ರೈತರ ಆತ್ಮಹತ್ಯೆ ವಿಷಯ ಬಂದಾಗ ಹಣಕಾಸು ವಿಚಾರಗಳೇ ಪ್ರಧಾನವಾಗಿ ಸಾಲ, ಬಡ್ಡಿ ವಸೂಲಿ ಮುಂತಾದವು ಮುನ್ನೆಲೆಗೆ ಬರುತ್ತವೆ. ಆದರೆ ನಾವೆಲ್ಲರೂ ಗಮನಿಸಲೇಬೇಕಾದ ಸಂಗತಿಯೊಂದು ಬದಿಗೆ ಸರಿಯುತ್ತಿದೆ. ಅದು ರೈತನ ಶತ್ರುವಿನಂತೆ ಆಗಿರುವ ಕಂದಾಯ ಇಲಾಖೆಯ ವಿಚಾರ. ಈ ವಿಚಾರ ರೈತರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಕೆಪಿಸಿಸಿ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯಲ್ಲೂ ಪ್ರಸ್ತಾಪವಾಗಿದೆ.

ತಳಮಟ್ಟದಲ್ಲಿ ಈ ಇಲಾಖೆಯ ಅಧಿಕಾರಿಗಳು, ನೌಕರರು ರೈತರಿಗೆ ಕೊಡುತ್ತಿರುವ ಕಿರುಕುಳ, ಹಿಂಸೆ ಮೇಲ್ಮಟ್ಟದಲ್ಲಿರುವವರ ಗಮನಕ್ಕೆ ಅಷ್ಟಾಗಿ ಬಂದಿಲ್ಲ. ರಾಜ್ಯದ ಯಾವುದೇ ತಾಲ್ಲೂಕು ಕಚೇರಿ ಅಥವಾ ಸರ್ವೆ ಇಲಾಖೆಯ ಬಾಗಿಲಿಗೆ ಹೋಗಿ ನಿಂತರೆ ಸಾಕು, ಒಂದಲ್ಲ ಹಲವು ತಬರರ ಕತೆಗಳು ಕಣ್ಣಿಗೆ ರಾಚುತ್ತವೆ. ಪೋಡಿಗಾಗಿ ಅಲೆಯುತ್ತಿರುವ, ಹಕ್ಕುಪತ್ರಕ್ಕಾಗಿ ಕಾಯುತ್ತಿರುವ, ಖಾತೆ ಬದಲಾವಣೆಗಾಗಿ ಅಂಗಲಾಚುತ್ತಿರುವ, ಅಷ್ಟೇಕೆ ಪಹಣಿಯಲ್ಲಿ ಬೆಳೆ ನಮೂದಾತಿಯಿಲ್ಲದೆ ಒದ್ದಾಡುತ್ತಿರುವ ಹತ್ತಾರು, ನೂರಾರು ತಬರರು ನಮ್ಮೆದುರು ನಿಲ್ಲುತ್ತಾರೆ.

ಹೌದು, ಪಹಣಿಯಲ್ಲಿ ಬೆಳೆಯಿಲ್ಲ ಎಂಬುದು ರೈತನ ಪಾಲಿಗೆ ದೊಡ್ಡ ಸಮಸ್ಯೆ. ಆತ ಸರ್ಕಾರಿ ಸವಲತ್ತು ಪಡೆಯಲು, ಸಾಲ ಸೌಲಭ್ಯ ದೊರಕಿಸಿಕೊಳ್ಳಲು ಇದು ಅತ್ಯಗತ್ಯ. ನಮ್ಮ ಕಂದಾಯ ಇಲಾಖೆಯ ಆಡಳಿತ ಎಷ್ಟು ಹದಗೆಟ್ಟಿದೆಯೆಂದರೆ ಇಷ್ಟು ಸಣ್ಣ ಸಮಸ್ಯೆ ನಿವಾರಣೆಗೆ ಜವಾಬ್ದಾರಿ ತೆಗೆದುಕೊಳ್ಳುವವರು ಯಾರೂ ಇರುವುದಿಲ್ಲ. ತಹಶೀಲ್ದಾರರು ತಮ್ಮದೇ ಚಿಂತೆಯಲ್ಲಿರುತ್ತಾರೆ ಹೊರತು ಈ ತರಹದ ತಾಪತ್ರಯಗಳ ಕಡೆಗಲ್ಲ. ತಹಶೀಲ್ದಾರ್ ಕಚೇರಿಯಲ್ಲಿ ದೂರು ನಿವಾರಣೆಯ ವ್ಯವಸ್ಥೆಯಾಗಲಿ, ಅದಕ್ಕೊಬ್ಬ ಅಧಿಕಾರಿಯಾಗಲಿ ಇಲ್ಲವೇ ಇಲ್ಲ. ಇದಕ್ಕಾಗಿ ಸರ್ಕಾರ ಹೊರಡಿಸಿರುವ 30-35 ಸುತ್ತೋಲೆ, ಆದೇಶಗಳು ದಫ್ತರುಗಳಲ್ಲಿ ದೂಳು ಹಿಡಿಯುತ್ತಾ ಬಿದ್ದಿವೆ.

ಅಷ್ಟೇಕೆ ರೈತರಿಗೆ ಪಹಣಿ ತೆಗೆದುಕೊಳ್ಳುವುದು ಸುಲಭವೇ ನೋಡಿ. ಅದಕ್ಕಾಗಿ ಮೈಲುದ್ದದ ಕ್ಯೂ ನಿಂತು, ತಾಸುಗಟ್ಟಲೆ ಕಾಯಬೇಕು. ದೂರದ ಹಳ್ಳಿಗಳಿಂದ ಬಂದ ಜನ ಇದಕ್ಕಾಗಿ ಇಡೀ ದಿನ ಅನ್ನ ನೀರು ಬಿಟ್ಟು ಒದ್ದಾಡಬೇಕು. ಪಹಣಿ, ಮ್ಯುಟೇಶನ್ ಕೊಡಲು ಈಗಿರುವ ಒಂದು ಕೌಂಟರ್ ಜೊತೆಗೆ ಇನ್ನೆರಡು ಮಾಡಲು ಏನಡ್ಡಿ ಎನ್ನುವುದು ಆ ಪರಮಾತ್ಮನಿಗೇ ಗೊತ್ತು. ರೈತರಿಗೆ ನೆರವಾಗಲೆಂದು ಇರುವ ನಾಡಕಚೇರಿಗಳದ್ದು ಇನ್ನೊಂದು ಕತೆ. ಅವು ಹಳ್ಳಿಗಳಾದ್ದರಿಂದ ಕರೆಂಟ್ ಇದ್ದರೆ ನೌಕರ ಬಂದಿರುವುದಿಲ್ಲ; ನೌಕರ ಬಂದರೆ ಕರೆಂಟ್ ಇರುವುದಿಲ್ಲ; ಎರಡೂ ಇದ್ದರೆ ಕಂಪ್ಯೂಟರ್ ಸರಿಯಿರುವುದಿಲ್ಲ; ಎಲ್ಲ ಇದ್ದರೆ ಬಸ್ ಬಂದಿರುವುದಿಲ್ಲ. ರೈತ ತಾಲ್ಲೂಕು ಕೇಂದ್ರಕ್ಕೆ ಹೊರಡುವುದು ಅನಿವಾರ್ಯವಾಗುತ್ತದೆ.

ರೈತರ ಆತ್ಮಹತ್ಯೆಗೆ ಸಂಬಂಧಿಸಿದ ಕಂದಾಯ ಇಲಾಖೆಯ ನೇರ ಲೋಪದೋಷವೊಂದಕ್ಕೆ ಬರೋಣ. ಜಮೀನಿನ ಒಡೆತನವಿರುವ ಹಿರಿಯರು ತೀರಿಕೊಂಡರೆ ಅವರ ವಾರಸುದಾರರಿಗೆ ಜಮೀನಿನ ಖಾತೆ ಬದಲಾವಣೆ ಮಾಡಿಸುವುದೆಂದರೆ ದೊಡ್ಡ ತಲೆಬಿಸಿಯ ಕೆಲಸ. ಹತ್ತಾರು ಬಾರಿ ಅಲೆದಾಟ, ಸಾವಿರಾರು ರೂಪಾಯಿಯ ಒದ್ದಾಟವದು. ಎಷ್ಟೇ ಪಾಡುಪಟ್ಟರೂ, ಗರಿಷ್ಠ ಪ್ರಭಾವ ಉಪಯೋಗಿಸಿದರೂ ಅಥವಾ ಸಾಕಷ್ಟು ದುಡ್ಡು ಬಿಚ್ಚಿದರೂ ಖಾತೆ ಬದಲಾವಣೆಯಾಗಲು ಕನಿಷ್ಠ 6 ತಿಂಗಳು ಬೇಕು.

ಸಹಕಾರಿ ಸಂಸ್ಥೆಗಳು, ಬ್ಯಾಂಕುಗಳು ಕೊಡುವ ಶೂನ್ಯ ಬಡ್ಡಿ, ಸೋವಿ ಬಡ್ಡಿ ಬೆಳೆ ಸಾಲ ತೆಗೆದುಕೊಳ್ಳಲು ಖಾತೆ ಬದಲಾವಣೆ ಆಗದಿರುವುದು ಅಡ್ಡಿಯಾಗುತ್ತದೆ. ಸಹಕಾರಿ ಸಂಸ್ಥೆಗಳಲ್ಲಿ ಮಾರ್ಚ್, ಏಪ್ರಿಲ್ ಅವಧಿಯಲ್ಲಿ ಲೋನ್ ರೆಕಾರ್ಡ್ ಆಗಲಿಲ್ಲ ಎಂದಾದರೆ ಹೊಸದಾಗಿ ಅವನ್ನು ಮಾಡಿಸುವುದು ಬರೀ ಕಷ್ಟವಲ್ಲ, ಸಾಧ್ಯವೇ ಇಲ್ಲ. ಹೀಗಿರುವಾಗ ಅಂತಹ ಖಾತೆ ಬದಲಾವಣೆಯಾಗದ ರೈತ ಖಾಸಗಿಯವರ ಬಳಿ ಸಾಲಕ್ಕಾಗಿ ಕೈಚಾಚದೆ ಏನು ಮಾಡಿಯಾನು? ದುಬಾರಿ ಬಡ್ಡಿಯಾದರೂ ಸರಿ ಜಮೀನು ಸಾಗುವಳಿಯಾಗಬೇಕಲ್ಲ. ಒಂದು ಸಲ ದುಬಾರಿ ಸಾಲ, ಬಡ್ಡಿಯ ಚಕ್ರಕ್ಕೆ ಸಿಲುಕಿದರೆ ಹೊರಬರುವುದು ಸುಲಭವೆ? ಕೆಪಿಸಿಸಿ ವರದಿಯಲ್ಲೂ, ಜಮೀನಿನ ಒಡೆತನದ ವರ್ಗಾವಣೆಯಾಗದಿರುವುದು ಸಹ ಆತ್ಮಹತ್ಯೆಗೆ ಒಂದು ಕಾರಣ ಎಂಬುದು ಕಂಡುಬಂದಿದೆ.

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸರ್ಕಾರ ಕ್ರೂರವಾಗಿ ನಡೆದುಕೊಳ್ಳುತ್ತಿದೆ. ಜಮೀನಿನ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ರೈತ ಪೀಡನೆಯ ಇನ್ನೊಂದು ಸಂಗತಿಯಿದೆ. ರೈತನೊಬ್ಬನ ಹೆಸರಿಗೆ ಜಮೀನು ಖಾತೆಯಾಗಬೇಕಾದರೆ ಆ ಜಮೀನಿನ ಪೋಡಿಯಾಗುವುದು ಕಡ್ಡಾಯ. ಅದಾಗದೆ ಖಾತೆ ವರ್ಗ ಆಗದು. ಪೋಡಿ ಕೇಸು ಎಂದರೆ ಕಂದಾಯ ನೌಕರರಿಗೆ ಸಂತಸ. ಕೈತುಂಬ ಕಾಸು. ಮೇಲಾಗಿ ರೈತರನ್ನು ಮೈತುಂಬಾ ಗೋಳುಹೊಯ್ದುಕೊಳ್ಳಬಹುದು. ವರ್ಷ, ತಿಂಗಳು ಕಾಯಿಸಿ ದುಡ್ಡು ಎಳೆದು ಚಿತ್ರಹಿಂಸೆ ಕೊಡಬಹುದು. ಹಾಗಾಗಿ ಖಾತೆ ಆಗಿಬರುವುದರೊಳಗೆ ರೈತ ಹೈರಾಣಾಗಿ ಹೋಗಿರುತ್ತಾನೆ.

ರೈತನ ಪಾಲಿಗೆ ಕಂದಾಯ ಇಲಾಖೆಯ ಜಮೀನಿನ ಕೆಲಸ ಮಾತ್ರವಲ್ಲ, ಇನ್ನಿತರ ಕೆಲಸಗಳೂ ಗೋಳಿನವೆ. ಜಾತಿ, ಆದಾಯ ಪ್ರಮಾಣಪತ್ರದಿಂದ ತೊಡಗಿ ಬರ-ನೆರೆ ಪರಿಹಾರ ತೆಗೆದುಕೊಳ್ಳುವ ಎಲ್ಲ ಕೆಲಸವೂ ತ್ರಾಸದ ಅನುಭವ ಕೊಡುವಂತಹವೆ. ಇದಕ್ಕೊಂದು ಶಾಶ್ವತ ಪರಿಹಾರ ದೊರಕಿಸಿಕೊಡಲು ನಮ್ಮ ಜನಪ್ರತಿನಿಧಿಗಳು ತಲೆಕೆಡಿಸಿಕೊಳ್ಳದಿರುವುದು ಒಟ್ಟಾರೆ ಪರಿಸ್ಥಿತಿಗೆ ಕಾರಣವಾಗಿದೆ.

ಕಂದಾಯ ಇಲಾಖೆಯ ಯಾವುದೇ ಕೆಲಸ ತೆಗೆದುಕೊಳ್ಳಿ, ಸಲೀಸು ಎಂಬುದಿಲ್ಲ. ರೈತ ಸ್ನೇಹಿ, ಜನ ಸ್ನೇಹಿ ಎಂಬ ಪದಗಳಿಗೆ ಅಲ್ಲಿ ಜಾಗ ಇಲ್ಲ. ಅಲ್ಲಿಯ ಶಬ್ದಗಳೇನಿದ್ದರೂ- ‘ಕಾಸು ಬಿಚ್ಚು, ಸಮಯ ಕೊಲ್ಲು’.

ಸರ್ಕಾರ ನಡೆಸುವವರಿಗೆ ಇವೆಲ್ಲ ಗೊತ್ತಿಲ್ಲ ಎಂದಲ್ಲ. ಎಲ್ಲವೂ ಗೊತ್ತು. ಅದಕ್ಕಾಗೆ ‘ಸಕಾಲ’ ತಂದಿದ್ದಾರೆ, ಮಾಹಿತಿ ಹಕ್ಕು ಕೊಟ್ಟಿದ್ದಾರೆ. ಆದರೆ ವಿಷಯ ಏನೆಂದರೆ, ಇವ್ಯಾವುದನ್ನೂ ಜನ ಬಳಸದಂತೆ ಇಲಾಖೆಯ ಸಿಬ್ಬಂದಿ ಅತ್ಯಂತ ಜಾಣ್ಮೆ, ನಾಜೂಕಿನಿಂದ ಅವನ್ನು ಏಮಾರಿಸಿದ್ದಾರೆ. ಆದ್ದರಿಂದಲೇ ಯಾವುದೇ ಉತ್ತರದಾಯಿತ್ವ ಇಲ್ಲದ, ಸ್ಪಂದನೆಯಿಲ್ಲದ ಇಲಾಖೆಯಾಗಿ ರೈತರಿಗದು ಕಾಣಿಸುತ್ತಿದೆ. ರೈತನ ಪಾಲಿಗೆ ಕಂದಾಯ ಇಲಾಖೆಯವರು ಪುರಾಣ ಕಾಲದ ಮಾಯಾವಿ ರಕ್ಕಸರಿದ್ದಂತೆ. ಸಕಾಲ, ಮಾಹಿತಿ ಹಕ್ಕು ಇತ್ಯಾದಿ ಅಸ್ತ್ರಗಳನ್ನು ಬಿಟ್ಟಾಗ ಮಾಯವಾಗಿ ಬಚಾವಾಗುವ, ಆದರೆ ಕೆಲಸಕ್ಕಾಗಿ ರೈತ ಬಂದಾಗ ಮುದ್ದಾಂ ಪ್ರತ್ಯಕ್ಷರಾಗಿ ಕಿರುಕುಳ ಕೊಡುವ ರಕ್ಕಸರಂತೆ ಅನುಭವಕ್ಕೆ ಬರುತ್ತಾರೆ.

ರೈತನ ಪರಿಸ್ಥಿತಿ ಬದಲಾಗಬೇಕಾದರೆ ಹಣಕಾಸು ವಿಷಯದ ಜೊತೆಗೆ ರೈತ ಒಡನಾಡುವ ಇಲಾಖೆಗಳನ್ನೂ ರಿಪೇರಿ ಮಾಡಬೇಕು. ಎ.ಸಿ., ಡಿ.ಸಿ. ಮುಂತಾದ ಅಧಿಕಾರಿಗಳು ಹಣಕಾಸು ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಳ್ಳುವಷ್ಟೇ ಮುತುವರ್ಜಿಯಿಂದ ತಮ್ಮ ಇಲಾಖೆಯ ಒಳಗಿನ ಹೊಲಸನ್ನು ಚೊಕ್ಕಟ ಮಾಡಲು ಹೊರಡಬೇಕು. ಅದಕ್ಕಾಗಿ ಅವರಿಗೆ ಬೇಕಾಗಿರುವುದು ಸರ್ಕಾರದ ಆದೇಶಕ್ಕಿಂತ, ಒಳಗಿನಿಂದ ‘ಇದು ನನ್ನ ಬದ್ಧತೆ, ಕರ್ತವ್ಯ’ ಎಂದು ತಿಳಿದು ಮಾಡುವ ಮನಸ್ಥಿತಿ. ಆತ್ಮಹತ್ಯೆಯ ಸರಣಿ ನಮ್ಮನ್ನು ಬೆಚ್ಚಿಬೀಳಿಸಿರುವ ಈ ಸಂದರ್ಭದಲ್ಲಾದರೂ ಅಂಥ ಆತ್ಮಸಾಕ್ಷಿ ಅವರಲ್ಲಿ ಕಾಣಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.