ಹುಬ್ಬಳ್ಳಿ: ‘ಮಾನವತೆಯ ಪರವಾಗಿ ಧ್ವನಿ ಎತ್ತಿದ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರವನ್ನು ಎಲ್ಲಾ ಶೋಷಿತರೂ ತಮ್ಮ ಮನೆಗಳಲ್ಲಿ ಕಡ್ಡಾಯವಾಗಿ ಹಾಕಿ ಅವರ ವಿಚಾರಧಾರೆ ಕುರಿತು ಮುಂದಿನ ಪೀಳಿಗೆಯಲ್ಲಿ ಅರಿವು ಮೂಡಿಸಬೇಕಿದೆ’ ಎಂದು ಅಬಕಾರಿ ಸಚಿವ ಸತೀಶ ಜಾರಕಿಹೊಳಿ ಸಲಹೆ ನೀಡಿದರು.

ಇಲ್ಲಿನ ದೇಶಪಾಂಡೆ ಫೌಂಡೇಶನ್ ಸಭಾಂಗಣದಲ್ಲಿ ಮಾನವ ಬಂಧುತ್ವ ವೇದಿಕೆಯ ಎರಡು ದಿನಗಳ ರಾಜ್ಯ ಮಟ್ಟದ ದಿಕ್ಸೂಚಿ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.

‘ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ರೀತಿಯಲ್ಲಿಯೇ ಶೋಷಿತರು ವ್ಯವಸ್ಥಿತವಾಗಿ ಸಂಘಟಿತರಾಗಬೇಕಿದೆ. ಅವರಿಗೆ ಪರ್ಯಾಯವಾಗಿ ಕೆಲಸ ಮಾಡಲು ಅವರಂತೆಯೇ ಪುಸ್ತಕ, ಸಿಡಿ, ವೆಬ್‌ಸೈಟ್‌ಗಳ ಮೂಲಕ ಜಾಗೃತಿ ಮೂಡಿಸಬೇಕಿದೆ. ಅವರ ಬಳಿ ಇರುವುದು ತಿರುಚಿದ ಇತಿಹಾಸ ಹಾಗೂ ಸಾಹಿತ್ಯ. ಆದರೆ ಈ ನೆಲದ ಮೂಲ ನಿವಾಸಿಗಳಾದ ನಮ್ಮ ಬಳಿ ಇರುವುದು ನೈಜ ಇತಿಹಾಸ. ಶೋಷಿತ ಸಮುದಾಯಗಳಲ್ಲಿ ಹುಟ್ಟಿದ್ದೇವೆ. ಋಣ ತೀರಿಸುವ ಕೆಲಸ ಮಾಡೋಣ. ಬಡತನದಲ್ಲಿ ಹುಟ್ಟಿರುವುದು ಅನಿವಾರ್ಯ ಆದರೆ ಹಾಗೆಯೇ ಸಾಯುವುದು ಸರಿಯಲ್ಲ’ ಎಂದರು.

‘ಶೋಷಿತರ ಹೋರಾಟ ಬ್ರಾಹ್ಮಣರು ಅಥವಾ ಮುಂದುವರಿದ ಜಾತಿಯವರ ವಿರುದ್ಧ ಅಲ್ಲ. ಬದಲಿಗೆ ನಮ್ಮನ್ನೇ ಸರಿಪಡಿಸಿಕೊಳ್ಳುವುದು ಆಗಿದೆ. ಮೂಢನಂಬಿಕೆ ಶೋಷಿತರ ಪ್ರಗತಿಗೆ ದೊಡ್ಡ ಶತ್ರುವಾಗಿದೆ. ತಿರುಪತಿಗೆ ಹೋಗಿ ತಿಮ್ಮಪ್ಪನ ಹುಂಡಿಗೆ ಹಣ ಹಾಕುವ ಬದಲು ಸಮುದಾಯದ ಅಭಿವೃದ್ಧಿಗೆ ಬಳಸಿಕೊಳ್ಳೋಣ’ ಎಂದು ಕರೆ ನೀಡಿದರು.

‘ಮುಂದುವರೆದ ಜಾತಿಗಳು 3000 ವರ್ಷಗಳ ಹಿಂದೆ ಆರ್ಯರ ಕಾಲದಿಂದಲೂ ಸಾಮಾಜಿಕವಾಗಿ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಂಘಟಿತವಾಗಿ ಅದರ ಲಾಭ ಪಡೆಯುತ್ತಾ ಬಂದಿವೆ. ಶೋಷಿತರು ಇಂದು ಎಲ್‌ಕೆಜಿಯಿಂದ ಕಲಿತು ಸಂಘಟಿತರಾಗಬೇಕಿದೆ. ನಾಳೆಯೇ ಬದಲಾವಣೆ ಸಾಧ್ಯವಿಲ್ಲ. ಕನಿಷ್ಠ 15 ವರ್ಷವಾದರೂ ಕಾಯಬೇಕಿದೆ. ಹಲವು ಹಂತಗಳನ್ನು ದಾಟಿ ನಾವು ಮುಂದೆ ಹೋಗಬೇಕಿದೆ’ ಎಂದು ಕಿವಿಮಾತು ಹೇಳಿದರು.

‘ಶೋಷಿತರಿಗೆ ಬದಕಲು ಕಲಿಸುವುದು ಮಾನವ ಬಂಧುತ್ವ ವೇದಿಕೆಯ ಆಶಯವಾಗಿದೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ರೈತರು ಎಲ್ಲರೂ ಒಗ್ಗಟ್ಟಿನಿಂದ ಒಂದೇ ವೇದಿಕೆಯಡಿ ಹೋರಾಟ ಮಾಡಬೇಕಿದೆ. ಕೇಸರೀಕರಣದ ನಡುವೆ ಗೊತ್ತು–ಗುರಿ ಇಲ್ಲದೇ ಶೋಷಿತರು ನಡೆಯುತ್ತಿದ್ದು, ನಮ್ಮೊಳಗಿನ ಶಕ್ತಿ ಗುರುತಿಸಲು ಸಾಧ್ಯವಾಗುತ್ತಿಲ್ಲ. ಕತ್ತಲಿನಿಂದ ಬೆಳಕಿನತ್ತ ಕೊಂಡೊಯ್ಯುವ ಈ ರೈಲಿನಲ್ಲಿ ಆಸಕ್ತಿ ಇದ್ದವರು ಉಚಿತವಾಗಿ ಪ್ರಯಾಣಿಸಬಹುದು. ಬೇಡವಾದರೆ ಇಳಿಯಬಹುದು. ಇಲ್ಲಿ ಕಲಿತದ್ದನ್ನು ಕನಿಷ್ಠ 10 ಮಂದಿಗೆ ಕಲಿಸುವ ಪ್ರಯತ್ನ ಆಗಬೇಕಿದೆ’ ಎಂದು ಮಾರ್ಮಿಕವಾಗಿ ಹೇಳಿದರು.

‘ಹಾಲಿ ರಾಜ್ಯ ಸರ್ಕಾರವೂ ಪುರೋಹಿತಶಾಹಿ ವ್ಯವಸ್ಥೆಯಡಿ ನಡೆಯುತ್ತಿದೆ. ಆ ವ್ಯವಸ್ಥೆಯನ್ನು ಬದಲಾಯಿಸದೇ ರಾಜ್ಯದಲ್ಲಿ ಬದಲಾವಣೆ ಸಾಧ್ಯವಿಲ್ಲ. ಮೂಢನಂಬಿಕೆ ವಿರುದ್ಧ ಅಭಿಯಾನ ಆರಂಭಿಸಿದ್ದೇವೆ. ಶೋಷಿತರು ಇಂದು ಅಮಾವಾಸ್ಯೆ–ಜಾತ್ರೆಯ ಹೆಸರಿನಲ್ಲಿ ವರ್ಷದಲ್ಲಿ 119 ದಿನಗಳನ್ನು ಮೀಸಲಿಡುತ್ತಿದ್ದೇವೆ. ಹಳ್ಳಿಗಳಲ್ಲಿ ಇದರಿಂದ ಪ್ರಗತಿಗೆ ಅಡ್ಡಿಯಾಗುತ್ತಿದೆ. ಹಣದ ಉಳಿತಾಯಕ್ಕೆ ಮಹತ್ವ ನೀಡದ ಪರಿಣಾಮ ಸರ್ಕಾರಿ ಶಾಲೆಗಳಲ್ಲಿಯೇ ಮಕ್ಕಳನ್ನು ಓದಿಸುತ್ತಿದ್ದೇವೆ. ನಮ್ಮಲ್ಲೂ ಸಂಪನ್ಮೂಲ ಇದ್ದರೆ ಕಾನ್ವೆಂಟ್ ಸೇರಿದಂತೆ ಅತ್ಯಾಧುನಿಕ ಶಾಲೆಗಳಲ್ಲಿ ಇನ್ನೂ ಉತ್ತಮ ಶಿಕ್ಷಣ ಪಡೆಯಬಹುದಾಗಿದೆ. ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಜಾಗೃತಿ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ಅಯ್ಯಪ್ಪ ಅಥವಾ ಅಂಬೇಡ್ಕರ್ ಇಬ್ಬರಲ್ಲಿ ಒಬ್ಬರನ್ನು ನಂಬುವಂತೆ ಶೋಷಿತರಿಗೆ ಕರೆ ನೀಡಿದ ಅವರು, ಅಚ್ಛೇ ದಿನದ ಹೆಸರಿನಲ್ಲಿ ಸುಣ್ಣ ಹಚ್ಚುವ ಕೆಲಸ ನಡೆಯುತ್ತಿದೆ. ಇಂತಹ ಕಾರ್ಯಕ್ರಮಗಳೂ ಎಲ್ಲಿಯೇ ನಡೆದರೂ ಕರೆಯದಿದ್ದರೂ ಬನ್ನಿ. ಪ್ರತಿ ವರ್ಷ ಶೋಷಿತರ ಸಮಾವೇಶ ನಡೆಸಿದರೆ ಅದಕ್ಕೆ ₨ 50 ಲಕ್ಷ ದೇಣಿಗೆ ನೀಡುವುದಾಗಿ’ ಹೇಳಿದರು.

ಶಾಸಕ ಪ್ರಸಾದ ಅಬ್ಬಯ್ಯ, ‘ಗಂಗಾನದಿ ಶುದ್ಧೀಕರಣಕ್ಕೆ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಆತ್ಮಶುದ್ಧಿ ಮಾಡಿಕೊಂಡು ಕೋಮುವಾದ ತ್ಯಜಿಸಿ ಜಾತ್ಯತೀತತೆ ಮನೋಭಾವ ರೂಢಿಸಿಕೊಂಡರೆ ದೇಶ ತಾನಾಗಿಯೇ ಸುಧಾರಣೆಯಾಗುತ್ತದೆ. ಮಾನವ ಬಂಧುತ್ವ ವೇದಿಕೆ ಯಾರ ವಿರುದ್ಧವೋ ರೂಪುಗೊಂಡ ಸಂಘಟನೆ ಅಲ್ಲ. ಬದಲಿಗೆ ನಮ್ಮ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ. ಶೋಷಿತರಲ್ಲಿ ಜಾಗೃತಿ, ಒಗ್ಗಟ್ಟು, ಮುನ್ನುಗ್ಗುವ ಆತ್ಮಸ್ಥೈರ್ಯ ಇಲ್ಲ. ಅದನ್ನು ಬೆಳೆಸಬೇಕಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.