ನಿ ನ್ನೆ ಇಲ್ಲಿ ನಡೆದ ಬೌದ್ಧ ಧರ್ಮ ಸ್ವೀಕಾರದ ಕಾರ್ಯಕ್ರಮ ಮತ್ತು ಇಂದು ನಡೆಯುತ್ತಿರುವ ಕಾರ್ಯಕ್ರಮದ ಅನುಕ್ರಮವನ್ನು ಒಪ್ಪಿಕೊಳ್ಳಲು ಹಲವರಿಗೆ ಕಷ್ಟವಾಗಬಹುದು. ಅವರ ದೃಷ್ಟಿಯಲ್ಲಿ ಮತ್ತು ನನ್ನ ದೃಷ್ಟಿಯಲ್ಲಿಯೂ ನಿನ್ನೆಯ ಕಾರ್ಯಕ್ರಮ ಇಂದು ನಡೆಯಬೇಕಾಗಿತ್ತು. ಮತ್ತು ಇಂದಿನ ಕಾರ್ಯಕ್ರಮ ನಿನ್ನೆಯೇ ಆಗಬೇಕಿತ್ತು. ನಾವೇಕೆ ಈ ಕೆಲಸ ಮಾಡಲು ತೀರ್ಮಾನಿಸಿದೆವು? ಅದರ ಅಗತ್ಯವೇನಿತ್ತು? ಅದರಿಂದ ಏನಾಗುತ್ತದೆ? ಇದನ್ನು ಅರ್ಥ ಮಾಡಿಕೊಂಡರೆ ನಾವು ಮಾಡುತ್ತಿರುವ ಕೆಲಸದ ತಳಹದಿ ಗಟ್ಟಿಯಾಗಿರುತ್ತದೆ. ಇದನ್ನು ನಾವು ಈ ಕೆಲಸ ಮಾಡುವ ಮೊದಲೇ ಮಾಡಬೇಕಿತ್ತು. ಆದರೆ ಕೆಲವು ಸಂಗತಿಗಳು ಅವುಗಳಷ್ಟಕ್ಕೆ ಸಂಭವಿಸಿಬಿಡುತ್ತವೆ. ಇದೂ ನಮ್ಮ ಅಭಿಲಾಷೆಯಂತೆಯೇ ನಡೆಯುತ್ತಿದೆ. ಆದ್ದರಿಂದ ದಿನಗಳನ್ನು ಬದಲಾಯಿಸುವುದರ ಮೂಲಕ ನಾವೇನನ್ನೂ ಕೆಡಿಸುತ್ತಿಲ್ಲ.

ನಾವೀ ಕೆಲಸಕ್ಕೆ ನಾಗಪುರವನ್ನೇ ಏಕೆ ಆರಿಸಿಕೊಂಡೆವೆಂದು ಹಲವು ಕೇಳಿದರು. ಮತಾಂತರ ಬೇರೊಂದು ನಗರದಲ್ಲೇಕೆ ನಡೆಯಲಿಲ್ಲ? ಕೆಲವರು ಹೇಳುವಂತೆ, ನಾಗಪುರದಲ್ಲಿ ಆರ್‌ಎಸ್ಎಸ್‌ನ ದೊಡ್ಡ ತುಕಡಿಯೇ ಇದೆ. ಅವರನ್ನು ಧರಾಶಾಯಿಗಳನ್ನಾಗಿಸುವುದಕ್ಕೆ ನಾವು ಈ ನಗರವನ್ನು ಆರಿಸಿಕೊಂಡೆವಂತೆ. ಇದು ನಿಜವಲ್ಲ. ಈ ಕಾರ್ಯಕ್ರಮವನ್ನು ನಾಗಪುರದಲ್ಲಿ ನಡೆಸಿದ್ದು ಇಂಥ ಯಾವುದೇ ಉದ್ದೇಶದಿಂದಲ್ಲ. ನಮ್ಮ ಕೆಲಸ ಬಹಳ ದೊಡ್ಡದು. ಇಲ್ಲಿ ಬದುಕಿನ ಒಂದು ಕ್ಷಣವೂ ವ್ಯರ್ಥವಾಗುವಂತಿಲ್ಲ. ನನ್ನ ಮೂಗು ಕೆರೆದುಕೊಂಡು ಇನ್ಯಾರಿಗೂ ಅಪಶಕುನವಾಗುವುದಕ್ಕೆ ಬೇಕಿರುವಷ್ಟು ಸಮಯವೂ ನನ್ನಲ್ಲಿಲ್ಲ.

ಈ ನಗರವನ್ನು ಆರಿಸಿಕೊಂಡದ್ದಕ್ಕೆ ಬೇರೆಯೇ ಕಾರಣವಿದೆ. ಬೌದ್ಧರ ಇತಿಹಾಸವನ್ನು ಓದಿದವರಿಗೆ ಭಾರತದಲ್ಲಿ ಬೌದ್ಧ ಧರ್ಮವನ್ನು ಹರಡಿದವರು ‘ನಾಗ’ರು ಎಂಬುದು ತಿಳಿದಿರುತ್ತದೆ. ಆರ್ಯರಿಗೆ ಭಯ ಹುಟ್ಟಿಸುವಂಥ ಶತ್ರುಗಳಾಗಿದ್ದವರು ಈ ನಾಗಾ ಜನಗಳು. ಆರ್ಯರು ಮತ್ತು ಅನಾರ್ಯರ ನಡುವೆ ಭೀಕರ ಕಾಳಗಗಳೇ ನಡೆದಿವೆ. ನಾಗಾ ಜನಗಳ ಮೇಲೆ ಆರ್ಯರು ನಡೆಸಿದ ದೌರ್ಜನ್ಯದ ಉದಾಹರಣೆಗಳು ಪುರಾಣಗಳಲ್ಲಿವೆ. ಈ ದೌರ್ಜನ್ಯಗಳಿಂದ ಪಾರಾದವನು ಒಬ್ಬ ನಾಗಾ. ಅವನಿಗೆ ಅದಕ್ಕೆ ಸಹಾಯ ಮಾಡಿದ್ದು ಅಗಸ್ತ್ಯ

‘ನನ್ನ ಬದುಕೇ ನನ್ನ ಸಂದೇಶ’ ಎಂಬರ್ಥದ ಯಾವ ಮಾತುಗಳನ್ನೂ ಬಾಬಾ ಸಾಹೇಬರು ಯಾವತ್ತೂ ಹೇಳಲಿಲ್ಲ. ಆದರೂ ಅವರ ಬದುಕೊಂದು ಸಂದೇಶವಾಗಿತ್ತು. ‘ನೀವು ಬಯಸುವ ಬದಲಾವಣೆ ನಿಮ್ಮಲ್ಲೇ ಕಾಣಲಿ’ ಎಂದು ಅವರು ಯಾವತ್ತೂ ಬರೆಯಲಿಲ್ಲ. ಆದರೆ ಅವರು ತಾವು ಬಯಸಿದ ಬದಲಾವಣೆಯನ್ನು ಬದುಕಿದರು. ಕೇವಲ ಲಂಗೋಟಿ ಧರಿಸಿ ಶಾಲೆಗೆ ಹೋಗುತ್ತಿದ್ದ ದಿನಗಳಿಂದ ತೊಡಗಿ ಕೊಲಂಬಿಯಾ ವಿಶ್ವವಿದ್ಯಾಲಯದ ತನಕದ ಅವರ ಶೈಕ್ಷಣಿಕ ಯಾತ್ರೆ ಮುಗಿದ ಮೇಲೆ ‘ಪ್ರತಿಷ್ಠಿತ ದಲಿತ’ನಾಗಿ ಬದುಕುವ ಎಲ್ಲಾ ಸಾಧ್ಯತೆಗಳೂ ಅವರೆದುರು ಇದ್ದವು. ಆದರೆ ಅವರು ಆರಿಸಿಕೊಂಡದ್ದು ಹೋರಾಟದ ಹಾದಿಯನ್ನು. ಅವರೇ ಹೇಳಿಕೊಳ್ಳುವಂತೆ ಹುದ್ದೆಯ ಬಂಧನಗಳನ್ನು ನಿರಾಕರಿಸಿ ಬದುಕಿದರು. 1956ರ ಅಕ್ಟೋಬರ್ ತಿಂಗಳ 14ರಂದು ನಾಗಪುರದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಮರುದಿನ ತಾನೇಕೆ ಬೌದ್ಧ ಧರ್ಮವನ್ನು ಸ್ವೀಕರಿಸಿದೆ ಎಂಬುದರ ಕುರಿತಂತೆ ಎರಡು ಗಂಟೆಗಳಷ್ಟು ಸುದೀರ್ಘವಾದ ಭಾಷಣ ಮಾಡಿದರು. ಅದರ ಆಯ್ದ ಭಾಗಗಳ ಭಾವಾನುವಾದ ಇಲ್ಲಿದೆ. ಇದು ಬಾಬಾ ಸಾಹೇಬರ ಬದುಕು ಮತ್ತು ಸಂದೇಶ ಒಂದೇ ಆಗಿದ್ದನ್ನು ಅವರದೇ ಮಾತುಗಳಲ್ಲಿ ಪ್ರತಿಬಿಂಬಿಸುತ್ತಿದೆ.

ಮುನಿ. ಆತನಿಂದ ನಾವೆಲ್ಲರೂ ಹುಟ್ಟಿದೆವು. ಶೋಷಣೆಗಳನ್ನು ಎದುರಿಸುತ್ತಿದ್ದ ಈ ಸಮುದಾಯದವರು, ಒಬ್ಬ ಮಹಾನುಭಾವ ತಮ್ಮನ್ನು ಇದರಿಂದ ಪಾರು ಮಾಡುತ್ತಾನೆಂದು ನಿರೀಕ್ಷಿಸುತ್ತಿದ್ದರು. ಅವರನ್ನು ಶೋಷಣೆಯಿಂದ ಪಾರು ಮಾಡಲು ಬಂದವನು ಗೌತಮ ಬುದ್ಧ. ನಾಗಾ ಜನಗಳು ಭಗವಾನ್ ಬುದ್ಧನ ಬೋಧನೆಗಳನ್ನು ಭಾರತದಾದ್ಯಂತ ಪಸರಿಸುವಂತೆ ಮಾಡಿದರು.

ಈ ನಾಗಾ ಜನರು ನಾಗಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ವಾಸವಾಗಿದ್ದರು. ಅವರು ಈ ನಗರವನ್ನು ನಾಗಪುರ ಎಂದು ಕರೆದರು. ಇಲ್ಲಿಂದ 27 ಮೈಲುಗಳ ದೂರದಲ್ಲಿ ನಾಗಾ ನದಿ ಹರಿಯುತ್ತದೆ. ಈ ಹೆಸರಿಗೂ ಕಾರಣವಾದದ್ದು ಅದರ ತಟದಲ್ಲಿದ್ದ ನಾಗಾ ಜನರು. ನಾಗಾ ಜನಸಮುದಾಯದ ವಾಸಸ್ಥಳಗಳ ಮಧ್ಯೆ ನಾಗಾ ನದಿ ಹರಿಯುತ್ತದೆ. ಆದ್ದರಿಂದಲೇ ನಾನು ಈ ನಗರವನ್ನು ಆರಿಸಿಕೊಂಡೆ. ಈ ವಿಷಯದಲ್ಲಿ ಸುಳ್ಳು ಹೇಳಿ ಯಾರನ್ನೂ ಪ್ರಚೋದಿಸುವ ಉದ್ದೇಶ ನನಗಿಲ್ಲ. ಆರ್‌ಎಸ್‌ಎಸ್ ಇಲ್ಲಿದೆ ಎಂಬ ವಿಚಾರ ಯಾವಾಗಲೂ ನನ್ನ ಮನಸ್ಸಿಗೆ ಬಂದದ್ದಿಲ್ಲ.

ನಾನು ಆರಂಭಿಸಿರುವ ಈ ಕೆಲಸವನ್ನು (ಮತಾಂತರ) ಪತ್ರಿಕೆಗಳೂ ಸೇರಿದಂತೆ ಹಲವರು ಟೀಕಿಸುತ್ತಿದ್ದಾರೆ. ಕೆಲವರ ಟೀಕೆ ಬಹಳ ತೀಕ್ಷ್ಣವಾಗಿದೆ. ಅವರ ದೃಷ್ಟಿಯಲ್ಲಿ ಅಸಹಾಯಕ, ಬಡ ಅಸ್ಪೃಶ್ಯರನ್ನು ನಾನು ಅಡ್ಡದಾರಿಗೆ ಎಳೆಯುತ್ತಿದ್ದೇನೆ. ಅವರು ಹೇಳುತ್ತಾರೆ– ‘ಇಂದು ಯಾರು ಅಸ್ಪೃಶ್ಯರಾಗಿದ್ದಾರೋ ಅವರು ಅಸ್ಪೃಶ್ಯರಾಗಿಯೇ ಉಳಿಯುತ್ತಾರೆ. ಅಸ್ಪೃಶ್ಯರು ಪಡೆದುಕೊಂಡ ಎಲ್ಲಾ ಹಕ್ಕುಗಳೂ ನಾಶವಾಗುತ್ತವೆ’.

ಇದನ್ನು ಕೇಳಿ ನಮ್ಮ ಜೊತೆ ಇರುವ ಕೆಲವರು ಗೊಂದಲಕ್ಕೊಳಗಾಗಿದ್ದಾರೆ. ಅಶಿಕ್ಷಿತರಾದ ನಮ್ಮವರನ್ನುದ್ದೇಶಿಸಿ ಅವರು ಹೇಳುತ್ತಿದ್ದಾರೆ– ‘ಮಹಾರ್ ಜನಗಳು ಅವರ ಕಾಲು ಹಾದಿಯಲ್ಲೇ ಸಾಗಬೇಕು’. ಈ ಮಾತುಗಳೆಲ್ಲವೂ ನಮ್ಮ ಹಿರಿಯರು ಮತ್ತು ಯುವಕರ ಮಧ್ಯೆ ಪ್ರಭಾವಶಾಲಿಯೂ ಆಗಿರಬಹುದು. ಇಂಥದ್ದರಿಂದ ಜನಗಳ ಮನಸ್ಸಿನಲ್ಲಿ ಸಂಶಯವೊಂದು ಉದ್ಭವಿಸಿದ್ದರೆ ಅದನ್ನು ನಿವಾರಿಸುವುದು ನಮ್ಮಂಥವರ ಕರ್ತವ್ಯ. ಆ ಮೂಲಕ ಸಂಶಯವನ್ನೇ ನಮ್ಮ ಆಂದೋಲನದ ತಳಹದಿಯನ್ನು ಗಟ್ಟಿಗೊಳಿಸಲು ಬಳಸಿಕೊಳ್ಳಬೇಕು.

ಈ ಹಿಂದೊಮ್ಮೆ ನಾವು ಮಾಂಸಾಹಾರದ ವಿರುದ್ಧ ಆಂದೋಲನವೊಂದನ್ನು ನಡೆಸಿದ್ದೆವು. ಸವರ್ಣೀಯರು ತಮ್ಮ ಮೇಲೊಂದು ಸಿಡಿಲು ಬಡಿದಂತೆ ವರ್ತಿಸಿದರು. ಎಮ್ಮೆಯ ಹಾಲನ್ನು ಅವರು ಕುಡಿಯಬೇಕು. ಅದು ಸತ್ತರೆ ನಾವದನ್ನು ಹೆಗಲ ಮೇಲೆ ಹೊರಬೇಕು. ಇದೆಂಥಾ ವಿಚಿತ್ರ ಸಂಪ್ರದಾಯ. ‘ನಿಮ್ಮ ಮನೆಗಳಲ್ಲಿ ಮುದುಕಿಯರು ಸತ್ತಾಗ ಏಕೆ ಕಳೇಬರವನ್ನು ನಮಗೆ ಕೊಡುವುದಿಲ್ಲ? ನಿಮ್ಮ ಸತ್ತ ದನಗಳನ್ನು ನಮಗೆ ಕೊಡುವುದಾದರೆ ನಿಮ್ಮ ಮನೆಯಲ್ಲಿ ಸತ್ತ ಮುದುಕಿಯರನ್ನೂ ನಮಗೇ ಕೊಡಬೇಕಲ್ಲವೇ?’ ಎಂದು ನಾವು ಕೇಳುತ್ತಿದ್ದೆವು. ಈ ದಿನಗಳಲ್ಲಿ ‘ಕೇಸರಿ’ ಪತ್ರಿಕೆಯಲ್ಲಿ ಒಬ್ಬಾತ ಬರೆದ.

ಅದರಂತೆ, ಕೆಲವು ಹಳ್ಳಿಗಳಲ್ಲಿ ವರ್ಷಕ್ಕೆ 50 ಜಾನುವಾರುಗಳು ಸಾಯುತ್ತವೆಯಂತೆ. ಅವುಗಳ ಚರ್ಮ, ಕೊಂಬು, ಮಾಂಸ, ಎಲುಬು,

ಬಾಲ ಇತ್ಯಾದಿಗಳಿಂದ ಐದು ನೂರು ರೂಪಾಯಿಗಳನ್ನು ಸಂಪಾದಿಸಬಹುದಂತೆ. ದಲಿತರು ಸತ್ತ ದನಗಳನ್ನು ಕೊಂಡೊಯ್ಯದೇ ಇದ್ದರೆ ಮಾಂಸವಷ್ಟೇ ಅಲ್ಲದೆ ಈ 500 ರೂಪಾಯಿಗಳ ನಷ್ಟ ಅನುಭವಿಸುತ್ತಾರಂತೆ. ವಾಸ್ತವದಲ್ಲಿ ಇಂತಹ ಹುಸಿ ಪ್ರಚಾರಗಳಿಗೆ ಉತ್ತರ ನೀಡುವ ಅಗತ್ಯವಿದೆಯೇ? ಆದರೆ ನಮ್ಮ ಜನಗಳು ಬಾಬಾ ಸಾಹೇಬರು ಇದಕ್ಕೆ ಉತ್ತರ ಕೊಡಲಿಲ್ಲ ಎನ್ನುತ್ತಾರೆ.

ಸಂಗಮ್ನೇರ್‌ನಲ್ಲಿ ಸಭೆಯೊಂದಕ್ಕೆ ಹೋಗಿದ್ದೆ. ಅಲ್ಲಿ ಉಪಾಹಾರದ ವ್ಯವಸ್ಥೆ ಇತ್ತು. ನನಗೆ ‘ಕೇಸರಿ’ ಪತ್ರಿಕೆಯ ವರದಿಗಾರನೊಬ್ಬನಿಂದ ಒಂದು ಚೀಟಿ ಬಂತು. ಆತ ಕೇಳಿದ– ‘ನೀವು ನಿಮ್ಮ ಜನಗಳು ಸತ್ತ ದನಗಳನ್ನು ಎತ್ತಬಾರದೆಂದು ಹೇಳುತ್ತೀರಿ. ಅವರ ಬಡತನವನ್ನೊಮ್ಮೆ ನೋಡಿ. ಅವರ ಹೆಂಡತಿಯರಿಗೆ ಸೀರೆಯಿಲ್ಲ, ರವಿಕೆಯಿಲ್ಲ, ತಿನ್ನಲು ಅನ್ನವಿಲ್ಲ, ಬೆಳೆಯಲು ಜಮೀನೂ ಇಲ್ಲ. ಅವರ ಸ್ಥಿತಿ ಇಷ್ಟು ಕಷ್ಟದಲ್ಲಿರುವಾಗ ಅವರಿಗೆ ದನದ ಚರ್ಮ, ಕೋಡು ಮತ್ತು ಮಾಂಸದಿಂದ ವರ್ಷಕ್ಕೆ ಸಿಗಬಹುದಾದ 500 ರೂಪಾಯಿಗಳನ್ನು ಬಿಸಾಡಿ ಎನ್ನುವುದೇಕೆ? ಇದು ನಿಮ್ಮ ಜನರಿಗೆ ನಷ್ಟವಲ್ಲವೇ?’.

ಇದಕ್ಕೆ ನಾನು ‘ಇದಕ್ಕೆ ಉತ್ತರಿಸುತ್ತೇನೆ. ಇಲ್ಲಿಯೇ ಉತ್ತರಿಸಬೇಕೇ ಅಥವಾ ಸಭೆಯಲ್ಲಿ ಉತ್ತರಿಸಲೇ? ಇಂಥದ್ದೊಂದು ವಿಮರ್ಶಾತ್ಮಕ ಪ್ರಶ್ನೆ ಜನರೆದುರು ಬರುವುದೇ ಉತ್ತಮ’ ಎಂದು ಹೇಳಿ, ‘ನಿಮಗೆ ಕೇಳಲಿಕ್ಕಿರುವುದು ಇಷ್ಟೆಯೇ ಅಥವಾ ಇನ್ನೂ ಏನಾದರೂ ಇದೆಯೇ?’ ಎಂದು ಮತ್ತೆ ಆತನನ್ನು ಪ್ರಶ್ನಿಸಿದೆ. ‘ನಾನು ಕೇಳಿರುವಷ್ಟಕ್ಕೆ ಉತ್ತರ ನೀಡಿದರೆ ಸಾಕು’ ಎಂದು ಆ ವರದಿಗಾರ ಹೇಳಿದ. ಮತ್ತೆ ನಾನಾತನನ್ನು ಕೇಳಿದೆ– ‘ನಿಮಗೆ ಎಷ್ಟು ಮಕ್ಕಳು ಹಾಗೂ ನಿಮ್ಮನ್ನು ಅವಲಂಬಿಸಿರುವವರು ಯಾರೆಲ್ಲಾ?’. ಅದಕ್ಕೆ ಆತ, ‘ನನಗೆ ಐದು ಮಂದಿ ಗಂಡು ಮಕ್ಕಳು. ನನ್ನ ಸೋದರನಿಗೆ ಐದೋ ಆರೋ ಮಕ್ಕಳಿದ್ದಾರೆ’ ಎಂದ. ನಾನದಕ್ಕೆ ನಿಮ್ಮ ಕುಟುಂಬ ಬಹಳ ದೊಡ್ಡದು.

ನೀವು ಮತ್ತು ನಿಮ್ಮ ಕುಟುಂಬದವರು ಸೇರಿ ಸತ್ತ ದನಗಳನ್ನು ಎತ್ತಿ ಹಾಕಿ ಐದು ನೂರು ರೂಪಾಯಿಗಳನ್ನು ಸಂಪಾದಿಸಬಹುದು. ಇದರ ಜೊತೆಗೆ ನಾನೂ ಪ್ರತೀ ವರ್ಷ ಐದು ನೂರು ರೂಪಾಯಿಗಳನ್ನು ಕೊಡುತ್ತೇನೆ. ನನ್ನ ಜನರಿಗೆ ಬರುವ ಕಷ್ಟ ನನಗೆ ಸಂಬಂಧಿಸಿದ್ದು. ಅವರಿಗೆ ಆಹಾರ, ಬಟ್ಟೆಗಳು ಸಿಗುತ್ತದೆಯೋ ಇಲ್ಲವೋ ಎಂಬುದನ್ನು ನಾನು ನೋಡಿಕೊಳ್ಳುತ್ತೇನೆ. ನೀವೀಗ ಅತ್ಯಂತ ಲಾಭದಾಯಕವಾದ ನನ್ನ ಪ್ರಸ್ತಾಪವನ್ನು ಒಪ್ಪಿಕೊಳ್ಳುತ್ತೀರೋ ಇಲ್ಲವೇ ನಿರಾಕರಿಸುತ್ತೀರಾ? ಈ ಕೆಲಸ ಮಾಡಿ ನಾವು ಲಾಭಗಳಿಸಬಹುದಾದರೆ ನೀವೂ ಇದೇ ಕೆಲಸ ಮಾಡಿ ಲಾಭಗಳಿಸಬಹುದಲ್ಲವೇ? ನೀವೇಕೆ ಸತ್ತ ದನಗಳನ್ನು ಎತ್ತುವುದಿಲ್ಲ?
ನಿನ್ನೆ ಒಬ್ಬ ಬ್ರಾಹ್ಮಣ ಹುಡುಗ ಬಂದು ನನ್ನನ್ನು ಕೇಳಿದ– ‘ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ನಿಮ್ಮವರಿಗಾಗಿ ಮೀಸಲು ಸ್ಥಾನಗಳಿವೆ.

ಅವುಗಳನ್ನೇಕೆ ನೀವು ಬಿಟ್ಟುಕೊಡುತ್ತೀರಿ?’. ಅದಕ್ಕೆ ನಾನೆಂದೆ, ‘ನೀನು ಮಹಾರ್ ಆಗಿ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮೀಸಲಿರುವ ಆ ಸ್ಥಾನಗಳನ್ನು ತುಂಬುವುದಕ್ಕೆ ಪ್ರಯತ್ನಿಸು. ಯಾವುದಾದರೊಂದು ಹುದ್ದೆ ಖಾಲಿ ಇದ್ದರೆ ಅದು ಕ್ಷಣಾರ್ಧದಲ್ಲಿ ಭರ್ತಿಯಾಗುತ್ತದೆ. ಇಂಥದ್ದೊಂದು ಹುದ್ದೆಗೆ ಅದೆಷ್ಟು ಬ್ರಾಹ್ಮಣರು ಮತ್ತು ಇತರರ ಅರ್ಜಿಗಳಿರುವುದಿಲ್ಲ! ಸರ್ಕಾರಿ ನೌಕರಿಗಳನ್ನು ಹೀಗೆ ಭರ್ತಿ ಮಾಡಬಹುದಾದರೆ ಬ್ರಾಹ್ಮಣರೇಕೆ ಮಹಾರ್‌ಗಳಾಗಿ ಮೀಸಲು ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳಬಾರದು?’.

ನಾನೀಗ ಮಾಡುತ್ತಿರುವ ಕೆಲಸದ ಬಗ್ಗೆ ಎಲ್ಲೆಲ್ಲೂ ಚರ್ಚೆಗಳು ನಡೆಯುತ್ತಿವೆ. ನನಗೆ ಆಶ್ಚರ್ಯ ಹುಟ್ಟಿಸುತ್ತಿರುವುದೇನೆಂದರೆ ಈ ತನಕ ಯಾರೊಬ್ಬರೂ ಕೂಡಾ ಎಲ್ಲಾ ಧರ್ಮಗಳನ್ನೂ ಬದಿಗಿರಿಸಿ ಬೌದ್ಧ ಧರ್ಮವನ್ನೇಕೆ ಸ್ವೀಕರಿಸುತ್ತಿದ್ದೀಯಾ ಎಂದು ಕೇಳಲಿಲ್ಲ. ಧರ್ಮವೊಂದನ್ನು ಬದಲಾಯಿಸಬೇಕಾಗಿ ಬಂದಾಗ ಮುಖ್ಯವಾಗಿ ಎದುರಾಗುವ ಪ್ರಶ್ನೆ ಇದು. ಧರ್ಮ ಪರಿವರ್ತನೆಗೆ ಮುನ್ನ ಯಾವ ಧರ್ಮ ಮತ್ತು ಯಾಕೆ ಎಂದು ಪರೀಕ್ಷಿಸಬೇಕಾಗುತ್ತದೆ. ಹಿಂದೂ ಧರ್ಮವನ್ನು ತ್ಯಜಿಸುವ ಆಂದೋಲನವನ್ನು ಆರಂಭಿಸಬೇಕೆಂದು ನಿರ್ಧರಿಸಿದ್ದು 1955ರಲ್ಲಿ ಯೆವಲಾದಲ್ಲಿ ತೆಗೆದುಕೊಂಡ ನಿರ್ಣಯದಂತೆ. ‘ನಾನು ಹಿಂದೂ ಧರ್ಮದಲ್ಲಿ ಹುಟ್ಟಿದ್ದರೂ ಹಿಂದೂವಾಗಿ ಸಾಯುವುದಿಲ್ಲ’ ಎಂಬ ಪ್ರತಿಜ್ಞೆ ಮಾಡಿದ್ದೆ. ನಿನ್ನೆ ಅದಕ್ಕೆ ಬದ್ಧನಾಗಿದ್ದೇನೆಂದು ಸಾಬೀತು ಪಡಿಸಿದೆ. ನಾನೀಗ ಆನಂದಪರವಶನಾಗಿದ್ದೇನೆ.

ನರಕವನ್ನು ತ್ಯಜಿಸಿ ಹೊರಬಂದ ಸಂತೋಷ ನನ್ನದು. ನನಗೆ ಕುರುಡು ಅನುಯಾಯಿಗಳು ಬೇಕಿಲ್ಲ. ಬೌದ್ಧ ಧರ್ಮವನ್ನು ಸ್ವೀಕರಿಸಲು ಬರುವವರು ಎಲ್ಲವನ್ನೂ ಅರ್ಥ ಮಾಡಿಕೊಂಡು ಬರಬೇಕು. ಅವರು ಹೊಸ ಧರ್ಮವನ್ನು ಪ್ರಜ್ಞಾಪೂರ್ವಕವಾಗಿ ಒಪ್ಪಿಕೊಳ್ಳಬೇಕು.
ಮತ–ಧರ್ಮ ಮನುಷ್ಯನ ಪ್ರಗತಿಗೆ ಅಗತ್ಯ. ಕಾರ್ಲ್ ಮಾರ್ಕ್ಸ್ ಬರವಣಿಗೆಗಳಿಗೆ ಪ್ರೇರಿತವಾದ ಮತ–ಧರ್ಮದ ಅಗತ್ಯವಿಲ್ಲ ಎನ್ನುವ ಪಂಥವೊಂದಿರುವುದು ನನಗೂ ಗೊತ್ತು. ಅವರ ಮಟ್ಟಿಗೆ ಮತ–ಧರ್ಮವೆಂದರೆ ಏನೂ ಅಲ್ಲ. ಮತ–ಧರ್ಮದ ಅಗತ್ಯವೂ ಇಲ್ಲ. ಅವರಿಗೆ ಮುಂಜಾನೆಯ ಉಪಹಾರಕ್ಕೆ ಬ್ರೆಡ್, ಕ್ರೀಮ್, ಬೆಣ್ಣೆ, ಕೋಳಿಯ ತೊಡೆಗಳು ಇತ್ಯಾದಿಗಳು ಸಿಗುತ್ತವೆ. ಅವರಿಗೆ ಸುಖನಿದ್ರೆಯ ಸೌಕರ್ಯವೂ ಇದೆ. ಅವರು ಚಿತ್ರಮಂದಿರಗಳಿಗೆ ಹೋಗುತ್ತಾರೆ. ಅವರಿಗೆ ಎಲ್ಲವೂ ಇದೆ. ಅವರದ್ದೇ ಈ ತಾತ್ವಿಕತೆ. ಆದರೆ ನನ್ನ ನಿಲುವು ಬೇರೆ. ನನ್ನ ಅಪ್ಪ ಬಡವ, ಆದ್ದರಿಂದ ಮಾರ್ಕ್ಸ್ ವಾದಿಗಳಿಗೆ ದೊರೆತ ಸೌಲಭ್ಯಗಳು ನನಗಿರಲಿಲ್ಲ. ಅವರಾರೂ ನನ್ನಂಥ ಬದುಕನ್ನು ಬದುಕಿಲ್ಲ. ಯಾವ ಆನಂದವೂ, ಯಾವ ಸವಲತ್ತುಗಳೂ ಇಲ್ಲದ ಬದುಕು ಎಂಥದ್ದು ಎಂದು ನನಗೆ ಗೊತ್ತು. ಆರ್ಥಿಕ ಪ್ರಗತಿ ಅಗತ್ಯ ಎಂದು ನನಗೆ ಗೊತ್ತು. ಇದಕ್ಕೆ ನನ್ನ ವಿರೋಧವೂ ಇಲ್ಲ. ಮನುಷ್ಯ ಆರ್ಥಿಕವಾಗಿ ಮುಂದುವರಿಯಲೇಬೇಕು.

ಆದರೆ ನಾನಿಲ್ಲಿ ಒಂದು ವ್ಯತ್ಯಾಸವನ್ನು ಗುರುತಿಸಲು ಬಯಸುತ್ತೇನೆ. ಇದು ಎಮ್ಮೆ, ಎತ್ತು ಮತ್ತು ಮನುಷ್ಯನ ನಡುವಣ ವ್ಯತ್ಯಾಸ. ಎಮ್ಮೆ

ಮತ್ತು ಎತ್ತುಗಳಿಗೆ ದಿನವೂ ಹುಲ್ಲು ಬೇಕು. ಮನುಷ್ಯನಿಗೂ ಆಹಾರ ಬೇಕು. ಪ್ರಾಣಿಗಳು ಮತ್ತು ಮನುಷ್ಯನ ನಡುವಣ ವ್ಯತ್ಯಾಸ ಇದು: ಎಮ್ಮೆ ಮತ್ತು ಎತ್ತಿಗೆ ಮನಸ್ಸು ಎಂಬುದಿಲ್ಲ. ಮನುಷ್ಯನಿಗೆ ಮನಸ್ಸು ಎಂಬುದೊಂದಿದೆ. ಮನುಷ್ಯನಿಗೆ ದೇಹದಷ್ಟೇ ಮನಸ್ಸೂ ಮುಖ್ಯ. ಮನಸ್ಸು ಬೆಳೆಯಬೇಕು. ಆ ಮೂಲಕ ಅದಕ್ಕೊಂದು ಸಂಸ್ಕಾರ ದೊರೆಯಬೇಕು. ಅದರಿಂದ ಸಂಸ್ಕೃತಿ ಬೆಳೆಯಬೇಕು. ಮನುಷ್ಯ ಮತ್ತು ಆತನ ಸುಸಂಸ್ಕೃತ ಮನಸ್ಸಿನ ನಡುವಣ ಸಂಬಂಧವೆಂಬುದು ಕೇವಲ ದೇಹಕ್ಕಷ್ಟೇ ಸೀಮಿತವಾಗಿದೆಯೆಂದು ಹೇಳುವ ಪ್ರದೇಶದ ಜನರೊಂದಿಗೆ ನನಗೆ ಯಾವ ಸಂಬಂಧವೂ ಬೇಕಾಗಿಲ್ಲ. ದೇಹ ಆರೋಗ್ಯಕರವಾಗಿರುವಂತೆ ಮನಸ್ಸೂ ಸುಸಂಸ್ಕೃತವಾಗಬೇಕು.

ಮನುಷ್ಯನ ದೇಹ ಅಥವಾ ಮನಸ್ಸು ರೋಗಗ್ರಸ್ತವಾಗುವುದು ಯಾವಾಗ? ಇದಕ್ಕಿರುವ ಕಾರಣ ಒಂದೋ ದೇಹದ ನೋವು ಅಥವಾ ಮನಸ್ಸಿಗೆ ಉತ್ಸಾಹ ಇಲ್ಲದೇ ಇರುವುದು. ಮನಸ್ಸಿಗೆ ಉತ್ಸಾಹವಿಲ್ಲದೇ ಇರುವಾಗ ಪ್ರಗತಿ ಸಾಧ್ಯವಿಲ್ಲ. ಮನಸ್ಸಿಗೇಕೆ ಉತ್ಸಾಹವಿಲ್ಲ? ಇದಕ್ಕೆ ಮುಖ್ಯ ಕಾರಣ ಮನುಷ್ಯನಿಗೆ ಮೇಲೇರಲು ಅವಕಾಶ ಇಲ್ಲದೇ ಇರುವುದು ಅಥವಾ ಮೇಲೇರುವ ಭರವಸೆಯೇ ಇಲ್ಲವಾಗಿರುವುದು. ಇಂಥ ಸ್ಥಿತಿಯಲ್ಲಿ ಅವನು ಮಹತ್ವಾಕಾಂಕ್ಷಿಯಾಗಿರಲು ಹೇಗೆ ಸಾಧ್ಯ? ತನ್ನ ದುಡಿಮೆಗೆ ತಕ್ಕ ಪ್ರತಿಫಲವನ್ನು ಪಡೆಯುವವನಷ್ಟೇ ಉತ್ಸಾಹಿಯಾಗಿರಲು ಸಾಧ್ಯ. ಶಾಲೆಯಲ್ಲಿ ಶಿಕ್ಷಕ ‘ಯಾರಿದು? ಮಹಾರ್...? ಈ ಮಹಾರ ಪ್ರಥಮ ದರ್ಜೆಯಲ್ಲಿ ಪಾಸಾಗಲು ಸಾಧ್ಯವೇ? ಇಷ್ಟಕ್ಕೂ ಇವನಿಗೇಕೆ ಪ್ರಥಮ ದರ್ಜೆ? ನೀನು ನಾಲ್ಕನೇ ದರ್ಜೆಯಲ್ಲೇ ಇದ್ದರೆ ಸಾಕು? ಮೊದಲ ಸ್ಥಾನವೇನಿದ್ದರೂ ಬ್ರಾಹ್ಮಣ ಹುಡುಗರದ್ದು’ ಎಂದೆಲ್ಲಾ ಹೇಳಿದರೆ ಆ ಮಗು ಹೇಗೆ ಮಹತ್ವಾಕಾಂಕ್ಷೆಯನ್ನು ಬೆಳೆಸಿಕೊಳ್ಳಲು ಸಾಧ್ಯ? ಆತ ಹೇಗೆ ಬೆಳೆಯಲು ಸಾಧ್ಯ? ವ್ಯಕ್ತಿಯ ದೇಹ ಮತ್ತು ಮನಸ್ಸು ಎರಡೂ ಆರೋಗ್ಯವಾಗಿದ್ದರೆ ಆತ ಧೈರ್ಯವಂತನಾಗಿರುತ್ತಾನೆ. ಎಂಥ ಸವಾಲುಗಳನ್ನೂ ತಾನೆದುರಿಸಬಲ್ಲೆ ಎಂಬ ಆತ್ಮವಿಶ್ವಾಸ ಅವನಿಗಿರುತ್ತದೆ. ಇಂಥವರಲ್ಲಿ ಉತ್ಸಾಹ ತುಂಬಿರುತ್ತದೆ. ಅವರು ತಮ್ಮ ಕೆಲಸಗಳಲ್ಲಿ ಉತ್ಕೃಷ್ಟತೆಗೇರುತ್ತಾರೆ. ಹಿಂದೂ ಧರ್ಮದ ತಾತ್ವಿಕತೆಯನ್ನು ವಿವರಿಸುವ ಪಠ್ಯಗಳಲ್ಲಿ ಯಾರೊಬ್ಬರಿಗೂ ತಾನು ಸಾಧಿಸಬಹುದಾದ ಯಾವುದರ ಬಗ್ಗೆಯೂ ಒಂದು ಸುಳಿವೂ ದೊರೆಯುವುದಿಲ್ಲ. ಜನರು ಸಾವಿರಾರು ವರ್ಷಗಳ ಇಂಥ ಭರವಸೆ ರಹಿತ ಸ್ಥಿತಿಯಲ್ಲಿದ್ದರೆ ಅವರಿಗೆ ತಮ್ಮ ಹೊಟ್ಟೆ ತುಂಬಿಸುವ ಸಣ್ಣ ಕೆಲಸಗಳನ್ನು ಬಿಟ್ಟರೆ ಬೇರೇನೂ ಮಾಡಲು ಹೊಳೆಯುವುದಿಲ್ಲ.

ಮನುಷ್ಯನಿಗೆ ಬೇಕಿರುವ ಉತ್ಸಾಹ ದೊರೆಯುವುದು ಅವನ ಮನಸ್ಸಿನಿಂದ. ನಿಮಗೆಲ್ಲಾ ಗಿರಣಿಗಳ ಮಾಲಿಕರು ಗೊತ್ತಿರಬಹದು. ಅವರು ಗಿರಣಿಯನ್ನು ನಿರ್ವಹಿಸಲು ವ್ಯವಸ್ಥಾಪಕರನ್ನು ನೇಮಿಸುತ್ತಾರೆ. ಅವರಿಂದ ಕೆಲಸ ನಡೆಯುತ್ತಿರುತ್ತದೆ. ಈ ಗಿರಣಿ ಮಾಲೀಕರಿಗೆ ಕೆಲವು ಕೆಟ್ಟ ಹವ್ಯಾಸಗಳಿರುತ್ತವೆ. ಅವರ ಮನಸ್ಸು ಬೆಳೆಯುವುದೇ ಇಲ್ಲ. ನಾವು ಸಕ್ರಿಯರಾಗಿ ಚಿಂತಿಸಬೇಕು. ಇದಕ್ಕಾಗಿಯೇ ನಾವೊಂದು ಆಂದೋಲನವನ್ನು ಆರಂಭಿಸಿದೆವು. ಆಗ ಶಿಕ್ಷಣ ಬಂತು. ನಾನೊಂದು ಲಂಗೋಟಿ ಧರಿಸಿ ಶಾಲೆಗೆ ಹೋದೆ. ಶಾಲೆಯಲ್ಲಿ ನನಗೆ ಕುಡಿಯುವ ನೀರೂ ಸಿಗುತ್ತಿರಲಿಲ್ಲ. ಎಷ್ಟೋ ದಿನ ನೀರಿಲ್ಲದೆಯೇ ತರಗತಿಗಳಲ್ಲಿ ಕುಳಿತಿದ್ದೆ. ಮುಂಬೈಯಲ್ಲಿ, ಎಲ್ಫಿನ್‌ಸ್ಟನ್ ಕಾಲೇಜಿನಲ್ಲಿಯೂ ಇದೇ ಸ್ಥಿತಿ ಇತ್ತು. ವಾತಾವರಣ ಹೀಗೆಯೇ ಇದ್ದರೆ ಭಿನ್ನ ಪರಿಸರದ ನಿರ್ಮಾಣ ಹೇಗೆ ಸಾಧ್ಯ. ಕೇವಲ ಗುಮಾಸ್ತರಷ್ಟೇ ಸೃಷ್ಟಿಯಾಗುತ್ತಾರೆ.

ಹಿಂದೂ ಧರ್ಮದಲ್ಲಿ ಸಮಾನತೆ ಇಲ್ಲ. ಒಮ್ಮೆ ನಾನು ಗಾಂಧಿಯನ್ನು ಭೇಟಿಯಾಗಲು ಹೋದೆ. ಅವರು ಹೇಳಿದರು ‘ನಾನು ಚಾತುರ್ವರ್ಣವನ್ನು ಗೌರವಿಸುತ್ತೇನೆ’. ನಾನು ಹೇಳಿದೆ– ‘ನಿಮ್ಮಂಥ ಮಹಾತ್ಮರು ಚಾತುರ್ವರ್ಣವನ್ನು ಗೌರವಿಸುತ್ತೀರಿ? ಆದರೆ ಈ ಚಾತುರ್ವರ್ಣವೆಂದರೆ ಏನು? ಇದು ಕೆಳಗಿನಿಂದ ಮೇಲಕ್ಕೋ ಅಥವಾ ಮೇಲಿನಿಂದ ಕೆಳಕ್ಕೋ? ಯಾರು ಚಾತುರ್ವರ್ಣವನ್ನು ಸೃಷ್ಟಿಸಿದರು? ಯಾರಿದನ್ನು ಇಲ್ಲವಾಗಿಸುತ್ತಾರೆ?’. ಗಾಂಧಿಯ ಬಳಿ ಈ ಪ್ರಶ್ನೆಗಳಿಗೆ ಉತ್ತರವಿರಲಿಲ್ಲ. ಅವರು ಯಾವ ಉತ್ತರ ನೀಡಬಹುದಿತ್ತು? ನಮ್ಮನ್ನು ನಾಶ ಮಾಡಿದವರು ಕೂಡಾ ಈ ಧರ್ಮದಿಂದಲೇ ನಾಶವಾಗುತ್ತಾರೆ. ನಾನು ಕಾರಣವಿಲ್ಲದೆ ಹಿಂದೂ ಧರ್ಮವನ್ನು ಟೀಕಿಸುವುದಿಲ್ಲ. ಏಕೆಂದರೆ ಹಿಂಧೂ ಧರ್ಮದಲ್ಲಿ ಯಾರ ಪ್ರಗತಿಯೂ ಸಾಧ್ಯವಿಲ್ಲ.

ನಮ್ಮ ದೇಶವೇಕೆ ಪರಾಧೀನವಾಯಿತು? ಯೂರೋಪಿನಲ್ಲಿ 1945ರ ತನಕವೂ ಯುದ್ಧಗಳು ನಡೆಯುತ್ತಿದ್ದವು. ಒಬ್ಬ ಸೈನಿಕ ಸತ್ತದ್ದರ ಹಿಂದೆಯೇ ಮತ್ತೊಬ್ಬನನ್ನು ನೇಮಿಸಲಾಗುತ್ತಿತ್ತು. ಯಾರೂ ‘ನಾವು ಯುದ್ಧ ಗೆದ್ದೆವು’ (ಗೆಲ್ಲುವ ತನಕವೂ) ಎಂದು ಹೇಳಲಿಲ್ಲ. ನಮ್ಮ ದೇಶದಲ್ಲಿ ಎಲ್ಲವೂ ಭಿನ್ನ. ಕ್ಷತ್ರಿಯರು ಸತ್ತಾಗ ನಾವು ಅಳಿದೆವು. ನಮಗೆ ಶಸ್ತ್ರಗಳನ್ನು ಬಳಸುವ ಅನುಮತಿ ಇದ್ದಿದ್ದರೆ ನಾವು ಗುಲಾಮರಾಗಬೇಕಿರಲಿಲ್ಲ. ನಮ್ಮ ದೇಶವನ್ನು ಯಾರೂ ಆಕ್ರಮಿಸಿಕೊಳ್ಳಲು ಸಾಧ್ಯವಿರಲಿಲ್ಲ.

ಕೆಲವರು ಕೇಳುತ್ತಾರೆ ‘ನೀವು ಮತಾಂತರಕ್ಕೆ ಇಷ್ಟು ಕಾಲವನ್ನೇಕೆ ತೆಗೆದುಕೊಂಡಿರಿ? ಇಷ್ಟು ಕಾಲವೂ ಏನು ಮಾಡುತ್ತಿದ್ದೀರಿ?’. ಈ ಪ್ರಶ್ನೆಯೂ ಬಹಳ ಮುಖ್ಯವಾದುದೇ. ಧರ್ಮದ ಅರ್ಥವನ್ನು ಬೋಧಿಸುವುದು ಸುಲಭದ ಕೆಲಸವಲ್ಲ. ಇದು ಒಬ್ಬ ಮನುಷ್ಯನಿಗಾಗುವ ಕೆಲಸವೂ ಅಲ್ಲ. ಧರ್ಮದ ಕುರಿತಂತೆ ಚಿಂತಿಸುವ ಯಾರಿಗೂ ಇದರ ಕಷ್ಟ ಅರ್ಥವಾದೀತು. ಜಗತ್ತಿನಲ್ಲಿರುವ ಯಾರ ಮೇಲೂ ನನ್ನ ಮೇಲಿರುವಷ್ಟು ಜವಾಬ್ದಾರಿ ಇಲ್ಲ. ನನಗೆ ಆಯುಸ್ಸಿದ್ದರೆ ನನಗೆ ಕೊಟ್ಟಿರುವ ಕೆಲಸವನ್ನು ಪೂರ್ಣಗೊಳಿಸುತ್ತೇನೆ (ಸಭಿಕರಿಂದ ‘ಬಾಬಾ ಸಾಹೇಬರು ಚಿರಾಯುವಾಗಲಿ’ ಎಂಬ ಘೋಷಣೆಗಳು).

ನಾವು ನಮ್ಮ ಹಾದಿಯಲ್ಲಿ ಸಾಗೋಣ. ಉಳಿದವರು ಅವರ ದಾರಿಯಲ್ಲಿ ಸಾಗಲಿ. ನಾವು ಹೊಸ ದಾರಿಯನ್ನು ಕಂಡುಕೊಂಡಿದ್ದೇವೆ. ಇದು ಭರವಸೆಯ ದಿನ. ಇದು ವಿಜಯದ ಹಾದಿ, ಸಮೃದ್ಧಿಯ ಗಾದಿ.

ಇದೇನು ಹೊಸ ಹಾದಿಯಲ್ಲ. ಇದನ್ನು ಬೇರೆಲ್ಲಿಂದಲೋ ತರಲಾಗಿಲ್ಲ. ಇದು ಇಲ್ಲಿಯದ್ದೇ, ಪರಿಶುದ್ಧ ಭಾರತೀಯ ಹಾದಿ. ಬೌದ್ಧ ಧರ್ಮ ಎರಡು ಸಾವಿರ ವರ್ಷಗಳಿಂದ ಭಾರತದಲ್ಲಿತ್ತು. ನಿಜ ಹೇಳಬೇಕೆಂದರೆ ನಾವು ಈ ತನಕ ಬೌದ್ಧ ಧರ್ಮ ಸ್ವೀಕರಿಸದೇ ಇದ್ದುದಕ್ಕಾಗಿ ವಿಷಾದಿಸಬೇಕು. ಇದು ನಮ್ಮ ಕಾಲಕ್ಕೆ ಅಗತ್ಯವಿರುವ ಬದಲಾವಣೆಯನ್ನು ಮಾಡಲು ಬೇಕಿರುವ ಅವಕಾಶ. ಇಂಥ ಮುಕ್ತ ಮನಸ್ಸು ಬೇರೆ ಧರ್ಮಗಳಲ್ಲಿ ಕಾಣಲು ಸಾಧ್ಯವಿಲ್ಲ.

ಸೋದರರೇ ನಾನು ಹೇಳಬೇಕಾಗಿರುವುದನ್ನು ಹೇಳಿದ್ದೇನೆ. ಇದು ಸಂಪೂರ್ಣವಾಗಿ ವಿಕಾಸಹೊಂದಿರುವ ಧರ್ಮ. ಇದರ ಮೇಲೆ ಒಂದೇ ಒಂದು ಕಲೆಯಿಲ್ಲ. ಹಿಂದೂ ಧರ್ಮದ ತತ್ವಗಳನ್ನು ಬಹಳ ವಿಚಿತ್ರವಾಗಿ ಜೋಡಿಸಲಾಗಿದೆ. ಅವುಗಳಿಂದ ಆನಂದ ಪಡೆಯುವುದು ಅಸಾಧ್ಯ. ಸಾವಿರಾರು ವರ್ಷಗಳಿಂದ ಇತ್ತೀಚಿನವರೆಗೂ ನಮ್ಮ ಸಮಾಜದಲ್ಲಿ ಒಬ್ಬ ಪದವೀಧರನಿರಲಿಲ್ಲ.

ನನಗೆ ಇದನ್ನು ಹೇಳಿಕೊಳ್ಳಲು ನಾಚಿಕೆಯೇನೂ ಇಲ್ಲ. ನನ್ನ ಶಾಲೆಯಲ್ಲಿ ಕಸ ಗುಡಿಸುವ ಮರಾಠಿ ಹೆಂಗಸೊಬ್ಬಳಿದ್ದಳು. ಆಕೆ ಕೂಡಾ ನನ್ನನ್ನು ಮುಟ್ಟುತ್ತಿರಲಿಲ್ಲ. ನನ್ನ ತಾಯಿ ದೊಡ್ಡವರನ್ನು ‘ಮಾಮಾ’ ಎಂದು ಕರೆಯಲು ಹೇಳಿಕೊಟ್ಟಿದ್ದಳು. ನಾನು ಪೋಸ್ಟ್‌ಮ್ಯಾನ್ ಅನ್ನೂ ಮಾಮಾ ಎಂದು ಕರೆಯುತ್ತಿದ್ದೆ. ನಾನು ಶಾಲೆಯಲ್ಲಿದ್ದಾಗ ಒಂದು ದಿನ ಬಹಳ ಬಾಯಾರಿಕೆಯಾಯಿತು. ನಾನಿದನ್ನು ಶಿಕ್ಷಕರಿಗೆ ಹೇಳಿದೆ. ಅವರು ನನ್ನ ರಕ್ಷಣೆಗಾಗಿ ಒಬ್ಬ ಚಪ್ರಾಸಿಯನ್ನು ಕಳುಹಿಸಿದರು. ಆತ ನಲ್ಲಿಯನ್ನು ತೆರೆದುಕೊಟ್ಟ. ನಾನು ನೀರು ಕುಡಿದೆ. ಸಾಮಾನ್ಯವಾಗಿ ನಾನು ಶಾಲೆಯಲ್ಲಿ ವಾರಗಟ್ಟಲೆ ಕುಡಿಯಲು ನೀರಿಲ್ಲದೆ ಕುಳಿತಿರುತ್ತಿದ್ದೆ. ಮುಂದೆ ನನಗೆ ಜಿಲ್ಲಾ ನ್ಯಾಯಾಧೀಶನ ಹುದ್ದೆ ದೊರೆಯಿತು. ಆದರೆ ನನಗೆ ಆ ಹುದ್ದೆಯ ಬಂಧನದಲ್ಲಿರಲು ಸಾಧ್ಯವಾಗಲಿಲ್ಲ. ಅಲ್ಲೇ ಉಳಿದರೆ ನನ್ನ ಸೋದರರಿಗಾಗಿ ಕೆಲಸ ಮಾಡುವವರು ಯಾರು? ಇದು ನನ್ನ ಎದುರು ಇರುವ ಸಮಸ್ಯೆ. ಹಾಗಾಗಿಯೇ ನಾನು ಯಾವ ಹುದ್ದೆಯ ಬಂಧನಕ್ಕೂ ಒಳಗಾಗಲಿಲ್ಲ.

ಒಬ್ಬ ವ್ಯಕ್ತಿಯಾಗಿ ನನಗೆ ಈ ದೇಶದಲ್ಲಿ ಯಾವುದೂ ಅಸಾಧ್ಯ ಎನ್ನಿಸಿಲ್ಲ. ಆದರೆ ನಮ್ಮ ತಲೆಯ ಮೇಲಿರುವ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ಎಂಬ ಹೊರೆಯನ್ನು ಹೇಗೆ ಕೆಳಗುರುಳಿಸುವುದು ಎಂಬುದೇ ನನ್ನ ಸಮಸ್ಯೆಯಾಗಿತ್ತು. ಈ ಧರ್ಮದ ಕುರಿತು ಎಲ್ಲಾ ಅರಿವನ್ನು ನಿಮಗೆ ನೀಡುವುದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ. ಒಂದು ಪುಸ್ತಕ ಬರೆಯುವ ಮೂಲಕ ನಿಮ್ಮ ಎಲ್ಲಾ ಸಂಶಯಗಳನ್ನು ದೂರ ಮಾಡಿ ಪೂರ್ಣ ಅರಿವಿನತ್ತ ಕೊಂಡೊಯ್ಯುತ್ತೇನೆ. ಇಂದು ನೀವು ನನ್ನ ಮೇಲೆ ವಿಶ್ವಾಸವಿಡಬೇಕು.

ನಿಮ್ಮ ಜವಾಬ್ದಾರಿ ಇನ್ನೂ ದೊಡ್ಡದು. ನಿಮ್ಮ ಕ್ರಿಯೆಗಳು ಉಳಿದವರು ನಿಮ್ಮನ್ನು ಗೌರವಿಸುವಂತಿರಬೇಕು. ಹೊಸ ಧರ್ಮವನ್ನು ಸ್ವೀಕರಿಸುವುದೆಂದರೆ ಮತ್ತೊಂದು ಭಾರವನ್ನು ಕುತ್ತಿಗೆಗೆ ಕಟ್ಟಿಕೊಂಡಂತೆಂದು ಭಾವಿಸಬೇಡಿ. ಭಾರತದ ಮಣ್ಣು ಬೌದ್ಧ ಧರ್ಮಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಏನೂ ಅಲ್ಲ. ಬೌದ್ಧ ಧರ್ಮವನ್ನು ಅತ್ಯುತ್ತಮವಾದ ವಿಧಾನದಲ್ಲಿ ಪಾಲಿಸಲು ನಾವು ಕಟಿಬದ್ಧರಾಗಬೇಕು. ಮಹಾರ್ ಜನರು ಬೌದ್ಧ ಧರ್ಮದ ಗೌರವವನ್ನು ಕಡಿಮೆ ಮಾಡಿದರು ಎಂಬ ಮಾತು ಕೇಳಿಬರಬಾರದು. ನಾವೂ ನಿರ್ಣಯವನ್ನು ತೆಗೆದುಕೊಂಡು ಅದನ್ನು ಕಾರ್ಯರೂಪಕ್ಕೆ ತರಬೇಕು. ಇದರಿಂದ ನಮ್ಮನ್ನು ನಾವೇ ರಕ್ಷಿಸಿಕೊಳ್ಳುತ್ತೇವೆ. ಆ ಮೂಲಕ ದೇಶವನ್ನು ರಕ್ಷಿಸುತ್ತೇವೆ. ಅಷ್ಟು ಮಾತ್ರವಲ್ಲ ಜಗತ್ತನ್ನೂ ರಕ್ಷಿಸುತ್ತೇವೆ. ಏಕೆಂದರೆ ಬೌದ್ಧ ಧರ್ಮವಷ್ಟೇ ಜಗತ್ತನ್ನು ರಕ್ಷಿಸಬಲ್ಲ ಧರ್ಮ. ಎಲ್ಲಿಯ ತನಕ ಪ್ರಪಂಚದಲ್ಲಿ ಸಮಾನತೆಯಿರುವುದಿಲ್ಲವೋ ಅಲ್ಲಿಯ ತನಕ ಶಾಂತಿಯೂ ಇರುವುದಿಲ್ಲ.

ನಾವು ಕೆಲವು ನಿರ್ಣಯಗಳನ್ನು ತೆಗೆದುಕೊಂಡೆವು. ಕೆಲವು ಆಶಯಗಳನ್ನು ಹೇಳಿಕೊಂಡೆವು. ಯುವಕರು ಕೇವಲ ತಮ್ಮ ಹೊಟ್ಟೆ ತುಂಬಿಸಿಕೊಳ್ಳಬಲ್ಲ ಸಣ್ಣ ಕೆಲಸಗಳಿಗೆ ಸೀಮಿತರಾಗಬಾರದು. ನಾವಿಂದು ‘ನನ್ನ ಗಳಿಕೆಯ ಇಪ್ಪತ್ತರಲ್ಲಿ ಒಂದು ಭಾಗವನ್ನು ಈ ಕೆಲಸಕ್ಕಾಗಿ ಕೊಡುತ್ತೇನೆ’ ಎಂಬ ನಿರ್ಣಯವನ್ನ ಕೈಗೊಳ್ಳಬೇಕು. ಈ ನಿರ್ಣಯಕ್ಕೆ ನೀವೆಲ್ಲರೂ ನನಗೆ ಜೊತೆಯಾಗಬೇಕು. ತಥಾಗತ ಆರಂಭದಲ್ಲಿ ಧರ್ಮೋಪದೇಶ ಮಾಡಿ ಕೊಟ್ಟ ಸಲಹೆ ಇದು: ‘ಈ ಧರ್ಮವನ್ನು ಪಸರಿಸಿ’. ಹೀಗೆ ಯೆಶಾ ಮತ್ತು ಅವನ ನಲವತ್ತು ಮಂದಿ ಗೆಳೆಯರು ಬೌದ್ಧ ಮತ ಸ್ವೀಕರಿಸಿದರು.

ಯೆಶಾ ಶ್ರೀಮಂತ ಕುಟುಂಬದಿಂದ ಬಂದವನು, ಆತನಿಗೆ ಭಗವಾನ್ ಹೇಳಿದ, ‘ಈ ಧರ್ಮ ಹೇಗಿದೆ ಎಂದರೆ, ಅದು ಬಹುಜನರ ಕಲ್ಯಾಣಕ್ಕಾಗಿ, ಬಹುಜನರ ಗೆಳೆತನಕ್ಕಾಗಿ, ಜಗತ್ತಿಗೆ ಕರುಣೆಯನ್ನು ನೀಡುವುದಕ್ಕಾಗಿ. ಧರ್ಮವೆಂಬುದು ಕಲ್ಯಾಣವನ್ನು ಆರಂಭ ಮಧ್ಯ ಮತ್ತು ಅಂತ್ಯದಲ್ಲಿ ಇಟ್ಟುಕೊಂಡಿರುವಂಥದ್ದು’. ಆ ಕಾಲದ ಸ್ಥಿತಿಯಲ್ಲಿ ಆ ಬಗೆಯಲ್ಲಿ ತಥಾಗತ ಧರ್ಮವನ್ನು ಪಸರಿಸುವ ಹಾದಿಯನ್ನು ತೆರೆದುಕೊಟ್ಟ.

ಈಗ ನಾವೂ ಅಂಥದ್ದೊಂದು ಹಾದಿಯನ್ನು ಸಿದ್ಧಪಡಿಸಬೇಕು. ಈ ಕಾರ್ಯಕ್ರಮದ ನಂತರ ಒಬ್ಬರು ಮತ್ತೊಬ್ಬರಿಗೆ ದೀಕ್ಷೆ ಕೊಡಬೇಕು. ಪ್ರತಿಯೊಬ್ಬ ಬೌದ್ಧನೂ ಇನ್ನೊಬ್ಬನಿಗೆ ದೀಕ್ಷೆ ಕೊಡುವ ಅಧಿಕಾರ ಹೊಂದಿದ್ದಾನೆಂದು ನಾನಿಲ್ಲಿ ಘೋಷಿಸುತ್ತೇನೆ.

ಮೂಲ ಮರಾಠಿ ಭಾಷಣವನ್ನು 1964ರಲ್ಲಿ ರೇಖಾ ದಾಮ್ಲೆ ಮತ್ತು ಎಲಿನಾರ್ ಝೆಲಿಯಟ್ ಇಂಗ್ಲಿಷ್‌ಗೆ ಭಾಷಾಂತರಿಸಿದ್ದಾರೆ. ಇದರ ಪೂರ್ಣ ಪಠ್ಯ ಈ ಲಿಂಕ್‌ನಲ್ಲಿ ಲಭ್ಯ: http://goo.gl/JAGi9a

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.