ಕಲಬುರಗಿ: ಈ ಬಾರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಯಬಾಹುಳ್ಯದಿಂದಾಗಿ ಲೋಕಸಭೆ ಚುನಾವಣೆಯ ಸ್ಪರ್ಧೆಯಿಂದ ಹಿಂದೆ ಸರಿದಿದ್ದರಿಂದ ಕಾಂಗ್ರೆಸ್ ಹೈಕಮಾಂಡ್ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಟಿಕೆಟ್ ನೀಡಿದೆ. ಕಳೆದ ಒಂದೂವರೆ ತಿಂಗಳಿಂದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಪ್ರಚಾರ ನಡೆಸುತ್ತಿರುವ ರಾಧಾಕೃಷ್ಣ ಅವರು ‘ಪ್ರಜಾವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದು, ಅದರ ಆಯ್ದ ಭಾಗ ಇಲ್ಲಿದೆ.

ಕ್ಷೇತ್ರದಲ್ಲಿ ಹಲವು ದಿನಗಳಿಂದ ಪ್ರಚಾರ ನಡೆಸುತ್ತಿದ್ದೀರಿ. ಜನರ ನಾಡಿಮಿಡಿತ ಹೇಗಿದೆ?

ಹೋದಲ್ಲೆಲ್ಲ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಪ್ರತಿ ಮನೆಯನ್ನೂ ತಲುಪಿದ್ದು, ಇಂತಹ ಬಿರು ಬಿಸಿಲಿನಲ್ಲಿಯೂ ಜನರು ಕೃತಜ್ಞತೆಯನ್ನು ವ್ಯಕ್ತಪಡಿಸಲು ನಮ್ಮೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜನರ ಜೀವನಮಟ್ಟವು ಗ್ಯಾರಂಟಿ ಯೋಜನೆಗಳಿಂದ ಸುಧಾರಿಸಿದೆ. ಹೀಗಾಗಿ, ಕೇಂದ್ರದಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೇಂದ್ರದ 25 ಗ್ಯಾರಂಟಿಗಳು ಜಾರಿಯಾಗುತ್ತವೆ ಎಂಬ ಭರವಸೆಯನ್ನು ಇಟ್ಟುಕೊಂಡು ಈ ಬಾರಿ ನನ್ನನ್ನು ಬೆಂಬಲಿಸಲು ತೀರ್ಮಾನಿಸಿದ್ದಾರೆ. ಬಿಜೆಪಿಯ ಬಗ್ಗೆ ಜನರಲ್ಲಿ ಜುಗುಪ್ಸೆ ಮೂಡಿದೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ನಿಮ್ಮ ‘ಕೈ’ ಹಿಡಿಯುವ ವಿಶ್ವಾಸವಿದೆಯೇ?

ಖಂಡಿತ ಕೈ ಹಿಡಿಯಲಿವೆ. ಇಡೀ ದೇಶದಲ್ಲಿಯೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕರ್ನಾಟಕವು ಜನರ ನೆರವಿಗೆ ಧಾವಿಸಿದೆ. ಬಿಜೆಪಿಯ ದುರಾಡಳಿತದಿಂದ ಬೇಸತ್ತ ಜನರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಚುನಾಯಿಸಿದರು. ಅಧಿಕಾರಕ್ಕೆ ಬಂದ ಕೂಡಲೇ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳನ್ನು ಜಾರಿಗೆ ತಂದಿದ್ದರಿಂದ ಜನರ ಬದುಕು ಸುಧಾರಣೆಯಾಗುತ್ತಿದೆ. ಹೋದಲ್ಲೆಲ್ಲ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಪಡೆದ ತೃಪ್ತಿ ಜನರಲ್ಲಿ ಕಾಣಿಸುತ್ತಿದೆ.

ಎದುರಾಳಿ ಅಭ್ಯರ್ಥಿ ಈಗಾಗಲೇ ಒಂದು ಬಾರಿಯ ಸಂಸದ. ಅವರಿಗೆ ಕ್ಷೇತ್ರದ ಪರಿಚಯವಿದೆ. ನಿಮಗೆ ರಾಜಕೀಯ ಹೊಸದು ಎಂಬ ಮಾತುಗಳಿವೆ. ಇದನ್ನು ಹೇಗೆ ನಿಭಾಯಿಸುತ್ತೀರಿ?

ಯಾರೂ ಮೊದಲಿನಿಂದ ರಾಜಕಾರಣಿಯಾಗಿರುವುದಿಲ್ಲ. ನನಗೂ ರಾಜಕೀಯದಲ್ಲಿ 30 ವರ್ಷಗಳ ಅನುಭವವಿದೆ. ಆದರೆ, ಚುನಾವಣೆಗೆ ನಿಲ್ಲುವ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ, ರಾಜಕಾರಣ ಹೊಸದು ಎಂಬುದು ಸಮಸ್ಯೆ ಎನಿಸುವುದೇ ಇಲ್ಲ.

ಕ್ಷೇತ್ರದಲ್ಲಿ ನೀವು ಕಂಡುಕೊಂಡ ಸಮಸ್ಯೆಗಳು ಯಾವುವು?

ನಿರುದ್ಯೋಗ, ಗುಳೆ ಹೋಗುವುದು, ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದಿರುವುದು, ವಿವಿಧ ಅಭಿವೃದ್ಧಿ ಕಾರ್ಯಗಳ ಸಮರ್ಪಕ ಅನುಷ್ಠಾನ ಆಗದೇ ಇರುವುದನ್ನು ಗುರುತಿಸಿದ್ದೇನೆ. ಅಲ್ಲದೇ, ಕಳೆದ ಐದು ವರ್ಷಗಳ ಉಮೇಶ ಜಾಧವ ಅವಧಿಯಲ್ಲಿ ಜಿಲ್ಲೆಯು 20 ವರ್ಷಗಳಷ್ಟು ಹಿಂದೆ ಹೋಗಿದೆ. ಕೇಂದ್ರದಿಂದ ಅನುದಾನ ತರಲು ವಿಫಲರಾಗಿದ್ದಾರೆ. ಜಿಲ್ಲೆಯನ್ನು ಮತ್ತೆ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸ್ವಲ್ಪ ಸಮಯ ಬೇಕಾಗಲಿದೆ.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಜನಪ್ರಿಯತೆ ನಿಮ್ಮನ್ನು ಗೆಲುವಿನ ದಡ ಸೇರಿಸುತ್ತದೆ ಎಂಬ ವಿಶ್ವಾಸವಿದೆಯೇ?

ಖರ್ಗೆ ಅವರು ಕಳೆದ ಐದು ದಶಕಗಳಿಂದ ರಾಜಕಾರಣದಲ್ಲಿದ್ದು, 371 (ಜೆ)ನಂತಹ ಮಹತ್ವದ ಕಲಂ ಜಾರಿ ಮಾಡುವ ಮೂಲಕ ಈ ಭಾಗದ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ. ರೈಲ್ವೆ ಸಚಿವರಾಗಿ ಹಲವು ರೈಲುಗಳನ್ನು ಆರಂಭಿಸಿದ್ದಾರೆ. ರೈಲು ಮಾರ್ಗ ಪೂರ್ಣಗೊಳಿಸಿದ್ದಾರೆ. ಕೇಂದ್ರ ಕಾರ್ಮಿಕ ಸಚಿವರಾಗಿ ಇಎಸ್ಐಸಿ ಆಸ್ಪತ್ರೆಯನ್ನು ಆರಂಭಿಸಿದ್ದಾರೆ. ಹೀಗಾಗಿ, ಜಿಲ್ಲೆಯ ಜನರಲ್ಲಿ ಅವರ ಬಗ್ಗೆ ವಿಶ್ವಾಸ, ಗೌರವವಿದೆ. ಅವರ ಆಶೀರ್ವಾದ ಹಾಗೂ ಅವರ ಕೆಲಸಗಳು ನನಗೆ ಗೆಲುವು ತಂದು ಕೊಡುತ್ತವೆ.

ಖರ್ಗೆ ಅವರ ಅಳಿಯನಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುತ್ತಿದೆ ಎಂಬ ಆರೋಪಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ಈ ಪ್ರಶ್ನೆಯನ್ನು ಸಾಮಾನ್ಯವಾಗಿ ಬಿಜೆಪಿಯವರು ನಮಗೆ ಕೇಳುತ್ತಾರೆ. ಅವರು ಆತ್ಮಾವಲೋಕನ ಮಾಡಿಕೊಂಡು ಚರ್ಚೆಗೆ ಬರುವುದಾದರೆ ನಾವೂ ತಯಾರಿದ್ದೇವೆ. ಅಂತಿಮವಾಗಿ ಯಾವುದೇ ಅಭ್ಯರ್ಥಿಯ ಬಗ್ಗೆ ಜನರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಚುನಾವಣೆಯಲ್ಲಿ ಜನಪ್ರತಿನಿಧಿಗಳು ಜನರ ಮಧ್ಯೆ ತೆರಳಿ ತಮ್ಮ ಸಾಧನೆ, ವ್ಯಕ್ತಿತ್ವದ ಬಗ್ಗೆ ಹೇಳಿ ಮತ ಕೇಳುತ್ತಾರೆ. ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ಜನ ತೀರ್ಮಾನಿಸುತ್ತಾರೆ. ಇಲ್ಲಿ ‘ಸೆಲೆಕ್ಟ್’ ಆಗುವುದಿಲ್ಲ. ಬದಲಾಗಿ ‘ಎಲೆಕ್ಟ್’ ಆಗಬೇಕಾಗುತ್ತದೆ.

ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ನಿಮ್ಮ ಪರಿಕಲ್ಪನೆಗಳೇನು?

ಮಾನವ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳುವುದು ಸೇರಿದಂತೆ ಅಭಿವೃದ್ಧಿಯ ಬಗ್ಗೆ ಒಂದು ನೀಲನಕ್ಷೆಯನ್ನು ತಯಾರಿಸಿದ್ದೇನೆ. ಕೆಲ ವಲಯಗಳಲ್ಲಿ ನಮ್ಮ ಸಣ್ಣ ಸಹಾಯದಿಂದಲೂ ದೊಡ್ಡ ಬದಲಾವಣೆ ಆಗಲು ಸಾಧ್ಯವಿದೆ. ಜಿಲ್ಲೆಯಲ್ಲಿ ಬೆಳೆಯುವ ಕಮಲಾಪುರ ರಸಬಾಳೆಗೆ ಜಿಐ ಟ್ಯಾಗ್ ಸಿಕ್ಕಿದ್ದು ಅದರ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆ ಸೃಷ್ಟಿಸಿದರೆ ಉತ್ತಮ ಬೆಲೆ ಸಿಗಲಿದೆ. ಇದರಿಂದ ಇನ್ನಷ್ಟು ರೈತರು ಕೆಂಪು ಬಾಳೆ ಬೆಳೆಯಲು ಮುಂದಾಗುತ್ತಾರೆ. ಕಲಬುರಗಿ ರೊಟ್ಟಿಯನ್ನು ಬ್ರಾಂಡ್ ಮಾಡಿದಂತೆ ಜಿಲ್ಲೆಯ ಪ್ರಮುಖ ಉತ್ಪನ್ನಗಳಿಗೆ ನೆರವು ನೀಡಲಾಗುವುದು. ಜಿಲ್ಲೆಯ ಪ್ರವಾಸೋದ್ಯಮ ಬೆಳೆಸುವುದರಿಂದಲೂ ಉದ್ಯೋಗ ಸೃಷ್ಟಿಯಾಗಲಿದೆ. ಈ ಬಗ್ಗೆ ಶೀಘ್ರವೇ ವಿಸ್ತೃತವಾಗಿ ಮಾಹಿತಿ ಹಂಚಿಕೊಳ್ಳಲಿದ್ದೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.