ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಕಾರು’ಬಾರಿನ ಗತವೈಭವ

ಫಾಲೋ ಮಾಡಿ
Comments

ಬೆಂಗಳೂರು ನಗರದ ರಸ್ತೆಗಳಲ್ಲಿ ಪ್ರಥಮ ಬಾರಿಗೆ ಕಾರು ಓಡಿದ್ದು, 1903ರಲ್ಲಿ. 1910ರ ವೇಳೆಗೆ ದಂಡು ಪ್ರದೇಶದಲ್ಲಿದ್ದ ಕೆಲವು ಶ್ರೀಮಂತ ವ್ಯಕ್ತಿಗಳು ಕಾರುಗಳನ್ನು ಹೊಂದಿದ್ದರು. 1900ರಲ್ಲಿ ಎಚ್‌.ಇ.ಆರ್ಮರ್ಡ್‌ ಎಂಬ ಆಟೊಮೊಬೈಲ್‌ ಎಂಜಿನಿಯರ್‌ ವಿದೇಶಿ ಕಾರುಗಳಾದ ಕ್ಯಾಲಿತ್ರೋಪ್‌ ಮತ್ತು ಎಂಪೈರ್‌ ಕಾರುಗಳನ್ನು ಹೊಂದಿದ್ದರು.

1909–10ರಲ್ಲಿ ಎಂ.ಜಿ.ರಸ್ತೆಯಲ್ಲಿ ಕಣ್ಣನ್‌ ಬಿಲ್ಡಿಂಗ್‌ ನಿರ್ಮಾಣವಾಯಿತು. ಅಲ್ಲಿ ನಾಲ್ಕೈದು ಅಂಗಡಿಗಳಿದ್ದವು. 1911ರಲ್ಲಿ ಎಂಜಿನಿಯರ್‌ ಆರ್ಮರ್ಡ್‌ ಅವರು ಈ ಕಟ್ಟಡದ ಒಂದು ಭಾಗದಲ್ಲಿ ಕಾರು ರಿಪೇರಿ ಅಂಗಡಿ, ಮತ್ತೊಂದು ಕಡೆ ಟೈರು ಹಾಗೂ ಬಿಡಿ ಭಾಗಗಳ ಶೇಖರಣೆ, ಇನ್ನೊಂದೆಡೆ ಪೆಟ್ರೋಲ್‌ ದಾಸ್ತಾನು ಹಾಗೂ ಮಗದೊಂದು ಭಾಗದಲ್ಲಿ ಕಾರಿನ ಷೋರೂಂ ಮತ್ತು  ಕಚೇರಿ ಮಾಡಿಕೊಂಡರು. ಅವರ ಬಳಿ ಮೋಟಾರ್‌ ರಿಪೇರಿ ಮಾಡುವ ಮೆಕ್ಯಾನಿಕ್‌ಗಳು ಕೆಲಸಕ್ಕಿದ್ದರು.

ಆರ್ಮರ್ಡ್‌ ನಗರಕ್ಕೆ ಬರುವ ಪ್ರವಾಸಿಗಳಿಗೆ ಪ್ರೇಕ್ಷಣೀಯ ಸ್ಥಳ, ಹೋಟೆಲ್‌, ವಸತಿ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದರು. 1914ರಲ್ಲಿ ಆರ್ಮರ್ಡ್‌ ತನ್ನ ಬಳಿ ಇದ್ದಂತಹ ಕ್ಯಾಲಿತ್ರೋಪ್‌ ಕಾರಿನಲ್ಲಿ ಬೆಂಗಳೂರು–ಮುಂಬೈಗೆ ಪ್ರವಾಸ ಕೈಗೊಂಡಿದ್ದರು. ಈಗಿನಂತೆ ಆಗ ರಸ್ತೆಗಳು ಕಾರಿನ ಪ್ರಯಾಣಕ್ಕೆ ಯೋಗ್ಯವಾಗಿರಲಿಲ್ಲ. ಕೆಟ್ಟ ರಸ್ತೆಗಳು ಅವು. ಅಲ್ಲದೇ ಸೇತುವೆಗಳು ಇರಲಿಲ್ಲ.

ಹಳ್ಳ–ಗುಂಡಿ, ನೀರು ತುಂಬಿದ್ದ ರಸ್ತೆಯನ್ನೇ ಬಳಸಿಕೊಂಡು ಆತ ಪ್ರಥಮವಾಗಿ ಈ ದೀರ್ಘಪ್ರವಾಸವನ್ನು ಒಂದು ವಾರದಲ್ಲಿ ಮುಗಿಸಿದ್ದರು. ಪ್ರಯಾಣದ ಸಂದರ್ಭದಲ್ಲಿ ಕಾರಿನ ಟೈರ್‌ ಒಂದು ಬಾರಿ ಮಾತ್ರ ಪಂಕ್ಚರ್‌ ಆಗಿದ್ದು ಬಿಟ್ಟರೆ, ಅದು ಎಲ್ಲೂ ರಿಪೇರಿಗೆ ಬರಲಿಲ್ಲವಂತೆ. ಇದು ಒಂದು ದಾಖಲೆ.

ಹಾಗೆಯೇ ಆರ್ಮರ್ಡ್‌ ಕ್ಯಾಲಿತ್ರೋಪ್‌ ಹಾಗೂ ಎಂಪೈರ್‌ ಕಾರುಗಳಿಗೆ ಇಡೀ ದಕ್ಷಿಣ ಭಾರತಕ್ಕೆ ಏಕೈಕ ಏಜೆಂಟ್‌ ಆಗಿದ್ದರು. ಇವರು ಮೈಸೂರಿನ ಅರಸರಿಗೂ ಬಳಸಲು ಕಾರುಗಳನ್ನು ಒದಗಿಸುತ್ತಿದ್ದರು. ದೆಹಲಿಯ ವೈಸ್‌ರಾಯ್‌ ಬೆಂಗಳೂರಿಗೆ ಬಂದಿದ್ದಾಗ ಆರ್ಮರ್ಡ್‌ ವಾಹನ ನೀಡಿ ಅವರಿಗೆ ಮಾರ್ಗದರ್ಶಿಯೂ ಆದ. ಇದರಿಂದಾಗಿ ಸಮಾಜದಲ್ಲಿ ಆತನ ಖ್ಯಾತಿ ಇಮ್ಮಡಿಗೊಂಡಿತು. ಮುಂದೆ ಆತ ನಗರದ ಗೌರವಾನ್ವಿತ ವ್ಯಕ್ತಿಯಾಗಿ ಗುರುತಾದರು.

ಅಂದಹಾಗೆ, ಆರ್ಮರ್ಡ್‌ ಬೆಂಗಳೂರಿನಲ್ಲಿ ಕಾರು ಉದ್ಯಮ ಪ್ರಾರಂಭಿಸಿದ ಪ್ರಥಮ ವ್ಯಕ್ತಿಯೂ ಹೌದು. ಇಂದಿಗೂ ಎಂಜಿ ರಸ್ತೆಯಲ್ಲಿ ಕಣ್ಣನ್‌ ಕಟ್ಟಡ ಇದೆ. ಈಗಲೂ ಇಲ್ಲಿ ವಿವಿಧ ಬಗೆಯ ಅಂಗಡಿ ಮುಂಗಟ್ಟುಗಳಿವೆ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT