ಕೊಪ್ಪಳ: ರಾಜ್ಯದ ಇತರ ಕಡೆಗಳಂತೆ ಜಿಲ್ಲೆಯಲ್ಲೂ ವಿಷಯಾಧಾರಿತ ಚುನಾವಣೆ ಮಾಯವಾಗಿದೆ. ಕುಷ್ಟಗಿ ಮತ್ತು ಸುತ್ತಲಿನ ಭಾಗಗಳಲ್ಲಿ ಕಾಂಚಾಣ ಕುಣಿತದ ಅಬ್ಬರ ಜೋರಾಗಿದೆ. ಮಾತಿನ ಮೂಲಕ ಜನರನ್ನು ಸೆಳೆದು ಮೋಡಿ ಮಾಡಬೇಕಾದ ನಾಯಕರೂ ತಮ್ಮ ಬತ್ತಳಿಕೆಯಲ್ಲಿ `ಅಸ್ತ್ರ'ವಿಲ್ಲದೆ ಸೊರಗಿದ್ದಾರೆ. ಆದ್ದರಿಂದ ಹಣದ `ಬಾಣ'ವೇ ಎಲ್ಲೆಡೆ ಪ್ರಧಾನವಾಗಿ ಪ್ರಯೋಗವಾಗುತ್ತಿದೆ.

ಒಂದಾಗಿ ಬಾಳಬೇಕಾದ ಜನರು ಜಾತಿ, ಉಪಜಾತಿಗಳ ಕಬಂಧಬಾಹುಗಳ ಬಂಧನದಲ್ಲಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಚುನಾವಣೆ ಜಾತಿ-ಹಣವನ್ನೇ ಪ್ರಬಲವಾಗಿ ಅವಲಂಬಿಸಿದೆ. ಜಾತಿಯ ಭೂತ, ಕಾಂಚಾಣದ ನರ್ತನ ಕಂಡು ಹಿರಿಯರು ಮೌನವಾಗಿ ಮರುಗುತ್ತಾರೆ. `ಎಂಥಾ ಸ್ಥಿತಿ ಬಂತಲ್ಲಪ್ಪ' ಎನ್ನುತ್ತಾರೆ.

ಕೃಷಿ ಪ್ರಧಾನವಾದ ಈ ಜಿಲ್ಲೆಯ ಕುಷ್ಟಗಿ ಮತ್ತು ಕೊಪ್ಪಳ ತಾಲ್ಲೂಕುಗಳಲ್ಲಿ ಮಾತ್ರ ಹಲವು ಕಾರ್ಖಾನೆಗಳು ತಲೆ ಎತ್ತಿವೆ. ಉಳಿದಂತೆ ಗಂಗಾವತಿ ತಾಲ್ಲೂಕು ಹೊರತುಪಡಿಸಿದರೆ ಜಿಲ್ಲೆ ಮಳೆಯನ್ನೇ ನೆಚ್ಚಿಕೊಂಡಿದೆ. ಕೊಳವೆ ಬಾವಿ ಕೊರೆದರೂ ನೀರಿಲ್ಲ. ನೀರು ಬಂದರೂ ಹರಿಸಲು ವಿದ್ಯುತ್ ಇಲ್ಲ. ಬಡತನದ ಬೇಗೆಯಲ್ಲಿ ಬೇಯುತ್ತಿರುವ ಜನರಿಗೆ ಗುಳೆ ಸಾಮಾನ್ಯ ಸಂಗತಿಯಾಗಿದೆ.

ಕುಷ್ಟಗಿಯ ಪದವಿ ಕಾಲೇಜಿನ ವಿದ್ಯಾರ್ಥಿಗಳೂ ಕಾಲೇಜು ಬಿಟ್ಟು ಮಂಗಳೂರು, ಬೆಂಗಳೂರಿಗೆ ದುಡಿಯಲು ಹೋಗುತ್ತಿರುವ ಕಳವಳಕಾರಿ ಪರಿಸ್ಥಿತಿ ಇದೆ. ಗುಳೇ ಹೊರಟ ಮಂದಿ ಟಂಟಂ ಗಾಡಿಗಳಲ್ಲಿ ಅಪಘಾತಕ್ಕೆ ಈಡಾಗಿ ಸಾವನ್ನಪ್ಪುವುದೂ ಸಾಮಾನ್ಯ ವಿದ್ಯಮಾನ ಆಗಿಬಿಟ್ಟಿದೆ. ಅಪಘಾತಗಳ ಕರಾಳ ಇತಿಹಾಸವೇ ಈ ಜಿಲ್ಲೆಗಿದೆ. ಇಂತಹ ಗುಳೆ ತಪ್ಪಿಸಲು ಉದ್ಯೋಗ ಸೃಷ್ಟಿಗೆ ಯಾವುದೇ ಪ್ರಯತ್ನಗಳು ಆಗಿಲ್ಲ. ವಿಪರ್ಯಾಸವೆಂದರೆ ಚುನಾವಣೆಯಲ್ಲಿ ಇಂತಹ ವಿಷಯಗಳಿಗೆ ಜಾಗವೇ ಇಲ್ಲ.

ಜನರ ಜೀವನದ ಸ್ಥಿತಿ-ಗತಿ, ನೋವು-ಬವಣೆ, ಯಾತನೆ ಅರಿವಿರದ ರಾಜಕಾರಣಿಗಳು ಮಾತ್ರ ಜನರನ್ನು ತಮ್ಮತ್ತ ಒಲಿಸಿಕೊಳ್ಳಲು ಹಟಕ್ಕೆ ಬಿದ್ದಿದ್ದಾರೆ. ಕೆಲವರು ಮೂರು ವರ್ಷಗಳಿಂದಲೂ ಜಿಲ್ಲೆಯ ಯಲಬುರ್ಗಾ, ಕುಷ್ಟಗಿ ಕ್ಷೇತ್ರಗಳಲ್ಲಿ ಹಣದ ಹೊಳೆ ಹರಿಸಿದ್ದಾರೆ.

ಜಿಲ್ಲೆ ಎಷ್ಟು ಅಧೋಗತಿಗೆ ಇಳಿದಿದೆ ಎಂದರೆ, ಗಣೇಶನ ಹಬ್ಬದ ಸಂದರ್ಭದಲ್ಲಿ ರಾಜಕೀಯ ಪಕ್ಷದ ಮುಖಂಡರೊಬ್ಬರು ಗಣೇಶನ ಮೂರ್ತಿಗಳನ್ನು ಕೊಡಿಸಿದ್ದಲ್ಲದೆ, ಹಣವನ್ನೂ ಕೊಟ್ಟಿದ್ದರಂತೆ. ಎರಡನ್ನೂ ಪಡೆದ ಮಂಡಳಿಗಳ ಸದಸ್ಯರು ಗಣೇಶನ ಬದಲಿಗೆ, ಆ ರಾಜಕಾರಣಿ ಮತ್ತು ಅವರ ಪಕ್ಷಕ್ಕೆ ಜೈಕಾರ ಹಾಕುತ್ತಾ ಗಣೇಶನನ್ನು ತೆಗೆದುಕೊಂಡು ಹೋಗಿದ್ದರಂತೆ.

ರಾಜಕೀಯದಲ್ಲಿ ಬಂಡವಾಳ ಹೂಡಿಕೆ ಇಷ್ಟಕ್ಕೆ ನಿಲ್ಲಲಿಲ್ಲ. ಗ್ರಾಮೀಣ ಪ್ರದೇಶದವರಿಗೆ ಸೀರೆ, ಬಟ್ಟೆ ಹಂಚಿದ್ದಲ್ಲದೇ ಬೋರ್‌ವೆಲ್‌ಗಳನ್ನು ಉಚಿತವಾಗಿ ಕೊರೆಸಿ ಕೊಟ್ಟಿದ್ದಾರೆ. ರಾಜಕಾರಣಿಗಳು ಹಣ ಕೊಡುತ್ತಾರೆ ಎಂದೇ ಕಬಡ್ಡಿ, ಚೆಸ್ ಟೂರ್ನಿಗಳನ್ನು ಸಂಘಟಿಸಿದ್ದೂ ಇದೆ ಎನ್ನುತ್ತಾರೆ ಕುಷ್ಟಗಿ ಜನತೆ.

ಅಭ್ಯರ್ಥಿಗಳ ಪರವಾಗಿ ದೀಡ ನಮಸ್ಕಾರ ಹಾಕುವುದು, ಮಸಬಹಂಚಿನಾಳದ ಹನುಮಪ್ಪನಿಗೆ ಕಾರ್ತೀಕ ಹಚ್ಚುವುದು, ಪಕ್ಷದ ಚಿಹ್ನೆಯನ್ನು ತಲೆಯಲ್ಲಿ ಅರಳಿಸುವುದು, ಕುಡಿದು ತೂರಾಡುತ್ತಾ ಬೀದಿ, ಬೀದಿಯಲ್ಲಿ ಬೀಳುವುದು... ಇಂಥ ಚುನಾವಣಾ ದೊಂಬರಾಟಗಳಿಗೆ ಇಲ್ಲಿ ಮಿತಿಯೇ ಇಲ್ಲ.

ಮಹಿಳಾ ಸ್ವಸಹಾಯ ಸಂಘಗಳು, ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ಯೋಜನೆ ನೌಕರರನ್ನೂ ರಾಜಕಾರಣಿಗಳು ತಮ್ಮ ಪರ ಪ್ರಚಾರ ನಡೆಸಲು ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತವೆ. ಪ್ರಚಾರಕ್ಕೆ ಹಿಂಜರಿದರೆ ನಾನಾ ರೀತಿಯ ತೊಂದರೆಗಳು ಗ್ಯಾರಂಟಿ ಎಂಬ ಮಾತುಗಳು ಕೇಳಿಬರುತ್ತವೆ. ಹಿರೇಸಿಂದೋಗಿಯಿಂದ ನಿತ್ಯ ಕೊಪ್ಪಳದ ಪೇಟೆಯಲ್ಲಿ ಕಾಯಿಪಲ್ಲೆ ಮಾರಲು ಬರುವ ಸಾವಕ್ಕನ ರಸವಗಳ ತುಂಬಿದ ಬಾಯಲ್ಲೂ ಈಗ ಚುನಾವಣೆ ಮಾತುಗಳೇ ಕೇಳಿ ಬರುತ್ತಿವೆ.

`ಸ್ವಾರ್ಥಕ್ಕಾಗಿ ಇಂಥ ಕೆಲಸಕ್ಕೆ ಮುಂದಾಗುವ ರಾಜಕಾರಣಿಗಳು ಜನಪರವಾದ ಯೋಜನೆಗಳನ್ನು ಜಿಲ್ಲೆಗೆ ತರುವ ಇಚ್ಛಾಶಕ್ತಿ ಹೊಂದಿಲ್ಲ. ಹಾಗಾಗಿಯೇ ನಮ್ಮ ಜಿಲ್ಲೆಯಲ್ಲಿ ಬಡತನ ಕಾಡುತ್ತಿದೆ. ಕಿತ್ತು ತಿನ್ನುತ್ತಿರುವ ಬಡತನ ವಿದ್ಯಾರ್ಥಿಗಳನ್ನು ಗುಳೆ ಹೋಗುವಂತೆ ಮಾಡಿದೆ. ಅವರು ದುಡಿದು ಹಣ ಕಳುಹಿಸದಿದ್ದರೆ ಅವರ ತಂದೆ-ತಾಯಿ, ತಮ್ಮ-ತಂಗಿಯರು ಉಪವಾಸ ಬೀಳಬೇಕು' ಎಂದು ಬೇಸರ ವ್ಯಕ್ತಪಡಿಸುತ್ತಾರೆ ಕುಷ್ಟಗಿ ಪದವಿ ಕಾಲೇಜಿನ ಉಪನ್ಯಾಸಕ ಡಾ. ಶರಣಬಸವೇಶ್ವರ ಡಾಣಿ.

`ಈ ಜಿಲ್ಲೆಯಲ್ಲಿ ಜನರ ಮೊದಲ ಆದ್ಯತೆ ಜಾತಿ. ನಂತರ ಹಣ, ಆಮೇಲೆ ಪಕ್ಷ, ಕೊನೆಗೆ ವ್ಯಕ್ತಿ. ಜಾತಿ ಎಷ್ಟು ಪ್ರಬಲವಾಗಿದೆ ಎಂದರೆ ಸರ್ಕಾರಿ ನೌಕರರೂ ಜಾತಿಗೊಂದು, ಉಪ ಜಾತಿಗೊಂದು ಸಂಘ ಮಾಡಿಕೊಂಡಿದ್ದಾರೆ. ಈ ಜಾತಿ- ಉಪಜಾತಿಯನ್ನು ಆಧರಿಸಿಯೇ ಅಭ್ಯರ್ಥಿಗಳ ಪರ ಮತ ಯಾಚನೆಯೂ ನಡೆಯುತ್ತಿದೆ. ಸರ್ಕಾರಿ ನೌಕರರ ಮೊಬೈಲ್ ಫೋನ್‌ಗಳಿಂದ ಹೊರ ಹೋಗಿರುವ ಕರೆಗಳನ್ನು ಚೆಕ್ ಮಾಡಿದರೆ ಅವರು ಯಾರ ಪರ ಪ್ರಚಾರ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತದೆ' ಎನ್ನುತ್ತಾರೆ ಡಾ. ಡಾಣಿ.

`ನಮ್ಮೂರಿನ ರಾಜಕಾರಣಿಗಳಲ್ಲಿ ಪ್ರಾಮಾಣಿಕ ಕಳಕಳಿ ಇಲ್ಲ. ಹಿರೇಹಳ್ಳ ಯೋಜನೆ ಪೂರ್ಣವಾಗಲಿಲ್ಲ. ಸಾಕಷ್ಟು ಕಾರ್ಖಾನೆಗಳು ಬಂದರೂ ಅದರಿಂದ ಸ್ಥಳೀಯರಿಗೇನೂ ಪ್ರಯೋಜನವಾಗಲಿಲ್ಲ. ಅಭಿವೃದ್ಧಿ, ಅಭಿವೃದ್ಧಿ ಎನ್ನುತ್ತಾರೆ. ಬರೀ ಜಿಲ್ಲಾಧಿಕಾರಿ ಕಚೇರಿ ಕಟ್ಟಡ, ಆಸ್ಪತ್ರೆ ಕಟ್ಟಡ ನಿರ್ಮಾಣವನ್ನೇ ಅಭಿವೃದ್ಧಿ ಎನ್ನಬೇಕೆ' ಎಂದು ಕಿಡಿ ಕಾರುತ್ತಾರೆ ಹಿರಿಯರಾದ ವಿಠ್ಠಪ್ಪ ಗೋರಂಟ್ಲಿ.

ಕೃಷ್ಣಾ `ಬಿ' ಸ್ಕೀಂ ಜಾರಿಯಿಂದ ಜಿಲ್ಲೆಗೆ ಹೆಚ್ಚಿನ ಅನುಕೂಲವೇನೋ ಆಗಲಿದೆ. ಆದರೆ ಜಾರಿಯಾಗಬೇಕಲ್ಲ. ಕಾಂಗ್ರೆಸ್‌ನವರು ಹೊಸಪೇಟೆಯಿಂದ ಕೂಡಲಸಂಗಮದವರೆಗೆ ಪಾದಯಾತ್ರೆ ನಡೆಸಿದ ನಂತರ ಎಚ್ಚೆತ್ತುಕೊಂಡ ಬಿಜೆಪಿಯವರು ತರಾತುರಿಯಲ್ಲಿ ಯೋಜನೆಗೆ ಅಡಿಗಲ್ಲು ಹಾಕಿದರು. `ಈಗ ನಾನು ಮಾಡಿದ್ದೇನೆ, ನನ್ನಿಂದಲೇ ಆಗಿದ್ದು' ಎಂದು ಎರಡೂ ಪಕ್ಷದವರು ಅದರಲ್ಲಿ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ.

ಹಿರೇಹಳ್ಳದ ಪ್ರವಾಹ ಮೂರು ವರ್ಷಗಳ ಹಿಂದೆ ಜನರ ಬದುಕನ್ನೇ ಕೊಚ್ಚಿಕೊಂಡು ಒಯ್ದಿತ್ತು. ಅದನ್ನೂ ನಾಚಿಸುವ ರೀತಿಯಲ್ಲಿ ಹರಿಯುತ್ತಿರುವ ಹಣದ ಹೊಳೆಯಲ್ಲಿ ಪ್ರವಾಹದ ಸಮಸ್ಯೆಗಳು ಸಂಪೂರ್ಣ ಗೌಣವಾಗಿಬಿಟ್ಟಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.