ಬೆಂಗಳೂರು: ‘ನಮ್ಮ ಗ್ರಾಮದ ಹೆಣ್ಣು ಮಕ್ಕಳನ್ನು ಮದುವೆಯಾಗಲು ಜನ ಹಿಂದೇಟು ಹಾಕುತ್ತಿದ್ದಾರೆ. ಅಂತಹ ಕೆಟ್ಟ ಪರಿಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ. ಆದರೆ, ನಮ್ಮ ನೋವು ಏನು ಎಂದು ನೀವು ಕೇಳಿಸಿಕೊಳ್ಳಲು ತಯಾರಿಲ್ಲ. ಹಾಗಿದ್ದರೆ ಈ ಸಭೆ ಕರೆದಿರುವುದು ಏಕೆ?’

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ತ್ಯಾಜ್ಯ ನಿರ್ವಹಣೆ 2015ರ ನಿಯಮಗಳ ಕರಡು ತಯಾರಿಸುವ ಸಂಬಂಧ ಚರ್ಚಿಸಲು ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಕರೆದಿದ್ದ ಸಭೆಯಲ್ಲಿ ಹೀಗೆ ಪ್ರಶ್ನಿಸಿದವರು ಮಾವಳ್ಳಿಪುರದ ಶ್ರೀನಿವಾಸ್.

‘ನಿಜವಾಗಿ ಸಮಸ್ಯೆ ಎದುರಿಸುತ್ತಿರುವವರು ನಾವು ಗ್ರಾಮಸ್ಥರು. ನಮಗಾಗುತ್ತಿರುವ ತೊಂದರೆ ಏನು ಎಂದು ಮೊದಲು ನಮ್ಮನ್ನು ಕೇಳಬೇಕು. ಅಲ್ಲದೇ ಕಾರ್ಯಕ್ರಮವನ್ನು ಕನ್ನಡದಲ್ಲಿ ನಡೆಸಿ. ನೀವು ಇಂಗ್ಲಿಷ್‌ನಲ್ಲಿ ಮಾತನಾಡಿದರೆ ನಮಗೆ ಏನೂ ಅರ್ಥವಾಗುವುದಿಲ್ಲ’ ಎಂದೂ ಹೇಳಿದರು.

ಶ್ರೀನಿವಾಸ ಅವರ ಮಾತಿಗೆ ಧ್ವನಿಗೂಡಿಸಿದ ರಾಮಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಎಂ. ರಮೇಶ್ ಅವರು, ‘ನೆಲ, ಜಲ ಸೇರಿದಂತೆ ಎಲ್ಲವೂ ಕಲುಷಿತವಾಗಿದೆ. ಸುತ್ತಮುತ್ತಲಿನ 15 ಗ್ರಾಮಗಳ ಜನ ಸಾಯುತ್ತಿದ್ದಾರೆ’ ಎಂದು ಹೇಳಿದರು.

‘ತಾರಾ ಹೋಟೆಲ್‌ನಲ್ಲಿ ಸಭೆ ಕರೆದಿರುವುದೇ ತಪ್ಪು. ನಮಗೇ ಅರ್ಥವಾಗದ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುತ್ತಿದ್ದೀರಿ. ಕನ್ನಡದಲ್ಲಿ ವಿವರಿಸಲು ವ್ಯವಸ್ಥೆ ಮಾಡಿ ಇಲ್ಲದಿದ್ದರೆ ಸಭೆಯನ್ನು ರದ್ದುಪಡಿಸಿ’ ಎಂದು ಆಗ್ರಹಿಸಿದರು.

‘ತ್ಯಾಜ್ಯದಿಂದ ನಿಜವಾಗಿ ಸಮಸ್ಯೆ ಎದುರಿಸುತ್ತಿರುವವರು ಜನರು. ಹೀಗಾಗಿ ಜನರ ಅಭಿಪ್ರಾಯ ಪಡೆದುಕೊಳ್ಳಬೇಕು. ಅವರನ್ನು ಹೊರಗೆ ಇಟ್ಟು ಪಾಲುದಾರರನ್ನು ಮಾತ್ರ ಆಹ್ವಾನಿಸಿರುವುದು ತಪ್ಪು’ ಎಂದು ಎನ್ವಿರಾನ್‌ಮೆಂಟ್ ಸಪೋರ್ಟ್ ಗ್ರೂಪ್ ಸಂಯೋಜಕ ಲಿಯೊ ಸಲ್ಡಾನಾ ಅವರೂ ಆಕ್ಷೇಪ ವ್ಯಕ್ತಪಡಿಸಿದರು.

ಇದರಿಂದ ಸಿಟ್ಟಿಗಾದ ಭಾರತೀಯ ಕೈಗಾರಿಕೆಗಳ ಒಕ್ಕೂಟದ(ಸಿಐಐ) ರಾಜ್ಯ ಮಂಡಳಿ ಅಧ್ಯಕ್ಷ ಶೇಖರ್ ವಿಶ್ವನಾಥನ್ ಅವರು, ‘ಮನಸ್ಸಿಗೆ ಬಂದಂತೆ ಮಾತನಾಡಬೇಡಿ. ವಿನಾಕಾರಣ ಗೊಂದಲ ಸೃಷ್ಟಿಸಬೇಡಿ’ ಎನ್ನುತ್ತಿದ್ದಂತೆ ಸಲ್ಡಾನಾ ಅವರು ತಾಳ್ಮೆ ಕಳೆದುಕೊಂಡರು. ‘ನೀವು ನಡುವೆ ತಲೆ ಹಾಕಬೇಡಿ. ನಾವು ಸರ್ಕಾರದ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದೇವೆ’ ಎಂದು ಹೇಳಿದರು. ಇದರಿಂದ ಇಬ್ಬರ ಮಧ್ಯೆ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು.

ಈ ವೇಳೆ ಮಧ್ಯ ಪ್ರವೇಶಿಸಿದ ಸಿನ್ಹಾ ಅವರು, ‘ನನ್ನ ಮಾತು ಕೇಳಿ. ಇದು ಕೇವಲ ಪಾಲುದಾರರಿಗೆ ಸಂಬಂಧಿಸಿದ ಸಭೆ. ಕರಡಿಗೆ ಅಂತಿಮ ರೂಪ ಕೊಡಲು ಇನ್ನೂ ಸಾಕಷ್ಟು ಸಮಯ ಇದೆ. ಇದು ಪ್ರಾರಂಭ ಮಾತ್ರ. ಮೊದಲ ಹಂತದಲ್ಲಿ ಪಾಲುದಾರರ ಅಭಿಪ್ರಾಯ ತಿಳಿದುಕೊಳ್ಳಲಾಗುವುದು. ಬಳಿಕ ಆಯಾ ಪಾಲಿಕೆಗಳು, ಜನರ ಅಭಿಪ್ರಾಯಸಂಗ್ರಹಿಸಿ ರಾಜ್ಯ, ಕೇಂದ್ರಕ್ಕೆ ಕಳುಹಿಸಿಕೊಡಲಿವೆ’ ಎಂದರೂ ಪ್ರಯೋಜನವಾಗಲಿಲ್ಲ.

‘ನೀವು ನಡೆದುಕೊಳ್ಳುತ್ತಿರುವುದು ನೋಡಿದರೆ ಎಂತಹವರಿಗೂ ಸಂಶಯ ಬರುವಂತಿದೆ. ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ನಿಯಮಗಳನ್ನು ತಿಳಿಸಬೇಕೆಂದು ನ್ಯಾಯಾಲಯ ಸಹ ಹೇಳಿದೆ. ಹೀಗಿರುವಾಗ ಕೆಲವರನ್ನು ಸೇರಿಸಿಕೊಂಡು ಸಭೆ ನಡೆಸುತ್ತಿರುವ ಔಚಿತ್ಯಏನು’ ಎಂದು ಸಲ್ಡಾನಾ ಪ್ರಶ್ನಿಸಿದರು.

ಇದೆ ವೇಳೆ ಎಂ. ರಮೇಶ್, ಶ್ರೀನಿವಾಸ ಅವರ ಬೆಂಬಲಕ್ಕೆ ಇನ್ನಷ್ಟು ಜನ ಎದ್ದುನಿಂತು ವಿರೋಧ ವ್ಯಕ್ತಪಡಿಸಿದರು. ಬಳಿಕ ‘ಡೌನ್ ಡೌನ್ ಸಿಐಐ’, ‘ಕಿಕ್‌ಔಟ್ ಸಿಐಐ’ ಎಂದು ಘೋಷಣೆ ಕೂಗಲಾರಂಭಿಸಿದರು.

ಚರ್ಚೆ ಆಗಬೇಕಿತ್ತು
ಕಾರ್ಯಕ್ರಮ ಯಾರು ಆಯೋಜಿಸಿದ್ದರು ಎನ್ನುವುದು ಮುಖ್ಯವಲ್ಲ. ಅದರ ಉದ್ದೇಶ ಏನಾಗಿತ್ತು ಎಂಬುದು ಎಲ್ಲಕಿಂತ ಮುಖ್ಯವಾಗಿತ್ತು. ಏನೇ ಭಿನ್ನಾಭಿಪ್ರಾಯಗಳಿದ್ದರೂ ಎರಡೂ ಕಡೆಯವರು ಸೇರಿ ಗೊಂದಲ ಬಗೆಹರಿಸಿಕೊಳ್ಳಬೇಕಿತ್ತು. ಏಕೆಂದರೆ ಸುಮಾರು ಆರು, ಏಳು ರಾಜ್ಯಗಳಿಂದ ಜನರು ಅವರ ಅಭಿಪ್ರಾಯ ಹಂಚಿಕೊಳ್ಳಲು ಬಂದಿದ್ದರು. ಎಲ್ಲರೂ ಒಂದೆಡೆ ಕುಳಿತುಕೊಂಡು ಚರ್ಚೆ ಮುಂದುವರೆಸಬೇಕಿತ್ತು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ವಾಮನ ಆಚಾರ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.