ಶುಕ್ರವಾರ, 28 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯುದೀಕೃತ ರೈಲು ಮಾರ್ಗಕ್ಕೆ ಸುರಕ್ಷತಾ ಆಯುಕ್ತರ ಅನುಮತಿ

Last Updated 11 ಸೆಪ್ಟೆಂಬರ್ 2016, 19:27 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ– ರಾಮನಗರ ವಿದ್ಯುದೀಕೃತ ರೈಲು ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲು ರೈಲ್ವೆ ಸುರಕ್ಷತಾ ಆಯುಕ್ತರು (ಸಿಆರ್‌ಎಸ್‌) ಅನುಮತಿ ನೀಡಿದ್ದಾರೆ. ಈ ಮಾರ್ಗದಲ್ಲಿ ಮೆಮು  (ಮೈನ್‌ಲೈನ್‌ ಎಲೆಕ್ಟ್ರಿಕಲ್‌ ಮಲ್ಟಿಪಲ್‌ ಯುನಿಟ್‌) ರೈಲು  ಸಂಚಾರ ಆರಂಭಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇದಾಗಿದೆ.

ಬೆಂಗಳೂರು– ರಾಮನಗರ ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡು ಆರು ತಿಂಗಳು ಕಳೆದರೂ ಸಿಆರ್‌ಎಸ್‌ ಅನುಮತಿ ಸಿಕ್ಕಿರಲಿಲ್ಲ. ಆಗಸ್ಟ್‌ 23ರಂದು ಪರಿಶೀಲನೆ ನಡೆಸಿದ ರೈಲ್ವೆ ಸುರಕ್ಷತಾ ಆಯುಕ್ತ (ಪ್ರಭಾರ) ಎಸ್‌.ನಾಯಕ್‌ ಅವರು ಇಲ್ಲಿ ವಿದ್ಯುತ್‌ ರೈಲು ಸಂಚಾರ ಆರಂಭಿಸಲು ಒಪ್ಪಿಗೆ ನೀಡಿದ್ದಾರೆ ಎಂದು ಸಿಆರ್‌ಎಸ್‌ ಕಚೇರಿ ಮೂಲಗಳು ತಿಳಿಸಿವೆ.

ಈ ಮಾರ್ಗದಲ್ಲಿ ಮೆಮು ರೈಲು ಸಂಚಾರ ಆರಂಭಿಸುವುದಾಗಿ 2014–15ರ ರೈಲ್ವೆ ಬಜೆಟ್‌ನಲ್ಲಿ ಆಗಿನ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಪ್ರಕಟಿಸಿದ್ದರು. ಇದರ ವೇಳಾಪಟ್ಟಿಯನ್ನೂ ಪ್ರಕಟಿಸಲಾಗಿತ್ತು. ಅದರ ಪ್ರಕಾರ, ಮೆಮು ರೈಲು ನಿತ್ಯ ಮೂರು ಟ್ರಿಪ್‌ ಸಂಚರಿಸಲಿದೆ.  ಈ ವೇಳಾಪಟ್ಟಿಯ ಅವಧಿ ಇದೇ 30ಕ್ಕೆ ಅಂತ್ಯವಾಗಲಿದ್ದು, ಅಕ್ಟೋಬರ್‌ ಬಳಿಕ ಹೊಸ ವೇಳಾಪಟ್ಟಿ ಪ್ರಕಟವಾಗಲಿದೆ.

ವಿದ್ಯುದೀಕರಣ ಪೂರ್ಣಗೊಳ್ಳದ ಕಾರಣ ಮೆಮು ರೈಲಿನ ಬದಲು ಡೆಮು (ಡೀಸೆಲ್‌ ಎಲೆಕ್ಟ್ರಿಕಲ್‌ ಮಲ್ಟಿಪಲ್‌ ಯುನಿಟ್‌) ರೈಲು ಸಂಚಾರ ಆರಂಭಿಸಲಾಗಿತ್ತು. ಆದರೆ, ಇದು ಒಂದು ಟ್ರಿಪ್‌ಗೆ ಸೀಮಿತ ಆಗಿತ್ತು (ಸಂಜೆ 5.25ಕ್ಕೆ ಬೆಂಗಳೂರಿನಿಂದ ಹೊರಡುತ್ತದೆ) ಅನುಮತಿ ಸಿಕ್ಕರೂ

ಮೆಮು ರೈಲು ಸದ್ಯಕ್ಕಿಲ್ಲ?: ‘ಈ ಮಾರ್ಗದಲ್ಲಿ ವಿದ್ಯುತ್‌ ರೈಲು ಆರಂಭಿಸಲು ರೈಲ್ವೆ ಸುರಕ್ಷತಾ ಆಯುಕ್ತರಿಂದ ಅನುಮತಿ ಸಿಕ್ಕಿದ್ದು ನಿಜ. ಆದರೆ, ಈ ಮಾರ್ಗದಲ್ಲಿ ಮೆಮು ರೈಲು ಸಂಚಾರ ಆರಂಭಿಸಲು ಅಗತ್ಯವಿರುವಷ್ಟು ವಿದ್ಯುತ್‌ ಪೂರೈಕೆ ಆಗುತ್ತಿಲ್ಲ’ ಎನ್ನುತ್ತಾರೆ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗೀಯ ವ್ಯವಸ್ಥಾಪಕ ಸಂಜೀವ ಅಗರವಾಲ್‌.

‘ಈಗಲೇ ಮೆಮು ರೈಲು ಸಂಚಾರ ಆರಂಭಿಸಬೇಕಾದರೆ ವೈಟ್‌ಫೀಲ್ಡ್‌ ಉಪಕೇಂದ್ರದಿಂದ ಈ ಮಾರ್ಗಕ್ಕೆ ವಿದ್ಯುತ್‌ ಪೂರೈಸಬೇಕಾಗುತ್ತದೆ. ಇದರಿಂದ ವೈಟ್‌ಫೀಲ್ಡ್‌ ಉಪಕೇಂದ್ರಕ್ಕೆ ಹೆಚ್ಚಿನ ಹೊರೆ ಬೀಳುತ್ತದೆ. ಸದ್ಯಕ್ಕೆ ಬಿಡದಿಯ ಉಪಕೇಂದ್ರದ ಕಾರ್ಯ ನಡೆಯುತ್ತಿದೆ. ಈ ಕೇಂದ್ರದಿಂದ ವಿದ್ಯುತ್‌ ಪೂರೈಕೆ ಆರಂಭವಾದ ಬಳಿಕವಷ್ಟೇ   ಮೆಮು ರೈಲು ಸಂಚಾರ ಆರಂಭಿಸಬಹುದು. ಇದಕ್ಕೆ ಏನಿಲ್ಲವೆಂದರೂ ಎರಡೂವರೆ ತಿಂಗಳು ಬೇಕಾಗುತ್ತದೆ’ ಎಂದು ಅವರು ವಿವರಿಸಿದರು.

ಅಡ್ಡಿ ನಿವಾರಣೆ– ಸಂಸದ ಭರವಸೆ: ‘ಈ ಮಾರ್ಗಕ್ಕೆ ಬಿಡದಿ ಉಪಕೇಂದ್ರದಿಂದ ವಿದ್ಯುತ್‌ ಪೂರೈಸಲು ಎದುರಾಗಿರುವ ತೊಡಕನ್ನು ಶೀಘ್ರವೇ ನಿವಾರಿಸಲಾ ಗುತ್ತದೆ’ ಎಂದು ಸಂಸದ ಡಿ.ಕೆ.ಸುರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ತಪ್ಪಲಿದೆ ಟ್ರಾಫಿಕ್‌ ಕಿರಿಕಿರಿ: ‘ರಾಮ ನಗರ–ಬೆಂಗಳೂರು ನಡುವೆ ಪ್ರಯಾಣಿ ಸುವ ಹೆಚ್ಚಿನವರು ಅನಿವಾರ್ಯವಾಗಿ ಬಸ್‌ ಮೂಲಕ ಪ್ರಯಾಣಿಸುತ್ತಿದ್ದಾರೆ. ಕೆಂಗೇರಿಯಿಂದ ಮೆಜೆಸ್ಟಿಕ್‌ವರೆಗೆ ಪ್ರಯಾಣಿಸುವ ಪ್ರಯಾಸ ದೇವರಿಗೆ ಪ್ರೀತಿ.  ಬಸ್‌ ಪ್ರಯಾಣಿಕರು ನಿತ್ಯ ವಾಹನ ಸಂಚಾರ ದಟ್ಟಣೆಯಿಂದ ಅನುಭವಿಸುವ ಕಿರಿಕಿರಿಗೆ ಮೆಮು ರೈಲು ಪರಿಹಾರ ಒದಗಿಸಬಲ್ಲುದು’ ಎನ್ನುತ್ತಾರೆ ರೈಲ್ವೆ ಹೋರಾಟಗಾರ ಟಿ.ಪಿ. ಲೋಕೇಶ್‌.

ಸಮಯ, ಹಣ ಉಳಿತಾಯ: ‘ರಾಮ ನಗರದಿಂದ ಬೆಂಗಳೂರಿಗೆ ₹ 45 ಪ್ರಯಾಣ ದರವಿದೆ. ಮೆಮು ರೈಲು ಸಂಚಾರ ಆರಂಭವಾದರೆ ಕೇವಲ ₹ 10 ವೆಚ್ಚದಲ್ಲಿ ಪ್ರಯಾಣಿಸಬಹುದು. ಬಸ್‌ ಪ್ರಯಾಣಕ್ಕೆ ಸರಾಸರಿ ಒಂದೂವರೆ ಗಂಟೆ ಬೇಕಾಗುತ್ತದೆ. ಮೆಮು ರೈಲಿನಲ್ಲಿ ಒಂದು ತಾಸಿನ ಒಳಗೆ ತಲುಪಬಹುದು’ ಎನ್ನುತ್ತಾರೆ ರೈಲ್ವೆ ಹೋರಾಟಗಾರ ಕೃಷ್ಣಪ್ರಸಾದ್‌.

‘ರಾಮನಗರ ರೇಷ್ಮೆ ವಹಿವಾಟಿಗೆ ಹೆಸರುವಾಸಿ. ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಪ್ರಾಂಗಣವೂ ಇಲ್ಲೇ ನಿರ್ಮಾಣಗೊಳ್ಳ ಲಿದೆ.  ಹಾಗಾಗಿ ಮೆಮು ರೈಲನ್ನು ಆದಷ್ಟು ಬೇಗ ಆರಂಭಿಸಬೇಕು’ ಎಂದು ಅವರು ಒತ್ತಾಯಿಸಿದರು.

ಮಧ್ಯಾಹ್ನ ರೈಲು ಇಲ್ಲ: ಬೆಂಗಳೂರು–ಮೈಸೂರು ಮಾರ್ಗದಲ್ಲಿ  ಸರಾಸರಿ 25  ರೈಲುಗಳು ನಿತ್ಯ ಸಂಚರಿಸುತ್ತವೆ. ಈ ಪೈಕಿ 11 ಎಕ್ಸ್‌ಪ್ರೆಸ್‌ ರೈಲುಗಳು ಹಾಗೂ ಆರು ಪ್ಯಾಸೆಂಜರ್‌ ರೈಲುಗಳು ಮಾತ್ರ ರಾಮನಗರದಲ್ಲಿ ನಿಲುಗಡೆ ಹೊಂದಿವೆ.  ಮಧ್ಯಾಹ್ನ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಯಾವುದೇ ರೈಲು ಇಲ್ಲ. ಬೆಳಿಗ್ಗೆ 7 ಗಂಟೆಯ ಒಳಗಾಗಿ ಬೆಂಗಳೂರು ತಲುಪುವುದಕ್ಕೆ ಅನುಕೂಲವಾಗುವಂತೆ ಮೆಮು ರೈಲು ಆರಂಭವಾದರೆ  ಬಹಳ ಮಂದಿಗೆ ಬಹಳ ಅನುಕೂಲವಾಗುತ್ತದೆ’ ಎನ್ನುತ್ತಾರೆ  ರಾಮನಗರದ ವೆಂಕಟೇಶ್‌.

ಚನ್ನಪಟ್ಟಣಕ್ಕೆ ವಿಸ್ತರಿಸಲು ಒತ್ತಾಯ
ಬೆಂಗಳೂರು– ರಾಮನಗರದ ನಡುವಿನ ಮೆಮು ರೈಲನ್ನು ಚನ್ನಪಟ್ಟಣದವರೆಗೆ ವಿಸ್ತರಿಸಬೇಕು ಎಂಬ ಬೇಡಿಕೆಯೂ ವ್ಯಕ್ತವಾಗಿದೆ.
‘ರಾಮನಗರದಿಂದ ಚನ್ನ ಪಟ್ಟಣಕ್ಕೆ ಕೇವಲ 11 ಕಿ.ಮೀ ದೂರ. ಮೆಮು ರೈಲನ್ನು ಚನ್ನಪಟ್ಟಣಕ್ಕೆ ವಿಸ್ತರಿಸಿದರೆ ತುಂಬಾ ಜನರಿಗೆ ಪ್ರಯೋಜನವಾಗುತ್ತದೆ’ ಎಂದು ವೆಂಕಟೇಶ್‌ ತಿಳಿಸಿದರು. ‘ಈ ಬೇಡಿಕೆ ನ್ಯಾಯೋಚಿತ ವಾಗಿದೆ. ಇದನ್ನು ಈಡೇರಿಸಲು ನನ್ನಿಂದಾದ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ಡಿ.ಕೆ.ಸುರೇಶ್ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT