ಬಾಂಗ್ಲಾದೇಶದ ಮತ್ತೊಬ್ಬರು ಬ್ಲಾಗರ್, ಢಾಕಾದ ತಮ್ಮ ಮನೆಯಲ್ಲೇ ಹತ್ಯೆಯಾಗಿದ್ದಾರೆ. ನಿಲೊಯ್ ನೀಲ್ ಹೆಸರಲ್ಲಿ ನಾಸ್ತಿಕ ವಿಚಾರಧಾರೆಗಳನ್ನು ಕುರಿತು ಬ್ಲಾಗ್ಗಳನ್ನು ಬರೆಯುತ್ತಿದ್ದ ಕಾರಣದಿಂದ ನಿಲೊಯ್ ಚಟರ್ಜಿ ಅವರನ್ನು ಕೊಲೆ ಮಾಡಲಾಗಿದೆ. ಮೂಲಭೂತವಾದ ಹಾಗೂ ತೀವ್ರವಾದದ ವಿರೋಧಿ ದನಿಯಾಗಿದ್ದರು ಅವರು. ಈ ವರ್ಷ ಫೆಬ್ರುವರಿಯಿಂದ ನಡೆದಿರುವ ಬ್ಲಾಗರ್ಗಳ ಸರಣಿ ಹತ್ಯೆಯಲ್ಲಿ ಇವರು ನಾಲ್ಕನೆಯವರು ಎಂಬುದು ಆತಂಕಕಾರಿ.

ಹತ್ಯೆಯಾದ ಇತರ ಬ್ಲಾಗರ್ಗಳಲ್ಲಿ ಅವಿಜಿತ್ ರಾಯ್, ವಾಷಿಕರ್ ರಹಮಾನ್ ಬಾಬು ಹಾಗೂ ಅನಂತ ಬಿಜಯ್ ದಾಸ್ ಸೇರಿದ್ದಾರೆ. ಮುಸ್ಲಿಂ ಬಹುಸಂಖ್ಯಾತರಿರುವ ಬಾಂಗ್ಲಾದೇಶ ಅಧಿಕೃತವಾಗಿ ಜಾತ್ಯತೀತ ರಾಷ್ಟ್ರ. ಆದರೆ ಇಸ್ಲಾಮಿಕ್ ಉಗ್ರರಿಂದ ಬ್ಲಾಗರ್ಗಳ ಮೇಲೆ ನಡೆಯುತ್ತಿರುವ ಈ ಸರಣಿ ದಾಳಿಗಳಿಗೆ ಸರ್ಕಾರ ಉದಾಸೀನ ಮನೋಭಾವ ತೋರಿಸುತ್ತಿದೆ. ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರ ಈ ವಿಚಾರದ ಬಗ್ಗೆ ಮೌನ ತಾಳಿರುವುದು ವಿಷಾದನೀಯ.

ಆದರೆ ಹತ್ಯೆಯಾದವರ ಮನೆಗೆ ಖಾಸಗಿಯಾಗಿ ಭೇಟಿ ನೀಡಿ ಸಂತಾಪ ಸೂಚಿಸುವಂತಹ ಔಪಚಾರಿಕ ವಿಧಿ ವಿಧಾನಗಳು ನಡೆಯುತ್ತಿವೆ ಅಷ್ಟೆ. ಕೇವಲ ಎರಡು ಪ್ರಕರಣಗಳಲ್ಲಿ ಶಂಕಿತರನ್ನು ಬಂಧಿಸಲಾಗಿದೆ. ಉಳಿದಂತೆ ಇನ್ನೂ ತನಿಖೆ ಕಾರ್ಯ ನಡೆಯುತ್ತಿದೆ. ತಮಗೆ ಬರುತ್ತಿದ್ದಂತಹ ಬೆದರಿಕೆಗಳ ಬಗ್ಗೆ ನಿಲೊಯ್ ನೀಡಿದ ದೂರುಗಳನ್ನು ಉಪೇಕ್ಷಿಸಿರುವುದಂತೂ ಅಕ್ಷಮ್ಯ. ಈ ಕುರಿತಂತೆ ಪೊಲೀಸರು ದೂರನ್ನೂ ದಾಖಲಿಸಲಿಲ್ಲ. ದೂರನ್ನು ದಾಖಲಿಸಿ ರಕ್ಷಣೆ ನೀಡಿದ್ದರೆ ಬಹುಶಃ ಈ ಹತ್ಯೆಯನ್ನು ತಡೆಯಬಹುದಿತ್ತು.

ಪ್ರತಿರೋಧದ ದನಿಗಳನ್ನು ಹತ್ತಿಕ್ಕುವಂತಹ ಇಂತಹ ಕಾರ್ಯಾಚರಣೆಗಳು ಜನರಲ್ಲಿ ಭೀತಿಯನ್ನು ಹುಟ್ಟಿಸುವಂತಹದ್ದು. ಅಲ್ ಕೈದಾದ ಸ್ಥಳೀಯ ಶಾಖೆಯಾದ ಅನ್ಸಾರ್ ಅಲ್ – ಇಸ್ಲಾಂ, ಈ ಹತ್ಯೆಯ ಹೊಣೆ ಹೊತ್ತುಕೊಂಡಿದೆ. ಟೀಕೆ, ವಿಮರ್ಶೆಯ ದನಿಗಳನ್ನು ಸಹಿಸದ ಈ ಪ್ರವೃತ್ತಿ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಗ್ಗು ಬಡಿಯುವ ಪ್ರಯತ್ನವಾಗಿದೆ. ಈ ರೀತಿಯ ಹತ್ಯೆಗಳ ಸರಣಿ ಶುರುವಾದದ್ದು 2013ರಲ್ಲಿ. ಆದರೆ ವಿಳಂಬ ಗತಿಯ ತನಿಖೆ ಹಾಗೂ ವಿಚಾರಣೆಗಳಿಂದಾಗಿ ಯಾವುದೇ ಶಿಕ್ಷೆಯ ಭಯ ಇಲ್ಲದಂತಾಗಿದೆ.

ಆಕ್ರ ಮಣಕಾರರು ಈ ಅಪರಾಧ ಚಟುವಟಿಕೆಗಳನ್ನು ಯಾವುದೇ ಎಗ್ಗಿಲ್ಲದೆ ಮುಂದುವರಿಸಿದ್ದಾರೆ ಎಂಬುದು ಆತಂಕಕಾರಿ. ಹತ್ಯೆಯಾದ ಈ ನಾಲ್ವರು ಬ್ಲಾಗರ್ಗಳೂ ‘ಗಣ ಜಾಗರಣ ಮಂಚ್’ ಆಂದೋ ಲನದಲ್ಲಿ ಸಕ್ರಿಯವಾಗಿದ್ದರು. 1971ರ ಬಾಂಗ್ಲಾ ದೇಶ ವಿಮೋಚನಾ ಹೋರಾಟದಲ್ಲಿ ಯುದ್ಧ ಅಪರಾಧಗಳನ್ನು ಎಸಗಿದವರಿಗೆ ಗರಿಷ್ಠ ಶಿಕ್ಷೆ ಮತ್ತು ಧರ್ಮ ಆಧಾರಿತ ರಾಜಕಾರಣ ನಿಷೇಧದ ಪರವಾದ ಹೋರಾಟ ಇದು.

ಯುದ್ಧ ಅಪರಾಧಗಳ ಕುರಿತಾದ ವಿಚಾರಣೆಗಳನ್ನು 2010ರಲ್ಲಿ ಪ್ರಧಾನಿ ಶೇಖ್ ಹಸೀನಾ ಅವರು ಆರಂಭಿಸಿದರು. 1971 ರಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ನೆರವಿ ನೊಂದಿಗೆ ಬಾಂಗ್ಲಾದೇಶ ನಡೆಸಿದ ವಿಮೋಚನಾ ಯುದ್ಧದ ವೇಳೆ ಶತ್ರುರಾಷ್ಟ್ರವನ್ನು ಬೆಂಬಲಿಸಿದ ಜಮಾತ್-ಎ-ಇಸ್ಲಾಂ ಮತ್ತು ಬಿಎನ್ಪಿ ನಾಯಕರ ವಿರುದ್ಧ ಯುದ್ಧ ಅಪರಾಧ ಆರೋಪಗಳನ್ನು ಹೊರಿಸಲಾಗಿತ್ತು. ಈ ಪೈಕಿ ಅನೇಕ ಹಿರಿಯ ನಾಯಕರಿಗೆ ಸರ್ಕಾರ ಶಿಕ್ಷೆಯನ್ನೂ ವಿಧಿಸಿದೆ. ಹೀಗಾಗಿ ಸರ್ಕಾರದ ವಿರುದ್ಧ ಜಮಾತ್-ಎ-ಇಸ್ಲಾಂ ಜೊತೆ ಬಿಎನ್ ಪಿ ಹಿಂಸಾತ್ಮಕ ಹೋರಾಟಗಳನ್ನೂ ನಡೆಸಿದೆ.

16 ಕೋಟಿ ಜನರಿರುವ ಈ ದಕ್ಷಿಣ ಏಷ್ಯಾ ರಾಷ್ಟ್ರವನ್ನು ಷರಿಯತ್ ಆಧಾರಿತ ರಾಷ್ಟ್ರವಾಗಿಸಲು ಯತ್ನಿಸುತ್ತಿರುವ ಕಟ್ಟಾ ಇಸ್ಲಾಮಿಕ್ ಗುಂಪುಗಳ ಮೇಲೆ ಸರ್ಕಾರ ದಾಳಿ ನಡೆಸಲು ಯತ್ನಿಸುತ್ತಿರುವಂತೆಯೇ ಉಗ್ರರು ಜಾತ್ಯತೀತ ನಿಲುವಿನ ಲೇಖಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಸಂಘಟಿತವಾದ ರೀತಿಯಲ್ಲಿ ನಡೆಯುತ್ತಿರುವ ಈ ಅಪರಾಧಗಳಿಂದ ಪ್ರಜೆಗಳನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.