ಬೆಂಗಳೂರು: ಪರ್ಯಾಯ ರಾಜಕಾರಣದ ಮಾತು ಮುನ್ನೆಲೆಗೆ ಬಂದಿರುವ ಈ ದಿನಗಳಲ್ಲೂ ಮುಖ್ಯವಾಹಿನಿ ರಾಜಕೀಯ ಪಕ್ಷಗಳು ಸಾಂಪ್ರದಾಯಿಕ ಶೈಲಿಯ ರಾಜಕಾರಣದಿಂದ ಹೊರಬಂದಿಲ್ಲ. ಇದಕ್ಕೆ ಅಪವಾದವೆಂಬಂತೆ ಕೆಲವೇ ಕ್ಷೇತ್ರಗಳಲ್ಲಿ ವಿಶಿಷ್ಟ ಹಿನ್ನೆಲೆಯ ಸಾಧಕರನ್ನು ಕಣಕ್ಕೆ ಇಳಿಸಿವೆ. ಈ ಪಟ್ಟಿಯಲ್ಲಿ ನಂದನ್ ನಿಲೇಕಣಿ ಅವರದು ಪ್ರಮುಖ ಹೆಸರು.

ಚುನಾವಣಾ ಅಖಾಡದಲ್ಲಿ ಪ್ರಯೋಗ ನಡೆಸಲು ಅಂಜುವ ಕಾಂಗ್ರೆಸ್, ಸಕ್ರಿಯ ರಾಜಕಾರಣದ ಹಿನ್ನೆಲೆ ಇಲ್ಲದ, ಆದರೆ ಉದ್ಯಮಿಯಾಗಿ ಯಶಸ್ವಿಯಾದ, ಸೇವಾ ಕಾರ್ಯಗಳಿಂದ ಪ್ರಸಿದ್ಧಿ ಪಡೆದ ನಿಲೇಕಣಿ ಅವರನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಸಿದೆ. ಸುಶಿಕ್ಷಿತರು ಮತ್ತು ಸಂವೇದನಾಶೀಲ ಮತದಾರರನ್ನು ಒಳಗೊಂಡ ಈ ಕ್ಷೇತ್ರದಿಂದಲೇ ಕಾಂಗ್ರೆಸ್ ಬದಲಾವಣೆಯ ಅಧ್ಯಾಯವೊಂದನ್ನು ಆರಂಭಿಸುವ ಉಮೇದಿನಲ್ಲಿದೆ.

ನಿಲೇಕಣಿ ಅವರು, ಸಕ್ರಿಯ ರಾಜಕೀಯಕ್ಕೆ ಹೊಸಬರಾದರೂ ಮತದಾರರಿಗೆ ಹೊಸಬರಲ್ಲ. ಬೆಂಗಳೂರನ್ನು ಭಾರತದ ಮಾಹಿತಿ ತಂತ್ರಜ್ಞಾನ ರಾಜಧಾನಿಯಾಗಿಸಿದ ಪ್ರಮುಖರಲ್ಲಿ ಇವರೂ ಒಬ್ಬರು. ಐ.ಟಿ. ಉದ್ಯಮದಲ್ಲಿ ಯುವ ಪೀಳಿಗೆಗೆ ಹೊಸ ಅವಕಾಶಗಳನ್ನು ಸೃಷ್ಟಿಸಿದ ಇವರು, ಬೆಂಗಳೂರನ್ನು ಹಲವು ಸಾಧ್ಯತೆಗಳ ನಗರಿಯನ್ನಾಗಿ ಪರಿವರ್ತಿಸುವ ಕನಸು ಹೊತ್ತಿದ್ದಾರೆ.

ದೆಹಲಿಯಲ್ಲಿ ಬೆಂಗಳೂರಿನ ಧ್ವನಿಯಾಗಿ ಕೆಲಸ ಮಾಡುವ ಭರವಸೆಯೊಂದಿಗೆ ಕ್ಷೇತ್ರದ ಜನರ ನಿಕಟ ಸಂಪರ್ಕಕ್ಕೆ ಕ್ಷೇತ್ರ ನಿರ್ವಹಣಾ ವ್ಯವಸ್ಥೆಯನ್ನು ರೂಪಿಸುವ ಆಶಯ ಹೊಂದಿರುವ ನಿಲೇಕಣಿ, ರಾಜಕಾರಣದ ಸೆಳೆತ, ಉದ್ದೇಶ ಹಾಗೂ ಜನಸ್ಪಂದನದ ಅನುಭವಗಳ ಕುರಿತು ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ...

*ರಾಜಕೀಯದ ಸೆಳೆತಕ್ಕೆ ದಿಢೀರನೆ ಒಳಗಾಗಿದ್ದು ಹೇಗೆ? ಉದ್ದೇಶ ಏನು?
ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂಬ ನನ್ನ ನಿರ್ಧಾರಕ್ಕೆ ಒಂದು ವರುಷದ ಪ್ರಾಯ. ಅದಕ್ಕೂ ಹಿಂದೆ ಈ ಬಗ್ಗೆ ಯೋಚಿಸಿಯೂ ಇರಲಿಲ್ಲ, ಬರೀ ಟೆಕ್ನೊಕ್ರಾಟ್ ಆಗಿದ್ದೆ.ಜನರ ಆಕಾಂಕ್ಷೆಗಳು ಹೆಚ್ಚುತ್ತಿವೆ. ಆದರೆ, ಅದಕ್ಕೆ ಸ್ಪಂದಿಸಲು ಆಡಳಿತ ವ್ಯವಸ್ಥೆ ಶಕ್ತಿ ಮತ್ತು ವೇಗ ಪಡೆದಿಲ್ಲ. ಅದಕ್ಕೆ ದೊಡ್ಡ ಮಟ್ಟದಲ್ಲಿ ಬದಲಾವಣೆ ಆಗಬೇಕಿದೆ. ಆ ಬದಲಾವಣೆ ರಾಜಕೀಯದಿಂದ ಮಾತ್ರ ಸಾಧ್ಯ ಅಂತ ಅನ್ನಿಸಿತು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಜನರಿಂದ ದಕ್ಕುವ ರಾಜಕೀಯ ಅಧಿಕಾರ ಬೇಕು. ಅದು ಇದ್ದರೆ ಸಕಾರಾತ್ಮಕ ಬದಲಾವಣೆಗಳಿಗೆ ಎಲ್ಲರೂ ಓಗೊಡುತ್ತಾರೆ. ಆ ಚಿಂತನೆಯ ಪರಿಣಾಮವೇ ಈ ಸ್ಪರ್ಧೆ.

*ನೇರ ಚುನಾವಣೆಯ ‘ಕಡುಕಷ್ಟ’ವನ್ನು ಮೈಮೇಲೆ ಎಳೆದುಕೊಂಡಿದ್ದರ ಮರ್ಮ?
ಜನರ ಜತೆ ಒಡನಾಡಲು ಮತ್ತು ಅವರ ಸಮಸ್ಯೆಗಳನ್ನು ಹತ್ತಿರದಿಂದ ತಿಳಿಯಲು ನೇರ ಚುನಾವಣೆ ಅವಕಾಶ ಕಲ್ಪಿಸುತ್ತದೆ.

‘ಗೆಲುವಿನ ವಿಶ್ವಾಸ ಹೆಚ್ಚಿಸಿದ ಜನಸ್ಪಂದನ’
ಜನರಿಂದ ನೇರವಾಗಿ ಆಯ್ಕೆಯಾದರೆ ನಮ್ಮ ಮಾತಿಗೆ ಕಿಮ್ಮತ್ತು ಇರುತ್ತದೆ. ಬದಲಾವಣೆಯನ್ನು ಪ್ರತಿಪಾದಿಸಲು ಅದರಿಂದ ಸಹಾಯ ಆಗುತ್ತದೆ. ಹಾಗಾಗಿ ಉದ್ದೇಶಪೂರ್ವಕವಾಗಿಯೇ ಆರಿಸಿಕೊಂಡಿದ್ದೇನೆ.

*ಮಾಹಿತಿ ತಂತ್ರಜ್ಞಾನ (ಐ.ಟಿ) ಉದ್ಯಮದ ಅನುಭವ ಸಾರ್ವಜನಿಕ ಜೀವನದಲ್ಲಿ ಹೇಗೆ ನೆರವಾಗಬಹುದು?
ಯಾವುದೇ ಕೆಲಸ ಕೈಗೆತ್ತಿಕೊಂಡರೂ ಅದನ್ನು ಪೂರ್ಣಗೊಳಿಸದೆ ಬಿಡುವುದಿಲ್ಲ. ಅದು ನನ್ನ ಜಾಯಮಾನ. ಆರಂಭಿಸಿದ ಕೆಲಸವನ್ನು ಕಾಲಮಿತಿಯೊಳಗೆ, ನಿಗದಿಗೊಳಿಸಿದ ಅಂದಾಜು ವೆಚ್ಚಕ್ಕೇ ಪೂರ್ಣಗೊಳಿಸಬೇಕು ಎಂಬ ಛಲವನ್ನು ಐ.ಟಿ. ಸಂಸ್ಥೆ ಕಟ್ಟಿ, ಬೆಳೆಸಿದ ಪ್ರಕ್ರಿಯೆಯಲ್ಲಿ ನಾನು ರೂಢಿಸಿಕೊಂಡಿದ್ದೇನೆ. ಆ ಅನುಷ್ಠಾನ ಪರಿಣತಿ ಇಲ್ಲಿ ನೆರವಾಗಲಿದೆ. ಸಮಸ್ಯೆಗಳ ಪರಿಹಾರಕ್ಕೆ, ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿ ಒದಗಿಬರಲಿದೆ.

*ರಾಜಕಾರಣಿಯಾಗಿ ರೂಪಾಂತರಗೊಂಡು ತಿಂಗಳಾಗಿದೆ. ಈ ತಿಂಗಳ ಅನುಭವ ಹೇಗಿದೆ?
ಬೆಳಿಗ್ಗೆ 5.30ಕ್ಕೆ ದಿನಚರಿ ಶುರು. ಉದ್ಯಾನಗಳಿಗೆ ವಾಯು ವಿಹಾರಕ್ಕೆ ಬರುವ ಮತದಾರರೊಂದಿಗೆ ಮುಖಾಮುಖಿಯಾಗುವ ಮೂಲಕ ಪ್ರಚಾರ ಕಾರ್ಯ ಆರಂಭವಾಗುತ್ತದೆ. ರಾತ್ರಿ ತಡವಾಗಿ ಮಲಗುತ್ತೇನೆ. ಬೆಳಿಗ್ಗೆ ಬೇಗ ಏಳುತ್ತೇನೆ. ವಾರಾಂತ್ಯದ ಬಿಡುವಿನ ಭಾಗ್ಯವೂ ಇಲ್ಲ. ವಾರಾಂತ್ಯದಲ್ಲಿ ಕೆಲಸ ಮತ್ತಷ್ಟು ಹೆಚ್ಚು ಎಂಬುದು ವಿಶೇಷ. ಬ್ಯುಸಿ ಬ್ಯುಸಿ. ಅದರ ಗಮ್ಮತ್ತೇ ಬೇರೆ. ಸಂಪೂರ್ಣ ಹೊಸ ಬಗೆಯ ಅನುಭವ. ಕಲಿಯುತ್ತಾ ಇದ್ದೇನೆ. ಕಲಿಯುವುದು ಇನ್ನೂ ಬಹಳಷ್ಟಿದೆ.

*ಜನರ ಸ್ಪಂದನ ಹೇಗಿದೆ?
ಜನಸ್ಪಂದನವೇ ಚೈತನ್ಯದ ಗುಟ್ಟು. ಮುಖ ಭಾವದಿಂದ, ಸಂಜ್ಞೆಗಳ ಮೂಲಕ, ‘ನಿಮ್ಮ ಜೊತೆಗಿದ್ದೇವೆ’ ಎಂದು ಹೇಳುವುದಿದೆಯಲ್ಲ ಅದೇ ಭರವಸೆಯ ಬೆಳಕು. ಅವರ ಕ್ರಿಯೆ, ಪ್ರತಿಕ್ರಿಯೆಗಳು ಗೆಲ್ಲುವ ವಿಶ್ವಾಸವನ್ನು ಗಟ್ಟಿಗೊಳಿಸುತ್ತಿವೆ.

ರಾಜಕಾರಣಕ್ಕೆ ಒಳ್ಳೆಯವರು, ಪ್ರಾಮಾಣಿಕರು, ಬೇರೆ ಬೇರೆ ಕ್ಷೇತ್ರಗಳ ಪರಿಣತರು ಬರಬೇಕು. ಬದಲಾವಣೆ ತರಬೇಕು ಎಂದು ಜನರು ನಿರೀಕ್ಷಿಸುತ್ತಿದ್ದಾರೆ. ಅವರ ಈ ನಿರೀಕ್ಷೆ ನನಗೆ ಒಳಿತು ತರಲಿದೆ.

*ಜನರು ಬದಲಾವಣೆ ಬಯಸುತ್ತಿದ್ದಾರೆ ಎಂದು ಗೊತ್ತಾದದ್ದು ಹೇಗೆ?
ಜೀವನದಲ್ಲಿ ನಾನು ಹಲವು ವಿಶೇಷ ಅನುಭವಗಳನ್ನು ಪಡೆದಿದ್ದೇನೆ. ಅದರಲ್ಲಿ ಮೊದಲನೆಯದು, ಇನ್ಫೊಸಿಸ್ ಜತೆಗಿನ ಒಡನಾಟ. ಈ ಸಂಸ್ಥೆಯ ಸಹಸಂಸ್ಥಾಪಕನಾಗಿ, ಎನ್.ಆರ್. ನಾರಾಯಣ ಮೂರ್ತಿ ಮತ್ತು ಇತರರ ಜತೆ ಮೂವತ್ತು ವರ್ಷ ಕೆಲಸ ಮಾಡಿದ ಅನುಭವ ಬೆನ್ನಿಗಿದೆ. ಒಂದು ಕಂಪೆನಿ ಸ್ಥಾಪಿಸುವುದು ಹೇಗೆ, ಅದನ್ನು ಅಭಿವೃದ್ಧಿಪಡಿಸುವುದು ಹೇಗೆ, ನಿರ್ವಹಿಸುವುದು ಹೇಗೆ, ಅದರ ಮೂಲಕ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದು ಹೇಗೆ ಎಂಬುದನ್ನು ಈ ಯಾನ ಕಲಿಸಿದೆ.

ಬಿಎಟಿಎಫ್ (Bangalore Agenda Task Force) ಅಧ್ಯಕ್ಷನಾಗಿ ಮತ್ತೊಂದು ಬಗೆಯ ಅನುಭವಕ್ಕೆ ತೆರೆದುಕೊಳ್ಳಲು 1999ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ಅವಕಾಶ ಕಲ್ಪಿಸಿಕೊಟ್ಟರು. ನಿರ್ಮಲ ಶೌಚಾಲಯ, ಸ್ವಚ್ಛ ಬೆಂಗಳೂರು ಮುಂತಾದ ಪರಿಕಲ್ಪನೆಗಳು ಒಡಮೂಡಿದ್ದು ಆಗಲೇ. ನಗರ ಆಡಳಿತ ಮತ್ತು ಅದರ ನಿರ್ವಹಣೆ ಕುರಿತು ಒಳನೋಟಗಳು ದಕ್ಕಲು ಇದು ಕಾರಣವಾಯಿತು.

ಮೂರನೆಯ ಅನುಭವ ಬೃಹತ್ ಸ್ವರೂಪದ್ದು, ದೇಶವ್ಯಾಪಿಯಾದದ್ದು. ಅದೇ ‘ಆಧಾರ್’. ಪ್ರಧಾನಿಯವರು (ಮನಮೋಹನ್ ಸಿಂಗ್) 2009ರಲ್ಲಿ ದೆಹಲಿಗೆ ಕರೆದು ಆಧಾರ್ ಯೋಜನೆಯ ಹೊಣೆ ಹೊರುವಂತೆ ಹೇಳಿದರು. ಅದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. 60 ಕೋಟಿ ಜನರಿಗೆ ಆಧಾರ್ ಸಂಖ್ಯೆ ನೀಡಿದ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದು ನನ್ನ ಅನುಭವದ ಎಲ್ಲೆಗಳನ್ನು ಹಿಗ್ಗಿಸಿತು. ಈ ಮೂರು ಹಂತ ದಾಟುವಷ್ಟರಲ್ಲಿ ಜನರ ಅಭಿಲಾಷೆಗಳ ಬಗ್ಗೆ ಸ್ಪಷ್ಟ ಚಿತ್ರಣ ಗೋಚರಿಸಲಾರಂಭಿಸಿತು. ಅವರು ಬಯಸುತ್ತಿರುವ ಬದಲಾವಣೆಯ ಅಗತ್ಯ ಮನವರಿಕೆಯಾಯಿತು.

*ಸತತ ಹತ್ತು ವರ್ಷ ದೇಶವನ್ನು ಮುನ್ನಡೆಸಿದ ಯುಪಿಎ ಕೂಟದ ನೇತೃತ್ವ ವಹಿಸಿರುವ ಕಾಂಗ್ರೆಸ್, ಆಡಳಿತ ವಿರೋಧಿ ಸುಳಿಗೆ ಸಿಲುಕಿ ಹೈರಾಣ ಆಗಿದೆ ಎಂಬ ಮಾತಿದೆ. ಇಂತಹ ಹೊತ್ತಲ್ಲಿ ನೀವು ಕಾಂಗ್ರೆಸ್ ಕೈ ಹಿಡಿಯಲು ಕಾರಣ ಏನು?
ರಾಜಕೀಯಕ್ಕೆ ಬರಬೇಕು, ಯಾವುದಾದರೂ ಪಕ್ಷಕ್ಕೆ ಸೇರಬೇಕು ಅಂತ ಅನ್ನಿಸಿದಾಗ ನೋಡಬೇಕಿರುವುದು ತತ್ವಾದರ್ಶ. ನನ್ನ ಪ್ರಕಾರ, ಸರ್ವರಿಗೂ ಅನ್ವಯವಾಗುವ ತತ್ವಾದರ್ಶಗಳು ಕಾಂಗ್ರೆಸ್ಸಿನಲ್ಲಿ ಇವೆ. ಎಲ್ಲ ವರ್ಗ, ಜಾತಿ, ಧರ್ಮಗಳಿಗೂ ಸಮಾನ ಅವಕಾಶ ಇರಬೇಕು. ಅಖಿಲ ಭಾರತ ಮಟ್ಟದ ಒಳಗೊಳ್ಳುವಿಕೆ ಇರುವ ಪಕ್ಷ ಅದು. ನಾನು ರೂಢಿಸಿಕೊಂಡ ಮೌಲ್ಯಗಳಿಗೆ ಆ ಪಕ್ಷ ಮಾತ್ರ ಸರಿ ಹೊಂದುವುದು ಅನ್ನಿಸಿತು.

ಮೇಲಾಗಿ, ನಮ್ಮ ತಂದೆಯವರು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಅನುಯಾಯಿ ಆಗಿದ್ದರು. ಜಾತ್ಯತೀತ ತತ್ವಗಳನ್ನು ನಾನು ಅವರಿಂದಲೇ ರೂಢಿಸಿಕೊಂಡಿದ್ದು. ಆಧಾರ್ ಯೋಜನೆಯ ಅನುಷ್ಠಾನದಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕೊಟ್ಟಿದ್ದೂ ಅದೇ ಪಕ್ಷ. ಯಾವುದೇ ನೆಲೆಯಲ್ಲಿ ನೋಡಿದರೂ ಕಾಂಗ್ರೆಸ್ ಮಾತ್ರ ನನಗೆ ಸರಿಹೊಂದುವ ಪಕ್ಷ ಅಂತ ಅನ್ನಿಸಿತು. ಈ ಕುರಿತು ನನ್ನ ಮನಸ್ಸಿನಲ್ಲಿ ಯಾವುದೇ ಗೊಂದಲ, ದ್ವಂದ್ವ ಇಲ್ಲ. ಪಕ್ಷಕ್ಕೆ ಸೇರುವುದು ಅಂದರೆ ಅದು ಫ್ಯಾಷನ್ ಅಲ್ಲ. ತತ್ವಕ್ಕೆ ಸಂಬಂಧಿಸಿದ ವಿಷಯ.

*‘ಆಧಾರ್’ ಯೋಜನೆ ಬಗ್ಗೆ ಅಪಸ್ವರಗಳಿವೆ. ಮತ ಸೆಳೆಯಲು ಅದು ಎಷ್ಟರಮಟ್ಟಿಗೆ ಪೂರಕವಾಗಬಲ್ಲುದು?
ಆಧಾರ್ ಬಗ್ಗೆ ಜನರಲ್ಲಿ ಒಳ್ಳೆಯ ಭಾವನೆ ಇದೆ. ನಾಲ್ಕೂವರೆ ವರ್ಷದಲ್ಲಿ 60 ಕೋಟಿ ಜನರಿಗೆ ಆಧಾರ್ ಸಂಖ್ಯೆ ನೀಡಿದ್ದೇವೆ. ಇದು ಸುಲಭವಾದುದಲ್ಲ, ದೊಡ್ಡ ಸಾಧನೆ. ಬಹಳ ಜನರ ಹತ್ತಿರ ಯಾವುದೇ ಗುರುತು ಇರಲಿಲ್ಲ. ಆಧಾರ್ ನಿಂದ ಅದು ಸಿಕ್ಕಿದೆ. ಆ ಮೂಲಕ ಜನಸಾಮಾನ್ಯರ ಸಬಲೀಕರಣ ಆಗಿದೆ. ಆಧಾರ್ ಸಂಖ್ಯೆಯಿಂದ ಅನೇಕ ಅನುಕೂಲಗಳಿವೆ. ಬ್ಯಾಂಕ್‌ನಲ್ಲಿ ಅಕೌಂಟ್ ತೆರೆಯಲು ನೆರವಾಗುವುದರಿಂದ ಹಿಡಿದು ಅಡುಗೆ ಅನಿಲ ಸಂಪರ್ಕ ಪಡೆಯುವವರೆಗೂ ಎಲ್ಲದಕ್ಕೂ ಅನುಕೂಲ. ತುಂಬ ಜನಪ್ರಿಯ ಯೋಜನೆ.

ಸಬ್ಸಿಡಿಗಳಿಗೆ ಸಂಬಂಧಿಸಿದ ಸುಧಾರಣೆಗಳಿಗೆ ಅದನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ಒಂದು ವ್ಯವಸ್ಥೆ ರೂಪಿಸಿದ್ದೇವೆ. ಅದರ ಪರಾಮರ್ಶೆ ನಡೆದಿದೆ. ಅದು ಪೂರ್ಣಗೊಂಡ ಬಳಿಕ, ಮುಂದಿನ ಸರ್ಕಾರ, ಬಳಕೆಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲಿದೆ.ಪಿಂಚಣಿ, ವಿದ್ಯಾರ್ಥಿ ವೇತನ ಹಾಗೂ ‘ನರೇಗಾ’ ಅಂತಹ ಯೋಜನೆಗಳ ನಗದು ವರ್ಗಾವಣೆಗೂ ಬಳಸಬಹುದು. ಪದಾರ್ಥಗಳನ್ನು ಪಡೆಯಲೂ ಉಪಯೋಗಿಸಬಹುದು.

*ಕಾನೂನಿನ ಬಲ ಹಾಗೂ ಸಂಸತ್ತಿನ ಅನುಮೋದನೆ ಇಲ್ಲದೆ ಆಧಾರ್ ಯೋಜನೆ ಜಾರಿಗೊಳಿಸಲಾಗಿದೆ ಎಂಬ ಟೀಕೆ ಇದೆಯಲ್ಲ...
ಇದು ಸಂಪೂರ್ಣವಾಗಿ ಕಾನೂನುಬದ್ಧ ಯೋಜನೆ. ಸಂಪುಟ ನಿರ್ಧಾರದ ಅನ್ವಯ ಯೋಜನೆ ಜಾರಿಯಾಗಿದೆ. ಯೋಜನೆ ಅನುಷ್ಠಾನಕ್ಕೆ ಸಂಸತ್ತಿನ ಅನುಮೋದನೆ ಪಡೆದೇ ಐದು ಬಾರಿ ಹಣ ಬಿಡುಗಡೆ ಮಾಡಲಾಗಿದೆ.

ಆಧಾರ್ ಸಂಖ್ಯೆ ನೀಡಲು ಯಾವುದೇ ತೊಡಕು ಇಲ್ಲ. ಮಸೂದೆ ಬೇಕಿರುವುದು ನಿಯಂತ್ರಣ ವ್ಯವಸ್ಥೆ ರೂಪಿಸುವುದಕ್ಕಾಗಿ. ‘ಸೆಬಿ’ (Securities and Exchange Board of India) ಆರಂಭಿಸಿದಾಗಲೂ ಕಾಯ್ದೆ ಇರಲಿಲ್ಲ. ಶುರುವಾದ ಐದು–ಆರು ವರ್ಷಗಳ ಬಳಿಕ ನಿಯಂತ್ರಣ ವ್ಯವಸ್ಥೆ ಕಲ್ಪಿಸಲಾಯಿತು.

*ಎನ್‌ಡಿಎ ಅವಧಿಯಲ್ಲಿ ಜಾರಿಗೊಂಡ ಬಹು ಉಪಯೋಗಿ ರಾಷ್ಟ್ರೀಯ ಗುರುತು ಚೀಟಿಗೂ (Multipurpose National Identity Card) ಆಧಾರ್‌ಗೂ ಏನು ವ್ಯತ್ಯಾಸ?
ಅದು ಭದ್ರತೆಯ (security) ದೃಷ್ಟಿಕೋನದಿಂದ ರೂಪುಗೊಂಡ ಯೋಜನೆ. ಆಧಾರ್, ಅಭಿವೃದ್ಧಿಯ ನೆಲೆಯಲ್ಲಿ ಅನುಷ್ಠಾನಗೊಂಡಿರುವ ಯೋಜನೆ.

*ಪಕ್ಷದ ಚಿಹ್ನೆ ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೀರೊ ಅಥವಾ ನಿಮ್ಮ ಸಾಧನೆ ನೋಡಿ ಮತ ನೀಡುವಂತೆ ಮನವಿ ಮಾಡುತ್ತಿದ್ದೀರೊ?
ಕಾಂಗ್ರೆಸ್‌ಗೆ ಗಟ್ಟಿ ನೆಲೆ ಇದೆ. ನನ್ನ ಬಗ್ಗೆಯೂ ಜನರಿಗೆ ವಿಶ್ವಾಸ ಇದೆ. ಎರಡೂ ಕೂಡಿದರೆ ಗೆಲುವಿನ ಹಾದಿ ಸುಗಮವಾಗಬಹುದು ಎಂಬ ವಿಶ್ವಾಸ ನನ್ನದು.

*ರಾಜಕೀಯದಲ್ಲಿ ನಿಮಗೆ ಮಾದರಿ ನೇತಾರರು ಯಾರು?
ಗಾಂಧಿ, ನೆಹರೂ ಮತ್ತು ನೆಲ್ಸನ್ ಮಂಡೇಲಾ.

*ಈ ಚುನಾವಣೆಯಲ್ಲಿ ಒಂದು ವೇಳೆ ಗೆಲುವು ದಕ್ಕದಿದ್ದರೆ...?
ಮತದಾರರು ನನ್ನ ಕೈ ಹಿಡಿಯುತ್ತಾರೆ ಎಂಬ ಭರವಸೆ ಇದೆ. ಒಂದು ವೇಳೆ ಗೆಲುವು ದಕ್ಕದೇ ಹೋದರೂ ರಾಜಕೀಯದಲ್ಲೇ ಮುಂದುವರಿಯುತ್ತೇನೆ. ಕೆಲವು ವರ್ಷಗಳ ಕಾಲ ರಾಜಕೀಯದಲ್ಲಿ ಸಕ್ರಿಯವಾಗಿರಬೇಕು ಅಂತ ತೀರ್ಮಾನಿಸಿದ್ದೇನೆ.

ಗೆದ್ದರೆ ಜನಸಾಮಾನ್ಯರ ಕೈಗೆ ಸಿಗುವಿರಾ?
ಹಾಲಿ ಸಂಸದರಿಗಿಂತಲೂ ಹೆಚ್ಚಿಗೆ ಜನರಿಗೆ ಹತ್ತಿರವಾಗಿರುತ್ತೇನೆ. ಗೆದ್ದ ನಂತರ ಅನಂತಕುಮಾರ್ ಅವರು ಕ್ಷೇತ್ರದಲ್ಲಿ ಎಲ್ಲಿ ಕಾಣಿಸುತ್ತಾರೆ? ದೆಹಲಿಗೆ ಹೋಗಿ ಕೂರುತ್ತಾರೆ. ಚುನಾವಣೆಗೆ ಒಂದು ತಿಂಗಳು ಇದೆ ಎನ್ನುವಾಗ ಕ್ಷೇತ್ರ ನೆನಪಾಗುತ್ತದೆ. ಬೇಕಾಗಿರುವುದು ಅಂತಹವರು ಅಲ್ಲ, ಕೆಲಸ ಮಾಡುವಂಥವರು.

ಜನರ ಜತೆ ನಿರಂತರ ಸಂಪರ್ಕದಲ್ಲಿ ಇರಲು ‘ಕ್ಷೇತ್ರ ನಿರ್ವಹಣಾ ವ್ಯವಸ್ಥೆ’ ರೂಪಿಸುತ್ತೇನೆ. ಫೋನ್, ಇ–ಮೇಲ್, ಎಸ್ಎಂಎಸ್ ಮೂಲಕ ಸಮಸ್ಯೆಗಳನ್ನು ಹೇಳಿಕೊಳ್ಳುವ ವ್ಯವಸ್ಥೆ ಮಾಡುತ್ತೇನೆ. ಜನರ ದೂರು, ದುಮ್ಮಾನಗಳನ್ನು ದಾಖಲಿಸಿಕೊಂಡಿದ್ದರ ಬಗ್ಗೆ ‘ರೆಫರನ್ಸ್ ಸಂಖ್ಯೆ’ ನೀಡುತ್ತೇವೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ವೇಳಾಪಟ್ಟಿ ಅನುಸಾರ ಭೇಟಿ ನೀಡುತ್ತೇನೆ. ಉದಾಹರಣೆಗೆ ವಿಜಯನಗರಕ್ಕೆ ಇಂತಹ ದಿನ ಬರುತ್ತೇನೆ ಎಂದು ಹೇಳಿ, ಅಲ್ಲಿನ ಶಾಸಕ ಕೃಷ್ಣಪ್ಪ ಅವರ ಜತೆ ಜನರನ್ನು ಭೇಟಿ ಮಾಡುತ್ತೇನೆ.

ಬೆಂಗಳೂರಿನ ಅಭಿವೃದ್ಧಿಗೆ ನಿಮ್ಮ ಕನಸುಗಳೇನು?
ಮಾಹಿತಿ ತಂತ್ರಜ್ಞಾನ ನಗರಿಯ ಧ್ವನಿಯಾಗಿ ದೆಹಲಿಯಲ್ಲಿ ಕೆಲಸ ಮಾಡುತ್ತೇನೆ. ನಗರ ಸಾರಿಗೆ ರೈಲು, ಮೇಲ್ಸೇತುವೆ, ಕುಡಿಯುವ ನೀರು ಸರಬರಾಜು ಮುಂತಾದ ಬೃಹತ್ ಯೋಜನೆಗಳಿಗೆ ಕೇಂದ್ರದ ಸಹಾಯ, ಸಹಕಾರ ಬೇಕಾಗುತ್ತದೆ. ಕೆಲವೊಂದು ಯೋಜನೆಗಳನ್ನು ಕೇಂದ್ರ ಸರ್ಕಾರವೇ ಮಾಡಬೇಕಾಗುತ್ತದೆ. ಅದನ್ನು ದೊರಕಿಸಿಕೊಡಲು ದೆಹಲಿಯಲ್ಲಿ ಸಮರ್ಥ ಜನಪ್ರತಿನಿಧಿ ಇರಬೇಕು. ಆ ಹೊಣೆಯನ್ನು ನಾನು ನಿಭಾಯಿಸಬಲ್ಲೆ ಎಂಬ ವಿಶ್ವಾಸ ಇದೆ.

ಬೆಂಗಳೂರನ್ನು ಅವಕಾಶಗಳ, ಹಲವು ಸಾಧ್ಯತೆಗಳ ನಗರಿಯನ್ನಾಗಿ ಮಾಡಬೇಕು. ಎಲ್ಲರಿಗೂ ಒಳ್ಳೆಯ ಶಿಕ್ಷಣ, ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಅಗತ್ಯ ಇದೆ. ಆ ನಿಟ್ಟಿನಲ್ಲಿ ನಾನು ಬದ್ಧತೆಯಿಂದ ಶ್ರಮಿಸುತ್ತೇನೆ. ನಮ್ಮ ದೇಶದ ಸುಮಾರು 50 ಕೋಟಿ ಜನರ ವಯಸ್ಸು 25ಕ್ಕಿಂತ ಕಡಿಮೆ. ಅವರಿಗೆ ಏನೇನೊ ಆಸೆ–ಆಕಾಂಕ್ಷೆಗಳಿವೆ. ಅದಕ್ಕೆ ತಕ್ಕಂತೆ ಅವಕಾಶಗಳನ್ನು ಕಲ್ಪಿಸದಿದ್ದರೆ ಅವರು ಹತಾಶೆಗೆ ಒಳಗಾಗುತ್ತಾರೆ. ಅದಕ್ಕಾಗಿ ವ್ಯವಸ್ಥೆ ಬದಲಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.