ಕನಕಪುರ: ಚುನಾವಣೆ ರಾಮನಗರ ಜಿಲ್ಲೆಯ ಒಡಲಲ್ಲೇ ಕೆಂಡದಂತಹ ಬಿಸಿಯನ್ನು ಎಬ್ಬಿಸಿದೆ. ನಿಸರ್ಗದ ವಾತಾವರಣವೂ ಬಿಸಿ. ಸೂರ್ಯ ನೆತ್ತಿಗೆ ಹೋಗುತ್ತಿದ್ದಂತೆ ಕೆಂಡ ಮೈಮೇಲೆ ಬಿದ್ದಂತಹ ಅನುಭವವಾಗುತ್ತದೆ. ಜಿಲ್ಲೆಯ ರಾಜಕೀಯವೂ ಹೀಗೇ ಆಗಿದೆ.

ರಾಮನಗರ ಜಿಲ್ಲೆ ಹೇಳಿಕೇಳಿ ರಾಜಕೀಯವಾಗಿ ಸೂಕ್ಷ್ಮತೆಯನ್ನು ಬೆಳೆಸಿಕೊಂಡ ಪ್ರದೇಶ. ಎಚ್.ಡಿ.ದೇವೇಗೌಡರು ಪ್ರಧಾನಮಂತ್ರಿಯಾಗಿದ್ದಾಗ ಇದೇ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದರು. ಅವರ ಮಗ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗಲೂ ಇದೇ ತಾಲ್ಲೂಕಿನ ಶಾಸಕರಾಗಿದ್ದರು. ಹೀಗಾಗಿ ಚುನಾವಣೆ ಜನತಾದಳ (ಎಸ್)ಗೆ ಅದರಲ್ಲೂ ಕುಮಾರಸ್ವಾಮಿಗೆ ಪ್ರತಿಷ್ಠೆಯಾಗಿ ಪರಿಣಮಿಸಿದೆ.

ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಿರ್ಮಾಣವಾದ ನಾಲ್ಕು ಪಥಗಳ ಬೆಂಗಳೂರು ಮೈಸೂರು ರಾಜ್ಯ ಹೆದ್ದಾರಿ ಇಡೀ ಜಿಲ್ಲೆಯನ್ನೇ ಎರಡು ಭಾಗವಾಗಿಸಿದೆ. ಇದರ ಜೊತೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗವಾಗಿದ್ದ ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಕನಕಪುರ ತಾಲ್ಲೂಕನ್ನು ಸೇರಿಸಿ ಜಿಲ್ಲೆಯ ಸ್ಥಾನ ನೀಡಿದ ಕುಮಾರಸ್ವಾಮಿ ಕಾರ್ಯವನ್ನು ಇಲ್ಲಿಯ ಜನ ಮರೆತಿಲ್ಲ.

ಇವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಂಜೂರಾದ ಜಿಲ್ಲಾಧಿಕಾರಿ ಕಚೇರಿ, ಕಂದಾಯ ಭವನ ಹೆದ್ದಾರಿಯ ಎರಡೂ ಕಡೆ ಎದ್ದು ಕಾಣುತ್ತವೆ. ಆದರೆ ವೈದ್ಯಕೀಯ ವಿಶ್ವವಿದ್ಯಾಲಯ ಮಾತ್ರ ರಾಮನಗರಕ್ಕೆ ಬರಲು ಹಿಂದೆ ಮುಂದೆ ನೋಡುತ್ತಿದೆ.

ರೇಷ್ಮೆ ಸೀಮೆ ಎಂದೇ ಖ್ಯಾತವಾದ ಇಡೀ ಜಿಲ್ಲೆಯಲ್ಲಿ ಕುಮಾರಸ್ವಾಮಿಗೆ ಅಭಿಮಾನಿಗಳ ದೊಡ್ಡ ಬಳಗವೇ ಇದ್ದಂತಿದೆ. ರಾಮನಗರ ಮುಖ್ಯರಸ್ತೆಯಿಂದ ಕನಕಪುರದ ಕಡೆ ಸಾಗುವ ರಸ್ತೆಯ ಅಂಚಿನಲ್ಲೇ ಇರುವ ಅಚ್ಚಲು ಗ್ರಾಮದ ನಾಗಣ್ಣ ರೇಷ್ಮೆ ಕೃಷಿಕ. ಅರವತ್ತು ವರ್ಷದ ಗಟ್ಟಿ ದೇಹದ ಇವರು ರೇಷ್ಮೆ ತೋಟದ ಬಳಿಯಿದ್ದರು.

ಇವರ ಮನೆಯಲ್ಲಿ ಮಗ ಆರ್‌ಎಸ್‌ಎಸ್ ಕಾರ್ಯಕರ್ತ. ಆದರೆ ಇವರು ಕುಮಾರಸ್ವಾಮಿ ಅಭಿಮಾನಿ. ಇವರಿಗೆ 64 ವರ್ಷ. ಕುಮಾರಸ್ವಾಮಿಗೆ 54 ವರ್ಷ. ಆದರೂ ಕುಮಾರಸ್ವಾಮಿ ಇವರಿಗೆ ಕುಮಾರಣ್ಣ. `ನಮ್ಮ ಕುಮಾರಣ್ಣ ಇಲ್ಲದಿದ್ರೆ ರಾಮನಗರ ಜಿಲ್ಲೆ ಆಗ್ತಿತ್ತಾ? ತಾತಪ್ಪ (ದೇವೇಗೌಡ), ಆಯಪ್ಪನ ಮಕ್ಕಳಿಗೆ ರಾಮನಗರ ಮನೆ ಇದ್ದಂಗೆ. ನಮಗೆ ಬೇಕಾದ ಎಲ್ಲಾ ಕೆಲ್ಸನೂ ಮಾಡಿಕೊಟ್ಟರು.

ಹಿಂದೆ ಇದ್ದ ಸಿ.ಎಂ.ಲಿಂಗಪ್ಪ ತಾಲ್ಲೂಕಿಗೆ ಏನು ಮಾಡಿದ್ರು? ಏನೂ ಮಾಡ್ತಿಲ್ಲ. ಕುಮಾರಣ್ಣ ನಮಗೆ ಏನು ಕೊಡಲಿ ಬುಡಲಿ ಮುಖ್ಯಮಂತ್ರಿ ಆಗಿದ್ದೋರ ಸೋಲಿಸೋದಾ. ಇವ್ರ ಸೋಲಿಸಿದ್ರೆ ನಮ್ಮ ಗೌರವ ಹೋಯ್ತದೆ' ಎಂದು ಸಿಡಿಲು ಹೊಡೆದಂತೆ ಉತ್ತರಿಸಿದರು.

ತಾಲ್ಲೂಕಿನಲ್ಲಿ ಸಿದ್ಧ ಉಡುಪು ಘಟಕ, ಸಣ್ಣ ಕೈಗಾರಿಕೆಗಳನ್ನು ಹೊರತುಪಡಿಸಿದರೆ ದೊಡ್ಡ ಉದ್ಯಮಗಳಿಲ್ಲ. ರೇಷ್ಮೆಯೊಂದೇ ರೈತರ ಬದುಕನ್ನು ಹಿಡಿದಿರುವುದು. ಹಳ್ಳಿಹಳ್ಳಿಗಳಲ್ಲೂ ರೇಷ್ಮೆ ಕೃಷಿ ನಡೆದಿದೆ. ಕೆಲವು ಕಡೆ ಬೆಂಗಳೂರಿನ ಕೊಳಚೆಯನ್ನು ಹೊತ್ತು ಸಾಗುವ ವೃಷಭಾವತಿಯೇ ಹಿಪ್ಪುನೇರಳೆ ಕೃಷಿಗೆ ಮೂಲ. ಸಾವಯವ ಗೊಬ್ಬರದಂತಿರುವ ಕೊಳಚೆ ನೀರಿನಿಂದಾಗಿ ರೈತರು ಭೂಮಿಗೆ ರಾಸಾಯನಿಕ ಗೊಬ್ಬರವನ್ನೇ ಎರಚದೆ ಕೊಂಚ ಹಣ ಉಳಿಸುತ್ತಿದ್ದಾರೆ.

ಕಂದಾಯ ಇನ್‌ಸ್ಪೆಕ್ಟರ್ ಆಗ್ದ್ದಿದು ಸ್ವಯಂ ನಿವೃತ್ತಿ ಪಡೆದ `ಭಾರಿ ಕುಳ' ಮರಿದೇವರು ರಾಮನಗರದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿದ್ದಾರೆ. ಕುಮಾರಸ್ವಾಮಿಯನ್ನು ಸೋಲಿಸಲು ನೈಸ್ ಮುಖ್ಯಸ್ಥ ಅಶೋಕ್ ಖೇಣಿ, ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸಹ ಹಣ ಸಹಾಯ ಮಾಡಿದ್ದಾರೆ ಎನ್ನುವ ಸುದ್ದಿ ಜನರ ಬಾಯಲ್ಲಿ ಹರಿದಾಡುತ್ತಿದೆ.

ರಾಮನಗರದಿಂದ ಕುಮಾರಸ್ವಾಮಿ ಕಣಕ್ಕೆ ಇಳಿದಿದ್ದರೆ ಪಕ್ಕದ ಚನ್ನಪಟ್ಟಣದಿಂದ ಇವರ ಪತ್ನಿ ಅನಿತಾ ಕುಮಾರಸ್ವಾಮಿ ಅಖಾಡಕ್ಕೆ ಇಳಿದು ಒಂದು ತಿಂಗಳಿಂದ ಚನ್ನಪಟ್ಟಣದಲ್ಲೇ ಠಿಕಾಣಿ ಹೂಡಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಮತದಾರರ ಕೈಗೆ ಸಿಗದೆ ಇಲ್ಲಿಗೆ ವಲಸೆ ಬಂದಿದ್ದಾರೆ ಎನ್ನುವ ಆಪಾದನೆ ಎದುರಿಸುತ್ತಿದ್ದಾರೆ.

ಇವರ ಎದುರಾಳಿ ಮಾಜಿ ಸಚಿವ, ಪಕ್ಷಾಂತರದಲ್ಲಿ ನಿಪುಣ ಎನಿಸಿಕೊಂಡಿರುವ ಸಿ.ಪಿ.ಯೋಗೇಶ್ವರ್ ಈ ಸಲ ಹೊಸದಾಗಿ ಸಮಾಜವಾದಿಯ ಸೈಕಲ್ ಹತ್ತಿದ್ದಾರೆ. ಇವರು ಎರಡು ಸಲ ಕಾಂಗ್ರೆಸ್, ಒಮ್ಮೆ ಬಿಜೆಪಿಯಿಂದ ಶಾಸಕರಾಗಿದ್ದರು. 2008ರಿಂದ ಐದೇ ವರ್ಷದಲ್ಲಿ ಐದನೇ ಚುನಾವಣೆ ಎದುರಿಸುತ್ತಿದ್ದಾರೆ. `ಸ್ಥಳೀಯ ಚುನಾವಣೆಯೂ ಸೇರಿದಂತೆ ಸತತ ಚುನಾವಣೆ ನಡೆಸಿ ಸಾಕಾಗಿದೆ, ಮತ್ತೆ ಈ ಸಲ ಚುನಾವಣೆಗೆ ನಿಲ್ಲುವುದಿಲ್ಲ' ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದ ಯೋಗೇಶ್ವರ್ ಮತ್ತೆ ಚುನಾವಣೆಗೆ ಯಾವ ಕಾರಣಕ್ಕೆ ನಿಂತಿದ್ದಾರೆ ಎಂದು ಚನ್ನಪಟ್ಟಣದ ಶೌಕತ್ ಪ್ರಶ್ನಿಸುತ್ತಾರೆ.

ಜಿಲ್ಲೆಯ ರಾಜಕೀಯದಲ್ಲಿ ಕನಕಪುರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಶಿವಕುಮಾರ್ ಪ್ರಭಾವ ಸಹ ಇದೆ. ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ, ಕನಕಪುರ ಕಲ್ಲು ಗಣಿಗಾರಿಕೆ ಲಾಬಿಯ ಪ್ರಭಾವಿ. ಇದರ ಜೊತೆಯಲ್ಲಿ ಒಕ್ಕಲಿಗರ ಮುಖಂಡ ಎನಿಸಿಕೊಳ್ಳಲು ಎಚ್‌ಡಿಕೆ, ಡಿಕೆ ನಡುವೆ ಪೈಪೋಟಿ ಹಿಂದಿನಿಂದಲೂ ಇದೆ. ಇಲ್ಲಿಯ ವಿಧಾನಸಭಾ ಉಪಚುನಾವಣೆಯಲ್ಲಿ ಒಕ್ಕಲಿಗರೇ ಆದ ಯೋಗೇಶ್ವರ್ ಗೆಲ್ಲಲು ಡಿಕೆ ಸಹ ಕೈಜೋಡಿಸಿದ್ದರು ಎನ್ನುವ ಸುದ್ದಿಯೂ ಇದೆ.

ಆದರೆ ನಂತರದ ದಿನಗಳಲ್ಲಿ ಇವರಿಬ್ಬರ ಸಂಬಂಧ ಕಡಿದುಹೋಗಲು ಕನಕಪುರದ ಕಲ್ಲು ಗಣಿಗಾರಿಕೆ ಮೇಲೆ ಅರಣ್ಯ ಸಚಿವರಾಗಿದ್ದ ಯೋಗೇಶ್ವರ್‌ಗೆ ದಾಳಿಯೇ ಕಾರಣ. ಇದೇ ಕಾರಣಕ್ಕೆ ಯೋಗೇಶ್ವರ್‌ಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಿದರು ಎನ್ನುವ ಮಾತೂ ಪ್ರಬಲವಾಗೇ ಕೇಳಿಬರುತ್ತಿದೆ. ಇದರ ಏಟು - ಒಳ ಏಟುಗಳು ಜಿಲ್ಲೆಯಲ್ಲೇ ಯಾರೇ ಗೆಲ್ಲಲು ಪಾತ್ರ ವಹಿಸುತ್ತದೆ ಎನ್ನುವುದು ಸಾರ್ವಜನಿಕ ಸತ್ಯ.

ಬೆಂಗಳೂರಿನಿಂದ ಕೇವಲ 65 ಕಿ.ಮೀ ದೂರದಲ್ಲಿದ್ದರೂ ಡಿ.ಎಂ. ನಂಜುಂಡಪ್ಪ ವರದಿಯ ಪ್ರಕಾರ ಕನಕಪುರ ಹಿಂದುಳಿದ ಪ್ರದೇಶ. ಕನಕಪುರದಲ್ಲಿ ಕಾಂಗ್ರೆಸ್‌ನಿಂದ ಮಾಜಿ ಸಚಿವ ಐದು ಸಲ ಶಾಸಕರಾಗಿದ್ದ ಡಿಕೆ ಮತ್ತು ಜೆಡಿಎಸ್‌ನಿಂದ ಮಾಜಿ ಸಚಿವ, ಅನುಭವಿ ರಾಜಕಾರಣಿ, ಆರು ಸಲ ಶಾಸಕರಾಗಿದ್ದ ಪಿ.ಜಿ.ಆರ್.ಸಿಂಧ್ಯ ಗುದ್ದಾಡುತ್ತಿದ್ದಾರೆ.

ಘಟಾನುಘಟಿಗಳ ಕಾಳಗ ತಾಲ್ಲೂಕಿನಲ್ಲಿ ದೂಳನ್ನು ಎಬ್ಬಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ ದಾರಿಯಲ್ಲೇ ಸಿಕ್ಕ ಪುರಸಭಾ ಸದಸ್ಯ ಅಮ್ಜದ್ ಖಾನ್ ನನಗೆ ಹಾಕಿದ ಪ್ರಶ್ನೆ, `ಈ ಥರ ಫೈಟ್ ಇಲ್ಲಿ ಮಾತ್ರನಾ, ಇಲ್ಲ ಎಲ್ಲಾ ಕಡೆನೂ ಇದೆಯಾ?' ಎಂದು.

ಡಿಕೆ ಚುನಾವಣೆ ಘೋಷಣೆಗೂ ಆರು ತಿಂಗಳ ಮುನ್ನ ತಾಲ್ಲೂಕಿನಲ್ಲಿ ಪ್ರಚಾರ ಆರಂಭಿಸಿದ್ದಾರೆ. ಪ್ರಚಾರಕ್ಕೆಂದು ಎಲ್‌ಸಿಡಿ ಪರದೆಯಿರುವ ಮೂರು ಆಧುನಿಕ ಲಾರಿಗಳನ್ನು ತರಿಸಿದ್ದಾರೆ.

ಇಪ್ಪತ್ತು ಜನರಿದ್ದರೂ ಸರಿ ಪರದೆಯಲ್ಲಿ ಸಾಕ್ಷ್ಯಚಿತ್ರ ಆರಂಭವಾಗುತ್ತದೆ. ತುಮಕೂರು ಮಠದ ಡಾ.ಶಿವಕುಮಾರ ಸ್ವಾಮೀಜಿ, ಇತ್ತೀಚೆಗೆ ನಿಧನರಾದ ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ ಡಿಕೆ ಪರ ಹೇಳಿರುವ ಅಭಿಪ್ರಾಯ, ತಾಲ್ಲೂಕಿಗಾಗಿ ಡಿಕೆಯ ಕನಸು ಮೂಡಿ ಬರುತ್ತದೆ. ಈ ಮೂಲಕ ಎರಡು ಪ್ರಮುಖ ಜಾತಿಗಳ ಸ್ವಾಮಿಗಳನ್ನು ತಮ್ಮ ಪರ ಪ್ರಚಾರಕ್ಕೆ ಡಿಕೆ ಬಳಸಿಕೊಳ್ಳುತ್ತಿದ್ದಾರೆ.

ಒಟ್ಟಾರೆ ಜಿಲ್ಲೆಯೇ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದೆ. ಕೆರೆಗಳು ಬತ್ತಿವೆ. ಕಾಲುವೆಗಳು ಬಾಯಾರಿವೆ. 1200 ಅಡಿ ತೋಡಿದರೂ ಕೊಳವೆ ಬಾವಿಯಲ್ಲಿ ನೀರು ಸಿಗುತ್ತದೆ ಎನ್ನುವುದು ಕಷ್ಟ. ನೀರು ಸಿಕ್ಕರೂ ಫ್ಲೋರೈಡ್ ಮುಕ್ತ ಎನ್ನಲಾಗದು. ಇಂತಹ ಪರಿಸ್ಥಿತಿಯಲ್ಲಿ ಚನ್ನಪಟ್ಟಣದಲ್ಲಿ ಯೋಗೇಶ್ವರ್ ಹಾಗೂ ಕನಕಪುರದಲ್ಲಿ ಡಿಕೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕೆಲ ಕಡೆ ಸ್ಥಾಪಿಸಿದ್ದಾರೆ. ಹತ್ತು ಲೀಟರ್ ನೀರಿಗೆ 2 ರೂಪಾಯಿ.

ಹಿಂದೆ ಕೆಂಪೇಗೌಡರಿಂದ ಮಾಗಡಿ ಖ್ಯಾತಿ ಪಡೆದಿದ್ದರೆ ಇದೀಗ ಲೋಕೋಪಯೋಗಿ ಹಗರಣದಿಂದ ಕುಖ್ಯಾತಿ ಪಡೆದುಕೊಂಡಿದೆ. ಏನೂ ಇಲ್ಲದ ಕೆಲ ಗುತ್ತಿಗೆದಾರರು ಈಗ ಏನೇನೋ ಆಗಿದ್ದಾರೆ. ಹಗರಣದಲ್ಲಿ ಗುತ್ತಿಗೆದಾರರ ಪಾತ್ರವೇ ಇಲ್ಲವೆಂದು ಶಾಸಕ ಎಚ್.ಸಿ.ಬಾಲಕೃಷ್ಣ ಸಮರ್ಥಿಸಿಕೊಂಡ ವಿಷಯವೂ ಜನರ ನಾಲಿಗೆಯಲ್ಲಿ ಹರಿದಾಡುತ್ತಿದೆ. ಚುನಾವಣೆಯಲ್ಲಿ ತಾಲ್ಲೂಕಿನ ಮಟ್ಟಿಗೆ ಇದೇ ದೊಡ್ಡ ವಿಷಯ.

ಒಟ್ಟಾರೆ ಜಿಲ್ಲೆಯಲ್ಲಿ ಸಿಂಧ್ಯ ಅವರನ್ನು ಹೊರತುಪಡಿಸಿದರೆ ನೇರ ಸ್ಪರ್ಧೆ ಇರುವುದು ಒಕ್ಕಲಿಗ ಮುಖಂಡರ ನಡುವೆ. ಜಾತಿಯ ಮುಖಂಡರಾಗಲು ಪೈಪೋಟಿ, ರಾಜಕೀಯದ ಒಳಸುಳಿ, ಕಲ್ಲುಗಣಿ ಗದ್ದಲ, ಲೋಕೋಪಯೋಗಿ ಹಗರಣ, ನೀರಿನ ಸಮಸ್ಯೆ, ನಿರುದ್ಯೋಗ, ಕೈಕೊಟ್ಟ ಕೃಷಿಯ ನಡುವೆಯೂ ಪಕ್ಷ ಮತ್ತು ಪ್ರತಿಷ್ಠೆಯನ್ನು ಮುಖಂಡರು ಪಣಕ್ಕೆ ಒಡ್ಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.