ನೇಪಾಳಕ್ಕೆ ನಾವು ಹೋದ ಉದ್ದೇಶ ಗೌತಮ ಬುದ್ಧನ ಜನ್ಮಸ್ಥಳ ಲುಂಬಿನಿಗೆ ಭೇಟಿ ನೀಡುವುದಾಗಿದ್ದರೂ, ಹನ್ನೆರಡು ದಿನಗಳಲ್ಲಿ ಸಾಕಷ್ಟು ಸ್ಥಳಗಳಿಗೆ ಹೋಗಿ ಬಂದೆವು.ಅವುಗಳಲ್ಲಿ ಪೋಖರಾ ಸಹ ಒಂದು. ನೇಪಾಳದ ಎರಡನೆಯ ಅತೀ ದೊಡ್ಡ ನಗರವಾದ ಪೋಖರಾಕ್ಕೆ ಹೋಗುವವರೆಲ್ಲರೂ ತಪ್ಪದೇ ಸಾರಂಗ್ ಕೋಟ್‌ಗೆ ಭೇಟಿ ನೀಡುತ್ತಾರೆ. ಅಲ್ಲಿನ ಸೂರ್ಯೋದಯ ಅಷ್ಟು ಜನಪ್ರಿಯ. ಹಿಮಾಲಯದ ಅನ್ನಪೂರ್ಣ ಶಿಖರದ ಮೇಲೆ ಸೂರ್ಯ ಉದಯಿಸುವುದನ್ನು ನೋಡಲು ಯಾರಿಗೆ ತಾನೆ ಇಷ್ಟವಿರುವುದಿಲ್ಲ?

ಮುಂಜಾನೆ 4.30ಕ್ಕೆ ಡ್ರೈವರ್ ನಮ್ಮನ್ನು ಹೋಟೆಲಿನಿಂದ ಸಾರಂಗ್ ಕೋಟ್‌ಗೆ ಕರೆದೊಯ್ಯಲು ಬಂದ. ಕತ್ತಲು, ಮೈ ಥರಗುಟ್ಟಿಸುವ ಚಳಿ. ಇನ್ನೂ ವರ್ಷ ತುಂಬದ ಮಗನನ್ನು ಶಾಲಿನಲ್ಲಿ ಮುದುರಿಕೊಂಡು ಬೋಲೆರೊ ಕಾರು ಹತ್ತಿದೆವು. ಪೋಖರಾದಿಂದ ಈಶಾನ್ಯ ದಿಕ್ಕಿನಲ್ಲಿ ಕೇವಲ 10 ಕಿಮೀ ದೂರದಲ್ಲಿರುವ ಸಾರಂಗ್ ಕೋಟ್ ಕಡೆಗೆ ಆಗಲೇ ಪ್ರವಾಸಿಗರ ಕಾರುಗಳು ಮೆಲ್ಲಗೆ ತೆರಳುತ್ತಿದ್ದವು.

ಕೇವಲ ಐದು ಸಾವಿರ ಜನಸಂಖ್ಯೆ ಹೊಂದಿರುವ ಸಾರಂಗ್ ಕೋಟ್ ಹಳ್ಳಿ 1600 ಮೀ ಎತ್ತರವಿರುವ ಬೆಟ್ಟದ ಮೇಲಿದೆ. ಅನ್ನಪೂರ್ಣ ಶ್ರೇಣಿಯನ್ನು ಕಾಣಲು ಪ್ರತಿ ದಿನ ನೂರಾರು ಪ್ರವಾಸಿಗರು ತಲಾ 50 ನೇಪಾಳಿ ರೂಪಾಯಿ ಶುಲ್ಕ ತೆತ್ತು ಈ ಹಳ್ಳಿಗೆ ಬರುತ್ತಾರೆ. ಬೆಟ್ಟ ಹತ್ತಿ ತಲುಪಬೇಕಾದ ಸ್ಥಳಕ್ಕೆ ಆಮೆಯ ನಡಿಗೆಯಲ್ಲಿ ಕಾರು, ಗುಳಿಬಿದ್ದ ರಸ್ತೆಯಲ್ಲಿ ಪ್ರತಿ ಬಾರಿ ಸದ್ದು ಮಾಡುತ್ತ ಸಾಗುತ್ತಿತ್ತು. ಮುಖಕ್ಕೆ ಭರ್ರನೆ ಬೀಸುತ್ತಿದ್ದ ತಣ್ಣನೆಯ ಗಾಳಿ, ಗಾಡಿಯ ಕುಲುಕಾಟ ನಿದ್ರೆಯ ಮಂಪರನ್ನು ಒದ್ದೋಡಿಸಿತ್ತು.

ಮಂಜು ಮುಸುಕಿದ ದಾರಿ
ಬೆಟ್ಟದ ಮೇಲೆ ಮತ್ತಷ್ಟು ಸಾಗುತ್ತಿದ್ದ ಹಾಗೆ ಸುತ್ತಲೂ ಕವಿದಿದ್ದ ಮಂಜು ಮತ್ತಷ್ಟು ಗಾಢವಾಗತೊಡಗಿತು. ಕತ್ತಲಿನಲ್ಲಿ ರಸ್ತೆಯ ಇಕ್ಕೆಲಗಳಲ್ಲೂ ಇರುವ ದೈತ್ಯ ಮರಗಳು ರಾಕ್ಷಸ ರೂಪದಲ್ಲಿ ಕಾಣತೊಡಗಿದವು. ಹದಿನೈದು ನಿಮಿಷದಲ್ಲಿ ಬೆಟ್ಟ ಹತ್ತಿಸಿದ ಡ್ರೈವರ್ ಒಂದೆಡೆ ಕಾರು ನಿಲ್ಲಿಸಿ, ಬೆಟ್ಟದ ಮೇಲಕ್ಕೆ ಸಾಗುವ ಮೆಟ್ಟಿಲುಗಳತ್ತ ಕೈ ತೋರಿಸಿದ. ಇನ್ನು ನೀವುಂಟು, ನಿಮ್ಮ ಸೂರ್ಯೋದಯವುಂಟು ಎಂಬಂತೆ. ಅಲ್ಲೇ ನಿಂತಿದ್ದ ಇತರ ಪ್ರವಾಸಿಗರ ಕಾರುಗಳತ್ತ ನೋಡುತ್ತಾ ತನ್ನ ಪರಿಚಯದ ಡ್ರೈವರ್‌ಗಳತ್ತ ನಡೆದ.

ಪಾಚಿ ಬೆಳೆದ ಮೆಟ್ಟಿಲುಗಳ ಮೇಲೆ ಗಂಡನ ಕೈ ಹಿಡಿದು ಸಾವಕಾಶವಾಗಿ ಒಂದೊಂದೇ ಮೆಟ್ಟಿಲುಗಳನ್ನೇರತೊಡಗಿದೆ. ಕತ್ತಲಲ್ಲಿ ಜೀ ಜೀ ಎನ್ನುತ್ತಾ ಸದ್ದು ಮಾಡುತ್ತಿರುವ ಜೀರುಂಡೆಗಳು. ಯಾವುದೇ ಕಲುಷಿತ ಹೊಗೆಯಿಲ್ಲದೆ ಇರುವ ಸ್ವಚ್ಛ ತಣ್ಣನೆಯ ಗಾಳಿ. ಗಟ್ಟಿಯಾಗಿ ಮಾತನಾಡುವ ಹಾಗಿಲ್ಲ, ಹೆಗಲ ಮೇಲೆ ನಿದ್ರೆ ಮಾಡುತ್ತಿರುವ ಮಗ ಎದ್ದರೆ ಎನ್ನುವ ಭಯ.

ಮಹಡಿಯ ಮೇಲೆ ನಿರೀಕ್ಷೆ
ಐವತ್ತು ಅರವತ್ತು ಮೆಟ್ಟಿಲುಗಳನ್ನೇರಿದ ಬಳಿಕ ಕೆಲವು ಪ್ರವಾಸಿಗರು ಒಂದು ಮನೆಯ ಮಹಡಿಯ ಮೇಲೆ ಜಮಾಯಿಸಿರುವುದು ಕಂಡು ಬಂತು. ಮನೆಯೊಡತಿ ‘ಸೂರ್ಯೋದಯ ನೋಡುವುದಿದ್ದರೆ ಮೇಲೆ ಬನ್ನಿ’ ಎಂದು ನಗುತ್ತ ಆಹ್ವಾನಿಸಿದಳು.

ನಾವು ಇತರೆ ಪ್ರವಾಸಿಗರನ್ನು ಸೇರಿಕೊಂಡೆವು. ಮಹಡಿಯ ಮೇಲೆ 50–60 ಪ್ಲಾಸ್ಟಿಕ್ ಕುರ್ಚಿಗಳು. ಮನೆಯೊಡತಿ ಪ್ರವಾಸಿಗರಿಗೆ ಕಾಫಿ, ಟೀ ಸರಬರಾಜು ಮಾಡುತ್ತಿದ್ದಳು.ಆಕೆಯ ಮಗಳು ತಾನೇ ನೇಯ್ದ ಶಾಲುಗಳನ್ನು ನೆರೆದಿದ್ದ ಮಹಿಳಾ ಪ್ರವಾಸಿಗಳಿಗೆ ತೋರಿಸುತ್ತಿದ್ದಳು. ಅಲ್ಲಿದ್ದವರೆಲ್ಲರ ಕೈಯಲ್ಲೂ ಟೀ. ಕೆಲವು ಮಹಿಳೆಯರ ಕೈಯಲ್ಲಿ ಅದೇ ತಾನೆ ಕೊಂಡುಕೊಂಡಿದ್ದ ಬಣ್ಣಬಣ್ಣದ ಶಾಲುಗಳು. ಭರ್ಜರಿ ವ್ಯಾಪಾರ!

ಎಲ್ಲರ ಕಣ್ಣು ದೂರದ ಹಿಮಾಲಯದತ್ತ. ಸೂರ್ಯ ಈಗ ಬರುತ್ತಾನೆ, ಇನ್ನೇನು ಬರುತ್ತಾನೆ ಎನ್ನುವ ತವಕ. ಸೂರ್ಯನ ನಿರೀಕ್ಷೆಯಲ್ಲಿ ಯಾರೂ ಬೀಸುತ್ತಿದ್ದ ತಣ್ಣನೆಯ ಗಾಳಿಯನ್ನು ಲೆಕ್ಕಕ್ಕೆ ಇಟ್ಟುಕೊಂಡಿರಲಿಲ್ಲ. ಸುತ್ತಲೂ ಕವಿದಿದ್ದ ಮಂಜನ್ನು ಓಡಿಸಲೆಂದೇ ಬೀಸುತ್ತಿದ್ದ ಗಾಳಿಯಲ್ಲಿ ಚಹಾದ ಸ್ವಾದವನ್ನು ಆಸ್ವಾದಿಸುತ್ತಿದ್ದರು.

ಕಸ್ಕಿ ಕೋಟ್!
ಸೂರ್ಯನ ಆಗಮನದ ನಿರೀಕ್ಷೆಯಲ್ಲೇ ಸುತ್ತ ಮುತ್ತಲೂ ಕಣ್ಣಾಯಿಸಿದರೆ, ಬೆಟ್ಟದ ತುದಿಯಲ್ಲಿರುವ ಪುರಾತನ ಕೋಟೆಯನ್ನು ತಲುಪಲು ಮೆಟ್ಟಿಲು ಹತ್ತುತ್ತಿರುವ ಕೆಲವು ಪಾಶ್ಚಿಮಾತ್ಯರು ಕಂಡರು. ಮೇಲೆ ಅಂದರೆ, 1788 ಮೀ ಎತ್ತರದಲ್ಲಿ, ಕಸ್ಕಿ ಕೋಟ್ ಎನ್ನುವ ಹಳೆಯ ಪಾಳು ಬಿದ್ದ ಕೋಟೆ ಇದೆ. ಅಲ್ಲಿಂದಲೂ ಸೂರ್ಯೋದಯದ ಅತಿ ಮನೋಹರ ದೃಶ್ಯ ಕಾಣಬಹುದು. ಆದರೆ ಕಾಡಿನ ಮಧ್ಯೆ ಕೊರೆಯುವ ಚಳಿಯಲ್ಲಿ, ಕತ್ತಲಿನಲ್ಲಿ, ಒಂದು ಗಂಟೆಗೂ ಮೇಲೆ ನಡೆಯಬೇಕು. ಅನುಭವವಿಲ್ಲದ ನಮ್ಮಂಥವರು ಸಾರಂಗ್ ಕೋಟ್ ಹಳ್ಳಿಯ ಮನೆಗಳ ಮೇಲೆ ನಿಂತು ಸೂರ್ಯನ ದರ್ಶನ ಪಡೆಯುತ್ತಾರೆ, ಅಷ್ಟಕ್ಕೇ ತೃಪ್ತಿ ಪಡುತ್ತಾರೆ.

ಪೋಖರಾ ಕಣಿವೆಯ ಬೆಡಗು
ಬೆಳಕು ಹರಿಯುತ್ತಿದ್ದ ಹಾಗೆಯೇ ನಿಚ್ಚಳ ಬೆಳಕು. ಹಕ್ಕಿಗಳ ಕಲರವ. ಬೆಟ್ಟದ ತುದಿಯವರೆಗೂ ಎಡಕ್ಕೆ ಸಾಲು ಸಾಲು ರುದ್ರಾಕ್ಷಿ ಮರಗಳು, ಬಲಕ್ಕೆ ಹಚ್ಚ ಹಸುರಿನ ಮಂಡಿಯುದ್ದ ಬೆಳೆದು ನಿಂತ ಕಾಡು ಹುಲ್ಲು, ನಡುವೆ ಕೆಂಪು, ಹಳದಿ, ನೀಲಿ, ಗುಲಾಬಿ ಬಣ್ಣದ ಥರಾವರಿ ಹೂಗೊಂಚಲುಗಳನ್ನು ಹೊತ್ತ ಗಿಡಗಳು.

ಮೇಲಿನಿಂದ ಕೆಳಗೆ ನೋಡಿದರೆ, ವಿಶಾಲವಾದ ಪೋಖರಾ ಕಣಿವೆ. ಬೆಳ್ಳಗೆ ಹಾವಿನಂತೆ ಬಳುಕುತ್ತಾ ಹರಿಯುತ್ತಿರುವ ಸೇತಿ ನದಿ, ಬೌದ್ಧ ವಿಹಾರ, ಪುಟ್ಟ ಹಳ್ಳಿಗಳು, ಮಕ್ಕಳ ಆಟದ ಸಾಮಾನುಗಳ ಹಾಗೆ ಅಲ್ಲಲ್ಲಿ ಚದುರಿ ಹೋದಂತಿರುವ ಪುಟ್ಟ ಕಟ್ಟಡಗಳು. ಅವುಗಳ ಹಿಂದೆ ದೂರದಲ್ಲಿ ದೈತ್ಯಾಕಾರವಾಗಿ ಮೇಲೆದ್ದಿರುವ ಹಿಮಾಲಯ ಪರ್ವತ ಶ್ರೇಣಿ.

ಮಂಜು ಮಸುಕಿನ ನಡುವೆ ಕಾಣುತ್ತಿರುವ ಪುಟ್ಟ ಬೆಳ್ಳಿಶಿಖರಗಳು. ಸ್ವರ್ಗಕ್ಕೆ ಮೂರೇ ಗೇಣು ಎನ್ನುವುದು ಬಹುಶಃ ಇದನ್ನೇ ಇರಬಹುದು. ಮೋಡಗಳ ನಡುವೆ ಸೂರ್ಯ ಕಣ್ಣಾಮುಚ್ಚಾಲೆ ಆಡುತ್ತಲೇ ಮೇಲೆ ಬಂದಾಗ ಮೈಯಲ್ಲಿ ಏನೋ ರೋಮಾಂಚನ. ಎಲ್ಲರ ಕ್ಯಾಮೆರಾಗಳೂ ಒಮ್ಮೆಲೇ ಕ್ಲಿಕ್ ಕ್ಲಿಕ್ ಸದ್ದು ಮಾಡಿದವು. ರೆಡ್ ಕಾರ್ಪೆಟ್ ಮೇಲೆ ಯಾವುದೋ ಹಾಲಿವುಡ್ ಸ್ಟಾರ್ ಬಂದಾಗ ಆಗುವ ಅದೇ ರೋಮಾಂಚನ. ಎಲ್ಲರ ಬಾಯಲ್ಲೂ ಆಹಾ, ವಾಹ್, ಓಹ್ ಮೈ ಗಾಡ್ ಎನ್ನುವ ಉದ್ಗಾರ.

ಹಿಮಾಲಯದ ಶ್ರೇಣಿಗಳ ನಡುವೆ ಕಣ್ಣು ಮುಚ್ಚಿಬಿಡುವಷ್ಟರಲ್ಲಿ ಮೆಲ್ಲನೆ ಮೇಲೇರುತ್ತಿರುವ ನೇಸರನ ಸೊಬಗನ್ನು ತಮ್ಮ ಮನಸ್ಸಿನಲ್ಲಿ, ಕಣ್ಣುಗಳಲ್ಲಿ ತುಂಬಿಕೊಳ್ಳುತ್ತಿದ್ದ ಪ್ರವಾಸಿಗರ ಮನಸ್ಸಿನಲ್ಲಿ ಏನೋ ಹರ್ಷ. ಮೊಗದಲ್ಲಿ ಏನೋ ಧನ್ಯತಾ ಭಾವ.

ಎರಡು ಗಂಟೆ ಎರಡು ನಿಮಿಷದ ಹಾಗೆ ಜಾರಿಹೋದವು. ವರ್ಣಿಸಲಸಾಧ್ಯವಾದ ಆ ಸುಂದರ ಗಳಿಗೆ ಕನಸೋ ನನಸೋ ಎಂಬಂತೆ ಕ್ಷಣಗಳಲ್ಲಿ ಕಳೆದುಹೋಯಿತು. ಸೂರ್ಯ ಮೆಲ್ಲನೆ ಮೇಲೇರತೊಡಗಿದ.

ಸೂರ್ಯ ಉದಯಿಸಿದ ಮೇಲೆ ಇಡೀ ವಾತಾವರಣ ಕಣ್ಣಿಗೆ ಹಬ್ಬವನ್ನುಂಟು ಮಾಡುವ ಹಾಗೆ ಮಾರ್ಪಾಟಾಯಿತು. ಮೆಟ್ಟಿಲಿಳಿದು ಕಾರಿನೆಡೆಗೆ ಹೋಗುತ್ತಿದ್ದರೆ, ರಂಗುಬಿರಂಗಿ ಚಿಟ್ಟೆಗಳು, ಕಾಡುಹೂವುಗಳ ಮೇಲೆ ನರ್ತನ ಪ್ರಾರಂಭಿಸಿದ್ದವು.

ಕತ್ತಲಲ್ಲಿ ರಾಕ್ಷಸ ರೂಪಾಕಾರವಾಗಿ ಕಂಡಿದ್ದ ಮರಗಳು ಕೆಂಪು, ಹಳದಿ ಮತ್ತು ನೀಲಿ ಬಣ್ಣದ ಹೂಗಳನ್ನು ಹೊತ್ತ ಸುಂದರ ದೈತ್ಯ ವೃಕ್ಷಗಳಾಗಿ ನಮ್ಮನ್ನು ಅಣಕಿಸುವಂತೆ ಗಾಳಿಯಲ್ಲಿ ಮೆಲ್ಲಗೆ ಅಲುಗಾಡತೊಡಗಿದವು.

ಮರಳಿ ಹೋಟೆಲಿಗೆ ಬಂದ ಮೇಲೆ ಗಂಟೆಗಟ್ಟಲೆ ಬಾಲ್ಕನಿಯಲ್ಲಿ ಕುಳಿತು ಹಿಮಾಲಯದ ಶಿಖರಗಳನ್ನು ಕಣ್ಣು ಮತ್ತು ಕ್ಯಾಮೆರಾದಲ್ಲಿ ತುಂಬಿಕೊಂಡೆವು. ನೇಪಾಳ ಪ್ರವಾಸದಲ್ಲಿ ಸಿಗುವ ಅತ್ಯುತ್ತಮ ಮತ್ತು ಸುಂದರ ಪ್ರಕೃತಿಯ ಚಿತ್ರಗಳು ಪ್ರಾಯಶಃ ಸಾರಂಗ್ ಕೋಟ್‌ನವು ಎಂದರೆ ತಪ್ಪಾಗಲಾರದು.

ತಲುಪುವುದು ಹೇಗೆ?
ಸಾರಂಗ್ ಕೋಟ್ ತಲುಪಲು ಮೂರು ವಿಧಾನಗಳಿವೆ:
* ಮೊದಲನೆಯ ವಿಧಾನ, ತಂಗುವ ಹೋಟೆಲಿನವರಿಗೆ ಮುಂಚಿತವಾಗಿ ಹೇಳಿ ಟ್ಯಾಕ್ಸಿ ಬುಕ್ ಮಾಡಿಸುವುದು. ಇದಕ್ಕೆ ಸುಮಾರು 800 ನೇಪಾಳಿ ರೂಪಾಯಿ ಖರ್ಚಾಗುತ್ತದೆ. ಡ್ರೈವರ್ ಎರಡು ಗಂಟೆ ಬೆಟ್ಟದ ಮೇಲೆಯೇ ಕಾದಿದ್ದು ಮರಳಿ ಪೋಖರಾಗೆ ತಲುಪಿಸುತ್ತಾನೆ.

* ಎರಡನೆಯ ವಿಧಾನ ಮೋಟಾರ್ ಸೈಕಲ್ ಬಾಡಿಗೆಗೆ ಪಡೆಯುವುದು. ಸ್ಕೂಟರ್ ದಿನಕ್ಕೆ 500 ನೇಪಾಳಿ ರೂಪಾಯಿ, 150ಸಿಸಿ ಬೈಕ್ಗಳು ದಿನಕ್ಕೆ 800 ನೇಪಾಳಿ ರೂಪಾಯಿ ಬಾಡಿಗೆಗೆ ದೊರಕುತ್ತವೆ. ಕೆಳಗಿನಿಂದ ಮೇಲೆ ಹೋಗಲು ಸುಮಾರು 20–25 ನಿಮಿಷ ಬೇಕಾಗುತ್ತದೆ.

* ಕೊನೆಯ ವಿಧಾನ ಕಾಲ್ನಡಿಗೆ. ಬೆಟ್ಟದವರೆಗೆ ಟ್ಯಾಕ್ಸಿಯಲ್ಲಿ ಬಂದು ಹತ್ತಲು ಶುರು ಮಾಡಿದರೆ, ಒಂದೆರಡು ಗಂಟೆಗಳಲ್ಲಿ ಸೂರ್ಯೋದಯ ಕಾಣುವ ಸ್ಥಳ ತಲುಪಬಹುದು.
ಶುಲ್ಕ: ರಾಷ್ಟ್ರೀಯ ಉದ್ಯಾನವೆನ್ನುವ ಕಾರಣಕ್ಕೆ ಸಾರಂಗ್ ಕೋಟ್ ಪ್ರವೇಶಿಸುವ ಮುನ್ನ 50 ನೇಪಾಳಿ ರೂಪಾಯಿ ಶುಲ್ಕ ತೆರಬೇಕಾಗುತ್ತದೆ.

ಮೋಡಗಳು ಮೋಸ ಮಾಡದೆ ಹೋದರೆ ಹಿಮಾಲಯದ ಕೆಲವು ಶಿಖರಗಳ ದರ್ಶನವಾಗುತ್ತದೆ. ಇಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಕಾಣುವ ಪ್ರಮುಖ ಶಿಖರಗಳು: ಧೌಲಗಿರಿ (8,167 ಮೀಟರ್ – ವಿಶ್ವದ ಏಳನೇ ಎತ್ತರದ ಶಿಖರ), ಅನ್ನಪೂರ್ಣ ದಕ್ಷಿಣ (7,219 ಮೀ), ಅನ್ನಪೂರ್ಣ I (8,091 ಮೀ – ವಿಶ್ವದ ಹತ್ತನೇ ಎತ್ತರದ ಶಿಖರ), ಹಿಯುನ್ಚುಲಿ (6,441 ಮೀ), ಮಚ್ಚಪುಚ್ಚರೆ (6,997 ಮೀ – ಫಿಷ್ ಟೈಲ್ ಮತ್ತು ಹೋಲಿ ಪರ್ವತ), ಅನ್ನಪೂರ್ಣ III (7,555 ಮೀ), ಅನ್ನಪೂರ್ಣ IV (7,525 ಮೀ), ಅನ್ನಪೂರ್ಣ II (7,937 ಮೀ) ಮತ್ತು ಲ್ಯಾಂಜುಂಗ್ ಹಿಮಾಲ್ (6,983 ಮೀ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.