ಭಾನುವಾರ, 22 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ: ‘ಶೇಷಗಿರಿರಾಯರಿಗೆ ವೈದ್ಯಕೀಯ ನೆರವು ನೀಡಿ’

ಪ್ರಜಾವಾಣಿ ವಾರ್ತೆ
Published : 16 ಫೆಬ್ರುವರಿ 2015, 20:07 IST
ಫಾಲೋ ಮಾಡಿ
Comments

ಬೆಂಗಳೂರು: ‘ಕನ್ನಡದ ಕಟ್ಟಾಳುವಾಗಿ ಹಲವು ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಇದ್ದವರು ಪ್ರೊ. ಎಲ್‌.ಎಸ್‌. ಶೇಷಗಿರಿರಾಯರು. ಅವರ ವೃದ್ಧಾಪ್ಯದ ಈ ದಿನಗಳಲ್ಲಿ ಸರ್ಕಾರ ಅವರಿಗೆ ವೈದ್ಯಕೀಯ ನೆರವು ನೀಡಬೇಕು. ಅವರ ಆರೈಕೆಗೆ ಒಬ್ಬ ನರ್ಸ್‌ ವ್ಯವಸ್ಥೆಯನ್ನೂ ಮಾಡಬೇಕು’ ಎಂದು ಹಿರಿಯ ವಿದ್ವಾಂಸ ಎಂ.ಎಚ್‌. ಕೃಷ್ಣಯ್ಯ ಆಗ್ರಹಿಸಿದರು.

ಶೇಷಗಿರಿರಾವ್‌ ಅವರು 90ನೇ ಜನ್ಮದಿನ ಆಚರಿಸಿ­­­ಕೊಂಡ ಸವಿನೆನಪಿಗಾಗಿ ಅವರ ಮನೆ­ಯಲ್ಲೇ ಕನ್ನಡ ಗೆಳೆಯರ ಬಳಗ ಸೋಮವಾರ ಏರ್ಪಡಿಸಿದ್ದ ಆತ್ಮೀಯ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಮಾರಂಭದಲ್ಲಿ ಎಲ್‌ಎಸ್‌ಎಸ್‌ ಅವರ ‘ಮಹಾಕಾವ್ಯ ಪ್ರವೇಶ’, ‘ಶೇಕ್ಸ್‌ಪಿಯರ್‌ ಹೇಳಿದ ಕತೆಗಳು’, ‘ಆಲಿವರ್‌ ಗೋಲ್ಡ್‌ಸ್ಮಿತ್‌’, ‘ಫ್ರಾನ್ಸ್‌ ಕಾಫ್ಕ ಬದುಕು–ಬರಹ–ಚಿಂತನೆ’ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.

‘ಕನ್ನಡಕ್ಕಾಗಿ ಜೀವ ತೇಯ್ದ ಇಂತಹ ಹಿರಿಯರ ಮೇಲೆ ಸರ್ಕಾರ ಉಳಿದೆಲ್ಲ ವಿಷಯಗಳಿಗಿಂತ ಹೆಚ್ಚು ಕಾಳಜಿ ತೋರುವ ಅಗತ್ಯವಿದೆ. ಅಲ್ಲದೆ, ಅದನ್ನು ಉಪಕಾರ ಎಂದೇನೂ ಭಾವಿಸಬೇಕಿಲ್ಲ’ ಎಂದು ಕೃಷ್ಣಯ್ಯ ಹೇಳಿದರು.

‘ನಾನು ಎಲ್‌ಎಸ್‌ಎಸ್‌ ಅವರ ಪುಸ್ತಕ, ಚಿಂತನೆಗಳಿಂದ ಬಹಳ ಪಡೆದವನು. ಅವರ ಎಷ್ಟೋ ಸಾಲುಗಳು ಒಂದು ಇಡೀ ಉಪನ್ಯಾಸಕ್ಕೆ ಸಾಕಾಗು­ವಷ್ಟು ಸಮರ್ಥವಾಗಿವೆ. ಅವರು ಮಹಾ­ಕಾವ್ಯಗಳನ್ನು ಕುರಿತು ಬರೆಯಲಿ, ಶೇಕ್ಸ್‌ಪಿಯರ್‌ ಅಥವಾ ಕಾಫ್ಕ ಕುರಿತು ಬರೆಯಲಿ ಹೊಸ ಅಂಶಗಳನ್ನು ಹೇಳುತ್ತಾರೆ’ ಎಂದು ನುಡಿದರು.

‘ಕಥೆಗಾರನೇ ನಮ್ಮ ಮುಂದೆ ಕುಳಿತು ಕಥೆ ಹೇಳುತ್ತಿರುವಂತೆ ಎಲ್‌ಎಸ್‌ಎಸ್‌ ಅವರ ಬರಹ­ಗಳು ಓದುಗರಲ್ಲಿ ಆಪ್ತತೆಯನ್ನು ಉಂಟು ಮಾಡು­ತ್ತವೆ’ ಎಂದ ಅವರು, ‘ಕಾಫ್ಕನ ಬರವಣಿಗೆಯಲ್ಲಿ ಜಗತ್ತಿನ ನೋವು ತುಂಬಿದೆ. ಅಂತಹ ಕಾಫ್ಕನ ಬರವಣಿಗೆ ಮೇಲೆ ಎಲ್‌ಎಸ್‌ಎಸ್‌ ನಡೆಸಿದ ಅಧ್ಯ­ಯನ ಹೊಸ ಹೊಳಹುಗಳನ್ನು ನೀಡಿದೆ’ ಎಂದು ವಿವರಿಸಿದರು.

ಹಿರಿಯ ಸಂಶೋಧಕ ಡಾ.ಎಂ. ಚಿದಾನಂದ­ಮೂರ್ತಿ, ‘ಎಲ್‌ಎಸ್‌ಎಸ್‌ ಅವರು ಮೊದಲಿ­ನಿಂದಲೂ ಕನ್ನಡಪರ ಹೋರಾಟಗಳ ಜೊತೆಗೆ ನಿಂತಿದ್ದಾರೆ’ ಎಂದು ನೆನಪಿಸಿಕೊಂಡರು.

‘ಕನ್ನಡ ನುಡಿ, ಜಲ, ಗಡಿ ಕುರಿತು ಅವರ ನಿಷ್ಠೆ ಅಪಾರ. ಒಬ್ಬ ಇಂಗ್ಲಿಷ್‌ ಪ್ರಾಧ್ಯಾಪಕರಾಗಿ ಕನ್ನಡ ಕುರಿತು ಅವರು ಮಾಡಿರುವ ಸಾಹಿತ್ಯ ಸೇವೆ ಉಳಿದವರಿಗೂ ಮಾದರಿ’ ಎಂದು ‘ಮುಖ್ಯಮಂತ್ರಿ’ ಚಂದ್ರು ಹೇಳಿದರು.

ಹಿರಿಯ ಸ್ವಾತಂತ್ರ್ಯ ಹೋರಾಟ­­ಗಾರ ಎಚ್‌.­ಎಸ್‌.­­ದೊರೆಸ್ವಾಮಿ, ‘ಶೇಷ­ಗಿರಿರಾಯರು ಹಾಗೂ ನಾನು ಇಬ್ಬರೂ ಬಿ.ಎಂ. ಶ್ರೀಕಂಠಯ್ಯ­ನವರ ಶಿಷ್ಯರು’ ಎಂದು ಸ್ಮರಿಸಿ­ಕೊಂಡರು. ‘ಬಿ.ಎಂ.ಶ್ರೀ ಅವರ ಪರಂಪರೆ ಮುಂದು­ವರಿ­ಸಿದ ನಿಜವಾದ ಶಿಷ್ಯರಾಗಿದ್ದಾರೆ ಎಲ್‌ಎಸ್‌ಎಸ್‌’ ಎಂದು ಅಭಿ­ಮಾನ­ದಿಂದ ನುಡಿದರು. ಅಭಿನಂದನೆಗೆ ಪ್ರತಿಸ್ಪಂದ­ನವಾಗಿ ಎಲ್‌ಎಸ್‌ಎಸ್‌ ಅವರು ಬರೆದಿದ್ದ ಪ್ರತಿಕ್ರಿಯೆ­ಯನ್ನು ಅವರ ಪತ್ನಿ ಭಾರತಿ  ಸಭೆಯಲ್ಲಿ ಓದಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ, ಕತೆಗಾರ ಕೆ.ಸತ್ಯನಾರಾಯಣ, ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷ ಡಾ.ಪಿ.ವಿ. ನಾರಾಯಣ, ಡಾ. ವಿಜಯಾ, ಕನ್ನಡ ಬಳಗದ ರಾ.ನಂ. ಚಂದ್ರಶೇಖರ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT