವ ಕನಸು ಅವರಲ್ಲಿ ಆಗಲೇ ಮೂಡಿತ್ತು.

‘ಕೈಲಾಗದು’ ಎಂದು ಕೈಕಟ್ಟಿ ಕುಳಿತಿದ್ದರೆ ಕಲ್ಲುಬಂಡೆಯ ಜಮೀನನ್ನು ವ್ಯವಸಾಯಕ್ಕೆ ಹೊರಳಿಸುವುದು ಕನಸಾಗಿಯೇ ಉಳಿಯುತ್ತಿತ್ತು. ಆದರೆ ಛಲ ಬಿಡದ ಮುತ್ತಣ್ಣ, ಮಣ್ಣಿನಲ್ಲಿ ಬಂಗಾರ ಕಂಡುಕೊಂಡ ಕಥನ ಎಂಥ ನಿರಾಶಾವಾದಿಯ ಬದುಕಿಗೂ ಸ್ಫೂರ್ತಿ ನೀಡುವಂಥದು.
ಊರ ಹೊರಗಿನ ಹೊಲದಲ್ಲೇ ಮನೆ ಮಾಡಿಕೊಂಡು ತಂದೆ ಬೀರಪ್ಪ, ತಾಯಿ ಶಾರದಮ್ಮ, ಪತ್ನಿ ಗೌರಮ್ಮ ಹಾಗೂ ಮಕ್ಕಳಾದ ರೋಜಾ, ನವೀನ ಹಾಗೂ ಸಂಗೀತ ಜತೆ ನೆಮ್ಮದಿಯ ಬದುಕು ನಡೆಸುವ ಮುತ್ತಣ್ಣ, ‘ವ್ಯವಸಾಯದಲ್ಲೇನೂ ಲಾಭವಿಲ್ಲ’ ಎಂದು ಕೊರಗುವವರಿಗೆ ಉತ್ತರ ಕೊಡುವಂತಿದ್ದಾರೆ.

ಕುರಿಮಂದೆ ಜತೆ ಸಾಗುವಾಗ ಮರಿ ಜನಿಸಿದರೆ ಅದನ್ನು ಹೊತ್ತೊಯ್ಯಲು ಕುರಿಗಾರರು ಪರಾಳ ಎಂಬ ಚೀಲ ಜತೆಗೆ ಇಟ್ಟುಕೊಂಡಿರುತ್ತಾರೆ. ‘ನನ್ನ ಪರಾಳದಾಗ ಪಾಟಿ– ಬಳಪ ಇದ್ವು. ರಾತ್ರಿ ಹುಲಿ ಮತ್ ತ್ವಾಳ ಬರ್ತಾವ ಅಂತ ಎದ್ದಿರಬೇಕಿತ್ರಿ. ಕಂದೀಲ ಬೆಳಕಿನಾಗ ಪಾಟಿ ಮ್ಯಾಲ ಅಕ್ಷರ ಬರ್ಕೋತ ಕೂಡ್ತಿದ್ದೆ’ ಎಂದು ನೆನಪು ಮಾಡಿಕೊಳ್ಳುವ ಮುತ್ತಣ್ಣ, ಆ ಬೆಳಕಿನಲ್ಲಿ ಕೃಷಿಯ ಬೆಳಕು ಕಂಡಿದ್ದಾರೆ.

ಸುಕೃತ ಪ್ರಶಸ್ತಿ
ಸುಕೋ ಬ್ಯಾಂಕ್ ಕೃಷಿ ಪ್ರಶಸ್ತಿ ಸಂಚಾಲನಾ ಸಮಿತಿಯು ಅಲೆಮಾರಿ ಮುತ್ತಣ್ಣನ ಕೃಷಿ ಸಾಧನೆ ಗಮನಿಸಿ, 2014ನೇ ಸಾಲಿನ ‘ಸುಕೃತ ಕೃಷಿ ಪ್ರಶಸ್ತಿ’ಯನ್ನು ನೀಡಿ ಸನ್ಮಾನಿಸಲಿದೆ. ಸುಕೋ ಬ್ಯಾಂಕ್ ಪ್ರಾಯೋಜಿತ, ಒಂದು ಲಕ್ಷ ರೂಪಾಯಿ ಮೊತ್ತದ ಈ ಪ್ರಶಸ್ತಿಯನ್ನು ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಫೆ. 26ರಂದು ಹುಬ್ಬಳ್ಳಿಯಲ್ಲಿ ಪ್ರದಾನ ಮಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.