ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ನೋಟು ರದ್ದು ಕ್ರಮ ನೆಲಕಚ್ಚುವ ನಿಚ್ಚಳ ಸೂಚನೆಗಳು ಒಡಮೂಡ ತೊಡಗಿವೆ.

ನೋಟು ರದ್ದಿನಿಂದ ಲಕ್ಷಾಂತರ ಕೋಟಿ ರೂಪಾಯಿಯ ಕಪ್ಪುಹಣ ನಾಶವಾಗಲಿದೆ ಎಂಬ ಸರ್ಕಾರದ ನಂಬಿಕೆಗೆ ಭಾರೀ ಹೊಡೆತ ಬಿದ್ದಂತಿದೆ. ರಿಸರ್ವ್ ಬ್ಯಾಂಕ್ ಮೂಲಗಳ ಪ್ರಕಾರ ರದ್ದಾಗಿರುವ ನೋಟುಗಳ ಮೌಲ್ಯವಾದ ₹ 15.44 ಲಕ್ಷ ಕೋಟಿ ಪೈಕಿ ₹14 ಲಕ್ಷ ಕೋಟಿ ಮೌಲ್ಯದ ನೋಟುಗಳು ಸೋಮವಾರದ ಹೊತ್ತಿಗೆ (ಡಿ.19) ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆ.

ರದ್ದಾಗಿರುವ ನೋಟುಗಳನ್ನು ಬ್ಯಾಂಕುಗಳಲ್ಲಿ ಜಮಾ ಮಾಡಲು ಡಿಸೆಂಬರ್ 30 ಕಡೆಯ ದಿನ. ಅರ್ಥಾತ್ ಇನ್ನೂ 10 ದಿನಗಳ ಕಾಲಾವಕಾಶ ಉಂಟು. ಉಳಿದಿರುವ ₹1.44 ಲಕ್ಷ ಕೋಟಿ ಮೌಲ್ಯದ ನೋಟುಗಳ ಪೈಕಿ ಸಾಕಷ್ಟು ನೋಟುಗಳು ಬ್ಯಾಂಕುಗಳಿಗೆ ಹರಿದು ಬರುವ ಸಾಧ್ಯತೆ ದಟ್ಟವಾಗಿದೆ. ಬೆಟ್ಟ ಅಗೆದು ಇಲಿ ಹಿಡಿಯುವ ಈ ಕಸರತ್ತಿಗೆ ಇಡೀ ದೇಶವನ್ನು ಸರದಿಯ ಸಾಲಿಗೆ ಹಚ್ಚಿ ಹಲವು ಬಗೆಯ ಯಾತನೆಗಳಿಗೆ ಗುರಿಪಡಿಸುವ ಅಗತ್ಯ ಇತ್ತೇ ಎಂಬ ಪ್ರಶ್ನೆಗೆ ಜವಾಬು ಹೇಳಬೇಕಿರುವ ಸಂಕಟಕ್ಕೆ ಕೇಂದ್ರ ಸರ್ಕಾರ ಸಿಲುಕಿದರೆ ಅಚ್ಚರಿಪಡಬೇಕಿಲ್ಲ.

ಬಹುದೊಡ್ಡ ರಾಜ್ಯ ಉತ್ತರಪ್ರದೇಶವೂ ಸೇರಿದಂತೆ 5 ರಾಜ್ಯಗಳ ವಿಧಾನಸಭಾ ಚುನಾವಣೆ ಕದ ತಟ್ಟಿರುವ ಹೊತ್ತಿನಲ್ಲಿ ನೋಟು ರದ್ದಿನಂತಹ ರಾಜಕೀಯ ಬ್ರಹ್ಮಾಸ್ತ್ರವನ್ನು ಪ್ರಯೋಗ ಮಾಡಿದ ಮೋದಿಯವರ ಮಹತ್ಸಾಧನೆಯ ಭಾವನೆಗೆ ತಣ್ಣೀರು ಎರಚುವ ಬೆಳವಣಿಗೆ ಇದು ಎನ್ನಲಾಗಿದೆ.

ರದ್ದು ಮಾಡಿರುವ ನೋಟುಗಳ ಪೈಕಿ ಕನಿಷ್ಠ ₹3 ಲಕ್ಷ ಕೋಟಿ ಮೌಲ್ಯದ ನೋಟುಗಳು ವಾಪಸು ಬರಲಾರವು. ಈ ಕಳ್ಳಹಣವನ್ನು ಇರಿಸಿಕೊಂಡಿರುವವರು ವಿನಿಮಯಕ್ಕಾಗಿ ಅದನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವುದಿಲ್ಲ. ಹೀಗಾಗಿ ಈ ಬೃಹತ್ ಮೊತ್ತದ ಕಪ್ಪು ಹಣ ವ್ಯವಸ್ಥೆಯಿಂದ ತಂತಾನೇ ನಿವಾರಣೆಯಾಗಲಿದೆ. ಈ ಭಾರೀ ಮೊತ್ತವನ್ನು ಮೂಲಸೌಲಭ್ಯಗಳ ನಿರ್ಮಾಣಕ್ಕೆ ಬಳಸಲು ಬಂದೀತು ಎಂಬುದು ಕೇಂದ್ರ ಸರ್ಕಾರದ ಭಾವನೆಯಾಗಿತ್ತು.
ಹಣಕಾಸು ರಾಜ್ಯಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ಕಳೆದ ನವೆಂಬರ್ 29 ರಂದು ರಾಜ್ಯಸಭೆಗೆ ತಿಳಿಸಿದ ಪ್ರಕಾರ ನವೆಂಬರ್ ಎಂಟರ ಮಧ್ಯರಾತ್ರಿ ರದ್ದಾದ ನೋಟುಗಳ ಸಂಖ್ಯೆ 171.65 ಕೋಟಿ. ಇವುಗಳ ಒಟ್ಟು ಮೌಲ್ಯ ₹ 15.44 ಲಕ್ಷ ಕೋಟಿ.

ವಿದೇಶೀ ಬ್ಯಾಂಕುಗಳಲ್ಲಿ ಭಾರತೀಯರು ಬಚ್ಚಿಟ್ಟಿರುವ ಕಪ್ಪು ಹಣವನ್ನು ವಾಪಸು ತಂದು ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ ₹ 15 ಲಕ್ಷ ಜಮಾ ಮಾಡುವ ಮಾತನ್ನು ಮೋದಿಯವರು 2014ರ ಲೋಕಸಭಾ ಚುನಾವಣಾ ಪ್ರಚಾರದ ಭಾಷಣಗಳಲ್ಲಿ ಆಡಿದ್ದರು. ಪ್ರಧಾನಿಯಾದ ನಂತರ ಈ ಮಾತನ್ನು ನೆರವೇರಿಸುವುದು ಅವರಿಂದ ಆಗಲಿಲ್ಲ. ಚುನಾವಣಾ ಪ್ರಚಾರದ ಭಾಷಣವನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂಬ ಅಧಿಕೃತ ವಿವರಣೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರಿಂದಲೇ ಹೊರಬಿದ್ದ ನಂತರ ಜನಸಮೂಹದಲ್ಲಿ ತುಸು ಭ್ರಮನಿರಸನ ಉಂಟಾಗಿದ್ದು ಹೌದು. ಹನಿ ಹನಿ ರೂಪದ ಈ ಭ್ರಮನಿರಸನ ಹಳ್ಳವಾಗುವ ಆತಂಕವನ್ನು ತಡೆಯುವ ಕ್ರಮವಾಗಿ ನೋಟು ರದ್ದನ್ನು ಘೋಷಿಸಿದ ಮೋದಿಯವರು ದಿನ ಬೆಳಗಾಗುವುದರಲ್ಲಿ ಕೋಟ್ಯಂತರ ಜನಸಾಮಾನ್ಯರ ಕಣ್ಮಣಿಯಾದರು.

ಕಳೆದ ಒಂದೂವರೆ ತಿಂಗಳುಗಳಲ್ಲಿ ಅವರು ಸಂಪಾದಿಸಿರುವ ಸದ್ಭಾವನೆಯ ಬೆಟ್ಟ ಕರಗತೊಡಗಿದೆ. ನೋಟು ರದ್ದಿನ ಆರಂಭದ ದಿನಗಳ ಉತ್ಸಾಹ ಉಡುಗತೊಡಗಿದೆ. ಒಳ್ಳೆಯ ದಿನಗಳ ಭರವಸೆ ನೀಡಿದ್ದರು ಮೋದಿ. ನೋಟು ರದ್ದಿನ ಕ್ರಮ ಜನಸಾಮಾನ್ಯರ ಪಾಲಿಗೆ ದುರ್ದಿನಗಳ ದರ್ಶನ ಮಾಡದೆ ದೂರ ಸರಿಯುವುದಿಲ್ಲ ಎನ್ನುತ್ತಿದ್ದಾರೆ ಹಣಕಾಸು ತಜ್ಞರು.

ಮೋದಿಯವರು ಬರೆದ ಚಿತ್ರನಾಟಕ ಹಳಿ ತಪ್ಪಿದ ಸೂಚನೆಗಳು ನವೆಂಬರ್ ಕಡೆಯ ವೇಳೆಗೆ ನಿಚ್ಚಳವಾಗಿ ಗೋಚರಿಸಲಾರಂಭಿಸಿದವು.

ನಗದು ಮೀಸಲು ಅನುಪಾತದ (ಕ್ಯಾಷ್ ರಿಸರ್ವ್ ರೇಷಿಯೋ) ಪ್ರಕಾರ ಬ್ಯಾಂಕುಗಳು ತಮ್ಮಲ್ಲಿನ ಠೇವಣಿಗಳ ಒಂದಷ್ಟು ಶೇಕಡಾವಾರು ಪ್ರಮಾಣವನ್ನು ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಇರಿಸಬೇಕು. ಹಣಕಾಸು ವ್ಯವಸ್ಥೆಯಲ್ಲಿ ನಗದು ಲಭ್ಯತೆಯ ಮೇಲೆ ನಿಯಂತ್ರಣ ಸಾಧಿಸುವ ಕ್ರಮವಿದು. ಈ ಅನುಪಾತದ ಪಾಲನೆಯ ಭಾಗವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಬಳಿ ನವೆಂಬರ್ ಎಂಟರಂದು ತಾವು ಇರಿಸಿದ್ದ ಠೇವಣಿಗಳ ಮೊತ್ತ ₹ 4.06 ಲಕ್ಷ ಕೋಟಿ ಎಂದು ಬ್ಯಾಂಕುಗಳು ಹೇಳಿದ್ದವು. ಬ್ಯಾಂಕಿಂಗ್ ಮೂಲಗಳ ಪ್ರಕಾರ ಈ ನಗದು ಬಹುತೇಕ ಸಾವಿರ ಮತ್ತು ಐನೂರು ರುಪಾಯಿ ನೋಟುಗಳಿಂದಲೇ ತುಂಬಿತ್ತು. ಅಂತೆಯೇ ತಮ್ಮ ಅನುದಿನದ ಗ್ರಾಹಕ ಅಗತ್ಯಗಳ ಪೂರೈಕೆಗೆಂದು ಅದೇ ಎಂಟರಂದು ತಾವು ಇರಿಸಿಕೊಂಡಿದ್ದ ಮೊತ್ತ ಸುಮಾರು ₹ 50 ಸಾವಿರ ಕೋಟಿ ಎಂದೂ ಹೇಳಿವೆ. ಹೀಗಾಗಿ ಘೋಷಣೆಯಾದ ಮೂರೇ ವಾರಗಳ ಅವಧಿಯಲ್ಲಿ ₹ 15.44 ಲಕ್ಷ ಕೋಟಿ ಪೈಕಿ ₹13.01 ಲಕ್ಷ ಕೋಟಿ ರುಪಾಯಿ ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸು ಬಂದು ಸೇರಿದ್ದವು. ಅಂದರೆ 15.44 ಲಕ್ಷ ಕೋಟಿ ರುಪಾಯಿಗಳ ಶೇ 84.26ರಷ್ಟು ಮೊತ್ತ ಗಡುವು ತೀರಲು 25 ದಿನಗಳು ಬಾಕಿ ಇರುವಂತೆಯೇ ಮರಳಿತ್ತು.

ಅಮಾಯಕ ಜನಸಾಮಾನ್ಯರನ್ನು ಯಾತನೆಯ ಸುಳಿಗೆ ನೂಕಿದ ನಂತರವೂ ಕಪ್ಪು ಹಣ ನಿವಾರಣೆಯ ಗುರಿ ದೂರವೇ ಉಳಿದ ಬೆಳವಣಿಗೆ ಕೇಂದ್ರ ಸರ್ಕಾರವನ್ನು ನಿರಾಶೆಗೆ ನೂಕಿರುವ ಸೂಚನೆಗಳಿವೆ. ಹೀಗಾಗಿಯೇ ಒಂದರ ನಂತರ ಮತ್ತೊಂದರಂತೆ ತಲುಪಬೇಕಿರುವ ಗುರಿ ಕಂಬಗಳನ್ನು ಬದಲಿಸುವ ಅಡ್ಡದಾರಿ ಹಿಡಿದಿದೆ ಎನ್ನುತ್ತಾರೆ ಆರ್ಥಿಕ ತಜ್ಞರು.

ಇನ್ನಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿ ಬಾರದಂತೆ ತಡೆಯುವ ‘ನಿರುತ್ತೇಜಕ’ ಕ್ರಮಗಳಿಗೆ ಕೈಹಾಕತೊಡಗಿದೆ. ಗುರಿ ಕಂಬಗಳನ್ನು ಬದಲಿಸತೊಡಗಿದೆ. ಕಪ್ಪುಹಣದ ಮಾತು ಬಿಟ್ಟು ನಗದುರಹಿತ ಸಮಾಜ ನಿರ್ಮಾಣದ ಮಾತಾಡತೊಡಗಿದ್ದು ಈ ದಿಸೆಯಲ್ಲಿ ಗೋಚರಿಸಿದ ಬಹುಮುಖ್ಯ ಸಂಕೇತ. ಜೊತೆಗೆ ಮಾಹಿತಿ ಹಕ್ಕು ಕಾಯಿದೆ ಪ್ರಕಾರ ಸಲ್ಲಿಸಲಾಗಿದ್ದ ಪ್ರಶ್ನೆಯೊಂದಕ್ಕೆ ನೀಡಲಾಗಿರುವ ಉತ್ತರವೊಂದು ರದ್ದು ಮಾಡಲಾಗಿರುವ ನೋಟುಗಳ ಒಟ್ಟು ಮೌಲ್ಯವನ್ನು ₹ 20 ಲಕ್ಷ ಕೋಟಿ ಎಂದು ವಿವರಿಸಿದೆ. ₹ 15 ಲಕ್ಷ ಕೋಟಿ ಮೊತ್ತದ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಹರಿದು ಬಂದರೂ ಇನ್ನೂ ₹ ಐದು ಲಕ್ಷ ಕೋಟಿ ಹೊರಗೇ ಉಳಿದಿದೆ. ಅದು ಕಪ್ಪು ಹಣಲ್ಲದೆ ಇನ್ನೇನೂ ಅಲ್ಲ ಎಂದು ಬಣ್ಣಿಸಿ, ನೋಟು ರದ್ದು ಕ್ರಮ ಯಶಸ್ವಿಯಾಯಿತೆಂದು ಸಾರುವ ಉದ್ದೇಶ ಸರ್ಕಾರದ್ದು ಎಂಬುದಾಗಿ ಅರ್ಥವೇತ್ತರು ವ್ಯಾಖ್ಯಾನಿಸಿದ್ದಾರೆ.

‘ನೋಟು ರದ್ದು ಯಶಸ್ವಿಯಾದರೆ ಮೋದಿಯವರು ಹೀರೋ ಇಲ್ಲವಾದರೆ ಝೀರೋ’ ಎಂಬುದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತಿತರ ನಾಯಕರು ನುಡಿದಿದ್ದ ಭವಿಷ್ಯವಾಣಿ. ಈ ಮಾತುಗಳಲ್ಲಿ ನಿಜವಾಗುವ ಭಾಗ ಯಾವುದು ಎಂಬುದು ಸದ್ಯದಲ್ಲೇ ವೇದ್ಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.