ಇತ್ತೀಚೆಗೆ, ಸಾಹಿತ್ಯದ `ಮರು ಓದು' ಹವ್ಯಾಸ ವಿದ್ವಾಂಸರಲ್ಲಿ ಬೆಳೆಯುತ್ತಲಿದೆ. ಇದು ಸ್ವಾಗತಾರ್ಹವಾದರೂ, ಈ ವರೆಗೆ ವಿದ್ವಾಂಸರು ಮಂಡಿಸಿರುವ ನಿಜನಿರ್ಣಯಗಳನ್ನು ಪ್ರಶ್ನಿಸುವ ವಿತಂಡವಾದಗಳು ಕೆಲವರಿಂದ ಆಗಾಗ ವ್ಯಕ್ತವಾಗುತ್ತಲಿವೆ. ಇವುಗಳಲ್ಲಿ ಬಾಲಗಂಗಾಧರ, ಡಂಕಿನ್ ಝಳಕಿ ಮತ್ತು ರಾಜಾರಾಮ್ ಹೆಗಡೆಯವರು ಮಂಡಿಸಿದ, ವಚನಸಾಹಿತ್ಯ ವೈದಿಕ ವಿರೋಧಿ ಅಲ್ಲ; ವಚನ ಸಾಹಿತ್ಯದಲ್ಲಿ ಜಾತಿ ವಿರೋಧಿ ನಿಲುವು ಕಂಡುಬರುವುದಿಲ್ಲ -ಎಂಬ ಎರಡು ಪ್ರಶ್ನೆಗಳು ಮುಖ್ಯವಾಗಿವೆ. ಇದು ಶರಣ ಚಳವಳಿಯ ಮೂಲ ಉದ್ದೇಶವನ್ನೇ ಸ್ಫೋಟಿಸುವ ತಂತ್ರದ ಹಾಗೆ ಕಾಣುತ್ತದೆ.

ಇವರು ಹೀಗೆ ಹೇಳಲು ಎರಡು ಕಾರಣಗಳಿರಬಹುದು. ಒಂದು ವಚನಸಾಹಿತ್ಯದ ಸರಿಯಾದ ಸಿದ್ಧಾಂತ ಗೊತ್ತಿಲ್ಲದಿರುವುದು. ಎರಡು: ಗೊತ್ತಿದ್ದೂ ಯಾವುದೋ ಪೂರ್ವಗ್ರಹ ಪೀಡಿತರಾಗಿರುವುದು. ಬಹುಶಃ ಇವರಲ್ಲಿ ಈ ಎರಡೂ ಇರುವಂತೆ ತೋರುತ್ತದೆ.

ವಚನ, ಯಾವುದೋ ಒಂದು ಕಾಲದಲ್ಲಿ ಹುಟ್ಟಿ, ಮೂಲೆಯಲ್ಲಿ ಉಳಿದ ಸಾಹಿತ್ಯವಲ್ಲ. 12ನೆಯ ಶತಮಾನದ ಬಳಿಕವೂ ಅದು ಜನಜೀವನದಲ್ಲಿ ಕೆಲಮಟ್ಟಿಗಾದರೂ ಜೀವಂತವಾಗಿ ಸಾಗಿಬಂದಿದೆ. ಸಕಲ ಪುರಾತನರ ವಚನ ಕಟ್ಟು, ಲಿಂಗಲೀಲಾವಿಲಾಸ ಚಾರಿತ್ರ್ಯ, ಶೂನ್ಯ ಸಂಪಾದನೆಗಳೆಂಬ ಹೊಸ- ಹೊಸ ಪ್ರಯೋಗಗಳಿಗೆ ಮೈವೊಡ್ಡಿಕೊಳ್ಳುತ್ತ, ಹೆಚ್ಚಿನದಾಗಿ ಟೀಕೆ- ವ್ಯಾಖ್ಯಾನಗಳಿಗೂ, ಕಾವ್ಯ- ಪುರಾಣಗಳಿಗೂ ವಸ್ತುವಾಗುತ್ತ ಬಂದಿದೆ.

ಈ ಅಭ್ಯಾಸ ಈಗಲೂ ದೊಡ್ಡ ಪ್ರಮಾಣದಲ್ಲಿ ಮುಂದುವರಿದಿದೆ. ವಿಷಾದದ ಸಂಗತಿಯೆಂದರೆ, 900 ವರ್ಷಗಳ ಸುದೀರ್ಘ ಅವಧಿಯಲ್ಲಿ ಇದರ ಸಿದ್ಧಾಂತ - ಆಚರಣೆಗಳನ್ನು ನಾಥ, ವೈದಿಕ, (ಕಾಶ್ಮೀರ ಮೂಲದ ಕಾಳಾಮುಖ ಇತ್ಯಾದಿ) ಆಗಮಿಕ ಶೈವ ಸಂಪ್ರದಾಯಗಳ ಪ್ರಭಾವದಲ್ಲಿ, ಇತ್ತೀಚೆಗೆ ಇಸ್ಲಾಂ, ಕ್ರೈಸ್ತ ಧರ್ಮಗಳ ಬೆಳಕಿನಲ್ಲಿ ವ್ಯಾಖ್ಯಾನಿಸುತ್ತ ಬರಲಾಗಿದೆ. ಇದರಿಂದಾಗಿ ಬಾಲಗಂಗಾಧರನಂಥವರು ದಾರಿ ತಪ್ಪಿರುವ ಸಾಧ್ಯತೆ ಇದೆ. ಈಗ ಅವರೇ ಎತ್ತಿದ ಎರಡು ಪ್ರಶ್ನೆಗಳಲ್ಲಿ, ಈ ಚಳವಳಿಯು ವೈದಿಕ ವಿರೋಧಿಯಲ್ಲ - ಎಂಬುದನ್ನು ಮೊದಲು ಚರ್ಚೆಗೆ ಗುರಿಪಡಿಸಬಹುದು.

ಪ್ರಾಚೀನ ಕಾಲದಲ್ಲಿ ಉತ್ತರ ಭಾರತದಿಂದ ಬೌದ್ಧ, ಜೈನ, ವೇದನಿಷ್ಠ ವೈದಿಕ, ಆಗಮನಿಷ್ಠ ಶೈವಗಳೆಂಬ ನಾಲ್ಕು ಧರ್ಮಗಳು ಕರ್ನಾಟಕಕ್ಕೆ ವಲಸೆ ಬಂದವು. ಆಗ ಕರ್ನಾಟಕದಲ್ಲಿ ಧರ್ಮಗಳಿಗೆ ಬದಲು ಕೇವಲ ಬೇಡ, ಕುರುಬ, ಅಂಬಿಗ ಮೊದಲಾದ ಜಾತಿಗಳಿದ್ದವು. 18-19ನೇ ಶತಮಾನಗಳಲ್ಲಿ ಇಂಗ್ಲಿಷ್, ಫ್ರೆಂಚ್, ಪೋರ್ಚುಗೀಸ್, ಡಚ್ಗಳೆಂಬ ವಸಾಹತು ಶಾಹಿಗಳು, ಭಾರತದಲ್ಲಿ ತಮ್ಮ ಅಸ್ತಿತ್ವ ಸ್ಥಾಪಿಸಿಕೊಳ್ಳಲು ಹೋರಾಡಿದಂತೆ, ಈ ವಲಸೆ ಧರ್ಮಗಳೂ ತಮ್ಮ ಅಸ್ತಿತ್ವಕ್ಕಾಗಿ ಅಂದು ಕರ್ನಾಟಕದಲ್ಲಿ ಘರ್ಷಣೆಗೆ ಇಳಿದಿದ್ದವು. ಈ ಘರ್ಷಣೆಯಲ್ಲಿ ಅನಾತ್ಮವಾದಿ ಬೌದ್ಧಧರ್ಮವನ್ನು ಮಿಕ್ಕ ಮೂರು ಆತ್ಮವಾದಿ ಧರ್ಮಗಳು ಸೇರಿ ನಾಶಮಾಡಿದವು.

ತರುವಾಯ ದೇವತಾವಾದವನ್ನು ನಂಬಿದ ವೈದಿಕ ಮತ್ತು ಆಗಮಿಕ ಶೈವಗಳು ಸೇರಿ, ದೇವತಾವಾದವನ್ನು ನಂಬದ ಜೈನವನ್ನು ದುರ್ಬಲಗೊಳಿಸಿದವು. ಬಳಿಕ ವೈದಿಕ ಮತ್ತು ಆಗಮಿಕ ಶೈವಗಳು ಘರ್ಷಣೆಗೆ ಇಳಿದವೇನೋ ನಿಜ. ಅಂತಿಮದಲ್ಲಿ ಆಗಮಿಕ ಶೈವವು ವೈದಿಕ ಸಂಸ್ಕೃತಿಯ ಶ್ರೇಷ್ಠತೆಯನ್ನು ಮನ್ನಿಸಿ, ತಾನೂ ಬ್ರಾಹ್ಮಣ ವಿಶೇಷಣವನ್ನು ಬಳಸಿಕೊಂಡಿತು. ಈ ಎರಡರಲ್ಲಿ ಬಸವಣ್ಣ ವೈದಿಕ ಶೈವಬ್ರಾಹ್ಮಣ (ಶಂಕರನ ಅದ್ವೈತ) ಕುಟುಂಬದವನಲ್ಲ; ಆಗಮಿಕ ಶೈವಬ್ರಾಹ್ಮಣ ಕುಟುಂಬದವನಾಗಿದ್ದಾನೆ. ಈ ಆಗಮಿಕ ಶೈವಬ್ರಾಹ್ಮಣರೇ (ಲಿಂಗಿಬ್ರಾಹ್ಮಣರೇ) ಜನಿವಾರ ಇತ್ಯಾದಿಗಳನ್ನು ತ್ಯಜಿಸಿ ಇಂದು ವೀರಶೈವ ಪಂಚಾಚಾರ್ಯ ಪರಂಪರೆಯವರಾಗಿ ಪರಿವರ್ತನಗೊಂಡಿದ್ದಾರೆ.

ಮೇಲೆ ಹೇಳಿದಂತೆ, ಭಾಗಶಃ ವೈದಿಕವನ್ನು ಒಪ್ಪಿಕೊಂಡು ಬಾಳುತ್ತಲಿದ್ದ ತನ್ನ ಆಗಮಿಕ ಶೈವಬ್ರಾಹ್ಮಣ ಕುಟುಂಬವನ್ನು ಬಿಟ್ಟು ಬಸವಣ್ಣ ಹೊರಬಂದನು. ಹೀಗಾಗಿ ಅವನು ತನ್ನ ಕುಟುಂಬದ ಆಗಮಿಕ ಶೈವಬ್ರಾಹ್ಮಣ ವಿರೋಧಿಯಾದನಲ್ಲದೆ, ಸಹಜವಾಗಿಯೇ ವೈದಿಕ ಬ್ರಾಹ್ಮಣ ವಿರೋಧಿಯೂ ಆದನು. `ವೇದಕ್ಕೆ ಒರೆಯ ಕಟ್ಟುವೆ, ಆಗಮದ ಮೂಗು ಕೊಯ್ವೆ' ಇತ್ಯಾದಿ ವಚನ ವಾಕ್ಯಗಳಿಂದ ಈ ಎರಡೂ ಬ್ರಾಹ್ಮಣ ಧರ್ಮಗಳನ್ನು ಅವನು ನಿರಾಕರಿಸಿದನೆಂದು ಸ್ಪಷ್ಟವಾಗುತ್ತದೆ. ಹೀಗಿದ್ದೂ ಅವನು ಆ ಕಾಲದಲ್ಲಿ ಸಬಲವಾಗಿದ್ದ ವೈದಿಕ ಬ್ರಾಹ್ಮಣದ ವಿರುದ್ಧವೇ ದೊಡ್ಡ ಹೋರಾಟವನ್ನು ಕೈಗೆತ್ತಿಕೊಂಡನು.

ವಚನಗಳಲ್ಲಿ ಏರು ದನಿಯಿಂದ ಹೇಳಿದ ವೈದಿಕರ ವಿರುದ್ಧದ ಮಾತುಗಳು ಮತ್ತು ಆ ಕಾಲದ ಹಾವಿನಹಾಳ ಕಲ್ಲಯ್ಯನೆಂಬ ಶರಣನು ನಾಯಿಯಿಂದ ವೇದ ಓದಿಸಿದನೆಂಬ, ಇವನ ಮಗಳು ವೈದಿಕನೊಬ್ಬ ಮುಟ್ಟಿದ ಕಾರಣ ಮೈಲಿಗೆಯಾಯಿತೆಂದು ನೀರು ತುಂಬಿದ ಮಣ್ಣಿನ ಬಿಂದಿಗೆ ಒಡೆದು ಹಾಕಿದಳೆಂಬ, ಗಗನಗಾಮಿಯಾದ ಸಾಮವೇದಿ (ವೈದಿಕ)ಯ ನೆರಳು ತಾನು ಸಿದ್ಧಪಡಿಸುತ್ತಲಿದ್ದ ಅಡುಗೆಯ ಮೇಲೆ ಬೀಳದಿರಲೆಂದು, ಅದರ ಮೇಲೆ ಚಪ್ಪಲು ಮುಚ್ಚಿದನೆಂಬ ಕಥೆಗಳು ವೇದಪಠ್ಯದ, ವೈದಿಕ ವ್ಯಕ್ತಿಯ ಶ್ರೇಷ್ಠತೆ ವಿರೋಧಿಸುವ ನೇರ ಉದಾಹರಣೆಗಳಾಗಿವೆ.

ವಚನಕಾರರು ಬರುವ ಹೊತ್ತಿಗೆ, ಜೈನ ತೀರ್ಥಂಕರ ಪುರಾಣಗಳೂ, ವೈದಿಕರ ಪ್ರಸಿದ್ಧ ಧಾರ್ಮಿಕ ಪಠ್ಯಗಳಾದ ರಾಮಾಯಣ - ಮಹಾಭಾರತ, ಲೌಕಿಕ ಪಠ್ಯಗಳಾದ ಪಂಚತಂತ್ರ- ಬಾಣ ಕಾದಂಬರಿ ಮೊದಲಾದವೂ ಕನ್ನಡದಲ್ಲಿ ಕಣ್ಣು ತೆರೆದಿದ್ದವು. ಪಂಪಯುಗದ ಕವಿಗಳು ನಮ್ಮ ಕನ್ನಡವನ್ನು ಬಳಸಿಕೊಂಡು ಬರೆದ ತಮ್ಮ ಉತ್ತರಭಾರತದ ಈ ಪಠ್ಯಗಳಲ್ಲಿ ವೈದಿಕ ಪಠ್ಯಗಳೇ ಹೆಚ್ಚು ಪ್ರಸಿದ್ಧಿಪಡೆದಿದ್ದವು. ಕನ್ನಡಿಗರೂ ಅವುಗಳ ವ್ಯಸನಕ್ಕೆ ಒಳಗಾಗಿ, ತಮ್ಮ ಅಸ್ಮಿತೆಯನ್ನು ಕ್ಷೀಣಿಸಿಕೊಳ್ಳುತ್ತ ಸಾಗಿದ್ದರು.

ಈ ಬಗೆಯ ವೈದಿಕ ಸಾಹಿತ್ಯದ ದಾಳಿಯನ್ನು `ವಿದ್ಯೆಯೆಂದರೆ ರಾಮಾಯಣ ಭಾರತವಲ್ಲ' ಎಂದು ನೇರವಾಗಿ ವಚನಗಳು ಖಂಡಿಸಿರುವುದು ವೈದಿಕ ವಿರೋಧವನ್ನು ಸ್ಪಷ್ಟಪಡಿಸುತ್ತದೆ. ಇದಲ್ಲದೆ ಸ್ಥಳೀಯ ಕನ್ನಡ ಭಾಷೆಯು ಅಪವಿತ್ರ, ವಲಸೆ ಧರ್ಮವಾದ ವೈದಿಕದ ಸಂಸ್ಕೃತ ಭಾಷೆಯು ಪವಿತ್ರವೆಂಬ ಭಾವನೆ ದಟ್ಟವಾಗಿದ್ದ ಆ ಕಾಲದಲ್ಲಿ `ಸಂಸ್ಕೃತದ ಮಾತಿನ ಪಸರವ ಮುಂದಿಟ್ಟುಕೊಂಡು, ಮತ್ಸ್ಯನ ವಕ್ತ್ರದಲ್ಲಿ ಗ್ರಾಸವ ಹಾಕುವನಂತೆ ಅದೇತರ ನುಡಿ, ಮಾತಿನ ಮರೆ.....' ಎಂಬ ನಗೆಯ ಮಾರಿತಂದೆಯ ವಚನ ವೈದಿಕ ಭಾಷೆಯ ನಿರಾಕರಣೆಯನ್ನು ಸೂಚಿಸುತ್ತವೆ. `ವೇದಪುರಾಣ ಹೋತಿಂಗೆ ಮಾರಿ....' ಎಂಬಂಥ ಬಸವಣ್ಣನವರ ಮಾತುಗಳು ಶೋಷಣೆಗೆ ಮಾಧ್ಯಮವಾಗಿದ್ದ ವೈದಿಕ ಧರ್ಮದ ವಿರೋಧವನ್ನೇ ಸೂಚಿಸುತ್ತದೆ.

ಹೀಗೆ ವೈದಿಕವು ಸಿದ್ಧಾಂತ - ಆಚರಣೆ, ಭಾಷೆ - ಸಾಹಿತ್ಯ ಮೊದಲಾದ ದಾರಿಗಳಿಂದ ಸ್ಥಳೀಯರ ಮೇಲೆ ನಡೆಸಿದ ದಬ್ಬಾಳಿಕೆಯನ್ನು ಶರಣರು ವಿರೋಧಿಸಿ, ಸ್ಥಳೀಯ ಶೋಷಿತ ವರ್ಗಗಳಿಗೆ, ಸಿದ್ಧಾಂತ - ಆಚರಣೆಗಳಿಗೆ, ಭಾಷೆ - ಸಾಹಿತ್ಯಗಳಿಗೆ ಪ್ರತಿಷ್ಠೆಯನ್ನು ಒದಗಿಸಿದರು. ಆದುದರಿಂದ ಪಂಪಯುಗವು ಕನ್ನಡಿಗರ ಅಸ್ಮಿತೆಯ ವಿಸ್ಮೃತಿಯುಗವಾದರೆ, ಬಸವಯುಗವು ಕನ್ನಡಿಗರ ಅಸ್ಮಿತೆಯ ಜಾಗೃತಿಯುಗವಾಗಿದೆ. ಈ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಜೈನವು ವೈದಿಕದಷ್ಟು ಕನ್ನಡಿಗರ ಬದುಕಿನಲ್ಲಿ ಆಳವಾಗಿ ಕೈಹಾಕದೆ, ತಾನು - ತನ್ನ ಸಮಾಜ - ತನ್ನ ಧರ್ಮಕ್ಕೆ ಸೀಮಿತವಾಗಿದ್ದ ಕಾರಣ, ಶರಣ ಚಳವಳಿ ಜೈನಕ್ಕಿಂತ ಆಗಮಿಕ ಶೈವ, ಆಗಮಿಕ ಶೈವಕ್ಕಿಂತ ವೈದಿಕವನ್ನೇ ತನ್ನ ವಿರೋಧಿಯಾಗಿಟ್ಟು ಕೊಂಡಿದ್ದಿತು.

ಬಾಲಗಂಗಾಧರ ಅವರು ಎತ್ತಿದ ಎರಡನೇ ಪ್ರಶ್ನೆಯೆಂದರೆ ಶರಣರದು ಜಾತಿವಿರೋಧಿ ನೀತಿಯಾಗಿರಲಿಲ್ಲವೆಂಬುದು. ವಚನಗಳಲ್ಲಿ ಜಾತಿವಿರೋಧಿ ನೂರಾರು ಉಲ್ಲೇಖಗಳಿದ್ದರೂ ಹೀಗೆ ಹೇಳುವುದನ್ನು ನೋಡಿದರೆ, ಇದು ಬಹುಶಃ ಶರಣರ ಹೋರಾಟದ ಮೂಲ ನೆಲೆಯನ್ನೇ ಶಿಥಿಲಗೊಳಿಸುವ ಹುನ್ನಾರವೆನಿಸುತ್ತದೆ. ಜಾತಿಭೇದವನ್ನು ಗಟ್ಟಿಗೊಳಿಸುವ ಅಂಶಗಳೆಂದರೆ ಪರಸ್ಪರ ಊಟ ಮತ್ತು ಪರಸ್ಪರ ನೆಂಟಸ್ತಿಕೆ ಬೆಳೆಸದಿರುವುದು. 12ನೇ ಶತಮಾನದ ಹೊತ್ತಿಗೆ ಯಾವುದೇ ಅಧ್ಯಾತ್ಮ ಪಂಥಕ್ಕೆ ಸಂಬಂಧಿಸಿದ ವಿಭಿನ್ನ ಜಾತಿಯವರು ಕೂಡಿ ಊಟ ಮಾಡುವುದಕ್ಕೆ ಸಾಮಾಜಿಕ ಒಪ್ಪಿಗೆ ಇದ್ದಿತಾದರೂ, ನೆಂಟಸ್ತಿಕೆ ಬೆಳೆಸುವುದಕ್ಕೆ ಒಪ್ಪಿಗೆ ಇರಲಿಲ್ಲ. ಇದಕ್ಕೆ ಚೆನ್ನಬಸವಣ್ಣನವರ ಪ್ರತಿಕ್ರಿಯೆ ಹೀಗಿದೆ:

ಉಂಬುದು ಊಡುವುದು ಶಿವಾಚಾರ.
ಕೊಂಬುದು ಕೊಡುವುದು ಕುಲಾಚಾರ,
ಎಂಬ ಅನಾಚಾರಿಯ ಮಾತ ಕೇಳಲಾಗದು.

ಅಂದರೆ ಬೇರೆ ಬೇರೆ ಜಾತಿಯವರನ್ನೊಳಗೊಂಡ ಶಿವಾಚಾರದವರು ಕೂಡಿ ಊಟಮಾಡಬಹುದು, ನೆಂಟಸ್ತಿಕೆ ಬೆಳೆಸಬಾರದೆಂಬುದು ಅನಾಚಾರವೇ ಸರಿ - ಎನ್ನುತ್ತ ಶರಣರು, ಊಟದಂತೆ ರಕ್ತಸಂಬಂಧವನ್ನೂ ಬೆಳೆಸಬೇಕೆಂಬ ಇನ್ನೊಂದು ಹೆಜ್ಜೆ ಮುಂದಿಟ್ಟರು.

ಇದರಿಂದಾಗಿ ಸಾಮಾಜಿಕ ಕ್ರಾಂತಿ ಉದ್ಭವಿಸಿತು. ಇದರೊಂದಿಗೆ ಶೂದ್ರಜಾತಿಯ ಅಲ್ಲಮನನ್ನು ಶೂನ್ಯಸಿಂಹಾಸನ (ಜಗದ್ಗುರು)ಕ್ಕೆ ತಂದ ಮೇಲುಚಲನೆಯೂ ಆ ಕ್ರಾಂತಿ ಕಿಚ್ಚಿಗೆ ಗಾಳಿಯಂತೆ ಕೆಲಸ ಮಾಡಿತು. ಇಷ್ಟೆಲ್ಲ ವಚನೋಕ್ತಿಗಳು, ಘಟನೆಗಳು ಕಣ್ಣಮುಂದಿದ್ದರೂ ಶರಣರದು ಜಾತಿ ವಿರೋಧಿ ಚಳವಳಿಯಾಗಿರಲಿಲ್ಲವೆಂದು ಹೇಳುವುದು, ಮುಂದುವರಿದು ಇಂಥ ಕೆಲವೇ ವಚನಗಳು ಸಿಗುವವೆಂದು ಅಂಕಿ ಸಂಖ್ಯೆ ಒಡ್ಡುವುದು ಬಾಲಿಶವೆನಿಸುತ್ತವೆ. ಇದು, ಜೈನರಲ್ಲಿ `ಅಹಿಂಸಾ ಪರಮೋಧರ್ಮ' ಎಂಬ ಒಂದೇ ಒಂದು ವಾಕ್ಯ ಎದ್ದು ಕಾಣುವುದರಿಂದ ಅಲ್ಲಿ ಅಹಿಂಸೆ ಅಷ್ಟು ಮುಖ್ಯವಾಗಿರಲಿಲ್ಲವೆಂದಂತಾಗುತ್ತದೆ. ಹಾಗೆ ನೋಡಿದರೆ ಪ್ರಾಚೀನ ಇತರ ಸಾಹಿತ್ಯಗಳಿಗಿಂತ ಲಿಂಗಾಯತ ಸಾಹಿತ್ಯದಲ್ಲಿ ಮಾತ್ರ ಜಾತಿವಿರೋಧಿ ಚರ್ಚೆ ವಿಪುಲವಾಗಿ ನಡೆದಿದೆಯೆಂದೇ ಹೇಳಬೇಕು.

ಇಲ್ಲಿ ಒಂದು ಹೊಸ ವಿಚಾರವನ್ನು ವಿದ್ವಾಂಸರ ಮುಂದೆ ಮಂಡಿಸುವುದು ಅವಶ್ಯವೆನಿಸುತ್ತದೆ. ಅದು: 12ನೇ ಶತಮಾನದಲ್ಲಿ ಬೇರೆ ಬೇರೆ ಜಾತಿಯವರು ಲಿಂಗಾಯತಕ್ಕೆ ಮತಾಂತರಗೊಂಡರೆಂದು ನಾವೆಲ್ಲ ಹೇಳುತ್ತ ಬಂದಿದ್ದೇವೆ. ಇದು, ಬಸವಣ್ಣ 10 ಜಾತಿಗಳೊಂದಿಗೆ 11ನೇ ಹೊಸ ಜಾತಿಯನ್ನು ಹುಟ್ಟುಹಾಕಿದನೆಂಬ ಪ್ರಶ್ನೆಗೆ ಅವಕಾಶ ಮಾಡಿಕೊಟ್ಟಿದೆ. ಶರಣರ ಕಾಲದಲ್ಲಿ ಮತಾಂತರ ಜರುಗಿತೆಂದು ವಿದ್ವಾಂಸರು ಹೇಳಲು ಕಾರಣ, ಅವರ ಕಣ್ಣಮುಂದೆ ಇರುವ ಇಸ್ಲಾಂ, ಕ್ರೈಸ್ತ ಧರ್ಮಗಳ ಮತಾಂತರ ಪ್ರಕ್ರಿಯೆ. ಬೇರೆ ಬೇರೆ ಜಾತಿಯವರನ್ನು ತಮ್ಮ ಜಾತಿಗೆ ಬರಮಾಡಿಕೊಳ್ಳುವುದು ಮತಾಂತರ, ಜಾತಿಯೆಂಬ ಪರಿಕಲ್ಪನೆಯನ್ನೇ ನಿರಾಕರಿಸುವುದು ಜಾತಿನಿರಸನ. ಶರಣರು ಈ ಜಾತಿನಿರಸನ ಸಿದ್ಧಾಂತವನ್ನು ಎತ್ತಿ ಹೇಳಿದರು. ಹೀಗಾಗಿ ಅವರದು ಇಸ್ಲಾಂ, ಕ್ರೈಸ್ತಗಳಂತೆ ಮತಾಂತರ ಮಾಡಿಕೊಳ್ಳುವ ಸಿದ್ಧಾಂತವಲ್ಲ, ಮತನಿರಸನ (ಜಾತಿನಿರಸನ) ಸಿದ್ಧಾಂತವಾಗಿದೆ.

ವೃತ್ತಿ (ಕಾಯಕ) ಗಳು ಬೆಳೆದು ಜಾತಿಗಳು ಅಸ್ತಿತ್ವಕ್ಕೆ ಬಂದಿವೆ. ಹೀಗೆ ಬೆಳೆದುಬಂದ ಜಾತಿಗಳನ್ನು ಶರಣರು ನಿರಾಕರಿಸಿ, ಇವುಗಳಿಗೆ ಮೂಲವಾಗಿದ್ದ ವೃತ್ತಿ (ಕಾಯಕ) ಪರಿಕಲ್ಪನೆಯನ್ನು ಮತ್ತೆ ಅಸ್ತಿತ್ವಕ್ಕೆ ತಂದು, ಅನಿಕೇತನ ಅಧ್ಯಾತ್ಮ ಮಾರ್ಗದಲ್ಲಿ ಸಮಾಜವನ್ನು ಮುನ್ನಡೆಸಿದರು. ಈಗ ಯಾರೇ ಆಗಿರಲಿ, ಕಡ್ಡಾಯವಾಗಿ ಯಾವುದೇ ಕಾಯಕ ಮಾಡುತ್ತ, ಯಾರೊಂದಿಗೂ ಊಟ ಮಾಡಬಹುದು, ಯಾರೊಂದಿಗೂ ರಕ್ತಸಂಬಂಧ ಬೆಳೆಸಬಹುದು - ಎಂಬ ಅನಿಕೇತನ ಅಧ್ಯಾತ್ಮ ಮಾರ್ಗವೊಂದು ಇವರಿಂದ ಅಂದು ಅಸ್ತಿತ್ವಕ್ಕೆ ಬಂದಿತು.

ಇವೇ ಮೊದಲಾದ ಉನ್ನತ ವಿಚಾರಗಳನ್ನು ಹುಟ್ಟುಹಾಕಿದ ಬಸವಣ್ಣ ಕನ್ನಡಿಗನೆಂದು ಕನ್ನಡಿಗರು ಹೆಮ್ಮೆ ಪಡಬೇಕೇ ಹೊರತು, ಅವನ ವಿಚಾರಗಳನ್ನು ಅಪವ್ಯಾಖ್ಯಾನಕ್ಕೆ ಗುರಿಪಡಿಸಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.