ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಕೊರೊನಾಗೆ ಲಸಿಕೆ ಎಂದು ಬರುತ್ತೆ? ಯಾರಿಗೆಲ್ಲಾ ಕೊಡಬೇಕು?

ಭರವಸೆಯ ಬೆಳಕು
ಅಕ್ಷರ ಗಾತ್ರ

ವಿವಿಧ ದೇಶಗಳಲ್ಲಿ ನಡೆಯುತ್ತಿರುವಲಸಿಕೆ ಸಂಶೋಧನೆಗಳ ಮಾಹಿತಿಯನ್ನು ಜನರು ಕುತೂಹಲದಿಂದ ಗಮನಿಸುತ್ತಿದ್ದಾರೆ. ಲಸಿಕೆ ಸಂಶೋಧನೆಗಳ ಮಾಹಿತಿಯೂ ಸೇರಿದಂತೆ ಲಸಿಕೆ ಬಗ್ಗೆನಿಮ್ಮ ಮನಸ್ಸಿನಲ್ಲಿ ಇರುವ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುವ ಯತ್ನ ಇಲ್ಲಿದೆ.

ಕೊರೊನಾ ವೈರಸ್‌ ಸೋಂಕಿಗೆ ಕಡಿವಾಣ ಹಾಕಿ, ವಿಶ್ವವನ್ನು ಮತ್ತೆ ಮುಕ್ತಗೊಳಿಸುವ ಭರವಸೆ ಹುಟ್ಟಿಸಿರುವಲಸಿಕೆಗಾಗಿ ಇಡೀ ವಿಶ್ವ ಕಾತರದಿಂದ ಕಾಯುತ್ತಿದೆ.ಸಂಶೋಧನೆಯು ಹಲವು ದೇಶಗಳಲ್ಲಿ ಭರದಿಂದ ಸಾಗಿದೆ. ಸುಮಾರು 165 ಸಂಸ್ಥೆಗಳು ಲಸಿಕೆಯ ಸಂಶೋಧನಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಈ ಪೈಕಿ 27 ಲಸಿಕೆಗಳು ಮಾತ್ರ ಮನುಷ್ಯರ ಮೇಲೆ ಪ್ರಯೋಗ ನಡೆಸುವ ಹಂತ ತಲುಪಿವೆ.

ಸುರಕ್ಷಿತ ಲಸಿಕೆಯೊಂದು ಸಿದ್ಧವಾಗಲು ಹಲವು ವರ್ಷಗಳ ಸಂಶೋಧನೆ ಅತ್ಯಗತ್ಯ. ಆದರೆ ಈ ಬಾರಿ ಮಾತ್ರ ವಿಜ್ಞಾನಿಗಳು ಒಂದು ವರ್ಷದೊಳಗೆ ಪರಿಣಾಮಕಾರಿ ಲಸಿಕೆ ಅಭಿವೃದ್ಧಿಪಡಿಸಲು ಟೊಂಕಕಟ್ಟಿ ನಿಂತಿದ್ದಾರೆ. ಅದಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.

ಕೊರೊನಾಗೆ ಲಸಿಕೆ ಅಭಿವೃದ್ಧಿಪಡಿಸುವ ಕೆಲಸ ಆರಂಭವಾಗಿದ್ದು ಕಳೆದ ಜನವರಿಯಲ್ಲಿ. SARS-CoV-2 genome ಹೆಸರಿನ ವೈರಾಣುವನ್ನು ಹದ್ದುಬಸ್ತಿನಲ್ಲಿ ಇಡಬಲ್ಲಲಸಿಕೆಯ ಮಾನವ ಪ್ರಯೋಗ ಮಾರ್ಚ್‌ನಿಂದ ನಡೆಯುತ್ತಿದೆ. ಆದರೆ ಮುಂದಿನ ಹಾದಿ ಇನ್ನೂ ದೀರ್ಘವಾದುದು. ಈವರೆಗೆ ಭರವಸೆ ಹುಟ್ಟಿಸಿರುವಕೆಲ ಪ್ರಯೋಗಗಳು ವಿಫಲವಾಗಬಹುದು, ಕೆಲವೇ ಪ್ರಯೋಗಗಳಲ್ಲಿ ಮಾತ್ರ ನಿರೀಕ್ಷಿತಫಲಿತಾಂಶಗಳು ಹೊಮ್ಮಬಹುದು.

ಈಗಾಗಲೇಪರೀಕ್ಷೆ ಗೆದ್ದಿದೆ ಒಂದು ಲಸಿಕೆ

ಚೀನಾದ ಕ್ಯಾನ್ ಸಿನೊ ಬಯೊ ಸಂಸ್ಥೆಯು ಮಿಲಿಟರಿ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಜೊತೆಗೂಡಿ ಅಭಿವೃದ್ಧಿಪಡಿಸಿರುವ ಎಡಿ5 ಲಸಿಕೆ ಎಲ್ಲ ಹಂತದ ಪರೀಕ್ಷೆಗಳನ್ನು ದಾಟಿ, ಜನರ ಬಳಕೆಗೆ ಅನುಮತಿ ಪಡೆದುಕೊಂಡಿದೆ. ಕಳೆದ ಮೇ ಮತ್ತು ಜೂನ್‌ ತಿಂಗಳಲ್ಲಿ ಈ ಲಸಿಕೆಯ ಮೊದಲ ಮತ್ತು ಎರಡನೇ ಹಂತದ ಪ್ರಯೋಗಗಳ ಫಲಿತಾಂಶಗಳ ಬಗ್ಗೆ ವರದಿಗಳು ಪ್ರಕಟವಾಗಿದ್ದವು. ಈ ಲಸಿಕೆಯು ಮಾನವ ದೇಹದಲ್ಲಿ ಪ್ರಬಲ ಪ್ರತಿಕಣಗಳನ್ನು ಸೃಜಿಸಿದ ದಾಖಲೆಗಳನ್ನೂ ಸಂಸ್ಥೆ ಬಹಿರಂಗಪಡಿಸಿತ್ತು.

ಚೀನಾದ ಮಿಲಿಟರಿ ಜೂನ್ 25ರಂದು ಈ ಲಸಿಕೆಯ ಬಳಕೆಗೆ ಅನುಮೋದನೆ ನೀಡಿತು. ಈ ಲಸಿಕೆ ಹಾಕಿಸಿಕೊಳ್ಳುವುದು ಚೀನಾದ ಯೋಧರಿಗೆ ಕಡ್ಡಾಯಗೊಳಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಕ್ಯಾನ್‌ಸಿನೊ ಸಂಸ್ಥೆ ಈ ಕುರಿತು ಏನನ್ನೂ ಹೇಳಿಲ್ಲ.

ಅಂತಿಮ ಹಂತದಲ್ಲಿವೆ ಈ ಪ್ರಯೋಗಗಳು

ಬ್ರಿಟಿಷ್ ಸ್ವಿಡಿಷ್ ಕಂಪನಿ ಆಸ್ಟ್ರಾ ಝೆನೆಕಾ ಮತ್ತು ಆಕ್ಸ್‌ಫರ್ಡ್‌ ವಿವಿ ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿರುವ ChAdOx1 ಲಸಿಕೆ ಅಂತಿಮ ಹಂತದ ಪ್ರಯೋಗದಲ್ಲಿದೆ. ಜುಲೈ 20ರಂದು ಈ ಲಸಿಕೆಯ 1 ಮತ್ತು 2ನೇ ಹಂತದ ಪ್ರಯೋಗಗಳ ಫಲಿತಾಂಶಗಳು ಪ್ರಕಟವಾಗಿದ್ದವು. ಕೊರೊನಾ ವೈರಾಣು ವಿರುದ್ಧ ಪ್ರಬಲ ಪ್ರತಿಕಣಗಳನ್ನು ಈ ಲಸಿಕೆ ಹುಟ್ಟುಹಾಕಿತ್ತು, ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಸುಸ್ಥಿತಿಗೆ ತಂದಿತ್ತು ಎಂದು ವರದಿ ಉಲ್ಲೇಖಿಸಿತ್ತು.

ಲಸಿಕೆಯ 2ನೇ ಹಂತದ ಪ್ರಯೋಗ ಬ್ರಿಟನ್‌ನಲ್ಲಿ ಮತ್ತು 3ನೇ ಹಂತದ ಪ್ರಯೋಗ ಬ್ರಿಜಿಲ್ ಮತ್ತು ದಕ್ಷಿಣಾ ಆಫ್ರಿಕಾಗಳಲ್ಲಿ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ನವೆಂಬರ್ ವೇಳೆಗೆ ಈ ಲಸಿಕೆ ಜನಸಾಮಾನ್ಯರ ಬಳಕೆಗೆ ಲಭ್ಯವಾಗಲಿದೆ. ಭಾರತದಲ್ಲಿ ಈ ಲಸಿಕೆಯ ಬೆಲೆ 1000 ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ. ಸದ್ಯದ ಮಟ್ಟಿಗೆ ಭಾರತೀಯರಲ್ಲಿ ಭರವಸೆ ಹುಟ್ಟುಹಾಕಿರುವ ಸಂಶೋಧನೆಯಿದು.

ಚೀನಾ ಸರ್ಕಾರದ ಅಧೀನದಲ್ಲಿರುವ ಸಿನೊಫಾರ್ಮ್‌ ಈ ಹಿಂದೆ ಲಸಿಕೆಯೊಂದನ್ನು ಅಭಿವೃದ್ಧಿಪಡಿಸಿತ್ತು. ಅದೇ ಲಸಿಕೆ ಕೊರೊನಾ ವೈರಾಣು ವಿರುದ್ಧ ಪ್ರಬಲ ಪ್ರತಿಕಣಗಳನ್ನು ಬೆಳೆಸಬಲ್ಲದು ಎಂಬುದನ್ನು ಇದೀಗ ಕಂಡುಕೊಳ್ಳಲಾಗಿದೆ. ಇದೇ ಜುಲೈ ತಿಂಗಳಲ್ಲಿ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಲಸಿಕೆಯ 3ನೇ ಹಂತದ ಪ್ರಯೋಗ ಆರಂಭವಾಗಿದೆ. ಅಬುಧಾಬಿಯ ಆರೋಗ್ಯ ಸಚಿವರು ಸ್ವತಃ ತಮ್ಮ ದೇಹದ ಮೇಲೆ ಈ ಲಸಿಕೆಯ ಪ್ರಯೋಗ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಒಟ್ಟು 15 ಸಾವಿರ ಜನರ ಮೇಲೆ ಈ ಲಸಿಕೆಯ ಪ್ರಯೋಗ ನಡೆಯಲಿದೆ.

ಚೀನಾದ ಖಾಸಗಿ ಕಂಪನಿ ಸಿನೊವಾಕ್ ಬಯೊಟೆಕ್ ತನ್ನ 'ಕೊರೊನಾ ವಾಕ್' ಲಸಿಕೆಯ ಅಂತಿಮ ಹಂತದ ಪ್ರಯೋಗ ಆರಂಭಿಸಿದೆ. 743 ಮಂದಿಯ ಮೇಲೆ ನಡೆಸಿದ ಪ್ರಯೋಗದಲ್ಲಿ ಹೇಳಿಕೊಳ್ಳುವಂಥ ಅಡ್ಡ ಪರಿಣಾಮಗಳು ಕಂಡುಬಂದಿಲ್ಲ. ಕೊರೊನಾ ವೈರಾಣುಗಳ ವಿರುದ್ಧ ಇವರೆಲ್ಲರ ದೇಹಗಳಲ್ಲಿ ಪ್ರಬಲ ಪ್ರತಿಕಣಗಳು ಉತ್ಪತ್ತಿಯಾದವು ಎಂದು ಕಂಪನಿ ಹೇಳಿಕೆ. ಇದೇ ಜುಲೈನಲ್ಲಿ ಬ್ರೆಜಿಲ್ ದೇಶದಲ್ಲಿ ಲಸಿಕೆಯ ಅಂತಿಮ ಹಂತದ ಪ್ರಯೋಗ ಅರಂಭವಾಗಿದೆ. ವರ್ಷಕ್ಕೆ 10 ಕೋಟಿ ಡೋಸ್‌ಗಳಷ್ಟು ಉತ್ಪಾದನೆ ಸಾಮರ್ಥ್ಯವಿರುವ ಕಾರ್ಖಾನೆಯೊಂದನ್ನು ಕಂಪನಿ ಸ್ಥಾಪಿಸುತ್ತಿದೆ.

ಕ್ಷಯ ರೋಗಕ್ಕೆ ಚಿಕಿತ್ಸೆ ನೀಡಲೆಂದು 1900ನೇ ಇಸವಿಯಲ್ಲಿ ಅಭಿವೃದ್ಧಿಪಡಿಸಿದ್ದ ಬಾಸಿಲಸ್ ಕ್ಯಾಲ್‌ಮೆಟೆ ಗರಿನ್ ಲಸಿಕೆಯ ಇತರ ಬಳಕೆ ಸಾಧ್ಯತೆಗಳ ಬಗ್ಗೆಮುರ್ಡೊಕ್ ಸಂಶೋಧನಾ ಸಂಸ್ಥೆಪ್ರಯೋಗಗಳನ್ನು ನಡೆಸುತ್ತಿದೆ.ಈ ಲಸಿಕೆಯು ಕೊರೊನಾ ವೈರಾಣುಗಳ ವಿರುದ್ಧ ಬಳಸಬಹುದೇ ಎಂಬುದನ್ನೂ ವಿಜ್ಞಾನಿಗಳು ಪರಿಶೀಲಿಸುತ್ತಿದ್ದಾರೆ.

ಭಾರತದ ಎರಡು ಕಂಪನಿಗಳು

ಜೀವತಂತು (ಡಿಎನ್‌ಎ) ಆಧರಿದ ಲಸಿಕೆಯೊಂದನ್ನು ಭಾರತದ ಝೈಡಸ್ ಕ್ಯಾಡಿಲಿಯಾ ಕಂಪನಿ ಅಭಿವೃದ್ಧಿಪಡಿಸಿದೆ. ಇದೇ ಜುಲೈ 3ರಂದು ಈ ಲಸಿಕೆಯ ಮಾನವ ಪ್ರಯೋಗಗಳು ಆರಂಭವಾಗಿವೆ.

ಭಾರತ್ ಬಯೋಟೆಕ್ ಕಂಪನಿಯು ಅಖಿಲ ಭಾರತ ವೈದ್ಯಕೀಯ ಸಂಶೋಧನಾ ಸಂಸ್ಥೆ, ಪುಣೆಯ ವೈರಾಣು ಸಂಶೋಧನಾ ಕೇಂದ್ರಗಳ ಸಹಯೋಗದಲ್ಲಿ ಅಭಿವೃದ್ಧಿಪಡಿಸುತ್ತಿರುವ ಕೊವ್ಯಾಕ್ಸಿನ್‌ನ 2ನೇ ಹಂತದ ಪ್ರಯೋಗ ಇದೇ ಜುಲೈ ತಿಂಗಳಲ್ಲಿ ಆರಂಭವಾಯಿತು. ಆಗಸ್ಟ್‌ 15ರ ಹೊತ್ತಿಗೆ ಲಸಿಕೆ ಲಭ್ಯವಾಗಬಹುದು ಎಂಬ ನಿರೀಕ್ಷೆಯು ಹುಟ್ಟಿತ್ತು. ಆದರೆ ಭಾರತ್‌ ಬಯೊಟೆಕ್‌ನ ಸಿಇಒ ಈ ಹೇಳಿಕೆಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದರು. 2021ಕ್ಕೆ ಮೊದಲು ಈ ಲಸಿಕೆ ಹೊರಬರುವ ಸಾಧ್ಯತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.

ಕೊರೊನಾಗೆ ಲಸಿಕೆ ಏಕೆ ಮುಖ್ಯ?

ಕೊರೊನಾ ವೈರಾಣು ವಿಶ್ವದೆಲ್ಲಡೆ ಹರಡಿದೆ. ಲಸಿಕೆಯೊಂದನ್ನು ಅಭಿವೃದ್ಧಿಪಡಿಸಿ, ಜನರಿಗೆ ನೀಡಿದರೆ ಅವರ ದೇಹ ಇಂಥ ವೈರಾಣುಗಳನ್ನು ಎದುರಿಸಲು ಸನ್ನದ್ಧ ಸ್ಥಿತಿಯಲ್ಲಿರುತ್ತದೆ. ಕೊರೊನಾ ವೈರಾಣುವಿನ ಬಾಧೆ ಜಗತ್ತಿನಲ್ಲಿ ಕಡಿಮೆಯಾಗುತ್ತದೆ.

ಈವರೆಗಿನ ಪ್ರಗತಿ ಏನು?

ವಿಶ್ವದ ವಿವಿಧೆಡೆ ಸುಮಾರು 165 ಕಂಪನಿಗಳು ಲಸಿಕೆ ಅಭಿವೃದ್ಧಿಪಡಿಸುವ ಆರಂಭಿಕ ಹಂತದಲ್ಲಿವೆ. ಸುಮಾರು 27 ಲಸಿಕೆಗಳು ಮಾನವ ಪ್ರಯೋಗ ಆರಂಭಿಸಿವೆ.

ಲಸಿಕೆ ಯಾವಾಗ ಸಿಗಬಹುದು?

ಲಸಿಕೆ ಅಭಿವೃದ್ಧಿಪಡಿಸಲು ವರ್ಷಗಟ್ಟಲೆ ಬೇಕು. ಆದರೆ ಈ ಬಾರಿ ವಿಜ್ಞಾನಿಗಳು ಕೆಲವೇ ತಿಂಗಳುಗಳಲ್ಲಿ ಇದನ್ನು ಸಾಧ್ಯವಾಗಿಸಲು ಯತ್ನಿಸುತ್ತಿದ್ದಾರೆ. 2021ರ ಮಧ್ಯಭಾಗದಲ್ಲಿ ಕೊರೊನಾ ಲಸಿಕೆ ಮಾರುಕಟ್ಟೆಗೆ ಬರಬಹುದು ಎಂದು ಲೆಕ್ಕ ಹಾಕಲಾಗಿದೆ. ಆಕ್ಸ್‌ಫರ್ಡ್‌ ವಿವಿ ಮಾತ್ರ ಇದೇ ವರ್ಷ ಲಸಿಕೆಯನ್ನು ಹೊರತರುವ ಭರವಸೆಯ ಮಾತುಗಳನ್ನು ಆಡಿದೆ.ಆದರೆ ಈ ತರ್ಕ ಸುಳ್ಳಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಕೊರೊನಾವೈರಸ್ ಎಂದು ಜನರಲ್ಲಿ ಭೀತಿ ಹುಟ್ಟಿಸಿರುವುದುSars-CoV-2 ಜಾತಿಯ ವೈರಾಣು. ಇದಕ್ಕೂ ಮೊದಲೇ ಜಗತ್ತಿನಲ್ಲಿ ನಾಲ್ಕು ಬೇರೆ ವಿಧದ ವೈರಾಣುಗಳು ಪ್ರಚಲಿತದಲ್ಲಿದ್ದವು. ನೆಗಡಿ ಉಂಟು ಮಾಡುತ್ತಿದ್ದ ಈ ಯಾವುದೇ ವೈರಾಣುಗಳಿಗೆ ಲಸಿಕೆ ಅಭಿವೃದ್ಧಿಯಾಗಿಲ್ಲ.

ಇನ್ನೂ ಏನೆಲ್ಲಾ ಆಗಬೇಕು?

ಲಸಿಕೆ ಅಭಿವೃದ್ಧಿ ಪ್ರಕ್ರಿಯೆ ವಿವಿಧ ಹಂತಗಳಲ್ಲಿ. ಈ ಕೆಳಗಿನ ಹಂತಗಳು ದಾಟಿ ಮುನ್ನಡೆಯದೆ ಲಸಿಕೆಗಳು ಜನರಿಗೆ ಲಭ್ಯವಾಗುವುದು ಕಷ್ಟ.

- ಲಸಿಕೆಗಳು ಮಾನವ ಬಳಕೆಗೆ ಸುರಕ್ಷಿತ ಎಂಬುದು ಸಾಬೀತಾಗಬೇಕು.
-ಲಸಿಕೆಗಳ ಅಡ್ಡಪರಿಣಾಮಗಳು ವೈರಾಣು ಕೊಡುವ ಕಷ್ಟಕ್ಕಿಂತ ಹೆಚ್ಚಿನದಲ್ಲ ಎಂಬುದು ನಿರೂಪಿತವಾಗಬೇಕು.
- ಈ ಲಸಿಕೆಗಳಿಂದ ಮಾನವ ದೇಹದಲ್ಲಿ ರೋಗ ನಿರೋಧಕ ಶಕ್ತಿ ಚುರುಕಾಗುತ್ತದೆ ಎಂಬುದು ಸಾಬೀತಾಗಬೇಕು.
- ಲಕ್ಷಾಂತರ ಡೋಸ್‌ಗಳನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯದ ಕಾರ್ಖಾನೆಗಳು ಸ್ಥಾಪನೆಯಾಗಬೇಕು.
- ವಿವಿಧ ದೇಶಗಳ ಔಷಧ ನಿಯಂತ್ರಕರು ಈ ಲಸಿಕೆಗಳ ಬಳಕೆಗೆ ಅನುಮತಿ ನೀಡಬೇಕು.
- ಕೋಟ್ಯಂತರ ಜನರಿಗೆ ಈ ಲಸಿಕೆಗಳನ್ನು ತಲುಪಿಸುವುದು ಹೇಗೆ ದೊಡ್ಡ ಸವಾಲಿಗೆ ಉತ್ತರ ಕಂಡುಕೊಳ್ಳಬೇಕು.

ಎಷ್ಟು ಜನರಿಗೆ ಲಸಿಕೆ ಕೊಡಬೇಕು?

ಹಲವು ದೇಶಗಳಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡಿದೆ. ಇಂಥ ದೇಶಗಳ ಶೇ 70ರಷ್ಟು ಜನರಿಗೆ ಲಸಿಕೆ ಸಿಗಬೇಕು. ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಶೇ 60ರಷ್ಟು ಜನರಿಗೆ ಲಸಿಕೆ ನೀಡಿದರೆ ಮಾತ್ರ ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಸಾಧ್ಯ.

ಲಸಿಕೆಯನ್ನು ಹೇಗೆ ತಯಾರಿಸುತ್ತಾರೆ?

- ದುರ್ಬಲ ವೈರಾಣುಗಳನ್ನು ದೇಹಕ್ಕೆ ಪರಿಚಯಿಸಿ, ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಸಕ್ರಿಯಗೊಳಿಸುವುದು ಲಸಿಕೆಯ ಮೂಲ ಪರಿಕಲ್ಪನೆ. ಹತ್ತಾರು ವರ್ಷಗಳಿಂದ ಈ ಪರಿಕಲ್ಪನೆಯನ್ನು ಆಧರಿಸಿ ಸಾಕಷ್ಟು ಲಸಿಕೆಗಳನ್ನು ತಯಾರಿಸಲಾಗಿದೆ. ಕೊರೊನಾ ವೈರಾಣು ವಿರುದ್ಧ ತಯಾರಿಸುತ್ತಿರುವ ಲಸಿಕೆಗೂ ಇದೇ ಮಾದರಿಯನ್ನು ಹಲವರು ಅನುಸರಿಸುತ್ತಿದ್ದಾರೆ.
- ವೈರಾಣುವಿನ ಬ್ಲೂಪ್ರಿಂಟ್ ಮೂಲಕ ಅಭಿವೃದ್ಧಿಪಡಿಸಿದ ಕೃತಕ ಜೀವಾಣುಗಳನ್ನು ಚಿಂಪಾಂಜಿಗಳ ದೇಹ ಪ್ರವೇಶ ಮಾಡಿಸಿ, ಅಲ್ಲಿ ಸುರಕ್ಷಿತ ವೈರಸ್‌ಗಳನ್ನು ಅಭಿವೃದ್ಧಿಪಡಿಸಿ ಆ ಮೂಲಕ ಲಸಿಕೆ ಅಭಿವೃದ್ಧಿಪಡಿಸುವ ಮತ್ತೊಂದು ವಿಧಾನ 'ಪ್ಲಗ್‌ ಅಂಡ್ ಪ್ಲೇ' ಇದೀಗ ಚಾಲ್ತಿಗೆ ಬಂದಿದೆ. ಆಕ್ಸ್‌ಫರ್ಡ್‌ ವಿವಿ ಸಂಶೋಧಕರು ಈ ಪ್ರಯೋಗ ಮಾಡುತ್ತಿದ್ದಾರೆ.
- ವೈರಾಣುವಿನ ಜೀವತಂತುಗಳ ಒಂದು ಭಾಗವನ್ನು ಮಾತ್ರ ದೇಹಕ್ಕೆ ಚುಚ್ಚಿ, ಆ ಮೂಲಕ ನಿಜವಾದ ವೈರಾಣುಗಳ ವಿರುದ್ಧ ಹೋರಾಡುವ ಪ್ರೋಟೀನ್‌ಗಳು ದೇಹದಲ್ಲಿ ಬೆಳೆಯುವಂತೆ ಮಾಡುವ ಮತ್ತೊಂದು ವಿಧಾನದ ಸಂಶೋಧನೆಯೂ ನಡೆಯುತ್ತಿದೆ.

ಎಲ್ಲ ವಯಸ್ಸಿನವರನ್ನು ಲಸಿಕೆ ಕಾಪಾಡೀತೇ?

ಖಂಡಿತ ಕಾಪಾಡಬಲ್ಲದು. ಆದರೆ ವಯಸ್ಸಾದವರು ಮತ್ತು ಈಗಾಗಲೇ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಲಸಿಕೆಯ ಕಾರ್ಯಕ್ಷಮತೆಯೂ ಕಡಿಮೆ. ಇಂಥವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಇತರ ಔಷಧಿಗಳ ಜೊತೆಗೆ ಲಸಿಕೆಯನ್ನು ಕೊಡಬೇಕಾಗುತ್ತದೆ.

ಲಸಿಕೆ ಬಂದೇಬಿಡ್ತು ಅಂದ್ಕೊಳ್ಳೋಣ. ಮೊದಲು ಯಾರಿಗೆ ಸಿಗುತ್ತೆ?

ಲಸಿಕೆಯೊಂದು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾಗಿ ಜನ ಬಳಕೆಗೆ ಮುಕ್ತವಾದರೂ ಅದರ ದೊಡ್ಡಮಟ್ಟದ ಉತ್ಪಾದನೆಯಾಗಿ, ಮಾರುಕಟ್ಟೆಗೆ ಬರಲು ಸಮಯಬೇಕಾಗುತ್ತದೆ. ಹೀಗಾಗಿ ಸರ್ಕಾರಗಳು ಜನಸಮುದಾಯದಲ್ಲಿ ಆದ್ಯತೆಯನ್ನು ಗುರುತಿಸಿಕೊಳ್ಳುತ್ತವೆ. ಅದರ ಪ್ರಕಾರವೇ ಲಸಿಕೆಯನ್ನು ಕೊಡಲು ನಿರ್ಧರಿಸುತ್ತವೆ.

ಈಗಿರುವ ಲೆಕ್ಕಾಚಾರದ ಪ್ರಕಾರ ಮೊದಲು ಆರೋಗ್ಯ ಕಾರ್ಯಕರ್ತರು, ಪೊಲೀಸರು ಮತ್ತು ಪೌರ ಕಾರ್ಮಿಕರಿಗೆ ಮೊದಲ ಆದ್ಯತೆ ಸಿಗಲಿದೆ. ನಂತರ ಲಸಿಕೆಯ ಲಭ್ಯತೆಯನ್ನು ಆಧರಿಸಿ ಸಾಮಾನ್ಯ ಜನರಿಗೆ ಲಸಿಕೆ ಹಾಕಿಸಿಕೊಳ್ಳುವ ಸಾಧ್ಯತೆಯನ್ನು ವಿಸ್ತರಿಸಲಾಗುವುದು ಎನ್ನಲಾಗುತ್ತಿದೆ.

ಮಾಹಿತಿ: ನ್ಯೂಯಾರ್ಕ್‌ ಟೈಮ್ಸ್‌ ಮತ್ತು ಬಿಬಿಸಿ. ಬರಹ: ಡಿ.ಎಂ.ಘನಶ್ಯಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT