ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ನಿಂದ ಸುರಕ್ಷಿತವಾಗಿ ದೆಹಲಿಗೆ ಬಂದ ರಾಜ್ಯದ 18 ವಿದ್ಯಾರ್ಥಿಗಳು

Last Updated 27 ಫೆಬ್ರುವರಿ 2022, 5:53 IST
ಅಕ್ಷರ ಗಾತ್ರ

ನವದೆಹಲಿ: ಉಕ್ರೇನ್‌ಗೆ ವ್ಯಾಸಂಗಕ್ಕೆ ತೆರಳಿದ್ದ ರಾಜ್ಯದ ಒಟ್ಟು 18 ವಿದ್ಯಾರ್ಥಿಗಳು ಭಾನುವಾರ ಬೆಳಗಿನ ಜಾವ ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಯುದ್ಧಪೀಡಿತ ಉಕ್ರೇನ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣ ಆಗಿದ್ದರಿಂದ ನೆರೆಯ ರೋಮೆನಿಯಾ ತಲುಪಿದ್ದ ಬಹುತೇಕ ವೈದ್ಯಕೀಯ ವಿದ್ಯಾರ್ಥಿಗಳು,ಕೇಂದ್ರ ಸರ್ಕಾರ ವ್ಯವಸ್ಥೆ ಮಾಡಿದ್ದ ಏರ್ ಇಂಡಿಯಾ ವಿಮಾನದಲ್ಲಿ ಸತತ 10 ಗಂಟೆ‌ ಪ್ರಯಾಣ ಮಾಡಿ ಇಲ್ಲಿಗೆ ಸುರಕ್ಷಿತವಾಗಿ ಬಂದಿಳಿದರು.

ಸಾಕ್ಷಿ ದಾಮನಕರ್, ಮಹಾಗಣಪತಿ ಬಿಳಿಮಗ್ಗದ, ಐಶ್ವರ್ಯಾ ಪಾಟೀಲ, ಚಂದ್ರಶೇಖರ, ಮಿಜ್ಬಾ‌ ನೂರ್, ಮುನಿಸ್ವಾಮಿ ಗೌಡ, ಜೈನಾ ಎರಂ, ಧನರಾಜ್, ರಾವತನಹಳ್ಳಿ ಸ್ವಾತಿ, ಬಿ.ಜ್ಞಾನಶ್ರೀ, ಎಂ.ಯಶವಂತ, ಗಣೇಶ್ವರ ಪ್ರಿಯಾ, ಕೆ.ಜೆ.‌ ದೀಪಿಕಾ ಅವರು ಮೊದಲ ವಿಮಾನದಲ್ಲಿ ಬಂದಿಳಿದಿದ್ದು, ಇನ್ನು ಐದು ಜನ ಎರಡನೇ ವಿಮಾನದಲ್ಲಿ ಬಂದಿದ್ದಾರೆ.

ಕರ್ನಾಟಕ ಭವನದ‌ ಅಧಿಕಾರಿಗಳು ಈ ಎಲ್ಲ ವಿದ್ಯಾರ್ಥಿಗಳನ್ನು ಸರ್ದಾರ್ ಪಟೇಲ್ ಮಾರ್ಗದಲ್ಲಿರುವ‌ ಕರ್ನಾಟಕ ಭವನಕ್ಕೆ ಕರೆ‌ ತಂದಿದ್ದು, ಬೆಂಗಳೂರಿಗೆ ಕಳುಹಿಸಲು ಎಲ್ಲ ವ್ಯವಸ್ಥೆ ಮಾಡುತ್ತಿದ್ದಾರೆ.

ಯುದ್ಧದ ಆತಂಕ, ಶೀತ ವಾತವರಣ, ದೂರದ ಪ್ರಯಾಣದಿಂದ ಬಳಲಿರುವ‌ ವಿದ್ಯಾರ್ಥಿಗಳು ಆರೋಗ್ಯವಾಗಿದ್ದು, ತಮ್ಮ ತಮ್ಮ ಊರುಗಳಿಗೆ ತಲುಪಲು ಅಗತ್ಯವಿರುವ ಮುಂದಿನ ಪ್ರಯಾಣಕ್ಕೆ ಅಣಿಯಾಗುತ್ತಿದ್ದಾರೆ.

'ಉಕ್ರೇನ್‌ನ ಕೀವ್ ಹಾಗೂ ಇತರ‌ ನಗರಗಳಲ್ಲಿದ್ದ ನಾವು ಭಾರತೀಯ ರಾಯಭಾರಿ ಕಚೇರಿಯ ಸಹಕಾರದೊಂದಿಗೆ ರೋಮೆನಿಯಾ ಗಡಿ ತಲುಪಿ ಅಲ್ಲಿಂದಮರಳಿದ್ದೇವೆ. ಕೇಂದ್ರ ಸರ್ಕಾರ ಕೈಗೊಂಡ ವ್ಯವಸ್ಥೆಯಿಂದಾಗಿ ಸುರಕ್ಷಿತವಾಗಿ ವಾಪಸಾಗಲು ಸಾಧ್ಯವಾಯಿತು' ಎಂದು ವಿದ್ಯಾರ್ಥಿಗಳು ಹೇಳಿದರು.

'ಉಕ್ರೇನ್‌ನಲ್ಲಿ ಯುದ್ಧ ಭೀತಿ ಆವರಿಸಿದ್ದರಿಂದ ನಾವು ಸಾಕಷ್ಟು ಆತಂಕಕ್ಕೆ‌ ಒಳಗಾಗಿದ್ದೆವು. ತಾಯ್ನಾಡಿಗೆ‌ ಮರಳಿರುವುದರಿಂದ ಭೀತಿ ದೂರವಾಗಿದೆ. ರಾಜ್ಯದ ಇನ್ನೂಸಾಕಷ್ಟು ಜನ ಇನ್ನೂ ಅಲ್ಲೇ ಇದ್ದು, ಆದಷ್ಟು ಬೇಗ ವಾಪಸಾಗಲಿದ್ದಾರೆ' ಎಂದು ಅವರು ಹೇಳಿದರು.

ಕರ್ನಾಟಕ ಸರ್ಕಾರ ಈ ಎಲ್ಲ ವಿದ್ಯಾರ್ಥಿಗಳನ್ನು ವಾಪಸ್ ಬೆಂಗಳೂರಿಗೆ ಕರೆ ತರಲು ವ್ಯವಸ್ಥೆ ಮಾಡಿದ್ದು, ಮಧ್ಯಾಹ್ನ 2 ಗಂಟೆ ವಿಮಾನದ‌ ಮೂಲಕ ತೆರಳಲಿದ್ದಾರೆ ಎಂದು ಕರ್ನಾಟಕ ಭವನದ ಅಧಿಕಾರಿಗಳು ಹೇಳಿದರು. ಸಚಿವ ಆರ್.ಅಶೋಕ್ ಈ ವಿದ್ಯಾರ್ಥಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಆರೋಗ್ಯ ವಿಚಾರಿಸಿದರು. ಸಂಸದ ತೇಜಸ್ವಿ ಸೂರ್ಯ ಕರ್ನಾಟಕ ಭವನಕ್ಕೆ‌ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT