ಕನ್ನಡದಲ್ಲಿ ಮಹಿಳಾ ಬರವಣಿಗೆಯನ್ನು ಸ್ತ್ರೀವಾದಿ ತಾತ್ವಿಕತೆಯ ಸಂಕರಕ್ಕೊಳಗುಮಾಡಿ ಹೊಸ ಚಹರೆಯನ್ನು ರೂಪಿಸಿದ ಲೇಖಕಿ ವೀಣಾ ಶಾಂತೇಶ್ವರ. ಎಪ್ಪತ್ತು ಎಂಬತ್ತರ ದಶಕದಲ್ಲಿ ವೀಣಾ ಅವರ ಕಥನಗಳು ಹೆಣ್ತನದ ಇತಿವೃತ್ತದ ಶೋಧದಲ್ಲಿ ಗಾಢವಾಗಿ ತೊಡಗಿದ್ದವು.

‘ಹೆಣ್ಣು’ ಎಂದರೇನು? ಎಂಬ ಪ್ರಶ್ನೆಯನ್ನು ಹೆಣ್ಣು ಎದುರಿಸಿಕೊಳ್ಳುವುದೆಂದರೆ, ಪರಂಪರಾಗತವಾಗಿ ಉದ್ದೇಶಪೂರ್ವಕವಾಗಿ ಹೆಣ್ತನದ ಮೇಲೆ ಹೊರಿಸಿದ ಅಬದ್ಧಗಳನ್ನು ನಿರಾಕರಿಸುವುದಾಗಿತ್ತು, ತನ್ನನ್ನು ತಾನು ಸ್ಪಷ್ಟೀಕರಿಸಿಕೊಳ್ಳುವ ಹೊಸ ದಾರಿಯ ಹುಡುಕಾಟವಾಗಿತ್ತು.ಇಂತಹ ಸಂಕ್ರಮಣ ಕಾಲದ ಸವಾಲನ್ನು ಬರಹದ ಕೇಂದ್ರವಾಗಿಸಿಕೊಂಡು ಸಮರ್ಥವಾದ ಚಹರೆಯನ್ನು ರೂಪಿಸಿದವರು ವೀಣಾ ಶಾಂತೇಶ್ವರ. ಹಾಗಾಗಿ ಇವರ ಕಥನಗಳಿಗೆ ಚಾರಿತ್ರಿಕ ಮಹತ್ವ ಇದೆ.

ವೀಣಾ ಅವರಿಗೆ ತುಂಬ ಅಪರೂಪದ ವಿದ್ಯಾವಂತ ವೈಚಾರಿಕ ಮನೋಧರ್ಮದ ಕೌಟುಂಬಿಕ ಹಿನ್ನೆಲೆಯಿತ್ತು.‘ನನ್ನ ಕೌಟುಂಬಿಕ ಹಿನ್ನಲೆ ಬಾಲ್ಯ, ಶಿಕ್ಷಣ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರ ಇವುಗಳ ಬಗ್ಗೆ ಹಿಂದಿರುಗಿ ನೋಡಿದಾಗಲೆಲ್ಲ ನನಗೆ, ನನ್ನ ಸಮಕಾಲೀನ ಹೆಣ್ಣುಮಕ್ಕಳಿಗಿಂತ ನಾನು ಬಹಳಷ್ಟು ಹೆಚ್ಚಿನ ಅನುಕೂಲತೆಗಳನ್ನು ಹೊಂದಿದ್ದೆ ಎನಿಸುತ್ತದೆ’ ಎಂದು ವೀಣಾ ನೆನಪಿಸಿಕೊಳ್ಳುತ್ತಾರೆ.

ಇವರ ತಂದೆ ಬಿ.ಎಚ್. ಯಲಬುರ್ಗಿ ಮುಂಬಯಿಯ ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ದಿಂದ ಕೆಮೆಸ್ಟ್ರಿ ಪದವಿ ಪಡೆದ ಹೆಸರಾಂತ ಕೆಮೆಸ್ಟ್ರಿ ಪ್ರೊಫೆಸರ್ ಮತ್ತು ವಂಶಪರಂಪರಾಗತವಾಗಿದ್ದ ಆಯುರ್ವೇದದಲ್ಲಿ ಸಾಕಷ್ಟು ಪರಿಣಿತಿ ಪಡೆದ ವಿದ್ವಾಂಸರಾಗಿದ್ದರು.ವೀಣಾ ಅವರ ತಾಯಿ ಇಂದಿರಾ ಕೊಲ್ಲಾಪುರದ ರಾಜಮನೆತನಕ್ಕೆ ಸಮೀಪವರ್ತಿಯಾಗಿದ್ದ ದಿವಾನರ ಮಗಳು.ಮಹರ್ಷಿ ಕರ್ವೆ, ಬಾಲಗಂಗಾಧರ ಟಿಳಕ, ಪಂಡಿತ ರಮಾಬಾಯಿ ಮೊದಲಾದ ಸಮಾಜ ಸುಧಾರಕರಿಂದ ಪ್ರಭಾವಿತರಾಗಿದ್ದವರು.

ಇದರಿಂದ ವೀಣಾ ಅವರಿಗೆ ಕನ್ನಡ ಮತ್ತು ಮರಾಠಿ ಸಾಹಿತ್ಯ ಮತ್ತು ಸಂಸ್ಕೃತಿಯ ಕೂಡು ವಾತಾವರಣ ದೊರೆಯಿತು. ಇದನ್ನವರು ಮುಂದೆ ಬಹುಭಾಷಿಕ ಸಾಹಿತ್ಯ ಅಧ್ಯಯನದ ಸಾಧ್ಯತೆಯಾಗಿ ಬೆಳೆಸಿಕೊಂಡರು.ವೀಣಾ ಶಾಂತೇಶ್ವರ ಅವರಿಗೂ ಶಿಕ್ಷಣ ಕ್ಷೇತ್ರಕ್ಕೂ ಬೆಸೆದ ಸಂಬಂಧವನ್ನು ಗಮನಿಸದೆ ಇದ್ದರೆ, ಅವರ ವ್ಯಕ್ತಿತ್ವದ ಮತ್ತೊಂದು ಮಗ್ಗಲು ಗೋಚರವಾಗುವುದಿಲ್ಲ. ಶಿಕ್ಷಣ ಪ್ರೀತಿಯ ಮನೆಯ ವಾತಾವರಣದ ಪ್ರಭಾವದಿಂದ ಓದನ್ನು ಗಂಭೀರವಾಗಿ ಸ್ವೀಕರಿಸುವುದು ಸಾಧ್ಯವಾಗಿತ್ತು. ಓದಿನ ನಿಷ್ಠೆ ಅವರ ಮನದಾಳದ ಹಂಬಲವೂ ಆಗಿತ್ತು.

ಪ್ರಾಥಮಿಕ ಶಾಲೆಯ ಮೊದಲ ತರಗತಿಯಿಂದ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನದಲ್ಲಿ ಬಂಗಾರದ ಪದಕ ಪಡೆಯುವವರೆಗೂ ಹರಿಗಡೆಯದ ಶ್ರಮವಿತ್ತು. ತಾವು ಅಧ್ಯಯನ ಮಾಡಿದ ಧಾರವಾಡದ ಕರ್ನಾಟಕ ಕಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಪ್ರೀತಿಯಿಂದ ಕಾರ್ಯನಿರ್ವಹಿಸಿದರು.

ಅದೇ ಕಾಲೇಜಿನಲ್ಲಿ ಒಂಬತ್ತು ವರ್ಷ ಪ್ರಾಚಾರ್ಯರಾಗಿ ಜವಾಬ್ದಾರಿ ನಿರ್ವಹಿಸಿದರು. ಅವರು ಅಕಾಡೆಮಿಕ್ ಆಗಿ, ಆಡಳಿತಾತ್ಮಕವಾಗಿ ನಿರ್ವಹಿಸಿದ ಕಾರ್ಯಶ್ರಮ ಅಗಾಧವೇ. ಧಾರವಾಡದ ಕರ್ನಾಟಕ ಕಾಲೇಜಿನ ಚರಿತ್ರೆಯನ್ನು ವೀಣಾ ಶಾಂತೇಶ್ವರ ಅವರನ್ನು ಹೆಸರುಗೊಳ್ಳದೆ ಬರೆಯುವುದು ಸಾಧ್ಯವಿಲ್ಲ.

ಅಧ್ಯಾಪನ, ಆಡಳಿತ, ಸಾಂಸ್ಕೃತಿಕ ಸಂಘಟನೆ– ಹೀಗೆ ಹಲವು ವಲಯಗಳಲ್ಲಿ ಅವರ ಕರ್ತೃತ್ವ ಶಕ್ತಿ ಹರಿದಿದೆ.ಇದೇ ವೇಳೆಯಲ್ಲವರು ತಮ್ಮ ಕಥೆಗಳಿಂದ ಕನ್ನಡಕ್ಕೆ ಅಪರೂಪದ ಸೇರ್ಪಡೆಯನ್ನು ಒದಗಿಸಿದರು.ಮಗುವೊಂದು ಕಾಗುಣಿತ ತಿದ್ದುವ ಆರನೇ ವಯಸ್ಸಿನಲ್ಲಿ ರಾಜಕುಮಾರಿಯ ಸಾಹಸವನ್ನು ಹೇಳುವ ಕಥೆ ಬರೆದು ಶಾಲೆಯ ಮ್ಯಾಗಝಿನ್‌ನಲ್ಲಿ ಪ್ರಕಟಿಸಿದ್ದ ವೀಣಾ ಅವರಿಗೆ, ಕಥೆ ಕಟ್ಟುವುದು ಜೀವಜಾತದಂತೆ ಸಹಜವಾಗಿತ್ತೇನೋ.ಮುಂದೆ ಧಾರವಾಡದ ಸಾಂಸ್ಕೃತಿಕ ಪರಿಸರ ಮತ್ತು ಅಧ್ಯಯನಶೀಲತೆ ಪೂರಕ ಹದವನ್ನು ಒದಗಿಸಿತು.

ಆ ಕಾಲದ ನವ್ಯ ಸಾಹಿತ್ಯದ ಸೆಳೆತದಿಂದ ಈಚೆ ನಿಂತು, ಹೆಣ್ಣಿನ ಸಹಜ ಸತ್ವದ ಹುಡುಕಾಟದಲ್ಲಿ ಮಗ್ನರಾಗಲು ಅಗತ್ಯವಾದ ದೃಢತೆಯನ್ನು ಸ್ತ್ರೀವಾದಿ ಚಿಂತನಧಾರೆ ನೀಡಿತು.ಹಾಗಾಗಿ ಸ್ತ್ರೀಸತ್ವದ ಹುಡುಕಾಟಕ್ಕೆ ತೊಡಗುವಾಗ ಪಾರಂಪರಿಕ ಸ್ತ್ರೀ ಮಾತೃಕೆಗಳ ಅಥವಾ ಸ್ತ್ರೀ ಕಲ್ಪಿತಗಳ ಮೊರೆ ಹೋಗುವುದಿಲ್ಲ.

ಹೆಣ್ಣಿನ ಮಾತೃತ್ವ ಮತ್ತು ದೈವಿಕತೆಯ ಕುರಿತು ಕಟ್ಟಲಾದ ಸಂಕಥನಗಳು ಪಿತೃ ಹಿತಾಸಕ್ತ ನಿಲುವುಗಳನ್ನೇ ಬೆಳೆಸುವುದರಿಂದ ಅವುಗಳನ್ನು ಪ್ರಜ್ಞಾಪೂರ್ವಕವಾಗಿಯೇ ದೂರೀಕರಿಸುತ್ತಾರೆ. ಇದರಿಂದ ಮಹಿಳಾ ಅಭಿವ್ಯಕ್ತಿಯ ಪರಂಪರಾಗತ ನಿಲುವುಗಳಿಂದಲೂ ಬೇರೆಯಾಗುತ್ತಾರೆ.

ಹೆಣ್ಣಿನ ಲೈಂಗಿಕತೆಯನ್ನು ಅಪಮೌಲ್ಯೀಕರಿಸಿದ ವ್ಯವಸ್ಥೆಯ ತಂತ್ರವನ್ನು ಮನದಟ್ಟುಗೊಳಿಸುವ ಮತ್ತು ಹೆಣ್ಣಿನ ದೇಹಬದ್ಧತೆಯನ್ನು ವಿವರಿಸಿಕೊಳ್ಳುವ ಕಾರಣಕ್ಕಾಗಿ ಅದನ್ನು ಮರಮರಳಿ ಅನ್ಯಾನ್ಯ ಸಂದರ್ಭದಲ್ಲಿಟ್ಟು ಚರ್ಚೆಯ ಕೇಂದ್ರಕ್ಕೆ ತರುತ್ತಾರೆ.

ಹೆಣ್ಣಿನ ಅಗತ್ಯ ಮತ್ತು ಆದ್ಯತೆಗಳನ್ನು ಮರುಪ್ರಶ್ನಿಸಿಕೊಳ್ಳಬೇಕಾದ ಒತ್ತಡವನ್ನು ಕನ್ನಡದ ನವ್ಯ ಸಾಹಿತ್ಯವೂ ತಂದೊಡ್ಡಿತ್ತು. ಹೆಣ್ಣಿನಿಂದ ಗಂಡು ಬಯಸುವುದೇನನ್ನು ಎಂಬ ಜಡಪ್ರಶ್ನೆಗೆ ಗಂಡಿನಿಂದ ಹೆಣ್ಣು ಬಯಸುವುದೇನನ್ನು ಎಂಬ ಪರ್ಯಾಯವನ್ನು ಒದಗಿಸುತ್ತಲೇ ಚಲನಶೀಲಗೊಳಿಸುವುದು ವೀಣಾ ಅವರ ಕಥನಗಳ ತಾತ್ವಿಕತೆಯಾಗಿದೆ.

ಹಾಗಾಗಿ ಅವರ ಬಹುತೇಕ ಕಥೆಗಳು ಗಂಡು ಹೆಣ್ಣಿನ ಸಂಬಂಧದ ಅಧಿಕಾರ ರಾಜಕಾರಣವನ್ನು ಮುಖ್ಯವಾಗಿಸಿಕೊಳ್ಳುತ್ತವೆ.ಬರಹಗಾರರಿಗೆ ಸವಾಲು ಅನ್ನಿಸುವ ವರ್ತಮಾನದ ಮರುರೂಪಣೆಯ ವಿಧಾನವನ್ನು ವೀಣಾ ಆಯ್ದುಕೊಂಡರು.

ಬಾಲ್ಯದ ಅನುಭವ ಮತ್ತು ಸ್ಮೃತಿಗಳನ್ನು ಕಥನ ನಿರ್ಮಿತಿಯ ಪರಿಕರವಾಗಿಸಿಕೊಳ್ಳದೆ, ಬದಲಾದ ಕಾಲ-ಸಂದರ್ಭಗಳಲ್ಲಿ ಹೆಣ್ಣು ಎದುರಿಸುತ್ತಿರುವ ಹೊಸ ಪರೀಕ್ಷೆಗಳನ್ನು ತಾದಾತ್ಮ್ಯದಿಂದ ನಿರೂಪಿಸಿದರು.

ಹೆಣ್ಣಿನ ಬಿಡುಗಡೆಯ ನೆಲೆ ಎಂದು ಪ್ರತಿಪಾದಿತವಾಗಿದ್ದ ಆಧುನಿಕತೆಯು ಅವಳಿಗೆ ಬಿಡುಗಡೆಯನ್ನು ಸಾಧ್ಯವಾಗಿಸಿತೇ? ಅಥವಾ ಬಂಧನದ ಎಳೆಗಳು ಸೂಕ್ಷ್ಮವೂ ಹರಿತವೂ ಆದವೇ? ಎಂಬ ಪ್ರಮೇಯವನ್ನು ಬದುಕಿನ ವಿವಿಧ ಸಂದರ್ಭದಲ್ಲಿಟ್ಟು ನೋಡುವ ಪ್ರಯತ್ನವನ್ನು ಕಥನದ ಮೂಲಕ ಮಾಡಿದರು.

ಹೆಣ್ಣಿನ ಹಿತಾಸಕ್ತಿಯನ್ನು ಅಲಕ್ಷಿಸಿದ ದಾಂಪತ್ಯ ಧರ್ಮವನ್ನು ಹಲವು ಹಾದಿಗಳಿಂದ ಪ್ರವೇಶಿಸಿ ಅಲ್ಲಿರುವ ಅಸಹ್ಯತನವನ್ನು ಶ್ರದ್ಧೆಯಿಂದ ತೋರುಗಾಣಿಸಿದರು. ಆಧುನಿಕತೆಯ ಹೊಸ ಚೌಕಟ್ಟಿನಲ್ಲಾದರೂ ಹೆಣ್ಣಿನ ಜೀವಮಿಡಿತದ ಸದ್ದು ಕೇಳಿಸೀತೆ ಎಂದು ಆಲಿಸುವುದನ್ನು ಕಲಿಸಿದರು.

ಆಧುನಿಕತೆಯು ಹಳೆಯ ಹುಣ್ಣುಗಳನ್ನು ಮಾಯಿಸಿತು ಎನ್ನುವಾಗಲೇ ಹೊಸ ಹುಣ್ಣುಗಳು ಕಾಣುವ ಯಾತನಾವಲಯವನ್ನು ದಟ್ಟ ವಿಷಾದದಿಂದ, ಆದರೆ ಹೋರಾಟವನ್ನು ಬಿಡದ ಅದಮ್ಯ ಛಲದಿಂದ ನಿರ್ವಹಿಸಿದರು.

ವೀಣಾ ಅವರ ಕಥೆಗಳ ನಾಯಕಿಯರು ಅಂತಿಮವಾಗಿ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳುತ್ತಾರೆ ಎಂಬ ಆರೋಪವೂ ಕೇಳಿಬಂತು. ಯಾವುದನ್ನು ರಾಜಿ ಎಂದುಕೊಳ್ಳುತ್ತೇವೋ ಅದು ಆಳದಲ್ಲಿ ಜೀವನಪ್ರೀತಿ ಮತ್ತು ಹೋರಾಟದ ಪಥ ಬದಲಾವಣೆ ಮಾತ್ರ ಎಂದೂ ಗಮನಿಸಬಹುದಾಗಿದೆಯಲ್ಲವೇ? ‘ಅವಳ ಸ್ವಾತಂತ್ರ್ಯ’ದಂತಹ ಕಥೆ ಇಂತಹ ಬಿಕ್ಕಟ್ಟನ್ನೇ ಧ್ವನಿಸುತ್ತದೆ.

ವೀಣಾ ಅವರ ಕಥೆಗಳು ಮಧ್ಯಮ ವರ್ಗದ ಚೌಕಟ್ಟನ್ನು ಕ್ಯಾನ್ವಾಸ್ ಆಗಿ ಬಳಸುವುದು ಆಧುನಿಕತೆಯನ್ನು ಕೇಂದ್ರವಾಗಿಸುವ ಅನಿವಾರ್ಯತೆಯಾಗಿದೆ. ಕೆಳವರ್ಗದ ಹೆಣ್ಣುಗಳ ಹಾಜರಾತಿಯೂ ಈ ಚೌಕಟ್ಟನ್ನು ದೂರ ನಿಂತು ವಿಮರ್ಶಿಸುವ ಗರಜಿನಲ್ಲಿ ರೂಪುಗೊಂಡಿದ್ದು.

ಹೆಣ್ಣನ್ನು ಚರಿತ್ರೆಯಿಂದ ಇಲ್ಲವಾಗಿಸಿದ ತಾತ್ವಿಕ ಸ್ಪಷ್ಟತೆಯ ಕಾರಣಕ್ಕಾಗಿ ಇಲ್ಲಿಯ ಕಥೆಗಳ ನಾಯಕಿಯರು ತಮ್ಮನ್ನು ಸ್ವಪ್ರಯೋಗಕ್ಕೆ ಒಡ್ಡಿಕೊಳ್ಳುವುದು. ಈ ವ್ಯವಸ್ಥೆ ಏನನ್ನೂ ಹೆಣ್ಣಿಗೆ ಮುಫತ್ತಾಗಿ ಕೊಡುವುದಿಲ್ಲ. ಅವಳ ನಿನ್ನೆಗಳನ್ನು ತುಚ್ಛೀಕರಿಸಲಾಗುತ್ತದೆ, ನೆನಪನ್ನು ನಗಣ್ಯವಾಗಿಸಲಾಗುತ್ತದೆ.

ಇಂತಹ ವಾಸ್ತವವನ್ನು ಇಂದಿನ ಅನುಭವದ ಕನ್ನಡಿಯಲ್ಲಿಯೇ ಕಾಣಬೇಕಲ್ಲವೇ? ವರ್ತಮಾನದ ನಿಸ್ತೇಜತೆ ಅರಿವಾದಾಗಲೇ ಭವಿಷ್ಯದ ಬೆಳಕಿಂಡಿಯನ್ನು ಶೋಧಿಸಿಕೊಳ್ಳಬೇಕಾಗುತ್ತದೆ. ಹೆಣ್ಣಿಗೆ ಅಭಿವ್ಯಕ್ತಿ ಹಕ್ಕಲ್ಲ, ಸಹಜವಲ್ಲ, ಅದೊಂದು ಪ್ರಜ್ಞಾಪೂರ್ವಕ ಅಸ್ತಿತ್ವದ ಹೋರಾಟ.

ಗಂಡಿಗೆ ಈ ಸವಾಲುಗಳಿರಬೇಕಿಲ್ಲ. ಅನುಭವದ ಅಭಿವ್ಯಕ್ತಿ ಗಂಡಿಗೆ ಸಂಭ್ರಮ, ಹೆಣ್ಣಿಗೆ ಸಂಕಟ– ಇಂತಹ ನಿಲುವು ‘ಹೆಣ’ ಎಂಬ ಕಥೆಯಲ್ಲಿದೆ.ಸ್ತ್ರೀವಾದವನ್ನು ಬದುಕಿನ ಶೋಧನೆಯ ಕಣ್ಣಾಗಿಸಿಕೊಂಡು ಬರೆದ ವೀಣಾ ಶಾಂತೇಶ್ವರ ಕಥನಗಳು ಕನ್ನಡದಲ್ಲಿ ಸ್ತ್ರೀವಾದಿ ತಾತ್ವಿಕತೆಯನ್ನು ಮರುರೂಪಿಸಿದವು.

ಅನುವಾದ, ವಿಮರ್ಶೆ, ವೈಚಾರಿಕ ಹೀಗೆ ಹಲವು ಪ್ರಕಾರಗಳಲ್ಲಿ ಬರೆದರೂ ವೀಣಾ ಅವರು ಕನ್ನಡ ಕಥನ ಸಾಧ್ಯತೆಗೆ ನೀಡಿದ ಕೊಡುಗೆ ಗಣನೀಯವಾದದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.