ಬೆಂಗಳೂರು: ‘ವಿಜ್ಞಾನಿಗಳು ದೇವರನ್ನು ಏಕೆ ತಿರಸ್ಕರಿಸಬೇಕು? ಅವರು ತಮ್ಮ ಸಂಶೋಧನೆಯ ಆಚೆಗೆ ದೇವರನ್ನು ನಂಬಿದರೆ ನಮಗಾಗುವ ನಷ್ಟವೇನು. ವಿಜ್ಞಾನವನ್ನು ಮೀರಿದ ಎಷ್ಟೋ ನಂಬಿಕೆಗಳು ಇರುತ್ತವೆ. ಅವುಗಳನ್ನು ನಾವು ತಿರಸ್ಕರಿಸಬೇಕೆಂದಿಲ್ಲ’
–ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅವರು ಪ್ರಶ್ನೆಯೊಂದಕ್ಕೆ ನೀಡಿದ ಉತ್ತರವಿದು.

ಶ್ರೀರಂಗಪಟ್ಟಣದ ಪ್ರಿಯದರ್ಶನ ಸಾಂಸ್ಕೃತಿಕ ವೇದಿಕೆ ಮತ್ತು ಭೈರಪ್ಪ ಅಭಿಮಾನಿ ಬಳಗ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಭೈರಪ್ಪ ಅವರ ಹೊಸ ಕಾದಂಬರಿ ‘ಯಾನ’ ಕುರಿತ ವಿಚಾರ ಸಂಕಿರಣದಲ್ಲಿ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಯ್ದ ಪ್ರಶ್ನೋತ್ತರದ ಸಾರಾಂಶ ಇಲ್ಲಿದೆ...

* ‘ಯಾನ’ ಕಾದಂಬರಿಯಲ್ಲಿ ವೈಜ್ಞಾನಿಕತೆ, ವಿಜ್ಞಾನ ಹೇಳುವ ಸಂದರ್ಭದಲ್ಲಿ ಗೊಂದಲ ಸೃಷ್ಟಿಸಿ ಸ್ಪಷ್ಟೀಕರಣ ನೀಡಲು ಮರೆತಿದ್ದೀರಾ?
ನಮ್ಮಲ್ಲಿ ವಿಜ್ಞಾನ ಗೊತ್ತಿಲ್ಲದ ಕಲಾ ಪದವೀಧರರು ಮಾತ್ರ ಬುದ್ಧಿಜೀವಿಗಳೆಂದು ಕರೆದುಕೊಳ್ಳುತ್ತಿದ್ದಾರೆ. ಅವರ ದೃಷ್ಟಿಯಲ್ಲಿ ವಿಜ್ಞಾನಿಗಳು ಬುದ್ಧಿಜೀವಿಗಳೇ ಅಲ್ಲ.
ಸಾಮಾಜಿಕ ಸಿದ್ಧಾಂತಗಳನ್ನು ರೂಪಿಸಿಕೊಂಡು ಪ್ರಗತಿಗೆ ಪರ, ವಿರೋಧ ಎಂದು ವಿಭಾಗಿಸಿ ಅದಕ್ಕಾಗಿ ನಾವು ಬಾವುಟ ಹಿಡಿದು ಪ್ರತಿಭಟಿಸಬೇಕು ಎನ್ನುವಂತಹ ವಿಚಾರಗಳು ವಿಶ್ವವಿದ್ಯಾಲಯಗಳ ಮಾನವಿಕ ವಿಭಾಗಗಳಲ್ಲಿ ಮಾತ್ರ ನಡೆಯುತ್ತವೆ. ಇದು ವಿಜ್ಞಾನ ವಿಭಾಗಗಳಲ್ಲಿ ನಡೆಯುವುದಿಲ್ಲ. ಐಐಟಿ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಗಳಲ್ಲಿ ಇಂತಹ ಪ್ರತಿಭಟನೆಗಳು ನಡೆಯುವುದೇ ಇಲ್ಲ. ಯಾಕೆಂದರೆ ಅವರು ಶುದ್ಧ ವಿಜ್ಞಾನಿಗಳು. ಅವರಿಗೆ ವಿಜ್ಞಾನದ ಪರಿಧಿಯ ಅರಿವಿದೆ. ಗೊತ್ತಿಲ್ಲದ ವಿಷಯಕ್ಕೆ ನಾವು ತಲೆಹಾಕಬಾರದು ಎನ್ನುವುದು ವಿಜ್ಞಾನ ಅಭ್ಯಸಿಸುವವರಿಗೆ ಗೊತ್ತಿದೆ. ಆದರೆ, ಮಾನವಿಕ ವಿಭಾಗದವರು ಎಲ್ಲವೂ ನಮಗೆ ಗೊತ್ತಿದೆ ಎನ್ನುತ್ತಾರೆ. ಸಾಹಿತ್ಯದ ವಿದ್ಯಾರ್ಥಿಗಳು ಸಾಹಿತ್ಯವೊಂದನ್ನು ಬಿಟ್ಟು ಉಳಿದೆಲ್ಲವುಗಳಿಗೂ ಜೈ ಎನ್ನುತ್ತಾರೆ.

* ಭೈರಪ್ಪನವರ ಕೃತಿಗಳಿಗೆ ಸಂಬಂಧಿಸಿದಂತೆ ಕನ್ನಡದ ಹೆಸರಾಂತ ಕೆಲ ಲೇಖಕರು ಒಂದು ರೀತಿಯ ನಕಾರಾತ್ಮಕ ಧೋರಣೆ ತಳೆಯುವುದೇಕೆ?
ಯಾವುದೇ ಪ್ರಶಸ್ತಿಗೆ ನನ್ನ ಹೆಸರು ಪ್ರಸ್ತಾವಗೊಂಡಾಗ ಆತ ವಿವಾದಾತ್ಮಕ ವ್ಯಕ್ತಿ, ಜಾತ್ಯತೀತವಾದಿಯಲ್ಲ ಎಂದು ಕೆಲವರು ನನಗೆ ಪ್ರಶಸ್ತಿ ತಪ್ಪಿಸುವ ಕೆಲಸ ಮಾಡುತ್ತಾರೆ. ನಮ್ಮಲ್ಲಿ ಪ್ರಶಸ್ತಿ ಇತ್ಯಾದಿಗಳ ಆಯ್ಕೆ ಮೇಲೆ ಕೆಲವರ ಹಿಡಿತವಿದೆ. ಎಷ್ಟೋ ದಶಕಗಳಿಂದ ಒಂದು ಸ್ನೇಹಿತರ ವಲಯದವರು ಇದನ್ನು ಆಳುತ್ತಲೇ ಇದ್ದಾರೆ.

* ‘ಯಾನ’ದಲ್ಲಿ ಬರುವ ಹೆಣ್ಣು ಅತ್ಯಾಚಾರಕ್ಕೆ ಹಾತೊರೆಯುತ್ತಾಳೆ ಎಂಬ ಮಾತಿದೆ ಎಂದು ಕೆಲ ಮಹಿಳಾ ಸಂಘಟನೆಗಳು ಪ್ರತಿಭಟನೆ ವ್ಯಕ್ತಪಡಿಸಿದವು. ಇದಕ್ಕೆ ನಿಮ್ಮ ಅಭಿಪ್ರಾಯವೇನು?
ಈ ಪ್ರಶ್ನೆಯಲ್ಲಿರುವ ಮಾತನ್ನು ಯಾರು ಯಾರಿಗೆ ಯಾವ ಸಂದರ್ಭದಲ್ಲಿ ಹೇಳಿದರು ಎನ್ನುವುದು ಮುಖ್ಯ. ಅದು ಇಂಗಾಳ ಪಾತ್ರದ ಮಾತೇ ವಿನಾ ನನ್ನ ಮಾತಲ್ಲ. ಯಾವುದೇ ಸಂಘಟನೆ ಮಾಡಿಕೊಂಡಿರುವವರಿಗೆ ನಿಜವಾಗಿ ಸಾಹಿತ್ಯ ಅರ್ಥವಾಗುವುದಿಲ್ಲ. ಏಕೆಂದರೆ ಅವರು ಸಾಹಿತ್ಯದ ಯಾವುದೇ ಕೃತಿಯನ್ನು ತಮ್ಮ ದೃಷ್ಟಿಯಲ್ಲಿಯೇ ನೋಡುತ್ತಾರೆ.
ಎಲ್ಲಿದ್ದರೂ ತಪ್ಪು ಕಂಡು ಹಿಡಿಯಬೇಕು ಎನ್ನುವವರು ಪ್ರತಿಯೊಂದಕ್ಕೂ ತಪ್ಪು ಕಂಡೇ ಹಿಡಿಯುತ್ತಾರೆ. ಕೃತಿಯಲ್ಲಿರುವ ಸನ್ನಿವೇಶವನ್ನು ಅರ್ಥಮಾಡಿಕೊಳ್ಳದವರು ಇನ್ನೇನು ಮಾಡಲು ಸಾಧ್ಯ.

* ವೇದ, ಉಪನಿಷತ್ತು, ರಾಮಾಯಣ, ಮಹಾಭಾರತ ಇವುಗಳಲ್ಲಿ ಇರುವ ಭಾರತೀಯ ತತ್ವಜ್ಞಾನದ ಕೆಲ ಅಂಶಗಳನ್ನಾದರೂ ‘ಯಾನ’ ಓದುವ ಮೊದಲು ತಿಳಿದುಕೊಂಡಿರಬೇಕೆ?
ಯಾನಕ್ಕೆ ಮಾತ್ರವಲ್ಲ. ಯಾವುದೇ ಸಾಹಿತ್ಯ ಕೃತಿಯನ್ನು ಓದುವ ಪೂರ್ವದಲ್ಲಿ ನಮ್ಮ ಸಂಸ್ಕೃತಿಯ ಮುಖ್ಯ ಅಂಶಗಳನ್ನು ನಾವು ತಿಳಿದುಕೊಂಡಿರಲೇ ಬೇಕು. ಪ್ರಕೃತಿ ಪುರುಷ ಏನು ಎನ್ನುವುದು ಗೊತ್ತೆ ಇಲ್ಲದಿದ್ದರೆ ಯಾನದಲ್ಲಿ ಬರುವ ಕೃಷ್ಣ ಗಹ್ವರದ ಕಲ್ಪನೆ ಸೇರಿದಂತೆ ಅನೇಕ ಅಂಶಗಳು ಅರ್ಥವೇ ಆಗುವುದಿಲ್ಲ.
ಒಬ್ಬ ವಿಮರ್ಶಕರು, ಭೈರಪ್ಪ ಮಹಿಳೆಯನ್ನು ದೇವತೆಯಂತೆ ಇಲ್ಲವೇ ಭೋಗದ ವಸ್ತುವಿನಂತೆ ಕಾಣುತ್ತಾರೆ ಎಂದು ಬರೆಯುತ್ತಾರೆ. ಪ್ರಕೃತಿ ಪುರುಷದಂತಹ ನಮ್ಮ ಸಂಪ್ರದಾಯ ಗೊತ್ತಿಲ್ಲದೆ ಇರುವವರು ಯಾವಾಗಲೂ ತಪ್ಪೇ ತಿಳಿದುಕೊಳ್ಳುತ್ತಾರೆ. ಆದರೆ, ನಮ್ಮಲ್ಲಿ ಯಾವಾಗಲೂ ಇಂತಹವರೆ ವಿಮರ್ಶೆ ಬರೆಯುವವರು.

* ಕಾದಂಬರಿಯಲ್ಲಿ ವೈಜ್ಞಾನಿಕ ಚೌಕಟ್ಟಿರುವುದು ಸಹಜ. ಆದರೆ, ಸಾಂಪ್ರದಾಯಿಕ ಚೌಕಟ್ಟನ್ನು ಉದ್ದೇಶಪೂರ್ವಕವಾಗಿ ಅಳವಡಿಸಿದ್ದೀರಾ? ಅಥವಾ ರಚನೆ ಸಮಯದಲ್ಲಿ ಕತೆ ಆ ರೀತಿ ಬೆಳೆಯುತ್ತಾ ಹೋಯಿತೆ?
ಎಷ್ಟೋ ಸಂದರ್ಭದಲ್ಲಿ ಬರೆಯುತ್ತಿರುವಾಗ ನಮ್ಮ ಆಲೋಚನೆ ಈ ರೀತಿ ಬೆಳೆಯುತ್ತ ಹೋಗುತ್ತದೆ. ಕಾದಂಬರಿಯಲ್ಲಿ ಬಾಹ್ಯಾಕಾಶ ಸಂಸ್ಥೆ ಮುಖ್ಯಸ್ಥ ವೆಂಕಟ್ ತಿರುಪತಿಗೆ ಹೋಗುವ ಸನ್ನಿವೇಶ ಮೊದಲೇ ನನ್ನ ಮನಸ್ಸಿನಲ್ಲಿ ಮೂಡಿರಲಿಲ್ಲ. ಅದು ಬರೆಯುವಾಗ ಬಂತು. ಇಲ್ಲಿ ತಿರುಪತಿಗೆ ಹೋದದ್ದಕ್ಕೆ ಆಕ್ಷೇಪ ವ್ಯಕ್ತಪಡಿಸುವವರು ಲೆಕ್ಕಪತ್ರ ವಿಭಾಗದವರು. ಅವರೇನಾದರೂ ಸಂಸತ್ತಿಗೆ ಇದನ್ನು ವರದಿ ಮಾಡಿ ಬಿಟ್ಟರೆ ನಮ್ಮ ಜಾತ್ಯತೀತ ಸರ್ಕಾರದವರು ಇವರು ತಿರುಪತಿಗೆ ಏಕೆ ಹೋದರು ಎಂದು ಕ್ರಮ ಕೈಗೊಳ್ಳುತ್ತಾರೆ. ಪಾತ್ರಗಳು ಸಂಕೀರ್ಣವಾಗಿ ಬೆಳೆಯುವುದು ಈ ರೀತಿ ಆಲೋಚಿಸುವುದರಲ್ಲಿಯೇ.

* ಸಹಸ್ರಾರು ವರ್ಷ ಯಾನಕ್ಕೆ ಬೇಕಾದ ಬಾಳಿಕೆಯ ಬಟ್ಟೆ, ಸಲಕರಣೆ ಬಗ್ಗೆ ಕಾದಂಬರಿಯಲ್ಲಿ ಉಲ್ಲೇಖ ಯಾಕಿಲ್ಲ.
ವಿಶೇಷ ರೀತಿಯ ಪ್ಲಾಸ್ಟಿಕ್ ಅನ್ನು ವಿಜ್ಞಾನಿಗಳು ತಯಾರಿಸುತ್ತಾರೆ ಎನ್ನುವುದನ್ನು ನಾವು ಕಲ್ಪನೆ ಮಾಡಿಕೊಳ್ಳಬೇಕು. ಯಾವುದೇ ಸಾಹಿತ್ಯ ಕೃತಿಯಲ್ಲಿ ಏನು ಕೊಟ್ಟಿರುತ್ತಾರೆ ಅದನ್ನು ಸ್ವೀಕರಿಸಬೇಕು. ಬದಲು, ಪ್ರತಿಯೊಂದನ್ನು ಇದು ಸಾಧ್ಯವೇ ಎನ್ನುವ ಪ್ರಶ್ನೆಗಳನ್ನು ಎತ್ತುತ್ತ ಹೋದರೆ ನೀವು ಸಾಹಿತ್ಯ ಓದಲು ಸಾಧ್ಯವಿಲ್ಲ.

* ‘ಯಾನ’ದ ಮೇಲೆ ಭಾರತ ಮೂಲದ ಮಹಿಳಾ ಗಗನಯಾತ್ರಿಗಳಾದ ಕಲ್ಪನಾ ಚಾವ್ಲಾ ಮತ್ತು ಸುನೀತಾ ವಿಲಿಯಮ್ಸ್ ಅವರ ಛಾಯೆ ಬಿದ್ದಿದೆಯಾ?
ನನ್ನ ಕಾದಂಬರಿಯಲ್ಲಿರುವುದು ಕಲ್ಪಿತ ಪಾತ್ರಗಳು ಮಾತ್ರ.

* ಭಾರತದ ಯುವ ಪೀಳಿಗೆಗೆ ಯಾನದ ಸಂದೇಶವೇನು?
ವಿಜ್ಞಾನವನ್ನು ಹೆಚ್ಚು ಹೆಚ್ಚು ಓದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.