ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯತೆ, ಅರಾಜಕ ಸಿದ್ಧಾಂತದ ನಡುವಿನ ಸ್ಪರ್ಧೆ: ಕಾಗೇರಿ ಸಂದರ್ಶನ

ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ
Published 1 ಮೇ 2024, 4:23 IST
Last Updated 1 ಮೇ 2024, 4:23 IST
ಅಕ್ಷರ ಗಾತ್ರ

ಸತತ ಆರು ಅವಧಿಗೆ ಶಾಸಕರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಇದೇ ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಉತ್ತರ ಕನ್ನಡ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿದಿರುವ ಅವರು ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.

ಮತದಾರರು ನಿಮಗೆ ಯಾಕೆ ಮತ ಚಲಾಯಿಸಬೇಕು?

– ದೇಶದ ಅಭಿವೃದ್ಧಿಯ ಹರಿಕಾರ ನರೇಂದ್ರ ಮೋದಿ ಮೂರನೆ ಅವಧಿಗೆ ಪ್ರಧಾನಿಯಾಗಲು, ಉತ್ತರ ಕನ್ನಡ ಕ್ಷೇತ್ರ ಸಮಗ್ರ ಅಭಿವೃದ್ಧಿ ಕಾಣಲು ಮತ ಕೇಳುತ್ತಿದ್ದೇನೆ. ಇದು ರಾಷ್ಟ್ರದ ಭವಿಷ್ಯ ರೂಪಿಸುವ ಚುನಾವಣೆ ಎಂಬುದು ಮತದಾರರಿಗೂ ಮನದಟ್ಟಾಗಿದೆ.

ಚುನಾವಣಾ ಕಣ ಹೇಗಿದೆ? ನಿರೀಕ್ಷೆಯಂತೆಯೇ ಎಲ್ಲವೂ ನಡೆಯುತ್ತಿದೆಯೇ?

– ಕ್ಷೇತ್ರದಾದ್ಯಂತ ಪಕ್ಷದ ಕಾರ್ಯಕರ್ತರು ಟೊಂಕ ಕಟ್ಟಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಗೆಲ್ಲಿಸಬೇಕು ಎಂಬ ಉತ್ಸಾಹದಲ್ಲಿ ಮತದಾರರೂ ಇರುವುದು ಕಣ ಚಿತ್ರಣ ಗಮನಿಸಿದಾಗ ಸ್ಪಷ್ಟವಾಗುತ್ತಿದೆ. ಕ್ಷೇತ್ರದಲ್ಲಿ ಪಕ್ಷವು ಪ್ರಬಲವಾಗಿರುವುದರಿಂದ ಮತ್ತು ಉತ್ತರ ಕನ್ನಡವು ಬಿಜೆಪಿಯ ಭದ್ರಕೋಟೆ ಎನಿಸಿರುವುದರಿಂದ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದ್ದೇನೆ. ಜೂನ್ 4 ರಂದು ನಿರೀಕ್ಷೆ ನಿಜವಾಗುವುದರಲ್ಲಿ ಯಾರಿಗೂ ಯಾವ ಸಂದೇಹವೂ ಇಲ್ಲ.


ನೀವು ಈವರೆಗೆ ಕೊಟ್ಟ ಭರವಸೆಗಳು ಮತ್ತು ಮುಂದಿನ ಯೋಜನೆಗಳು ಏನು?

– ವಿಧಾನಸಭಾಧ್ಯಕ್ಷನಾಗಿದ್ದಾಗ ಅರಣ್ಯ ಅತಿಕ್ರಮಣದಾರರಿಗೆ ವಸತಿ ಯೋಜನೆ ಮನೆ ನಿರ್ಮಿಸಿಕೊಡಲು ಎದುರಾಗಿದ್ದ ಸಮಸ್ಯೆ ನಿವಾರಿಸಿದ್ದೆ. ನನ್ನ ಕ್ಷೇತ್ರದಲ್ಲೇ ಸಾವಿರಾರು ಮನೆಗಳನ್ನು ಮಂಜೂರು ಮಾಡಿಸಿದ್ದೆ. ಶಾಸಕತ್ವದ ಅವಧಿಯಲ್ಲಿ ಕ್ಷೇತ್ರದಲ್ಲಿ ರಸ್ತೆ ಸಂಪರ್ಕ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಎಂದಿಗೂ ಹಿಂದೆ ಬಿದ್ದಿರಲಿಲ್ಲ. ಸಂಸದನಾಗಿ ಆಯ್ಕೆಯಾದ ಬಳಿಕ ಸಂಸದರ ಸಂಚಾರಿ ಕಚೇರಿ ಸ್ಥಾಪಿಸುವ ಜತೆಗೆ, ರೈಲ್ವೆ ಯೋಜನೆ ಜಾರಿಗೆ ತರುವುದೂ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸುವುದು ನಿಶ್ಚಿತ. ಮುಖ್ಯವಾಗಿ ಅರಣ್ಯ ಅತಿಕ್ರಮಣದಾರ ಕುಟುಂಬಗಳಿಗೆ ಭೂಮಿ ಹಕ್ಕು ಕೊಡಿಸುವ ಗುರುತರ ಜವಾಬ್ದಾರಿ ಇದ್ದು, ಅದನ್ನು ನಿಭಾಯಿಸುವೆ.


ಯಾವುದೆಲ್ಲ ಭರವಸೆ ಈಡೇರಿಸಿದ್ದೀರಿ ಮತ್ತು ಜನರ ಬೇಡಿಕೆಗೆ ಸ್ಪಂದಿಸಿದ್ದೀರಿ?

– ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ಅವಧಿಯಲ್ಲಿ ಜಿಲ್ಲೆಗೆ ಮೆಡಿಕಲ್ ಕಾಲೇಜ್, ತೋಟಗಾರಿಕೆ ಕಾಲೇಜ್ ಮಂಜೂರಾಯಿತು. ಗ್ರಾಮೀಣ ಭಾಗದಲ್ಲಿ ಪದವಿಪೂರ್ವ ಕಾಲೇಜುಗಳ ಸ್ಥಾಪನೆ ಮಾಡಿರುವ ಹೆಮ್ಮೆ ನನಗಿದೆ. ಶಿರಸಿಯಲ್ಲಿ 250 ಹಾಸಿಗೆಯ ಆಸ್ಪತ್ರೆ ಮಂಜೂರು ಮಾಡಿಸಿದ್ದೇನೆ. ಜನರ ಬೇಡಿಕೆಗಳಿಗೆ ಶಕ್ತಿಮೀರಿ ಸ್ಪಂದಿಸಿದ್ದನ್ನು ಜಿಲ್ಲೆಯ ಜನರು ಗಮನಿಸಿದ್ದಾರೆ.


ರಾಜಕಾರಣದಲ್ಲಿನ ಸುದೀರ್ಘ ಅನುಭವದಲ್ಲಿ ಈಗಿನ ಚುನಾವಣೆ ಹೇಗೆ ಅನ್ನಿಸುತ್ತಿದೆ?

– ಸುದೀರ್ಘ ಅವಧಿಗೆ ಶಾಸಕನಾಗಿದ್ದರೂ ಸಂಸತ್ ಚುನಾವಣೆಗೆ ಮೊದಲ ಬಾರಿ ಸ್ಪರ್ಧಿಸಿರುವುದರಿಂದ ಇದೊಂದು ಹೊಸ ಅನುಭವ. ಹಾಗಂತ ಇದು ಇಬ್ಬರು ಅಭ್ಯರ್ಥಿಗಳ ನಡುವಿನ ಸ್ಪರ್ಧೆ ಅಲ್ಲ. ಇದು ಎರಡು ಭಿನ್ನ ಸಿದ್ಧಾಂತಗಳ ನಡುವಿನ ಪೈಪೋಟಿ. ಬಿಜೆಪಿ ಪ್ರತಿಪಾದಿಸುವ ರಾಷ್ಟ್ರೀಯತೆ, ರಾಷ್ಟ್ರ ರಕ್ಷಣೆಯ ವಿಚಾರ ಮತ್ತು ಕಾಂಗ್ರೆಸ್ಸಿನ ಅರಾಜಕತೆ, ಭ್ರಷ್ಟಾಚಾರದ ಸಿದ್ಧಾಂತದ ನಡುವಿನ ಸ್ಪರ್ಧೆ.


ಪಕ್ಷದೊಳಗಿನ ಅತೃಪ್ತ ಆಕಾಂಕ್ಷಿಗಳನ್ನು, ಮುನಿಸಿಕೊಂಡವರನ್ನು ಹೇಗೆ ಸಮಾಧಾನ ಮಾಡುವಿರಿ?

– ಬಿಜೆಪಿ ಶಿಸ್ತಿನ ಪಕ್ಷ. ನಮ್ಮಲ್ಲಿ ಫಲಾಪೇಕ್ಷೆ ಇಲ್ಲದೆ ಪಕ್ಷಕ್ಕಾಗಿ, ದೇಶಕ್ಕಾಗಿ ಕಟಿಬದ್ಧರಾಗಿ ಕೆಲಸ ಮಾಡುವ ದೊಡ್ಡ ಕಾರ್ಯಕರ್ತರ ಪಡೆಯೇ ಇದೆ. ನಮ್ಮಲ್ಲಿ ಭಿನ್ನಮತೀಯರು, ಮುನಿಸಿಕೊಂಡವರು ಕಾಣಸಿಗದು. ಸಣ್ಣಪುಟ್ಟ ಮನಸ್ತಾಪಗಳಿದ್ದರೆ ಅದನ್ನೆಲ್ಲ ಬಗೆಹರಿಸಿಕೊಂಡು ದೇಶದ ಒಳಿತಿಗೆ ನಡೆಯುವ ಚುನಾವಣೆಯಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತೇವೆ.


ಕ್ಷೇತ್ರವು ಇನ್ನೂ ಯಾವುದೆಲ್ಲ ರೀತಿ ಅಭಿವೃದ್ಧಿ ಆಗಬೇಕಿದೆ?

– ಪ್ರವಾಸೋದ್ಯಮ, ಮೀನುಗಾರಿಕೆ ಮತ್ತು ಕೃಷಿ ಜಿಲ್ಲೆಯ ಜೀವಾಳ. ಈ ಮೂರು ಕ್ಷೇತ್ರಗಳ ಸಮಗ್ರ ಅಭಿವೃದ್ಧಿಯಾದರೆ ಉದ್ಯೋಗ ಸೃಷ್ಟಿ, ಜನರ ಜೀವನ ಮಟ್ಟ ಸುಧಾರಣೆಯಾಗಲಿದೆ. ರಸ್ತೆ ಮತ್ತು ರೈಲ್ವೆ ಸಂಪರ್ಕ, ಬಂದರುಗಳ ಅಭಿವೃದ್ಧಿಯ ಜತೆಗೆ ಮುಖ್ಯವಾಗಿ ಆರೋಗ್ಯ ಕ್ಷೇತ್ರದ ಸುಧಾರಣೆ ನಿಟ್ಟಿನಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆಯಾಗುವ ಅಗತ್ಯವಿದೆ. ಇವನ್ನೆಲ್ಲ ಕಾರ್ಯಗತಗೊಳಿಸಲೆಂದೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದೇನೆ.


ಒಂದು ವೇಳೆ ಚುನಾವಣೆಯಲ್ಲಿ ಗೆದ್ದರೆ, ನಿಮ್ಮ ಮೊದಲ ಆದ್ಯತೆ ಏನಿರಲಿದೆ?

– ಕಿತ್ತೂರು, ಖಾನಾಪುರ ಒಳಗೊಂಡಿರುವ ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ಮೊದಲ ಆದ್ಯತೆ. ಆಯ್ಕೆಯಾದ ತಕ್ಷಣವೇ ವಿವಿಧ ಕ್ಷೇತ್ರಗಳಲ್ಲಿನ ಪರಿಣಿತರ ಸಲಹೆ ಪಡೆದು ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ರೂಪಿಸುವ ಕುರಿತು ಯೋಜನೆ ರೂಪಿಸಲಾಗುವುದು. ತಜ್ಞರು, ಅನುಭವಿಗಳು, ಸಮಜದ ವಿವಿಧ ರಂಗದಲ್ಲಿರುವವರನ್ನೆಲ್ಲ ವಿಶ್ವಾಸಕ್ಕೆ ಪಡೆದು ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು.

ನೀವು ಉತ್ತರ ಕನ್ನಡ ಜಿಲ್ಲೆ ಇಬ್ಭಾಗಿಸಲು ಪ್ರಯತ್ನಿಸಿದವರು ಎಂಬ ಗುರುತರ ಆರೋಪವಿದೆಯಲ್ಲ?

– ಇದೊಂದು ಆಧಾರ ರಹಿತ ಆರೋಪ. ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಕರಾವಳಿ ಮಲೆನಾಡು ಅರೆ ಮಲೆನಾಡು ಪ್ರದೇಶದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಅಂಕೋಲಾ ಕ್ಷೇತ್ರದಿಂದಲೇ ಶಾಸಕನಾಗಿ ಆಯ್ಕೆಯಾಗಿ ರಾಜಕೀಯ ಜೀವನ ಆರಂಭಿಸಿದ್ದೆ. ವಿಧಾನಸಭಾಧ್ಯಕ್ಷ ಆಗಿದ್ದಾಗ ಜಿಲ್ಲೆಯ ಸಮಸ್ಯೆಗಳ ಕುರಿತು ಧ್ವನಿ ಎತ್ತಲು ಎಲ್ಲ ಶಾಸಕರಿಗೆ ಸಮಾನ ಅವಕಾಶ ಕಲ್ಪಿಸಿದ್ದೆ. ಉತ್ತರ ಕನ್ನಡ ಎಲ್ಲ ಕ್ಷೇತ್ರದಲ್ಲಿಯೂ ಅಭಿವೃದ್ಧಿಯಾಗಬೇಕು ಎಂಬುದು ನನ್ನ ನಿಲುವು. 

ಸಂಸದ ಅನಂತಕುಮಾರ ಹೆಗಡೆ ಶಾಸಕ ಶಿವರಾಮ ಹೆಬ್ಬಾರ ಸಹಕಾರ ನೀಡದಿರುವುದು ನಿಮಗೆ ಅಡ್ಡಿಯಾಗಬಹುದೆ?

– ಅನಂತಕುಮಾರ ಹೆಗಡೆ ಸಂಘ ಪರಿವಾರದ ಹಿನ್ನೆಲೆಯವರು ಬಿಜೆಪಿಯ ಕಟ್ಟಾಳು. ಅವರು ಬೆಂಬಲಿಸುವ ವಿಶ್ವಾಸವಿದೆ. ಅವರೆಂದಿಗೂ ಪಕ್ಷಕ್ಕೆ ದ್ರೋಹ ಬಗೆಯುವುದಿಲ್ಲ ಎಂಬ ನಂಬಿಕೆ ಬಲವಾಗಿದೆ. ಶಾಸಕ ಶಿವರಾಮ ಹೆಬ್ಬಾರ ರಾಜಕೀಯ ನಡೆಯನ್ನು ಅವರ ಕ್ಷೇತ್ರದ ಮತದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT