ಕಲಬುರ್ಗಿಯವರ ದಾರುಣ ಹತ್ಯೆಯಾದ ಬಳಿಕ, ಸಾಹಿತ್ಯಲೋಕದಲ್ಲಿ ಹುಟ್ಟಿದ ತಲ್ಲಣದ ಅಲೆಗಳಿನ್ನೂ ನಿಂತಿಲ್ಲ. ಹಾಗೆ ನೋಡಿದರೆ, ವೈಚಾರಿಕ–ತಾತ್ವಿಕ ಭಿನ್ನಮತವನ್ನು ದ್ವೇಷ, ಹಲ್ಲೆ, ಕೊಲೆಗಳ ಮೂಲಕ ಮುಖಾಮುಖಿ ಮಾಡುವ ಈ ವಿದ್ಯಮಾನ ಧುತ್ತನೆ ರೂಪುಗೊಂಡದ್ದಲ್ಲ.

ಇದರ ಬೇರುಗಳು ಆದಿಯಿಂದಲೂ ಜಾತಿ, ಲಿಂಗ, ವರ್ಗ, ಧರ್ಮದ ಭಿನ್ನತೆಗಳನ್ನು ಹಿಂಸೆಯ ಬುನಾದಿಯಾಗಿಸಿಕೊಂಡಿರುವ ಸಾಂಪ್ರದಾಯಿಕ ಸಮಾಜದಲ್ಲಿವೆ; ಕಳೆದ ಕಾಲುಶತಮಾನದ ಮತೀಯ ರಾಜಕಾರಣದಲ್ಲೂ ಸ್ಪರ್ಧೆ, ಲಾಭಗಳೇ ಪರಮ ಮೌಲ್ಯವಾಗಿರುವ ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯಲ್ಲೂ ಇವೆ. ರೋಗದಂತೆ ಹರಡಿರುವ ಈ ವಿದ್ವೇಷದಾಯಕ ವಾತಾವರಣ ಭಾರತಕ್ಕೆ ಸೀಮಿತವಾಗಿಲ್ಲ. ನೆರೆ ದೇಶಗಳಲ್ಲೂ ಹಬ್ಬಿದೆ.

ನಿರ್ದಿಷ್ಟ ಧರ್ಮಕ್ಕೆ ಸೀಮಿತವಾಗಿಲ್ಲ. ಹಲವು ಧರ್ಮಗಳಲ್ಲೂ ಹರಡಿಕೊಂಡಿದೆ. ಈ ಬೆಳವಣಿಗೆಗಳ ತಾರ್ಕಿಕ ಪರಿಣಾಮವೆಂಬಂತೆ, ನಮ್ಮ ದೊಡ್ಡ ಲೇಖಕರಾದ ಅನಂತಮೂರ್ತಿ, ಬಾಳಿನ ಕೊನೆಯ ದಿನಗಳಲ್ಲಿ ನೋವು, ಅಪಮಾನ ಅನುಭವಿಸಬೇಕಾಯಿತು; ದೇಶ– ಜೆಎನ್‌ಯು, ರೋಹಿತ್ ವೇಮುಲ, ದಾದ್ರಿ, ಊನಾ ಪ್ರಕರಣಗಳನ್ನು ಕಾಣಬೇಕಾಯಿತು.

ದಮನ, ಹಿಂಸೆಯನ್ನು ಅಂತಸ್ಥವಾಗಿಸಿಕೊಂಡಿರುವ ಸಮಾಜದಲ್ಲಿ ಭಿನ್ನವಾದ ವಿಚಾರ, ಧರ್ಮ, ಆಚರಣೆ, ಸಂಸ್ಕೃತಿ ಹೊಂದಿರುವವರನ್ನು ದ್ವೇಷಿಸುವ ಶಕ್ತಿಗಳಿಗೆ ಕೆಲವು ಪರಿಮಿತಿಯಿರುತ್ತದೆ. ಆದರೆ ಸಿದ್ಧಾಂತದ ಮತ್ತು ಅಧಿಕಾರಸ್ಥ ರಾಜಕಾರಣದ ಬೆಂಬಲ ಸಿಕ್ಕಾಗ ಅವು ಫ್ಯಾಸಿಸಂ ಆಗಿ ರೂಪಾಂತರಗೊಳ್ಳುತ್ತವೆ.

ಆಗ ರಾಜಕೀಯ ಅಧಿಕಾರ ಹಿಡಿಯುವ ಗುಂಪು ತನ್ನ ಗ್ರಹಿಕೆಗಳನ್ನು ಸಮಾಜದ ಮೇಲೆ ಹೇರುತ್ತ ಹೋಗುತ್ತದೆ; ರಾಷ್ಟ್ರೀಯತೆ, ದೇಶಭಕ್ತಿ, ಧರ್ಮರಕ್ಷಣೆ ಹೆಸರಲ್ಲಿ ಯೋಜನಾಬದ್ಧವಾಗಿ ಹಿಂಸೆ ಆರಂಭಿಸುತ್ತದೆ; ತನ್ನ ಆಲೋಚನೆಗೆ ಒಪ್ಪದವರನ್ನು ದೇಶವಿರೋಧಿ, ಧರ್ಮದ್ರೋಹಿ ಎಂದು ತೀರ್ಪು ಕೊಡುತ್ತದೆ; ರಾಷ್ಟ್ರೀಯತೆ, ದೇಶಭಕ್ತಿಯಂತಹ ಇತ್ಯಾತ್ಮಕ ಕಲ್ಪನೆಗಳು ದೇಶದ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಬದಲಿಗೆ, ಅವರನ್ನು ವಿಭಜಿಸುವ ಹತ್ಯಾರ ಗಳಾಗುತ್ತವೆ. ಇದೊಂದು ಯುದ್ಧಗ್ರಸ್ತ ಸ್ಥಿತಿ; ಎಲ್ಲವನ್ನೂ ಗೆರೆ ಎಳೆದು ವಿಭಜಕ ಪರಿಭಾಷೆಯಲ್ಲಿ ಮಾತಾಡುವ ಸಂವಾದವೇ ಸಾಧ್ಯವಿಲ್ಲದ ಧ್ರುವೀಕರಣಗೊಂಡ ಸನ್ನಿವೇಶ.

ಇಂತಹ ಸನ್ನಿವೇಶದಲ್ಲಿ ಮುಕ್ತವಾಗಿ ಬರೆಯುವ, ವಿಚಾರ ವ್ಯಕ್ತಪಡಿಸುವ, ಚರ್ಚಿಸುವ, ಸಿನಿಮಾ–ನಾಟಕ ಮಾಡುವ ಅಭಿವ್ಯಕ್ತಿಗಳಿಗೆ ಮಾತ್ರ ತೊಡಕಲ್ಲ; ಜನ ತಮ್ಮಿಚ್ಛೆಯಂತೆ ಕಲೆಯುವ, ಕಲಿಯುವ, ಉಣ್ಣುವ, ಉಡುವ, ಆಚರಿಸುವ ದೈನಿಕ ಚಟುವಟಿಕೆಗಳೂ ಕಷ್ಟವಾಗುತ್ತ ಹೋಗುತ್ತವೆ. ಆಗ ಬೀದಿಗಳೇ ವಿಚಾರಣೆ ಮಾಡುವ, ತೀರ್ಪು ಕೊಡುವ ಹಾಗೂ ಶಿಕ್ಷೆ ವಿಧಿಸುವ ಜಾಗಗಳಾಗುತ್ತವೆ.

ತಾವೊಪ್ಪದ ವಿಚಾರವುಳ್ಳ ಅಥವಾ ಆಹಾರ ಸೇವಿಸುವ ಮಂದಿಯ ಕೈಕಾಲು ಕತ್ತರಿಸುವ, ತಲೆ ಕಡಿಯುವ ಹೇಳಿಕೆಗಳು ಎಗ್ಗಿಲ್ಲದೆ ಹುಟ್ಟುತ್ತವೆ. ದೋಷವನ್ನು ಬಲಿಪಶುಗಳಲ್ಲೇ ಹುಡುಕಲಾಗುತ್ತದೆ. ಸಾಂಸ್ಥಿಕ ಕೊಲೆಗೆ ಬಲಿಯಾದ ರೋಹಿತ್ ವೇಮುಲ ದಲಿತನೇ ಅಲ್ಲವೇ ಎಂಬುದರ ಶೋಧ ಇಂತಹುದು. ಹಿಂಸೆಯ ಘಟನೆಗಳು ನಿತ್ಯ ಕೇಳಿ, ಓದಿ ಮರೆಯುವ ಮಾಮೂಲಿ ಸಂಗತಿಗಳಾಗುತ್ತವೆ. ಮನುಷ್ಯ ಸಂವೇದನೆಯೇ ಸತ್ತುಹೋಗುವ ಘೋರ ಮನಸ್ಥಿತಿಯಿದು.

ರೈತರ ಸಾವಿನ ವಿಷಯದಲ್ಲಿ ಈ ಸಂವೇದನೆಯ ಸಾವು ನಮ್ಮೊಳಗೆ ಈಗಾಗಲೇ ಸಂಭವಿಸಿದೆ. ವ್ಯಂಗ್ಯವೆಂದರೆ, ಕೆಲವು ಲೇಖಕರು, ಕಲಾವಿದರು ಹಾಗೂ ಮಾಧ್ಯಮಗಳು ಹಲ್ಲೆಕೋರ ವ್ಯವಸ್ಥೆಯ ಪರವಾಗಿ ತಾತ್ವಿಕ ಸಮರ್ಥನೆ ಒದಗಿಸುತ್ತಿರುವುದು; ಅಧಿಕಾರಸ್ಥರು ಮಾಡುವ ಹಿಂಸೆಗೆ ನಾಗರಿಕ ಸಮಾಜದ ಒಪ್ಪಿಗೆಯನ್ನು ಉತ್ಪಾದನೆ ಮಾಡುತ್ತಿರುವುದು. ಇದುವೇ ಪ್ರಜಾಪ್ರಭುತ್ವವನ್ನು, ಸರ್ವಾಧಿಕಾರಿಗಳನ್ನು ಹಡೆಯುವ ತಾಯನ್ನಾಗಿಸುತ್ತದೆ. ಅಮೆರಿಕದಲ್ಲಿ ಇದು ಈಗ ಸಂಭವಿಸಿದೆ.

ಚರಿತ್ರೆಯಲ್ಲಿ ಅನೇಕ ದೇಶಗಳು ಕಂಡಿರುವ ಇಂತಹ ದಿಕ್ಕೆಟ್ಟ ಅವಸ್ಥೆ ಈಗ ಭಾರತವನ್ನೂ ಆವರಿಸುತ್ತಲಿದೆ. ಇಲ್ಲೀಗ ಎದ್ದು ಕಾಣುತ್ತಿರುವ ಎರಡು ವಿದ್ಯಮಾನಗಳೆಂದರೆ – ದುಡಿದು ತಿನ್ನುವ ಜನಸಾಮಾನ್ಯರ ಮೇಲೆ ದಿನಕ್ಕೊಂದು ನಿಯಮ ಬಿಗಿಯುತ್ತಿರುವುದು ಹಾಗೂ ನಾಡಿಗೆ ಸೇರಿದ ಸಂಪತ್ತನ್ನು ದೋಚುವ ಮಾರುಕಟ್ಟೆ ಶಕ್ತಿಗಳಿಗೆ ನಿಯಮ ಸಡಿಲಗೊಳಿಸುತ್ತಿರುವುದು. ಇದರಿಂದ ಅಪಾರ ಮಾನವ ಚೈತನ್ಯ, ಆರ್ಥಿಕ ಸಂಪತ್ತು ಹಾಗೂ ಬೆಳವಣಿಗೆಯ ಸಾಧ್ಯತೆ ಇರುವ ನಮ್ಮೀ ನಾಡು, ಕೂಡಿ ಬದುಕುವ, ಹಂಚಿಕೊಂಡು ತಿನ್ನುವ ವಿವೇಕ ಕಳೆದುಕೊಂಡು ಅಂತರ್‌ಯುದ್ಧದಲ್ಲಿ ಸಿಲುಕಿದಂತೆ ನಲುಗುತ್ತಿದೆ.

ಇಂತಹ ಬಿಕ್ಕಟ್ಟಿನ ಸನ್ನಿವೇಶದಲ್ಲಿ, ದ್ವೇಷ–ಹಿಂಸೆಯನ್ನು ತನ್ನ ನಡೆನುಡಿ ಮಾಡಿಕೊಂಡಿರುವ ಫ್ಯಾಸಿಸಂ ವಿರುದ್ಧದ ಪ್ರತಿರೋಧವು ಕೇವಲ ಲೇಖಕರು, ಕಲಾವಿದರ ಅಭಿವ್ಯಕ್ತಿಗೆ ಸಂಬಂಧಿಸಿರುವುದಿಲ್ಲ; ವಿಭಿನ್ನ ನಂಬಿಕೆ, ಭಾಷೆ, ಸಂಸ್ಕೃತಿ, ಆಹಾರ ಪದ್ಧತಿ ಆಚರಣೆ ವಿಚಾರವುಳ್ಳ ಜನ, ಸಹಜವಾಗಿ ನೆಮ್ಮದಿಯಿಂದ ಬಾಳುವ ಹಕ್ಕಿಗೂ ಸಂಬಂಧಿಸಿದ್ದು. ಬಹುತ್ವವನ್ನು ತನ್ನ ಜೀವಾಳ ಮಾಡಿಕೊಂಡ ಕಾರಣದಿಂದಲೇ ಛಿದ್ರಗೊಳ್ಳದೆ ಉಳಿದಿರುವ ದೇಶದ ನಾಳೆಗೆ ಸಂಬಂಧಿಸಿದ್ದು.

ಇಂತಹ ಪ್ರಕ್ಷುಬ್ಧ ಹಿನ್ನೆಲೆಯಲ್ಲಿ, ದಾಭೋಲ್ಕರ್, ಪಾನ್ಸರೆ, ಕಲಬುರ್ಗಿಯವರ ಹತ್ಯೆಯ ಬಳಿಕ, ಲೇಖಕ–ಚಿಂತಕ ಗಣೇಶ್ ಎನ್. ದೇವಿ ನೇತೃತ್ವದಲ್ಲಿ ‘ದಕ್ಷಿಣಾಯನ’ ಆರಂಭವಾಯಿತು. ದೇವಿಯವರು, ‘ವಿಸ್ಮೃತಿ ಪರಿಕಲ್ಪನೆಯ ಮೂಲಕ ದೇಶೀವಾದದ ಚರ್ಚೆಯನ್ನು ಹುಟ್ಟುಹಾಕಿದವರು; ಭಾರತದ ಭಾಷೆ, ಸಂಸ್ಕೃತಿ, ಸಾಹಿತ್ಯಗಳ ಮೇಲೆ ಅಪಾರ ತಿಳಿವಳಿಕೆಯುಳ್ಳ ವಿದ್ವಾಂಸರು. ‘ದಕ್ಷಿಣಾಯನ’ ಎಂದರೆ ಕತ್ತಲಿನ ರಾತ್ರಿ ದೀರ್ಘವಾಗಿರುವ ಕಾಲ; ಕತ್ತಲ ಕೊನೆಗೆ ಬೆಳಕಿರುತ್ತದೆ ಎಂದು ನಂಬಿ ಕೈಕೈ ಹಿಡಿದು ನಡೆವ ಕಾಲ ಕೂಡ. ಇದೊಂದು ಸಂಸ್ಥೆಯಲ್ಲ, ಸಂಘಟನೆಯಲ್ಲ.

ಯಾವುದೇ ರಾಜಕೀಯ ಪಕ್ಷದ ಪರ ಇಲ್ಲವೇ ವಿರುದ್ಧವಲ್ಲ. ಫ್ಯಾಸಿಸಂ ಒಳಗೊಂಡಂತೆ ಎಲ್ಲ ಧಾರ್ಮಿಕ, ರಾಜಕೀಯ, ಸಾಮಾಜಿಕ ಕೇಡುಗಳ ವಿರುದ್ಧ ಜನಾಭಿಪ್ರಾಯ ರೂಪಿಸಲೆಂದು ಹುಟ್ಟಿದ ಚಳವಳಿ. ನ್ಯಾಯಪ್ರಜ್ಞೆ, ಪ್ರೀತಿ, ಸಹನೆ ಹಾಗೂ ಮಾನವೀಯ ಘನತೆಯಿಂದ ಜನರು ಬಾಳುವಂತಹ ಸಮಾಜ ಕಟ್ಟುವ ಆಶಯವುಳ್ಳ ಇದು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ನೆಲೆಗೊಳಿಸಲು ಯತ್ನಿಸುತ್ತದೆ.

ಲೇಖಕರು–ಕಲಾವಿದರು ತಮ್ಮ ಮಿತಿಗಳನ್ನು ಕಂಡುಕೊಳ್ಳುವ, ಸಮುದಾಯಗಳ ಆಶೋತ್ತರಗಳ ಜೊತೆಗೆ ಮಿಡಿಯುತ್ತ, ಅವರೊಡನೆ ಸಂವಾದ ಮಾಡುವ ಹೊಸ ನುಡಿಗಟ್ಟನ್ನು ಕಂಡುಕೊಳ್ಳುವ ಯತ್ನವನ್ನೂ ಮಾಡುತ್ತದೆ. ಸಮಾನ ಮನಸ್ಕರು ಹೊಸ ಹದುಳದ ನಾಡನ್ನು ಕಟ್ಟುವ ಕನಸಿಗಾಗಿ ಒಗ್ಗೂಡುವುದಕ್ಕೆ ವೇದಿಕೆ ನಿರ್ಮಿಸುತ್ತದೆ.

‘ದಕ್ಷಿಣಾಯನ’ದ ಸಮಾವೇಶಗಳು ಧಾರವಾಡ, ಕೊಲ್ಹಾಪುರ, ಮಡಗಾಂವ್, ಪುಣೆ, ದಾಂಡಿಯಲ್ಲಿ ನಡೆದಿವೆ. ಕನ್ನಡವನ್ನೂ ಒಳಗೊಂಡಂತೆ ಹಿಂದಿ, ಮರಾಠಿ, ಕೊಂಕಣಿ, ಪಂಜಾಬಿ, ಗುಜರಾತಿ, ಬಂಗಾಳಿ ಲೇಖಕರು ಇದರ ಭಾಗವಾಗಿದ್ದಾರೆ. ಬರಹ, ಕೃತಿ ಪ್ರಕಟಣೆ, ಲೇಖಕ–ಕಲಾವಿದ ಸಮಾವೇಶ, ಕಮ್ಮಟ, ಜಾಥಾ, ಕಿರುಚಿತ್ರ ನಿರ್ಮಾಣ, ಸತ್ಯಾಗ್ರಹ ಇವು ಇದರ ವಿಧಾನಗಳು.

ಪಂಪನ ಮಾನವೀಯ ತುಡಿತ, ಬಸವಣ್ಣನ ಪ್ರತಿರೋಧ ಪ್ರಜ್ಞೆ, ಅಂಬೇಡ್ಕರರ ಸಾಮಾಜಿಕ ಎಚ್ಚರ, ಕುವೆಂಪುರ ವಿಶ್ವಮಾನವತೆ, ಕಾರಂತರ ವೈಚಾರಿಕತೆ, ತೇಜಸ್ವಿ–ಲಂಕೇಶರ ಜೀವನಪ್ರೀತಿ ‘ದಕ್ಷಿಣಾಯನ’ದ ಬೆನ್ನಿಗಿದೆ. ಇದರಲ್ಲಿ ಎಲ್ಲ ತಲೆಮಾರಿಗೆ ಸೇರಿದ ನೂರಾರು ಲೇಖಕರು– ಕಲಾವಿದರು– ಸಾಂಸ್ಕೃತಿಕ ಕಾರ್ಯಕರ್ತರು ಪಾಲ್ಗೊಳ್ಳುತ್ತಿರುವರು.

70ರ ದಶಕದಲ್ಲಿ ಕುವೆಂಪು ಮೈಸೂರಿನಲ್ಲಿ ಉದ್ಘಾಟಿಸಿದ ‘ಬರಹಗಾರ ಕಲಾವಿದರ ಒಕ್ಕೂಟ’ವನ್ನೂ, ತೊಂಬತ್ತರ ದಶಕದಲ್ಲಿ ಜಾತ್ಯತೀತವೂ ಮಾನವೀಯತೆ, ಪ್ರೇಮತತ್ವದ ಪ್ರತೀಕವೂ ಆದ ಸೂಫಿ ಪರಂಪರೆಯನ್ನು ಉಳಿಸಲು ಚಿಕ್ಕಮಗಳೂರಿನಲ್ಲಿ ನೂರಾರು ಲೇಖಕರು–ಕಲಾವಿದರು ಸೇರಿದ್ದನ್ನೂ ಇದು ನೆನಪಿಸುತ್ತಿದೆ.

ಹಿಂದೊಮ್ಮೆ ಸಮಾಜವಾದದ ಪ್ರಯೋಗಶಾಲೆಯಾಗಿದ್ದ ಹಾಗೂ ಈಗಲೂ ಜೀವಪರ ಸಾಂಸ್ಕೃತಿಕ ಚಟುವಟಿಕೆಗಳ ತಾಣವಾಗಿರುವ ಶಿವಮೊಗ್ಗೆಯಲ್ಲಿ, ಇದೇ 8ರಂದು ‘ದಕ್ಷಿಣಾಯನ– ಕರ್ನಾಟಕದ ಸಮಾವೇಶ’ ನಡೆಯಲಿದೆ. ದೇವನೂರರು ಚಾಲನೆ ನೀಡಲಿರುವ ಸಮಾವೇಶ, ಚಾರಿತ್ರಿಕ ಮಹತ್ವದ ಪಾತ್ರವನ್ನು ನಿರ್ವಹಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.