ಎಂದೂ ದುರ್ಬಲವಾಗದ ಭಾರತದ ಶಕ್ತಿಯಿರುವುದು ಕೃಷಿಯಲ್ಲಿ ಮತ್ತು ಕೃಷಿಯಲ್ಲಿ ಮಾತ್ರ ಎಂಬ ವಿಚಾರ ಯಾರ ಪ್ರಜ್ಞೆಯಲ್ಲಿ ಜಾಗೃತ ಸ್ಥಿತಿಯಲ್ಲಿ ಇಲ್ಲವೋ ಅವರಲ್ಲಿ ಅದನ್ನು ಜಾಗೃತಾವಸ್ಥೆಗೆ ತಂದು ಅದನ್ನು ಜನಮನದಲ್ಲಿ ಸ್ಥಿರೀಕರಿಸುವ ಕೆಲಸವನ್ನು ನಮ್ಮ ದೇಶದ ಎಲ್ಲಾ ಸಮೂಹ ಮಾಧ್ಯಮಗಳು, ಪತ್ರಕರ್ತರು ಮತ್ತು ಲೇಖಕರು ಮಾಡಿದರೆ ನಮ್ಮ ದೇಶಕ್ಕೆ ಯಾವತ್ತೂ ಬಡತನ, ಹಸಿವು, ಬರಗಾಲದ ಬೇಗೆ ತಟ್ಟುವುದಿಲ್ಲ.

ಯಾವತ್ತೂ ಬೇರೆ ದೇಶದಿಂದ ಆಹಾರ ವಸ್ತುಗಳನ್ನು ಆಮದು ಮಾಡಬೇಕಾದ ಪರಿಸ್ಥಿತಿ ಉಂಟಾಗುವುದಿಲ್ಲ. ಟೀವಿಯಿರುವುದು ಕೇವಲ ಮನೋರಂಜನೆ, ಸೀರಿಯಲ್, ಸಿನಿಮಾ, ಮೈಚರ್ಮ, ಕೂದಲು, ಜಂಕಾಹಾರ, ಔಷಧ, ಆರೋಗ್ಯದ ಕುರಿತಾದ ಜಾಹೀರಾತಿಗಲ್ಲ; ಜನರಲ್ಲಿ ಯಾವ ವಿಚಾರದಲ್ಲಿ ಎಚ್ಚರ ಇರಬೇಕೋ ಆ ಎಚ್ಚರ ಕುಂದದಂತೆ ನೋಡಿಕೊಳ್ಳಬೇಕಾದ್ದು ಸಮೂಹ ಮಾಧ್ಯಮಗಳ ಕರ್ತವ್ಯ.

ದೇಶದ ಉದ್ಧಾರ ಅಥವಾ ಪ್ರಗತಿ ಎನ್ನುವುದು ಕೇವಲ ಉದ್ಯಮಗಳು, ಕೈಗಾರಿಕೆಗಳು, ಶಾಲೆ ಕಾಲೇಜು ಮುಂತಾದವುಗಳಿಂದ ಆಗದು. ಕೇವಲ ಉತ್ತಮ ವಿದೇಶ ಸಂಬಂಧದಿಂದ ಆಗದು. ನಮ್ಮ ‘ಅಚ್ಚೇ ದಿನ್ ನಮ್ಮ ಅಂಗಳದಲ್ಲೇ ಹುಟ್ಟಬೇಕು; ಬೇರೆ ದೇಶದಿಂದಲೂ ಅಲ್ಲ. ಬೇರೆ ಗ್ರಹದಿಂದಲೂ ಅಲ್ಲ. ಮಂಗಳನ ಅಂಗಳಕ್ಕೆ ಹೋದುದು ಒಂದು ವೈಜ್ಞಾನಿಕ ಸಾಧನೆ ನಿಜ.

ಆದರೆ ಅಂಥ ಸಾಧನೆ ಸಾಧ್ಯವಾಗಬೇಕಾದರೆ, ನಾವು ದಿನಾ ತಿನ್ನಬೇಕು, ದಿನಾ ಕುಡಿಯಬೇಕು. ಆ ವ್ಯವಸ್ಥೆ ಮಂಗಳನ ಅಂಗಳದಲ್ಲಿ ಇಲ್ಲ. ತಿನ್ನಲು ಕುಡಿಯಲು ಇಲ್ಲದ ಸ್ಥಿತಿ ಹೇಗೆ ಉಂಟಾಗುತ್ತದೆ ಎನ್ನುವುದಕ್ಕೆ ಮೊನ್ನೆ ಮೊನ್ನೆ ದಕ್ಷಿಣ ಅಮೆರಿಕದ, ರೂಪರಾಜ್ಞಿಯರನ್ನು ತಯಾರು ಮಾಡುವ ವೆನೆಜುವೆಲದಲ್ಲಾದುದು ಯಾರೂ ಮರೆಯಲಾಗದ ಉದಾಹರಣೆಯಾಗಿ ಇದೆ.

ಒಂದು ದಿನ ಕುಡಿಯುವ ನೀರಿಗೆ ತತ್ವಾರ ಉಂಟಾಗುತ್ತದೆ ಎಂಬ ಯೋಚನೆ ಶತಮಾನದ ಹಿಂದೆ ಯಾರಲ್ಲೂ ಇರಲಿಲ್ಲ. ಒಂದು ದಿನ ಕೃಷಿಗೆ ಕೂಡ ನೀರಿಲ್ಲದಷ್ಟು ಜಲಕ್ಷಾಮ ಉಂಟಾಗುತ್ತದೆ ಎನ್ನುವ ಆತಂಕ ಯಾರ ಮನದಲ್ಲಿಯೂ ಇರಲಿಲ್ಲ. ಕೆರೆ ಕೊಳ್ಳ ನದಿ ಸರೋವರ ಕಡಲು ಎಲ್ಲದರ ನೀರು ಕಲುಷಿತವಾಗುವ ದಿನ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅಗಣಿತ ಸಂಖ್ಯೆಯ ಕೊಳವೆ ಬಾವಿಗಳ ಕಾಲ ಬಂದು, ಭೂಮಿಯಡಿಯಲ್ಲಿರುವ ಜಲಸಂಗ್ರಹವನ್ನು ಹೀರಿ ಮುಗಿಸುತ್ತವೆ ಎಂಬ ಕಲ್ಪನೆ ಯಾರಿಗೂ ಇರಲಿಲ್ಲ.

ಇನ್ನೀಗ, ಹತ್ತಿರದ ಭವಿಷ್ಯದಲ್ಲಿ ಕುಡಿಯುವ ನೀರು ಮತ್ತು ಬೆಳೆ ಬೆಳೆಯಲು ಬೇಕಾದ ನೀರಿಗಾಗಿ ದೇಶದ ಹಲವು ಭಾಗಗಳಲ್ಲಿ ಅಂತರ್‌ಯುದ್ಧ, ಜನಾಂಗ ಕಲಹ ಉಂಟಾದರೆ ಆಶ್ಚರ್ಯವಿಲ್ಲ. ರಾಜ್ಯಗಳ ನಡುವೆ ನೀರಿಗಾಗಿ ಸಮರ ನಡೆಯುವ ಸಂಭವ ಇಲ್ಲದಿಲ್ಲ.

ಶತಮಾನಗಳ ಹಿಂದೆ, ಮಳೆ ಕಡಿಮೆ ಬಿದ್ದು ಬೆಳೆ ಒಣಗಿದ ವರ್ಷಗಳಿದ್ದವು; ಆಗ ‘ಸರ್ಕಾರವೇ, ನಮ್ಮನ್ನು ಕಾಪಾಡು!’ ಎಂದು ಜನ ಕೂಗಾಡಲಿಲ್ಲ; ರೈತರು ಬ್ಯಾಂಕು ಸಾಲ ಮಾಡಿ ಆತ್ಮಹತ್ಯೆ ಮಾಡಿದ್ದಿಲ್ಲ. ಬಿತ್ತನೆ ಬೀಜವನ್ನು ತಾವೇ ಬೆಳೆದ ಬೆಳೆಯಿಂದಲೇ ಆಯ್ದು ಇಟ್ಟುಕೊಳ್ಳದ ರೈತನೇ ಇರಲಿಲ್ಲ.

ಹೇಗೆ ಎಲ್ಲಾ ಜಲಮೂಲಗಳೂ ಕಲುಷಿತವಾದವು, ಹೇಗೆ ಕೆರೆ ಕೊಳ್ಳಗಳು ಅದೃಶ್ಯವಾದವು ಎಂಬುದು ಎಲ್ಲರಿಗೂ ಗೊತ್ತು. ಇದೆಲ್ಲಾ ಆದುದು ದುರ್ಬಲಪ್ರಜ್ಞೆಯ ಪ್ರಜೆಗಳಿಂದಲೇ. ಕಾರ್ಖಾನೆಗಳು ರಾಸಾಯನಿಕಗಳನ್ನು ಸುರಿಯುವುದರಿಂದ ಉಂಟಾಗುವ ದುಷ್ಪರಿಣಾಮ ನೀರಿನಲ್ಲಿ ಮಾತ್ರವೇ ಉಂಟಾಗುವುದಲ್ಲ, ಆ ನದಿ ಕೆರೆಗಳ ಮೇಲಿಂದ ಬೀಸಿ ಬರುವ ಗಾಳಿಯ ಮೇಲೂ ಉಂಟಾಗುತ್ತದೆ.

ಆ ನದಿ ಕೆರೆಗಳ ಸರಹದ್ದಿನಲ್ಲಿ ವಾಸಿಸುವ ಜನರು ಆ ಗಾಳಿಯನ್ನೇ ಉಸಿರಾಡಿ ಬದುಕಬೇಕಾಗುತ್ತದೆ. ಆದ್ದರಿಂದ ಜನರು ಅದನ್ನು ಸಹಿಸಿಕೊಂಡೇ ಬದುಕುತ್ತಾರೆ. ಕ್ರಮೇಣ ಜನರ ಶ್ವಾಸಕೋಶಗಳು ಅದಕ್ಕೆ ಒಗ್ಗಿಕೊಳ್ಳುತ್ತವೆ. ಆದರೆ ರೋಗನಿರೋಧಶಕ್ತಿ ಎಲ್ಲರಿಗೂ ಇರುವುದಿಲ್ಲ. ಹೆಚ್ಚಿನ ಕ್ಲಿನಿಕ್ ಡಾಕ್ಟರುಗಳು ರೋಗಲಕ್ಷಣಗಳ ಆಧಾರದಲ್ಲಿ ಔಷಧಿಯನ್ನು ಬರೆದುಕೊಡಬಲ್ಲರೇ ವಿನಾ ಕಾಯಿಲೆಯ ಕಾರಣವನ್ನು ಕಾಣಲಾರರು. ಕೆಲವು ಆರೋಗ್ಯ ಸಮಸ್ಯೆಗಳು ಕಲುಷಿತವಾದ ನೀರು ಮತ್ತು ಗಾಳಿಯಿಂದಲೇ ಬರುತ್ತವೆ.

ಜನರು ಕಾಯಿಲೆ ಬಂದರೆ ಆಸ್ಪತ್ರೆಗೆ ಹೋಗುತ್ತಾರೆಯೇ ಹೊರತು ಈ ತೊಂದರೆ ಯಾಕೆ ಬಂತು ಎಂಬ ಬಗ್ಗೆ ಯೋಚಿಸುವುದಿಲ್ಲ; ಆ ಬಗ್ಗೆ ಪರಿಶೀಲನೆ, ಸಂಶೋಧನೆ ನಡೆಸುವ ಕಾಳಜಿ ಸರ್ಕಾರಕ್ಕಾಗಲಿ, ಎನ್ಜೀವೊ ಅಥವಾ ಸಾರ್ವಜನಿಕ ಹಿತಾಸಕ್ತಿಯ ಯಾವುದೇ ಸಂಸ್ಥೆಗೂ ಇಲ್ಲ. ಯಾವುದಾದರೂ ಕಾಲೇಜು, ವಿಶ್ವವಿದ್ಯಾಲಯ ಅಥವಾ ಆಸ್ಪತ್ರೆ ಆ ಕೆಲಸವನ್ನು ಮಾಡಬಹುದು. ಆದರೆ ಯಾರೂ ಅದನ್ನು ಮಾಡುತ್ತಿಲ್ಲ. ಇದು ನಮ್ಮ ದೇಶದ ಸಮಾಜದ ವೈಶಿಷ್ಟ್ಯ ಅಥವಾ ಕೊರತೆ ಅಂತಲೇ ಹೇಳಬೇಕಾಗುತ್ತದೆ.

ಯಾಕೆಂದರೆ, ಇಂಥ ವಿಷಯದಲ್ಲಿ ಅಮೆರಿಕ, ಇಂಗ್ಲೆಂಡು, ಜರ್ಮನಿ, ಇಸ್ರೇಲ್ ಮುಂತಾದ ದೇಶಗಳಲ್ಲಿ ಆಡಳಿತೆಯಲ್ಲಾಗಲಿ, ಸಮಾಜದಲ್ಲಾಗಲಿ ಇಂಥ ಅವಜ್ಞೆಗೆ, ಉಪೇಕ್ಷೆಗೆ ಅವಕಾಶ ಇರುವುದಿಲ್ಲ. ಮುಖ್ಯವಾಗಿ, ನೀರಿಗೆ ಮತ್ತು ಗಾಳಿಗೆ ಸಂಬಂಧಪಟ್ಟ ಇಂಥ ಸಮಸ್ಯೆಗಳೇ ಅಲ್ಲಿ ಹುಟ್ಟಿಕೊಳ್ಳುವುದಿಲ್ಲ.

ಒಣ ಮರ ವಿದ್ಯುತ್ ತಂತಿಯ ಮೇಲೆ ಬಿದ್ದು ಜೀವಹಾನಿ ಸಂಭವಿಸಿದ ಮೇಲೆಯೇ ಮರ ಕಡಿಯುವ, ಸೇತುವೆ ಕುಸಿದ ಮೇಲೆಯೇ ಅದರ ಕಾರಣ ಗುರುತಿಸುವ, ಕಟ್ಟಡದ ಗೋಡೆ ಮಾಡುಗಳು ಕೆಳಬಿದ್ದು ಜನರು ಸತ್ತ ಮೇಲೆಯೇ ಎಚ್ಚರಗೊಳ್ಳುವ, ಮತ್ತೆ ಮತ್ತೆ ಕೆಟ್ಟುಹೋಗುವಂತೆಯೇ ರಸ್ತೆಗಳನ್ನು ನಿರ್ಮಿಸುವ ರೂಢಿ ನಮ್ಮ ದೇಶದಲ್ಲಿ ಯಾಕೆ ಉಂಟಾಯಿತು ಎಂದು ಸಮಾಜಶಾಸ್ತ್ರಜ್ಞರು ಸಂಶೋಧನೆ ಮಾಡಬೇಕು.

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಾತ್ರವಲ್ಲ, ಅಭಿವೃದ್ಧಿ ಹೊಂದುತ್ತಿರುವ ಆಫ್ರಿಕಾ ಖಂಡದ ಬಹುತೇಕ ಎಲ್ಲಾ ದೇಶಗಳಲ್ಲಿಯೂ ಮುಂಜಾಗ್ರತಾ ಗುಣ ಇದೆ. ಮನುಷ್ಯನ ಜೀವಕ್ಕೆ ಬೆಲೆಯಿಲ್ಲದ ದೇಶ ನಮ್ಮದು ಮಾತ್ರವೇನೋ ಎಂದು ನಮಗೆ ಅನಿಸಲು ಪ್ರತಿ ದಿನ ನಿದರ್ಶನಗಳು ಸಿಗುತ್ತವೆ.

ನಮ್ಮ ಜನಸಮುದಾಯ ಸೃಷ್ಟಿಸಿಕೊಂಡಿರುವ ಮತ್ತು ಅದನ್ನು ಅನುಸರಿಸುವ ರೀತಿ ನೀತಿಗಳು ನಿಜಕ್ಕೂ ವಿಲಕ್ಷಣವಾಗಿವೆ. ಸಾರ್ವಜನಿಕ ಆಸ್ತಿ ಎಂಬ ಶಬ್ದವನ್ನು ಕಳೆದೆರಡು ಮೂರು ಶತಮಾನದಲ್ಲಿ ಸಾವಿರಾರು ಬಾರಿ ಕೇಳಿಯೂ ಜನರಲ್ಲಿ ಸಾರ್ವಜನಿಕ ಆಸ್ತಿ ಎಂದರೆ ತಮ್ಮದೇ ಆಸ್ತಿ ಎಂಬ ಬೋಧ ಯಾಕೆ ಇನ್ನೂ ಜಾಗೃತವಾಗಿಲ್ಲ? ಬ್ರಿಟಿಷರ ಆಳ್ವಿಕೆಯಲ್ಲಿ ಅವರ ಅಧೀನದಲ್ಲಿದ್ದ ನಮ್ಮ ಆಸ್ತಿ ಇನ್ನೂ ನಮ್ಮದಾಗಿಲ್ಲವೆ?

ನಮಗೆ ಆಪತ್ತು ತರುವಂಥದೆಲ್ಲವನ್ನು ನಾವೇ ಮಾಡಿ ‘ಸರಿ ಮಾಡಿ’ ಎಂದು ಸರ್ಕಾರವನ್ನು ಬೇಡುವುದು, ಪ್ರತಿಭಟನೆ ಮತ್ತು ಪ್ರತಿಭಟನೆಯ ಜೊತೆ ಕುಕೃತ್ಯಗಳನ್ನೆಲ್ಲ ಮಾಡುವುದು, ನಮ್ಮ ಸರ್ಕಾರ ನಮಗಾಗಿಯೇ ಒದಗಿಸಿದ ವಾಹನಗಳು, ಸಂಸ್ಥೆಗಳು ಮುಂತಾದ್ದನ್ನು ಪ್ರತಿಭಟನೆ ಎಂಬರ್ಥದಲ್ಲಿ ನಾಶ ಮಾಡುವುದು, ನಿರರ್ಥಕವಾದ, ದೌರ್ಬಲ್ಯವನ್ನೇ ಶಕ್ತಿ ಎಂಬಂತೆ ಪ್ರದರ್ಶಿಸುವ ಬಂದ್ ಎಂಬ ವ್ಯವಹಾರ-ಇದೆಲ್ಲ ಆರಂಭವಾದದ್ದು 20-21ನೇ ಶತಮಾನದಲ್ಲಿ.

ತಮ್ಮ ಸಂಪತ್ತನ್ನು ತಾವೇ ನಾಶ ಮಾಡಿ, ತಮ್ಮನ್ನು ತಾವೇ ದುರ್ಬಲಗೊಳಿಸುವುದಕ್ಕಾಗಿ ಹೇಗೆ ಜನರು ತಮ್ಮ ಅಷ್ಟೊಂದು ಶಕ್ತಿ, ಸಮಯ ಮತ್ತು ಹಣವನ್ನು ವ್ಯಯಿಸುತ್ತಾರೆ ಎಂಬ ಬಗ್ಗೆ ಯೋಚಿಸಿದರೆ ಆಶ್ಚರ್ಯವಾಗುತ್ತದೆ. ಈ ಶಕ್ತಿ ಸಮಯ ಮತ್ತು ಹಣದಲ್ಲಿ ಮಳೆ ನೀರು ತುಂಬಿಟ್ಟುಕೊಳ್ಳುವ ಸಾವಿರಾರು ಸಣ್ಣ ದೊಡ್ಡ ಕೆರೆಗಳನ್ನು ತೋಡಿ ನಮ್ಮ ದೇಶವನ್ನು ಮತ್ತೆ ಹಿಂದಿನಂತೆ ಜಲಸಮೃದ್ಧಗೊಳಿಸಬಹುದು! ನಿಜವಾಗಿಯೂ ಜನರಿಗೆ ಒಳ್ಳೆಯ ನೀರು ಒಳ್ಳೆಯ ಗಾಳಿಯ ಒಳ್ಳೆಯ ಕಾಲ ಬೇಕಾಗಿಲ್ಲವೆ?

ಇನ್ನು ಒಂಬತ್ತು ವರ್ಷಗಳಲ್ಲಿ ನಾವು 21ನೇ ಶತಮಾನದ ಕಾಲಂಶವನ್ನಷ್ಟೇ ಮುಗಿಸಿರುತ್ತೇವೆ. ಅಷ್ಟರಲ್ಲಿ ನೀರಿಗಾಗಿ ಏನೇನು ಒಳ್ಳೆಯದು ನಡೆಯಲಿದೆ, ಯಾವಾಗ ಒಳ್ಳೆಯ ಸರ್ಕಾರ ಬರಲಿದೆ, ಯಾವಾಗ ಭ್ರಷ್ಟಾಚಾರ ಇಲ್ಲ ಎಂದಾಗುತ್ತದೆ, ಪ್ರಜೆಗಳಲ್ಲಿ ಯಾರ್‌್ಯಾರು ಏನೇನು ಒಳ್ಳೆಯ ಕೆಲಸ ಮಾಡಬಹುದು, ಒಂಬತ್ತು ವರ್ಷಗಳಲ್ಲಿ ಆಗಲಿರುವ ಸಕಾರಾತ್ಮಕ ಬದಲಾವಣೆ ಮುಂದಿನ ಮುಕ್ಕಾಲು ಶತಮಾನಕ್ಕೆ ಅಡಿಗಲ್ಲಾಗಬಹುದೆ ಎಂದು ವಿಚಾರ ಮಾಡಿದರೆ, ಈಗ ನಿಧಾನವಾಗಿ ಜನಮನದಲ್ಲಿ ಆಗುತ್ತಿರುವ ಸಕಾರಾತ್ಮಕ ಬದಲಾವಣೆ, ಮತ್ತು ನಡೆಯುತ್ತಿರುವ ಪ್ರಗತಿಶೀಲ ಕ್ರಿಯೆಗಳನ್ನು ಗಮನಿಸಿದರೆ ಭಾರತ ಇನ್ನೂ ಅಧಿಕ ಶಕ್ತಿಶಾಲಿ ರಾಷ್ಟ್ರವಾಗುತ್ತದೆ ಎಂಬ ಭಾವನೆ ಮೂಡುತ್ತದೆ.

ಒಳ್ಳೆಯ ಸರ್ಕಾರ, ಒಳ್ಳೆಯ ಆಡಳಿತ ಇದ್ದರೆ ದೇಶ ತೊರೆದು ವಿದೇಶಕ್ಕೆ ಹೋದವರು ಮರಳಿ ಬರುತ್ತಾರೆ. ತಮ್ಮ ಅಂಗಳ ಸ್ವಚ್ಛವಿದ್ದರೆ ನಮ್ಮ ದೇಶ ಸ್ವಚ್ಛವಾಗಿರುತ್ತದೆ ಎಂದು ಬದುಕಿ ತೋರಿಸುತ್ತಾರೆ. ಇತ್ತೀಚೆಗಿನ ದಿನಗಳಲ್ಲಿ ವಿದೇಶದಿಂದ ಒಳ್ಳೆಯ ಪಗಾರದ ಉದ್ಯೋಗ ತೊರೆದು ಅನೇಕ ಮಂದಿ ಸ್ವದೇಶಕ್ಕೆ ಮರಳಿ ಹೆಚ್ಚು ಪಗಾರದ ಆಫೀಸು ಉದ್ಯೋಗದಿಂದ ಆಕರ್ಷಿತರಾಗದೆ ಕೃಷಿಯಲ್ಲಿ ತೊಡಗಿಕೊಂಡಿರುವುದು ಕಂಡುಬರುತ್ತದೆ.

ಶ್ರಮದ ಜೀವನದಲ್ಲಿ ಆನಂದ ಮತ್ತು ಆರೋಗ್ಯ ಎರಡೂ ಇದೆ ಎಂದು ಅನೇಕರು ಕಂಡುಕೊಳ್ಳುತ್ತಿದ್ದಾರೆ. ಎಲ್ಲೆಲ್ಲ ನೀರಿನ ಅಭಾವ ಉಂಟಾಗಿದೆಯೋ, ಎಲ್ಲೆಲ್ಲ ಕೆರೆಗಳನ್ನು ಮುಚ್ಚಲಾಗಿದೆಯೋ ಅಲ್ಲೆಲ್ಲ ಹೊಸ ಕೆರೆಗಳನ್ನು ತೋಡಬೇಕಿದೆ; ಹಳೆಯ ಕೆರೆಗಳಿಗೆ ಪುನರ್ಜೀವನ ನೀಡಬೇಕಿದೆ. ನದಿ ಕೆರೆ ಕೊಳ್ಳಗಳ ನೀರು ಕಲುಷಿತಗೊಳಿಸುವ ಎಲ್ಲಾ ವ್ಯವಹಾರಗಳ ವಿರುದ್ಧ ಹೋರಾಡಿ ಗೆಲ್ಲಬೇಕಿದೆ.

ಅಮೆರಿಕದಲ್ಲಿ ದೃಷ್ಟಿ ಹರಿಸಿದಲ್ಲೆಲ್ಲ ಸ್ವಚ್ಛ ನೀರಿನ ಕೆರೆಗಳಿರಬಹುದಾದರೆ, ಯಥೇಚ್ಛ ಮಳೆ ಸುರಿಯುವ ನಮ್ಮ ದೇಶದಲ್ಲಿ ಅಂಥ ಕೆರೆಗಳಿರಲು ಯಾಕೆ ಸಾಧ್ಯವಿಲ್ಲ? ನೀರನ್ನು ಅಂಗಡಿಯಿಂದ ಕೊಂಡುಕೊಳ್ಳಬೇಕಾದ ಸ್ಥಿತಿಯಿಂದ ಮುಕ್ತವಾಗಲು ನಮ್ಮಿಂದ ಸಾಧ್ಯವಿಲ್ಲವೆ? ಎರಡು ಶತಮಾನದ ಹಿಂದೆ ನೀರನ್ನು ಸೋಸಿ ಕುಡಿಯುವ ಪರಿಪಾಠವಿರಲಿಲ್ಲ.

ಅದರ ಅಗತ್ಯವಿದ್ದಲ್ಲಿ, ದೊಡ್ಡ ದೊಡ್ಡ ಟ್ಯಾಂಕುಗಳಲ್ಲಿ ದೀರ್ಘ ಕಾಲ ತುಂಬಿಟ್ಟುಕೊಂಡು ಕುಡಿಯಲು ಮತ್ತು ಇತರ ಗೃಹೋಪಯೋಗಕ್ಕೆ ಬಳಸುವ ನೀರನ್ನು ಇದ್ದಲು, ಮರಳು ಮತ್ತು ಕಲ್ಲು ಹರಳು ಬಳಸಿ ನೈಸರ್ಗಿಕವಾದ ವಿಧಾನದಲ್ಲಿ ಸೋಸಿ ಸ್ವಚ್ಛವಾಗಿಡಲಾಗುತ್ತಿತ್ತು.

ಇನ್ನು ಅರ್ಧ ಶತಮಾನದ ಬಳಿಕ ನೀರು ನಾವು ದಿನಾ ತಿನ್ನುವ ಆಹಾರಕ್ಕಿಂತ ದುಬಾರಿಯಾದರೆ, ಎಲ್ಲಿಯೂ ಶುದ್ಧ ನೀರು ಇಲ್ಲ ಎಂಬ ಪರಿಸ್ಥಿತಿ ಉಂಟಾದರೆ ನಮ್ಮ ಬದುಕು ಹೇಗಾದೀತು ಎಂದು ನಾವು ಈಗಲೇ ಗಂಭೀರವಾಗಿ ಯೋಚಿಸಿ ನೀರಿನ ರಕ್ಷಣೆಗೆ ತೊಡಗದಿದ್ದರೆ ಬಹಳ ಬೇಗನೆ ನಮ್ಮ ಬದುಕು ಬದುಕಲು ಸಾಧ್ಯವಿಲ್ಲ ಎಂಬ ಸ್ಥಿತಿಯನ್ನು ತಲಪುವುದರಲ್ಲಿ ಸಂದೇಹವಿಲ್ಲ. ವಾಸ್ತವದಲ್ಲಿ, ಮನುಷ್ಯನಿಗೆ ಮಾತ್ರವಲ್ಲ, ಇಡೀ ಭೂಮಿಗೆ ಬೇಕಾದ ನೀರು ಆಕಾಶದಿಂದಲೇ ಬರುತ್ತದೆ.

ನೀರನ್ನು ನಿರಂತರ ಆಕಾಶಕ್ಕೆ ಕಳಿಸುವ ಕಡಲಿಗೆ ಭೂಮಿಯಲ್ಲೆಲ್ಲ ಒಂದಲ್ಲ ಒಂದು ಕಡೆ ಆಕಾಶದಿಂದ ಸುರಿಯುತ್ತಲೇ ಇರುವ ನೀರಿನ ಅಗತ್ಯ ಇಲ್ಲ. ಆದರೆ ಆಕಾಶದಿಂದ ಬೀಳುವ ನೀರಿನ ದೊಡ್ಡ ಪಾಲು ಪುನಃ ಕಡಲನ್ನೇ ಸೇರುತ್ತದೆ. ಕಡಲಿಗೆ ಒಂದು ತೊಟ್ಟು ನೀರು ಹೋಗದಂತೆ ತಡೆದು ನಾವು ಸಂಗ್ರಹಿಸಿ ಇಟ್ಟುಕೊಂಡರೂ ಕಡಲಿಗೆ ಏನೂ ತೊಂದರೆ ಆಗುವುದಿಲ್ಲ.

ವಾಸ್ತವದಲಿ, ಕಡಲಿನಲ್ಲಿರುವುದಕ್ಕಿಂತ ಹೆಚ್ಚು ನೀರು ಮೇಘಮಂಡಲದಲ್ಲಿ ಇದೆ. ಒಂದು ದಿನ, ಯಾವುದೋ ಕಾರಣದಿಂದ ಕಡಲು ಆರಿತು ಅಥವಾ ಕಡಲಿನ ನೀರು ಆಕಾಶಕ್ಕೆ ಏರುತ್ತಿಲ್ಲ ಎಂದಾದರೆ, ಭೂಮಿ ಎಂಬುದೇನಿದೆಯೋ ಅದರ ಮೇಲಿರುವುದೆಲ್ಲ ಕೆಲವೇ ದಿನಗಳಲ್ಲಿ ಸಂಪೂರ್ಣ ನಾಶವಾಗುತ್ತದೆ.

ಸಮುದ್ರದಿಂದ ಆಕಾಶಕ್ಕೆ ನೀರನ್ನು ಕಳಿಸುವ ಕೆಲಸ ಕೋಟ್ಯಂತರ ವರ್ಷಗಳಿಂದ ನಡೆಯುತ್ತಿದೆ. ನಮಗೆ ನೆಲದ ಮೇಲೆ ಮತ್ತು ನೆಲದಡಿಯಲ್ಲಿ ಸಿಗುವ ಪ್ರತಿಯೊಂದು ತೊಟ್ಟು ನೀರೂ ಆಕಾಶದಿಂದ ಬಿದ್ದುದೇ ಆಗಿರುತ್ತದೆ. ಒಂದೆರಡು ವರ್ಷ ಮಳೆ ಬೀಳದಿದ್ದರೆ, ಭೂಮಿಯಲ್ಲಿರುವ ಸಕಲ ಚರಾಚರ ಜೀವರಾಶಿ ನಾಶವಾಗುತ್ತದೆ; ಮರ ಮನುಷ್ಯ ಮೃಗ ಪಕ್ಷಿ ಯಾವುದೂ ಇರುವುದಿಲ್ಲ. ಅಂತರ್ಜಲವೂ ಇರುವುದಿಲ್ಲ, ಬಹಿರ್ಜಲವೂ ಇರುವುದಿಲ್ಲ.

ನೀರಿಗಾಗಿ ಮನುಷ್ಯ ಮನುಷ್ಯನೊಡನೆ ಹೋರಾಡುವುದನ್ನು ನಿಲ್ಲಿಸಿ, ನಮ್ಮ ಮೇಲೆಯೇ ಸುರಿಯುವ ಎಲ್ಲಾ ನೀರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಪ್ರಜೆಗಳೂ ಮಾಡಬೇಕಿದೆ, ಆಡಳಿತಗಳೂ ಮಾಡಬೇಕಿದೆ. ಶುದ್ಧ ನೀರು, ಶುದ್ಧ ಗಾಳಿ ಮತ್ತು ಸರಳ ಬದುಕು ಈ ಮೂರು ಇರುವುದೇ ಶ್ರೀಮಂತಿಕೆ, ಮಾತ್ರವಲ್ಲ, ಅದೇ ಅತ್ಯಂತ ಶ್ರೇಷ್ಠ ಶ್ರೀಮಂತಿಕೆ ಎನ್ನುವುದನ್ನು ಅರ್ಥ ಮಾಡಿಕೊಂಡರೆ ಮಾತ್ರ ಬದುಕುವುದರಲ್ಲಿ ಆನಂದ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.