ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾಲಯದ ಇಂಡಾಲಜಿ ವಿಭಾಗದಲ್ಲಿ ನಾನು ೨೦೦೯ರಿಂದ ೨೦೧೨ರ ಅವಧಿಯಲ್ಲಿ ಅತಿಥಿ ಪ್ರಾಧ್ಯಾಪಕನಾಗಿದ್ದೆ. ೨೦೧೧ರ ಫೆಬ್ರುವರಿಯಲ್ಲಿ ಆ ವಿಶ್ವವಿದ್ಯಾಲಯದ ‘ಆಧುನಿಕ ಭಾರತ ಕೇಂದ್ರ’ದ ಸಹಯೋಗದಲ್ಲಿ ಒಂದು ಅಂತರ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು. ‘New Perspectives on Gender and Transgression of Gender in South Asia’ ಎನ್ನುವ ಆ ಸಂಕಿರಣದಲ್ಲಿ ನಾನು ‘Transgression of Gender in a Kannada Classical Epic Pampa Bharata’ ಎನ್ನುವ ಪ್ರಬಂಧವನ್ನು ಮಂಡಿಸಿದೆ.

ಪಂಪ ಭಾರತದ ಭೀಷ್ಮ ಮತ್ತು ಅಂಬೆಯ ಪಾತ್ರಗಳನ್ನು ಮುಖಾಮುಖಿಯಾಗಿಸಿ, ಪಂಪನು ಹೇಳುವ ‘ಶೌಚ’ ಹಾಗೂ ‘ಬೀರ’ ಪರಿಕಲ್ಪನೆಗಳನ್ನು ಚರ್ಚಿಸಿದ್ದೆ. ಅಲ್ಲಿ ಭಾಗವಹಿಸಿದವರಲ್ಲಿ ಬಹಳ ಮಂದಿ ಇಂಡಾಲಜಿಯ ವಿದ್ವಾಂಸರಾಗಿದ್ದು ವ್ಯಾಸಭಾರತವನ್ನು ಅಭ್ಯಾಸ ಮಾಡಿದವರಾಗಿದ್ದರು. ಕೆಲವರು ಹಿಂದಿ, ತಮಿಳು ಮತ್ತು ಇತರ ಕೆಲವು ಭಾರತೀಯ ಭಾಷೆಗಳಲ್ಲಿ ರಾಮಾಯಣ ಓದಿಕೊಂಡವರಾಗಿದ್ದರು. ಹೆಚ್ಚಿನವರು ಭಾರತವನ್ನು ಅನೇಕ ಬಾರಿ ಅಧ್ಯಯನದ ಉದ್ದೇಶಕ್ಕೆ ಸಂದರ್ಶಿಸಿದವರಾಗಿದ್ದರು. ಆದರೆ ಅವರಲ್ಲಿ ಯಾರೊಬ್ಬರೂ ಈವರೆಗೆ ಕನ್ನಡದ ಪಂಪ ಕವಿಯ ಹೆಸರನ್ನು ಕೇಳಿಯೇ ಇರಲಿಲ್ಲ.

‘ಪಂಪ ಭಾರತದ ಇಂಗ್ಲಿಷ್ ಅನುವಾದ ಎಲ್ಲಿ ಸಿಗುತ್ತದೆ?’ ‘ಅಂತರ್ಜಾಲದ ಯಾವ ಕೊಂಡಿಯಲ್ಲಿ ಪಂಪನ ಕಾವ್ಯಗಳು ಸಿಗುತ್ತವೆ?’ ಎಂದು ಕೇಳಿದರು. ಆ ಎಲ್ಲ ಪ್ರಶ್ನೆಗಳಿಗೂ ನನ್ನದು ಅವಮಾನ ತುಂಬಿದ ನಾಚಿಕೆಯ ಉತ್ತರ ‘ಇಲ್ಲ’ ಎಂಬುದಾಗಿತ್ತು. ನನ್ನ ಅತಿಥಿ ಪ್ರಾಧ್ಯಾಪಕತನ ೨೦೧೨ರ ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳುವಾಗ ಬೀಳ್ಕೊಡುಗೆ ಸಮಾರಂಭದಲ್ಲಿ ನಾನೊಂದು ‘ಶೈಕ್ಷಣಿಕ ಉಪನ್ಯಾಸ’ ನೀಡಬೇಕಾಗಿತ್ತು. ಸಹೋದ್ಯೋಗಿಗಳೆಲ್ಲ ಪಂಪನ ಕಾವ್ಯಗಳ ಬಗ್ಗೆ ಉಪನ್ಯಾಸ ನೀಡುವಂತೆ ಒತ್ತಾಯಿಸಿದರು.

ಪಂಪ ಅವರ ಗಮನ ಸೆಳೆದಿದ್ದ ಎನ್ನುವ ಸಂತೋಷದಿಂದ ‘Concepts of Laukika and Agamika in Pampa's Epics’ ಬಗ್ಗೆ ಉಪನ್ಯಾಸ ನೀಡಿದೆ. ವಿಷಯಗಳ ಸಮರ್ಥನೆಗಾಗಿ ಪಂಪನ ಎರಡೂ ಕಾವ್ಯಗಳ ಕನ್ನಡ ಪದ್ಯಗಳನ್ನು ನನ್ನ ಮಿತಿಯೊಳಗೆ ಇಂಗ್ಲಿಷ್‌ಗೆ ಅನುವಾದ ಮಾಡಿಕೊಂಡು ವಿವರಿಸಿದೆ. ಉಪನ್ಯಾಸ ನಂತರದ ಪ್ರಶ್ನೋತ್ತರದಲ್ಲಿ ಪಂಪನ ಕಾವ್ಯಗಳ ಅನುವಾದದ ಅಗತ್ಯದ ಬಗ್ಗೆ ಅನೇಕರು ಪ್ರಸ್ತಾಪಿಸಿದರು.

ಇದು ಪಂಪನ ಕಾವ್ಯಗಳ ಸ್ಥಿತಿ ಮಾತ್ರ ಅಲ್ಲ. ನಮ್ಮ ಪ್ರಾಚೀನ ಕನ್ನಡ ಸಾಹಿತ್ಯದ ಒಟ್ಟು ಅವಸ್ಥೆಯೇ ಹೀಗಿದೆ. ಕನ್ನಡದ ಮೊತ್ತಮೊದಲ ಉಪಲಬ್ಧ ಗ್ರಂಥ ‘ಕವಿರಾಜಮಾರ್ಗ’ ಜಗತ್ತಿನ ಭಾಷೆಗಳಿಗೆ ಅನುವಾದ ಆಗಬೇಕಾಗಿದೆ. ಕನ್ನಡದ ಮೊದಲ ಗದ್ಯ ಗ್ರಂಥ ‘ವಡ್ಡಾರಾಧನೆ’ಯಿಂದ ತೊಡಗಿ ಚಂಪೂ ಕವಿಗಳಾದ ರನ್ನ, ಜನ್ನ, ನಾಗಚಂದ್ರ, ನಾಗವರ್ಮ ಮುಂತಾದ ಕವಿಗಳ ಪರಂಪರೆ ದೀರ್ಘವಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಒಂದು ಸಣ್ಣ ಪ್ರಯತ್ನವಾಗಿ ಕನ್ನಡದ ಹಿರಿಯ ವಿಮರ್ಶಕ ಮತ್ತು ಅನುವಾದಕರಾದ ಪ್ರೊ. ಸಿ.ಎನ್.ರಾಮಚಂದ್ರನ್ ಮತ್ತು ನಾನು ಸೇರಿ ‘ಶಾಸ್ತ್ರೀಯ ಕನ್ನಡ ಸಾಹಿತ್ಯ -ಇಂಗ್ಲಿಷ್ ಅನುವಾದದಲ್ಲಿ’ ಎಂಬ ಸ್ವಯಂ ಆಸಕ್ತಿಯ ಯೋಜನೆಯನ್ನು ಆರಂಭಿಸಿದ್ದೇವೆ.

ಹಳಗನ್ನಡ ಸಾಹಿತ್ಯಕ್ಕೆ ಸೀಮಿತವಾದ ಈ ಯೋಜನೆಯಲ್ಲಿ ಕನ್ನಡದ ಆರಂಭದ ಶಾಸನಗಳು, ಕನ್ನಡದ ಪ್ರಮುಖ ಚಂಪೂ ಕವಿಗಳ ಮತ್ತು ಕಾವ್ಯಗಳ ಪರಿಚಯ ಇಂಗ್ಲಿಷ್‌ನಲ್ಲಿ ಇರುತ್ತದೆ. ಜೊತೆಗೆ ಈ ಕವಿಗಳ ಕಾವ್ಯಗಳಿಂದ ಆಯ್ದ ಭಾಗದ ಪದ್ಯಗಳ ಇಂಗ್ಲಿಷ್ ಅನುವಾದ ಇರುತ್ತದೆ. ನಮ್ಮ ಪ್ರಯತ್ನದ ಬಗ್ಗೆ ಕೇಳಿ ತಿಳಿದುಕೊಂಡ ಹಂಪಿ ಕನ್ನಡ ವಿ.ವಿ ಕುಲಪತಿ ಈ ಯೋಜನೆಯನ್ನು ತಮ್ಮ ಭಾಷಾಂತರ ಕೇಂದ್ರದಿಂದ ಪ್ರಕಟಿಸಲು ಒಪ್ಪಿಕೊಂಡಿದ್ದಾರೆ.

ಕನ್ನಡ ವಚನ ಸಾಹಿತ್ಯವನ್ನು ಭಾರತದ ಮತ್ತು ಜಗತ್ತಿನ ಅನೇಕ ಭಾಷೆಗಳಿಗೆ ಅನುವಾದ ಮಾಡಿದ ಮತ್ತು ಮಾಡಿಸುತ್ತಿರುವ ಪ್ರಾಮಾಣಿಕ ಕಾಳಜಿ ಬೆಂಗಳೂರಿನ ‘ಬಸವ ಸಮಿತಿ’ಯದ್ದು. ಕನಕದಾಸರ ಸಾಹಿತ್ಯ ಕೃತಿಗಳ ಬಹುಭಾಷಾ
ಅನುವಾದದ ಮಹತ್ವದ ಕೆಲಸ ನಡೆಯುತ್ತಿದೆ. ಕನ್ನಡದ ಪ್ರಾಚೀನ ಸಾಹಿತ್ಯದಲ್ಲಿ ಜೈನ ಕವಿ ಮತ್ತು ಶಾಸ್ತ್ರಕಾರರ ಪಾಲು ಬಹು ದೊಡ್ಡದು. ಈ ಕವಿಗಳು ಬಳಸಿದ ಪ್ರಾಕೃತ ಭಾಷೆಗಳ ಬಳಕೆ ಗಣನೀಯವಾದುದು. ಇಂದು ಅಂತಹ ಭಾಷೆಗಳನ್ನು ಬಲ್ಲ ವಿದ್ವಾಂಸರ ಕೊರತೆ ಕಾಡುತ್ತಿದೆ.

ಕನ್ನಡ ಶಾಸ್ತ್ರೀಯ ಕೃತಿಗಳ ಅಧ್ಯಯನಕ್ಕೆ ಬೇಕಾದ ಆಕರಗಳನ್ನು ಒದಗಿಸಬಲ್ಲ ತಜ್ಞರನ್ನು ನಿರ್ಮಾಣ ಮಾಡಬೇಕಾದರೆ, ಅಂತಹ ಭಾಷೆಗಳನ್ನು ಹೊಸ ಸಂಶೋಧಕರಿಗೆ ಕಲಿಸುವ ವ್ಯವಸ್ಥೆ ಬೇಕಾಗುತ್ತದೆ. ಈಗ ರಾಜ್ಯದ ಯಾವುದೇ ವಿಶ್ವವಿದ್ಯಾಲಯದಲ್ಲೂ ಕನ್ನಡ ಅಧ್ಯಯನಕ್ಕೆ ಪೂರಕವಾದ ಇಂತಹ ವ್ಯವಸ್ಥೆ ಇಲ್ಲ. ಅದು ಅಗತ್ಯವಾಗಿ ಆಗಬೇಕು. ಹಾಗೆಯೇ ಅರೇಬಿಕ್ ಮತ್ತು ಪರ್ಶಿಯನ್ ಭಾಷೆಗಳ ಪ್ರಭಾವ ಮಧ್ಯಯುಗೀನ ಕನ್ನಡದ ಮೇಲೆ ಬಹಳವಾಗಿ ಆಗಿದೆ. ಕನ್ನಡ ಸಂಶೋಧಕರು ಈ ಭಾಷೆಗಳನ್ನು ಕಲಿಯಲು ಅವಕಾಶ ಕಲ್ಪಿಸಿದರೆ ಕನ್ನಡಕ್ಕೆ ಇನ್ನಷ್ಟು ಬಲ ಬರುತ್ತದೆ.

ಭಾಷಾ ವಿಜ್ಞಾನಿಗಳು, ಅಧ್ಯಾಪಕರು, ಕನ್ನಡೇ-ತರರಿಗೆ ಕನ್ನಡವನ್ನು ಕಲಿಸಿದ ಅನುಭವಿಗಳು... -ಹೀಗೆ ಬೇರೆ ಬೇರೆ ಉದ್ದೇಶ ಮತ್ತು ಕಲಿಯುವ ವರ್ಗಗಳಿಗೆ ಅನುಗುಣವಾಗಿ ರಚಿಸಲಾದ ಸುಮಾರು 50 ಪುಸ್ತಕಗಳಿವೆ. ಆದರೆ ಸಮಸ್ಯೆ ಏನೆಂದರೆ, ಕನ್ನಡ ಭಾಷೆ, ವ್ಯಾಕರಣದ ಎಲ್ಲ ಪರಿಕಲ್ಪನೆಗಳನ್ನೂ, ಪರಿಭಾಷೆಗಳನ್ನೂ ಕ್ರಮಬದ್ಧವಾಗಿ ಕಲಿಸುವ ಪುಸ್ತಕ ಇಲ್ಲದಿರುವುದು. ಅಂತಹ ಪುಸ್ತಕ ಕನ್ನಡದಲ್ಲೂ ಬೇಕು, ಇಂಗ್ಲಿಷ್ ಮತ್ತು ಇತರ ಭಾಷೆಗಳಲ್ಲೂ ಬೇಕು. ಈ ವಿಷಯದಲ್ಲಿ ರಾಜ್ಯದಲ್ಲಿ ಈಗ ಇರುವ ಬಹುಶ್ರುತ ತಜ್ಞರಾದ ಪ್ರೊ. ಟಿ.ವಿ.ವೆಂಕಟಾಚಲ ಶಾಸ್ತ್ರೀ ಅವರಲ್ಲಿ ಕಳೆದ ವರ್ಷ ವಿನಂತಿಸಿದೆ.

ಮೊನ್ನೆ ತಾನೇ ಅವರು ದೂರವಾಣಿಯಲ್ಲಿ ಮಾತಾಡಿ, ‘ಬರೆದು ಮುಗಿಸಿದೇನಪ್ಪ’ ಎನ್ನುವ ಶುಭ ವರ್ತಮಾನವನ್ನು ಕೊಟ್ಟಿದ್ದಾರೆ. ಅವರ ಈ ವ್ಯಾಕರಣ ಗ್ರಂಥ ಜಗತ್ತಿನ ಭಾಷೆಗಳಿಗೆ ತರ್ಜುಮೆ ಆಗಬೇಕು. ಕನ್ನಡ ಛಂದಶ್ಶಾಸ್ತ್ರದಲ್ಲಿ ನಾಗವರ್ಮನ ‘ಛಂದೋಂಬುಧಿ’ ಅಪೂರ್ವ ಗ್ರಂಥ. ದ್ರಾವಿಡ ಛಂದಸ್ಸು ಎಂದರೆ ತಮಿಳು ಛಂದಸ್ಸು ಎಂದು ಹೊರಜಗತ್ತಿನಲ್ಲಿ ಪ್ರಚಾರ ಆಗಿದೆ. ಹಾಗಿರುವಾಗ ಕನ್ನಡದ ಅಂಶಗಣಗಳು ಮತ್ತು ಅವುಗಳಿಂದ ರಚಿತವಾದ ಕನ್ನಡದ ದೇಸಿ ಮಟ್ಟುಗಳು ಪ್ರಾಚೀನವಾದವು ಎನ್ನುವುದನ್ನು ನಾವು ಸಾರಬೇಕು.

ಕ್ರಿ.ಶ. 7ನೇ ಶತಮಾನದ ಬಾದಾಮಿಯ ಶಾಸನದಲ್ಲೇ ಅಂಶ ಗಣದ ತ್ರಿಪದಿಗಳ ಬಳಕೆ ಆಗಿರುವುದು ನಮಗೆಲ್ಲ ಚಿರಪರಿಚಿತ; ಆದರೆ ಅದು ಕನ್ನಡದ ಅನನ್ಯತೆ ಎಂದು ಪ್ರಚಾರ ಮಾಡಿಲ್ಲ. ಗ್ರೀಕ್ ಪ್ರಹಸನದಲ್ಲಿ ಕನ್ನಡ ಪದಗಳಿವೆ ಎಂದು ಗೋವಿಂದ ಪೈ, ಬಿ.ಎ.ಸಾಲೆತ್ತೂರು, ಶಾಮಾ ಶಾಸ್ತ್ರಿ, ಬಾರ್ನೆಟ್ ಮುಂತಾದವರು ಹೇಳಿ ಬಹಳ ಕಾಲ ಸಂದಿದೆ. ಆ ಭಾಷೆಯ ಪ್ರಾಚೀನ ಪ್ರಯೋಗಗಳ ಮರು ಅಧ್ಯಯನದ ಮೂಲಕ ಆ ಪ್ರಮೇಯವನ್ನು ಗಟ್ಟಿಗೊಳಿಸಲು ಇದು ಸಕಾಲ. ಅನ್ಯ ಭಾಷೆಗಳ ಶಾಸನಗಳಲ್ಲಿನ ಕನ್ನಡ ಉಲ್ಲೇಖಗಳ ಶೋಧಕ್ಕಾಗಿ ಬಹುಶಿಸ್ತೀಯ ಪಡೆಯೊಂದರ ನಿರ್ಮಾಣ ಅಗತ್ಯ.

ಅಂತರ್ಜಾಲದಲ್ಲಿ ಶಾಸ್ತ್ರೀಯ ಕನ್ನಡದ ಪ್ರಸರಣ ತುಂಬಾ ದುರ್ಬಲವಾಗಿದೆ. ಆಸಕ್ತ ಕನ್ನಡಿಗರು ವೈಯಕ್ತಿಕ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ ಅಷ್ಟೆ. ಈ ದೃಷ್ಟಿಯಿಂದ ವಿಕಿಪೀಡಿಯವನ್ನು ಇನ್ನಷ್ಟು ಅಧ್ಯಯನದ ನೆಲೆಯಿಂದ, ಪ್ರಮಾಣಗಳ ಬಲದಿಂದ ಪುಷ್ಟಿಗೊಳಿಸಬೇಕಾದ ಅಗತ್ಯವಿದೆ. ತಮಿಳರು ಅಮೆರಿಕದ ಭಾಷಾ ತಜ್ಞರನ್ನು ಬಳಸಿಕೊಂಡು, ಶಾಸ್ತ್ರೀಯ ಭಾಷೆಯ ಸ್ಥಾನವನ್ನು ಹಕ್ಕಿನಿಂದ ಪಡೆಯುತ್ತಾರೆ. ನಾವು ದೇಶದ ಒಳಗಿನ ಮತ್ತು ಹೊರಗಿನ ಭಾಷಾ ತಜ್ಞರನ್ನು ಕನ್ನಡ ಪರವಾದ ‘ಭಾಷಾ ವಕೀಲ’ರನ್ನಾಗಿ ಬಳಸಿಕೊಳ್ಳಬೇಕು. ಶಾಸ್ತ್ರೀಯ ಕನ್ನಡ ಮತ್ತು ನಮ್ಮ ಇಂದಿನ ಕನ್ನಡ ಬೇರೆ ಬೇರೆ ಅಲ್ಲ; ಕನ್ನಡ ಕೂಡು ಕುಟುಂಬದ ಸಂತಾನ ನಕ್ಷೆಯಲ್ಲಿ ನಮಗೆಲ್ಲ-ರಿಗೂ ಸಮ ಪಾಲು, ಸಮ ಬಾಳು ಇದೆ ಮತ್ತು ಇರಬೇಕು.

(ಲೇಖಕರು ಕನ್ನಡದ ಹಿರಿಯ ಚಿಂತಕರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.