ಶನಿವಾರ, 28 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೊದಲ ಬಹುಮಾನ

Published : 11 ಫೆಬ್ರುವರಿ 2015, 19:30 IST
ಫಾಲೋ ಮಾಡಿ
Comments

ಹುಡುಗಿ ರೂಪ್ದಾಗ್ ಕಾಣೂ ತುಂಡು ಕಾಮನಬಿಲ್ಲು

ನನಗ ನಿಮ್ ಮ್ಯಾಲ ಭಾರಿ ಪ್ರೀತಿ ಆಗ್ಯದ, ಐ ಲವ್ ಯೂ ರೀ. ನಿಮಗೆ ಕೊಡಾಕಂತ ಬರ್‍ದು ಕಪಾಟ್ ಸೇರ್‌ಕೊಂಡಿರೊ ಅನೇಕ ಪ್ರೇಮಪತ್ರಗಳ ಗೊಣಗಾಟ ಕೇಳಕಾಗ್ದ ಭಯಂಕರ ಧೈರ್ಯ ಮಾಡಿ ಈ ಪ್ರೇಮಪತ್ರಾನ ನಿಮಗ ಒಪ್ಸಾಕತ್ತೇನಿ, ಓದ್ಕೋರಿ.

ನಾ ನಿಮ್ಮನ್ ಮೊದಲ್ನೇ ಸಲ ನೋಡ್ದಾಗನ ಹೇಳ್ದ ಕೇಳ್ದ ದಿಢೀರ್‌ನ ಭಾಳ ಇಷ್ಟಪಟ್‌ಬಿಟ್ಟೇನ್ರಿ. ಯಾಕ ಅಂತ ಗೊತ್ತಿಲ್ಲ, ಅವತ್ತಿಂದ ನನ್ನನ್ನ ತುಂಬಾ ಕಾಡ್ತಾ ಇರೊ ಏಕೈಕ ಸಂಗತಿ ಅಂದ್ರ ಅದು ನೀವು, ಹಗಲಿ ಮುಗಲಿ ಕಿವ್ಯಾಗ್ ಅನುರಣಿಸೂ ಹಾಡು ಅಂದ್ರ ಅದು ನೀವು, ನಾ ಹಿಂಗ ಸುಮ್ ಸುಮ್ನ ನಗೂದು, ಕುಣಿಯೂದು ಇದಕ್ಕೆಲ್ಲ ಇರೊ ನೆಪ ಅಂದ್ರ ಅದು ನೀವು, ನೋಡಿದ ಕಡೀಲೆಲ್ಲಾ ಮೂಡ್ತಾ ಇರೊ ಚಿತ್ರ ಅಂದ್ರ ಅದು ನೀವು, ಕಂಬಳಿ ಮ್ಯಾಲೊಂದ್ ಕಂಬಳಿ ಹೊತ್ಕೊಂಡ್ರೂ ರೋಮಾಂಚನ ನೀಡೂ ಥಂಡಿ ಅಂದ್ರ ಅದು ನೀವು, ಮಳಿ ಬಂದ್ರೂನು, ಬರದ್ಹಂಗ್ ಇದ್ರೂನು ನನ್ನ ನೆನಸೂ ಹನಿ ಅಂದ್ರ ಅದು ನೀವು, ನಾನು ಕಂಡಂಗ ಬಟ್ಟಿ ಉಟ್ಕೊಳ್ಳು ಏಕೈಕ ಹೂವು ಅಂದ್ರ ಅದು ನೀವು, ಹುಡುಗಿ ರೂಪ್ದಾಗ್ ಕಾಣೂ ತುಂಡು ಕಾಮನಬಿಲ್ಲು ಅಂದ್ರ ಅದು ನೀವು, ಆಕಾರ ಪಡ್ಕೊಂಡಿರೊ ಸ್ವರಗಳ ರೂಪ ಅಂದ್ರ ಅದು ನೀವು, ಗಿಜುಗುಡು ಗದ್ಲ ಇರೊ ಜಾತ್ರಿಯೊಳಗ ನನ್ನನಾವರಿಸೂ ಏಕಾಂತ ಅಂದ್ರ ಅದು ನೀವು, ಆಕಾಶಕ್ ಕೈಚಾಚಿ ನಾಗೀಚೊ ಹೆಸರಿನ್ ಒಡತಿ ಅಂದ್ರ ಅದು ನೀವು, ನಟ್ಟ ನಡುರಾತ್ರ್ಯಾಗ ನಿದ್ದಿ ತೊರದು ಎದ್ ಕುಂದ್ರಾಕ್ ಇರೂ ಅದ್ಭುತ ಕಾರಣ ಅಂದ್ರ ಅದು ನೀವು, ನನಗ ಸೋಂಕಿದ ವಾಸಿಯಾಗ್ದಂಗಿರೋ ಕಾಯಿಲೆ ಅಂದ್ರ ಅದು ನೀವು, ಮನದ ಟಾಕೀಸ್‌ನ್ಯಾಗ ಯಶಸ್ವಿ ಪ್ರದರ್ಶನ ಕಾಣ್ತಿರೋ ಸಿನೆಮಾ ಅಂದ್ರ ಅದು ನೀವು, ಒಟ್ನ್ಯಾಗ ಹೇಳ್ಬೇಕಂದ್ರ ಮೇಘದೂತ ಕಾವ್ಯದ ಶಾಕುಂತಲೆಗೆ ಉದಾಹರಣ ಅಂದ್ರ ಅದು ನೀವು, ಮುಂಜಾನಿ, ಎಳಿಬಿಸ್ಲು, ಇಳಿಸಂಜಿ, ತಂಗಾಳ್ಯಾಗಿನ್ ನನ್ನ ಉನ್ಮಾದ ಅಂದ್ರ ಅದು ನೀವು, ನನ್ ಪಾಲಿನ ಸಂಭ್ರಮದ ಪ್ರಪಂಚ ಅಂದ್ರ ಅದು ನೀವು, ನೀವಂದ್ರ ಭಾವ, ಕನಸು, ಕಾವ್ಯಕಸೂತಿ, ತಾಜ್ಮಹಲಿಗಿಂತ ತುಸು ಸಣ್‌ಕಿರೊ ಮಸೂತಿ.

ನಿಮ್ಮನ್ ನೋಡಿದ್ ಕೂಡ್ಲೆನ ಹೊಸ ಕವನ ಓದ್ದಷ್ಟು ಖುಷಿ ಆಗ್ತದ್ರಿ ನನಗ. ನಿಮ್ಮ ದೇದೀಪ್ಯಮಾನದ ಕಂಗಳು, ಕರಿಯಾಲಿ, ಪಟಪಟಿಸೂ ಕಣ್‌ರೆಪ್ಪಿ, ಚಂದ್ಕಿರೊ ಹುಬ್ಬು, ಶ್ರೀಮಂತ ಹಣಿ, ಹಾಲು ಕೆನೆಗಟ್ಟಿದ ಗಲ್ಲ, ಕಪ್ಪಿಚಿಪ್ಪಿನ ಕಿವಿ, ಕಿವ್ಯಾಗಿನ್ ಓಲಿ, ಸಂಪಿಗಿ ಮೂಗು, ಕವಿತೆ ಹುಟ್ಟಿಸಬಲ್ಲ ಮೂಗುತಿ, ತುಂಟಾಟದ ತುಟಿಗೂಳು, ಎಡಗೈಲಿ ಅಕ್ಷರ ಬರೆದಂಗಿರೊ ವಂಕಾಟಿಂಕಾ ಹಲ್‌ಗೂಳು, ನೆಟ್ಟಗಿರೊ ಬೊತಾಲಿ, ಸಾಕ್ಷಾತ್ ಕತ್ತಲು ನಾಚ್ಕೊಳ್ಳೊ ಕೂದಲಿನ ನಾಗರಜಡಿ, ಜಡ್ಯಾಗಿನ್ ಹೂವು, ಆಗೊಮ್ಮಿ ಈಗೊಮ್ಮಿ ಅಂತ ತಂಗಾಳಿ ಜೊತಿಗಿ ಚಿನ್ನಾಟ ಆಡೂ ಮುಂಗುರುಳು, ಅವುನ್ ಹಿಡದ ಸರಿಮಾಡೂ ಕೈಬೆರಳು, ಕೊಳಲಿನ ಕೊರಳು, ತೆಳ್ಳಗಿರೊ ದನಿ,

ನೀಳ ತೋಳು, ಕೈಗೆ ತಿಕ್ಕಿ ಗಂಧ ಹೊಮ್ಸೂವಂತ ಕೈಬಳಿ, ಚೂಡಿದಾರದ ಓಡ್ನಿ, ಬಿಸಿಲುಕೋಲಿನ ನಿಲುವು, ನಕ್ಷತ್ರಚುಕ್ಕಿ ಹೊಳಪು, ಚಂದ್ರನ ಕಾಂತಿ, ಸೂರ್ಯಾನ್ ಪ್ರಭಾವಳಿ, ಸಣ್‌ಸಣ್ ಹೆಜ್ಜಿ, ನನ್ ಅಸ್ತಿತ್ವಕ್ಕ ಧಕ್ಕಿ ತಂದಿಟ್ಟ ಪ್ರಾಂಜಲ ಮನಸಿನ್ ನಗು, ಎಷ್ಟೂಂತ ಬರಿಯೋದ್ರಿ? ನೀವ್ ಕಣ್ಣೆದುರಿಗಿದ್ರ ನಂಗಂತೂ ಅದು ಖರೇನ ಶ್ರಾವಣ, ನಿಮ್ ಮ್ಯಾಲಿನ್ ಪ್ರೀತಿ ಅತಿಯಾಗಿರದ ಇದಕ್ ಕಾರಣ. ಅವತ್ತೊಂದಿನ ಹಸುರು ಬಣ್ಣದ ಚೂಡಿದಾರ ಉಟ್ಟು, ಏರಿಸಿ ತಲಿ ಬಾಚ್ಕೊಂಡು, ಘಮ್ಮನೆಯ ಸಂಪಿಗಿ ಹೂ ಮುಟ್ಕೊಂಡು ಬಂದಾಗಂತೂ ನಾ ಭೂಮಿ ಮ್ಯಾಗ ಇದ್ದಿರಕಿಲ್ಲ. ನನ್‌ತಾಕ ಇರೊ ಇಷ್ಟ ಇಷ್ಟ್ ಪದಗುಳೊಳಗ ಎಷ್ಟಂತ ವರ್ಣಿಸ್ಲಿ? ಅಪ್ಸರೆ ಹಾಂಗ್ ಕಾಣಸ್ತಿದ್ರಿ. ನಿಮ್ ಸಾದಾ ಸೀದಾ ರೂಪಾನ್ ವರ್ಣಿಸದು ಅಂದ್ರನ ನನಗದು ಯಯಾತಿ ಯತ್ನ ಅಂತಾದ್ರಾಗ ಯಾದ ಕಾರ್ಯಾವ್‌ಕಂತ ಸೀರಿ ಉಟ್ಕೊಂಡು, ನಿಮ್ಕಿಂತ ಒಂಚೂರ್ ಕಮ್ಮಿ ಬೆಳ್ಳಗಿರೊ ಮಲ್ಲಿಗಿ ಹೂ ಮುಟ್ಕೊಂಡು, ಛಾವಿ ಕೊಟ್ ಗೊಂಬಿಗತೆ ಹಗೂರಕ ನಡ್ಕೊಂಡ್ ಬರ್ತಿದ್ರ ... ಜಗತ್ತಿನ ಎಂಟನೇ ಅದ್ಭುತ. ನೂರೇನು? ಇನ್ನೂರ್ ಕಣ್ ಇದ್ದಿದ್ರೂ ಸಾಲ್ದಾಗ್ತಿದ್ವು ನಿಮ್ ಛಂದ ನೋಡಾಕ. ಸ್ವರ್ಗಾನ ಇಳ್ದಂಗಿತ್ತು ಕಾಲೇಜ್ ಕ್ಯಾಂಪಸ್‌ನ್ಯಾಗ. ನನ್ನ ನೋಟಕ್ಕ ಕಾಣ್ಕಿಯಾಗಿ ಧಕ್ಕಿರ ದೇವತೆ ರೀ ನೀವು. ನಿಮ್ ಅಂದ ಚಂದದ್ ಬಗ್ಗೆ ಬರಿಬೇಕಂದ್ರ ಸಾಹಿತ್ಯಿಕ ವಿಭಾಗದಾಗ ಕನಿಷ್ಠರೆ ಅಂದ್ರ ನೊಬೆಲ್ ಪ್ರಶಸ್ತಿನರ ತಗೊಂಡಿರ ಆಸಾಮಿ ಆಗ್ಬೇಕ್ರಿ. ನಾನೋಡಿದ್ರ ಅರ್ಧ ಬಿಎದಾಂವ! ಏನಂತ ಬರೀಲಿ?

ಗಣಿತದಾಗ ಇನ್ನೊಂದಿಷ್ಟ್ ಆವಿಷ್ಕಾರಗಳ ಅವಶ್ಯಕತಾ ಐತ್ರಿ. ಯಾಕಂದ್ರ ನೀವ್ ನನಿಗ್ ಕೊಟ್ ಅಷ್ಟೂ ಕನ್ಸಗುಳ್ನ ಲೆಕ್ಕಹಾಕಿ ಹೇಳ್ಳಿಕ್ಕ ಈಗಿರ ಅಂಕಿ-ಸಂಖಿ ಸಾಲ್ವಲ್ವು ನೋಡ್ರಿ. ಈ ಎಲ್ಲಾ ಕನ್ಸಗುಳ್ನ ನಿಮ್ ಕೂಡ ಹೊಸಾ ಭಾಷಿಯೊಳಗ ಹಂಚ್ಕೊಬೇಕು ಅನ್ನೋ ಇನ್ನೊಂದ್ ದೊಡ್ ಕನ್ಸದರಿ. ಅಭೋದ ಬದುಕಿನ ಅಡ್‌ಕಸಬಿಗ ಇದ ಮೊದಲ ಸರತಿ ಜೀವ ಉಕ್ಕಿ ಬರುವಷ್ಟು ಭಾವುಕತೆ ಉಂಟಾಗೇತ್ರಿ. ಜಗತ್ನ್ಯಾಗ ಯಾರು ಹೆಚಿಗಿ ಪ್ರೀತಿ ಮಾಡ್ತಾರ ಅನ್ನೂ ಸ್ಪರ್ಧಾದಾಗ ನಾ ಸೋಲ್ಬಹುದ್ರಿ ಆದ್ರ ನಿಮ್ಮನ್ ಯಾರು ಹೆಚಿಗಿ ಪ್ರೀತಿ ಮಾಡ್ತಾರ ಅನ್ನೋದ್ರಾಗ ಬಂಗಾರದ ಪದಕ ಕೊಳ್ಳಿಗ ಹಾಕ್ಕೊಂಡ ಸ್ಪರ್ಧಾಕ್ ನಿಲ್ತಿನ್ರಿ ನಾ. ನೀವಂದ್ರ ನನಗ ಭಾಳ ಪ್ರೀತಿ ರೀ, ಭಾಳ ಅಂದ್ರ ಭಾಳ ಪ್ರೀತಿ ರೀ. ಆಣಿಕಟ್ಟಿ ಕಟ್ಟೂದು ಉಪಯೋಗ ಇಲ್ಲ ಅನ್ನಸ್ತದರಿ ಅಷ್ಟು ರಭಸವಾಗಿ ಹರಿಲಿಕ್ಕತ್ತದ ಪ್ರೀತಿ. ನೀವ್ ನನ್ ಜೀವದ ಹತ್ರ ಇಲ್ರಿ ಬದ್ಲಿಗೆ ಜೀವದ ಒಳಾಗ ಅದಿರಿ. ಹುಚ್ಚು ಹಿಡ್ದದರಿ ನನಗ ನಿಮ್ ಹುಚ್ಚು ಹಿಡ್ದದ. ಅಗದೀ ಜವಾರಿ ಪ್ರೀತಿನ ಎದಿಯೊಳಗ್ ಇಟ್ಕೊಂಡು ನಿಮ್ ಕಡಿ ಕೈ ಚಾಚ್ಕೊಂಡು ಕಕ್ಕಾಬಿಕ್ಕಿ ಆಗಿ ಕುಂತಿನ್ರಿ. ನೋಡಾಕರೆ ಖಂಡಾಪಟ್ಟೆ ಒಳ್ಳೆಕಿ ಅದೀರಿ ಖರೆ. ಕೈ ಹಿಡೀತಿರಲ್ಲಾ? ನೀವ್ ನನ್ ಜೊತಿಯಾಗ್ರಿ ಸಾಕು ಕತಿ ಬ್ಯಾರ್‍ಯಾನ ಅದ. ಬಾಕಿ ಏನಿಲ್ರಿ ಈ ಪತ್ರದ ಮೊದಲ ಸಾಲ್ನ ಇನ್ನೊಂದ್ ಸರತಿ ಓದ್ರಿ.
ನಿಮ್ಮಾಂವ
-ಲಿಂಗರಾಜ ಎಸ್. ಇಟಗಿ,  ರಾಣೇಬೆನ್ನೂರು.

                                  *************************************************************
ಕಾಯುವಿಕೆಯಲ್ಲಿ ಸುಖವಿದೆ ಗೆಳೆಯಾ

ಪ್ರೀತಿಯ ಬಾಳಸಂಗಾತಿಗೆ 25 ವರ್ಷಗಳ ದಾಂಪತ್ಯದಲ್ಲಿ ಬರೆಯುತ್ತಿರುವ ಮೊದಲ ಪ್ರೇಮಪತ್ರ. ಪ್ರೀತಿಯ ಇನಿಯ ಶ್ರೀನಿವಾಸ್‌, ನಿನ್ನನ್ನು ನಲ್ಲ ಎನ್ನಲೆ, ಪ್ರಿಯಕರ ಎನ್ನಲೇ. ಇದು ನಮ್ಮ  25ನೇ ವರ್ಷದ ವಿವಾಹದ ವಾರ್ಷಿಕೋತ್ಸವ 14–6–2015ಕ್ಕೆ ನನ್ನ ಒಲವಿನ ಕಾಣಿಕೆ.

ನು ನಿಮ್ಮನ್ನು ಪ್ರೀತಿಸಿದ್ದು ಭಾವನ ತಮ್ಮ ಎಂಬ ಕಾರಣಕ್ಕಲ್ಲ. ನಿಮ್ಮ ಸೌಂದರ್ಯಕ್ಕೂ ಅಲ್ಲ, ನಿಮ್ಮ ಬಿಚ್ಚು ಮಾತುಗಳಿಗೆ, ನೇರ ನುಡಿಗಳಿಗೆ. ನೀವು ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡು ಆಟೋ ಡ್ರೈವರ್‌ ಆಗಿದ್ದರೂ ನಾನು ನಿಮ್ಮನ್ನೇ ಪ್ರೀತಿಸಿದೆ. ತಂದೆ, ಅಣ್ಣಂದಿರ ಅಸಮಾಧಾನವಿದ್ದರೂ ಹಟ ಮಾಡಿ ಮದುವೆಯಾದೆ. ಅಂದಿನಿಂದ ಇಂದಿನವರೆಗೂ ನಮ್ಮ ದಾಂಪತ್ಯ ಸುಖವಾಗೇ ಇದೆ. ಕಷ್ಟಸುಖಗಳಲ್ಲೂ ಸಮಭಾಗಿಗಳಾಗಿ ಬಾಳುತ್ತಿದ್ದೇವೆ. ನಮ್ಮ ಜೀವನದಲ್ಲಿ ಆರ್ಥಿಕ ಸಂಕಷ್ಟಗಳಿದ್ದರೂ ನೆಮ್ಮದಿ, ಸುಖಕ್ಕೆ ಕೊರತೆ ಇರಲಿಲ್ಲ. ನಮ್ಮ ಪ್ರೀತಿಯ ಪ್ರತಿಫಲ 2 ಮಕ್ಕಳಾದವು. ಗೆಳೆಯ ನನಗೆ ಭೀಮೇಶ್ವರ ವ್ರತ ಗೊತ್ತಿಲ್ಲ, ಮದುವೆ ವಾರ್ಷಿಕೋತ್ಸ ವದ

ಆಡಂಬರ ಬೇಕಿಲ್ಲ. ನೀವು ತರುವ ಬಜ್ಜಿ ಬೋಂಡವೇ ಐಷಾರಾಮಿ ಹೋಟೆಲ್‌ ತಿಂಡಿಗೆ ಸಮಾನ. ಈ ರೀತಿ ಬದುಕುತ್ತಿದ್ದ ನಮಗೆ ಎಲ್ಲಿಂದಲೋ ಹದ್ದು ಬಂದು ಎರಗಿದಂತೆ ಪಾರ್ಶ್ವವಾಯುವಿನ ರೂಪದಲ್ಲಿ ಬಂದೆರಗಿತು ನಿಮಗೆ ಕಾಯಿಲೆ. ಆಗಲೂ ನಾನು ಬೆಚ್ಚಲಿಲ್ಲ, ನೀವು ಸರಿಯಾಗುವಿರಿ ಎಂಬ ನಂಬಿಕೆ, ನೀವು ತುಂಬಿದ ಧೈರ್ಯ, ಕೊಟ್ಟ ಪ್ರೀತಿ ನನಗೆ ಆಸರೆಯಾಯಿತು. ಹಾಗೇ ಮಗನನ್ನು ಬಿ.ಟೆಕ್‌ ಮಾಡಿಸಿದೆ, ಮಗಳ ಓದಿಗೂ ಚ್ಯುತಿ ಬಾರದಂತೆ ಓದಿಸುತ್ತಿರುವೆ. ವೃತ್ತಿಪರ ಶಿಕ್ಷಣ, ಅಂದರೆ ಜೆಓಸಿಯಲ್ಲಿ 20 ವರ್ಷ ಅರೆಕಾಲಿಕ ಉಪನ್ಯಾಸಕಿಯಾಗಿ ದುಡಿದ ನನಗೆ ಸರ್ಕಾರ ಕಾಯಂಮಾತಿ ನೀಡಿತು. ಆಗ ನನ್ನ ಆರೋಗ್ಯ ಕೈಕೊಟ್ಟಿತು. ಗರ್ಭಕೋಶದ ತೊಂದರೆಯಿಂದ ನಿಮ್ಮನ್ನು ನೋಡಿಕೊಳ್ಳಲಾಗದೆ ವೃದ್ಧಾಶ್ರಮಕ್ಕೆ ತಿಂಗಳಿಗೆ 20 ಸಾವಿರ ನೀಡಿ ಸೇರಿಸಿದೆ. ಆಗ ನನಗೆ ನಿಮ್ಮನ್ನಗಲುವುದು ಬಹಳ ಕಷ್ಟವಾಯಿತು. ಪ್ರತಿದಿನ ಫೋನ್‌ನಲ್ಲೇ ನಮ್ಮ ಸಂಭಾಷಣೆ. ಆಗ ನೀವು ನನ್ನೊಂದಿಗಿದ್ದೀರಿ ಎಂಬ ಭರವಸೆ ನನಗೆ. ನಂತರ ನನಗೆ ಬೇರೆ ಊರಿಗೆ ವರ್ಗವಾದಾಗ ಒಂದು ವರ್ಷ ಜೊತೆಯಲ್ಲಿದ್ದಿರಿ. ಈ ಊರಿನ ವಾತಾವರಣ ನಿಮಗೆ ಹೊಂದದೆ ಮತ್ತೆ ವೃದ್ಧಾಶ್ರಮಕ್ಕೆ ಬಿಡು ಎಂದಿರಿ, ಹಟ ಮಾಡಿದಿರಿ. ಆದಕಾರಣ ಬಿಟ್ಟಿದ್ದೇನೆ. ದೇಹ ದೂರವಾದರೂ ನಮ್ಮ ಮನಸ್ಸು ಒಂದೇ. ಸದಾ ನಿಮ್ಮ ನೆನಪಲ್ಲೇ ದಿನ ದೂಡುತ್ತಿದ್ದೇನೆ. ಪ್ರತಿದಿನ ಫೋನ್‌ ಮಾಡದೆ ನನ್ನ ದಿನಚರಿ ಪ್ರಾರಂಭವಾಗುವುದಿಲ್ಲ ಗೆಳೆಯ. ಚಾತಕಪಕ್ಷಿಗಳಂತೆ ಫೋನ್‌ಗಾಗಿ ಕಾಯುತ್ತಿರುತ್ತೇವೆ. ಈ ಕಾಯುವಿಕೆಯಲ್ಲೂ ಸುಖವಿದೆ ಗೆಳೆಯ. ಮಗನ ಓದು ಮುಗಿಯಿತು. ಕೆಲಸ ಸಿಕ್ಕಿತು, ಮದುವೆ ಆಗಿ ಒಂದು ಜವಾಬ್ದಾರಿ ಕಳೆಯಿತು. ಮಗಳ ಓದು ಮುಗಿದು ಮದುವೆಯಾದರೆ ಜವಾಬ್ದಾರಿ ಕಳೆಯುತ್ತದೆ. ನಂತರ ನಾನು ನೀವು ಇಬ್ಬರೇ ಪುಟ್ಟ ಮನೆಯಲ್ಲಿ ಹಾಯಾಗಿರಬೇಕೆಂಬ ಆಸೆ. ಆ ಆಸೆ ಈಡೇರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.

–ಆರ್.ಪ್ರೇಮಕುಮಾರಿ, ಮಂಡ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT