ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ‘ನೈಟ್‌ಕ್ಲಬ್‌’: ಮೋದಿಯಂತೆ ಪಾಕಿಸ್ತಾನಕ್ಕೆ ಹೋಗಿಲ್ಲವೆಂದ ಕಾಂಗ್ರೆಸ್‌

ರಾಹುಲ್ ಗಾಂಧಿ ವಿಡಿಯೊ ಹಂಚಿಕೊಂಡ ಬಿಜೆಪಿ l ಕಾಂಗ್ರೆಸ್‌ನಿಂದ ತಿರುಗೇಟು
Last Updated 3 ಮೇ 2022, 20:10 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರ 12 ಸೆಕೆಂಡ್‌ಗಳ ವಿಡಿಯೊ ಒಂದನ್ನು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಟ್ವೀಟ್ ಮಾಡಿದ್ದು, ‘ಕಾಂಗ್ರೆಸ್‌ ಬಿಕ್ಕಟ್ಟಿನಲ್ಲಿರುವಾಗ ರಾಹುಲ್ ನೈಟ್‌ಕ್ಲಬ್‌ನಲ್ಲಿ ಇದ್ದಾರೆ’ ಎಂದು ಲೇವಡಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌, ಮದುವೆ ಸಮಾರಂಭದಲ್ಲಿ ಭಾಗಿಯಾಗುವುದು ಅಪರಾಧವಲ್ಲ ಎಂದು ತಿರುಗೇಟು ನೀಡಿದೆ.

ರಾಹುಲ್ ಗಾಂಧಿ ಅವರು ಯುವತಿಯೊಬ್ಬರ ಜತೆಗೆ ಪಾರ್ಟಿಯೊಂದರಲ್ಲಿ ಇರುವ ದೃಶ್ಯವುಮಾಳವೀಯ ಟ್ವೀಟ್‌ ಮಾಡಿರುವ ವಿಡಿಯೊದಲ್ಲಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಮುಂಬೈ ದಾಳಿಯ ಸಂದರ್ಭದಲ್ಲಿ ರಾಹುಲ್ ಗಾಂಧಿ ನೈಟ್‌ಕ್ಲಬ್‌ನಲ್ಲಿದ್ದರು. ಈಗ ಕಾಂಗ್ರೆಸ್‌ ಛಿದ್ರವಾಗುತ್ತಿರುವಾಗಲೂ ಅವರು ನೈಟ್‌ಕ್ಲಬ್‌ನಲ್ಲಿದ್ದಾರೆ. ಅವರ ವರ್ತನೆ ಒಂದೇ ತೆರನಾಗಿದೆ’ ಎಂದು ಮಾಳವೀಯ ಟ್ವೀಟ್ ಮಾಡಿದ್ದಾರೆ. ಜತೆಗೆ, ‘ಕಾಂಗ್ರೆಸ್‌ ತನ್ನ ಅಧ್ಯಕ್ಷತೆಯನ್ನು ಹೊರಗುತ್ತಿಗೆ ನೀಡಲು ನಿರಾಕರಿಸಿದ ನಂತರ, ಅವರ ಪ್ರಧಾನಿ ಅಭ್ಯರ್ಥಿಯನ್ನು ರಾಜಕೀಯವಾಗಿ ಮುಗಿಸುವ ಕಾರ್ಯ ಆರಂಭವಾಗಿದೆ’ ಎಂದೂ ಅವರು ಟ್ವೀಟ್ ಮಾಡಿದ್ದಾರೆ.

ಲೋಕಸಭೆಯಲ್ಲಿ ಕಾಂಗ್ರೆಸ್‌ ಮುಖ್ಯ ಸಚೇತಕ ಮಾಣಿಕಮ್ಟ್ಯಾಗೋರ್‌ ಅವರು ರಾಹುಲ್ ನೈಟ್‌ಕ್ಲಬ್‌ನಲ್ಲಿದ್ದಾರೆಎಂದಿರುವ ಮಾಳವೀಯ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿ, ‘ನಾವೆಲ್ಲರೂ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೇವೆ. ಮದುವೆ ಆರತಕ್ಷತೆಯಲ್ಲಿ
ರಾಹುಲ್ ಪಾಲ್ಗೊಳ್ಳುವುದರಲ್ಲಿ ತಪ್ಪೇನಿದೆ? ಸಂಘಿಗಳು ರಾಹುಲ್‌ಗೆ ಹೆದರುವುದೇಕೆ? ಸಂಘಿಗಳು ಸುಳ್ಳು ಹಬ್ಬಿಸುವುದೇಕೆ’ ಎಂದು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ ಅವರು ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ತಮ್ಮ ಗೆಳತಿ ಸುಮ್ನಿಮಾ ಉದಾಸ್ ಅವರ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ ಎಂದು ಕಠ್ಮಂಡು ಪೋಸ್ಟ್‌ ವರದಿ ಮಾಡಿದೆ. ‘ನನ್ನ ಮಗಳ ಮದುವೆಗೆ ರಾಹುಲ್ ಗಾಂಧಿ ಅವರಿಗೆ ಆಹ್ವಾನ ನೀಡಿದ್ದೆವು. ಜತೆಗೆ ಭಾರತದ ಕೆಲವು ಅತಿಗಣ್ಯರಿಗೂ ಆಹ್ವಾನ ನೀಡಿದ್ದೆವು’ ಎಂದು ಸುಮ್ನಿಮಾ ಅವರ ತಂದೆ ಭಿಮಾ ಉದಾಸ್‌ ಅವರು ಹೇಳಿದ್ದಾರೆ ಎಂದು ಕಠ್ಮಂಡು ಪೋಸ್ಟ್‌ ವರದಿ ಮಾಡಿದೆ. ಬಿಮಾ ಉದಾಸ್‌ ಅವರು ಮ್ಯಾನ್ಮಾರ್‌ನಲ್ಲಿ ನೇಪಾಳದ ರಾಯಭಾರಿಯಗಿ ಸೇವೆ ಸಲ್ಲಿಸಿದ್ದರು.

‘ಮೋದಿಯಂತೆ ಪಾಕಿಸ್ತಾನಕ್ಕೆ ಹೋಗಿಲ್ಲ’

ಪ್ರಧಾನಿ ನರೇಂದ್ರ ಮೋದಿಆಹ್ವಾನವಿಲ್ಲದಿದ್ದರೂ ಪಾಕಿಸ್ತಾನಕ್ಕೆ ಹೋಗಿದ್ದರು. ರಾಹುಲ್ ಆ ರೀತಿ ಮಾಡಿಲ್ಲ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್ ಸುರ್ಜೇವಾಲಾ ತಿರುಗೇಟು ನೀಡಿದ್ದಾರೆ.

‘ಪಾಕಿಸ್ತಾನ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರ ಜನ್ಮದಿನಾಚರಣೆಗೆ ಆಹ್ವಾನ ಇಲ್ಲದಿದ್ದರೂ ಮೋದಿ ಹೋಗಿದ್ದರು. ಆದರೆ ರಾಹುಲ್ ಹೋಗಿರುವುದು ನಮ್ಮೊಂದಿಗೆ ಸ್ನೇಹ ಸಂಬಂಧ ಹೊಂದಿರುವ ನೇಪಾಳಕ್ಕೆ. ತಮ್ಮ ಗೆಳೆತಿಯೊಬ್ಬರ ಮದುವೆಯ ಖಾಸಗಿ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದಾರೆ. ಆ ಗೆಳತಿ ಪತ್ರಕರ್ತೆಯೂ ಹೌದು’ ಎಂದು ಸುರ್ಜೇವಾಲಾ ಹೇಳಿದ್ದಾರೆ.

‘ಕುಟುಂಬ ಹೊಂದಿರುವುದು, ಸ್ನೇಹಿತರನ್ನು ಹೊಂದುವುದು, ಮದುವೆ ಮತ್ತು ನಿಶ್ಚಿತಾರ್ಥದಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ನಮ್ಮ ಸಂಸ್ಕೃತಿ ಮತ್ತುನಾಗರಿಕತೆ. ಕುಟುಂಬ ಮತ್ತು ಸ್ನೇಹಿತರನ್ನು ಹೊಂದುವುದು ಹಾಗೂ ಮದುವೆಯಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಈ ದೇಶದಲ್ಲಿ ಇನ್ನೂ ಅಪರಾಧವಾಗಿಲ್ಲ. ಮದುವೆಯಲ್ಲಿ ಭಾಗಿಯಾಗುವುದು ಕಾನೂನುಬಾಹಿರ ಎಂದು, ಬಹುಶಃ ಇಂದಿನಿಂದ ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿ ಘೋಷಿಸಬಹುದು. ಸ್ನೇಹಿತರನ್ನು ಹೊಂದುವುದು ಮತ್ತು ಕುಟುಂಬದ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಅಪರಾಧ ಎಂದೂ ಅವರು ಹೇಳ ಬಹುದು’ ಎಂದು ಸುರ್ಜೇವಾಲಾ ಲೇವಡಿ ಮಾಡಿದ್ದಾರೆ.

ಮಾಳವೀಯ ಟ್ವೀಟ್‌ಗೆ ಪ್ರತಿಯಾಗಿ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್‌ ಬಿ.ವಿ. ಅವರು ಬಿಜೆಪಿ ನಾಯಕರು ಪಾರ್ಟಿಗಳಲ್ಲಿ ಮದ್ಯ ಸೇವಿಸುತ್ತಿರುವ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು, ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರ ಪತ್ನಿ ಜತೆಗೆ ರಾಷ್ಟ್ರಪತಿ ಭವನದಲ್ಲಿ ವೈನ್‌ ಸೇವಿಸುತ್ತಿರುವ ಚಿತ್ರವನ್ನು ಅವರು ಟ್ವೀಟ್ ಮಾಡಿದ್ದಾರೆ. ಜತೆಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಪಾರ್ಟಿಯೊಂದರಲ್ಲಿ ಶಾಂಪೇನ್‌ ಚಿಮ್ಮಿಸುತ್ತಿರುವ ಚಿತ್ರವನ್ನು ಶ್ರೀನಿವಾಸ್ ಟ್ವೀಟ್ ಮಾಡಿದ್ದಾರೆ.

ನಿರುದ್ಯೋಗ, ಕಲ್ಲಿದ್ದಲು ಮತ್ತು ವಿದ್ಯುತ್ ಕೊರತೆ, ಆರ್ಥಿಕ ಬಿಕ್ಕಟ್ಟು, ಹಣದುಬ್ಬರ ಇವು ದೇಶದ ಸಮಸ್ಯೆಗಳು. ಆದರೆ, ಬಿಜೆಪಿ ‘ರಾಹುಲ್ ನೈಟ್‌ಕ್ಲಬ್‌ನಲ್ಲಿ’ ಎಂದಷ್ಟೇ ಉತ್ತರಿಸುತ್ತದೆ

- ಶ್ರೀನಿವಾಸ್‌ ಬಿ.ವಿ., ಯುವ ಕಾಂಗ್ರೆಸ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT