ಸಾಧಕರು, ಗಣ್ಯರು, ಸಾಹಿತಿಗಳು ಸತ್ತಾಗ ‘ತುಂಬಲಾಗದ ನಷ್ಟ’ ಎಂಬುದು ಆ ನುಡಿಗಟ್ಟಿಗೇ ನಾಚಿಕೆಯಾಗುವಂತೆ ಬಳಕೆಯಾಗುತ್ತದೆ. ಕವಿ ಜಂಬಣ್ಣ ಅಮರಚಿಂತರ ಸಾವು ಕನ್ನಡ ಕಾವ್ಯಲೋಕಕ್ಕೆ ಮತ್ತು ಮನುಷ್ಯ ಪ್ರಪಂಚಕ್ಕೆ ‘ತುಂಬಲಾಗದ ನಷ್ಟ’ ಎಂದರೆ ಈ ನುಡಿಗಟ್ಟು ತನ್ನನ್ನು ಸಾರ್ಥಕವಾಗಿ ಬಳಸಲಾಗಿದೆ ಎಂದು ಸಮಾಧಾನದ ನಿಟ್ಟುಸಿರು ಬಿಡಬಹುದೇನೋ.

ಅಮರಚಿಂತ ಕವಿಯಾಗಿ ಅವರ ಸಮಕಾಲೀನರಿಗಿಂತ ಭಿನ್ನರು. ವ್ಯಕ್ತಿಯಾಗಿ ಕೂಡ ಭಿನ್ನರು. ಕವಿತ್ವ ಮತ್ತು ವ್ಯಕ್ತಿತ್ವ ಅವರ ವಿಷಯದಲ್ಲಿ ಅಭಿನ್ನ. ಈ ದೃಷ್ಟಿಯಿಂದ ಜಂಬಣ್ಣ ಅಮರಚಿಂತರ ಸಾವು ತುಂಬಲಾಗದ ನಷ್ಟ.

ಅಮರಚಿಂತರು ರಾಯಚೂರಿನಲ್ಲಿ ಹುಟ್ಟಿ ಬೆಳೆದವರು. ಎಪ್ಪತ್ತರದ ದಶಕದಲ್ಲಿ ಬಂಡಾಯ-ದಲಿತ ಸಾಹಿತ್ಯ ಚಳವಳಿ ಆರಂಭವಾಯಿತಷ್ಟೆ. ಈ ಬಂಡಾಯ-ದಲಿತ ಚಳವಳಿಯೇ ಕವಿ ಅಮರಚಿಂತರ ಸೃಷ್ಟಿಸಿಕೊಂಡು ಹೆಮ್ಮೆಪಟ್ಟಿತು. ರಾಯಚೂರು ಸೀಮೆಯ ಬದುಕು ಕಾವ್ಯಕ್ಕೆ ಕನ್ನೆನೆಲ ಅಂತಾರಲ್ಲ ಅದು ನಿಜವಾದ ಅರ್ಥದಲ್ಲಿ ಸತ್ಯ. ಪ್ರಭುತ್ವಗಳಿಂದ, ಭೂಮಾಲೀಕರಿಂದ ಕೆಳವರ್ಗದ ಸಮುದಾಯಗಳು ನಿತ್ಯ ಬೆವರಿಳಿಸಿ ನಿಟ್ಟುಸಿರು ಬಿಡುತ್ತಿದ್ದವು. ಇವರ ಬದುಕನ್ನು ಕಾವ್ಯದ ಮೂಲಕ ನೋಡುವುದಕ್ಕೆ ಎಪ್ಪತ್ತರ ದಶಕ ಸಿದ್ಧಗೊಳ್ಳುತ್ತಿತ್ತು. ಈ ಸಂದರ್ಭವೇ ಜಂಬಣ್ಣ ಅಮರಚಿಂತ ಎಂಬ ಕವಿಯನ್ನು ಸೃಷ್ಟಿಸಿತು.

ಅಮರಚಿಂತರ ಕಾವ್ಯದ ಕಣ್ಣೇ ವಿಶಿಷ್ಟವಾದದ್ದು. ಶೋಷಿಸುವ ಶೋಷಣೆಗೆ ಈಡಾಗುವ ಎರಡು ಬಾಳ್ವೆಗಳನ್ನು ಮುಖಾಮುಖಿಯಾಗಿಸಿ ಕಾವ್ಯ ಹೆಣೆಯುವ ಕಣ್ಣು ಅಮರಚಿಂತರದು. ಬೇಟೆಗಾರನ ಕ್ರೌರ್ಯವನ್ನು, ಬೇಟೆಯ ಆರ್ಥನಾದವನ್ನು ಅವರ ಕಾವ್ಯ ಧ್ವನಿಸಿತು. ಬಂಡಾಯ-ದಲಿತ ಚಳವಳಿ ಸಂದರ್ಭದಲ್ಲಿ ಹಸಿದವನ ಸ್ಥಿತಿಯನ್ನು ಕಾವ್ಯದಲ್ಲಿ ಹಿಡಿಯುವ ಪರಿಗೆ ಅಮರಚಿಂತರಿಗೆ ಅಮರಚಿಂತರೆ ಸಾಟಿ.

ಬಹುತೇಕ ಸಾಹಿತಿಗಳಂತೆ ಅವರು ಕಾಲೇಜು ಪ್ರಾಧ್ಯಾಪಕರಲ್ಲ. ಆರೋಗ್ಯ ಇಲಾಖೆಯಲ್ಲಿ ಚಿಕ್ಕ ಹುದ್ದೆಯಲ್ಲಿ ದುಡಿದವರು. ಅಲ್ಲಿ ಅಮರಚಿಂತರು ವಚನಕಾರ ಮರಳುಶಂಕರನಂತೆ ಬದುಕಿ ಇದ್ದವರು. ದಲಿತ ಪರವಾದ ಚಳವಳಿಯಲ್ಲಿ ಸದ್ದಿಲ್ಲದೇ ಪಾಲ್ಗೊಂಡವರು. ವಚನಕಾರರಂತೆ ಚಳವಳಿಯ ಭಾಗವಾಗಿ ಕಾವ್ಯವನ್ನು ಕಟ್ಟಿದವರು. ಅವರ ಕಾವ್ಯ ಎಂದೂ ಧ್ವನಿಯನ್ನು ತಗ್ಗಿಸಿಕೊಳ್ಳಲಿಲ್ಲ. ತಮ್ಮ ಕಾವ್ಯ ಮೊನಚನ್ನು ಕಳೆದು ಕೊಳ್ಳದಂತೆ ಅದಕ್ಕೆ ಬೇಕಾದ ಸತ್ವವನ್ನು ತುಂಬಿಕೊಳ್ಳಲು ಅನೇಕ ಹೊಸದಾರಿಗಳನ್ನು ಕಂಡುಕೊಳ್ಳುತ್ತಲೆ ಇದ್ದರು.

ತೆಲುಗಿನ ಪ್ರತಿಭಟನಾ ಕಾವ್ಯವನ್ನು ಓದಿಕೊಂಡರು. ತಮ್ಮ ಕಾವ್ಯದ ರೂಪಗಳನ್ನು ಬದಲಿಸಿಕೊಳ್ಳುತ್ತ ಭಿನ್ನವಾಗುತ್ತ ಸಾಗಿಬಂದರು. ಉರ್ದು ಕಾವ್ಯದ ಪ್ರೇರಣೆಯಿಂದ ಗಜಲ್‌ಗಳನ್ನು ರಚಿಸಿದರು. ಮಧುರ ರಮ್ಯ ಕೇಂದ್ರಿತವಾಗಿದ್ದ ಗಜಲ್ ರೂಪವನ್ನು ಬಳಸಿ ಪ್ರತಿಭಟನಾ ಕಾವ್ಯವನ್ನೇ ಅಭಿವ್ಯಕ್ತಿಸಿದರು. ಈಚೆಗೆ ಅವರ ಕಾವ್ಯ ಹಲವು ಪ್ರಯೋಗಗಳಲ್ಲಿ ಮುನ್ನಡೆಯಿತು. ನಾಲ್ಕು ಸಾಲುಗಳ ಪದ್ಯ, ಎರಡು ಸಾಲುಗಳ ಪದ್ಯಗಳನ್ನು ಬರೆದರು. ಈ ಎಲ್ಲಾ ಕಾವ್ಯದಲ್ಲಿ ಬದುಕಿನ ತತ್ವವನ್ನು ಸಾತ್ವಿಕ ಧ್ವನಿಯಲ್ಲಿ ಹೇಳತೊಡಗಿದರು. ಇಲ್ಲಿಯೂ ಅವರ ಕಾವ್ಯದ ಕೇಂದ್ರದ ವಸ್ತು ಶೋಷಿತ ಮನುಷ್ಯ. ಮೃಗತ್ವವನ್ನು ಮನುಷ್ಯ ಮರೆತು ಮಾನವೀಯತೆಯನ್ನು ಮೈಗೂಡಿಸಿಕೊಳ್ಳುವ ನೆಲೆಯಲ್ಲಿ ಕಾವ್ಯವನ್ನು ರಚಿಸಿದರು. ಕಾವ್ಯ ಹಿಡಿಯಲಾರದ ಬದುಕನ್ನು ಚಿತ್ರಿಸಲು ಕಾದಂಬರಿ ಪ್ರಕಾರಕ್ಕೆ ಕೈಯಾಕಿದರು ‘ಕುರುಮಯ್ಯ ಮತ್ತು ಅಂಕುಶದೊಡ್ಡಿ’ ಮತ್ತು ‘ಬೂಟುಗಾಲಿನ ಸದ್ದು’ ಎಂಬ ಎರಡು ಕಾದಂಬರಿಗಳನ್ನು ಬರೆದರು.

ಅಮರಚಿಂತರ ಕಾವ್ಯದ ಧೋರಣೆ ಇದಾಗಿತ್ತು; ‘‘ನಾನು ಸದಾ ಬೇಟೆಯ ಜೊತೆಗಿದ್ದೇನೆ. ಬೇಟೆಗಾರನ ಜೊತೆಯಲ್ಲ” ಇಲ್ಲಿ ಬೇಟೆಗಾರನ ಕ್ರೌರ್ಯವನ್ನು ಮತ್ತು ಬೇಟೆಯ ನೋವನ್ನು ಮುಖಾಮುಖಿ ಮಾಡುವ ಕೆಲಸವನ್ನು ಅವರ ಕಾವ್ಯ ನಿರಂತರ ಮುಂದುವರೆಸಿತು. ಅವರು ಕೇಳುವ ಇನ್ನೊಂದು ಪ್ರಶ್ನೆ ಹೀಗಿದೆ: “ರಕ್ತಸಿಕ್ತ ಖಡ್ಗ ನಿಮ್ಮ ಒರೆಯಲ್ಲಿ. ಹಂತಕರು ಯಾರೆಂದು ಮತ್ತೆ ಕೇಳುವಿರಿ. ಬಿತ್ತುವ ಬೀಜ ನಿಮ್ಮ ಉಗ್ರಾಣದಲ್ಲಿ. ಬೆಳೆಯಾಕೆ ಬರಲಿಲ್ಲೆಂದು ಮತ್ತೆ ಕೇಳುವಿರಿ” ವಿರೋಧಿಯನ್ನು ಪ್ರಶ್ನಿಸುವ ಈ ನೆಲೆ ಜಂಬಣ್ಣ ಅವರ ಚಿಂತನೆಗೆ ಮಾತ್ರ ಸಾಧ್ಯ.

ಹಸಿವಿನ ಸ್ಥಿತಿಯನ್ನು ಅಮರಚಿಂತರು ಕೇವಲ ಎಂಟು ಪದಗಳಲ್ಲಿ ಹಿಡಿದಿದ್ದಾರೆ. “ರೊಟ್ಟಿ ವಿಸ್ತಾರದಲ್ಲಿ ಭೂಮಿಗಿಂತ ಮಿಗಿಲು. ಇದರ ಎತ್ತರ ಎವರೆಸ್ಟಿಗೂ ದಿಗಿಲು” ಹೀಗೆ ಅಮರಚಿಂತರ ಲೋಕವನ್ನು ನೋಡುವ ಗ್ರಹಿಕೆ ವಿಶಿಷ್ಟವಾದದ್ದು.

ಸ್ಥೂಲ ಶರೀರದ ಅಮರಚಿಂತರ ಆರೋಗ್ಯ ಒಂದು ವರ್ಷದಿಂದ ಅಷ್ಟು ಸರಿಯಿರುತ್ತಿರಲಿಲ್ಲ. ಅದಕ್ಕೆ ಅವರೇನೂ ಚಿಂತಿತರಾಗಿರಲಿಲ್ಲ. ಅವರಿಗಿರುವ ಒಂದೇ ಚಿಂತೆ ಕಾವ್ಯ ರಚನೆಯದ್ದು. ಉತ್ತಮ ಕಾವ್ಯ ರಚಿಸಬೇಕೆಂಬ ಹಂಬಲದಿಂದ ಎಂದೂ ದೂರ ಸರಿದಿರಲಿಲ್ಲ. ಅಸಮಾನತೆಯ ಸಮಾಜದ ಬೇರುಗಳನ್ನು ಶೋಧಿಸಿ, ಅದರ ಎಳೆಎಳೆಯನ್ನು ಅರಿಯುವ, ಅಭಿವ್ಯಕ್ತಿಸುವ ತುಡಿತ ಇನ್ನೂ ಜೀವಂತವಾಗಿಯೇ ಇಟ್ಟುಕೊಂಡಿದ್ದರು. ಈಚೆಗೆ ಉದ್ದುದ್ದದ ಕವನ ಬರೆಯುವುದು ಬಿಟ್ಟರು. ಕಾವ್ಯದ ಪ್ರಕಾರ ಬದಲಿಸಿಕೊಂಡರು.
ನಿಜಾಮರ ಪ್ರಾಂತ್ಯದಲ್ಲಿ ಹುಟ್ಟಿ ಬೆಳೆದಿದ್ದರಿಂದ, ಹೈದರಾಬಾದ್ ಸಂಸ್ಥಾನದಲ್ಲಿ ಗಟ್ಟಿಯಾಗಿ ಬೇರೂರಿದ್ದ ಉರ್ದು ಮತ್ತು ತೆಲುಗು ಭಾಷೆಗಳಲ್ಲಿನ ಕಾವ್ಯ ಪ್ರಕಾರಗಳನ್ನು ಓದಿಕೊಂಡು ಅದನ್ನು ಕನ್ನಡದಲ್ಲಿ ಪ್ರಯೋಗ ಮಾಡತೊಡಗಿದರು.

ಗಜಲ್, ರುಬಾಯಿ, ಖಿತಾ ಮುಂತಾದ ಕಾವ್ಯ ಪ್ರಕಾರಗಳಲ್ಲಿ ತಮ್ಮ ಚಿಂತನೆಗಳನ್ನು ಅಭಿವ್ಯಕ್ತಿಸಿದರು. ಈ ಕಾವ್ಯ ಪ್ರಕಾರಗಳು ಮೂಲದಲ್ಲಿ ಯಾವ ವಸ್ತುವಿನ ಅಭಿವ್ಯಕ್ತಿಗಾಗಿ ಹುಟ್ಟಿದವು, ಯಾವ ಕಾರಣಗಳಿಗೆ ರಚನೆಗೊಂಡವು ಎಂಬುದನ್ನು ತಿಳಿದೂ, ಅದನ್ನು ಬದಿಗಿಟ್ಟು ತಮ್ಮ ಸಂವೇದನೆಗೆ ಅದನ್ನು ಬಳಸಿದರು. ಅದಕ್ಕೆ ಬೇಕಾದ ವ್ಯಾಕರಣ ಅಧ್ಯಯನ ಮಾಡಿದರು. ಓದುವ ಕಾವ್ಯವನ್ನೇ ಬರೆದರು. ನಿಶ್ಯಬ್ದದೊಳಗೇ ಸದ್ದು ಕೇಳಿಸುವಂತೆ ಬರೆಯುತ್ತಿದ್ದ ಅಮರಚಿಂತರು ಈ ಹೊಸ ಕಾವ್ಯ ಪ್ರಕಾರಗಳಲ್ಲಿ ಕಲ್ಯಾಣದ ಕಾರುಣ್ಯವನ್ನೇ ಅಭಿವ್ಯಕ್ತಿಸಿದರು.

ಅಮರಚಿಂತರ ಕಾವ್ಯದ ದನಿ ಎಂದೂ ಅಬ್ಬರದಿಂದ ಕೂಡಿರಲಿಲ್ಲ. ಅವರು ತಮ್ಮ ಕವಿತೆಯನ್ನು ಚಮತ್ಕಾರದಿಂದ ಓದುತ್ತಿರಲಿಲ್ಲ. ಓದಿ ಕೇಳುಗರನ್ನು ಬೆಚ್ಚಿ ಬೀಳಿಸಬೇಕೆಂಬ ಚೂರು ಹಂಬಲ ಅವರಿಗಿರಲಿಲ್ಲ. ಕೇಳಿಸಿಕೊಳ್ಳುವ ಮನಸ್ಸಿಗೆ ತಣ್ಣಗೆ ಬಡಿದು ಕುಂತು, ಕಿಚ್ಚು ಹೊತ್ತಿಸುತ್ತಿದ್ದವು. ಅವರ ಕವಿತೆಗಳು, ಅವರು ಬರೆದ ಹಾಡುಗಳೂ ಅಷ್ಟೆ. ಅಮರಚಿಂತರು ಎಲ್ಲದರೊಳಗಿದ್ದು, ಇಲ್ಲದಂತಿರುವ ಗುಣದಿಂದ ಪರಿಚಿತರು. ಒಳ್ಳೆಯ ಕವಿತಾ ಗುಣವಿರುವ ಯಾರನ್ನೂ ಮಾತಾಡಿಸಿ, ಅವರ
ಸ್ನೇಹ ಬಯಸಿ ಕಾವ್ಯಸಂವಾದ ನಡೆಸಲು ಹಂಬಲಿಸುವ ಅವರ ಗುಣವನ್ನು ಎಲ್ಲರೂ ಕಂಡಿದ್ದಾರೆ. ಅವರ ಆರೋಗ್ಯವನ್ನು ವಿಚಾರಿಸಲು ಹೋದವರ ಜೊತೆ ತಮ್ಮ ದೇಹಸ್ಥಿತಿಯನ್ನು ಕುರಿತು ಒಂದೂ ಮಾತಾಡುತ್ತಿರಲಿಲ್ಲ. ಬದಲಾಗಿ ಈಗ ಕನ್ನಡದಲ್ಲಿ ಯಾರು ಚೆನ್ನಾಗಿ ಬರೆಯುತ್ತಿದ್ದಾರೆ. ಅವರ ಕಾವ್ಯವನ್ನು ನಾನು ಓದಬೇಕು ಎಂದು ಹಂಬಲಿಸುತ್ತಿದ್ದರು. ಕೊನೆವರೆಗೂ ಕಾವ್ಯದ ಗುಂಗಿನಲ್ಲಿಯೇ ಉಳಿದು ಕೊನೆಯುಸಿರೆಳೆದರು.

‘ಅಮರಚಿಂತ’ ಎಂಬ ಹೆಸರೇ ಚಂದ. ಅವರ ನಗು ಇನ್ನೂ ಚಂದ. ನಿಶ್ಯಬ್ದ ಅವರ ವ್ಯಕ್ತಿತ್ವದ ಭಾಗವಾಗಿತ್ತು. ಕನ್ನಡ ವಿಮರ್ಶೆಯಲ್ಲಿ ಅಮರಚಿಂತರ ಸದ್ದು ಇಲ್ಲ. ಇಂತಹ ಕವಿಯನ್ನು ಇನ್ನು ಮೇಲಾದರೂ ಎಲ್ಲಾ ಸಿದ್ಧಾಂತಗಳನ್ನು ಮರೆತು ಓದುವುದನ್ನು ಕಲಿಯಬೇಕಾಗಿದೆ. ಯುವಪೀಳಿಗೆ ಅಮರಚಿಂತರ ಕಾವ್ಯವನ್ನು
ಓದುವ ಹವ್ಯಾಸ ಬೆಳೆಸಿಕೊಂಡರೆ ಅದೇ ಈ ಕವಿಗೆ ಸಲ್ಲಿಸುವ ಗೌರವವಾದೀತು.

(ಲೇಖಕರು ಕಥೆಗಾರರು)

ಹಿರಿಯ ಕವಿ ಅಮರಚಿಂತ ಇನ್ನಿಲ್ಲ

ರಾಯಚೂರು: ಬಂಡಾಯ ಸಾಹಿತ್ಯದ ಮುಂಚೂಣಿಯಲ್ಲಿದ್ದ ಹಿರಿಯ ಕವಿ ಜಂಬಣ್ಣ ಅಮರಚಿಂತ (73) ಮಂಗಳವಾರ ಮುಂಜಾನೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರಿಗೆ ಉಸಿರಾಟ ತೊಂದರೆ ಕಾಣಿಸಿಕೊಂಡಿತು. ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಇಲಾಖೆಯಲ್ಲಿ ಪತ್ರಾಂಕಿತ ಅಧಿಕಾರಿಯಾಗಿ ನಿವೃತ್ತರಾಗಿದ್ದ ಜಂಬಣ್ಣ, ಅವರಿಗೆ ಪತ್ನಿ ರಾಮಲಿಂಗಮ್ಮ, ಪುತ್ರರಾದ ರಾಜಶೇಖರ, ರವಿ, ಪುತ್ರಿ ಶಾರದಾ ಇದ್ದಾರೆ.

ಪಾರ್ಥಿವ ಶರೀರವನ್ನು ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ನಗರಕ್ಕೆ ತರಲಾಯಿತು. ಸಾಹಿತಿಗಳು, ಹೋರಾಟಗಾರರು, ರಾಜಕೀಯ ಧುರೀಣರು ಅಂತಿಮ ದರ್ಶನ ಪಡೆದರು. ಹೊರವಲಯದ ಅಸ್ಕಿಹಾಳದ ಬಳಿ ಇರುವ ಸ್ವಂತ ಜಮೀನಿನಲ್ಲಿ ಮಂಗಳವಾರ ಸಂಜೆ ಅಂತ್ಯಕ್ರಿಯೆ ನಡೆಯಿತು.

ಜಂಬಣ್ಣ ಅಮರಚಿಂತರ ಬಗ್ಗೆ ರಚನೆಯಾದ ಕೃತಿ: ಮಡಿವಾಳ ಮಾಚಿತಂದೆ, ಅಮರಚಿಂತ ಅಭಿನಂದನಾ ಗ್ರಂಥ

ಪ್ರಶಸ್ತಿಗಳು: ಇವರಿಗೆ ರಾಜ್ಯೋತ್ಸವ ಪ್ರಶಸ್ತಿ (2002) ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2007) ಮಂತ್ರಾಲಯ ಮಠದಿಂದ ಸುಧೀಂದ್ರ ಸಾಹಿತ್ಯ ಶ್ರೀ ಪ್ರಶಸ್ತಿ, (2010) ತರಾಸು ಸಾಹಿತ್ಯ ಪ್ರಶಸ್ತಿ (1994), ಕಾಗಿನೆಲೆ ಪೀಠದ ಕನಕಸಿದ್ಧಿ ಶ್ರೀ ಪ್ರಶಸ್ತಿ (2010), ಬೋಳಬಂಡೆಪ್ಪ ಸಾಹಿತ್ಯ ಪ್ರಶಸ್ತಿ (2015), ಸಂಗೊಳ್ಳಿ ರಾಯಣ್ಣ ಪ್ರಶಸ್ತಿ (2016) ಸಂದಿವೆ.

ಅಮರಚಿಂತರ ಬರಹಗಳು ಕಾವ್ಯ
ಮುಂಜಾವಿನ ಕೊರಳು
ಅಧೋಜಗತ್ತಿನ ಅಕಾವ್ಯ
ಮಣ್ಣಲ್ಲಿ ಬೀರಿದ ಅಕ್ಷರ
ಅಮರಚಿಂತ ಕಾವ್ಯ
ಪದಗಳು ನಡೆದಾಡುತ್ತಿವೆ ಪಾದಗಳಾಗಿ ಗಜಲ್
ಮುಳ್ಳಿನ ಬಾಯಲ್ಲಿ ಹೂ ನಾಲಿಗೆ
ಬಾಧೆಯ ವೃಕ್ಷದಲ್ಲಿ ಬೋಧಿಯ ಪರಿಮಳ ಕಾದಂಬರಿ
ಕುರುಮಯ್ಯ ಮತ್ತು ಅಂಕುಶದೊಡ್ಡಿ
ಬೂಟುಗಾಲಿನ ಸದ್ದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.