ಸೋಮವಾರ, 30 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಧನೆಗೆ ಅಡ್ಡಿಯಾಗದ ಆರ್ಥಿಕ ಮುಗ್ಗಟ್ಟು

Published : 9 ಮೇ 2014, 10:03 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ಆ ಇಬ್ಬರು ವಿದ್ಯಾರ್ಥಿನಿಯರು ಎಸ್‌ಎಸ್‌­ಎಲ್‌ಸಿ ವರೆಗೆ ಕನ್ನಡ ಮಾಧ್ಯಮ­ದಲ್ಲಿಯೇ ಓದಿದವರು. ಆರ್ಥಿಕವಾಗಿ ದುರ್ಬಲ­ವಾಗಿರುವ ಕೌಟುಂಬಿಕ ಹಿನ್ನೆಲೆ ಹೊಂದಿರು­ವವರು. ಆದರೆ, ದ್ವಿತೀಯ ಪಿಯು ವಿಜ್ಞಾನದಲ್ಲಿ ಉತ್ತಮ ಸಾಧನೆ ಮಾಡಲು ಅವರಿಗೆ ಈ ಅಂಶಗಳು ಅಡ್ಡಿಯಾಗಲಿಲ್ಲ. ಇಬ್ಬರೂ ವೈದ್ಯರಾಗಬೇಕು ಎಂಬ ಗುರಿಯನ್ನು ಹೊಂದಿದ್ದಾರೆ.

ನಗರದ ಪಿ.ಸಿ.ಜಾಬಿನ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದ ಲಕ್ಷ್ಮಿ ಶಿರಗುಪ್ಪಿ ಹಾಗೂ ಮಂಜುಳಾ ಬಮಗೋಡ ಅವರೇ ಬಡತನವನ್ನು ಮೆಟ್ಟಿ ನಿಂತು ಸಾಧನೆ ಮಾಡಿ­ರುವ ವಿದ್ಯಾರ್ಥಿನಿಯರು.
ಲಕ್ಷ್ಮಿ ಶಿರಗುಪ್ಪಿ ಶೇ 92.5ರಷ್ಟು (ಒಟ್ಟು ಅಂಕ 555) ಅಂಕಗಳನ್ನು ಪಡೆದಿದ್ದರೆ, ಮಂಜುಳಾ ಬಮ­ಗೋಡ ಶೇ 89.6 ರಷ್ಟು (536) ಅಂಕಗಳನ್ನು ಪಡೆದು ಮಾದರಿ ಎನಿಸಿದ್ದಾರೆ.

ಈ ಇಬ್ಬರು ವಿದ್ಯಾರ್ಥಿನಿಯರ ಸಾಧನೆ ಬಗ್ಗೆ ಮಹಾವಿದ್ಯಾಲಯದ ಬೋಧಕ ಸಿಬ್ಬಂದಿ ಖುಷಿ ವ್ಯಕ್ತಪಡಿಸಿದರಲ್ಲದೇ, ಆರ್ಥಿಕ ಸಂಕಷ್ಟ ತಮ್ಮ ಶೈಕ್ಷಣಿಕ ಸಾಧನೆಗೆ ಅಡ್ಡಿಯಾಗಲು ಅವ­ಕಾಶ ನೀಡಲಿಲ್ಲ ಎಂದು ಹೆಮ್ಮೆ­ಯಿಂದ ಹೇಳಿದರು. ‘ಪ್ರಜಾವಾಣಿ’ಯೊಂದಿಗೆ ಮಾತ­ನಾಡಿದ ಈ ಇಬ್ಬರು ವಿದ್ಯಾರ್ಥಿನಿಯರು ತಮ್ಮ ಸಾಧನೆ ಬಗ್ಗೆ ಖುಷಿಯಿಂದಲೇ ವಿವರಿಸಿದರು.

ಲಕ್ಷ್ಮಿ ಶಿರಗುಪ್ಪಿ 

ಕುಂದಗೋಳ ತಾಲ್ಲೂಕಿನ ಹೊಸಕಟ್ಟಿ ಗ್ರಾಮದ ವೀರಪ್ಪ ಹಾಗೂ ಚೆನ್ನವ್ವ ಶಿರಗುಪ್ಪಿ ದಂಪತಿ ಪುತ್ರಿ ಲಕ್ಷ್ಮಿ, ಮೊದಲಿ­ನಿಂದಲೂ ಓದಿನಲ್ಲಿ ಮುಂದು. ‘ಎಸ್‌ಎಸ್‌­ಎಲ್‌ಸಿಯಲ್ಲಿ ಶೇ 94.7ರಷ್ಟು ಅಂಕ ಗಳಿಸಿದೆ. ಶೇ 95ರಷ್ಟು ಅಂಕಗಳು ಬಂದಿದ್ದರೆ ಉಚಿತವಾಗಿ ಸೀಟು ಸಿಗುತ್ತಿತ್ತು’ ಎಂದು ಲಕ್ಷ್ಮಿ ಹೇಳಿದಳು.

‘ಕಡಿಮೆ ಅಂಕಗಳು ಬಂದ ಹಿನ್ನೆಲೆಯಲ್ಲಿ ಶುಲ್ಕವನ್ನು ಭರಿಸಬೇಕಾಯಿತು. ಆ ಸಂದರ್ಭ­ದಲ್ಲಿ ‘ಪ್ರಜಾವಾಣಿ’ ನೀಡಿದ ₨ 5000 ವಿದ್ಯಾರ್ಥಿ ವೇತನ ಬಹಳಷ್ಟು ಅನುಕೂಲ­ವಾ­ಯಿತು. ಆ ಹಣದಿಂದಲೇ ಪಿಯುಸಿಗೆ ಪ್ರವೇಶ ಪಡೆಯಲು ಸಾಧ್ಯವಾಯಿತು’ ಎಂದ ಲಕ್ಷ್ಮಿ, ‘ಪ್ರಜಾವಾಣಿ’ಗೆ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆಯೇ ಎಂದು ಭಾವುಕರಾಗಿ ನುಡಿದಳು.

‘ಗ್ರಾಮದಲ್ಲಿ ಮೂರು ಎಕರೆ ಜಮೀನಿದೆ. ಅದೂ ಒಣ ಬೇಸಾಯ. ಹೀಗಾಗಿ ಮನೆಯ ಆರ್ಥಿಕ ಸ್ಥಿತಿ ಹೇಳಿಕೊಳ್ಳುವಂತಿಲ್ಲ. ಆದರೆ, ಓದಬೇಕು ಎಂಬ ಛಲವೇ ನನ್ನ ಸಾಧನೆಗೆ ಮೆಟ್ಟಿಲಾಯಿತು’ ಎಂದೂ ಹೇಳಿದಳು.
ತಂದೆ ವೀರಪ್ಪ ಹಾಗೂ ಚೆನ್ನವ್ವ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ‘ಭಾಳ ಖುಷಿ ಆತ್ರಿ. ಆಕಿನ್ನ ಛಲೋ ಓದ್ಸಿ ಡಾಕ್ಟ್ರನ್ನಾಗಿ ಮಾಡ­ಬೇಕ ಅನ್ಕೊಂಡಿವ್ರಿ’ ಎಂದೂ ಮನದಾಸೆಯನ್ನು ಹೇಳಿದರು.

‘ಸಿಇಟಿಯನ್ನು ಚೆನ್ನಾಗಿ ಬರೆದಿದ್ದೇನೆ. ಉತ್ತಮ ಅಂಕ ಸಿಗುವ ವಿಶ್ವಾಸವಿದೆ. ಅಲ್ಲದೇ, ವೈದ್ಯಕೀಯ ಶಿಕ್ಷಣ ಪಡೆಯ­ಬೇಕು ಎಂಬ ಗುರಿ ಇದೆ’ ಎಂದು ಹೇಳಿದ ಲಕ್ಷ್ಮಿ  ಮಾತಿನಲ್ಲಿ ಪಾಲಕರ ಮನದಿಂಗಿ­ತವನ್ನು ಸಾಕಾರಗೊಳಿಸುವ ವಿಶ್ವಾಸ ವ್ಯಕ್ತವಾಗಿತ್ತು. ಲಕ್ಷ್ಮಿಯ ಉನ್ನತ ವ್ಯಾಸಂಗಕ್ಕೆ ಸಹಾಯ ಮಾಡ ಬಯಸುವವರು ಮೊಬೈಲ್ ಸಂಖ್ಯೆ 9741888368 ಸಂಪರ್ಕಿಸಬಹುದು.

ಮಂಜುಳಾ ಬಮಗೋಡ
ಕುಂದಗೋಳ ತಾಲ್ಲೂಕಿನ ನೂಲ್ವಿ ಗ್ರಾಮದ ಕೂಲಿ ಕಾರ್ಮಿಕ ಮಡಿವಾಳಪ್ಪ ಬಮಗೊಂಡ– ನಿಂಬೆಮ್ಮ ದಂಪತಿ ಪುತ್ರಿ ಮಂಜುಳಾ ಸಾಧನೆಗೆ ಮನೆಯ ಆರ್ಥಿಕ ಸಂಕಷ್ಟ ಸಂಕೋಲೆಯಾಗಲಿಲ್ಲ.
‘ನನ್ನ ತಂದೆ ಹುಬ್ಬಳ್ಳಿಯಲ್ಲಿ ಆರ್.ಎನ್‌.ಶೆಟ್ಟಿ ಕಂಪೆನಿಯಲ್ಲಿ ಕೂಲಿ ಕಾರ್ಮಿಕ. ತಾಯಿ ಹೊಲಗಳಲ್ಲಿ ಕೂಲಿ ಕೆಲಸ ಮಾಡುತ್ತಾರೆ. ನಾನು ಶಾಲಾ ದಿನಗಳಿಂದಲೂ ಓದಿನಲ್ಲಿ ಮುಂದೆ. ಮುಂದೆಯೂ ಚೆನ್ನಾಗಿ ಓದಿ, ವೈದ್ಯೆಯಾಗ­ಬೇಕು ಎಂಬ ಆಸೆ ಇದೆ’ ಎಂದು ಮಂಜುಳಾ ಹೇಳಿದಳು.

‘ಗ್ರಾಮದ ಎಸ್‌.ಜೆ.ಆರ್‌.ಸಿ. ಹೈಸ್ಕೂಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ಓದಿದ್ದು, ಶೇ 94ರಷ್ಟು ಅಂಕಗಳನ್ನು ಪಡೆದೆ. ಮೊದಲ ವರ್ಷ ಪ್ರವೇಶಕ್ಕೆ ₨ 3,000 ಶುಲ್ಕ ಭರಿಸಬೇಕಾಗಿತ್ತು. ಅಷ್ಟೊಂದು ಹಣ ಕೊಡಲು ಕಷ್ಟವಾಯಿತು. ವಿದ್ಯಾ­ಪೋಷಕ ಸಂಸ್ಥೆ ₨ 2,000 ನೆರವು ನೀಡಿದ್ದರಿಂದ ಪ್ರವೇಶ ಪಡೆಯಲು ಸಾಧ್ಯ­ವಾಯಿತು’ ಎಂದು ಹೇಳಿದಳು.

‘ಪಿಯುಸಿ ಎರಡನೇ ವರ್ಷದಲ್ಲಿಯೂ ಇದೇ ಸಮಸ್ಯೆ ಎದುರಾಯಿತು. ₨ 22,000 ಶುಲ್ಕ-­ವನ್ನು ಭರಿಸುವುದು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ಇತ್ತು. ಇಂಗ್ಲಿಷ್‌ ಉಪನ್ಯಾಸಕಿ ಶೀತಲ್‌ ಅವರು ₨ 16,000 ನೆರವು ನೀಡಿ, ಪ್ರವೇಶ ಪಡೆಯಲು ಅನುಕೂಲ ಮಾಡಿಕೊಟ್ಟಿದ್ದನ್ನು ಮರೆಯಲು ಸಾಧ್ಯವಿಲ್ಲ’ ಎಂದೂ ನೆನಪಿಸಿ­ಕೊಂಡಳು, ‘ಸಿಇಟಿ ಛಲೋ ಬರಿದಿನ್ರಿ. ಮುಂದ ಡಾಕ್ಟ್ರ್ ಆಗಬೇಕಂತ ಆಸೆ ಐತ್ರಿ’ ಎಂದು ಹೇಳಲು ಮರೆಯಲಿಲ್ಲ.
ಮಂಜುಳಾಗೆ ನೆರವು ನೀಡಲು ಬಯಸುವ­ವರು ಮೊಬೈಲ್‌ ನಂ. 9164660543 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT