ಗೋಕರ್ಣ ಮೊದಲು ಹೀಗೆಲ್ಲಾ ಇರಲಿಲ್ಲ ಭಟ್ರೆ’ ಎಂದು ಮಾತಿಗೆ ಕುಳಿತರು ವಿ.ಎಸ್.ಶರ್ಮ. ಆಂಜನೇಯನ ಜನ್ಮಸ್ಥಳದ ಬಳಿಯೇ ತಾವು ಕಟ್ಟಿದ ಅಶೋಕ ವನದಲ್ಲಿರುವ ಮನೆಯ ಜಗುಲಿಯಲ್ಲಿ ಈಶಾಡಿ ಮಾವಿನ ಹಣ್ಣಿನ ಸಿಪ್ಪೆ ಸುಲಿಯುತ್ತಾ ಅತ್ಯಂತ ವಿಷಾದದಿಂದ ಗೋಕರ್ಣದ ‘ಅಭಿವೃದ್ಧಿ’ಯ ಪರಿಯನ್ನು ಬಣ್ಣಿಸತೊಡಗಿದರು ಅವರು. ‘ಮೊದಲು ಗೋಕರ್ಣ ಎಂದರೆ ಅಗ್ನಿಹೋತ್ರಿಗಳು, ದೀಕ್ಷಿತರು, ಘನಪಾಠಿಗಳು, ವೇದಾಂತಿಗಳು, ಅವಧಾನಿಗಳ ಸ್ವರ್ಗ ಎನ್ನುವಂತೆ ಇತ್ತು. ಇಲ್ಲಿ ಒಬ್ಬರಿಗಿಂತ ಒಬ್ಬರು ದೊಡ್ಡ ವಿದ್ವಾಂಸರಿದ್ದರು.

ದೇಶದ ಬೇರೆ ಬೇರೆ ಭಾಗಗಳಿಂದ ವಿದ್ವಾಂಸರು ಇಲ್ಲಿಗೆ ಬರುತ್ತಿದ್ದರು. ಗ್ವಾಲಿಯರ್ನಿಂದ ಬಂದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಆಂಧ್ರ ದಿಂದ ಬಂದ ಕಾವ್ಯಕಂಠ ವಾಸಿಷ್ಠ ಗಣಪತಿ ಮುನಿಗಳು ಗೋಕರ್ಣದ ಖ್ಯಾತಿಯನ್ನು ಹೆಚ್ಚಿಸಿದ್ದರು. ಪುರಾಣ ಕಾಲದಲ್ಲಿಯೂ ಹೀಗೆಯೆ. ಋಷಿ, ಮುನಿಗಳು ಇಲ್ಲಿ ಬಂದು ತಪಸ್ಸು ಆಚರಿಸುತ್ತಿದ್ದರು. ಇಲ್ಲಿನ ವಿದ್ವಾಂಸರು ಇಡೀ ದೇಶಕ್ಕೇ ಮಾದರಿಯಾಗಿದ್ದರು. ಆದರೆ ಈಗ ಗೋಕರ್ಣದ ವಿದ್ವತ್ ಸಮುದಾಯ ಖಾಲಿಯಾಗಿದೆ’.

ಇಷ್ಟು ಹೇಳಿ ಅವರು ಕೊಂಚ ಹೊತ್ತು ಸುಮ್ಮನಾದರು. ಮಾವಿನ ಹಣ್ಣು ಬಾಯಿಗೆ ಹಾಕಿಕೊಂಡರು. ಮತ್ತೆ ಗೋಕರ್ಣದ ಬದಲಾವಣೆಯ ಪರಿಯನ್ನು ಬಿಚ್ಚತೊಡಗಿದರು.

‘ಇಲ್ಲಿ ಕೇವಲ ವಿದ್ವತ್ತು ಖಾಲಿಯಾಗಿಲ್ಲ. ಇಲ್ಲಿನ ಸಂಪ್ರದಾಯ, ನೆಮ್ಮದಿ, ಸ್ವಚ್ಛತೆ, ಕೌಟುಂಬಿಕ ಜೀವನ ಪದ್ಧತಿ ಎಲ್ಲವೂ ಬದಲಾಗುತ್ತಾ ಸಾಗಿದೆ. ಒಂದು ಕಾಲದಲ್ಲಿ ಭಕ್ತರ ಆಕರ್ಷಣೆಯ ಕೇಂದ್ರವಾಗಿದ್ದ ಮಹಾಬಲೇಶ್ವರ ದೇವಾಲಯ ಈಗ ತನ್ನ ಆಕರ್ಷಣೆ ಕಳೆದುಕೊಂಡಿದೆ. ಗೋಕರ್ಣಕ್ಕೆ ಈಗಲೂ ಸಾವಿರ ಸಾವಿರ ಜನ ಬರುತ್ತಾರೆ. ಆದರೆ ಮಹಾಬಲೇಶ್ವರನನ್ನು ನೋಡಲು ಬರುವವರು ಕಡಿಮೆ. ಗೋಕರ್ಣ ಗ್ರಾಮದ ಪ್ರವೇಶ ದ್ವಾರದಲ್ಲಿ ವಾಹನ ಪ್ರವೇಶಕ್ಕೆ ಶುಲ್ಕ ಪಾವತಿಸಿದ ಬಹುತೇಕ ಮಂದಿ ಕೇಳುವುದು ದೇವಾಲಯ ಎಲ್ಲಿ ಎಂದಲ್ಲ. ಓಂ ಬೀಚ್, ಕೂಡ್ಲೆ ಬೀಚ್ ದಾರಿ ಯಾವುದು ಎಂದು. ಹೀಗೆ ಜನರ ಆಸಕ್ತಿ ಬದಲಾಗಿದೆ. ನಿಧಾನಕ್ಕೆ ಗೋಕರ್ಣದ ಧಾರ್ಮಿಕ ಭಾವನೆ ಕಡಿಮೆಯಾಗಿ ಭೋಗದ ಭಾವನೆ ಹೆಚ್ಚಾಗ ತೊಡಗಿದೆ’.

ಆಧುನಿಕತೆ ಎನ್ನುವುದು ಗೋಕರ್ಣದ ಭಟ್ಟರ ಮನೆಯ ಹಜಾರವನ್ನು ದಾಟಿ ಅಡುಗೆ ಮನೆಯನ್ನೂ ಪ್ರವೇಶಿಸಿದೆ. ಈಗ ಗೋಕರ್ಣದಲ್ಲಿ ಶ್ರಾದ್ಧ ಮಾಡಿಸುವುದಕ್ಕಿಂತ ಹೆಚ್ಚಾಗಿ ವಿದೇಶಿ ಪ್ರವಾಸಿಗರಿಗೆ ‘ಸೌಲಭ್ಯ’ ಒದಗಿಸುವುದಕ್ಕೇ ಸ್ಥಳೀಯರು ಹೆಚ್ಚು ಶ್ರಮ ಹಾಕುತ್ತಾರೆ. ಒಂದು ಕಾಲದಲ್ಲಿ ಬಣ್ಣ ಬಣ್ಣದ ರಂಗೋಲಿಗಳಿಂದ ಶೃಂಗಾರಗೊಳ್ಳುತ್ತಿದ್ದ ಗೋಕರ್ಣದ ರಥಬೀದಿ ಈಗ ಬೀರು ಬಾಟಲಿಗಳ, ಗುಟ್ಕಾ ಚೀಟಿಗಳ ಕಸದ ತೊಟ್ಟಿಯಂತಾಗಿದೆ. ರಥಬೀದಿಯ ಅಂಗಡಿಗಳಲ್ಲಿ ಮೊದಲೆಲ್ಲಾ ಕೇವಲ ಧಾರ್ಮಿಕ ವಸ್ತುಗಳು ಸಿಗುತ್ತಿದ್ದವು. ಈಗ ಅಲ್ಲಿ ಹುಕ್ಕಾಗಳೂ ಸಿಗುತ್ತವೆ. ಸಮುದ್ರ ಸ್ನಾನಕ್ಕೆ ಅಗತ್ಯವಾದ ವಸ್ತ್ರಗಳೂ ಸಿಗುತ್ತವೆ.

ಇಡೀ ದೇಶಕ್ಕೆ ದೇಶವೇ ಸ್ವಚ್ಛ ಭಾರತದ ಅಮಲಿ ನಲ್ಲಿ ತೇಲುತ್ತಿದ್ದರೆ ಈಗಲೂ ಇಲ್ಲಿ ‘ತೆರೆದ ಶೌಚಾಲಯ ಗಳು’ ಹೊಲಸು ನಾರುತ್ತಿವೆ. ‘ಈಗ ತೆರೆದ ಶೌಚಾಲಯ ಗಳು ಇಲ್ಲವೇ ಇಲ್ಲ’ ಎಂದು ವಾದಿಸುವವರೂ ಇಲ್ಲಿದ್ದಾರೆ. ಆದರೆ ಗೋಕರ್ಣದ ಕೇಂದ್ರಭಾಗ ದಲ್ಲಿಯೇ ತೆರೆದ ಶೌಚಾಲಯಗಳು ಇರುವುದು ಸುಳ್ಳಲ್ಲ.

ಗೋಕರ್ಣಕ್ಕೆ ಕಿರೀಟ ಪ್ರಾಯದಂತೆ ಇದ್ದ ಬೀಚ್ ಗಳೂ ಕಸದ ತೊಟ್ಟಿಗಳಾಗಿವೆ. ಇಡೀ ಗೋಕರ್ಣದ ಎಲ್ಲ ಹೊಲಸನ್ನೂ ಸಮುದ್ರಕ್ಕೆ ಸೇರಿಸುವ ದೊಡ್ಡ ಚರಂಡಿ ಮಹಾಬಲೇಶ್ವರ ದೇವಾಲಯದಿಂದ ಬೀಚ್ಗೆ ಹೋಗುವ ಮಾರ್ಗದಲ್ಲೇ ಇದ್ದು ಸಮುದ್ರ ಕಿನಾರೆಯ ಸೌಂದರ್ಯ ಸವಿಯುವ ಉತ್ಸಾಹವನ್ನೇ ಕಸಿದುಕೊಳ್ಳುತ್ತದೆ. ‘ಒಂದು ಕಾಲದಲ್ಲಿ ಬೇಸಿಗೆ ಬಂತು ಎಂದರೆ ರಾತ್ರಿ ವೇಳೆ ಇಡೀ ಪಟ್ಟಣ ಖಾಲಿಯಾಗುತ್ತಿತ್ತು. ಬಹುತೇಕ ಎಲ್ಲರೂ ಸಮುದ್ರ ಬ್ಯಾಲೆ (ತೀರ)ಯಲ್ಲಿ ಮಲಗುತ್ತಿದ್ದರು.

ತಂಪಾಗಿ ಬೀಸುವ ಗಾಳಿಯಲ್ಲಿ ಮೈಮರೆಯುತ್ತಿದ್ದರು. ಆದರೆ ಈಗ ಸಮುದ್ರ ಬ್ಯಾಲೆ ಎನ್ನುವುದು ಕೊಚ್ಚೆಗುಂಡಿ ಯಾಗಿದೆ. ಮಲಗುವುದು ಹಾಗಿರಲಿ. ಅಲ್ಲಿ ಕಾಲಿಡು ವುದಕ್ಕೂ ಅಸಹ್ಯವಾಗುತ್ತದೆ. ‘ಬೀಚ್ಗಳಿಂದಾಗಿಯೇ ಗೋಕರ್ಣಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಬಂದಿದೆ. ಹಣದ ಹೊಳೆ ಹರಿದು ಬಂದಿದೆ. ಇಲ್ಲಿನ ಜನರ ಜೀವನ ಮಟ್ಟ ಸುಧಾರಿಸಿದೆ. ಆದರೆ ಇವೆಲ್ಲದರಿಂದ ನಾವು ಕಳೆದುಕೊಂಡಿದ್ದು ಬಹಳ ಇದೆ’ ಎಂದು ಗೋಕರ್ಣ ಭಟ್ಟರ ಪಳೆಯುಳಿಕೆಯಂತೆ ಇರುವ ಗೋಪಿ ಭಟ್ಟ ಹೇಳುತ್ತಾರೆ.

ರೊಕ್ಕ ಇದ್ದರೆ ಗೋಕರ್ಣ
ಹಣದ ಹಪಾಹಪಿತನ ಗೋಕರ್ಣದಲ್ಲಿ ಯಾವಾಗಲೂ ಇತ್ತು. ಅದಕ್ಕೇ ‘ರೊಕ್ಕ ಇದ್ದರೆ ಗೋಕರ್ಣ, ಸೊಕ್ಕು ಇದ್ದರೆ ಯಾಣ’ ಎಂಬ ಗಾದೆ ಮಾತು ಇದೆ. ಆದರೆ ಈಗ ಹಣ ಮಾಡುವುದು ಇಲ್ಲಿನ ಜನರ ಚಟವಾಗಿದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಿದ್ದರೂ ಈ ಚಟ ಬಿಟ್ಟು ಹೋಗುತ್ತಿಲ್ಲ. ಜೀವನದ ಎಲ್ಲ ನೆಮ್ಮದಿಯನ್ನು ಇದು ಕಸಿದುಕೊಂಡಿದ್ದರೂ ‘ಇನ್ನೂ ಬೇಕು’ ‘ಇನ್ನೂ ಬೇಕು’ ಎನ್ನುವುದು ತಪ್ಪಿಲ್ಲ.

ಗೋಕರ್ಣ ಭಟ್ಟರ ಸಂತಾನ ನಿಧಾನಕ್ಕೆ ಖಾಲಿಯಾಗುತ್ತಿದೆ. ಮೊದಲಿನ ಹಾಗೆ ಯಾರೂ ಈಗ ಬಸ್ಸಿನಲ್ಲಿ ಅಥವಾ ಸ್ವಂತ ವಾಹನದಲ್ಲಿ ಇಳಿದ ಪ್ರವಾಸಿಗರನ್ನು ಕೈ ಹಿಡಿದು ಎಳೆಯುತ್ತಿಲ್ಲ. ದಕ್ಷಿಣೆಗೆ ಪೀಡಿಸುತ್ತಿಲ್ಲ. ಬ್ರಾಹ್ಮಣರ ಸಂಖ್ಯೆ ಕಡಿಮೆಯಾಗಿ ದ್ದರಿಂದ ಬೇಡಿಕೆ ಹೆಚ್ಚಾಗಿದೆ. ಪ್ರವಾಸಿಗರೇ ಈಗ ವೈದಿಕರನ್ನು ಹುಡುಕಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಈಗ ಇಲ್ಲಿ ಕುರುಡು ಕಾಂಚಾಣ ಕುಣಿಯುತ್ತಿದೆ. ಝಣಝಣ ಕಾಂಚಾಣದಲ್ಲಿ ಗೋಕರ್ಣ ಮಹಾಬಲೇಶ್ವರನ ಮೇಲಿನ ಭಯ ಭಕ್ತಿ ಮಾಯವಾಗಿದೆ. ಈಗ ಅಲ್ಲಿನ ಜನರ ಸ್ಥಿತಿ ‘ನಾವೂ ಮಾಯ,’ ‘ನೀವೂ ಮಾಯ’ ಎನ್ನುವಂತಾಗಿದೆ.

ಹಿಂದೆ ಗೋಕರ್ಣ ಭಟ್ಟರು ಘಟ್ಟದ ಮೇಲೆ (ಮಲೆನಾಡು) ಬಂದು ಸಂಭಾವನೆ ಪಡೆದು ಹೋಗುತ್ತಿದ್ದರು. ದರ್ತೆಯೇ (ಸಂಭಾವನೆಯೇ) ಆದಾಯವಾಗಿತ್ತು. ಎಷ್ಟೇ ವಿದ್ವತ್ ಇದ್ದರೂ ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಇಲ್ಲಿನ ಬ್ರಾಹ್ಮಣರಿಗೆ ದರ್ತೆ ಜೀವನಧಾರವಾಗಿತ್ತು. ಇಲ್ಲಿನ ಬ್ರಾಹ್ಮಣ ಕುಟುಂಬದ ಬಹುತೇಕ ಪುರುಷರು ಆರು ತಿಂಗಳು ಮನೆಯಿಂದ ಹೊರಗೇ ಇರುತ್ತಿದ್ದುದರಿಂದ ಸಂಸಾರದ ಎಲ್ಲ ಜವಾಬ್ದಾರಿಯನ್ನು ಮಹಿಳೆಯರೇ ವಹಿಸಿಕೊಂಡಿ ದ್ದರು.

ಇಂತಹ ಸ್ಥಿತಿ 1985ರವರೆಗೂ ಇತ್ತು. ಆದರೆ ಹೀಗೆ ಸಂಭಾವನೆಗಾಗಿ ತಮ್ಮ ಮಕ್ಕಳು ಊರು ಊರು ಅಲೆಯುವುದು ಬೇಡ ಎಂದು ಇಲ್ಲಿನ ಬ್ರಾಹ್ಮಣ ಮಹಿಳೆಯರು ನಿರ್ಧರಿಸಿದ್ದರ ಫಲವಾಗಿ ಬಹುತೇಕ ಮಕ್ಕಳು ಆಧುನಿಕ ಶಿಕ್ಷಣ ಪಡೆದು ಈಗ ಹೊರ ಹೋಗಿದ್ದಾರೆ. ವೈದಿಕ ವೃತ್ತಿಯನ್ನೇ ಒಪ್ಪಿಕೊಂಡಿರುವ ಕೆಲವು ಯುವಕರಿಗೆ ಮದುವೆ ಕೂಡ ಗಗನ ಕುಸುಮವಾಗಿದೆ. ವೈದಿಕ ವೃತ್ತಿಯವರನ್ನು ಮದುವೆಯಾಗಲು ಯುವತಿಯರು ಮುಂದೆ ಬರುತ್ತಿಲ್ಲ.

ಇದರಿಂದ ಕೂಡ ಇನ್ನಷ್ಟು ಮಕ್ಕಳು ವೇದಾಧ್ಯಯನವನ್ನು ಕೈಬಿಡುವಂತಾಗಿದೆ. ಮೊದಲೆಲ್ಲಾ ಗೋಕರ್ಣದಲ್ಲಿ ಸಾಮಾನ್ಯವಾಗಿ ಊರಿನೊಳಗೇ ಸಂಬಂಧ ಬೆಳೆಯುತ್ತಿದ್ದವು. ಈಗ ಊರಿನ ಯುವತಿಯರು ಆಧುನಿಕ ಶಿಕ್ಷಣ ಪಡೆದಿದ್ದಾರೆ. ದೇವರ ಪೂಜೆ ಮಾಡುತ್ತಾ, ಕೋಟಿತೀರ್ಥದಲ್ಲಿ ಶ್ರಾದ್ಧ ಕರ್ಮಗಳನ್ನು ಮಾಡಿಸುವ ಪುರೋಹಿತರನ್ನು ಮದುವೆಯಾಗುವ ಬಯಕೆ ಅವರಿಗಿಲ್ಲ. ಅದಕ್ಕಾಗಿಯೇ ಈಗ ಇಲ್ಲಿ ಹಲವಾರು ಮನೆಗಳಲ್ಲಿ ಉತ್ತರ ಕರ್ನಾಟಕದ ಅನ್ಯ ಜಾತಿಯ ವಧುಗಳ ಪ್ರವೇಶವಾಗಿದೆ.

ಗೋಕರ್ಣ ಭಟ್ಟರ ಮನೆಯಲ್ಲಿ ಇಂತಹ ತಲ್ಲಣಗಳು ನಡೆಯುತ್ತಿರುವಾಗಲೇ ಹೊರಗೆ ಕೂಡ ಸಾಕಷ್ಟು ಬದಲಾವಣೆಗಳು ಆಗುತ್ತಿದ್ದವು. ಮಹಾಬಲೇಶ್ವರ ದೇವಾಲಯದ ಬಳಿ ಇರುವ ಬೀಚ್ ಮಾತ್ರ ಮೊದಲು ನೋಡುಗರ ಸ್ವರ್ಗವಾಗಿತ್ತು. ನಂತರದ ದಿನಗಳಲ್ಲಿ ವಿದೇಶಿ ಪ್ರವಾಸಿಗರು ಗೋಕರ್ಣದ ಬಳಿಯೇ ಇರುವ ದೋಣಿಬೈಲ್ ಬೀಚ್ನ ಪ್ರಶಾಂತತೆಗೆ ಮಾರುಹೋದರು.

ಬೆಟ್ಟದ ಮೇಲೆ ನಿಂತು ಈ ಬೀಚ್ ನೋಡಿದಾಗ ಇದು ‘ಓಂ’ ತರಹ ಕಂಡಿದ್ದರಿಂದ ಇದನ್ನು ‘ಓಂ ಬೀಚ್’ ಎಂದು ಕರೆದರು. ಪಕ್ಕದಲ್ಲಿಯೇ ಇರುವ ಕೂಡ್ಲೆ ಬೀಚ್ ಕೂಡ ಅವರಿಗೆ ಆಕರ್ಷಣೀಯವಾಗಿಯೇ ಕಂಡಿತು. ಅದಕ್ಕೇ ಇಲ್ಲಿ ತಂಡ ತಂಡವಾಗಿ ವಿದೇಶಿಗರು ಬರಲು ಆರಂಭಿಸಿದರು. 1990ರ ವೇಳೆಗೆ ವಿದೇಶಿ ಪ್ರವಾಸಿಗರ ಪ್ರವಾಹ ಹೆಚ್ಚಾಗತೊಡಗಿತು. ನವೆಂಬರ್ ತಿಂಗಳಿನಿಂದ ಏಪ್ರಿಲ್ ತಿಂಗಳವರೆಗೆ ಇಲ್ಲಿಗೆ ಬರುವ ವಿದೇಶಿ ಪ್ರವಾಸಿಗರು ಹೆಚ್ಚು.

ಈ ಸಂದರ್ಭದಲ್ಲಿ ದಿನಕ್ಕೆ 10ರಿಂದ 15 ಸಾವಿರ ಪ್ರವಾಸಿಗರು ಬರುತ್ತಾರೆ. ದೇವಾಲಯ ದರ್ಶನಕ್ಕೆ ಬರುವ ಭಕ್ತರು ವರ್ಷದ 365 ದಿನವೂ ಇರುತ್ತಾರೆ. ವರ್ಷಕ್ಕೆ ಸುಮಾರು 10 ಸಾವಿರ ವಿದೇಶಿಗರು ಇಲ್ಲಿಗೆ ಬರುತ್ತಾರೆ. ಮೊದಮೊದಲು ಕೇವಲ ಬೀಚ್ಗಳಿಗೆ ಸೀಮಿತವಾಗಿದ್ದ ವಿದೇಶಿ ಪ್ರವಾಸಿಗರು ನಂತರ ಗೋಕರ್ಣದ ಬೀದಿಗೂ ಬರತೊಡಗಿದರು.

ಭಟ್ಟರ ಮನೆಯ ಹಜಾರಗಳಿಗೂ ಅವರ ಪ್ರವೇಶವಾಯಿತು. 1980ರಿಂದ 2000ದವರೆಗೆ ಇಲ್ಲಿ ಹಿಪ್ಪಿಗಳದ್ದೇ ರಾಜ್ಯಭಾರವಾಗಿತ್ತು. ಮದ್ಯ, ಚರಸ್ ಮುಂತಾದವುಗಳನ್ನು ಸೇವಿಸಿ ಅಮಲಿನಲ್ಲಿ ತೇಲುತ್ತಿದ್ದ ವಿದೇಶಿಗರು ಸ್ಥಳೀಯರನ್ನೂ ಅದರಲ್ಲಿ ತೇಲಿಸಲು ಆರಂಭಿಸಿದರು. ವಿದೇಶಿ ಪ್ರವಾಸಿಗರಿಂದ ಲಾಭ ಹೆಚ್ಚು ಎಂದು ಗೊತ್ತಾಗಿದ್ದೇ ಇಲ್ಲಿನ ವೈದಿಕರು ವರ್ತೆ (ಸಂಭಾವನೆ ತಿರುಗಾಟ)ಯನ್ನು ಸಂಪೂರ್ಣವಾಗಿ ನಿಲ್ಲಿಸಿ ಬಿಟ್ಟರು. ಗೇರುಗುಡ್ಡೆಗಳೆಲ್ಲಾ ರೆಸಾರ್ಟ್ ಆಗತೊಡಗಿದುವು. ಗುಡಿಸಲುಗಳೂ ಹೋಂ ಸ್ಟೇಗಳಾದವು. ಗೋಕರ್ಣದ ಸುತ್ತಮುತ್ತ ಅತ್ಯುತ್ತಮ ತರಕಾರಿ ಬೆಳೆಯುತ್ತಿದ್ದ ಹಾಲಕ್ಕಿ ಒಕ್ಕಲಿಗರು ಕೂಡ ವಿದೇಶಿ ಪ್ರವಾಸಿಗರ ಮೋಹಕ್ಕೆ ಬಿದ್ದರು. ತರಕಾರಿ ಬೆಳೆಯುವುದನ್ನು ಕಡಿಮೆ ಮಾಡಿ ತಮ್ಮ ತಮ್ಮ ಮನೆಯನ್ನೂ ಹೋಂ ಸ್ಟೇ ಮಾಡಿಬಿಟ್ಟರು.

ಇನ್ನೂ ಆಘಾತಕಾರಿ ಎಂದರೆ ಇಡೀ ರೆಸಾರ್ಟ್ಗಳನ್ನೇ ವಿದೇಶಿಗರಿಗೆ ಗುತ್ತಿಗೆ ನೀಡುವ ಪದ್ಧತಿಯೂ ಬೆಳೆದು ಬಂತು. ಈಗ ಇಲ್ಲಿಗೆ ಬರುವ ವಿದೇಶಿಗರು ಗೈಡ್ಗಳನ್ನೂ ಅಲ್ಲಿಂದಲೇ ಕರೆ ತರುತ್ತಾರೆ. ಅವರೇ ರೆಸಾರ್ಟ್ ವಹಿಸಿಕೊಂಡು ಅವರೇ ವ್ಯವಹಾರ ಮಾಡಿಕೊಳ್ಳುತ್ತಾರೆ. 6 ತಿಂಗಳ ಮಟ್ಟಿಗೆ ರೆಸಾರ್ಟ್ಗಳನ್ನು ಬಿಟ್ಟುಕೊಟ್ಟರೆ ₨ 5ರಿಂದ 6 ಲಕ್ಷ ಸಿಗುತ್ತದೆ. ಇದೇ ರೀತಿ ವಿದೇಶಿಗರೊಂದಿಗೆ ಗುತ್ತಿಗೆ ನಡೆಸುವುದಕ್ಕೂ ಕೆಲವು ಹಾಲಕ್ಕಿ ಒಕ್ಕಲಿಗರು ಮುಂದಾಗಿದ್ದಾರೆ, ವರ್ಷವಿಡೀ ಮೈಬಗ್ಗಿಸಿ ದುಡಿದರೂ ಕನಸಿನಲ್ಲಿಯೂ ಕಾಣದಷ್ಟು ಹಣವನ್ನು ವಿದೇಶಿಗರು ಸುಮ್ಮನೆ ಸುರಿಯುವಾಗ ದುಡಿಮೆಯ ಗೊಡವೆ ಏಕೆ ಎಂದು ಅವರೂ ತಮ್ಮ ಬದುಕನ್ನು ಬದಲಾಯಿಸಿಕೊಂಡಿದ್ದಾರೆ.

ವಿದೇಶಿಗರು ಕೇವಲ ರಥ ಬೀದಿಗೆ ಬರಲಿಲ್ಲ. ಭಟ್ಟರ ಮನೆಯ ಜಗಲಿಯಲ್ಲೂ ನಿಲ್ಲಲಿಲ್ಲ. ಅವರ ಬೆಡ್ರೂಂಗೂ ಬಂದರು. ಕುಡಿತ, ಧೂಮಪಾನ, ಅಫೀಮು, ಭಂಗಿ ಎಲ್ಲವೂ ಈಗ ಗೋಕರ್ಣದಲ್ಲಿ ಸರ್ವವ್ಯಾಪಿಯಾಗಿದೆ. ದೇವರಿಲ್ಲದ ಜಾಗವೇ ಇಲ್ಲ ಎನ್ನುವ ಹಾಗೆ ಈಗ ಕೊಳಕಿಲ್ಲದ, ಗೋಳಿಲ್ಲದ, ವಾಸನೆ ಇಲ್ಲದ ಜಾಗವೇ ಇಲ್ಲ ಎನ್ನುವಂತಾಗಿದೆ. ಇಲ್ಲಿನ ಮೂವರು ವೈದಿಕರು ವಿದೇಶಿ ಯುವತಿಯರನ್ನು ಮದುವೆ ಯಾದರು. ಆದರೆ ಈ ಮೂರು ವೈವಾಹಿಕ ಸಂಬಂಧಗಳೂ ಈಗ ಮುರಿದು ಬಿದ್ದಿವೆ. ಮಹಾಬಲೇಶ್ವರ ದೇವಾಲಯದ ಬಳಿಯಲ್ಲಿಯೇ ವಿದೇಶಿಗನೊಬ್ಬ ದೇಸಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆಯೂ ನಡೆದಿದೆ.

ವಿದೇಶಿಗರು ಇಲ್ಲಿಗೆ ಬಂದ ನಂತರ ಅವರನ್ನು ನೋಡಲು ಬರುವವರ ಸಂಖ್ಯೆ ಕೂಡ ಹೆಚ್ಚಾಯಿತು. ಬೀಚ್ಗಳಲ್ಲಿ ಅರೆ ಬೆತ್ತಲಾಗಿ ಮಲಗಿಕೊಳ್ಳುವ, ಸ್ವಚ್ಛಂದವಾಗಿ ವಿಹರಿಸುವ ವಿದೇಶಿಗರನ್ನು ನೋಡುವುದೇ ಇಲ್ಲಿಗೆ ಬರುವ ಕೆಲವು ಪ್ರವಾಸಿಗರ ಕಸುಬಾಯಿತು. ಬೇಕಾಬಿಟ್ಟಿಯಾಗಿ ಬಿದ್ದುಕೊಂಡು, ಅಮಲಿನಲ್ಲಿ ತೇಲುವ ವಿದೇಶಿಗರನ್ನು ಮುಟ್ಟುವ ಪ್ರಯತ್ನವೂ ನಡೆಯಿತು. ಪೊಲೀಸ್ ಪ್ರಕರಣಗಳೂ ಆದವು. ಹೀಗೆ ಗೋಕರ್ಣದಲ್ಲಿ ಹಣದೊಂದಿಗೆ ಒಂದಿಷ್ಟು ಅನಿಷ್ಟಗಳೂ ಬಂದು ಸೇರಿಕೊಂಡವು.

ಗೋಕರ್ಣದಲ್ಲಿ ಹಣ ಓಡಾಡತೊಡಗಿದ ನಂತರ ರಿಯಲ್ ಎಸ್ಟೇಟ್ ಬೆಲೆ ಕೂಡ ಏರತೊಡಗಿತು. ಈಗ ಅಲ್ಲಿ ಒಂದು ಗುಂಟೆ ಜಾಗದ ಬೆಲೆ ₨ 10 ಲಕ್ಷ ಮೀರಿದೆ. ನವೆಂಬರ್ನಿಂದ ಏಪ್ರಿಲ್ವರೆಗೆ ಇಲ್ಲಿ ಹಣದ ವಹಿವಾಟು ಜೋರು. ಗೋಕರ್ಣದಲ್ಲಿ 20ಕ್ಕೂ ಹೆಚ್ಚು ಹಣಕಾಸು ಸಂಸ್ಥೆಗಳಿವೆ. ಈ 6 ತಿಂಗಳ ಅವಧಿಯಲ್ಲಿ ಕನಿಷ್ಠ ₨ 50 ಕೋಟಿ ವಹಿವಾಟು ನಡೆಯುತ್ತದೆ ಎಂದು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಗಣಪತಿ ಹೆಗಡೆ ಹೇಳುತ್ತಾರೆ. ಈ ಸಮಯದಲ್ಲಿಯೇ ಇಲ್ಲಿನ ಜನರು ಬ್ಯಾಂಕ್ಗಳಲ್ಲಿ ಹೆಚ್ಚು ಹೆಚ್ಚು ಠೇವಣಿ ಇಡುತ್ತಾರೆ.

ರಥಬೀದಿ, ಕೋಟಿತೀರ್ಥದ ಬಳಿಯ ಬ್ರಾಹ್ಮಣರ ಪ್ರಾಬಲ್ಯ ಕೂಡ ಈಗ ಕಡಿಮೆಯಾಗುತ್ತಿದೆ. ಒಂದು ಕಾಲದಲ್ಲಿ ಇಲ್ಲಿ ಐದು ಸಾವಿರ ವೈದಿಕರಿದ್ದರು. ಈಗ ಅವರ ಸಂಖ್ಯೆ 500ಕ್ಕೆ ಇಳಿದಿದೆ. ಮೊದಲೆಲ್ಲಾ ರಾಜ್ಯದಲ್ಲಿ ಎಲ್ಲಿಯೇ ಬಹುದೊಡ್ಡ ಧಾರ್ಮಿಕ ಕಾರ್ಯ ನಡೆಯುತ್ತದೆ ಎಂದರೆ ಅಲ್ಲಿ ಗೋಕರ್ಣ ವಿದ್ವಾಂಸರ ನೇತೃತ್ವ ಇರುತ್ತಿತ್ತು. ಆದರೆ ಈಗ ಗೋಕರ್ಣಕ್ಕೆ ಬಂದ ಭಕ್ತರಿಗೆ ಮಹಾಬಲೇಶ್ವರನ ಪೂಜೆ ಮಾಡಿಸುವುದಕ್ಕೂ ಪುರೋಹಿತರ ಕೊರತೆ ಉಂಟಾಗಿದೆ. ಮನೆಯಲ್ಲಿಯೇ ಶಿಷ್ಯರನ್ನು ಇಟ್ಟುಕೊಂಡು ಅವರಿಗೆ ಸಂಸ್ಕೃತ, ವೇದ ಕಲಿಸುವ ಪದ್ಧತಿ ಕೂಡ ಈಗ ಮಾಯವಾಗಿದೆ.

ಗೋಕರ್ಣದಲ್ಲಿ ಇಷ್ಟೆಲ್ಲಾ ನಡೆದಿದ್ದರೂ ಅದಕ್ಕೆ ಸರ್ಕಾರದ ಕೊಡುಗೆ ಏನೇನೂ ಇಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಯಾವುದೇ ಸೌಲಭ್ಯವನ್ನೂ ಇಲ್ಲಿ ಕಲ್ಪಿಸಿಲ್ಲ. ಯಾವುದೇ ಬೀಚ್ಗಳಲ್ಲಿ ಸುರಕ್ಷತಾ ಕ್ರಮಗಳನ್ನೂ ಕೈಗೊಂಡಿಲ್ಲ. ವರ್ಷದಿಂದ ವರ್ಷಕ್ಕೆ ಸಮುದ್ರಕ್ಕೆ ಬಿದ್ದು ಸತ್ತವರ ಸಂಖ್ಯೆಯನ್ನು ಬರೆದಿದ್ದು ಬಿಟ್ಟರೆ ಸರ್ಕಾರದ ಕೊಡುಗೆ ಮತ್ತೇನಿಲ್ಲ. ಇಲ್ಲಿನ ರೆಸಾರ್ಟ್ಗಳಲ್ಲಿ ಏನು ನಡೆಯುತ್ತದೆ, ಚರಸ್, ಅಫೀಮು, ಡ್ರಗ್ಸ್ ಎಲ್ಲಿಂದ ಬರುತ್ತದೆ ಎನ್ನುವುದನ್ನು ಪತ್ತೆ ಹಚ್ಚುವ ಗೊಡವೆಗೂ ಪೊಲೀಸರು ಹೋಗಿಲ್ಲ.

ಅನಧಿಕೃತವಾಗಿ ನಡೆಯುತ್ತಿರುವ ವಸತಿ ಗೃಹಗಳು ಹಾಗೂ ರೆಸಾರ್ಟ್ಗಳ ಮೇಲೆ ಕಣ್ಣಿಟ್ಟಿಲ್ಲ. ಅನಧಿಕೃತವಾಗಿ ನಡೆಸಲಾಗುತ್ತಿರುವ ರೆಸಾರ್ಟ್ಗಳನ್ನು ಅಧಿಕೃತವನ್ನಾಗಿ ಮಾಡಿಕೊಳ್ಳಲು ಅದರ ಮಾಲೀಕರು ಸಿದ್ಧರಿದ್ದರೂ ಅದಕ್ಕೂ ಸರ್ಕಾರ ಸಹಕರಿಸುತ್ತಿಲ್ಲ. ಇನ್ನೂ ಅಚ್ಚರಿಯ ವಿಷಯ ಎಂದರೆ 25 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ, ಕೋಟ್ಯಂತರ ವಹಿವಾಟು ನಡೆಯುತ್ತಿರುವ ಗೋಕರ್ಣ ಇನ್ನೂ ಗ್ರಾಮ ಪಂಚಾಯ್ತಿಯಾಗಿಯೇ ಉಳಿದಿದೆ. ಅದನ್ನು ಮೇಲ್ದರ್ಜೆಗೆ ಏರಿಸುವ ಯಾವೊಂದು ಪ್ರಯತ್ನವೂ ನಡೆದಿಲ್ಲ. ಆಗೊಮ್ಮೆ ಈಗೊಮ್ಮೆ ಅಂತಹ ಪ್ರಯತ್ನ ನಡೆದಿದ್ದರೂ ಅದಕ್ಕೆ ಕಲ್ಲು ಹಾಕಿದವರೇ ಹೆಚ್ಚು.

ವಿದೇಶಿ ಹಿಪ್ಪಿಗಳ ಹಾವಳಿ, ಕಡಿಮೆಯಾದ ಧಾರ್ಮಿಕ ಭಾವನೆ, ತೆರೆದ ಶೌಚಾಲಯದ ವಾಸನೆ, ಗಬ್ಬು ನಾರುವ ಚರಂಡಿ, ಅನೈತಿಕ ಚಟುವಟಿಕೆಗಳಿಂದ ಗುಡಿಯಲ್ಲಿ ಮಹಾಬಲೇಶ್ವರ ಉಳಿಯುವ ಸಾಧ್ಯತೆಗಳೇ ಇಲ್ಲ.

ಹವ್ಯಾಸಿ ಪತ್ರಕರ್ತ ಶ್ರೀಧರ ಅಡಿ ಇದಕ್ಕೊಂದು ಕತೆ ಹೇಳುತ್ತಾರೆ. ಲಂಕೆಯ ಅರಸ ರಾವಣ ತನ್ನ ತಾಯಿಗಾಗಿ ಈಶ್ವರನ ಆತ್ಮಲಿಂಗವನ್ನು ತಂದ. ಗಣೇಶ ಅದನ್ನು ಗೋಕರ್ಣದಲ್ಲಿಯೇ ಉಳಿಯುವಂತೆ ಮಾಡಿದ. ಆದರೆ ಗೋಕರ್ಣದ ಗೊಂದಲದಿಂದ ಬೇಸತ್ತ ಮಹಾಬಲೇಶ್ವರ ರಾವಣನಲ್ಲಿಗೆ ಬಂದು ‘ನನಗೆ ಇಲ್ಲಿ ಉಳಿಯುವುದು ಕಷ್ಟವಾಗಿದೆ. ಹೇಗಾದರೂ ಮಾಡಿ ನಿನ್ನ ಪಟ್ಟಣಕ್ಕೇ ನನ್ನ ಕರೆದುಕೊಂಡು ಹೋಗು’ ಎಂದು ಬೇಡಿಕೊಂಡನಂತೆ. ಅದಕ್ಕೆ ರಾವಣ ‘ಅಲ್ಲಯ್ಯಾ ಈಶ್ವರ, ಇಲ್ಲಿ ಮನುಷ್ಯರ ಕಾಟವನ್ನೇ ಸಹಿಸಲಾಗದ ನಿನಗೆ ನಮ್ಮಲ್ಲಿ ಬಂದರೆ ಇನ್ನೂ ಕಷ್ಟ. ಯಾಕೆಂದರೆ ಅಲ್ಲಿ ಇರುವವರು ರಾಕ್ಷಸರು. ಹೇಗೋ ಇಲ್ಲಿಯೇ ಅನುಸರಿಸಿಕೊಂಡು ಹೋಗು’ ಎಂದು ಹೇಳಿ ಜಾಗ ಖಾಲಿ ಮಾಡಿದನಂತೆ.

ಗೋಕರ್ಣದ ಬಗ್ಗೆ ಒಂದಿಷ್ಟು...
ಉತ್ತರ ಕನ್ನಡ ಜಿಲ್ಲೆಯ ಕುಮಟದಿಂದ 16 ಕಿ.ಮೀ ದೂರದಲ್ಲಿರುವ ಗೋಕರ್ಣ ಪವಿತ್ರ ಯಾತ್ರಾ ಸ್ಥಳ. ಕಾಶಿ, ರಾಮೇಶ್ವರಗಳಿಗೆ ಸಮನಾದ ಸಿದ್ಧಿ ಕ್ಷೇತ್ರ ಎಂಬ ನಂಬುಗೆ ಜನರಲ್ಲಿದೆ. ಅಗಸ್ತ್ಯ ಮುಂತಾದ ಮುನಿಗಳ ತಪೋಭೂಮಿ ಇದಾಗಿತ್ತು. ತ್ರೇತಾಯುಗದಿಂದಲೂ ಈ ಕ್ಷೇತ್ರ ಪ್ರಸಿದ್ಧಿ ಪಡೆದಿದೆ. ಕರ್ನಲ್ ಮೆಕೆಂಜಿ (1753–1821) ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಗ್ರಹಿಸಿದ ಕೈಫಿಯತ್ತಿನಲ್ಲಿ ಗೋಕರ್ಣ ಕ್ಷೇತ್ರ ಮಹಾತ್ಮೆ ಇದೆ.

ಗೋಕರ್ಣದ ನೆಲ ಆಕಳ ಕಿವಿಯಂತೆಯೇ ಇರುವುದರಿಂದ ಇದಕ್ಕೆ ಗೋಕರ್ಣ ಎಂಬ ಹೆಸರು ಬಂತು ಎಂದು ಹೇಳಲಾಗಿದೆ. ತ್ರೇತಾಯುಗದ ಮೊದಲ ಪಾದದಲ್ಲಿ ಪರಶುರಾಮ ಕ್ಷತ್ರಿಯರನ್ನೆಲ್ಲಾ ಸಂಹಾರ ಮಾಡಿ ಸಮಗ್ರ ಭೂಮಿಯನ್ನು ಬ್ರಾಹ್ಮಣರಿಗೆ ದಾನ ಮಾಡಿದ. ನಂತರ ಮಹೇಂದ್ರ ಪರ್ವತದಲ್ಲಿ ತಪಸ್ಸಿಗೆ ಕುಳಿತ.

ಆಗ ಕಷ್ಯಪ ಮುಂತಾದ ಋಷಿಗಳು ಭೂಮಿಯಲ್ಲಿ ತಪಸ್ಸು ಆಚರಿಸಲು ಸ್ಥಳ ಇಲ್ಲ. ಪವಿತ್ರವಾದ ಗೋಕರ್ಣ ಸಮುದ್ರದಲ್ಲಿ ಮುಳುಗಿ ಹೋಗಿದೆ. ಅದನ್ನು ಹೊರಕ್ಕೆ ತೆಗೆಯಬೇಕು ಎಂದು ಪರಶುರಾಮನಲ್ಲಿ ಮನವಿ ಮಾಡಿದಾಗ ಆತ ಈ ಸ್ಥಳವನ್ನು ಹೊರಕ್ಕೆ ತೆಗೆದ ಎಂಬ ಪುರಾಣದ ಕತೆ ಇದೆ. ಗೋಕರ್ಣಕ್ಕೆ ಭೂಕೈಲಾಸ ಎಂಬ ಬಿರುದೂ ಇದೆ. ಸೀತೆ, ಲಕ್ಷ್ಮಣರೊಂದಿಗೆ ರಾಮ ಕೂಡ ಇಲ್ಲಿಗೆ ಬಂದಿದ್ದನಂತೆ. ಕುಂಭಕರ್ಣನೂ ಇಲ್ಲಿ ತಪಸ್ಸು ಮಾಡಿದ್ದನಂತೆ. ಬಲರಾಮ ಕೂಡ ಇಲ್ಲಿ ಬಂದು ಈಶ್ವರನ ಪೂಜೆ ಮಾಡಿದ್ದ.

ಜಗತ್ತಿನ ಸೃಷ್ಟಿಗಾಗಿ ರುದ್ರ ತಪಸ್ಸಿಗೆ ಕುಳಿತ. ಆಗ ಪ್ರಜಾಪತಿ ಬ್ರಹ್ಮ ಬ್ರಹ್ಮಾಂಡ ನಿರ್ಮಾಣ ಮಾಡಿದ. ಸಮಾಧಿಯಿಂದ ರುದ್ರ ಎಚ್ಚೆತ್ತಾಗ ತನ್ನ ಸುತ್ತಲೂ ಭೂಕವಚ ನಿರ್ಮಾಣವಾಗಿದ್ದನ್ನು ಕಂಡು ಕೋಪಗೊಂಡ. ಭೂಮಿಯನ್ನು ಚೂರು ಚೂರು ಮಾಡಿ ಹೊರಬರಲು ನಿರ್ಧರಿಸಿದ. ಆಗ ಭೂ ತಾಯಿ ಅವನನ್ನು ಸಂತೈಸಿ ತಾನು ಗೋಮಾತೆಯ ರೂಪ ತಾಳುತ್ತೇನೆ. ತನ್ನ ಕಿವಿಯಿಂದ ಹೊರಕ್ಕೆ ಬಾ ಎಂದು ರುದ್ರನಿಗೆ ಕೇಳಿಕೊಂಡಳಂತೆ. ಅದಕ್ಕೆ ಒಪ್ಪಿದ ರುದ್ರ ಆಕಳ ಕಿವಿಯಿಂದ ಹೊರಬಂದ. ಅದಕ್ಕೇ ಇದು ಗೋಕರ್ಣವಾಯಿತು ಎಂಬ ಕತೆಯೂ ಇದೆ. ರುದ್ರ ಹೊರಬಿದ್ದನೆಂದು ಹೇಳಲಾದ ಸ್ಥಳದಲ್ಲಿ ಈಗಲೂ ಒಂದು ಕುಂಡವನ್ನು ಕಾಣಬಹುದು. ಅಲ್ಲೊಂದು ಶಿವಲಿಂಗ ಸ್ಥಾಪಿಸಲಾಗಿದೆ. ಇದನ್ನು ಆದಿ ಗೋಕರ್ಣ ಎಂದು ಕರೆಯುತ್ತಾರೆ.

ಗೋಕರ್ಣ ತೀರ್ಥಗಳು
ಕರ್ನಲ್ ಮೆಕೆಂಜಿ ಸಂಗ್ರಹಿಸಿದ ಗೋಕರ್ಣದ ಕೈಫಿಯತ್ನಲ್ಲಿ ಇಲ್ಲಿನ ತೀರ್ಥಗಳ ಬಗ್ಗೆಯೂ ಪ್ರಸ್ತಾಪವಿದೆ. ಇಲ್ಲಿ 33 ಕೋಟಿ ದೇವತೆಗಳಿಗೆ 33 ತೀರ್ಥಗಳಿವೆ. ಇವುಗಳನ್ನು ನಾಯಕ ತೀರ್ಥ ಎಂದು ಕರೆಯಲಾಗುತ್ತದೆ.

ಗೋಕರ್ಣತೀರ್ಥ. ಇದು ಮಹಾಬಲೇಶ್ವರನ ಗುಡಿಯ ಒಳಗೇ ಇದೆ. ಗುಹತೀರ್ಥ, ತಾಮ್ರಪರ್ಣಿ, ಗಾಯತ್ರಿ ತೀರ್ಥ, ವಿಶ್ವಾಮಿತ್ರ ತೀರ್ಥ, ಬ್ರಹ್ಮತೀರ್ಥ, ಸರಸ್ವತಿ ತೀರ್ಥ, ಗಂಗಾ ಸಾಗರ, ಚಕ್ರತೀರ್ಥ, ಕಪಿಲ ತೀರ್ಥ, ಅರಣ್ಯಾತೀರ್ಥ, ಅಗ್ನಿ ತೀರ್ಥ, ವಿನಾಯಕ ತೀರ್ಥ, ಕುಬೇರ ತೀರ್ಥ, ಸಂವರ್ತಕ ವಾಪಿ ತೀರ್ಥ, ಆದಿತ್ಯ ತೀರ್ಥ, ಮಾರ್ಕಂಡೇಯ ತೀರ್ಥ, ದುರ್ಗಾಕೊಂಡ ತೀರ್ಥ, ನಾಗತೀರ್ಥ, ಕೋಟಿತೀರ್ಥ, ಉನ್ಮಜ್ಜನ ತೀರ್ಥ, ವೈತರಣಿ, ಅಶೋಕ ಪಂಚ ತೀರ್ಥ, ಗಂಗಾಧಾರಾ, ಅಗಸ್ತ್ಯ ತೀರ್ಥ, ವಶಿಷ್ಟ ತೀರ್ಥ, ಗರುಡ ತೀರ್ಥ, ಮಾಲಿನಿ ನದಿ, ಶಿಂಶುಮಾರ ತೀರ್ಥ, ಶತಬಿಂದು ಸಹಸ್ರ ಬಿಂದು ತೀರ್ಥ, ನಾದತೀರ್ಥ.

ಹೀಗೆ ಇಲ್ಲಿರುವ ತೀರ್ಥಗಳನ್ನು ಸರಿಯಾಗಿ ಬಳಸಿಕೊಂಡರೆ ಗೋಕರ್ಣಕ್ಕೆ ನೀರಿನ ತೊಂದರೆಯೇ ಇರುವುದಿಲ್ಲ. ಆದರೆ ತೀರ್ಥಗಳ ನಿರ್ವಹಣೆ ಇಲ್ಲದೆ ಎಲ್ಲವೂ ಹಾಳಾಗಿವೆ. ಕೋಟಿತೀರ್ಥವಂತೂ ಕೊಳೆತು ನಾರುತ್ತಿದೆ. ಕೋಟಿ ತೀರ್ಥದಲ್ಲಿ ಸ್ನಾನ ಮಾಡಿದರೆ ಪಾಪಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಜನರಲ್ಲಿ ಇದೆ. ಆದರೆ ಈಗ ಇಲ್ಲಿರುವ ಕೋಟಿತೀರ್ಥದಲ್ಲಿ ಸ್ನಾನ ಮಾಡಿದರೆ ಚರ್ಮರೋಗ ಬರುವಂತಿದೆ. ಅದನ್ನು ಸ್ವಚ್ಛ ಮಾಡುವ ಯತ್ನ ಇನ್ನೂ ಸಫಲವಾಗಿಲ್ಲ.

ಹಾಲಕ್ಕಿ ಒಕ್ಕಲಿಗರ ತರಕಾರಿ: ಗೋಕರ್ಣದ ಸಮುದ್ರತೀರದ ಬೇಲೆಹಿತ್ಲು, ರುದ್ರಪಾದ, ಬಿಜ್ಜೂರು, ಹುಣಸೆಕೇರಿ, ಸಣ್ಣಬಿಜ್ಜೂರು, ಬಾವಿಕೊಡ್ಲು, ಬೇಲೆಗದ್ದೆ, ಬಿದ್ರಕೇರಿ, ನಾಡಮಾಸ್ಕೇರಿ, ಬಂಕಿಕೊಡ್ಲು, ಹನೇಹಳ್ಳಿ, ಹಾರುಮಸ್ಕೇರಿ, ಕಡಮೆ, ಹೊಸ್ಕೇರಿ, ಬೋಳ್ತಿಪ್ಪೆ ಮುಂತಾದ ಪ್ರದೇಶಗಳಲ್ಲಿ ತರಕಾರಿ ಬೆಳೆಯಲಾಗುತ್ತದೆ.

ಇಲ್ಲಿ ಸುಮಾರು 1500ಎಕರೆ ಕ್ಷೇತ್ರದ ಭತ್ತದ ಗದ್ದೆಗಳಲ್ಲಿ ಬೇಸಿಗೆಯಲ್ಲಿ ಹಾಲಕ್ಕಿ ಬುಡಕಟ್ಟು ಸಮುದಾಯ ಶತಮಾನಗಳಿಂದಲೂ ಹರಿವೆ, ಬದನೆ, ಮೆಣಸು, ಗೆಣಸು, ಪಡುವಲ ಎಂದು ತರತರಹದ ತರಕಾರಿ ಬೆಳೆಯುತ್ತಾರೆ. ಆದರೆ ಸ್ಥಳೀಯ ಮಾರುಕಟ್ಟೆ ಕೊರತೆಯೂ ಇದೆ. ಜೊತೆಗೆ ಪ್ರವಾಸೋದ್ಯಮದ ಆದಾಯ ಬಣ್ಣದ ಕನಸನ್ನು ಬಿತ್ತಿದ್ದರಿಂದ ನಿಧಾನಕ್ಕೆ ತರಕಾರಿ ಮಾಯವಾಗುತ್ತಿದೆ.

ಗಾಂಧಿಗಿಂತ ಮೊದಲು: ಗೋಕರ್ಣದ ಮಹಾಬಲೇಶ್ವರ ಜನಸಾಮಾನ್ಯರ ದೇವರು. ಇಲ್ಲಿ ಯಾವುದೇ ಜಾತಿ, ಧರ್ಮದ ಭೇದವಿಲ್ಲ. ಯಾರು ಬೇಕಾದರೂ ದೇವಾಲಯದೊಳಕ್ಕೆ ಹೋಗಬಹುದು. ಗರ್ಭಗುಡಿ ಪ್ರವೇಶ ಮಾಡಿ ದೇವರನ್ನು ಮುಟ್ಟಬಹುದು. ಇಂತಹ ವ್ಯವಸ್ಥೆ ಬೇರೆ ಕಡೆ ಇಲ್ಲ. ದೇಶದಲ್ಲಿ ದೇವಾಲಯಗಳಿಗೆ ದಲಿತರ ಪ್ರವೇಶ ಇಲ್ಲದಿರುವುದನ್ನು ಮನಗಂಡು ದೇವಾಲಯಕ್ಕೆ ಹರಿಜನರ ಪ್ರವೇಶದ ಆಂದೋಲನವನ್ನು ಮಹಾತ್ಮಾ ಗಾಂಧೀಜಿ ಆರಂಭಿಸಿದರು. ಆ ಚಳವಳಿ ಕರಾವಳಿ ಭಾಗದಲ್ಲಿಯೂ ನಡೆಯಿತು. ಅದರಂತೆ ಚಳವಳಿಗಾರರು ಹರಿಜನರನ್ನು ದೇವಾಲಯ ಪ್ರವೇಶಿಸುವುದಕ್ಕೆ ಇಲ್ಲಿಗೂ ಕರೆ ತಂದರು. ಆದರೆ ಇಲ್ಲಿ ಮೊದಲಿನಿಂದಲೂ ದೇವಾಲಯಕ್ಕೆ ಅವರಿಗೆ ಪ್ರವೇಶ ಇತ್ತು.

ಮಾದಕ ವಸ್ತು ಪೂರೈಕೆ ತಡೆಗೆ ಕ್ರಮ
ಗೋಕರ್ಣದಲ್ಲಿ ಮಾದಕ ವಸ್ತುಗಳ ಮಾರಾಟವನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಹಲವು ಕ್ರಮ ತೆಗೆದುಕೊಂಡಿದೆ. ಈ ಭಾಗದಲ್ಲಿ ಮಾಹಿತಿದಾರ ರನ್ನು ಇಟ್ಟಿದ್ದೇವೆ. ಮಾದಕ ವಸ್ತುಗಳ ಪೂರೈಕೆ ಯನ್ನು ನಿಯಂತ್ರಿಸಲು ವಿಶೇಷ ತಂಡ ವೊಂದನ್ನು ರಚಿಸಲಾಗಿದೆ. ಈ ತಂಡವು ಪ್ರಮುಖ ಸ್ಥಳಗಳಲ್ಲಿ ಗಸ್ತು ತಿರುಗುತ್ತದೆ. ಅಲ್ಲದೇ ಇಲ್ಲಿನ ಕಡಲ ತೀರಗಳು, ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್ ಹಾಗೂ ಹೋಂ ಸ್ಟೇಗಳ ಮೇಲೆ ಕಣ್ಗಾವಲು ಇಡಲಾಗಿದೆ. ಆಗಾಗ ಚಿಕ್ಕ ಪುಟ್ಟ ವ್ಯಾಪಾರಿಗಳು ಸಿಕ್ಕಿಬೀಳುತ್ತಿರು ತ್ತಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಗೋವಾ, ಚೆನ್ನೈ ಮುಂತಾದ ಕಡೆಗಳಿಂದ ಮಾದಕ ವಸ್ತುಗಳು ಇಲ್ಲಿಗೆ ಪೂರೈಕೆಯಾಗುವ ಬಗ್ಗೆ ಮಾಹಿತಿ ಇದೆ. ಮುಖ್ಯ ಆರೋಪಿಗಳನ್ನು ಹಿಡಿಯಲು ಬಲೆ ಬೀಸಿದ್ದೇವೆ.
–ಕೆ.ಜಿ. ದೇವರಾಜ್ , ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಉತ್ತರ ಕನ್ನಡ ಜಿಲ್ಲೆ

4ನೇ ಶತಮಾನದಲ್ಲಿ ಬಂದ ಭಟ್ಟರು
ಈಗ ಗೋಕರ್ಣದ ಪಟ್ಟಣ ಇರುವ ಜಾಗ ಮೊದಲು ಹುಲುಸಾದ ಬೆಳೆ ಬೆಳೆಯುವ ಗದ್ದೆಯಾಗಿತ್ತು. ಇಲ್ಲಿ ಕೆಲವು ದೇವಾಲಯಗಳು ಬಿಟ್ಟರೆ ಮತ್ತೆ ಯಾವುದೇ ಮನೆಗಳು ಇರಲಿಲ್ಲ. ದೋಣಿಯಲ್ಲಿ ಬಂದ ವೈದಿಕರು ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹೋಗುತ್ತಿದ್ದರು. ಕೂಡ್ಲೆ, ಬ್ರಹ್ಮನ ಕಾನು, ಕೂಜನಿ ಬೆಟ್ಟದ ಮೇಲೆ ಕೆಲವು ಮನೆಗಳಿದ್ದವು.

ಕ್ರಿ.ಶ. 4ನೇ ಶತಮಾನದಲ್ಲಿ ಕದಂಬ ರಾಜ ಮಯೂರ ವರ್ಮನ ಕಾಲದಲ್ಲಿ ಕೆಲವು ಹವ್ಯಕ ಬ್ರಾಹ್ಮಣರನ್ನು ದೇವಾಲಯದ ಪೂಜೆಗೆ ನೇಮಿಸಲಾಯಿತು. ಮಯೂರ ವರ್ಮನ ಮಗ ತ್ರಿನೇತ್ರ ಕದಂಬ ಈ ಪ್ರಾಂತ್ಯದ ಆಗಿನ ದೊರೆ ಚಂಡಸೇನನ ಮಗ ಲೋಕಾದಿತ್ಯನಿಗೆ ತನ್ನ ತಂಗಿ ಕನಕಾವತಿಯನ್ನು ಕೊಟ್ಟು ಮದುವೆ ಮಾಡಿ ಬಾಂಧವ್ಯ ಬೆಳೆಸಿದ್ದೇ ಅಲ್ಲದೆ ಇಲ್ಲಿನ ಬ್ರಾಹ್ಮಣರಿಗೆ ಉಪಟಳ ನೀಡುತ್ತಿದ್ದ ಹುಬ್ಬಾಸಿಕ ದಸ್ಯು ತಂಡಗಳನ್ನು ನಾಶ ಮಾಡಿದ. ನಂತರ ವಿಜಯನಗರ ಅರಸರ ಕಾಲದಲ್ಲಿ ಮಂತ್ರಿಗಳಾಗಿದ್ದ ಮಾಧವಾಚಾರ್ಯರು (ವಿದ್ಯಾರಣ್ಯ ಯತಿ) ಗೋಕರ್ಣ ಕ್ಷೇತ್ರದ ಬ್ರಾಹ್ಮಣರಿಗೆ ನಿಗದಿತ ಆದಾಯ ಇಲ್ಲದೇ ಇರುವುದರಿಂದ ಘಟ್ಟದ ಮೇಲಿನ ಬ್ರಾಹ್ಮಣ ಕುಟುಂಬಗಳು ಇಂತಿಷ್ಟು ಎಂದು ಹಣ ನೀಡುವ ಪದ್ಧತಿಯನ್ನು ಜಾರಿಗೆ ತಂದರು. ಗುರು–ಶಿಷ್ಯ ಪರಂಪರೆಯನ್ನು ಹುಟ್ಟು ಹಾಕಿದರು.

ಕ್ಷೇತ್ರ ಪೌರೋಹಿತ್ಯದ ವ್ಯವಸ್ಥೆ ಮಾಡಿದರು. ವಿಜಯನಗರದ ಬುಕ್ಕರಾಜನು ಇಲ್ಲಿಗೆ ಬಂದು ಪೂಜೆ ಸಲ್ಲಿಸಿ ಹೋಗಿದ್ದಾನೆ. ಛತ್ರಪತಿ ಶಿವಾಜಿ ಮಹಾರಾಜ್ ಕೂಡ ಇಲ್ಲಿಗೆ ಬಂದು ಆತ್ಮಲಿಂಗವನ್ನು ಪೂಜಿಸಿ ಇಲ್ಲಿನ ವಿದ್ವಾಂಸರನ್ನು ಸನ್ಮಾನಿಸಿದ ಬಗ್ಗೆ ದಾಖಲೆಗಳು ಇವೆ. ಶಿವಾಜಿ ಇಲ್ಲಿಗೆ ಬಂದಾಗ ವೇದ ಶಾಸ್ತ್ರಾದಿ ಪ್ರಾಚೀನ ವಿದ್ಯೆಯನ್ನು ಕಲಿಸುವ ಪೀಠ ಇಲ್ಲಿ ಇತ್ತು. ಅಲ್ಲದೆ ಪ್ರಖ್ಯಾತ ವಿದ್ವಾಂಸರೂ ಇಲ್ಲಿದ್ದರು. ಕ್ರಿಸ್ತ ಶಕ ಮೊದಲ ಶತಮಾನದಲ್ಲಿಯೇ ಅರಬ್ ಯಾತ್ರಿಕರು ಇಲ್ಲಿಗೆ ಬಂದ ಉಲ್ಲೇಖವಿದೆ. ಟಿಪ್ಪೂ ಸುಲ್ತಾನನ ಪತನದ ನಂತರ ಭಾರತಕ್ಕೆ ಬಂದ ಬುಕಾನಿನ್ ಈ ಪ್ರಾಂತ್ಯದಲ್ಲಿ ಸಾಕಷ್ಟು ಸಂಚಾರ ಮಾಡಿದ್ದ. ಅವನ ಡೈರಿಯಲ್ಲಿ ಗೋಕರ್ಣದ ವಿಶೇಷತೆಗಳ ಬಗ್ಗೆ ಉಲ್ಲೇಖವಿದೆ.

ಸರ್ಕಾರದ ಮೇಲೆ ಆಕ್ರೋಶ
ಗೋಕರ್ಣದ ಶಾಸನ, ಶಿಲ್ಪಕಲೆಗಳು ಇಲ್ಲಿನ ಬೀದಿ, ಮನೆ, ಹಿತ್ತಲು ಮೂಲೆಗಳಲ್ಲಿ ಅಡಗಿವೆ. ಇವುಗಳನ್ನು ಸುಸ್ಥಿತಿಯಲ್ಲಿಡುವ ಪ್ರಯತ್ನವಾಗಿಲ್ಲ. ಕಿರಿದಾದ ಬೀದಿ, ಇಕ್ಕಟ್ಟಿನ ಓಣಿಯಲ್ಲಿ ವಸತಿ ಸಮಸ್ಯೆಯಿದೆ. ಇದರ ನಿವಾರಣೆಗೆ ಯತ್ನ ನಡೆದಿಲ್ಲ. ವಾಹನ ನಿಲುಗಡೆಗೆ ಸರಿಯಾದ ಜಾಗವಿಲ್ಲ.

ಈಗ ಕ್ಷೇತ್ರ ದರ್ಶನವೆಂದರೆ ಮಹಾಬಲೇಶ್ವರ ದೇಗುಲ, ಕೋಟಿತೀರ್ಥ ಹೀಗೆ ಕೆಲವೇ ಕೆಲವು ಸ್ಥಳಕ್ಕೆ ಹೋಗುವವರ ಸಂಖ್ಯೆ ಜಾಸ್ತಿ. ಅಲ್ಲಿಯೂ ಸ್ವಚ್ಛತೆ ಇಲ್ಲ. ಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರ ಮಠ ವಹಿಸಿಕೊಂಡ ನಂತರ ದೇವಾಲಯದಲ್ಲಿ ಸ್ವಚ್ಛತೆ ಇದೆ.
ಗೋಕರ್ಣದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಂಡಿಲ್ಲ. ಎಲ್ಲಿಯೂ ಪ್ರವಾಸಿಗರ ಸುರಕ್ಷತೆಗೆ ಆದ್ಯತೆಯೇ ಇಲ್ಲ. ಹೀಗೆ ಸಮಸ್ಯೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ರಾಜ್ಯ ಸರ್ಕಾರ, ಅದರಲ್ಲೂ ಮುಖ್ಯವಾಗಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಅಂದಹಾಗೆ ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರೇ ಪ್ರವಾಸೋದ್ಯಮ ಸಚಿವರೂ ಆಗಿದ್ದಾರೆ.

ನಮ್ಮವರಿಗಿಂತ ಅವರೇ ಒಳಿತು!
ವಿದೇಶಿ ಪ್ರವಾಸಿಗರು ಮತ್ತು ಹಿಪ್ಪಿಗಳು ಬಂದಿದ್ದರಿಂದ ಗೋಕರ್ಣದ ವಾತಾವರಣ ಹಾಳಾಯಿತು ಎಂಬ ಭಾವನೆ ಇದ್ದರೂ ಇಲ್ಲಿನ ಜನ ಇದನ್ನು ಸಂಪೂರ್ಣವಾಗಿ ಒಪ್ಪುವುದಿಲ್ಲ. ವಿದೇಶಿಗರು ಬಂದಿದ್ದರಿಂದ ಅನುಕೂಲವೇ ಆಯಿತು, ನಮ್ಮ ಜೀವನ ಮಟ್ಟ ಸುಧಾರಿಸಿತು. ವಿದೇಶಿಗರು ನಮಗೆ ಏನೂ ತೊಂದರೆ ಕೊಡುವುದಿಲ್ಲ. ಕೈತುಂಬ ಹಣ ನೀಡುತ್ತಾರೆ. ನಮ್ಮ ಪುರಾಣ ಪುಣ್ಯ ಕತೆಗಳನ್ನು ಶ್ರದ್ಧೆಯಿಂದ ಕೇಳುತ್ತಾರೆ. ಯೋಗಾಭ್ಯಾಸ, ಪ್ರಾಣಾಯಾಮ ಕಲಿಯುತ್ತಾರೆ. ಆಯುರ್ವೇದದಲ್ಲಿಯೂ ಆಸಕ್ತಿ ತೋರುತ್ತಾರೆ. ಸ್ಥಳೀಯ ಉತ್ಪನ್ನಗಳನ್ನು ಖರೀದಿ ಮಾಡುತ್ತಾರೆ. ತೊಂದರೆ ಇರುವುದು ನಮ್ಮವರಿಂದಲೇ ಎಂಬ ಭಾವನೆ ಗೋಕರ್ಣದ ಹಲವರಲ್ಲಿದೆ.

ವಿದೇಶಿಗರನ್ನು ನೋಡಲು ಬರುವ ಭಾರತೀಯರು ಕಪಿಗಳಂತೆ ನಡೆದುಕೊಳ್ಳುತ್ತಾರೆ. ಹಗಲು ಹೊತ್ತಿನಲ್ಲಿಯೇ ಕುಡಿದು ಕುಪ್ಪಳಿಸುವ ಇವರಿಗೆ ದೇವರ ಭಯ ಕೂಡ ಇಲ್ಲ. ರಥ ಬೀದಿಯಲ್ಲಿಯೇ ಕುಡಿದು ತೇಲಾಡುತ್ತಾರೆ. ಶನಿವಾರ, ಭಾನುವಾರ, ಸರ್ಕಾರಿ ರಜಾ ದಿನಗಳಲ್ಲಿ ನಮ್ಮ ಪ್ರವಾಸಿಗರ ಸಂಖ್ಯೆ ಹೆಚ್ಚು. ಹೀಗೆ ಇಲ್ಲಿಗೆ ಬಂದವರು ಆತ್ಮಲಿಂಗ ದರ್ಶನ ಮಾಡುವುದಿಲ್ಲ. ಬೀಚ್ಗಳಲ್ಲಿ ಬಿದ್ದು ಮೋಜು ಮಸ್ತಿಯಲ್ಲಿ ನಲಿಯುತ್ತಾರೆ. ಎಷ್ಟೋ ಬಾರಿ ತಂದೆ ತಾಯಿಗಳಿಗೆ ತಮ್ಮ ಮಕ್ಕಳು ಗೋಕರ್ಣಕ್ಕೆ ಹೋಗಿದ್ದಾರೆ ಎನ್ನುವುದೇ ಗೊತ್ತಿರುವುದಿಲ್ಲ. ಇಲ್ಲಿ ಏನಾದರೂ ಅವಘಡ ನಡೆದರೆ ಮಾತ್ರ ಅವರಿಗೆ ತಮ್ಮ ಮಕ್ಕಳು ಗೋಕರ್ಣಕ್ಕೆ ಹೋಗಿದ್ದರು ಎನ್ನುವುದು ಗೊತ್ತಾಗುತ್ತದೆ.

ಭಾರತೀಯ ಯುವತಿಯರೇ ಈಗ ಇಲ್ಲಿ ಅರೆಬರೆ ವಸ್ತ್ರ ತೊಟ್ಟು ತಿರುಗುತ್ತಾರೆ. ಯುವಕ ಯುವತಿಯರು ಅಸಭ್ಯ ರೀತಿಯಲ್ಲಿ ವರ್ತಿಸುತ್ತಾರೆ. ಅವರನ್ನು ನಿಯಂತ್ರಿಸುವುದೇ ಕಷ್ಟವಾಗಿದೆ. ವಿದೇಶಿ ಪ್ರವಾಸಿಗರು ಬಂದು ಇಲ್ಲಿ ತಿಂಗಳುಗಟ್ಟಲೆ ಉಳಿದುಕೊಳ್ಳುತ್ತಾರೆ. ಆದರೆ ನಮ್ಮ ಪ್ರವಾಸಿಗರು ಹೀಗೆ ಬಂದು ಹಾಗೆ ಹೋಗುತ್ತಾರೆ. ಅದರಿಂದ ನಮ್ಮವರಿಗಿಂತ ವಿದೇಶಿಗರೇ ಮೇಲು ಎಂಬ ಭಾವನೆ ಇಲ್ಲಿನ ಜನರದ್ದು.

ವಿಧವೆಯರ ಪ್ರವೇಶ
ಮೊದಲು ಇಲ್ಲಿ ವಿಧವೆಯರಿಗೆ ದೇವಾಲಯದೊಳಕ್ಕೆ ಪ್ರವೇಶ ಇರಲಿಲ್ಲ. ಇದನ್ನು ರಾಮಮ್ಮ ಎಂಬ ವಿಧವೆ ಪ್ರಶ್ನೆ ಮಾಡಿದಳು. ಪ್ರಕರಣ ಕುಮಟಾ ನ್ಯಾಯಾಲಯಕ್ಕೆ ಹೋಯಿತು. ನ್ಯಾಯಾಲಯದಲ್ಲಿಯೂ ರಾಮಮ್ಮನೇ ವಾದ ಮಾಡಿದಳು. ಅವಳ ಪ್ರಶ್ನೆ ಇಷ್ಟೆ. ಈಶ್ವರನ ಆತ್ಮಲಿಂಗವನ್ನು ರಾವಣ ತನ್ನ ತಾಯಿಗಾಗಿ ತಂದ. ಹೀಗೆ ತನ್ನ ತಾಯಿಗಾಗಿ ತಪಸ್ಸು ಆಚರಿಸಿದ ರಾವಣನ ತಾಯಿಗೆ ಆಗ ಗಂಡ ಇದ್ದನೇ? ಇಲ್ಲ ಆ ಸಂದರ್ಭದಲ್ಲಿ ರಾವಣನ ತಾಯಿಗೆ ಗಂಡ ಇರಲಿಲ್ಲ. ಅಂದ ಮೇಲೆ ಗೋಕರ್ಣಕ್ಕೆ ಮಹಾಬಲೇಶ್ವರ ಬಂದಿದ್ದೇ ಒಬ್ಬ ವಿಧವೆಗಾಗಿ. ಹೀಗೆ ವಿಧವೆಗಾಗಿ ಬಂದ ದೇವರನ್ನು ವಿಧವೆಯರು ನೋಡುವಂತಿಲ್ಲ ಎಂದರೆ ಹೇಗೆ ಎಂದು ರಾಮಮ್ಮ ಪ್ರಶ್ನಿಸಿದಾಗ ನ್ಯಾಯಾಲಯದಲ್ಲಿಯೂ ಪ್ರಕರಣ ಬಿದ್ದು ಹೋಯಿತು. ವಿಧವೆಯರಿಗೆ ದೇವಾಲಯದಲ್ಲಿ ಮುಕ್ತ ಪ್ರವೇಶ ಲಭ್ಯವಾಯಿತು.

ಕಾಶಿಗಿಂತ ಒಂದು ಗುಲಗುಂಜಿ ಹೆಚ್ಚು!
ಪುಣ್ಯ ಕ್ಷೇತ್ರಗಳಲ್ಲಿ ಕಾಶಿ ಹೆಚ್ಚೋ, ಗೋಕರ್ಣ ಹೆಚ್ಚೋ ಎಂಬ ವಾದ ಪ್ರತಿವಾದವೂ ನಡೆದಿತ್ತು. ಗೋಕರ್ಣ ಮಹಾಬಲೇಶ್ವರ ದೇವಾಲಯದ ಹಿಂಭಾಗದಲ್ಲಿ ತಾಮ್ರ ಗೌರಿ ದೇವಾಲಯವಿದೆ. ದೇವಿ ಕೈಯಲ್ಲಿ ತಕ್ಕಡಿ ಇದೆ. ಕಾಶಿ ಹೆಚ್ಚೋ, ಗೋಕರ್ಣ ಹೆಚ್ಚೋ ಎಂದು ಆಕೆ ತೂಗುತ್ತಿದ್ದಾಳೆ. ಕಾಶಿಗಿಂತ ಗೋಕರ್ಣವೇ ಹೆಚ್ಚಂತೆ. ಯಾಕೆಂದರೆ ಕಾಶಿಯಲ್ಲಿ ವಿಶ್ವೇಶ್ವರನಿದ್ದಾನೆ. ಗಂಗೆ ಇದ್ದಾಳೆ. ಆದರೆ ಸಮುದ್ರವಿಲ್ಲ.

ಗೋಕರ್ಣದಲ್ಲಿ ಮಹಾಬಲೇಶ್ವರ ದೇವಾಲಯದ ಪಕ್ಕದಲ್ಲಿ ತಾಮ್ರಪರ್ಣಿ ತೀರ್ಥ ಇದೆ. ಇದರಲ್ಲಿ ಚಿತಾಭಸ್ಮಗಳನ್ನು ವಿಸರ್ಜಿಸುತ್ತಾರೆ. ಮಹಾತ್ಮಾ ಗಾಂಧಿ ಅವರ ಚಿತಾಭಸ್ಮದ ಕೆಲಭಾಗವನ್ನೂ ಇಲ್ಲಿ ವಿಸರ್ಜಿಸಲಾಗಿದೆ. ಎಷ್ಟೇ ಅಸ್ಥಿ ಹಾಕಿದರೂ ಈ ತೀರ್ಥ ತುಂಬುವುದಿಲ್ಲ. ಎಲ್ಲವೂ ಕರಗಿ ಹೋಗುತ್ತದೆ. ಅದೇ ಇಲ್ಲಿನ ವಿಶೇಷತೆ.

ಅಭಿವೃದ್ಧಿಯತ್ತ ಗೋಕರ್ಣ
ಗೋಕರ್ಣ ಶ್ರೀಕ್ಷೇತ್ರ ಅಷ್ಟೇ ಅಲ್ಲ, ಪ್ರವಾಸಿ ತಾಣವಾಗಿಯೂ ಹೆಸರುವಾಸಿಯಾಗಿದೆ. ಮೂಲಸೌಕರ್ಯ ವಿಷಯದಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತಿದೆ. ಶೇ 60ರಷ್ಟು ರಸ್ತೆಗಳು ಅಭಿವೃದ್ಧಿಯಾಗುತ್ತಿವೆ. ಇಲ್ಲಿನ ಮುಖ್ಯರಸ್ತೆಯ ಡಾಂಬರೀಕರಣ ಕಾಮಗಾರಿಯು ಪ್ರಗತಿಯಲ್ಲಿದೆ.

ಒಂದು ಕೋಟಿ ರೂಪಾಯಿ ಅನುದಾನದಲ್ಲಿ ಇಲ್ಲಿನ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಜಿಲ್ಲಾ ಪಂಚಾಯ್ತಿಯಿಂದ ಅನುಮೋದನೆ ದೊರೆತಿದೆ. ಗೋಕರ್ಣ, ಕುಡ್ಲೆ ಹಾಗೂ ಓಂ ಬೀಚ್ಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ₨ 5.50 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲಿಯೇ ಅಭಿವೃದ್ಧಿ ಕಾಮಗಾರಿ ಆರಂಭವಾಗಲಿದೆ. ಈ ಮೂರು ಕಡಲತೀರಗಳಲ್ಲಿ ಹೈಮಾಸ್ಕ್ ವಿದ್ಯುದ್ದೀಪಗಳು, ರಕ್ಷಣಾ ದೋಣಿಗಳು ಮುಂತಾದ ಸೌಲಭ್ಯಗಳು ಬರಲಿವೆ. ಇಲ್ಲಿನ ಕಡಲತೀರಗಳಲ್ಲಿ ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಭಾಗದಲ್ಲಿ ಗಾಂಜಾ, ಅಫೀಮು ಸರಬರಾಜು ಆಗುತ್ತಿರುವ ಬಗ್ಗೆ ಬಹಳ ಹಿಂದಿನಿಂದಲೂ ಆರೋಪಗಳು ಕೇಳಿಬರುತ್ತಲೇ ಇದೆ. ಪ್ರವಾಸೋದ್ಯಮಕ್ಕೆ ಇದು ಕಪ್ಪುಚುಕ್ಕೆ ಇದ್ದಂತೆ. ಹಾಗಾಗಿ ಪೊಲೀಸರು ಇದನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು.
–ಮಂಜುನಾಥ ವಿಠ್ಠಲ ಜನ್ನು,
ಗೋಕರ್ಣ ಗ್ರಾ.ಪಂ. ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.