ಸೋಮವಾರ, 30 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ನಾನು ಕಲಾವಿದನಾಗಲು ಬಯಸುವ ಪೇಂಟರ್!’

Published : 9 ಫೆಬ್ರುವರಿ 2015, 19:30 IST
ಫಾಲೋ ಮಾಡಿ
Comments

ಇತ್ತೀಚೆಗೆ ನಗರದಲ್ಲಿ ರೋಟರಿ ಕ್ಲಬ್ ಮತ್ತು ತಾಜ್ ವೆಸ್ಟೆಂಡ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ವಿದ್ಯೆಗಾಗಿ ಕಲೆ’ ಹೆಸರಿನ ಮೂರು ದಿನಗಳ ಕಲಾಕೃತಿ ಪ್ರದರ್ಶನ ಮತ್ತು ಮಾರಾಟವನ್ನು ಉದ್ಘಾಟಿಸಲು ದೇಶದ ಮೇರು ಕಲಾವಿದರಲ್ಲಿ ಒಬ್ಬರಾದ ಜತಿನ್ ದಾಸ್ ಬಂದಿದ್ದರು.

ಸಪೂರ ದೇಹ, ಬೆಳ್ಳಗಿನ ದಟ್ಟ ಗಡ್ಡ ಮೀಸೆ, ತಲೆಯ ಮೇಲೊಂದು ಟೋಪಿ, ಸ್ವಭಾವದಲ್ಲಿನ ಚಂಚಲತೆಯ ಬಿಂಬದಂತಹ ಹೊಳಪು ಕಣ್ಣುಗಳು, ಎಡಭುಜಕ್ಕೆ ಜೋತುಬಿದ್ದ ಹೆಗಲು ಚೀಲ– ಹೀಗೆ, ಆ ಇಳಿಸಂಜೆಯ ಮಂದಬೆಳಕಿನಲ್ಲಿ ಜತಿನ್ ತಾವೇ ಬಿಡಿಸಿದ ಇನ್ನೊಂದು ವಿಕ್ಷಿಪ್ತ ಕಲಾಕೃತಿಯಂತೆ ಕಾಣುತ್ತಿದ್ದರು.

ಹೊರನೋಟಕ್ಕೆ ಕಾಣುತ್ತಿದ್ದ ವಿಕ್ಷಿಪ್ತತೆ ಅವರ ವರ್ತನೆಯ ಲಕ್ಷಣವೂ ಹೌದು ಎಂಬುದು ತಿಳಿದದ್ದು ಅವರನ್ನು ಮಾತಿಗೆಳೆಯುವ ಯತ್ನಕ್ಕೆ ತೊಡಗಿದಾಗಲೇ. ಸರ್ವರ್ ಕೈಯಲ್ಲಿನ ಟ್ರೇಯಿಂದ ರೆಡ್ ವೈನ್ ಗ್ಲಾಸ್ ಕೈಗೆತ್ತಿಕೊಂಡು ಒಮ್ಮೆ ಮೂಸಿ ನೋಡಿ ಸಿಪ್ ಗುಟುಕರಿಸಿದ ನಿತಿನ್ ಎರಡು ಕ್ಷಣವೂ ನಿಂತ ಕಡೆ ನಿಲ್ಲಲಿಲ್ಲ. ನೆಲಕ್ಕೆ ಚದುರಿ ಬಿದ್ದ ಪಾದರಸದಂತೆ ಪುಟಿಯುವ ಉತ್ಸಾಹದಲ್ಲಿ ಓಡಾಡುತ್ತಿದ್ದರು. ಎದುರಿಗೆ ಬಂದವರನ್ನೆಲ್ಲ ಆತ್ಮೀಯವಾಗಿ ನಕ್ಕು ಮಾತನಾಡಿಸುತ್ತಾ ಅವರು ಉತ್ತರಿಸುವ ಮೊದಲೇ ಮುಂದೆ ದಾಟಿಬಿಡುತ್ತಿದ್ದರು.

ಸಂದರ್ಶನಕ್ಕಾಗಿ ವಿನಂತಿಸಿಕೊಂಡಾಗ ಅಲ್ಲಲ್ಲಿ ಓಡಾಡುತ್ತಿದ್ದ ಹಲವು ಯುವ ಕಲಾವಿದರನ್ನು ಪಕ್ಕಕ್ಕೆ ಕರೆದುಕೊಂಡರು. ರಿಂಗಾದ ಮೊಬೈಲೆತ್ತಿಕೊಂಡು ‘ಗುಡ್ ಮಾರ್ನಿಂಗ್’ ಎಂದರು (ಆಗ ರಾತ್ರಿ ಎಂಟು ಗಂಟೆ!). ಯಾರೋ ಕುರ್ಚಿ ತಂದುಕೊಟ್ಟಾಗ ‘ಒಬ್ಬನೇ ಕುಳಿತುಕೊಳ್ಳುವಷ್ಟು ಸ್ವಾರ್ಥಿಯಲ್ಲ ನಾನು. ಇನ್ನೂ ಐದಾರು ಕುರ್ಚಿ ತನ್ನಿ. ಎಲ್ಲರೂ ಕೂತು ಮಾತನಾಡೋಣ’ ಎಂದು ನಿಂತೇ ಉಳಿದರು. ತಾನು ಆಡಿದ ಪ್ರತಿ ವಾಕ್ಯಕ್ಕೂ ಕನ್ನಡದಲ್ಲಿ ಏನು ಹೇಳುತ್ತಾರೆ ಎಂದು ಕೇಳಿ ತಿಳಿದುಕೊಳ್ಳುತ್ತಲೇ ಮಾತಿಗೆ ತೊಡಗಿದರು. ನಡತೆಯಲ್ಲಿನ ವಿಕ್ಷಿಪ್ತ ಗುಣವೇ ಮಾತಿನಲ್ಲಿ ಇಣುಕಿದರೂ ಅದನ್ನೂ ಮೀರುವ ಪ್ರಾಮಾಣಿಕತೆ ಎದ್ದು ತೋರುತ್ತಿತ್ತು. ನಮ್ಮ ನಡುವಿನ ಮಾತುಕತೆ ನಡೆದಿದ್ದು ಹೀಗೆ:

*ಕಲೆಯನ್ನು ನೋಡುವ ಬಗೆ ಹೇಗೆ?
ತುಂಬ ಕಡಿಮೆ ಜನ ಕಲೆಯನ್ನು ನೋಡುತ್ತಾರೆ. ಬರೀ ನೋಡುವುದಷ್ಟೇ ಅಲ್ಲ, ಅರ್ಥೈಸಿಕೊಳ್ಳಲು ಬಯಸುತ್ತಾರೆ. ಕಲೆ

ಕಳೆದ 55 ವರ್ಷಗಳನ್ನು ಕಲೆಯ ಧ್ಯಾನದಲ್ಲಿಯೇ ವ್ಯಯಿಸಿರುವ ಜತಿನ್‌ ದಾಸ್‌ ಅವರಿಗೀಗ 73 ವರ್ಷ. ಒರಿಸ್ಸಾ ಮೂಲದ ಜತಿನ್‌ ದಾಸ್‌ ಕಲಾತರಬೇತಿ ಪಡೆದಿದ್ದು ಮುಂಬೈನ ಸರ್‌. ಜೆಜೆ ಸ್ಕೂಲ್‌ ಆಫ್‌ ಆರ್ಟ್‌ನಲ್ಲಿ.
ದೇಶದಾದ್ಯಂತ ವಿವಿಧ ನಗರಗಳಲ್ಲಿಯಷ್ಟೇ ಅಲ್ಲದೇ ಅಮೆರಿಕ, ಲಂಡನ್‌, ಪ್ಯಾರಿಸ್‌ ಸೇರಿದಂತೆ ಜಗತ್ತಿನ ಹಲವು ಪ್ರಮುಖ ಕಲಾಪ್ರದರ್ಶನಗಳಲ್ಲಿ ಇವರ ಕಲಾಕೃತಿಗಳು ಪ್ರದರ್ಶನ ಕಂಡಿವೆ. ಕೇಂದ್ರ ಸರ್ಕಾರದಿಂದ ಪದ್ಮಭೂಷಣ ಗೌರವಕ್ಕೆ ಪಾತ್ರರಾಗಿರುವ ಜತಿನ್‌ ಒರಿಸ್ಸಾದ ‘ಜೆಡಿ ಸೆಂಟರ್‌ ಆಫ್‌ ಆರ್ಟ್’ ಸಂಸ್ಥೆಯ ಸಂಸ್ಥಾಪಕರು.
ಬಾಲಿವುಡ್‌ ನಟಿ ನಂದಿತಾ ದಾಸ್‌ ಮತ್ತು ವಿನ್ಯಾಸಕ ಸಿದ್ಧಾರ್ಥ್‌ ದಾಸ್‌ ಅವರು ಜತಿನ್‌ ದಾಸ್‌ ಮಕ್ಕಳು.

ಅರ್ಥೈಸಿಕೊಳ್ಳುವುದಲ್ಲ. ಅದು ಅನುಭವಿಸುವುದು. 

ನೀವೀಗ ನನ್ನನ್ನು ಭೇಟಿಯಾದಿರಿ. ನಿಮಗೆ ನಾನು ಅರ್ಥವಾದೆನೇ? ಇಲ್ಲ. ಆದರೆ ನಿಮಗೆ ನನ್ನ ಬಗ್ಗೆ ಒಂದು ಭಾವನೆ ಹುಟ್ಟಿತು. ಅದು ಅನುಭವಕ್ಕೆ ಸಂಬಂಧಿಸಿದ ಭಾವನೆ. ಅರ್ಥ ಮಾಡಿಕೊಳ್ಳುವುದು ಪಾಶ್ಚಾತ್ಯ ಪರಿಕಲ್ಪನೆ. ನಮಗೆ ಭಾವನೆ,- ಅನುಭವ ಮುಖ್ಯ.

*ಮನುಷ್ಯ ದೇಹ, ಗಂಡು ಹೆಣ್ಣಿನ ಸಂಬಂಧಗಳು ನಿಮ್ಮ ಕೃತಿಗಳನ್ನು ಪ್ರಭಾವಿಸಿವೆ...
ಗಂಡು, ಹೆಣ್ಣು, ದೇಹ, ಸಂಬಂಧ ಅವೆಲ್ಲ ಬಿಟ್ಟುಬಿಡಿ. ನಾನು ಮನುಷ್ಯ ಆಕೃತಿಗಳನ್ನು ಚಿತ್ರಿಸುತ್ತೇನೆ. ಮರ, ಗಿಡ, ಪ್ರಾಣಿಗಳನ್ನೂ ಬಿಡಿಸುತ್ತೇನೆ. ಆದರೆ ಮನುಷ್ಯ ದೇಹಗಳ ಬಗ್ಗೆ ಹೆಚ್ಚು ಆಸಕ್ತಿ ನನಗೆ. ಹಾಗೆಂದು ನೀವ್ಯಾಕೆ ಮಾನವ ಆಕೃತಿಗಳನ್ನು ಬಿಡಿಸುತ್ತೀರಿ ಎಂದು ಕೇಳಿದರೆ, ಉತ್ತರ ನನಗೂ ಗೊತ್ತಿಲ್ಲ.

*ನೀವು ಹಲವು ಮಾಧ್ಯಮಗಳಲ್ಲಿ ಕಲಾಕೃತಿಗಳನ್ನು ರಚಿಸುತ್ತೀರಿ. ನಿರ್ದಿಷ್ಟ ವಸ್ತುವಿಗೆ ಮಾಧ್ಯಮವನ್ನು ಹೇಗೆ ಆಯ್ದುಕೊಳ್ಳುತ್ತೀರಿ?
ಕೆಲವೊಮ್ಮೆ ನಾನು ಮಾಧ್ಯಮವನ್ನು ಆಯ್ದುಕೊಳ್ಳುತ್ತೇನೆ. ಇನ್ನು ಕೆಲವು ಸಲ ಮಾಧ್ಯಮವೇ ನನ್ನನ್ನು ಆಯ್ದುಕೊಳ್ಳುತ್ತದೆ.

*ಸೃಜನಶೀಲ ಕಲಾವಿದನಾಗಿ ಪ್ರಯೋಗಗಳನ್ನು ಮಾಡುವುದು ಅನಿವಾರ್ಯತೆ ಎಂದು ಅನಿಸಿದ್ದಿದೆಯೇ?
ಪ್ರಯೋಗಗಳ ಬಗ್ಗೆ ನನಗೇನೂ ಗೊತ್ತಿಲ್ಲ. ಎಲ್ಲರೂ ಹೊಸ ಪ್ರಯೋಗಗಳನ್ನು ಮಾಡಬೇಕು, ಮಾಡುತ್ತೇನೆ ಎಂದೆಲ್ಲ ಹೇಳಿಕೊಳ್ಳುತ್ತಿರುತ್ತಾರೆ. ಆದರೆ ನಾವು ಏನೇ ಮಾಡಿದರೂ ಅದೇ ಕಿಟಕಿ, ಬಾಗಿಲು, ಮರ, ಗಿಡ ಅವುಗಳನ್ನೇ ಮಾಡುತ್ತಿರಬೇಕು. ಹೊಸದೇನೂ ಇಲ್ಲ.

*ನಾಲ್ಕು ದಶಕಗಳಿಗೂ ಮೀರಿದ ನಿಮ್ಮ ಕಲಾಜೀವನದ ಬಗ್ಗೆ ಏನನಿಸುತ್ತದೆ?
ನನಗೆ ಗೊತ್ತಿಲ್ಲ. ನಾನೆಂದೂ ಹಿಂತಿರುಗಿ ನೋಡಿಲ್ಲ. ನಾನು ಕಲಾವಿದನಾಗಲು ಬಯಸುವ ಪೇಂಟರ್. ಅಲ್ಲದೇ ಇದು ತುಂಬ ಚಿಕ್ಕ ಅವಧಿ. ಕಲಾವಿದ ಆಗಲು ಇನ್ನೂ ಮೂರ್ನಾಲ್ಕು ಜನ್ಮ ಬೇಕು.

*ಸಾಂಪ್ರದಾಯಿಕ ಮತ್ತು ಆಧುನಿಕ/ ಸಮಕಾಲೀನ ಕಲಾ ಪರಿಕಲ್ಪನೆಯ ಬಗ್ಗೆ ನಿಮ್ಮ ಅನಿಸಿಕೆ ಏನು?
ಅವುಗಳ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನಾನು ಕಲಾ ಇತಿಹಾಸ ಅಭ್ಯಾಸ ಮಾಡಿದ್ದೇನೆ. ನನ್ನ ಪ್ರಕಾರ ಕಲೆ ಮತ್ತ ಕಲೆಯಲ್ಲದ್ದು– ಎರಡೇ ಇರುವುದು. ಈ ಆಧುನಿಕ, ಸಮಕಾಲೀನ, ಸಾಂಪ್ರದಾಯಿಕ ಎನ್ನುವುದೆಲ್ಲ ಇಲ್ಲವೇ ಇಲ್ಲ. ಒಂದು ಒಳ್ಳೆಯ ತಿನಿಸು ತಿಂದಾಗ ‘ವ್ಹಾ!’ ಅನ್ನುತ್ತೀರಲ್ಲ. ಅಷ್ಟೇ ಇದು.

*ಕಲಾಕೃತಿ ಪ್ರದರ್ಶನಗಳ ಬಗ್ಗೆ ನಿಮಗೆ ಏನನನಿಸುತ್ತದೆ?
ತುಂಬ ಹಿಂದೆ ನಾನು ಕಲಾಕೃತಿಗಳ ಪ್ರದರ್ಶನ ಮಾಡುತ್ತಿದ್ದೆ. ಆದರೆ ಈಗೀಗ ಕಲಾಕೃತಿಗಳನ್ನು ಪ್ರದರ್ಶಿಸಬೇಕು ಅನಿಸುತ್ತಿಲ್ಲ. ನನ್ನ ಸ್ಟುಡಿಯೊದಲ್ಲಿ ಹತ್ತು ಹದಿನಾಲ್ಕು ಕಲಾಕೃತಿ ಸಂಗ್ರಹಗಳಿವೆ. ಅವುಗಳನ್ನು ನಾನು ಪ್ರದರ್ಶಿಸಿಲ್ಲ. ಯಾಕೆಂದರೆ ಇಂದು ಪ್ರದರ್ಶನ ಕಮರ್ಷಿಯಲ್ ಆಗಿಬಿಟ್ಟಿದೆ. ಜನರು ಕಲಾಕೃತಿಗಳನ್ನು ಆಸ್ವಾದಿಸುವುದಿಲ್ಲ. ಬದಲಿಗೆ ವ್ಯಾಪಾರಿ ದೃಷ್ಟಿಕೋನದಿಂದಲೇ ನೋಡುತ್ತಾರೆ.

*ಮನುಷ್ಯನಿಗೆ ಕಲೆ ಯಾಕೆ ಬೇಕು?
ಊಟ ಯಾಕೆ ಬೇಕು? ಬದುಕಲಿಕ್ಕಾಗಿ ಅಲ್ಲವೇ? ಈ ಮರ, ಆಕಾಶ, ಗಾಳಿ ಇವೆಲ್ಲವೂ ಯಾಕೆ ಬೇಕು? ಕಲೆಯೂ ಅದಕ್ಕೇ ಬೇಕು.

*ಹೊಸ ತಲೆಮಾರಿನ ಕಲಾವಿದರ ಬಗ್ಗೆ ಏನು ಹೇಳಲು ಬಯಸುತ್ತೀರಿ?
ಅವರೆಲ್ಲ ಕಂಪ್ಯೂಟರ್, ವೆಬ್‌ಸೈಟ್ ಮುಂದೆ ಕುಳಿತು ಸುಲಭವಾಗಿ ಕೆಲಸ ಮಾಡಲು ಆರಂಭಿಸಿದ್ದಾರೆ. ಆದರೆ ಅವರು ಕಲಾವಿದನಾಗಲು ಪರಿಶ್ರಮವಹಿಸಿ ಕೆಲಸ ಮಾಡಬೇಕು. ಒಂದು ಮಗು ಜನ್ಮ ತಾಳಲು ಒಂಬತ್ತು ತಿಂಗಳು ಬೇಕು. ಹಾಗೆಯೇ ಕಲಾವಿದ ಕೂಡ. ಅಡಿಗೆಯವ, ತೋಟಗಾರ, ಚಾಲಕ, ಎಂಜಿನಿಯರ್, ವಿಜ್ಞಾನಿ ಇವರೆಲ್ಲರಂತೆ ಕಲಾವಿದನೂ ಪರಿಣತನಾಗಬೇಕಾದರೆ ಸುದೀರ್ಘ ಸಮಯ ನಿರಂತರವಾಗಿ ಪರಿಶ್ರಮವಹಿಸಿ ಕೆಲಸ ಮಾಡಬೇಕು. ಅದಕ್ಕೆ ಬೇರೆ ಅಡ್ಡದಾರಿಗಳಿಲ್ಲ.

ನಮ್ಮ ಸಂಭಾಷಣೆ ಮುಗಿಯುವಷ್ಟರಲ್ಲಿ ಜತಿನ್ ದಾಸ್ ಗ್ಲಾಸಿನಲ್ಲಿದ್ದ ರೆಡ್ ವೈನ್ ಬಹುತೇಕ ಖಾಲಿಯಾಗಿತ್ತು. ಸರ್ವರ್ ಅದರ ಮರುಪೂರಣಕ್ಕೆ ಕಾಯುತ್ತ ನಿಂತಿದ್ದ. ಜತಿನ್ ‘ಥ್ಯಾಂಕ್ಯೂ’ ಎನ್ನಲು ಕನ್ನಡದಲ್ಲಿ ಏನು ಹೇಳುತ್ತಾರೆ ಎಂದು ಪಕ್ಕದಲ್ಲಿದ್ದವರನ್ನು ಕೇಳಿಕೊಂಡು ‘ಧನ್ಯವಾದಗಳು’ ಎಂದು ಕೈಕುಲುಕಿ ಬೀಳ್ಕೊಟ್ಟರು. ಅವರೆದುರು ಇಟ್ಟಿದ್ದ ಒಂಟಿ ಕುರ್ಚಿ ಮೇರು ಕಲಾವಿದನ ಸರಳತೆಯ ಸಾಕ್ಷಿಧಾರನಂತೆ ಇನ್ನೂ ಖಾಲಿಯಾಗಿಯೇ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT