ಕನ್ನಡ ವಿಶ್ವವಿದ್ಯಾಲಯ 25ರ ಹರೆಯಕ್ಕೆ ಕಾಲಿಟ್ಟಿದೆ. ಅದಕ್ಕೀಗ ಬೆಳ್ಳಿ ಹಬ್ಬದ ಸಡಗರ. ಮೊದಲಿನಿಂದ ಅದರ ಭಾಗವಾಗಿರುವ ನಮಗೆ ಇಷ್ಟು ಬೇಗ 25 ವರ್ಷ ಆಯಿತಾ ಅಂತ ಆಶ್ಚರ್ಯವಾಗುತ್ತದೆ. 1992ರಲ್ಲಿ ಹಂಪಿಯ ‘ಎದುರು ಬಸವಣ್ಣ’ನ ಬಲಭಾಗದ ಕಲ್ಲಿನ ಕಟ್ಟಡದಲ್ಲಿ ಕನ್ನಡ ವಿ.ವಿ. ಕೆಲಸ ಶುರುಮಾಡಿತ್ತು. ಅದೇ ನವೆಂಬರ್‌ನಲ್ಲಿ ತುಂಗಭದ್ರಾ ನದಿಗೆ ಪ್ರವಾಹ ಬಂತು.

ಆ ನೀರು ವಿರೂಪಾಕ್ಷ ದೇವಸ್ಥಾನದ ಎದುರಿನ ಕೆನರಾ ಬ್ಯಾಂಕಿನವರೆಗೂ ಬಂದು ಮೂರು ದಿನ ನಿಂತಿತ್ತು. ಪತ್ರಿಕೆಗಳು ‘ತುಂಗಭದ್ರಾ ಪ್ರವಾಹದಲ್ಲಿ ಕನ್ನಡ ವಿ.ವಿ. ಮುಳುಗಡೆ’ ಎಂಬ ತಲೆಬರಹದಲ್ಲಿ ಸುದ್ದಿ ಮಾಡಿದವು. ಆಗ ಕುಲಪತಿಯಾಗಿದ್ದ ಪ್ರೊ. ಚಂದ್ರಶೇಖರ ಕಂಬಾರರು ‘ಮುಳುಗಿದ್ದು ವಿಶ್ವವಿದ್ಯಾಲಯವಲ್ಲ; ಕಲ್ಲಿನ ಕಟ್ಟಡ’ ಎಂಬ ತಲೆಬರಹದಲ್ಲಿ ಅದಕ್ಕೆ ಪ್ರತಿಕ್ರಿಯೆ ಕೊಟ್ಟರು.

ಅಸಾಮಾನ್ಯ ಪ್ರತಿಭೆಯ ಕವಿಗಳೂ, ಅಸಾಂಪ್ರದಾಯಿಕ ಚಿಂತಕರೂ ಆಗಿದ್ದ ಅವರ ಹೇಳಿಕೆ ನಮ್ಮನ್ನೆಲ್ಲ ರೋಮಾಂಚನಗೊಳಿಸಿತ್ತು; ದಂಗುಬಡಿಸಿತ್ತು. ಭೌತಿಕ ಕಟ್ಟಡಗಳ ಆಚೆಗೆ ಅಭೌತಿಕ ಸ್ವರೂಪದ ಜ್ಞಾನವು ವಿಶ್ವವಿದ್ಯಾಲಯಗಳಿಗೆ ಮುಖ್ಯ ಎಂಬುದನ್ನು ಅದು ಒತ್ತಿ ಹೇಳಿತ್ತು.

1992ರಲ್ಲಿ ಭಾರತವನ್ನು ಇಡಿಯಾಗಿ ಜಾಗತೀಕರಣ ನೀತಿಗಳಿಗೆ ಒಗ್ಗಿಸುವ ಕೆಲಸ ನಡೆಯಿತು. ಅಭಿವೃದ್ಧಿ, ಮಾರುಕಟ್ಟೆ, ಶಿಕ್ಷಣ, ಸಂಶೋಧನೆ ಮುಂತಾದವನ್ನು ಅದಕ್ಕೆ ಪೂರಕವಾಗಿ ಬದಲಾಯಿಸುವ ಪ್ರಯತ್ನ ಶುರುವಾಯಿತು. ವಿಶೇಷವೆಂದರೆ ಅದೇ ಅವಧಿಯಲ್ಲಿ ಕನ್ನಡ ನಾಡುನುಡಿಯ ಸಂಶೋಧನೆಯೇ ಪ್ರಧಾನವಾದ ಭಾಷಿಕ ವಿಶ್ವವಿದ್ಯಾಲಯ ನಾಡಿನಲ್ಲಿ ಹುಟ್ಟಿತು. ಇದು ಜಾಗತೀಕರಣ ನೀತಿಗಳ ದುಷ್ಪರಿಣಾಮದ ಬೆಂಕಿಯನ್ನು ತಳಸಮುದಾಯಗಳ ಹೃದಯಗಳಲ್ಲಿಟ್ಟು ಅದನ್ನು ಬೆಳಕಾಗಿಸಲು ಪಣತೊಟ್ಟಿತು.

ಕನ್ನಡ ನಾಡಿಗೆ ಕನ್ನಡ ವಿ.ವಿ. ಬೇಕು ಎಂಬ ಕನಸು ಬಹಳ ಹಿಂದಿನಿಂದಲೂ ಇತ್ತು. 1925ರಲ್ಲಿ ಬೆಳಗಾವಿಯಲ್ಲಿ ನಡೆಸಿದ 11ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬೆನಗಲ್ ರಾಮರಾಯರು, 1932ರ ಮಡಿಕೇರಿ ಸಮ್ಮೇಳನದಲ್ಲಿ ಡಿ.ವಿ.ಜಿ.ಯವರು, 1938ರ ಬಳ್ಳಾರಿ ಸಮ್ಮೇಳನದಲ್ಲಿ ರಂಗನಾಥ ದಿವಾಕರ ಅವರು, ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ ಇದರ ಕನಸು ಕಂಡಿದ್ದರು.

1990ರ ಹುಬ್ಬಳ್ಳಿಯ ಸಮ್ಮೇಳನದಲ್ಲಿ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯವನ್ನೂ, ಬೆಳಗಾವಿಯಲ್ಲಿ ತಾಂತ್ರಿಕ ವಿಶ್ವವಿದ್ಯಾಲಯವನ್ನೂ ಸ್ಥಾಪನೆ ಮಾಡಬೇಕೆಂದು ನಿರ್ಣಯ ಮಾಡಿ ಸರ್ಕಾರವನ್ನು ಒತ್ತಾಯಿಸಲಾಯಿತು. ಮುಂದೆ ಸರ್ಕಾರ ನೇಮಿಸಿದ ಎಸ್.ಎಸ್. ಒಡೆಯರ್ ಅವರು ಕನ್ನಡ ವಿ.ವಿ.ಗೆ ಒಂದು ರೂಪುರೇಷೆ ಹಾಕಿದರು.

ಪೂರ್ವ ಮತ್ತು ಪಶ್ಚಿಮದ ಜ್ಞಾನವನ್ನು ಹದಗೊಳಿಸಿ ಹೊಸ ಜ್ಞಾನವನ್ನು ಹುಟ್ಟಿಸಬೇಕು, ಕನ್ನಡ ವಿಶ್ವವಿದ್ಯಾಲಯ ಅದನ್ನು ಕಲಿಯಲು ಅನುವು ಮಾಡಿಕೊಡಬೇಕು ಎಂಬುದು ಕಂಬಾರರ ಗಟ್ಟಿಯಾದ ಕನಸಾಗಿತ್ತು. ಅದಕ್ಕೆ ಬೇಕಾದ ಮಾನವ ಸಂಪನ್ಮೂಲವನ್ನು ನಾಡಿನ ಬೇರೆಬೇರೆ ಭಾಗಗಳಿಂದ ಅವರು ತಂದರು. ‘ವಿಶ್ವವಿದ್ಯಾಲಯದಲ್ಲಿ ಆಡಳಿತದ ಲೆಕ್ಕಾಚಾರಕ್ಕೆ ಅಗತ್ಯವಿರುವ ಹಾಜರಾತಿಗಾಗಿ ಕೆಲಸ ಮಾಡಬಾರದು. ವಿಶ್ವವಿದ್ಯಾಲಯದ ಕೆಲಸವನ್ನು ನಮ್ಮ ಸ್ವಂತ ಕೆಲಸದಂತೆ ಮಾಡಬೇಕು’ ಎಂಬುದು ಅವರ ಇಚ್ಛೆಯಾಗಿತ್ತು.

ನಮ್ಮ ಸ್ವಂತ ಕೆಲಸಗಳಿಗೆ ನಾವು ಹಾಜರಿ ಹಾಕಿಕೊಳ್ಳುವುದಿಲ್ಲ. ಅದನ್ನು ಬೇರೆಯವರಿಗೆ ಸಾಬೀತುಪಡಿಸುವ ಉದ್ದೇಶಕ್ಕೆ ಇಲ್ಲವೇ ಕೆಲಸ ಮಾಡದೆಯೂ ಮಾಡಿದ್ದೇವೆಂದು ನಂಬಿಸುವ ಉದ್ದೇಶಕ್ಕೆ ಹಾಜರಾತಿ ಬಂದಿದೆ. ಕಂಬಾರರು ಮೂಲತಃ ಈ ಧೋರಣೆಗೇ ವಿರುದ್ಧವಾಗಿದ್ದರು. ಕನ್ನಡ ವಿ.ವಿ.ಯ ಆರಂಭದ ಸುಮಾರು ಆರು ತಿಂಗಳು ಹಾಜರಾತಿಯಿಲ್ಲದೆ ಕೆಲಸ ನಡೆಯಿತು.

ವಿಶ್ವವಿದ್ಯಾಲಯ ಹಂಪಿಯಲ್ಲಿದ್ದಾಗ, ಪ್ರತಿ ಬುಧವಾರ ಮಧ್ಯಾಹ್ನ 3 ಗಂಟೆಯಿಂದ ‘ಮಂಟಪ’ ಎಂಬ ಸಂವಾದ ನಡೆಯುತ್ತಿತ್ತು. 1994ರ ಹೊತ್ತಿಗೆ ವಿಶ್ವವಿದ್ಯಾಲಯ ಈಗ ಇರುವ ವಿದ್ಯಾರಣ್ಯ ಕ್ಯಾಂಪಸ್ಸಿಗೆ ಬಂತು. ನಂತರ ಆ ಸಂವಾದವು ‘ದಿನಮಾತು’ ಹೆಸರಿನಲ್ಲಿ ಪ್ರತಿದಿನ ಬೆಳಿಗ್ಗೆ 9.30ರಿಂದ ನಡೆಯಲಾರಂಭಿಸಿತು. ಇದರಲ್ಲಿ ಅಧ್ಯಾಪಕರೂ, ಸಂಶೋಧಕರೂ ತಮ್ಮ ಅನುಭವ ಮತ್ತು ಆಲೋಚನಾಲೋಕವನ್ನು ಬಿಚ್ಚಿಡುತ್ತಾ ಬಂದರು. ಇಡೀ ವಿಶ್ವವಿದ್ಯಾಲಯ ಇದರಿಂದ ಅಪಾರವಾದುದನ್ನು ಕಲಿಯಿತು. ಕಂಬಾರರು ಸಂಶೋಧಕರನ್ನು ‘ಕಿರಿಯ ಪಂಡಿತರು’ ಎಂದು ಕರೆದು ಪ್ರೋತ್ಸಾಹಿಸಿದರು.

‘ಪುಸ್ತಕ ಮಾಹಿತಿ’ ಮಾಸಪತ್ರಿಕೆಯಲ್ಲಿ ಹೊಸ ಕೃತಿಗಳ ವಿಮರ್ಶೆಗಳನ್ನು ಬರೆಸಿದರು. ‘ನಮ್ಮವರು’ ಮಾಲಿಕೆಯಲ್ಲಿ ನಾಡಿನ ಹಿರಿಯ ಸಾಹಿತಿಗಳನ್ನು ಕುರಿತು ಕಿರು ಪುಸ್ತಕಗಳನ್ನು ಬರೆಸಿದರು. ಅದುವರೆಗೆ ನಿರ್ಲಕ್ಷಿಸಲಾಗಿದ್ದ ವಿಷಯಗಳನ್ನು ಒಳಗಿನವರಾಗಿ ಮತ್ತು ವಿಮರ್ಶಾತ್ಮಕವಾಗಿ ನೋಡುವ ಅಧ್ಯಯನ ವಿಧಾನವನ್ನು ಸಾಮೂಹಿಕವಾಗಿ ಕಟ್ಟಲಾಯಿತು.

ನಾಡಿನ ಬೇರೆ ಬೇರೆ ವಲಯಗಳ, ಭಿನ್ನ ಆಸಕ್ತಿಯುಳ್ಳ ಚಿಂತಕರನ್ನು, ಬರಹಗಾರರನ್ನು ವಿಶಾಲವಾಗಿ ಒಳಗೊಳ್ಳುತ್ತಾ ಬಂತು. ಒಳಗಿನವರು ಹೊರಗಿನವರು ಎಂಬ ವ್ಯತ್ಯಾಸವಿಲ್ಲದೆ ಕನ್ನಡ ಚಿಂತಕರ, ಬರಹಗಾರರ ದೊಡ್ಡ ಬಳಗವನ್ನು ಕಟ್ಟಿತು.

ವಿಶೇಷವಾಗಿ ಅಂಚಿನ, ಅಸಹಾಯಕ ಮತ್ತು ತಳಸಮುದಾಯಗಳು; ಅವರ ಬದುಕು, ಭಾಷೆ, ಸಾಹಿತ್ಯ, ಸಂಸ್ಕೃತಿ ಇವುಗಳ ಒಳಗಿನ ಟೊಳ್ಳು-ಗಟ್ಟಿಯನ್ನು ಅರಿಯುವ ಮತ್ತು ಅದನ್ನು ಸಮಕಾಲೀನ ಅಗತ್ಯಕ್ಕೆ ಮುರಿದು ಕಟ್ಟುವ ಕೆಲಸ ನಡೆಯಿತು. ನಾಡಿನ ಬೇರೆ ಬೇರೆ ಭಾಗಗಳಿಂದ ಕನ್ನಡ ಎಂ.ಎ., ಪಿಎಚ್.ಡಿ. ಅಧ್ಯಯನ ಮಾಡಲು ಈ ವಿಷಯಗಳನ್ನು ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಗಳು ಬರುತ್ತಿದ್ದಾರೆ. ವಿ.ವಿ.ಯ 25ನೇ ನುಡಿಹಬ್ಬ ಮೊನ್ನೆಯಷ್ಟೇ ಜರುಗಿತು.

ಕನ್ನಡ ವಿಶ್ವವಿದ್ಯಾಲಯವು ಈವರೆಗೆ ನಡೆದಿರುವ ದಾರಿಯಲ್ಲಿ ಮತ್ತಷ್ಟು ಮುನ್ನಡೆಯುವ, ನಾಡಿನುದ್ದಕ್ಕೂ ವಿಸ್ತರಿಸುವ ಅಗತ್ಯವಿದೆ. ಲೋಕದ ಜ್ಞಾನವನ್ನು ಪಡೆದು, ಅದನ್ನು ವರ್ತಮಾನದ ಅಗತ್ಯಕ್ಕೆ ಮರುರೂಪಿಸಿ, ಮರಳಿ ಲೋಕಕ್ಕೆ ಕೊಡಲು ಬದ್ಧವಾಗಿದೆ.

ಕನ್ನಡ ವಿಶ್ವವಿದ್ಯಾಲಯ ಬೇಕು ಎಂದು ಕನ್ನಡ ನಾಡು ಕಂಡ ಕನಸಿನ ಕೂಸಾಗಿ ಕನ್ನಡ ವಿ.ವಿ. ಹುಟ್ಟಿತು. ನಾಡು ಮತ್ತು ನುಡಿಯ ಬಗೆಗೆ ಕಾಳಜಿ ಇರುವವರು ಈ ಕನಸನ್ನು ಮರೆಯಬಾರದು.
ಲೇಖಕ: ಪ್ರಾಧ್ಯಾಪಕ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.