ನನ್ನ ಹಾಗೂ ಬೆಂಗಳೂರಿನ ಒಡನಾಟ 50 ವರ್ಷಗಳಷ್ಟು ಹಳೆಯದು. ನಾನು ಹುಟ್ಟಿದ್ದು ಅವಿಭಜಿತ ಕೋಲಾರ ಜಿಲ್ಲೆಯ ಚಿ.ಮಂಗಲದಲ್ಲಿ. ನಮ್ಮ ತಂದೆ ಚಿಂತಾಮಣಿಯಲ್ಲಿ ಫೋಟೊಗ್ರಾಫರ್ ಆಗಿದ್ದರು. ಅವರು ಆಗಾಗ ಬೆಂಗಳೂರಿನ ಬಳೇಪೇಟೆಯ ಅಂಗಡಿಯೊಂದಕ್ಕೆ ಫೋಟೊಗ್ರಾಫಿಕ್ ಸಾಮಾನುಗಳನ್ನು ತರಲು ನನ್ನನ್ನು ಕಳುಹಿಸುತ್ತಿದ್ದರು.

ನಾನು ಸಾಮಾನು ಖರೀದಿಸಿ, ಸಿನಿಮಾ ನೋಡಿ ಚಿಂತಾಮಣಿಗೆ ಮರಳುತ್ತಿದ್ದೆ. ಆಗ ನಾನು ಹೈಸ್ಕೂಲ್‌ನಲ್ಲಿ ಓದುತ್ತಿದ್ದೆ. ಬೆಂಗಳೂರು–ಚಿಂತಾಮಣಿ ನಡುವೆ ಕೇವಲ 72 ಕಿ.ಮೀ. ದೂರವಿದೆ. ಬೆಂಗಳೂರಿಗೆ ಓಡಾಡೋದು ಆಗೆಲ್ಲಾ ತುಂಬಾ ಸುಲಭವಿತ್ತು. ಒಂದೂವರೆ ತಾಸಿನಲ್ಲಿ ಇಲ್ಲಿಗೆ ಬರಬಹುದಾಗಿತ್ತು.

ನನ್ನನ್ನು ಸಾಂಸ್ಕೃತಿಕವಾಗಿ ಬೆಳೆಸಿದ್ದು ಬೆಂಗಳೂರಾದರೂ, ನನ್ನ ಸಾಹಿತ್ಯದ ಆಸಕ್ತಿ ಗುರುತಿಸಿದ್ದು, ದಾವಣಗೆರೆಯ ಡಿಆರ್ಎಂ ಕಾಲೇಜಿನ ಇಂಗ್ಲಿಷ್ ಮೇಷ್ಟ್ರಾಗಿದ್ದ ಸೀತಾರಾಂ ಶಾಸ್ತ್ರಿಗಳು.

ಆಗ ನಾನು ದಾವಣಗೆರೆಯಲ್ಲಿ ಪಿಯುಸಿ (ವಿಜ್ಞಾನ) ಓದುತ್ತಿದ್ದೆ. ನನ್ನ ಸಾಹಿತ್ಯಾಸಕ್ತಿ ಗುರುತಿಸಿದ ಮೇಷ್ಟ್ರು, ನನಗೆ ಬೆಂಗಳೂರಿಗೆ ಹೋಗು ಎಂದು ಸಲಹೆ ನೀಡಿದರು.

1964ರಲ್ಲಿ ಬಿ.ಎ. ಓದಲೆಂದು ಬೆಂಗಳೂರಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿಗೆ ಸೇರಿದೆ. ಆಗ ಅದನ್ನು ಎಲ್ಲರೂ ‘ಗ್ಯಾಸ್ ಕಾಲೇಜು’ ಎಂತಲೇ ಕರೆಯುತ್ತಿದ್ದರು.

ಈ ಕಾಲೇಜು ಒಂಥರಾ ಕುಖ್ಯಾತ ಕಾಲೇಜು ಎಂದು ಹೆಸರಾಗಿತ್ತು. ಎಲ್ಲೂ ಸೀಟು ಸಿಗದವರೇ ಆ ಕಾಲೇಜಿಗೆ ಬರುತ್ತಿದ್ದರು. ನಾನು ಇಂಗ್ಲಿಷ್ ಮತ್ತು ಕನ್ನಡ ಮೇಜರ್ ಓದುವ ಆಸೆಯಿಂದ ಗ್ಯಾಸ್ ಕಾಲೇಜಿಗೆ ಸೇರಿದೆ. ಆದರೆ, ನನಗೆ ಅಲ್ಲಿ ಕನ್ನಡ ಮೇಜರ್ ದೊರೆಯಲೇ ಇಲ್ಲ.

ನನ್ನಿಷ್ಟದ ಕನ್ನಡ ಮೇಜರ್ ಸಿಗಲಿಲ್ಲವಾದರೂ, ಅಲ್ಲಿ ನನಗೆ ಕವಿ ನಿಸಾರ್ ಅಹಮದ್ ಅವರು ಸಿಕ್ಕರು.

ಅವರು ನಮ್ಮ ಕಾಲೇಜಿಗೆ ಸಾಮಾನ್ಯ ವಿಜ್ಞಾನ ಪಾಠ ಮಾಡಲು ಬರುತ್ತಿದ್ದರು. ಆಗ ಅವರನ್ನು ಭೇಟಿ ಮಾಡಿ, ನಾನು ಬರೆದ ಪದ್ಯಗಳನ್ನು ಓದಲು ಕೊಟ್ಟೆ. ಒಂದು ವಾರ ಆದಮೇಲೆ ನಿಸಾರ್ ಅವರು ನನ್ನ ಪದ್ಯಗಳ ವಿಮರ್ಶೆ ಮಾಡಿ ‘ಚೆನ್ನಾಗಿ ಬರೆಯುತ್ತೀಯಾ ಕಣಯ್ಯಾ’ ಎಂದು ಪ್ರೋತ್ಸಾಹಿಸಿದರು.

ಅವರೇ, ‘ಪಿ.ಲಂಕೇಶ್ ಅವರನ್ನು ಪರಿಚಯ ಮಾಡಿಕೊ’ ಎಂದು ಸಲಹೆ ನೀಡಿದರು. ಅಲ್ಲಿಂದ ನನ್ನ, ಲಂಕೇಶ್ ಒಡನಾಟ ಶುರುವಾಯಿತು.

ಲಂಕೇಶ್ ತಾವು ಹೋದ ಕಡೆಯೆಲ್ಲಾ ನನ್ನನ್ನು ಜತೆಗೆ ಕರೆದೊಯ್ಯುತ್ತಿದ್ದರು. ನನ್ನನ್ನು ಅವರ ಬಾಲಂಗೋಚಿ ಎಂದೇ ಕರೆಯುತ್ತಿದ್ದರು.

ವಿದ್ಯಾರ್ಥಿದೆಸೆಯಲ್ಲಿ ಗವಿಪುರಂನ ರಾಮಕೃಷ್ಣ ವಿದ್ಯಾರ್ಥಿ ಮಂದಿರದಲ್ಲಿ ಕೆಲಕಾಲ ತಂಗಿದ್ದೆ. ಅಲ್ಲಿನ ವಾತಾವರಣ ಪ್ರಶಾಂತವಾಗಿತ್ತು. ಓದುವವರಿಗೆ ಹೇಳಿ ಮಾಡಿಸಿದ ತಾಣ. ಆಶ್ರಮದ ಸ್ವಾಮೀಜಿಗಳೊಂದಿಗೆ ನನಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯವಿತ್ತು. ಆದರೂ, ಆಶ್ರಮದಲ್ಲಿ ದಿನ ಬೆಳಿಗ್ಗೆ ಪ್ರಾರ್ಥನೆಯಲ್ಲಿ ನಾನು ಹಾರ್ಮೋನಿಯಂ ನುಡಿಸುತ್ತಿದ್ದೆ. ಹಾಡೂ ಹೇಳುತ್ತಿದ್ದೆ. ವಿದ್ಯಾಮಂದಿರದ ವಾತಾವರಣ ನನಗೆ ಸಂತಸ ಕೊಟ್ಟ ಸ್ಥಳ.

ವಿದ್ಯಾಮಂದಿರಕ್ಕೆ ಹತ್ತಿರದಲ್ಲಿಯೇ ವೈಎನ್ಕೆ ಮತ್ತು ಮಾಸ್ತಿ ಅವರ ಮನೆಯೂ ಇತ್ತು. ಆಗಾಗ ನಾನು ಇಬ್ಬರ ಮನೆಗಳಿಗೆ ಹೋಗುತ್ತಿದ್ದೆ.

ಪ್ರತಿ ಭಾನುವಾರ ಬೆಳಿಗ್ಗೆ ವೈಎನ್ಕೆ ಮನೆಗೆ ಹೋಗುತ್ತಿದ್ದೆ. ಅವರು ತಪ್ಪದೇ ವಿದ್ಯಾರ್ಥಿ ಭವನಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಇಬ್ಬರೂ ದೋಸೆ ತಿನ್ನುತ್ತಿದ್ದೆವು. ಅಲ್ಲಿನ ದೋಸೆ ಈಗಲೂ ನನ್ನ ಫೇವರೆಟ್. ಹೀಗಾಗಿ, ವಿದ್ಯಾರ್ಥಿ ಭವನದೊಂದಿಗೆ ಒಂದು ರೀತಿಯ ಬೆಸುಗೆ ಉಂಟಾಯಿತು.

ಪದವಿ ಮುಗಿದ ಮೇಲೆ ಎಂ.ಎ.ಗೆ ಸೀಟ್ ಸಿಕ್ಕರೂ ಕೌಟುಂಬಿಕ ಜವಾಬ್ದಾರಿ ಕಾರಣ ಓದಲಾಗಲಿಲ್ಲ. ಚಿಂತಾಮಣಿಯಲ್ಲಿದ್ದುಕೊಂಡೇ ಸಾಹಿತ್ಯ ಸಾಧನೆ ಮಾಡು ಎಂದು ಲಂಕೇಶ್ ಸಲಹೆ ಇತ್ತರು. ಅಲ್ಲಿಯೇ ಇಂಗ್ಲಿಷ್ ಟೀಚರ್ ಆಗಿ ನೇಮಕಕೊಂಡೆ.

ಚಿಂತಾಮಣಿಗೆ ಬಂದ ನಂತರವೂ ಬೆಂಗಳೂರಿನ ಒಡನಾಟ ಕಡಿದು ಹೋಗಲಿಲ್ಲ. ತಿಂಗಳಿಗೆ ಎರಡ್ಮೂರು ಬಾರಿಯಾದರೂ ಬೆಂಗಳೂರಿಗೆ ಬಂದು ಹೋಗುತ್ತಿದ್ದೆ.

ಯಾವಾಗ ಬೆಂಗಳೂರಿಗೆ ಬಂದರೂ ಮೊದಲು ‘ಪ್ರಜಾವಾಣಿ’ ಕಚೇರಿಗೆ ಹೋಗುತ್ತಿದ್ದೆ. ಆ ಪತ್ರಿಕೆಯೊಂದಿಗಿನ ನನ್ನ ಒಡನಾಟ 50 ವರ್ಷದ್ದು. ನನ್ನನ್ನು ಕವಿಯಾಗಿ ನಾಡಿಗೆ ಪರಿಚಯಸಿದ್ದೇ ‘ಪ್ರಜಾವಾಣಿ’.

ಆಗ ಬ್ರಿಗೇಡ್ ರಸ್ತೆಯಲ್ಲಿ ಪೂರ್ತಿ ಇಂಗ್ಲಿಷ್ ವಾತಾವರಣವಿತ್ತು. ಹೋಟೆಲ್‌ಗಳಿಗೆ ಹೋದರೆ ಅಲ್ಲಿನ ವೇಟರ್‌ಗಳು ಇಂಗ್ಲಿಷಿನಲ್ಲಿಯೇ ಮಾತನಾಡಿಸುತ್ತಿದ್ದರು. ಆಗ ನಾವೆಲ್ಲಾ ಗೆಳೆಯರು ವೇಟರ್‌ನನ್ನು ಕರೆದು ‘ಏ ಬಾರಯ್ಯಾ, ಕನ್ನಡದಲ್ಲೇ ಮಾತನಾಡಯ್ಯಾ’ ಎಂದು ಛೇಡಿಸುತ್ತಿದ್ದೆವು.

ನಾನು ಬೆಂಗಳೂರನ್ನು ಕಬಂಧಾಸುರ ಎನ್ನುತ್ತೇನೆ. ಆ ಹೆಸರಿನಲ್ಲಿ ಪದ್ಯವನ್ನೂ ಬರೆದಿದ್ದೇನೆ.

ಋಷಿಯೊಬ್ಬನ ಶಾಪದಿಂದಾಗಿ ಗಂಧರ್ವನೊಬ್ಬ ಕಬಂಧ ಎಂಬ ಅಸುರನಾಗುತ್ತಾನೆ. ಅವನ ದೇಹವೇ ವಿಚಿತ್ರವಾಗಿರುತ್ತದೆ. ಅವನಿಗೊಂದು ದೊಡ್ಡಹೊಟ್ಟೆ. ಅದಕ್ಕೊಂದು ದೊಡ್ಡಬಾಯಿ, ಆ ಕಬಂಧಾಸುರ ತನ್ನ ಎರಡು ತೋಳು ಚಾಚಿ ತನಗೆ ಸಿಕ್ಕಿದ್ದನ್ನೆಲ್ಲಾ ತನ್ನ ಬಾಯಿಗೆ ಹಾಕಿಕೊಳ್ಳುತ್ತಾನೆ. ಬೆಂಗಳೂರಿನ ಸ್ಥಿತಿಯೂ ಈಗ ಕಂಬಂಧಾಸುರನಂತೆ ಆಗಿದೆ.

ಬೆಂಗಳೂರಿನ ಬಗ್ಗೆ ಏನೇ ತಕರಾರು ಇದ್ದರೂ, ಈ ನಗರಕ್ಕೆ ನಾನು ಕೃತಜ್ಞನಾಗಿದ್ದೇನೆ. ಆದರೆ, ಕಬಂಧಾಸುರನಿಗೆ ಹೇಗೆ ಶಾಪ ವಿಮೋಚನೆಯಾಯಿತೋ ಹಾಗೇ ನಮ್ಮ ಬೆಂಗಳೂರಿಗೂ ಶಾಪ ವಿಮೋಚನೆ ಆಗಬಹುದೆಂಬ ನಿರೀಕ್ಷೆ ನನ್ನದು.

ಸಾಗಿಬಂದ ಹಾದಿ

ಜನನ: 09ನೇ ಸೆಪ್ಟಂಬರ್, 1946

ಪರಿಚಯ: ಬೆಂಗಳೂರಿನ ಸಾಂಸ್ಕೃತಿಕ ವಲಯದಲ್ಲಿ ಸದಾ ಕ್ರಿಯಾಶೀಲರಾಗಿರುವ ಕವಿ ಬಿ.ಆರ್.ಲಕ್ಷ್ಮಣರಾವ್ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ತೊಡಗಿಸಿಕೊಂಡವರು. ಅವರ ಕಾವ್ಯದಲ್ಲಿರುವ ತುಂಟತನ, ಗಟ್ಟಿತನ, ಮತ್ತು ಗಾಂಭೀರ್ಯ ಸಹೃದಯರ ಮನಗೆದ್ದಿದೆ. ಪ್ರೀತಿ, ಪ್ರೇಮ, ಪ್ರಣಯ, ವಿರಹದ ಭಾವಗಳಿಗೆ ಬಿಆರ್‌ಎಲ್ ನೀಡಿರುವ ಕಾವ್ಯಸ್ವರೂಪ ವಿಶಿಷ್ಟ. ಅನೇಕ ಧಾರಾವಾಹಿಗಳಿಗೂ ಶೀರ್ಷಿಕೆ ಗೀತೆಗಳನ್ನು ಬರೆದಿದ್ದಾರೆ.

ಗುರುಗಳಾದರು...

ಲಂಕೇಶ್ ಅವರ ಒಡನಾಟದಲ್ಲಿ ನನಗೆ ಆಗಿನ ಕನ್ನಡ ಸಾಹಿತ್ಯದ ನವ್ಯ ಪರಿಸರದ ಪರಿಚಯವಾಯಿತು. ಅನೇಕ ಮುಖ್ಯ ಲೇಖಕರು ಪರಿಚಯವಾಗಲು ಲಂಕೇಶ್ ಕಾರಣರಾದರು. ಅವರ ಮೂಲಕವೇ ವೈಎನ್ಕೆ ಪರಿಚಯವೂ ಆಯಿತು.

ಒಮ್ಮೆ ಲಂಕೇಶ್ ‘ಬಾರಯ್ಯ ‘ಪ್ರಜಾವಾಣಿ’ಗೆ ಹೋಗೋಣ’ ಅಂದರು. ಆಯಿತು ಎಂದು ಹೋದೆ. ಆಗ ವೈಎನ್ಕೆ ಅಲ್ಲಿ ಸುದ್ದಿ ಸಂಪಾದಕರಾಗಿದ್ದರು. ಅಲ್ಲಿಗೆ ಹೋದ ಮೇಲೆ ‘ಗುಂಡು ಹಾಕೋಣವೇ’ ಎಂದು ವೈಎನ್ಕೆ ಮತ್ತು ಲಂಕೇಶ್ ಮಾತಾಡಿಕೊಂಡರು. ಆಗ ಬ್ರಿಗೇಡ್ ರೋಡ್‌ನಲ್ಲಿ ಬ್ರಿಸ್ ಅಂತ ಬಾರ್ ಇತ್ತು. ಅಲ್ಲಿಗೆ ಹೋಗಲು ನಿರ್ಧರಿಸಿದರು. ಆದರೆ, ವೈಎನ್ಕೆ ‘ಈ ಹುಡುಗ ಇದ್ದಾನಲ್ಲ’ ಎಂದು ಕೇಳಿದರು. ಆಗ ಲಂಕೇಶ್ ‘ಏಯ್ ಲಕ್ಷ್ಮಣ ಗುಂಡು ಹಾಕ್ತೀಯಾ’ ಎಂದು ಕೇಳಿದರು.

ನನಗದರ ಪರಿಚಯವಿರಲಿಲ್ಲ. ಆಗ ವೈಎನ್ಕೆ ನನ್ನನ್ನು ತಮಾಷೆ ಮಾಡಿ ‘ಓ.. ಇವನಿಗೆ ಓನಾಮದಿಂದ ಶುರು ಮಾಡಬೇಕಲ್ಲ’ ಎಂದರು. ಹೀಗೆ ಲಂಕೇಶ್, ವೈಎನ್ಕೆ ಅವರು ನನಗೆ ಸಾಹಿತ್ಯಕ್ಕೆ ಗುಂಡಿಗೆ ಆದ್ಯ ಗುರುಗಳಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.