ಶನಿವಾರ, 28 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೆಚ್ಚುಗೆ ಪಡೆದ ಪತ್ರಗಳು

Published : 11 ಫೆಬ್ರುವರಿ 2015, 19:30 IST
ಫಾಲೋ ಮಾಡಿ
Comments

ನಿಮ್ಮನ್ನು ನೆನಪಿಸಿಕೊಂಡ ಕ್ಷಣ ಕ್ಷಣವೂ ನನ್ನ ಜನುಮ ಜಾತ್ರೆ ಎನಿಸುತ್ತದೆ

ಕಡಲ ತಡಿಯ ಕನ್ನಿಕೆಯೇ...
ಆ ಸಂಜೆ ನಿಮ್ಮ ಕಾಲ್ಗೆಜ್ಜೆಯ ನಿನಾದ ಮರಳ ನೆಲದಲ್ಲಿ ಅಚ್ಚೊತ್ತಿ ಪ್ರೇಮರಾಗಕ್ಕೊಂದು ಆಲಾಪ ಸೇರಿಸಿ ಮೀಟಿದಾಗ ಪ್ರೀತಿಯ ತರಂಗಗಳು ಸಾಗರದಲೆಗಳ ಜೊತೆ ಸೇರಿ ನರ್ತಿಸುತ್ತಾ... ದಡಕ್ಕೆ ಬಂದು ಶಿರಬಾಗಿ ನಿಮ್ಮ ಮೆದುಪಾದಗಳಿಗೆ ನಮಿಸುತ್ತಿದ್ದನ್ನು ಕಂಡು ಬೆರಗಾದೆ! ಆಗ ಸಂಜೆ ಸೂರ್ಯನಿಂದ ಬಾನಿಗೆಲ್ಲ ಹಬ್ಬವಾದಂತೆ, ನಿಮ್ಮಿಂದ ನನ್ನ ಬಾಳಿಗೆಲ್ಲ ಹಬ್ಬವಾಯಿತು!

ರೀ... ನಿಜ ಹೇಳ್ತಿದೀನಿ ಕಣ್ರಿ... ಆ ಸೃಷ್ಟಿಕರ್ತ ಸಾಗರದ ಅಂಚಿನ ಸಂಜೆಯಾಗಸ ಚಿತ್ತಾರದ ರೇಖೆಯಲ್ಲಿ ತಿದ್ದಿ ತೀಡಿ ಚಿತ್ರಿಸಿ ಧರೆಗಿಳಿಸಿದ ಚಂದನದ ಚೆಲುವು ನೀವು. ಬಾನಂಗಳ ಬಣ್ಣದ ರಾಶಿಯನ್ನು ಹೊದ್ದು ಸೂರ್ಯನ ಜೊತೆ ಮಿರುಗು ತಾರೆಯಾಗಿ, ಮರಳ ದಂಡೆಯ ಮೇಲೆ ಮಲ್ಲಿಗೆ ದಂಡೆಯಂತೆ ಮೆಲ್ಲನೆ ನಡೆದು ಚಿತ್ತಾರ ಬರೆದ ನಿಮ್ಮ ಆ ಪಾದದ ಗುರುತುಗಳು ನನ್ನೆದೆಯನು ಹೂದೋಟ ಮಾಡಿ ಕೆಂಪು ಗುಲಾಬಿ ಅರಳುವಂತೆ ಮಾಡಿವೆ. ಇದಿಷ್ಟೇ ಸಾಕಾಗದೆಂದು ಅನಿಸಿತೋ... ಏನೋ... ಕಡಲು ಸಂಜೆ ಸೂರ್ಯನನ್ನು ಸೆಳೆದೆಳೆದು ಒಳಗೆಳೆದುಕೊಂಡಂತೆ ನೀವು ನನ್ನನ್ನು ಸೆಳೆದುಕೊಂಡ ಆ ಮಧುರ ಕ್ಷಣ ನನ್ನೆದೆಯಲಿ ಬೆಳದಿಂಗಳು!

ಬರಿ ಹೆಜ್ಜೆ ಗುರುತುಗಳಲ್ಲೇ ನಿಮ್ಮ ದಿವ್ಯ ಸೌಂದರ್ಯಕ್ಕೊಂದು ಮುನ್ನುಡಿ ಬರೆದು ಪ್ರೇಮಕ್ಕೆ ಆಹ್ವಾನ ಕೊಟ್ಟ ಈ ನನ್ನ ಮನಸ್ಸಿಗೆ

ಅದೆಂಥ ಹೆಬ್ಬಯಕೆಯೋ... ಏನೋ... ನಿಮ್ಮನ್ನು ನೋಡದೆ ಬಿಡಲಾರೆ ಎಂಬ ಹೂ ಅರಳುವಿಕೆಯ ಕೋಮಲ ಹಟ ಬಂದೇ ಬಿಟ್ಟಿತು. ಮನಸೆಳೆಯುವ ಅರುಣೋದಯದಂತೆ ನಿಮ್ಮನ್ನು ಮುಡಿಯಿಂದ ನೀಳ ಮೂಗಿನ ತನಕ ನಿಧಾ...ನವಾಗಿ ಕಂಡಾಗ ನನ್ನ ‘ಜಾತ್ರೆ ಚೆಲುವೆ’ ನನಗಾಗಿ ಮತ್ತೊಮ್ಮೆ ಹುಟ್ಟಿ ಬಂದಿದ್ದಾಳೇನೋ... ಎಂಬ ಸಾಗರದಷ್ಟು ಸಂಭ್ರಮ ನನಗಾಯಿತು. ಆ ಸೌಂದರ್ಯದ ಸುಕೋಮಲ ಗಣಿಯನ್ನು ಕಳೆದುಕೊಂಡು ಒಂಬತ್ತು ವರ್ಷಗಳಾದ ಬಳಿಕ ಅವಳ ಪ್ರತಿರೂಪದಂತಿರುವ ನೀವು ನನಗೆ ಸಿಕ್ಕಿದ್ದು ನನ್ನೊಲವಿನ ಸಿರಿತನಕ್ಕೆ ಮತ್ತೊಮ್ಮೆ ನಾಂದಿ ಹಾಡಿದಂತಾಯಿತು.

ನನ್ನೊಲವಿನ ಮಂದಾರ ಹೂವೇ... ನೀವು ನಕ್ಕಾಗ ನಿಮ್ಮ ಮೇಲ್ದುಟಿಯ ಎಡ ಅಂಚಿನ ಕೆಳಗೆ ಇಣುಕುವ ಸ್ವಾತಿಮುತ್ತಿನಂಥ ಆ extra ಹಲ್ಲು, ಎದೆ ಹಿಗ್ಗಿಸಿ ಹಿಡಿದೆಳೆದ ಬಿಲ್ಲಿನಂತೆ ಕಾಣುವ ನಿಮ್ಮ ಆ ಕೋಮಲ ತುಟಿ, ನಿಮ್ಮ ಆ ಜಿಂಕೆ ಕಣ್ಣ ಮೇಲಿನ ಕಾಮನ ಬಿಲ್ಲಿನಾಕಾರದ ಕಡುಕಪ್ಪು ಹುಬ್ಬು, ಆ ಮುದ್ದು ಮೂಗು, ಆ ನತ್ತು, ಆ ವಾಲೆ, ಆ ನೋಟ, ಕಂಡೂ ಕಾಣದಂತಿರುವ ಆ ನಿಮ್ಮ ಬಿಂದಿ, ಆ ಮಿಂಚು, ಆ ಸೆಳೆತ, ಆ ಮುಗ್ಧತೆ, ಆ ಭಾವ, ಆ ಚೈತನ್ಯ, ಆ ನಡಿಗೆ... ಹೀಗೆ ಎಲ್ಲದರಲ್ಲಿಯೂ ನೀವು ಅವಳಂತೆ. ಒಮ್ಮೆ ತಿರುಗಿ ಮನಸ್ಸು ಕೊಟ್ಟರೆ ನಮಗಿಲ್ಲ ನೋವು ಸಾವು!

ನನ್ನ ಅಚ್ಚರಸಿಯೆ... ಏನ್‌ ಗೊತ್ತಾ...? ಕಡಲಲೆಯ ಮೇಲೆ ತೇಲಿ ಬರುವ ಆ ತಂಗಾಳಿ ನಿಮ್ಮ ಮುಂಗುರುಳನ್ನು ಸೋಕಿದಾಗ ನೀವು ಮಂದಸ್ಮಿತ ನಗುವಿನಲ್ಲಿ ಮೈ ಜುಮ್ಮೆನಿಸಿಕೊಂಡು ಕಡಲ ದಡದಲೆಯ ಬಳಿ ಸುಳಿದಾಡುತ್ತಾ... ಅಲೆಗಳು ಹೆಕ್ಕಿ ತಂದು ಬಿಟ್ಟು ಹೋದ ಕಪ್ಪೆಚಿಪ್ಪುಗಳನ್ನು ಆರಿಸುವಾಗ ನಾನು ನನ್ನನ್ನೇ ಮರೆತು ನಿಮ್ಮನ್ನು ಧ್ಯಾನಿಸುತ್ತ ಮರಳ ಹಾಳೆಯ ಮೇಲೆ ಹೃದಯ ಬೆಸೆಯುವ ಸುಭಾಷಿತ i love you forever ಎಂದು ಬರೆದು ಕಡಲ ಅಲೆಗೆ; ‘ನಿಂಗೆ ಧೈರ್ಯ ಇದ್ರೆ ಇಲ್ಲಿಗೆ ಬಂದು ಇದನ್ನು ಅಳಿಸು ನೋಡೋಣ’ ಎಂದು ಸವಾಲು ಹಾಕಿದ್ದೆ! ಆದ್ರೆ ಅಲೆಗಳು ಆರ್ಭಟಿಸಲೂ ಇಲ್ಲ! ಹತ್ತಿರ ಸುಳಿಯಲೂ ಇಲ್ಲ! ಯಾಕೆ ಗೊತ್ತಾ...? ನೀವು ನಿಮಗೆ ಗೊತ್ತಾಗದಂತೆ ಸುಭಾಷಿತದ ಬಳಿ ಬಂದು ಸಪ್ತಪದಿ ಮೂಡಿಸಿ ಹೋಗಿದ್ರಿ! ಆಮೇಲೆ ಮರಳು ರಾಶಿಯ ಮೇಲೆ ಕುಳಿತು ಮರಳು ಗೂಡನ್ನು ಕಟ್ಟಿ ಸಂಭ್ರಮಿಸಿ ಕಡಲು ಹಾರಿ ಹೋದವರು ಹಿಂತಿರುಗಿ ಬರಲೇ ಇಲ್ಲ.

ಕಡಲ ಚೆಲುವೆಯೇ... ನಿಮ್ಮ ಅಗಲಿಕೆಗೆ ಕಾರಣವಾದ ಆ ಕ್ಷಣವನ್ನು ಅನವರತವೂ ಶಪಿಸುತ್ತಿದ್ದೇನೆ. ಪಂಚಭೂತಗಳು ನೀವು ಓಡಾಡಿದ್ದ ಆ ಗುರುತುಗಳನ್ನು ಎಲ್ಲಿ ಲಯ ಮಾಡಿಬಿಟ್ಟಾವೋ... ಎಂಬ ಆತಂಕದಿಂದ ನೀವು ಮೂಡಿಸಿದ್ದ ಸಪ್ತಪದಿಯನ್ನು, ಕಟ್ಟಿ ಬಿಟ್ಟು ಹೋದ ಮರಳಿನ ಗೂಡು ಮತ್ತು ಅದರ ನೆರಳನ್ನು ಜೋಪಾನ ಮಾಡಿದ್ದೇನೆ. ಸೂರ್ಯಾಸ್ತವನ್ನು ಸವಿಯಲು ಹೋದಾಗಲೆಲ್ಲ ಕೆಂಬಾನು ಸೂರ್ಯನಲ್ಲೂ, ತಂಗಾಳಿ ತಂಪಿನಲ್ಲೂ, ಭೋರ್ಗರೆಯುವ ಅಲೆಯಲ್ಲಿಯೂ, ಮರಳ ರಾಶಿಯಲ್ಲೂ, ಕಪ್ಪೆ ಚಿಪ್ಪಿನಲ್ಲೂ, ಪ್ರತಿ ಹುಣ್ಣಿಮೆ ರಾತ್ರಿಯ ಕಡಲಲ್ಲೂ ನಿಮ್ಮದೇ ರೂಪ ಕಾಣುತ್ತೇನೆ. ಅಷ್ಟೇ ಅಲ್ಲ, ಅವಳಲ್ಲಿ ನಿಮ್ಮನ್ನು, ನಿಮ್ಮಲ್ಲಿ ಅವಳನ್ನು, ಅವಳಲ್ಲಿ ಅವಳನ್ನು, ನಿಮ್ಮಲ್ಲಿ ನಿಮ್ಮನ್ನು, ನನ್ನಲ್ಲಿ ನಿಮ್ಮನ್ನು, ಅಲ್ಲಲ್ಲಿ ನಿಮ್ಮನ್ನು, ಎಲ್ಲೆಲ್ಲೂ ನಿಮ್ಮನ್ನು ಕಾಣುತ್ತೇನೆ. ಈಗ ಅವಳು ನೆನಪು... ನೀವು ಕನಸು ಮನಸು ನನಸು! ಆ ಜಾತ್ರೆ ಚೆಲುವೆ ನನ್ನಿಂದ ಹಿಂದೆ ಹಿಂದೆ ಹೋಗಿ ದೂ...ರ ಸರಿದಂತೆ, ನೀವು ಮುಂದಡಿ ಇಟ್ಟು, ಹತ್ತಿರ ಬಂದಂತೆ ಭಾಸವಾಗುತ್ತದೆ. ನಿಮ್ಮ ನೆನಪು ಮತ್ತೆ ಮತ್ತೆ ಮರುಕಳಿಸಿ ಹಾಡುವ ಕ್ಷಣ ಕ್ಷಣವೆಲ್ಲವೂ ನನ್ನ ಜನುಮ ಜಾತ್ರೆ ಎನಿಸುತ್ತದೆ. ಆಗ ಆ ಜಾತ್ರೆಯಲ್ಲಿ ಸಂಭ್ರಮಿಸುತ್ತೇನೆ, ಧ್ಯಾನಿಸುತ್ತೇನೆ. ನಿಮ್ಮ ಕಾಣಲು ಕಾತರಿಸುತ್ತೇನೆ. ನನಗೋಸ್ಕರ ಒಮ್ಮೆಯಾದ್ರು ಬತ್ರೀರಿ ತಾನೆ...?
-ಪ್ರತಿ ಸೂರ್‍ಯಾಸ್ತದಲ್ಲೂ ನಿಮ್ಮನ್ನು ಕಾಯುವ
ಗಿರೀಶ್ ಮೂಗ್ತಿಹಳ್ಳಿ, ಮೈಸೂರು

****************************************************************************************************************
ಕೋಟಿ ಹೂ ಮುತ್ತುಗಳ ಬೇಡಿಕೆ ಮಂಜೂರಾಗುವ ಕಾಲ ಸನ್ನಿಹಿತವಾಗಿದೆ..!

ಪ್ರತೀಕ್ಷಣ
ಪ್ರಕಟಗೊಳ್ಳುವ ನನ್ನೆಲ್ಲಾ ಭಾವನೆಗಳ ಸುಂದರ ಸಂಚಿಕೆಯ ಸಂಪಾದಕಿಗೆ...
ಅದ್ಯಾವುದೋ ಗಳಿಗೆಯಲಿ ನನಗೇ ಅರಿವಿಲ್ಲದಂತೆಯೇ ನನ್ನ ಹೆಗಲೇರಿದ್ದ ಅಹಮ್ಮಿನ ಬೇತಾಳವನ್ನು ಮುಲಾಜಿಲ್ಲದೆ, ಮೂತಿ-ಮುಸುಡಿ ನೋಡದೆ ಕೆಳಗೆ ದಬ್ಬಿದ್ದೇನೆ. ಇಷ್ಟು ದಿನ ನಮ್ಮಿಬ್ಬರನ್ನು ದೂರ ಮಾಡಿದ್ದ ಪಾಪಿ ಅಹಮ್ಮು ಇಂದು ವಿಲ ವಿಲ ಒದ್ದಾಡಿ ಅಸುನೀಗಿದೆ! ಹೌದು ನಾನೀಗ ನನ್ನ ಅಹಮ್ಮನ್ನು ಕೊಂದು ಸೇಡು ತೀರಿಸಿಕೊಂಡಿದ್ದೇನೆ!

ವಿಪರ್ಯಾಸವೆಂದರೆ ಅಹಮ್ಮು ಹೆಗಲೇರಿದ್ದ ಬೆನ್ನಿನ್ನಲ್ಲೇ, ಕಳೆದ ಬಾರಿ ನಾವಿಬ್ಬರೂ ನಡೆಸಿದ್ದ ಒಲವಿನ ಚಳಿಗಾಲದ ಅಧಿವೇಶನದ ಸವಿನೆನಪಿಗಾಗಿ ಮುತ್ತು ಕೊಡುವ ನೆಪದಲ್ಲಿ ನನ್ನ ಯಾಮಾರಿಸಿ ನೀನೇ ಕಚ್ಚಿದ್ದ ಹಲ್ಲಿನ ಗುರುತೂ ಇದೆ, ಸವಿ ನೆನಪಿನ ನೋವು ಇದೆ....! ಅಂತೆಯೇ ಈ ಸಲ ಸಹ ಊರಿನ ಉಸಾಬರಿ ಕಟ್ಟಿಕೊಳ್ಳದೆ ಚಳಿ ತನ್ನ ಪಾಡಿಗೆ ತಾನು ಗಡತ್ತಾಗಿ ಬೆಳೆಯುತ್ತಿದೆ...! ತಾನು ಕೂಡ ಮತ್ತೊಂದು ಚಳಿಗಾಲದ ಅಧಿವೇಶನ ಆಯೋಜಿಸುವ ಉಮೇದಿನಲ್ಲಿದ್ದೇನೆ.....! ಮತ್ತೆ ಯಾಮಾರಲು ಬರಗೆಟ್ಟ ಬಿಕನಾಸಿಯಂತೆ ಹಾತೊರೆಯುತ್ತಿದ್ದೇನೆ !

ಹೌದು ಹುಡುಗಿ. ನಿನ್ನ ಊಹೆ ಸರಿಯಾಗಿಯೇ ಇದೇ! ಈ ವರುಷದ ಒಲವಿನ ಚಳಿಗಾಲದ ಅಧಿವೇಶನಕ್ಕೆ ಮತ್ತೆ ನಿನ್ನ ಆಹ್ವಾನಿಸುವ ಸಲುವಾಗಿ ಈ ಆಮಂತ್ರಣ ಪತ್ರ ಬರೆಯುತ್ತಿದ್ದೇನೆ ಮತ್ತೂ ಸಕಲ ಸಿದ್ಧತೆಗಳನ್ನು ನಡೆಸುತ್ತಿದ್ದೇನೆ.!

ಎಷ್ಟೊಂದು ದಿನ ಸವೆದು ಹೋದವು ನೀನಿಲ್ಲದೆಯೇ? ಅಚಾನಕ್ಕಾಗಿ ಗ್ರಂಥಾಲಯದಲ್ಲಿ ಕಂಡವಳು ನೀನು. ಆದರೆ ಮತ್ತೇ ಮತ್ತೇ

ನಿನ್ನೆಡೆಗೆ ನೋಡುವಂತೆ ಮಾಡಿದ್ದು ಮಾತ್ರ ಅದೇ ನಿನ್ನ ಮೂಗು ಬೊಟ್ಟು ಮತ್ತು ನನಗಷ್ಟೇ ಪರಿಚಿತವಿರುವ ನಿನ್ನ ಮುಗ್ಧ ಮನಸ್ಸಿನ ಶುಭ್ರ ಬಿಳಿ ಬಣ್ಣದ ಚಿತ್ರಗಳು.!

ಗ್ರಂಥಾಲಯದಲ್ಲಿ ನಿಶ್ಶಬ್ಧವಾಗಿರಿ ಎಂಬ ಸೂಚನಾ ಫಲಕ ಇದ್ದರು ಸಹಿತ ಯಾವುದಕ್ಕೂ ಕಿಂಚಿತ್ತು ಕಿಮ್ಮತ್ತು ಕೊಡದೆ ಪರಸ್ಪರ ಅದೆಷ್ಟೊಂದು ಮಾತನಾಡಿಕೊಂಡುಬಿಟ್ಟವು ನಮ್ಮ ಕಣ್ಣುಗಳು! ನಿಯಮ ಮುರಿದ ನಿನ್ನ ಕಣ್ಣುಗಳಿಗೆ ನಾನು ಕೊಟ್ಟ ಇನಾಮು-ಪ್ರೀತಿ! ಯಾವಾಗಲೂ ಪರರ ಸ್ವತ್ತು ಪಾಷಾಣ ಎಂದು ಹೇಳುತ್ತಿದ್ದ ನೀನು, ಗಾದೆ ಪಾಲಿಸುವ ಸಲುವಾಗಿ ಹಿಂತಿರುಗಿಸಿದ್ದು ಕೂಡ ನೂರು ಪಟ್ಟು ಪ್ರೀತಿ! ನೀನು ತೋರಿದ ನಿಯತ್ತಿಗೆ ಮರುಳಾಗಿ ನಿನ್ನ ಹೆಸರನ್ನೇ ಮನದ ಪ್ರಕಾಶನ ಹೊರತಂದ ಕನಸುಗಳ ಹೊತ್ತಿಗೆಗೆ ಶೀರ್ಷಿಕೆ ಮಾಡಿಬಿಟ್ಟೆ! ಆ ಪುಸ್ತಕವನ್ನು ಅದೆಷ್ಟು ಬಾರಿ ಓದಿಕೊಂಡೆನೋ? ಆ ಭಗವಂತನಿಗೆ ಮಾತ್ರ ಗೊತ್ತು.

ಸಾಲದೆಂಬಂತೆ, ನಿನ್ನೊಲವಿಗೆ ಸದ್ದಿಲ್ಲದೆ ಸನ್ನದುದಾರನಾಗುವ ಸೌಕರ್ಯದ ಸೌಭಾಗ್ಯ ಸಹ ಸಿಕ್ಕಿಬಿಟ್ಟಿತು. ಆ ಖುಷಿಗೆ ಎಂದಿಗೂ ದೇವರ ಮುಖವನ್ನು  ನೋಡದವ ಕೂಡ, ಆವತ್ತು ಮಾತ್ರ ನಿನ್ನ ಹೆಸರಲ್ಲಿ ಅರ್ಚನೆ ಮಾಡಿಸಿ ಹೂ ತಂದು ಖುದ್ದು ನಾನೇ ನಿನ್ನ ಜಡೆಗೆ ಮುಡಿಸಿ ನಿನ್ನ ಕಣ್ಣಂಚಲ್ಲಿ ಹನಿಯೊಂದು ಹೊರ ಜಗತ್ತನ್ನು ನೋಡುವಂತೆ ಮಾಡಿ ಬಿಟ್ಟಿದ್ದೆ! ನಮ್ಮ ಬದುಕಿನ ಅಮೃತ ಘಳಿಗೆಯೊಂದು ಸೃಷ್ಟಿಯಾದ ವೃತ್ತಾಂತವನ್ನು ನೆನೆದುಕೊಂಡರೆ ಈಗಲೂ ನನಗೆ ರೋಮಾಂಚನವಾಗುತ್ತದೆ. ನಿನಗೂ ಸಹಿತ ಹೀಗೆ ಆಗುತ್ತಿರಬೇಕಲ್ವಾ ...?
ಮುಂದೆ ಏಕಾ ಏಕಿ ನಿನ್ನ ಮನದ ದುಖಾನಿಗೆ ಖಾಯಂ ಗಿರಾಕಿಯಾಗಿಬಿಟ್ಟೆ ನಾನು! ಆಷಾಡ-ಶ್ರಾವಣಗಳನ್ನು ಲೆಕ್ಕಿಸದೆ ಪ್ರೀತಿ ಒಲುಮೆಗಳ ವಹಿವಾಟು ನಡೆಸಿಬಿಟ್ಟೆವು. ಈ ಅತೃಪ್ತ ಗ್ರಾಹಕನ ಅದೆಷ್ಟೋ ಬೇಡಿಕೆಗಳನ್ನು, ನಾಜೂಕಾಗಿ ಯಾವುದೇ ಲೋಪ-ದೋಷವಿಲ್ಲದೆ ಈಡೇರಿಸಿ ಸಂತೃಪ್ತಗೊಳಿಸಿದ ವರ್ತಕಿ ನೀನು.!

ಯಾವುದೇ ಲಾಭದ ದೃಷ್ಟಿಯಿಲ್ಲದೆ ಕೇವಲ ಗ್ರಾಹಕನ ಅಭ್ಯುದಯಕ್ಕಾಗಿಯೇ ಶ್ರಮಿಸುವ ನಿನ್ನಂತಹ ವರ್ತಕಿಯನ್ನು ಕಂಡು ಒಳ ವ್ಯಾಪಾರಗಳನ್ನು ನಡೆಸುವ ಶಿಷ್ಟ ಜಗತ್ತು ಮೂಗಿನ ಮೇಲೆ ಬೆರಳು ಇಟ್ಟುಕೊಂಡಿತು. ಯಾವುದಕ್ಕೂ ಕ್ಯಾರೇ ಅನ್ನದೆ ನೀನು ಮಾತ್ರ ನಿನ್ನ ವೃತ್ತಿಯನ್ನು ಮುಂದುವರಿಸಿದೆ. ನಿನ್ನ ದಿಟ್ಟತನ ಮೆಚ್ಚಲೇ ಬೇಕಾದದ್ದು. ಈ ವಿಷಯದಲ್ಲಿ ನಿನ್ನನ್ನು ಅದೆಷ್ಟು ಪ್ರಶಂಸಿಸಿದರೂ ಸಾಲದು. ಎಷ್ಟಾದರೂ ನೀನು ಗಟ್ಟಿಗಿತ್ತಿ ಅಲ್ಲವೇ...!

ಇಷ್ಟೊತ್ತಿಗೆ ಎಲ್ಲವೂ ಅಂದುಕೊಂಡಂತೆ ಆಗಿ ಹೋಗಿದ್ದರೆ, ನಿನ್ನ ಮಡಿಲಲ್ಲೊಂದು ಕಾಯಂ ನಿವೇಶನ ಕೊಂಡು ಆರಾಮಾಗಿ ಬದುಕು ನಡೆಸುತ್ತಿದ್ದೆ. ಆದರೆ ಸರೀಕರು ಎಂಬ ಹಣೆಪಟ್ಟಿ ಹೊತ್ತ ಮಂದಿ ನಮ್ಮನ್ನು ಅಗಲಿಸಲು ಎಷ್ಟೊಂದು ಸಾಹಸ ಮಾಡಿಬಿಟ್ಟರು. ಅವರ ಹುಚ್ಚು ಸಾಹಸಗಳೆಲ್ಲ ನನ್ನೆದೆಯ ಭಾವನೆಗಳು ಸಾಮೂಹಿಕ ಧಿಕ್ಕಾರ ಕೂಗಿ ಮರಳಿ ನಿನ್ನೆಡೆಗೆ ಬರುವಂತೆ ನನ್ನ ಪ್ರೇರೆಪಿಸಿಬಿಟ್ಟವು. ಹೌದು ಗೆಳತಿ ಮತ್ತೇ ಬರುತ್ತಿದ್ದೇನೆ ನಿನ್ನ ಒಡಲಿಗೆ, ನಿನ್ನ ಮಡಿಲಿಗೆ ಹಾಗೂ ಎದೆಯ ಕಡಲಿಗೆ....

ಯಾವುದೋ ಬಾಲಿಶ ಕಾರಣಕ್ಕೆ ನಿನ್ನ ಮೇಲೆ ರೇಗಿ, ಮುನಿಸಿಕೊಂಡು ನಿನ್ನಿಂದ ದೂರಾದ ಮೇಲೆ ಜಗತ್ತಿನ ಎಲ್ಲಾ ಪ್ರೇಮಿಗಳ ಪರಮ ವೈರಿಯಾದ ‘ವಿರಹವು’ ನನ್ನ ಮೇಲೂ ಹಿಂದು-ಮುಂದು ನೋಡದೆ ಯುದ್ಧವನ್ನು ಸಾರಿಬಿಟ್ಟಿತು. ವಿರಹವನ್ನು ಎದುರಿಸಲಾರದೆ ಸೋತು ಶರಣಾಗತನಾಗಿ ಹೋದೆ ನಾನು.

ನಿಜವಾಗಿಯೂ ನುಡಿಯುತ್ತಿದ್ದೇನೆ. ನಿನ್ನ ಸಾನಿಧ್ಯವಿಲ್ಲದೆ, ನಿನ್ನ ಸಾಮೀಪ್ಯವಿಲ್ಲದೆ ಅಕ್ಷರಶಃ ನಾನು ನನಗೇ ಪರಕೀಯನಾಗಿಬಿಟ್ಟೆ. ನಿನ್ನ ನೆನೆದು-ನೆನೆದು ಅದೆಷ್ಟೋ ನೀರವ ರಾತ್ರಿಗಳಲ್ಲಿ ಹೊಟ್ಟೆಬಾಕ ನನ್ನ ಕಣ್ಣುಗಳಿಗೆ ನಿದ್ದೆಯಿಲ್ಲದೆ ಉಪವಾಸ ಕೆಡವಿದ್ದೇನೆ! ಮತ್ತೂ ಎರಡು ಕತ್ತೆ ವಯಸ್ಸಾಗಿದ್ದರೂ ನೀನೇ ಬೇಕೆಂದು ಪುಟ್ಟ ಮಗುವಿನಂತೆ ಅತ್ತು ಹಟ ಮಾಡಿದ್ದೇನೆ. ಸಾಲದೆಂಬಂತೆ ಅಂತಹ ರಾತ್ರಿಗಳಲ್ಲೇ ನಿನ್ನ ಸಮಸ್ತ ನೆನಪುಗಳನ್ನೆಲ್ಲಾ ಗುಮಾಸ್ತನ ಹಾಗೆ ಲೆಕ್ಕ ಮಾಡಿ ಎದೆಯ ಅಲಮಾರಿನೊಳಗಿಟ್ಟು ಕಾಪಾಡಿಕೊಂಡು ಬಂದಿದ್ದೇನೆ. ನೀನಿಲ್ಲದೆಯೇ, ಏಕಾಂಗಿಯಾಗಿ ಒಲವಿನ ಬೇಸಾಯವನ್ನು ನಡೆಸಿದ ಪರಿಣಾಮ ನಮ್ಮ ಪ್ರೀತಿ ಇಳುವರಿಯಲ್ಲಿ ಗಣನೀಯವಾಗಿ ಇಳಿಮುಖವಾಗಿದೆ. ಮನದ ಕಣಜ ಖಾಲಿ ಖಾಲಿ ಎನಿಸುತ್ತಿದೆ.

ಹೌದು ಗೆಳತಿ, ಮರಳಿ ನನ್ನೆದೆಯ ಹೊಲವನ್ನು ವಶಪಡಿಸಿಕೊ, ಬೇಕಾದರೆ ಅತಿಕ್ರಮಿಸಿಕೊ, ನನ್ನದೇನೂ ಅಭ್ಯಂತರವಿಲ್ಲ! ಮತ್ತೆ ಊರಿನ ಜನರ ಕಣ್ಣು ಕುಕ್ಕುವಂತೆ ಪ್ರೀತಿ ಸುಗ್ಗಿಮಾಡು. ನನ್ನ ಅಸ್ತಿತ್ವವನ್ನು ಕಾಪಾಡು. ತುಂಬಾ ನೊಂದಿದ್ದೇನೆ. ನನಗೆ ಕೋಟಿ ಕನಸುಗಳ ಹಡೆದು ಕೊಟ್ಟ ಮಹಾತಾಯಿಯೇ ಕ್ಷಮಿಸಿಬಿಡು ಈ ಹುಡುಗನನು.

ನೆನಪಿದೆಯಾ ಹುಡುಗಿ? ಆವತ್ತು ನಾನು ನಿನಗೆ ಕೊಟ್ಟ ಆಶ್ವಾಸನೆಯಂತೆ ಪ್ರಣಯ ಪ್ರಣಾಳಿಕೆಯಲಿ ಪ್ರಸ್ತಾಪಿಸಿರುವ ಬರೋಬ್ಬರಿ ಕೋಟಿ ಹೂ ಮುತ್ತುಗಳ ಪ್ರಾಯೋಜಿಸಲು ನನ್ನ ತುಟಿಗಳ ಇಲಾಖೆಗೆ ಅರ್ಜಿ ಹಾಕಿ ಒಪ್ಪಿಸಿದ್ದೇನೆ! ನಿನ್ನ ಬೇಡಿಕೆಗಳೆಲ್ಲವೂ ಮಂಜೂರಾಗುವ ಕಾಲ ಸನ್ನಿಹಿತವಾಗಿದೆ. ಫಲಾನುಭವಿಯಾಗಲು ಸಿದ್ಧಳಾಗು...! ಇಷ್ಟು ದಿನ ನಿನ್ನ ಅನುಪಸ್ಥಿತಿಯಲ್ಲಿ ನಿರುದ್ಯೋಗದ ಸಮಸ್ಯೆಯಿಂದ ಬಳಲಿದ ನನ್ನ ತೋಳುಗಳಿಗೆ ನಿನ್ನ ಅಪ್ಪಿಕೊಳ್ಳುವ ಕೆಲಸ ಸಿಗಲಿ, ನಿವೃತ್ತಿಯ ಚಕಾರ ಎತ್ತುವುದಿಲ್ಲ. ಕರುಣೆ ತೋರು, ಬದುಕಿಕೊಳ್ಳಲಿ ಬಡಪಾಯಿ ತೋಳುಗಳು.!

ಇಲ್ಲಿಗೆ ಇಷ್ಟು ಸಾಕು, ಬೇಗ ಸಿದ್ಧಳಾಗಿ ಈ ಸಂಜೆಯೇ ಬಂದು ಬಿಡು. ಹೇಳಬೇಕಾದ ಬಾಕಿ ಮಾತುಗಳ ಭಂಡಾರವೇ ನನ್ನಲ್ಲಿದೆ, ಎಲ್ಲವನ್ನೂ ನಮ್ಮ ಒಲವಿನ ಚಳಿಗಾಲದ ಅಧಿವೇಶನದಲ್ಲಿಯೇ ಪ್ರಸ್ತಾಪಿಸುತ್ತೇನೆ. ನನ್ನನ್ನೇ ನಿನಗೆ ಸಮರ್ಪಿಸುತ್ತೇನೆ.

ಇಂತಿ
ನಿನ್ನ ಆಗಮನದ ನಿರೀಕ್ಷಕ
ಮಹೇಂದ್ರ ಎಸ್. ತೆಲಗರಹಳ್ಳಿ,
ಬೆಂಗಳೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT