ಅಡುಗೆಮನೆಯಲ್ಲಿ ಏನೆಲ್ಲ ಬದಲಾವಣೆಗಳಾಗಿವೆ ಗಮನಿಸಿದ್ದೀರಾ?
ಮಲಗುವ ಕೋಣೆಯಲ್ಲಿ ಆಧುನಿಕತೆಯ ಗಾಳಿ ಸುಳಿದಿದೆ. ಸ್ನಾನದ ಕೋಣೆ, ಓದುವ ಕೊಠಡಿ, ಪಡಸಾಲೆ, ಸಂಡಾಸು – ಎಲ್ಲೆಲ್ಲೂ ಬದಲಾವಣೆ ಆಗಿರುವಾಗ, ಅಡುಗೆಮನೆ ಮಾತ್ರ ಇದ್ದಂತೆ ಇರಲು ಹೇಗೆ ಸಾಧ್ಯ ಎನ್ನುವಿರಾ? ಹೌದು, ಮನೆಯೆನ್ನುವ ಮನೆ ಇಡಿಯಾಗಿ ರೂಪಾಂತರಕ್ಕೆ ತನ್ನನ್ನು ಒಡ್ಡಿಕೊಳ್ಳುತ್ತಿದೆ. ಇವೆಲ್ಲವೂ ಭೌತಿಕ ಬದಲಾವಣೆಗಳ ಮಾತಾಯಿತು. ಆದರೆ, ಅಡುಗೆಮನೆಯ ವಿಷಯ ಹಾಗಲ್ಲ – ಅದು ಅಂತರಂಗಕ್ಕೂ ಸಂಬಂಧಿಸಿದ್ದು.

ಹಾಗಾಗಿಯೇ ಅಡುಗೆಕೋಣೆಯಲ್ಲಿನ ಬದಲಾವಣೆಗಳಿಗೆ ಬೇರೆಯದೇ ಮಹತ್ವ ಇದೆ. ಅಡುಗೆಮನೆ ಎನ್ನುವುದು ಹೆಸರಿನಲ್ಲೇ ಇರುವ ‘ಅಡುಗೆ’ ಸಿದ್ಧಗೊಳ್ಳಲು ಸಂಬಂಧಿಸಿದ ಸ್ಥಳ ಎನ್ನುವುದಾದರೆ, ಅದು ಮೇಲ್ನೋಟದ ವಿವರಣೆ ಮಾತ್ರ.

ನೆನಪಿಸಿಕೊಳ್ಳಿ: ಅಡುಗೆಮನೆ ಜೊತೆಗೆ ಅಮ್ಮ ನೆನಪಾಗುವುದಿಲ್ಲವೇ? ಇದು ಅಮ್ಮನ ತೀರಾ ಏಕಾಂತಕ್ಕೆ ಒದಗಿಬರುತ್ತಿದ್ದ ಸ್ಥಳ. ಕುಟುಂಬಕ್ಕೆ ಸಂಬಂಧಿಸಿದ ಏನೆಲ್ಲ ಒಳಗುದಿಗಳಿಗೂ ತವಕತಲ್ಲಣಗಳಿಗೂ ಅಮ್ಮ ನಿರಾಳತೆ ಕಂಡುಕೊಳ್ಳುತ್ತಿದ್ದುದು ಇಲ್ಲಿಯೇ. ಒಲೆಯ ಉರಿ, ಉರಿಯಿಂದ ರೂಪುಗೊಳ್ಳುತ್ತಿದ್ದ ಕಪ್ಪು, ಒಗ್ಗರಣೆಯ ಘಮ, ಮಸಾಲೆಯ ಘಾಟು – ಇವೆಲ್ಲವುಗಳೂ ಅಮ್ಮನ ಮನಸ್ಸಿನೊಳಗಿನ ಭಾವಸಂಚಾರಕ್ಕೂ ರೂಪಕಗಳಾಗಿ ಒದಗಿಬರುತ್ತಿದ್ದವು. ಸಾಸುವೆ ಡಬ್ಬಿ ಹುಂಡಿಯಾಗುತ್ತಿತ್ತು.

ಅಕ್ಕಿ ಕೊಳಗದ ತಳದಲ್ಲಿ ನಗ–ನಗದಿನ ಪುಟ್ಟ ಗಂಟೊಂದು ಬೆಚ್ಚಗಿರುತ್ತಿತ್ತು. ಕೋಣೆಯ ಪಾಲಿಗೆ ಆಭರಣಗಳಂತೆ ಕಾಣಿಸುತ್ತಿದ್ದ ತಟ್ಟೆ–ಲೋಟ–ಪಾತ್ರೆಗಳು ಅಮ್ಮನ ಕಸುಬುದಾರಿಕೆಯ ಫಲಾನುಭವಿಗಳಂತೆ ಕಂಗೊಳಿಸುತ್ತಿದ್ದವು. ಅಡುಗೆಕೋಣೆಯ ನಾಲ್ಕೂ ಗೋಡೆಗಳ ಮೇಲಂಚಿನಲ್ಲಿ ಫಳಫಳನೆ ಮಿಂಚುತ್ತಿದ್ದ ಹಿತ್ತಾಳೆ–ತಾಮ್ರದ ಚೆಂಬು, ಬಿಂದಿಗೆ, ಕೊಳಗ, ಹಂಡೆ, ಮುಂತಾದವುಗಳು ಅಮ್ಮನ ಗೃಹಕೃತ್ಯಕ್ಕೆ ಮೆಚ್ಚಿ ಯಾರೋ ಕೊಟ್ಟ ಪಾರಿತೋಷಕಗಳಂತಿದ್ದವು.

ಅಮ್ಮ ನವವಧುವಾಗಿ ‘ತನ್ನತನ’ ಕಂಡುಕೊಳ್ಳಲು ವೇದಿಕೆಯಾಗಿದ್ದ ಅಡುಗೆಮನೆ, ಸೊಸೆಯೊಂದಿಗೆ ಸಲಿಗೆ ಕುದುರಿಸಿಕೊಳ್ಳಲೂ ವೇದಿಕೆಯಾಗಿ ಒದಗುತ್ತಿತ್ತು. ಇದೇ ಅಡುಗೆಮನೆಯ ಗೋಡೆಯೊಂದಕ್ಕೆ ಒರಗಿಕೊಂಡೇ ಮನೆಮಂದಿಯೆಲ್ಲ ಉಣ್ಣುವ ಗ್ರೂಪ್ ಫೋಟೊಗಳು ನಮ್ಮ ನೆನಪುಗಳಲ್ಲಿ ಅದೆಷ್ಟಿಲ್ಲ? ಇಂಥ ಅಡುಗೆಮನೆ ಬದಲಾವಣೆಗೆ ಒಡ್ಡಿಕೊಂಡಿದೆಯೆಂದರೆ, ಅದು ಕೋಣೆಯೊಂದರ ರೂಪಾಂತರ ಎನ್ನುವಂತಿಲ್ಲ. ಅದು ನಮ್ಮ ನಂಬಿಕೆಗಳ, ಜೀವನಧರ್ಮದಲ್ಲಿನ ಬದಲಾವಣೆಯ ಸ್ವರೂಪವೂ ಹೌದು.

ಬದಲಾವಣೆಯ ಬೆಳಕಿನಲ್ಲಿ...
ಒಲೆ ಬದಲಾಗಿದೆ. ಉರಿ ಬದಲಾಗಿಲ್ಲ – ಇದು ಇಂದಿನ ಸಂದರ್ಭ. ಒಂದೇ ಕಿಟಕಿಯಿದ್ದ ಮಬ್ಬು ಬೆಳಕಿನ ಅಡುಗೆಮನೆಯಲ್ಲೀಗ ಸೂರ್ಯನೇ ನುಗ್ಗಿದಷ್ಟು ಬೆಳಕು. ಕೋಣೆ ಎನ್ನುವ ಪರಿಕಲ್ಪನೆಯನ್ನು ದಾಟಿ ಬಯಲಾಗುತ್ತಿರುವಂತೆ ಭಾಸವಾಗುವ ಅಡುಗೆಮನೆ ಎನ್ನುವುದೀಗ ಲಕ್ಷಾಂತರ ರೂಪಾಯಿ ಖರ್ಚಿನ ಬಾಬತ್ತು.

ಚಿತ್ತಾರಗಳ ನುಣುಪು ಕಪಾಟಿನಲ್ಲಿ ಕುಸುರಿಯಿಂದ ಕಂಗೊಳಿಸುವ ಅಡುಗೆ ಪರಿಕರಗಳು ರಾಜಠೀವಿಯಿಂದ ಕುಳಿತಿರುತ್ತವೆ. ಅವುಗಳಲ್ಲಿ ಅನೇಕ ಪರಿಕರಗಳು ಸೊಬಗು ಬಿನ್ನಾಣದ ಕಾರಣಕ್ಕಾಗಿಯೇ ಇವೆ – ಷೋಕೇಸ್‌ನಲ್ಲಿರುವ ದಪ್ಪ ರಟ್ಟಿನ ಪುಸ್ತಕಗಳಂತೆ!

ಅಡುಗೆ ಮನೆಯನ್ನೂ ಪಡಸಾಲೆಗೂ ನಡುವಿನ ಗಡಿರೇಖೆಯಂತೆ ಕಮಾನು ಆಕೃತಿಯೊಂದಿದೆ. ಮನೆಯೊಡತಿ ಪಾಲಿಗೆ ಅದು ಜಗಲಿಯಂತೆ ಒದಗಿಬರುತ್ತದೆ. ‘ಅಡುಗೆ ಜಗಲಿ’ ಬಳಿ ನಿಂತು ಆಕೆ ರಿಮೋಟಿನಲ್ಲಿ ಟೀವಿ ಚಾನೆಲ್ಲು ಬದಲಾಯಿಸುತ್ತಾಳೆ! ಅರೆರೆ... ಎಲ್ಲರೂ ಟೀವಿಯಿಂದ ನೇರವಾಗಿ ಅಡುಗೆಮನೆಗೇ ನುಗ್ಗುತ್ತಿದ್ದಾರಲ್ಲ! ಮಗುವಿಗೆ ಬೆಳಿಗ್ಗೆ ಕುಡಿಯಲು ಈ ಪೇಯವನ್ನು ಕೊಡಿ, ಬುತ್ತಿ ಕಟ್ಟುವಾಗ ಇದೇ ಖಾದ್ಯವನ್ನು ತುಂಬಿಸಿ.

ನೀವು ಅಡುಗೆ ಕಟ್ಟೆಯನ್ನು ಸ್ವಚ್ಛ ಮಾಡುವಾಗ ಈ ದ್ರಾವಣ ಬಳಸುವುದೇ ಇಲ್ಲವೇ... ಹಾಗಿದ್ದರೆ ನೀವು ನಾಲಾಯಕ್ಕು... ಹೀಗೆಲ್ಲ ಟೀವಿ ನಮ್ಮೊಂದಿಗೆ ಮಾತಿಗಿಳಿಯುತ್ತದೆ. ಇದೇನಿದು ‘ವರಾತ’ ಎಂದು ಸಿಟ್ಟಿನಲ್ಲಿ ಕೆಂಪು ಬಟನ್ ಒತ್ತಿ ರಿಮೋಟು ಕುಕ್ಕಿಬಿಡುತ್ತಾಳೆ.

ರಿಮೋಟ್ ಕೆಳಗಿಟ್ಟು ಮೊಬೈಲ್ ಕೈಗೆತ್ತಿಕೊಂಡರೆ, ಅಡುಗೆಮನೆಯಲ್ಲಿ ಜಗತ್ತು ಅನಾವರಣಗೊಳ್ಳುತ್ತದೆ. ಮೊಬೈಲ್ ಪರದೆಯನ್ನು ತೋರುಬೆರಳಲ್ಲಿ ಸವರುತ್ತಿದ್ದರೆ ‘ಹತ್ತು ನಿಮಿಷದಲ್ಲಿ ಬಸ್ಸಾರು ಮಾಡುವುದು ಹೇಗೆ?’ ಎನ್ನುವ ವಿಡಿಯೊ ತುಣುಕು ಎದುರಾಗುತ್ತದೆ. ಸ್ನೇಹಿತೆ ಮೊದಲ ಬಾರಿಗೆ ತಾನು ಮಾಡಿದ ಬಸ್ಸಾರಿನ ವಿಡಿಯೊ ಕಳಿಸಿದ್ದಾಳೆ. ಆದರೆ, ಅಮ್ಮನಿಗೆ ಬಸ್ಸಾರು ಮಾಡಲು ತಾಸುಗಟ್ಟಲೆ ಸಮಯ ಹಿಡಿಯುತ್ತಿತ್ತಲ್ಲವೇ? ಗೆಳತಿಯ ವಿಡಿಯೊ ಅಡುಗೆಮನೆಯ ಫಿಲಾಸಫಿ ಬದಲಾಗಿರುವುದನ್ನು ಸೂಚಿಸುವಂತಿದೆ.

ಅಂದಹಾಗೆ, ಅಡುಗೆ ಮನೆಯ ಗೋಡೆಗಳೀಗ ಮುರಿದು ಬಿದ್ದಿವೆ. ಹಾಗಾಗಿ, ಇಡೀ ಜಗತ್ತೇ ಅಡುಗೆ ಮನೆಯತ್ತ ನುಗ್ಗಲಾರಂಭಿಸಿದೆ. ಯಾಕೆಂದರೆ ಈಗ ಅಲ್ಲಿ ಹಣವಿದೆ. ಶತಶತಮಾನಗಳಿಂದ ಮಹಿಳೆ ದುಡಿಯುತ್ತಿದ್ದರೂ, ಇತ್ತೀಚೆಗಿನ ದಶಕಗಳಲ್ಲಿ ಆಕೆ ಹಣಗಳಿಸುವ ದುಡಿಮೆಯತ್ತ ಮುಖ ಮಾಡಿದ್ದಾಳೆ. ಆ ಹಣವನ್ನು ಬಗೆದು ಬಗೆದು ವಹಿವಾಟಿನ ಲೋಕಕ್ಕೆ ಸುರಿಯಲು ಇಡೀ ಜಗತ್ತು ಟೊಂಕಕಟ್ಟಿ ನಿಂತಂತಿದೆ. ‘ಇದನ್ನು ಕೊಳ್ಳು, ಅದನ್ನು ಖರೀದಿಸು, ಹಾಗೆ ಬಡಿಸು, ಹೀಗೆ ಉಣಿಸು’ ಎಂಬ ಸಲಹೆಗಳ ಮಹಾಪೂರ.

ಮಬ್ಬಿನಿಂದ ಮಬ್ಬಿಗೆ...
ಅಡುಗೆ ಮನೆಯ ಗೋಡೆಗಳು ಮುರಿದುಬಿದ್ದರೂ ಅವು ಮತ್ತೊಂದು ರೂಪದಲ್ಲಿ ಮಹಿಳೆಯನ್ನು ಆವರಿಸಿಕೊಂಡಿವೆ ಎನ್ನುವುದು ಸುಳ್ಳೇನಲ್ಲ. ಈ ಹೊಸ ಗೋಡೆಗಳ ಚೌಕಟ್ಟನ್ನು ಸೂಚ್ಯವಾಗಿ ಹೇಳುವ ಉಪನ್ಯಾಸಕಿ–ವಿಮರ್ಶಕಿ ಡಾ. ತಾರಿಣಿ ಶುಭದಾಯಿನಿ – ‘ಬಯಲಿಗೆ ಹೆಜ್ಜೆ ಇಡಬೇಕು ಎನ್ನುವಷ್ಟರಲ್ಲಿ ಆಕೆಯ ಸುತ್ತ ನೂರಾರು ವಿಚಾರಗಳು ಗೋಡೆಗಳಾಗಿ ನಿಲ್ಲುತ್ತವೆ’ ಎಂದು ಅಭಿಪ್ರಾಯಪಡುತ್ತಾರೆ.

‘ಒಂದೇ ಕಿಟಕಿಯ ಕತ್ತಲೆ ಕೋಣೆಯ ಅಡುಗೆಮನೆಯಿಂದ ಹೊರಬಂದಾಗಿದೆ. ಬಯಲಿನಲ್ಲಿ ಏಕಾಂತವನ್ನು ಉಳಿಸಿಕೊಳ್ಳುವುದು ಸವಾಲಾಗಿದೆ’ ಎನ್ನುವುದನ್ನು ಲೇಖಕಿ ವೈದೇಹಿ ಹೇಳುತ್ತಾರೆ.

‘ಒಗ್ಗರಣೆಯು ಸಿಡಿಯುವ ಆ ಒಂದು ಮಾತ್ರಾಕಾಲವನ್ನು ಅರ್ಥಮಾಡಿಕೊಳ್ಳುವ ಹದವೊಂದು ಮಹಿಳೆಯಲ್ಲಿ ಅಂತರ್ಗತವಾಗಿದೆ. ಆದರೆ ಅದನ್ನು ಗುರುತಿಸುವ ಮನಸ್ಥಿತಿ ರೂಪುಗೊಳ್ಳುತ್ತಿಲ್ಲವೇನೋ’ ಎಂದು ಮೈಸೂರಿನ ಲೇಖಕಿ ಡಾ. ಪ್ರೀತಿ ಶುಭಚಂದ್ರ ಹೇಳುತ್ತಾರೆ.

ತಣಿಯುವ ‘ಸಮಾಧಾನ’ ಗುಣ
ಅನ್ನ ಬೆಂದು, ಚೆರಿಗೆಯನ್ನು ಬೋಗುಣಿಯ ಮೇಲೆ ನಿಧಾನವಾಗಿ ಬಸಿಯುವಂತೆ ಇಟ್ಟು, ತಿಳಿಯೆಲ್ಲ ಬಸಿದುಹೋದ ಮೇಲೂ ಅನ್ನ ಬಡಿಸಲಿಕ್ಕೆ ಅಮ್ಮ ನಿಧಾನಿಸುತ್ತಿದ್ದ ದಿನಗಳಿದ್ದವು. ಮನೆಯ ಸದಸ್ಯರೆಲ್ಲ ಸೇರಿ ಬೃಹತ್ ಶಾವಿಗೆ ಮಣೆಯನ್ನು ಮಣಿಸಿ, ಅರ್ಧದಿನವಿಡೀ ಬೆವರು ಸುರಿಸಿ ಹೈರಾಣಾಗಿ, ಬಿಸಿಬಿಸಿ ಒತ್ತುಶಾವಿಗೆ ಮಾಡಿದ ನಂತರವೂ ತಕ್ಷಣವೇ ಅದನ್ನು ತಿನ್ನುವಂತಿಲ್ಲ. ಶಾವಿಗೆ ಮೇಲೆ ಹಸಿ ಬಾಳೆ ಎಲೆಯನ್ನು ಮುಚ್ಚಿ ಸ್ವಲ್ಪ ಸಮಯ ನಿಧಾನಿಸಬೇಕು.

ಹಾಗೆಯೇ, ಅನ್ನ, ಚಪಾತಿಯನ್ನೂ ಮುಚ್ಚುಗೆಯೊಳಗೆ ಹತ್ತು ನಿಮಿಷವಾದರೂ ಹಾಗೆಯೇ ಇಡಬೇಕು. ಅಮ್ಮನ ಭಾಷೆಯಲ್ಲಿ ಇದಕ್ಕೆ ‘ಬಾಮ್ಸೋದು’ ಎನ್ನುವ ಹೆಸರು. ‘ಅನ್ನ ಸ್ವಲ್ಪ ಬಾಮ್ಸಲಿ ಮಗಾ...’ ಎನ್ನುವುದು ಮಕ್ಕಳ ಹಸಿವಿಗೆ ಅಮ್ಮನ ಸಮಾಧಾನ. ಒಲೆಯ ಉರಿಯಲ್ಲಿ ಬೆಂದಿರುವ ಖಾದ್ಯವು, ನಂತರ ಬಿಸಿಹಬೆಯಲ್ಲಿ ಒಂದಿಷ್ಟು ಹೊತ್ತು ತಣಿಯುವ ಕ್ರಿಯೆಯೇ ಈ ‘ಬಾಮ್ಸೋದು’. ಇದು ತಿನುವ ಪದಾರ್ಥಕ್ಕೊಂದು ಸಮಾಧಾನದ ಗುಣ ತಂದುಕೊಡುತ್ತಿದ್ದ ಪ್ರಕ್ರಿಯೆ. ಅಂದಹಾಗೆ, ಇಡೀ ಜಗತ್ತೇ ಈ ಹದವನ್ನು ಕಳೆದುಕೊಂಡು ಸಾಗುತ್ತಿದೆಯೇ?

ಅನ್ನ ಮತ್ತು ತತ್ವಜ್ಞಾನ
ಜಗತ್ತು ಹುಟ್ಟಿದಾಗಿನಿಂದ ಹಸಿವು ಎಲ್ಲಜೀವಿಗಳನ್ನೂ ಕಾಡಿದೆ. ಹಸಿವನ್ನು ತಣಿಸುವ ಪದಾರ್ಥವನ್ನು ಹಿರಿಯರು ‘ಅನ್ನಬ್ರಹ್ಮ’ ಎಂದರು. ಆದರೆ, ಈ ಅನ್ನಬ್ರಹ್ಮನ ರೂವಾರಿಗಳಾದ ಮಹಿಳೆಯನ್ನೂ ಹಾಗೂ ಆಕೆಯ ಜಗತ್ತನ್ನು ಪುರುಷಲೋಕ ನಿರ್ಲಕ್ಷಿಸಿತು. ಆ ನಿರ್ಲಕ್ಷಿತ ಜಗತ್ತಿನಲ್ಲಿಯೇ ‘ಪಾಕ’, ‘ಹದ’ ಎನ್ನುವ ಪದಗಳು ಹುಟ್ಟಿದವು. ಅವು ತತ್ವಶಾಸ್ತ್ರ ಗ್ರಹಿಕೆಯ ‘ತಂತು’ಪದಗಳಾಗಿ, ಜೀವನ ಮೌಲ್ಯದ ರೂಪಕವಾಗಿ ಹರಿದಾಡುತ್ತಲೇ ಇವೆ.

ಮಹಿಳೆಯ ಆ ಮಬ್ಬುಜಗತ್ತಿನಲ್ಲಿ ಆಕೆಯ ಏಕಾಂತವಿತ್ತು. ಅಂತರ್ಮುಖಿಯಾಗಿ ಬಹಿರ್ಮುಖಿಯಾಗಿ ಆಕೆ ಶತಮಾನಗಳಿಂದಲೂ ಅಲ್ಲಿ ಜೀವನ ಸವೆಸಿ, ಹಾಡು ಹಸೆಗಳನ್ನು ಕಟ್ಟಿ, ಸಿಟ್ಟುಬೇಸರ, ಖುಷಿಯನ್ನು ಅನುಭವಿಸಿ ತನ್ನ ಜಗತ್ತನ್ನು ಶ್ರೀಮಂತಗೊಳಿಸಿಕೊಂಡಿದ್ದಾಳೆ. ಯಾರು ಒಪ್ಪಲಿ, ಬಿಡಲಿ, ಅಡುಗೆ ಮನೆಯ ಜಗತ್ತನ್ನು ಯಾವ ವ್ಯಕ್ತಿಯೂ ನಿರಾಕರಿಸಿ ಬಾಳುವುದು ಸಾಧ್ಯವೇ ಇಲ್ಲ ಎಂಬಂತೆ.

‘ತಿಳಿಸಾರು ಎಂದರೆ ಏನಂದುಕೊಂಡಿರಿ? / ಅದಕ್ಕೂ ಬೇಕು ಒಳಗೊಂದು / ಜಲತತ್ವ– ಗಂಧತತ್ವ... / ಕುದಿದು ಹದಗೊಂಡ ಸಾರತತ್ವ...’ ಎನ್ನುತ್ತಾರೆ ವೈದೇಹಿ.

ಕುವೆಂಪು ಅವರು ‘ಕಾನೂರು ಸುಬ್ಬಮ್ಮ ಹೆಗ್ಗಡಿತಿ’ ಕಾದಂಬರಿಯ ‘ಕಡೆಗೋಲು ಕಂಬದ ಸಾಕ್ಷಿಯಲ್ಲಿ’ ಎಂಬ ಅಧ್ಯಾಯದಲ್ಲಿ ಬಣ್ಣಿಸಿರುವ ಅಡುಗೆಮನೆ ಚಿತ್ರಣ ನೋಡಿ: ‘‘ಸುತ್ತಣ ಜಗತ್ತಿಗೆಲ್ಲ ಬೆಳಗಾಗಿದ್ದರೂ ಅಡುಗೆ ಮನೆಗೆ ಇನ್ನೂ ಮಬ್ಬು ತಪ್ಪಿರಲಿಲ್ಲ. ಏಕೆಂದರೆ ಅದಕ್ಕಿದ್ದುದು ಒಲೆಯ ಮೇಲುಗಡೆಯ ಒಂದೇ ಕಿಟಕಿ. ಆದರೂ ಪಾಕಶಾಲೆಯ ರೂಪುರೇಖೆ ತಕ್ಕಮಟ್ಟಿಗೆ ಪ್ರದರ್ಶಿತವಾಗಿತ್ತು.

ಬಾಗುಮರಿಗೆ, ಉಪ್ಪಿನಮರಿಗೆ, ಕೈಯದ್ದುವ ಹಿತ್ತಾಳೆಯ ತಂಬಾಳೆ, ಸಿಕ್ಕದ ಮೇಲೆ ಮೆಣಸಿನಕಾಯಿಯ ಬುಟ್ಟಿ, ಮೊಸರು ಗಡಿಗೆ, ಮಜ್ಜಿಗೆ ಚರಿಗೆ, ಕಡೆಗೋಲು ಕಂಬ, ತುಪ್ಪ ಬೆಣ್ಣೆ ಮೊದಲಾದುವುಗಳನ್ನು ಇಟ್ಟು ಬೀಗ ಹಾಕಿದ ಒಂದು ಕಲಂಬಿ, ಮಣೆಯ ರಾಶಿ, ಅಡುಗೆ ಮನೆಯ ಒಂದು ಅನಿವಾರ್ಯವಾದ ಅಂಗವಾಗಿ ಒಲೆಯ ಪಕ್ಕದ ಬೆಚ್ಚನೆಯ ಮೂಲೆಯಲ್ಲಿ ತನ್ನೆರಡು ಮರಿಗಳೊಡನೆ ಪವಡಿಸಿದ್ದ ಬೆಕ್ಕು, ಅಲ್ಲಲ್ಲಿ ಹಾರಿ ಹಾರಿ ಕೂರುತ್ತಿದ್ದ ಮನೆ ನೊಣಗಳು ಇತ್ಯಾದಿ’’.

ಕುವೆಂಪು ಚಿತ್ರಿಸಿದ ಅಡುಗೆಮನೆ ಬಡ ಕುಟುಂಬಕ್ಕೆ ಸೇರಿದ್ದು. ಇಲ್ಲಿನ ಚಿತ್ರಗಳು ಗ್ರಾಮೀಣ ಪ್ರದೇಶದ ಬಹುತೇಕ ಅಡುಗೆಮನೆಗಳ ಸ್ಥಿತಿಯೂ ಹೌದು. ವಲಸೆ ಕುಟುಂಬಗಳ ಅಡುಗೆ ಮನೆಗಳಲ್ಲಂತೂ ನಾಲ್ಕಾರು ಪಾತ್ರೆಗಳು, ಒಂದೇ ಒಲೆ, ಅದರ ಪಕ್ಕ ಪೇರಿಸಿಟ್ಟ ಕಟ್ಟಿಗೆಯ ರಾಶಿ, ಅದಕ್ಕೊತ್ತಿಕೊಂಡಂತೆ ಸ್ನಾನದ ಮನೆಯಷ್ಟೇ ಗೋಚರಿಸುತ್ತದೆ. ಸಂಜೆ ತಂದರೆ ಹಿಟ್ಟು, ಸಿಕ್ಕರೆ ಮೀನೋ ತರಕಾರಿಯೋ....

ನಿರಂತರ ಸುರಿವ ಮಳೆಯಲ್ಲಿ, ಥಂಡಿಯಾಗಿರುವ ಬೆರಣಿಯನ್ನು ಮುರಿದು ಮುರಿದು ಒಲೆಗಿಡುತ್ತ, ಒಂದೆರಡು ಬೆರಣಿಯನ್ನು ಒಲೆಯ ಸುತ್ತಲೂ ಹರಡಿ ಅದನ್ನು ಬಿಸಿ ಮಾಡುತ್ತ, ಮತ್ತೆ ಹೊಗೆಯೊಳಗೆ ಮುಖ ಹುದುಗಿ ಊದುತ್ತ ಊದುತ್ತ, ಕುಚ್ಚಲಕ್ಕಿ ಗಂಜಿಯನ್ನು ಬೇಯಿಸಲು ತ್ರಾಸಪಡುವ, ಶಾಲೆಗೆ ಹೋಗುವ ಮಕ್ಕಳ ಚಡ್ಡಿಯನ್ನು ಗಂಜಿಪಾತ್ರೆಯನ್ನು ಮುಚ್ಚಿದ ಪ್ಲೇಟಿನ ಮೇಲೆಯೇ ಒಣಗಿ ಹಾಕುತ್ತಾ, ದೋಸೆಯಂತೆ ಆ ಚಡ್ಡಿಗಳನ್ನೇ ತಿರುವಿ ಹಾಕುತ್ತ, ರುಬ್ಬುವ ಕಲ್ಲಿನ ಮೇಲೆ ಸೋರುವ ನೀರನ್ನು ಚೊಕ್ಕ ಮಾಡುತ್ತ, ‘ಒಂದಿಷ್ಟು ಹೊತ್ತಾದರೂ ಬಿಸಿಲಿನ ಕೃಪೆದೋರು ದೇವಾ’ ಎಂದು ಅಕ್ಷರಶಃ ಕಣ್ಣೀರು ಹಾಕುವ ಬಡ ಅಮ್ಮಂದಿರ ಅಡುಗೆ ಮನೆಗಳೂ ಇವೆ. ಅಡುಗೆಮನೆ ಎನ್ನುವುದು ಸಮಾಜದ ಚಿತ್ರಪಟದಂತೆಯೂ ಕಾಣಿಸುತ್ತದೆ.

ಬದಲಾವಣೆಯ ವಿವಿಧ ಮುಖಗಳು
ಕತ್ತಲೆಕೋಣೆಯಂತಹ ಅಡುಗೆಮನೆಗೆ ಈಗ ಬೆಳಕು ಬಂದಿದೆ. ಇದು ಸ್ವಾಗತಾರ್ಹ. ಇದರ ಜೊತೆಗೇ, ಅಡುಗೆಕೋಣೆಯ ಯಜಮಾನಿಕೆ ಅಮ್ಮನಿಗೆ ಮಾತ್ರ ಸೀಮಿತವಾದುದಲ್ಲ ಎಂಬ ಅರಿವು ಇಂದಿನ ಮಕ್ಕಳಿಗೆ ತುಸುವೇ ಅರಿವಾಗುತ್ತಿದೆ. ಇದು ಮತ್ತೂ ಸ್ವಾಗತಾರ್ಹ. ಬಾಮ್ಸುವ, ಹದವನ್ನು ಅರಿಯುವ, ಪಾಕದ ಎಳೆಯನ್ನು ಕಣ್ಣುಕಿರಿದುಗೊಳಿಸಿ ಸೂಕ್ಷ್ಮವಾಗಿ ನೋಡುವ, ಸಾಸಿವೆ ಸಿಡಿಯುವ ಕ್ಷಣವನ್ನು ಅರಿವಿನ ಎಚ್ಚರದಲ್ಲಿ ನಿರೀಕ್ಷಿಸುವ ಕಲೆಯನ್ನು ಗಂಡುಮಕ್ಕಳೂ ಅಪ್ಪನೂ ಅರ್ಥಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಟೀವಿಯಲ್ಲಿ ಬರುವ ಅಡುಗೆ ಕಾರ್ಯಕ್ರಮಗಳು ಸಾಕ್ಷಿ ನುಡಿಯುತ್ತಿವೆ. ಅರಿವಿಗೆ ಗಂಡುಹೆಣ್ಣೆಂಬ ಭೇದ ಎಲ್ಲಿಯದು?

ಅಡುಗೆಮನೆಯ ಬಗ್ಗೆ ನಾವು ಮಾತನಾಡುವಾಗ ಮತ್ತೆರಡು ಸಂಗತಿಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಬದಲಾವಣೆ ಎನ್ನುವುದು ಅಡುಗೆಕೋಣೆಗೆ ಮಾತ್ರ ಸಂಬಂಧಿಸಿದ್ದೋ ಅಥವಾ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನೂ ಒಳಗೊಂಡಿದ್ದೋ ಎನ್ನುವುದು ಮೊದಲನೆಯ ಸಂಗತಿ. ಎರಡನೆಯದು, ಮಾಹಿತಿ ತಂತ್ರಜ್ಞಾನ ಕಾಲದಲ್ಲೂ ಲಕ್ಷ ಲಕ್ಷ ಕುಟುಂಬಗಳ ಪಾಲಿಗೆ ಅಡುಗೆಮನೆ ಎನ್ನುವುದು ಈಗಲೂ ಐಷಾರಾಮಿಯಾಗಿಯೇ ಉಳಿದಿದೆ ಎನ್ನುವುದು. ಮೂರು ಕಲ್ಲುಗಳ ಹೊಂದಾಣಿಕೆಯೇ ಅನೇಕರ ಪಾಲಿಗೆ ಅಡುಗೆಮನೆ ಆಗಿರುವಾಗ, ಬದಲಾವಣೆಯ ಕುರಿತ ನಮ್ಮ ಮಾತುಗಳೆಲ್ಲ ಆ ಕಲ್ಲಿನ ಒಲೆಯ ಬೂದಿಯಂತೆ ಕಾಣಿಸಿದರೆ ಅದು ಅಸಹಜವೇನಲ್ಲ.

ಮಣಿಪಾಲದಲ್ಲಿ ‘ಅಡುಗೆಮನೆ ಜಗತ್ತು’
ಅಡುಗೆಮನೆ ಜಗತ್ತಿನ ಹಲವು ಆಯಾಮಗಳನ್ನು ಅನಾವರಣಗೊಳಿಸುವ ವಿಶಿಷ್ಟ ಕಾರ್ಯಕ್ರಮ ಫೆ. 25–26ರಂದು ಮಣಿಪಾಲದಲ್ಲಿ ನಡೆಯುತ್ತಿದೆ. ‘ಮಣಿಪಾಲ ವಿಶ್ವವಿದ್ಯಾಲಯ’ದ ‘ಡಾ. ಟಿ.ಎಂ.ಎ. ಪೈ ಭಾರತೀಯ ಸಾಹಿತ್ಯ ಪೀಠ’ ಈ ಕಾರ್ಯಕ್ರಮವನ್ನು ಏರ್ಪಡಿಸಿದೆ. ಪೀಠದ ಅಧ್ಯಕ್ಷರಾದ ಹಿರಿಯ ಲೇಖಕಿ ವೈದೇಹಿ ಈ ವಿಶಿಷ್ಟ ಕಾರ್ಯಕ್ರಮದ ರೂವಾರಿ.

ಅರುಂಧತಿ ನಾಗ್, ಕೆ.ವಿ. ಅಕ್ಷರ, ಲಕ್ಷ್ಮೀಶ ತೋಳ್ಪಾಡಿ, ಟಿ.ಪಿ. ಅಶೋಕ, ನಾಗೇಶ ಹೆಗಡೆ, ಸವಿತಾ ನಾಗಭೂಷಣ, ಪ್ರತಿಭಾ ನಂದಕುಮಾರ್, ಎಚ್. ನಾಗವೆಣಿ, ಕೃಷ್ಣಮೂರ್ತಿ ಹನೂರ, ಡಿ.ಎಸ್. ನಾಗಭೂಷಣ, ಅಭಯಸಿಂಹ, ಸಬೀಹಾ ಭೂಮಿಗೌಡ, ಸಬಿತಾ ಬನ್ನಾಡಿ, ಸುಬ್ಬು ಹೊಲೆಯಾರ್, ದೀಪಾ ಗಣೇಶ್ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರು ಅಡುಗೆಮನೆ ಜಗತ್ತಿನ ಸಾಧ್ಯತೆಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ.

‘ಅಡುಗೆ ಮನೆ ವಾದ್ಯಮೇಳ’, ‘ಅಡುಗೆ ಮನೆ ಪದ್ಯಗಳು’, ‘ಸೋಬಾನೆಯಲ್ಲಿ ಅಡುಗೆ ಹಾಡುಗಳು’, ‘ಪಾಕಶಾಲೆಯ ಪ್ರಸಂಗಗಳು’, ‘ಉದರದ ದಾರಿಯಿಂದ ಬಂದ ಹೃದಯದ ಹಾಡು’, ‘ಆಹಾರ, ಪರಿಸರ ಮತ್ತು ಜಾಗತಿಕ ವಿದ್ಯಮಾನಗಳು’, ‘ಭೋಗಕ್ಕಾಗಿ ಆಹಾರ: ಟೆಲಿವಿಷನ್ ಮತ್ತು ಚಲನಚಿತ್ರಗಳಲ್ಲಿ ಆಹಾರವೆಂಬ ಉಪಭೋಗ ಸಂಸ್ಕೃತಿ’, ‘ಅಡುಗೆಮನೆಯ ಮಾರ್ಗ’, ‘ಅಡುಗೆ ಮನೆಯಿಂದಾಚೆ ಉದ್ಯಮದೆಡೆಗೆ’, ‘ತುಳುವಿನಲ್ಲಿರುವ ಅಡುಗೆಮನೆಯ ಗಾದೆಗಳು’, ‘ಊಟ ಉಪಚಾರದ ಮಾತುಗಳು’, ‘ಗಾಂಧೀಜಿ ಅವರ ಆಹಾರ ಮಾರ್ಗ’, ‘ರುಚಿಯ ರಾಜಕಾರಣಕ್ಕೆ ರಸದ ಪ್ರತಿರೋಧ’, ‘ಜಾನಪದ ಹಾಗೂ ವಚನ ಲೋಕದಲ್ಲಿಯ ಆಹಾರದ ಅರ್ಥಗಳು’ – ಹೀಗೆ ಅಡುಗೆಗೆ ಹೊಂದಿಕೊಂಡ ಬದುಕಿನ ಚೆಲುವನ್ನು ಕಾಣಿಸುವ ಪ್ರಯತ್ನ ಈ ಕಾರ್ಯಕ್ರಮದ್ದು. ಮಾತು–ಕತೆ ಜೊತೆಗೆ ತಾಳಮದ್ದಲೆ, ಯಕ್ಷಗಾನ, ರಂಗಪ್ರಸ್ತುತಿಗಳೂ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.