ಧಾರವಾಡ: ‘ನಾನು ನಾನಾಗಿ ಇರಲು ಸಾಹಿತ್ಯದ ಓದು ಕಾರಣ’ ಎಂದು ನಟ ರಮೇಶ್ ಅರವಿಂದ್ ಅವರು ಸಾಹಿತ್ಯದ ಜತೆಗಿನ ತಮ್ಮ ನಂಟನ್ನು ಭಾನುವಾರ ಇಲ್ಲಿ ತೆರೆದಿಟ್ಟರು.

‘ಸಂವಾದ’ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನನ್ನ ತಲೆ ಖಾಲಿ ಎನಿಸಿದಾಗ ದ.ರಾ.ಬೇಂದ್ರೆ, ಗೋಪಾಲಕೃಷ್ಣ ಅಡಿಗ, ಆರ್.ಕೆ. ನಾರಾಯಣ್ –ಹೀಗೆ ಹಲವು ಸಾಹಿತಿಗಳ ಪುಸ್ತಕದಲ್ಲಿನ ನಾಲ್ಕು ಸಾಲುಗಳನ್ನು ಓದಿದರೂ ಸಾಕು ನನ್ನ ಚಿತ್ರೀಕರಣಕ್ಕೆ, ನಟನೆಗೆ ಸಾಕಷ್ಟು ಅಂಶಗಳು ಸಿಗುತ್ತವೆ’ ಎಂದರು.

‘ನಾನು ಗೌರವಿಸುವ ಎಲ್ಲಾ ಸಾಹಿತಿಗಳು ಇಲ್ಲಿ ನೆರೆದಿದ್ದೀರಿ. ನಿಮ್ಮ ಪುಸ್ತಕಗಳ ಓದಿನಿಂದ ಸಾಕಷ್ಟು ವಿಷಯಗಳನ್ನು ಗ್ರಹಿಸಿದ್ದೇನೆ. ನಾನು ಯೋಚನೆ ಮಾಡುವ, ಪಾತ್ರಗಳನ್ನು ಸ್ವೀಕರಿಸುವ ರೀತಿಗೆ ನನ್ನಲ್ಲಿರುವ ಅಲ್ಪಸ್ವಲ್ಪ ಸಾಹಿತ್ಯದ ಒಲವು ಸಹಾಯ ಮಾಡಿದೆ’ ಎಂದು ಹೇಳಿದರು.

‘ಮುಂದ’ ನನ್ನ ಜೀವನದ ಮೂಲಮಂತ್ರ: ‘ಮುಂದ ಎನ್ನುವುದೇ ಧಾರವಾಡ-ಹುಬ್ಬಳ್ಳಿ ಜತೆ ಇರುವ ನನ್ನ ಮೊದಲ ನಂಟು. ‘ರಾಮ ಶಾಮ ಭಾಮ’ ಚಿತ್ರದ ಬಳಿಕ ಎಲ್ಲಿ ಹೋದರೂ ಈಗಲೂ ಜನರು, ’ಮುಂದ’ ಎಂದೇ ಕೇಳುತ್ತಾರೆ. ಈ ಪದ ನನ್ನ ಜೀವನದ ಮೂಲಮಂತ್ರ ಸಹ ಹೌದು. ಎಲ್ಲರಿಗೂ ಅದು ಅತ್ಯುತ್ತಮ ಮೂಲಮಂತ್ರವಾಗುತ್ತದೆ’ ಎಂದರು.

‘ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಕ್ರೇಜಿ ಕುಟುಂಬ ಚಿತ್ರದಲ್ಲಿ ಈ ಭಾಗದ ಹಲವು ಕಲಾವಿದರಿಗೆ ಅವಕಾಶ ನೀಡಿದ್ದೆ. ಚಿತ್ರರಂಗದ ಕೇಂದ್ರಸ್ಥಾನ ಬೆಂಗಳೂರು ಆಗಿರುವುದರಿಂದ ತಾಂತ್ರಿಕ ಕಾರಣಗಳಿಂದಾಗಿ ಕೆಲವು ಸಮಸ್ಯೆಗಳಿವೆ ಅಷ್ಟೆ. ಅದ್ಭುತ ವೇದಿಕೆಗಾಗಿ ಕಾಯುತ್ತಾ ಕೂರಬೇಡಿ. ಸಿಕ್ಕ ಅವಕಾಶಗಳಲ್ಲಿ ನಿಮ್ಮನ್ನು ಅದ್ಭುತವಾಗಿ ಪ್ರಸ್ತುತಪಡಿಸಿಕೊಳ್ಳಿ’ ಎಂದು ಹೇಳಿದರು.

ಕಮಲ್ ಹಾಸನ್ ಪ್ರಭಾವ: ಸಂವಾದದಲ್ಲಿ ಸಭಿಕರು ರಮೇಶ್ ಅವರಿಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ‘ನಿಮಗಿಂತ ಹಿರಿಯರಾದ ನಟ ಕಮಲ್ ಹಾಸನ್ ಅವರ ಚಿತ್ರ ನಿರ್ದೇಶಿಸುವಾಗ ನಿಮ್ಮ ಅನುಭವ ಹೇಗಿತ್ತು’ ಎಂಬ ಪ್ರಶ್ನೆಗೆ, ‘ಕಮಲ್ ನನ್ನ ಮೇಲೆ ಪ್ರಭಾವ ಬೀರಿರುವ ನಟ ಎಂಬುದು ಸತ್ಯ. ಅವರ ಅಭಿನಯ ಸಾಮರ್ಥ್ಯ ಅದ್ಭುತವಾದದ್ದು. ಅವರಿಗೆ ಸೂಚನೆ ನೀಡುವ ಅಗತ್ಯವೇ ಇಲ್ಲ. ಆದರೂ ನಿರ್ದೇಶಕನಾಗಿ ಕೆಲವು ಸೂಚನೆಗಳನ್ನು ಅವರಿಗೆ ನೋವಾಗದಂತೆ ನೀಡಿದ್ದೆ’ ಎಂದು ರಮೇಶ್ ಉತ್ತರಿಸಿದರು.

ಪತ್ರಕರ್ತ ಗೌರೀಶ್ ಅಕ್ಕಿ ಸಂವಾದ ನಡೆಸಿಕೊಟ್ಟರು.

ಆನ್‌ಲೈನ್ ಮೂಲಕ ಸಂವಾದ ವೀಕ್ಷಣೆ: ರಮೇಶ್ ಸಂವಾದವನ್ನು ದೇಶ ವಿದೇಶಗಳ ಸಾವಿರಾರು ಜನ ಆನ್‌ಲೈನ್ ಮೂಲಕ (www.vividlipi.com) ವೀಕ್ಷಣೆ ಮಾಡಿದರು. ಸುಮಾರು 20ಕ್ಕೂ ಹೆಚ್ಚು ಪ್ರಶ್ನೆಗಳನ್ನು ಆನ್‌ಲೈನ್ ಮೂಲಕ ರಮೇಶ್ ಅವರಿಗೆ ಕೇಳಲಾಯಿತು.

‘ಆಕರ್ಷಣೆಯ ಕೇಂದ್ರ ಬಿಂದು’

ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಭಾನುವಾರ ಭಾಗವಹಿಸಿದ್ದ ಚಿತ್ರನಟ ರಮೇಶ್ ಅರವಿಂದ್ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.

ಸಭಾಂಗಣಕ್ಕೆ ಅವರು ಬರುತ್ತಿರುವುದನ್ನು ಕಂಡ ಕ್ಷಣ ಅಭಿಮಾನಿಗಳು ಮುತ್ತಿಕೊಂಡರು. ಅವರನ್ನು ವೇದಿಕೆಗೆ ಕರೆಸಿಕೊಳ್ಳಲು ಸಂಘಟಕರು ಪೊಲೀಸರ ಮೊರೆ ಹೋಗಬೇಕಾಯಿತು.

ಸಭಾಂಗಣ ಕಿಕ್ಕಿರಿದು ತುಂಬಿತ್ತು. ಎಲ್ಲಾ ಆಸನಗಳು ಭರ್ತಿಯಾಗಿ, ಸಭಾಂಗಣದ ಎರಡೂ ಕಡೆಗಳಲ್ಲಿ ಜನರು ನಿಂತುಕೊಂಡೇ ಕಾರ್ಯಕ್ರಮ ವೀಕ್ಷಿಸಿದರು.

ಸಂವಾದ ಮುಗಿದ ಬಳಿಕ ರಮೇಶ್ ಅವರ ಜತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ವೇದಿಕೆ ಏರಿದರು. ಅವರನ್ನು ಕೆಳಗಿಳಿಸಲು ಕೂಡ ಸಂಘಟಕರು ಹರಸಾಹಸಪಟ್ಟರು. ರಮೇಶ್ ಅವರನ್ನು ಕಾರಿನವರೆಗೂ ಹಿಂಬಾಲಿಸಿದ ಹಲವರು ಸೆಲ್ಫಿ ತೆಗೆದುಕೊಂಡರು.

ಪುಸ್ತಕದ ಕಪಾಟು ಸ್ವರ್ಗದ ಬಾಗಿಲು

‘ಐದಾರು ಬಂಗಾರದ ಬಾಗಿಲುಗಳು ತೆರೆದುಕೊಂಡ ಬಳಿಕ ಶ್ರೀನಿವಾಸನ ದರ್ಶನವಾಗುವ ಚಿತ್ರವೊಂದು ವೈಕುಂಠ ಏಕಾದಶಿಯ ದಿನ ವಾಟ್ಸ್‌ಆ್ಯಪ್‌ನಲ್ಲಿ ಬರುತ್ತಿತ್ತು. ನಮ್ಮ ನಿಮ್ಮಂತಹವರಿಗೆ ಅಂತಹ ಬಂಗಾರದ ಬಾಗಿಲು ಪುಸ್ತಕದ ಕಪಾಟುಗಳು ಎನ್ನುವುದು ನನ್ನ ಭಾವನೆ. ಒಂದಾದ ಮೇಲೊಂದು ಪುಸ್ತಕದ ಕಪಾಟುಗಳು ತೆರೆದುಕೊಂಡ ಬಳಿಕ ನಮಗೆ ಸ್ವರ್ಗ, ಕೈಲಾಸ ಕಾಣುತ್ತದೆ’ ಎಂದು ಓದುವಿಕೆಯನ್ನು ರಮೇಶ್ ಬಣ್ಣಿಸಿದರು.

‘ಅಮೆರಿಕಾ ಅಮೆರಿಕಾ’ ಚಿತ್ರದ ‘ಸೂರ್ಯ’ನ ಪಾತ್ರಕ್ಕೂ ನನ್ನ ವ್ಯಕ್ತಿತ್ವಕ್ಕೂ ಸಾಕಷ್ಟು ಸಾಮ್ಯವಿದೆ. ನನಗೆ ಎಂದಿಗೂ ಹೊರದೇಶದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ಅನ್ನಿಸಲೇ ಇಲ್ಲ.

-ರಮೇಶ್ ಅರವಿಂದ್, ನಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.