ಶ್ಯಾಮ್ ಮನೋಹರ್ ಮರಾಠಿ ಭಾಷೆಯ ಒಬ್ಬ ಹೆಸರಾಂತ ಕಾದಂಬರಿಕಾರ. ವಿಭಿನ್ನ ದೃಷ್ಟಿಕೋನದ ನಾಟಕಕಾರ. ವಿಶಿಷ್ಟ ವೈಚಾರಿಕ. ವೃತ್ತಿಯಿಂದ ಒಬ್ಬ ವಿಜ್ಞಾನ ಪ್ರಾಧ್ಯಾಪಕ. ಪ್ರವೃತ್ತಿಯಿಂದ ಒಬ್ಬ ನಿಷ್ಣಾತ ಪತ್ರಕರ್ತ. ಮಹಾರಾಷ್ಟ್ರದ ಸಾಹಿತ್ಯ ಪ್ರೇಮಿಗಳನ್ನು, ನಾಟಕ ಪ್ರೇಮಿಗಳನ್ನು ಇನ್ನಿಲ್ಲದಂತೆ ಆಕರ್ಷಿಸಿರುವ ವಿಶಿಷ್ಟ ಬರಹಗಾರ.

ಶ್ಯಾಮ್ ಮನೋಹರ್ ಎಂಬುದು ಅವರ ಕಾವ್ಯನಾಮ. ಪೂರ್ಣ ಹೆಸರು ಶ್ಯಾಮ್ ಮನೋಹರ್ ಆಫಳೆ. ಈ ‘ಆಫಳೆ’ ಎಂಬುದು ಅವರ ಮನೆತನದ ಹೆಸರು (ಅಡ್ಡ ಹೆಸರು).

ಅಪ್ಪ ಮನೋಹರ ಆಫಳೆ ಮೂಲತಃ ಸಾತಾರಾ ಜಿಲ್ಲೆಯ ಕ್ಷೇತ್ರಮಾಹುಲಿಯ ರಹವಾಸಿ. ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಅವರು ಶಿಸ್ತಿಗೆ ಹೆಸರಾದವರು. ಶಿಕ್ಷಣದ ಮಹತ್ವವನ್ನರಿತವರು. 1941ರ ಫೆಬ್ರುವರಿ 27ರಂದು, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ತಾಸಗಾವ್ ಎಂಬಲ್ಲಿ ಜನಿಸಿದ ಶ್ಯಾಮ್ ಮನೋಹರ್ ಅಪ್ಪನ ಮಾರ್ಗದರ್ಶನದಲ್ಲಿ ಹೊಸ ಮಜಲುಗಳನ್ನೇರುತ್ತ ಬೆಳೆದರು.

ನಿರಂತರ ಕಲಿಕೆ – ಹುಡುಕಾಟ
ಸಾತಾರಾ ಜಿಲ್ಲೆಯ ಅಂಗಾಪುರ ಮತ್ತು ತಾಸಗಾವಗಳಲ್ಲಿ ಪ್ರಾಥಮಿಕ ಶಿಕ್ಷಣದ ನಂತರ, ಸಾತಾರಾದ ನ್ಯೂ ಇಂಡಿಯನ್ ಸ್ಕೂಲಿನಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿ, ಸಮೀಪದ ಕರಾಡದ ಸೈನ್ಸ್ ಕಾಲೇಜಿನಲ್ಲಿ ಬಿ.ಎಸ್ಸಿ. ಮಾಡಿ (1964), ಪುಣೆ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ. (1969) ಪದವಿ ಪಡೆದರು. ಮುಂದೆ ಚಿಪಳೂಣದ ‘ಡಾ. ದಾತಾರ ಕಾಲೇಜ್’ನಲ್ಲಿ ವಿಜ್ಞಾನದ ಉಪನ್ಯಾಸಕರಾಗಿ ಕೆಲಸ ಆರಂಭಿಸಿ, ಅಲ್ಲಿಂದ ಪುಣೆಯ ‘ಜಯಪ್ರಬೋಧಿನಿ ಮಹಾವಿದ್ಯಾಲಯ’ಕ್ಕೆ ವರ್ಗಾವಣೆಗೊಂಡರು. ಕೆಲಕಾಲಾನಂತರ ಪುಣೆಯ ಸುಪ್ರಸಿದ್ಧ ‘ಸರ್ ಪರಶುರಾಮಭಾವೂ ಮಹಾವಿದ್ಯಾಲಯ’ದಲ್ಲಿ (ಎಸ್.ಪಿ. ಕಾಲೇಜ್) ನಿವೃತ್ತಿಯ ತನಕವೂ ಪ್ರೊಫೆಸರ್ ಆಗಿ ಕೆಲಸ ಮಾಡಿದರು.

ಆರಂಭದಿಂದಲೇ ಸಾಹಿತ್ಯ ರಚನೆಯತ್ತ ಒಲವು ಬೆಳೆಸಿಕೊಂಡ ಶ್ಯಾಮ್ ಮನೋಹರ್ ಬರವಣಿಗೆ ಆರಂಭಿಸಿದ್ದು ಕಥಾ ರಚನೆಯ ಮೂಲಕವೇ. ‘ಕಾಂಪಿಟಿಶನ್’ ಅವರ ಮೊತ್ತ ಮೊದಲ ಕಥೆ. ಆ ನಂತರ ಕತೆಗಾರರಾಗಿ ಅವರದು ಒಂದು ಎತ್ತರವಾದರೆ, ಕಾದಂಬರಿಕಾರನಾಗಿ ಅವರದು ಇನ್ನೊಂದು ಎತ್ತರ. ನಾಟಕ ರಚನೆಯ ವಿಚಾರಕ್ಕೆ ಬಂದರೆ ಅವರಿಗೆ ಅವರೇ ಸಾಟಿ. ಬಡತನ, ಸಿರಿವಂತಿಕೆ, ಜಾಗತೀಕರಣ, ವಿಜ್ಞಾನ, ತಂತ್ರಜ್ಞಾನ, ಮಾನವ ಸ್ವಭಾವ ಈ ಎಲ್ಲವನ್ನೂ ಅವರ ಸೃಜನಶೀಲ ಬರಹಗಳು ನವಿರು ಹಾಸ್ಯದ ಮೂಲಕ ಬಿಂಬಿಸುತ್ತವೆ. ಒಟ್ಟಿನಲ್ಲಿ ಮನುಷ್ಯ, ಆತನ ಸ್ವಭಾವ ಮತ್ತು ಬದುಕು ಶ್ಯಾಮ್ ಮನೋಹರ್ ಅವರ ಮುಖ್ಯ ಗಮನ. ಅದನ್ನವರು ತಮ್ಮದೇ ಆದ ಶೈಲಿಯಲ್ಲಿ ಅಭಿವ್ಯಕ್ತಿಸುತ್ತಾರೆ. ಆ ಮೂಲಕ ಅದೊಂದು ರೀತಿಯಲ್ಲಿ ಅವರು ಓದುಗರ ಬುದ್ಧಿಗೆ ಕಸರತ್ತು ಕೂಡ ನೀಡುತ್ತಾರೆ.

‘‘ಮನುಕುಲದ ಅರಿವಿಗೆ ಬಾರದ ಸಂಗತಿಗಳನ್ನು ಅರಸಿಕೊಂಡು ಹೋಗಬೇಕಾದದ್ದು ಸೃಜನಶೀಲ ಬರವಣಿಗೆಯ ಲಕ್ಷ್ಯವಾಗಬೇಕು. ಶತಮಾನಗಳಿಂದ ಹೊಸ ಧರ್ಮಗಳಾವೂ ಹುಟ್ಟಿಕೊಂಡಿಲ್ಲ. ಅವೇ ಅವೇ ಹಳೆಯ ಧರ್ಮಗಳೇ ಮುಂದುವರಿಯುತ್ತಿವೆ. ಹೀಗಿದ್ದರೂ ತನ್ನ ಅಸ್ತಿತ್ವದ ಕುರಿತು, ಸ್ವಂತಿಕೆಯ ಕುರಿತು ಪ್ರತಿಯೊಬ್ಬನೂ ‘ಹುಡುಕಾಟ’ದಲ್ಲಿ ತೊಡಗಿಕೊಂಡಿರುತ್ತಾನೆ. ಈ ‘ಹುಡುಕಾಟ’ಕ್ಕೆ ಸಾಹಿತ್ಯ ನೆರವಾಗಬೇಕು’’ ಎಂಬುದು ಅವರ ಅಭಿಪ್ರಾಯ.

‘‘ಮನುಷ್ಯಸ್ವಭಾವದ ವಿಸಂಗತಿಗಳತ್ತ ಸದಾ ಬೆರಳು ಮಾಡಿ ತೋರಿಸುತ್ತ, ತೀರ ವಿಭಿನ್ನ ರೀತಿಯಲ್ಲಿ ಅದನ್ನು ಬಿಂಬಿಸುವುದು ಅವರ ಬರಹದ ಗುಣ. ಕಾದಂಬರಿ ಮುಂತಾದ ಸೃಜನಶೀಲ ಸಾಹಿತ್ಯ ಪ್ರಕಾರದ ಪರಿಭಾಷೆಯನ್ನೇ ಬದಲಿಸಿದವರು’’ ಎಂದು ಶ್ಯಾಮ್ ಮನೋಹರ್ ಕುರಿತು ವಿಮರ್ಶಕರು ಅಭಿಪ್ರಾಯಪಡುತ್ತಾರೆ.

ಸಮಾಜದ ವಿವಿಧ ಸ್ತರಗಳ ವ್ಯಕ್ತಿಗಳು, ಅವರ ನಡುವಿನ ಪರಸ್ಪರ ಸಂಬಂಧ, ಅವುಗಳಲ್ಲಿರುವ ಸುಸಂಗತ-ವಿಸಂಗತ ವಿಚಾರಗಳು ಇವೆಲ್ಲವನ್ನೂ ಮುಖ್ಯವೆಂದು ಪರಿಗಣಿಸುತ್ತ ವಿಶಿಷ್ಟ ರೀತಿಯಲ್ಲಿ ಅವುಗಳನ್ನು ವ್ಯಕ್ತಗೊಳಿಸುವುದು ಅವರ ಬರಹಗಳಲ್ಲಿ ನಮಗೆ ಎದ್ದು ಕಾಣುವ ವಿಚಾರ. ಪ್ರತಿಯೊಬ್ಬನಿಗೂ ಎದುರಾಗುವ ನೈತಿಕ ಪ್ರಶ್ನೆಗಳನ್ನು ನಮ್ಮ ಮುಂದಿರಿಸಿ, ಆ ಪರಿಸ್ಥಿತಿಯ ಗಂಭೀರತೆ ನಮ್ಮ ಅನುಭವಕ್ಕೆ ಬರುವಂತೆ ಮಾಡುವುದು ಅವರ ಕಾದಂಬರಿ ರಚನೆಯ ಲಕ್ಷಣ. ಅದು ಅವರ ವೈಶಿಷ್ಟ್ಯ ಕೂಡ.

ಅವಧೂತನಂಥ ವ್ಯಕ್ತಿ
ಅವರ ನಿಲುವು ಗಂಭೀರ. ನೋಟ ಗಂಭೀರ. ನಡಿಗೆ ಗಂಭೀರ. ಮಾತು ಗಂಭೀರ. ನಗಲು ಬರುವುದೇ ಇಲ್ಲವೇನೋ ಎಂದುಕೊಳ್ಳಬೇಕು. ಆದರೆ ಹಾಗೆ ನಮ್ಮ ಕಣ್ಣಿಗೆ ಗಂಭೀರರಾಗಿ ಕಾಣುವ ಶ್ಯಾಮ್ ಮನೋಹರರ ಕಣ್ಣಿಗೆ ಮತ್ತೇನು ಗಂಭೀರವಾದದ್ದು ಕಾಣುತ್ತಿರುತ್ತದೆಯೋ! ಇಲ್ಲಿದ್ದರೂ ಇಲ್ಲಿಲ್ಲದವರಂತೆ ಇನ್ನೆಲ್ಲಿಯೋ ವಿಹರಿಸುತ್ತಿರುವವರಂತೆ ಕಾಣುವ ಅವಧೂತನಂಥ ವ್ಯಕ್ತಿ ಶ್ಯಾಮ್ ಮನೋಹರ್.

ನಾನು ಹೈದರಾಬಾದಿನಲ್ಲಿದ್ದಾಗ, ಏಳು ವರ್ಷಗಳ ಕೆಳಗೊಮ್ಮೆ ಶ್ಯಾಮ್ ಮನೋಹರ್ ಅಲ್ಲಿಗೆ ಬಂದಿದ್ದರು. ಮಹಾರಾಷ್ಟ್ರದ ನನ್ನ ರಂಗಕರ್ಮಿ ಮಿತ್ರರೊಬ್ಬರ ಮನೆಯಲ್ಲಿ ಮೂರು ತಿಂಗಳು ಕಾಲ ಸಪತ್ನೀಕರಾಗಿ ಉಳಿದಿದ್ದರು. ಹೈದಾರಾಬಾದಿಗೆ ಅವರು ಬಂದ ಉದ್ದೇಶ ಒಂದು ಕಾದಂಬರಿ ಬರೆಯುವುದು. ‘‘ಬರವಣಿಗೆಗೆ ಕೂತರೆ ಅವರು ದೈತ್ಯನೇ ಸೈ. ಊಟ ನೀರಡಿಕೆಗಳ ಪರಿವೆಯೇ ಇಲ್ಲ.

ಆವಾಹನೆಗೊಂಡವರಂತೆ ಏನೇನೋ ಹಾವಭಾವಗಳೊಂದಿಗೆ ಸರ ಸರ ಲೇಖನಿಯನ್ನು ಹಾಳೆಯ ಮೇಲೆ ಓಡಿಸುತ್ತಾ ಇರುತ್ತಿದ್ದ ಅವರನ್ನು ಮಾತನಾಡಿಸುವ ಧೈರ್ಯವಂತೂ ನನಗಾಗುತ್ತಿರಲಿಲ್ಲ. ಇನ್ನು ಊಟದ ವಿಚಾರಕ್ಕೆ ಬಂದರೆ ನಾವು ಒಂದು ಬಾರಿಗೆ ಉಣ್ಣುವ ಸಾಮಾನ್ಯ ಊಟ ಅವರ ಪಾಲಿಗೆ ನಾಲ್ಕು ದಿನದ್ದು. ಅವರನ್ನು ಓಲೈಸಿ ಓಲೈಸಿ ಉಣ್ಣಿಸಬೇಕು. ಇನ್ನು ಲಹರಿಯಲ್ಲಿದ್ದರೆ ಅವರು ಏನೆಲ್ಲಾ ವಿಚಾರಗಳನ್ನು ಮಾತನಾಡಲು ಉಪಕ್ರಮಿಸುತ್ತಾರೆ. ಎದುರಿಗಿರುವವರು ಬಾಯಿ ತೆರೆದೇ ಕೂರಬೇಕು, ಅಂಥ ವಿಚಾರಪ್ರಚೋದಕ ವಾಗ್ಝರಿ. ಅವರ ಮಾತು ಒಮ್ಮೊಮ್ಮೆ ನಮ್ಮ ತಲೆಗಿಂತ ಎಷ್ಟೋ ಮೇಲಕ್ಕೆ ಹಾದುಹೋಗುತ್ತಿದೆ ಎಂದು ಅನಿಸಿದ್ದೂ ಉಂಟು’’ ಎಂದು ನನ್ನ ರಂಗಮಿತ್ರ ಹೇಳುತ್ತಿದ್ದರು.

ಅವರನ್ನು ಒಂದು ಸಂಜೆ ನಮ್ಮ ಮನೆಗೆ ಆಮಂತ್ರಿಸಿದೆ. ಮಹಾರಾಷ್ಟ್ರದವರೆಂದರೆ ಶ್ರೀಖಂಡ–ಪೂರಿ ಪ್ರಿಯರು ಎಂಬ ವಿಚಾರ ಗೊತ್ತಿತ್ತು. ಸಂಜೆಗೆ ಅದನ್ನೇ ಮಾಡಿಸಿದೆ. ‘ಅವರಿಗೆ ಜಾಸ್ತಿ ಹಾಕಬೇಡಿ’’ ಎಂದು ಶ್ರೀಮತಿ ಶ್ಯಾಮ್ ನನ್ನಾಕೆಗೆ ಹೇಳಿದ್ದರಿಂದ ಎರಡು ಪೂರಿ, ಒಂದು ಬಟ್ಟಲು ಶ್ರೀಖಂಡವನ್ನು ಅವರೆದುರು ಇರಿಸಿದೆ. ಅವರು ಒಮ್ಮೆ ನನ್ನನ್ನು, ಇನ್ನೊಮ್ಮೆ ಎದುರಿನ ತಟ್ಟೆ–ಬಟ್ಟಲನ್ನು ನೋಡಿದರು.

‘‘ಇಷ್ಟು ತಿಂದರೆ ನಾನು ನಾಳೆ ಸಂಜೆಯತನಕ ಮಲಗಬೇಕಾಗುತ್ತದೆ. ಹೈದರಾಬಾದಿಗೆ ನಾನು ಬಂದಿರುವುದು ಉಂಡು ಮಲಗುವುದಕ್ಕಲ್ಲ’’ ಎಂದು ಶುರು ಮಾಡಿದ ಅವರು ಆನಂತರ ಸಾಹಿತ್ಯ ರಂಗಭೂಮಿಗಳ ಕುರಿತು ಹೇಳಿದ ವಿಚಾರಗಳು ಬಲು ಮಹತ್ವದವು. ಒಡಂಬಡಬೇಕಾದ ವಿಚಾರ ಸರಣಿ ಅದು.

ಅನನ್ಯ ಪಾತ್ರಗಳು
ಈ ಹೆಸರಾಂತ ಕಾದಂಬರಿಕಾರ – ನಾಟಕಕಾರ ಪ್ರಸ್ತುತಪಡಿಸುವ ಪ್ರಸಂಗಗಳು, ಎದುರು ನಿಲ್ಲಿಸುವ ಪಾತ್ರಗಳಾದರೂ ಎಂಥವು? ನಿಮಗೆ ಅನ್ಯತ್ರ ಎಲ್ಲೂ ಕಾಣ ಸಿಗದಂಥವು. ಹೌದು. ಅದು ನಾಟಕವೇ ಇರಲಿ, ಕಾದಂಬರಿಯೇ ಇರಲಿ ಅಲ್ಲಿ ಕೆಲವೊಮ್ಮೆ ನಮ್ಮ ದೇಹದ ಅಂಗಾಂಗಗಳೇ ಕಥಾನಾಯಕನಾಗಿ ನಿಲ್ಲುತ್ತವೆ. ಉದಾಹರಣೆಗೆ ಅವರ ಕಾದಂಬರಿ ‘ಕಳ’ (ಮಿದುಳು). ಇಲ್ಲಿ ‘ಮಿದುಳು’ ಕೇಂದ್ರಸ್ಥಾನ ಪಡೆಯುತ್ತದೆ.

ರಾಜಕಾರಣ, ಅಧ್ಯಾತ್ಮ, ಸ್ತ್ರೀಪುರುಷ ಸಂಬಂಧ, ಭಾಷೆ ಮತ್ತು ಸಾಹಿತ್ಯ ಮುಂತಾದ ಅನೇಕ ರೀತಿಯ ಯೋಚನೆ, ಯೋಜನೆ, ಆಲೋಚನೆಗಳಿಗೆ ಭೂಮಿಕೆಯೊದಗಿಸುವ ಅದನ್ನು ಹೊತ್ತಂಥವನ ಸ್ಥಿತಿ ಏನು ಎನ್ನುವ ಪ್ರಶ್ನೆ ಎದುರಾಗುತ್ತದೆ. ಈ ರೀತಿಯ ಕಥನ ಬೇರಾವ ಭಾಷೆಯ ಕಾದಂಬರಿ ಪ್ರಪಂಚದಲ್ಲಿ ನಮಗೆ ದೊರಕಲು ಸಾಧ್ಯವೇ ಇಲ್ಲ. ‘ಕಳ’ ಕಾದಂಬರಿಯನ್ನು ಓದುವುದೇ ಒಂದು ಅನುಭವ. ಆ ಅನುಭವವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದು ಪತ್ರಿಕೆಗಳು ಪ್ರಶಂಸಿಸಿವೆ.

‘ಯಕೃತ್’, ‘ಶೀತಯುದ್ಧ ಸದಾನಂದ’, ‘ಹೇ ಈಶ್ವರರಾವ್ ಹೇ ಪುರುಷೋತ್ತಮರಾವ್’ ಈಗಾಗಲೇ ಕನ್ನಡದಲ್ಲಿ ಪ್ರಕಟವಾಗಿ ಜನಪ್ರಿಯವಾಗಿವೆ. ‘ಯಕೃತ್’ ಕನ್ನಡವಲ್ಲದೇ ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಗಳಿಗೂ ಅನುವಾದಗೊಂಡಿದೆ. ‘ಖೂಪ್ ಲೋಕ್ ಆಹೇತ್’ ಕಾದಂಬರಿಯು ಹಿಂದಿಗೆ ‘ಬಹುತ್ ಲೋಗ್ ಹೈಂ’ ಎಂಬುದಾಗಿ ತರ್ಜುಮೆಗೊಂಡಿದೆ. ಅಲ್ಲದೇ ಅವರ ಕೆಲವು ಕೃತಿಗಳು ಗುಜರಾತಿ, ಬಂಗಾಲಿ, ಉರ್ದು, ಸಿಂಧಿ, ಇಂಗ್ಲಿಷ್ ಭಾಷೆಗಳಲ್ಲಿ ಅನುವಾದಗೊಂಡಿವೆ. ‘ದೇವಿ ಅಹಲ್ಯಾಬಾಯಿ’ ಎಂಬ ಅವರ ಕೃತಿ ಚಲನಚಿತ್ರವೊಂದಕ್ಕೆ ಮೂಲ ಕಥೆಯನ್ನು ಒದಗಿಸಿದೆ. ಅವರ ಕೆಲವು ಕೃತಿಗಳು ಮಹಾರಾಷ್ಟ್ರದ ವಿಶ್ವವಿದ್ಯಾಲಯಗಳಿಗೆ ಪಠ್ಯ ಪುಸ್ತಕಗಳಾದದ್ದೂ ಇದೆ.

ಮಹಾರಾಷ್ಟ್ರ ಸರಕಾರದ ‘ರಾಮ ಗಣೇಶ ಗಡಕರಿ ಪುರಸ್ಕಾರ’, ‘ಉತ್ಸುಕನೇನೆ ಮೀ ಝೋಪಲೋ’ ಕಾದಂಬರಿಗಾಗಿ ಸಾಹಿತ್ಯ ಅಕಾಡೆಮಿ ಪುರಸ್ಕಾರ, ದಿಲ್ಲಿಯ ‘ಕುಸುಮಾಂಜಲಿ ಸಾಹಿತ್ಯ ಸನ್ಮಾನ’, ‘ಮಹಾರಾಷ್ಟ್ರ ಫೌಂಡೇಶನ್’ನಿಂದ ಸಾಹಿತ್ಯ ಸೇವೆಗಾಗಿ ನೀಡಲ್ಪಡುವ ‘ಜೀವಮಾನ ಸಾಧನಾ ಪುರಸ್ಕಾರ’ ಸೇರಿದಂತೆ ಶ್ಯಾಮ್ ಮನೋಹರ್ ಅವರನ್ನು ಹಲವು ಗೌರವ ಪುರಸ್ಕಾರಗಳು ಅರಸಿಕೊಂಡು ಬಂದಿವೆ. ಈಗ ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’ದ ಮೂಲಕ ಶ್ಯಾಮ್ ಮನೋಹರ್ ಕನ್ನಡ ಸಾರಸ್ವತ ಲೋಕಕ್ಕೆ ಆಪ್ತರಾಗಿದ್ದಾರೆ.

ಬರವಣಿಗೆಯ ಬೀಸು
‘ಹೇ ಈಶ್ವರರಾವ್ ಹೇ ಪುರುಷೋತ್ತಮರಾವ್’, ‘ಶೀತಯುದ್ಧ ಸದಾನಂದ’, ‘ಕಳ’ (ಮಿದುಳು), ‘ಖೂಪ್ ಲೋಕ್ ಆಹೇತ್’ (ಬಹಳ ಜನರಿದ್ದಾರೆ)’, ‘ಉತ್ಸುಕತೇನೆ ಮೇ ಝೋಪಲೋ’ (ನಾನು ಉತ್ಸುಕತೆಯಿಂದ ಮಲಗಿದೆ), ‘ಖೇಖಸತ್ ಮ್ಹಣಣೆ ಐ ಲವ್ ಯೂ’ (ಖೇಕರಿಸುವುದರ ಅರ್ಥ ಐ ಲವ್ ಯೂ ಅಂತ), ‘ಶಂಭರ್ ಮೀ’ (ನೂರಾರು ನಾನು), ‘ಕೋಸಲ’– ಇವೆಲ್ಲ ಅವರ ಕಾದಂಬರಿಗಳು.

‘ದೋನ್ಹೀ : ಆಣಿ ಬಾಕೀಚೆ ಸಗಳೇ ಬಿನಮೌಜೇಚ್ಯಾ ಗೊಷ್ಥೀ (ಇಬ್ಬರೇ : ಮತ್ತು ಉಳಿದ ಎಲ್ಲವೂ ಮೋಜಿಲ್ಲದ ಗೋಷ್ಠಿ), ‘ಪ್ರೇಮ್ ಆಣಿ ಖೂಪ್ ಖೂಪ್ ನಂತರ್’ (ಪ್ರೇಮ ಮತ್ತು ಬಹು ಅಂತರದ ನಂತರ)– ಇವು ಅವರ ಕಥಾಸಂಗ್ರಹಗಳು.

‘ದರ್ಶನ’, ‘ಪ್ರಿಯಾಂಕಾ ಆಣಿ ದೋನ್ ಚೋರ್’ (ಪ್ರಿಯಾಂಕಾ ಮತ್ತು ಇಬ್ಬರು ಚೋರರು), ‘ಪ್ರೇಮಾಚಿ ಗೋಷ್ಟ್’ (ಪ್ರೇಮದ ಕಥೆ), ‘ಯಕೃತ್’, ‘ಏಳಕೋಟ್’, ‘ಸನ್ಮಾನ್ ಹೌಸ್’, ‘ಹೃದಯ’– ಇವು ಅವರ ನಾಟಕಗಳು. ಶ್ಯಾಮ್ ಮನೋಹರ್ ಅವರ ‘ಶಂಭರ್ ಮೀ’ ಕಾದಂಬರಿಯನ್ನು ಎರಡು ವರ್ಷಗಳ ಹಿಂದೆ ಕೊಲ್ಹಾಪುರದ ಹವ್ಯಾಸಿ ನಾಟಕ ತಂಡವೊಂದು ನಾಟಕವಾಗಿ ರೂಪಾಂತರಿಸಿ ಅಭಿನಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.