ಬೆಂಗಳೂರು: ‘ಕಾರ್ಯಕ್ರಮಗಳ ಒತ್ತಡ, ಪ್ರವಾಸ ಮತ್ತಿತರ ಕಾರಣಗಳಿಂದ ಕೆಲವು ವರ್ಷಗಳಿಂದ ಬರವಣಿಗೆ ಕಡಿಮೆ ಮಾಡಿದ್ದೆ. ಸಾಹಿತ್ಯ ಕ್ಷೇತ್ರಕ್ಕೆ ಇನ್ನಷ್ಟು ಕೊಡುಗೆ ಕೊಡಬೇಕು ಎಂಬ ಹಂಬಲ ಈಗ ಮೂಡಿದೆ. ಜೀವನದ ಅನುಭವಗಳನ್ನು ಅಕ್ಷರ ರೂಪಕ್ಕೆ ಇಳಿಸಬೇಕು ಎಂದು ಮನಸ್ಸು ತುಡಿಯುತ್ತಿದೆ. ಇದಕ್ಕಾಗಿ ನೆನಪುಗಳ ಹೊತ್ತಿಗೆ (ಆತ್ಮಕತೆ) ಹೊರತರಲು ನಿಶ್ಚಯಿಸಿದ್ದೇನೆ’ ಎಂದರು ನಿತ್ಯೋತ್ಸವದ ಕವಿ ಕೆ.ಎಸ್.ನಿಸಾರ್ ಅಹಮದ್.

ಸಾಹಿತ್ಯ ಲೋಕದ ಮೇರು ಪ್ರತಿಭೆ ನಿಸಾರ್ ಅವರಿಗೆ ಗುರುವಾರ 80 ವರ್ಷದ ಸಂಭ್ರಮ. ಬೆಳಿಗ್ಗೆಯಿಂದಲೇ ಸಾಹಿತಿಗಳು, ಆಪ್ತರು, ಶಿಷ್ಯರು, ಅಭಿಮಾನಿಗಳಿಂದ ಶುಭಾಶಯದ ಸುರಿಮಳೆ. ಹುಟ್ಟುಹಬ್ಬವನ್ನು ಮನೆಯಲ್ಲಿ ಸರಳವಾಗಿ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು ಮುಂದಿನ ಯೋಜನೆಗಳನ್ನು ಬಿಚ್ಚಿಟ್ಟರು.

‘ಈ ಬರಹ ಒಂದು ರೀತಿಯಲ್ಲಿ ನೆನಪಿನ ಹೊತ್ತಿಗೆ. ಅದನ್ನು ಪೂರ್ಣಗೊಳಿಸಲು ಕಾಲಮಿತಿ (ಗಡುವು) ಹಾಕಿಕೊಂಡಿಲ್ಲ. ಜೀವನದ ಅನುಭವಗಳನ್ನು ಬರೆಯಲು ಸಮಯ ಬೇಕು. ನೆನಪುಗಳ ಮೆರವಣಿಗೆ ನಡೆಸಿ ಸನ್ನಿವೇಶಗಳನ್ನು ಕ್ರೋಡೀಕರಿಸಬೇಕು. ಕವಿತೆ, ಕಾವ್ಯ ಬರೆದ ಹಾಗಲ್ಲ ಈ ಕೆಲಸ’ ಎಂದು ಅವರು ಹೇಳಿದರು.

‘ಈ ಕೆಲಸಕ್ಕೆ ಸಿದ್ಧತೆ ಬೇಕು. ಬದ್ಧತೆಯನ್ನೂ ತೋರ್ಪಡಿಸಬೇಕು. ಅಂತಹ ಸಂಕಲ್ಪ ಇದೆ. ಅನೇಕ ಯೋಜನೆಗಳು ಇವೆ. ಎಷ್ಟು ಯೋಜನೆಗಳನ್ನು ಕಾರ್ಯರೂಪಕ್ಕೆ ಇಳಿಸಲು ಸಾಧ್ಯವೋ ಗೊತ್ತಿಲ್ಲ’ ಎಂದು ಅವರು ನುಡಿದರು. ‘ಜೀವನದಲ್ಲಿ ಸಾಕಷ್ಟು ದೂರ ಸಾಗಿ ಬಂದಿದ್ದೇನೆ. ಬದುಕಿನ ಸಾಧನೆಯ ಬಗ್ಗೆ ಸಂತೃಪ್ತಿ ಇದೆ. ಇನ್ನೊಂದೆಡೆ, ಅತೃಪ್ತಿಯೂ ಕಾಡಿದೆ. ಕನ್ನಡಕ್ಕೆ ಸೇವೆ ಸಲ್ಲಿಸುವುದು ಇನ್ನಷ್ಟು ಇದೆ ಎಂಬ ಕೊರಗು ಕಾಡುತ್ತಿದೆ. ಮತ್ತಷ್ಟು ಕೆಲಸ ಮಾಡುವ ಉಲ್ಲಾಸ, ಉಮೇದು ಇದೆ. ಆದರೆ, ಬದುಕು ಸೀಮಿತ’ ಎಂದೂ ಹೇಳಿದರು.

15 ದಿನಗಳ ಹಿಂದೆ ಸೋಂಕಿನಿಂದ ಕಾಲಿಗೆ ತೊಂದರೆ ಆಗಿತ್ತು. ಹೀಗಾಗಿ ದೈಹಿಕವಾಗಿ ಸ್ವಲ್ಪ ಕುಗ್ಗಿದ್ದೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಜನರು ತೋರಿದ ಪ್ರೀತಿ, ವಿಶ್ವಾಸ, ಅಭಿಮಾನದಿಂದ ತೋಯ್ದು ಹೋಗಿದ್ದೇನೆ. ಕಾವ್ಯಾಭಿಮಾನಿಗಳ ಪ್ರೀತಿ ವಿಶ್ವಾಸ, ಔದಾರ್ಯ ಬದುಕನ್ನು ಸಾರ್ಥಕಗೊಳಿಸಿದೆ. ಕವಿಗೆ ಇದಕ್ಕಿಂತ ಇನ್ನೇನು ಬೇಕು’ ಎಂದು ಅವರು ಪ್ರಶ್ನಿಸಿದರು.

‘8–10 ವರ್ಷಗಳಿಂದ ಕಾರ್ಯಕ್ರಮಗಳ ಒತ್ತಡ ಜಾಸ್ತಿ ಆಗಿತ್ತು. ಅಭಿಮಾನಿಗಳು ಕಾರ್ಯಕ್ರಮ, ಸನ್ಮಾನಕ್ಕೆ ಬನ್ನಿ ಎಂದಾಗ ಮುಲಾಜು, ದಾಕ್ಷಿಣ್ಯಕ್ಕೆ ಕಟ್ಟು ಬಿದ್ದು ಒಪ್ಪಲೇ ಬೇಕಾಯಿತು. ಹೀಗಾಗಿ ಬರವಣಿಗೆ ಕಡಿಮೆ ಆಗಿತ್ತು. ಬಹಿರಂಗ ಚಟುವಟಿಕೆ ಗಳಿಂದಾಗಿ ಅಂತರ್ಮುಖಿಯಾಗಲು ಸಾಧ್ಯ ಆಗಲಿಲ್ಲ. ಕಾವ್ಯ, ಕವನ, ಉತ್ತಮ ಬರಹ ರೂಪುಗೊಳ್ಳಲು ಅಂತರ್ಮುಖಿಯಾಗಬೇಕಾಗುತ್ತದೆ’ ಎಂದು ಅವರು ಪ್ರತಿಪಾದಿಸಿದರು.

ಕನ್ನಡಿಗರು ತೋರಿದ ಪ್ರೀತಿ ಅಭಿಮಾನವೇ ನನಗೆ ದೊಡ್ಡ ಪ್ರಶಸ್ತಿ. ಬಯಸದೇ ಬಂದ ಭಾಗ್ಯ ಇದು. ಇದಕ್ಕೆ ಚಿರಋಣಿ. ದೇವರು ಎಲ್ಲವನ್ನೂ ನೀಡಿದ್ದಾರೆ ಎಂದು ಒಂದು ಕ್ಷಣ ಭಾವುಕರಾದರು. ‘ಕಂಪ್ಯೂಟರ್ ನಮಗೆ ದೇವರು ಕೊಟ್ಟ ವರ. ಇದು ಜ್ಞಾನದ ಹೊಳೆ. ಇದು ಜನರ ದೈಹಿಕ ಹಾಗೂ ಬೌದ್ಧಿಕ ಒತ್ತಡ ಕಡಿಮೆ ಮಾಡಿದೆ. ಆದರೆ, ಕಂಪ್ಯೂಟರ್ನಿಂದ ಮಾನಸಿಕ, ಆಂತರಿಕ ಸುಖ ಸಿಗಲ್ಲ. ಇದಕ್ಕೆ ಕಾವ್ಯವೇ ಬೇಕು’ ಎಂದು ಅವರು ಪ್ರತಿಪಾದಿಸಿದರು.

ಸಾಹಿತ್ಯ ಸಲ್ಲಾಪ: 40–50 ವರ್ಷಗಳ ಹಿಂದೆ ಕನ್ನಡದಲ್ಲಿ ಸಾಹಿತ್ಯ ಸಲ್ಲಾಪ ವ್ಯಾಪಕವಾಗಿತ್ತು. ಈಗ ಕಡಿಮೆ ಆಗಿದೆ. ಧಾವಂತದ ಬದುಕಿನಲ್ಲಿ ಜನರಿಗೆ ಓದುವ ವ್ಯವಧಾನ ಇಲ್ಲ. ಪುಸ್ತಕ ಓದುವ ಪರಂಪರೆ ಮಾಯವಾಗಿದೆ. ಪರೀಕ್ಷೆಗಾಗಿ ಕೆಲವೇ ಪುಟಗಳನ್ನು ಓದಿ ಮನನ ಮಾಡಿಕೊಳ್ಳುವ ಸಂಸ್ಕೃತಿ ಬೆಳೆದಿದೆ ಎಂದು ಕಳವಳ ವ್ಯಕ್ತಪಡಿಸಿದರು.

‘8ರಂದು ನಿತ್ಯೋತ್ಸವ ಕವಿಗೆ 80’
ಬೆಂಗಳೂರು: ಭಾಗವತರು ಸಾಂಸ್ಕೃತಿಕ ಸಂಘಟನೆ ವತಿಯಿಂದ ಕವಿ ಡಾ.ನಿಸಾರ್ ಅಹಮದ್ ಅವರ 80ನೇ ಜನ್ಮದಿನದ ಪ್ರಯುಕ್ತ ಫೆ.8ರಂದು ‘ನಿತ್ಯೋತ್ಸವ ಕವಿಗೆ 80’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಅಧ್ಯಕ್ಷ ಕೆ.ರೇವಣ್ಣ ಅವರು, ‘ನಯನ ಸಭಾಂಗಣದಲ್ಲಿ ಅಂದು ಬೆಳಿಗ್ಗೆ 10ರಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಾಹಿತಿ ಡಾ.ದೇ.ಜವರೇಗೌಡ ಉದ್ಘಾಟನೆ ನೆರವೇರಿಸುವರು. ಇದೇ ವೇಳೆ ನಿಸಾರ್ ಅಹಮದ್ ಅವರ ಕಾವ್ಯಗಳ ಕುರಿತಾದ ವಿಚಾರಗೋಷ್ಠಿ, ಕವಿತೆಗಳ ವಾಚನ ಮತ್ತು ಗಾಯನ ಕಾರ್ಯಕ್ರಮ ನಡೆಯಲಿವೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪ್ರೊ.ಜಿ. ವೆಂಕಟಸುಬ್ಬಯ್ಯ ಅವರು ವಹಿಸಿಕೊಳ್ಳಲಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.