ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಯಾಳಂ ಸಿನಿಮಾಗಳ ಫಸಲು!

ನಮ್ಮ ನೆಲದಲ್ಲಿ ನಡೆಯುವ ಅವರ ಕಥೆಗಳು...
Published 9 ಮೇ 2024, 23:50 IST
Last Updated 9 ಮೇ 2024, 23:50 IST
ಅಕ್ಷರ ಗಾತ್ರ
ಕನ್ನಡ ಚಿತ್ರರಂಗ ಗಟ್ಟಿಯಾದ ಕಥೆಗಳ ಕೊರತೆಯಿಂದ ಬಳಲುತ್ತಿರುವ ಹೊತ್ತಿನಲ್ಲಿ ಮಲಯಾಳಂ ಚಿತ್ರರಂಗದವರು ನಮ್ಮ ನಾಡಿನ ಕಥೆಗಳನ್ನಿಟ್ಟುಕೊಂಡು ಗಲ್ಲಾಪೆಟ್ಟಿಗೆಯನ್ನು ತುಂಬಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಗೊಂಡ ಫಹಾದ್‌ ಫಾಸಿಲ್‌ ನಟನೆಯ ‘ಆವೇಶಂ’ ಚಿತ್ರ ಆ ಸಾಲಿಗೆ ಮತ್ತೊಂದು ಸೇರ್ಪಡೆ...

ಮಲಯಾಳಂ ಚಿತ್ರರಂಗದವರು ಬೆಂಗಳೂರು, ಮೈಸೂರು, ಮಂಗಳೂರು ಭಾಗಗಳಲ್ಲಿ ನಡೆಯುವ ಮಲಯಾಳಿಗಳ ಕಥೆಗಳನ್ನು ತಮ್ಮ ಭಾಷೆಯಲ್ಲಿ ಸಿನಿಮಾ ಮಾಡಿ ಗೆದ್ದ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಮೊನ್ನೆ ತಾನೆ ತೆರೆಕಂಡು, ಈಗಲೂ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿರುವ ಫಹಾದ್‌ ಫಾಸಿಲ್‌ ನಟನೆಯ ‘ಆವೇಶಂ’ ಸಿನಿಮಾ ಈ ಸಾಲಿಗೆ ಮತ್ತೊಂದು ಸೇರ್ಪಡೆ. ಈಗಾಗಲೇ ₹100 ಕೋಟಿಗಿಂತ ಹೆಚ್ಚು ಬಾಚಿರುವ ಈ ಚಿತ್ರದ ನಿರ್ದೇಶಕ ಜಿತ್ತು ಮಾಧವನ್‌ ಅವರ ಹಿಂದಿನ ಸಿನಿಮಾ ‘ರೋಮಾಂಚಂ’ ಕೂಡ ಪೂರ್ತಿಯಾಗಿ ಬೆಂಗಳೂರಿನಲ್ಲಿ ನಡೆದ ಕಥೆ. ದೊಡ್ಡನಕುಂದಿಯಲ್ಲಿ ನಡೆದ ನೈಜ ಘಟನೆಯೊಂದನ್ನಿಟ್ಟುಕೊಂಡು ಸಿದ್ಧಗೊಂಡಿದ್ದ ಈ ಸಿನಿಮಾ ಕಳೆದ ವರ್ಷ ₹50 ಕೋಟಿ ಗಳಿಸಿತ್ತು.  

‘ನಾನು ಹನ್ನೆರಡು ವರ್ಷ ಬೆಂಗಳೂರಿನಲ್ಲಿದ್ದೆ. ಓದಿದ್ದು, ಮೊದಲು ಕೆಲಸ ಮಾಡಿದ್ದು ಇಲ್ಲಿಯೇ. ತಿಳಿವಳಿಕೆ ಬಂದಾಗ ಇಲ್ಲಿದ್ದೆ. ಹೀಗಾಗಿ ಇಲ್ಲಿನ ಎಷ್ಟೋ ನೆನಪುಗಳು ಈಗಲೂ ಕಣ್ಣೆದುರಿಗಿವೆ. ನನ್ನದೇ ಸುತ್ತ ನಡೆದ ನೈಜ ಘಟನೆಯನ್ನಿಟ್ಟುಕೊಂಡು ‘ರೋಮಾಂಚಂ’ ಸಿನಿಮಾ ಮಾಡಿದೆ. ಜನಕ್ಕೆ ಇಷ್ಟವಾಯ್ತು. ‘ರೋಮಾಂಚಂ’ ಚಿತ್ರದ ಕೊನೆಯಲ್ಲಿ ಬೆಂಗಳೂರಿನ ರೂಮಿನಲ್ಲಿ ವಾಸವಿದ್ದ ನನ್ನ ಆ ನಾಲ್ವರು ಗೆಳೆಯರ ಚಿತ್ರವನ್ನು ಹಾಕಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ಜಿತ್ತು ಮಾಧವನ್‌.

2018ರಲ್ಲಿ ವಿನೀತ್‌ ಶ್ರೀನಿವಾಸನ್‌ ಅವರ ‘ಅರವಿಂದಂಡೆ ಅತಿಥಿಗಳ್‌’ ಚಿತ್ರ ತೆರೆಕಂಡು ಯಶಸ್ವಿ ಆಗಿತ್ತು. ಕೊಲ್ಲೂರು ಮೂಕಾಂಬಿಕೆಯ ಸುತ್ತಲೂ ನಡೆಯುವ ಕಥೆಯನ್ನಾಧರಿಸಿದ ಸಿನಿಮಾವಿದು. ಕೊಲ್ಲೂರು, ನಿಟ್ಟೂರು, ಉಡುಪಿಯ ಸುತ್ತಲಿನ ಪರಿಸರವನ್ನು ಬಹಳ ಚೆಂದವಾಗಿ ಚಿತ್ರಿಸಿದ್ದರು.

ಕರುನಾಡಿನ ಕಥೆಗಳೊಂದಿಗೆ ಮಲೆಯಾಳಂ ಚಿತ್ರರಂಗದ ಈ ನಂಟು ಹೊಸತೇನಲ್ಲ. 1989ರಲ್ಲಿ ತೆರೆಕಂಡ ಮೋಹನ್‌ ಲಾಲ್‌ ನಟನೆಯ ಸೂಪರ್‌ ಹಿಟ್‌ ‘ನಾಡು ವಾಳಿಕಳ್‌’ ಚಿತ್ರದ ಪಾತ್ರದಲ್ಲಿ ಮೋಹನ್‌ ಲಾಲ್‌ ಬೆಂಗಳೂರಿನವರಾಗಿರುತ್ತಾರೆ. ಇವರದ್ದೇ ನಟನೆಯ ‘ವಂದನಂ’, ‘ಬಟರ್‌ಫ್ಲೈಸ್‌’ ಚಿತ್ರಗಳ ಕಥೆಯೂ ಸಿಲಿಕಾನ್‌ ಸಿಟಿಯಲ್ಲಿಯೇ ನಡೆಯುವಂಥದ್ದು.

ಸಾಲು ಸಾಲು ಸಿನಿಮಾಗಳು

ಬೆಂಗಳೂರು, ಮೈಸೂರು, ಮಂಗಳೂರು ಭಾಗದ ಕಥೆಗಳನ್ನಿಟ್ಟುಕೊಂಡು ಗೆದ್ದ ಮಲಯಾಳಂ ಸಿನಿಮಾಗಳ ಪಟ್ಟಿ ದೊಡ್ಡದಿದೆ. ಅಂಜಲಿ ಮೆನನ್‌ ನಿರ್ದೇಶನದ ‘ಬೆಂಗಳೂರು ಡೇಸ್‌’ ಸಂಚಲನ ಮೂಡಿಸಿತ್ತು. ನಿವಿನ್‌ ಪೌಲಿ, ದುಲ್ಕರ್‌ ಸಲ್ಮಾನ್‌, ಫಹಾದ್‌, ಪಾರ್ವತಿ ಮೆನನ್‌ ನಟನೆಯ ಸಿನಿಮಾ ಈಗ ನೋಡಿದರೂ ಬೆಂಗಳೂರು ಕುರಿತು ನವಿರು ಭಾವ ಮೂಡಿಸುತ್ತದೆ.

ಮಮ್ಮುಟಿ ಅಭಿನಯದ ‘ಸೈಲೆನ್ಸ್‌’, ದುಲ್ಕರ್‌ ನಟನೆಯ ‘ಹಂಡ್ರೆಡ್‌ ಡೇಸ್‌ ಆಫ್‌ ಲವ್‌’,ಟೋವಿನೊ ಥಾಮಸ್‌ ಅಭಿನಯದ ‘ಡಿಯರ್‌ ಫ್ರೆಂಡ್‌’, ‘ಮರಡೋನ’, ದಿಲೀಪ್‌ ಅವರ ‘ಡಾರ್ಲಿಂಗ್‌ ಡಾರ್ಲಿಂಗ್‌’, ಮುಕೇಶ್‌ ನಟನೆಯ ‘ಫಿಲಿಪ್ಸ್‌’, ಫಹಾದ್‌ ಅಭಿನಯದ ‘ಅಯಾಳ್‌ ನಾನಲ್ಲ’, ‘22 ಫೀಮೇಲ್‌ ಕೊಟ್ಟಾಯಂ’ ಸಿನಿಮಾಗಳಲ್ಲಿ ಬೆಂಗಳೂರು ಕಥಾಕೇಂದ್ರ. ಇಲ್ಲಿ ಚಿತ್ರೀಕರಣಗೊಳ್ಳದಿದ್ದರೂ, ‘ಜನಗಣಮನ’ ಸಿನಿಮಾದ ಕಥೆಯಲ್ಲಿ ರಾಮನಗರ ಬರುತ್ತದೆ. ‘ಪ್ರೇಮಂ’ ಚಿತ್ರದಲ್ಲಿ ಬೆಂಗಳೂರಿನ ಉಲ್ಲೇಖ ಬರುತ್ತದೆ. ಇದಲ್ಲದೇ ಮೈಸೂರನ್ನು ಕಥೆಯ ಭಾಗವಾಗಿಸಿಕೊಂಡ ಒಂದಷ್ಟು ಚಿತ್ರಗಳೂ ಸಿಗುತ್ತವೆ. 

ಆವೇಶಂ ಚಿತ್ರದ ದೃಶ್ಯ
ಆವೇಶಂ ಚಿತ್ರದ ದೃಶ್ಯ

ಕನೆಕ್ಟ್‌ ಆಗುವ ಪಾತ್ರಗಳು

‘ಬೆಂಗಳೂರಿನ ಐಟಿ ಜಗತ್ತಿನ ಕಥೆ ಹೇಳುವ ಸಾಕಷ್ಟು ಸಿನಿಮಾಗಳು ಮಲಯಾಳದಲ್ಲಿ ಬಂದಿವೆ. ಕೊಲ್ಲೂರು ಮೂಕಾಂಬಿಕೆ ಕೇರಳದ ಹಲವರಿಗೆ ಮನೆ ದೇವರು. ಹೀಗಾಗಿ ದೇವಿಯ ಕುರಿತಾದ ಚಿತ್ರಗಳೂ ಒಂದಷ್ಟಿವೆ. ಮಂಗಳೂರು, ಕಾಸರಗೋಡು, ಕೊಡಗಿನ ಕಥೆಯನ್ನು ಹೊಂದಿರುವ ಚಿತ್ರಗಳಿಗೆ ಲೆಕ್ಕವಿಲ್ಲ. ವಿನೀತ್ ಶ್ರೀನಿವಾಸನ್‌ ನಿರ್ದೇಶನದ ‘ತಿರ’ ಸಿನಿಮಾ ಕರ್ನಾಟಕ–ಗೋವಾ ಗಡಿ ಬೆಳಗಾವಿಯಲ್ಲಿ ನಡೆಯುವ ಕಥೆಯನ್ನು ಹೊಂದಿದೆ. ಕೇರಳದಲ್ಲಿ ಓದು ಮುಗಿದ ನಂತರ ದುಬೈಗೆ ಹೋಗಬೇಕು, ಇಲ್ಲವಾದರೆ ಬೆಂಗಳೂರಿಗೆ ಹೋಗಬೇಕು ಎಂಬುದು ಬಹುತೇಕರ ಗುರಿಯಾಗಿರುತ್ತದೆ. ಅಷ್ಟರಮಟ್ಟಿಗೆ ಬೆಂಗಳೂರು ನಮ್ಮಗಳ ಮನಸ್ಸಿನಾಳಕ್ಕೆ ಇಳಿದಿದೆ. ನನ್ನ ಅಣ್ಣ 1995ರಲ್ಲಿ ಬೆಂಗಳೂರಿಗೆ ಬಂದು ವಾಸವಾಗಿದ್ದರು. ಆಗ ನಾನು ವಯನಾಡಿನಿಂದ ಬೆಂಗಳೂರಿಗೆ ಬರುತ್ತಿದ್ದೆ. ‘ಆವೇಶಂ’ ಸಿನಿಮಾ ನೋಡುವಾಗ ಆಗ ನೋಡಿದ ಸಾಕಷ್ಟು ಪಾತ್ರಗಳು, ಸ್ಥಳಗಳು ನೆನಪಾದವು. ಮುಖ್ಯವಾಗಿ ಈ ಸಿನಿಮಾಗಳ ಪಾತ್ರಗಳು ಕನೆಕ್ಟ್‌ ಆಗುತ್ತವೆ. ಬದುಕಿಗೆ ಬಹಳ ಹತ್ತಿರವೆನಿಸುತ್ತವೆ. ನಮ್ಮದೇ ಬಳಗದಲ್ಲಿನ ಪಾತ್ರಗಳಂತಿರುತ್ತವೆ. ಆ ಕಾರಣಕ್ಕೆ ಸಿನಿಮಾ ಇಷ್ಟವಾಗುತ್ತದೆ’ ಎನ್ನುತ್ತಾರೆ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಡಿಐ ಮತ್ತು ಕಲರಿಸ್ಟ್‌ ಆಗಿರುವ ಕೇರಳ ಮೂಲದ ಟಾಮ್‌ ಸಿ ಜೋಸ್‌.

ಜಿತು ಮಾಧವನ್‌
ಜಿತು ಮಾಧವನ್‌
‘ಬೆಂಗಳೂರು ಚಿರಪರಿಚಿತ’
‘ಯಾವುದೋ ಸ್ಥಳಕ್ಕಿಂತ ಬೆಂಗಳೂರನ್ನು ಮಲಯಾಳಂ ಪ್ರೇಕ್ಷಕರಿಗೆ ಸುಲಭವಾಗಿ ಅರ್ಥ ಮಾಡಿಸಬಹುದು. ಕೇರಳದಲ್ಲಿ ಎಲ್ಲರಿಗೂ ಬೆಂಗಳೂರು ಗೊತ್ತಿದೆ. ಒಂದಲ್ಲ ಒಂದು ಕಾರಣಕ್ಕೆ ಇಲ್ಲಿಗೆ ಭೇಟಿ ನೀಡಿರುತ್ತಾರೆ. ಅವರ ಸಂಬಂಧಿಕರು, ಕುಟುಂಬದವರು ಇಲ್ಲಿರುತ್ತಾರೆ. ಸಾಕಷ್ಟು ಮಲೆಯಾಳಿಗಳು ಬೆಂಗಳೂರಿನಲ್ಲಿದ್ದಾರೆ. ಹೀಗಾಗಿ ನಮ್ಮ ಪ್ರೇಕ್ಷಕರಿಗೆ ಬೆಂಗಳೂರು ಬಹಳ ಬೇಗ ಕನೆಕ್ಟ್‌ ಆಗುತ್ತದೆ’ ಎನ್ನುತ್ತಾರೆ ಜಿತ್ತು ಮಾಧವನ್‌. ಮತ್ತೊಂದು ವಿಶೇಷವೆಂದರೆ ಈ ವರ್ಷ ಬೆಂಗಳೂರಿನಲ್ಲಿ ಚಿತ್ರಮಂದಿರಗಳಲ್ಲಿನ ಗಳಿಕೆಯಲ್ಲಿಯೂ ಮಲೆಯಾಳಂ ಚಿತ್ರಗಳು ಮೊದಲ ಸ್ಥಾನದಲ್ಲಿವೆ. ಕಳೆದ ತಿಂಗಳು ತೆರೆಕಂಡ ‘ಮಂಜುಮ್ಮಲ್‌ ಬಾಯ್ಸ್‌’ ಚಿತ್ರ ಬೆಂಗಳೂರಿನಲ್ಲಿಯೇ ₹4 ಕೋಟಿಗಿಂತ ಹೆಚ್ಚು ಗಳಿಕೆ ಕಂಡಿತ್ತು. ಕೇವಲ ಮಲಯಾಳಂನವರು ಮಾತ್ರವಲ್ಲದೇ ಕನ್ನಡಿಗರು ಈ ಚಿತ್ರಗಳನ್ನು ಚಿತ್ರಮಂದಿರಗಳಿಗೆ ಹೋಗಿ ವೀಕ್ಷಿಸುತ್ತಿದ್ದಾರೆ.
ಹೇಮಂತ್ ರಾವ್
ಹೇಮಂತ್ ರಾವ್
‘ನಮ್ಮ ನಡುವಿನ ಕಥೆಗಳು ಬೇಕು’
‘ಆವೇಶಂ ಚಿತ್ರ ನೋಡಿದರೆ ಬೆಂಗಳೂರಿಗರ ಕಥೆಯಲ್ಲ. ಬೆಂಗಳೂರಿಗೆ ಬಂದು ಸಿಕ್ಕಿಹಾಕಿಕೊಳ್ಳುವ ಮಲಯಾಳಿ ಹುಡುಗರ ಕಥೆ. ಹೀಗಾಗಿ ಅಲ್ಲಿಯವರಿಗೆ ಕನೆಕ್ಟ್‌ ಆಯ್ತು. ‘ಬೆಂಗಳೂರು ಡೇಸ್‌’ ಸಿನಿಮಾದಲ್ಲಿ ಬೆಂಗಳೂರಿನಲ್ಲಿ ಮಲಯಾಳಿಗರು ಹೆಚ್ಚಿರುವ ಭಾಗವನ್ನು ರಿಸರ್ಚ್‌ ಮಾಡಿ, ಅಲ್ಲಿಯೇ ಚಿತ್ರೀಕರಣ ನಡೆಸಿದ್ದರು. ಇದು ಅವರಿಗೆ ಅವರ ಜನರ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ. ‘ಅಮೆರಿಕ, ಅಮೆರಿಕ’ ಸಿನಿಮಾ ಏಕೆ ನಮಗೆಲ್ಲ ಕನೆಕ್ಟ್‌ ಆಯ್ತು? ಅದು ಅಮೆರಿಕದ ಕಥೆಯಲ್ಲ, ಅಲ್ಲಿರುವ ನಮ್ಮವರ ಕಥೆ. ನಾವು ನಮ್ಮ ಸುತ್ತಲಿರುವ ಕಥೆಗಳನ್ನು ಹೆಕ್ಕುವಲ್ಲಿ ವಿಫಲರಾಗುತ್ತಿದ್ದೇವೆ. ನಮ್ಮ ನಡುವಿನ ಕಥೆಗಳಿಗೆ ಇಲ್ಲಿಯೂ ಜನ ಸ್ಪಂದಿಸುತ್ತಾರೆ. ‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’, ‘ಡೇರ್ ಡೆವಿಲ್‌ ಮುಸ್ತಾಫ’, ‘ಕ್ಷೇತ್ರಪತಿ’ಯಂತಹ ಸಿನಿಮಾಗಳು ಇದಕ್ಕೆ ಉದಾಹರಣೆ. ಇಲ್ಲಿ ನಾವೇ ಪ್ರೇಕ್ಷಕರನ್ನು ಮಾಸ್‌, ಕ್ಲಾಸ್‌, ಎ,ಬಿ,ಸಿ ಕೆಟಗರಿಯ ಆಡಿಯನ್ಸ್‌ ಎಂದೆಲ್ಲ ವಿಂಗಡಿಸಿಕೊಂಡು ನಿರ್ಲಕ್ಷಿಸುತ್ತಿದ್ದೇವೆ. ಇಲ್ಲಿ ಉತ್ತಮವಾದ ಸಿನಿಮಾಗಳು ಬರುತ್ತಿಲ್ಲ. ಹೀಗಾಗಿ ಜನ ಬೇರೆ ಭಾಷೆಯ ಸಿನಿಮಾಗಳತ್ತ ಮುಖ ಮಾಡುತ್ತಿದ್ದಾರೆ. ಬೇರೆ ಭಾಷೆಯ ಹೀರೊಗಳ ಸಿನಿಮಾಗಳನ್ನು ಅನುಕರಿಸಬಾರದು. ಮೊದಲು ನಮ್ಮ ಸುತ್ತಲಿನ ಕಥೆಗಳು ಚಿತ್ರವಾಗಬೇಕು. ನಮ್ಮ ನೆಲದ ಕಥೆಗಳು ಗೆದ್ದಾಗ ಅಂಥ ಕಥೆಗಳಿಗೆ ಹಣ ಹಾಕುವ ನಿರ್ಮಾಪಕರು ಹೆಚ್ಚುತ್ತಾರೆ. ಇಲ್ಲವಾದರೆ ಮೂರು ಫೈಟು, ನಾಲ್ಕು ಹಾಡಿನ ಚಿತ್ರಗಳನ್ನು ಕೇಳುವ ನಿರ್ಮಾಪಕರೇ ಹೆಚ್ಚಿರುತ್ತಾರೆ’ ಎಂದು ನಿರ್ದೇಶಕ ಹೇಮಂತ್‌ ರಾವ್‌ ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT